ADVERTISEMENT

ಬೇಕಾಗಿದ್ದಾನೆ: ಗಾಂಧಿಯ ಹೆಗಲೇರಿದ ಗಾಂಧಿ

‘ಗಾಂಧಿ–150’ ವಿಶೇಷ

ಡಾ.ಸಿದ್ದನಗೌಡ ಪಾಟೀಲ
Published 1 ಅಕ್ಟೋಬರ್ 2018, 19:57 IST
Last Updated 1 ಅಕ್ಟೋಬರ್ 2018, 19:57 IST
ಗಾಂಧಿ ಜಯಂತಿಯ ಮುನ್ನಾದಿನವಾದ ಸೋಮವಾರ ಸಂಜೆ ಹುಬ್ಬಳ್ಳಿಯ ವಿದ್ಯಾನಗರದ ಮಹಿಳಾ ವಿದ್ಯಾಪೀಠದ ಆವರಣದಲ್ಲಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆ ಬಳಿ ಮಕ್ಕಳು ಮೊಂಬತ್ತಿ ಬೆಳಗಿ ನಮನ ಸಲ್ಲಿಸಿದರು, – ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಗಾಂಧಿ ಜಯಂತಿಯ ಮುನ್ನಾದಿನವಾದ ಸೋಮವಾರ ಸಂಜೆ ಹುಬ್ಬಳ್ಳಿಯ ವಿದ್ಯಾನಗರದ ಮಹಿಳಾ ವಿದ್ಯಾಪೀಠದ ಆವರಣದಲ್ಲಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆ ಬಳಿ ಮಕ್ಕಳು ಮೊಂಬತ್ತಿ ಬೆಳಗಿ ನಮನ ಸಲ್ಲಿಸಿದರು, – ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌    

‘ಅರ್ಥಮದ ಅಹಂಕಾರಮದ, ಕುಲಮದ ಬಿಡದು’ – ಚನ್ನಬಸವಣ್ಣ

ಯಾವುದೇ ವ್ಯಕ್ತಿಯ ಚಿಂತನೆಗಳು, ಮಾತುಗಳು ಅವನ ನಿಧನಾನಂತರವೂ ಪ್ರಸ್ತುತವೆನಿಸಿದರೆ ಅವು ಸಿದ್ಧಾಂತವಾಗುತ್ತವೆ. ವಾದ (ಇಸಂ) ಆಗುತ್ತವೆ. ಗಾಂಧಿ ಅಂಥ ಒಂದು ಸಿದ್ಧಾಂತವಾಗಿ ನಮ್ಮ ಕಣ್ಣ ಮುಂದೆ ನಿಂತಿದ್ದಾರೆ. ಇಂದು ಗಾಂಧೀಜಿಯ ಚಿಂತನೆಗಳು ಮಾತ್ರವಲ್ಲ, ಅವರ ಜೀವನ ವಿಧಾನವೂ ಒಂದು ಮಾದರಿಯಾಗಿ ನಿಂತಿದೆ. ಗಾಂಧೀಜಿಯವರನ್ನು, ಅವರ ವಿಚಾರಧಾರೆಗಳನ್ನು ಒಪ್ಪುವುದು, ಬಿಡುವುದು ಬೇರೆ ಸಂಗತಿ. ಆದರೆ ಅವರ ವಿಚಾರವನ್ನು ಒಪ್ಪದಿರುವವರೂ ಅವರನ್ನು ನಿರಾಕರಿಸಲಾಗದಂಥ ಸಂದರ್ಭ ಇಂದು ನಮ್ಮ ಮುಂದಿದೆ. ಈ ಸಂದಿಗ್ಧವು ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿಯೂ ಇತ್ತು.

ಪ್ರಸ್ತುತ ಭಾರತದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸ್ವತಂತ್ರ ಭಾರತದ ಭವಿಷ್ಯದ ಬಗೆಗೇ ಆತಂಕ ಮೂಡಿಸಿವೆ. ದೇಶದಾದ್ಯಂತ ನಡೆಯುತ್ತಿರುವ ಕೋಮುಗಲಭೆಗಳು, ಜಾತಿ ದೌರ್ಜನ್ಯಗಳು, ಪ್ರಭುತ್ವದ ದಮನಕಾರಿ ನೀತಿಗಳು, ಜಾಗತೀಕರಣದ ನೀತಿಯಿಂದಾಗಿ ಜನ ಸ್ವಾವಲಂಬನೆ ಕಳೆದುಕೊಳ್ಳುತ್ತಿರುವುದು... ಪ್ರಜಾಸತ್ತೆಗೆ ಅಪಾಯಕಾರಿಯಾಗುವಂಥ ಈ ಎಲ್ಲ ಬೆಳವಣಿಗೆಗಳ ಸಂದರ್ಭದಲ್ಲಿ ಜನರ ಧ್ವನಿಯಾಗಿ ಪ್ರತಿರೋಧ ವ್ಯಕ್ತಪಡಿಸುವ ಒಂದು ಸಮರ್ಥ ನಾಯಕತ್ವದ ಅವಶ್ಯಕತೆ ಇಂದಿನ ಭಾರತಕ್ಕಿದೆ. ತಾತ್ವಿಕ, ವೈಚಾರಿಕ ಭಿನ್ನತೆಗಳ ಮಧ್ಯೆಯೂ ಎಲ್ಲವನ್ನೂ, ಎಲ್ಲರನ್ನೂ ಒಳಗೊಂಡು ಜನಶಕ್ತಿಯನ್ನು ಒಂದುಗೂಡಿಸುವ ಒಂದು ಸಾಮಾನ್ಯ ಕಾರ್ಯಕ್ರಮದಡಿ ಸಮಗ್ರ ಜನತೆಯ ಹಿತಾಸಕ್ತಿಗಾಗಿ ದುಡಿವ ಒಂದು ‘ರಂಗ’ದ ಅನಿವಾರ್ಯ ಅವಶ್ಯಕತೆ ಇಂದು ನಮ್ಮ ಮುಂದಿದೆ. ಸ್ವಾತಂತ್ರ್ಯಪೂರ್ವದ ಕಾಂಗ್ರೆಸ್, ಸಾಮಾಜ್ಯಶಾಹಿಗಳ ವಿರುದ್ಧದ ಹೋರಾಟದಲ್ಲಿ ಅಂಥ ಒಂದು ‘ರಂಗ’ವಾಗಿತ್ತು.

ADVERTISEMENT

1942ರಲ್ಲಿ, ‘ನೀವು ಸಾಮ್ರಾಜ್ಯದ ಬಲ ವಿರೋಧಿಸಲು ಹೇಗೆ ಸಾಧ್ಯವಾಯಿತು’ ಎಂದು ಗಾಂಧೀಜಿಯವರನ್ನು ಕೇಳಿದಾಗ ‘ಲಕ್ಷಾಂತರ ಮೂಕ ಜನರ ಬಲದಿಂದ’ ಎಂದು ಗಾಂಧಿ ಉತ್ತರಿಸುತ್ತಾರೆ. ಇಂದು ಕೋಟ್ಯಂತರ ಮೂಕಜನರಿಗೊಬ್ಬ ‘ಮೂಕ ನಾಯಕ’ ಬೇಕಾಗಿದ್ದಾನೆ. ಭಾರತದ ಸ್ವಾತಂತ್ರ್ಯ ಸಂಗ್ರಾಮ ಕೇವಲ ಗಾಂಧಿ, ಕೇವಲ ಕಾಂಗ್ರೆಸ್‍ನಿಂದ ನಡೆದದ್ದಲ್ಲ, ನಿಜ. ಈ ಮಹಾನ್ ಸಂಗ್ರಾಮದಲ್ಲಿ ಪ್ರಮುಖವಾಗಿ ಮೂರು ಧಾರೆಗಳನ್ನು ಕಾಣುತ್ತೇವೆ. ಗಾಂಧಿ ನಾಯಕತ್ವದ ಕಾಂಗ್ರೆಸ್‌ ರಾಜಕೀಯ ಸ್ವಾತಂತ್ರ್ಯಕ್ಕೆ ಸಂಕೇತವಾದರೆ, ಕಮ್ಯುನಿಸ್ಟರು, ಎಡಪಂಥೀಯರು ಮತ್ತು ಇತರ ತೀವ್ರವಾದಿಗಳು ಆರ್ಥಿಕ ಸ್ವಾತಂತ್ರ್ಯಕ್ಕೆ ಸಂಕೇತವಾಗಿದ್ದರು. ಈ ಧಾರೆಯಲ್ಲಿ ಬರುವ ಭಗತ್‍ಸಿಂಗ್ 1931ರಲ್ಲಿ ಗಲ್ಲಿಗೇರುವ ಮುಂಚೆ ಬರೆದ ಪತ್ರದಲ್ಲಿ ‘ರೈತರು ವಿದೇಶಿ ನೊಗದಿಂದ ಮಾತ್ರವಲ್ಲ, ಭೂಮಾಲೀಕರು ಮತ್ತು ಬಂಡವಾಳಗಾರರ ನೊಗದಿಂದಲೂ ತಮ್ಮನ್ನು ತಾವು ಬಿಡುಗಡೆ ಮಾಡಿಕೊಳ್ಳಬೇಕು’ ಎಂದು ಹೇಳಿದ್ದಾನೆ.

ಈ ಸಂಗ್ರಾಮದ ಇನ್ನೊಂದು ಧಾರೆ ಸಾಮಾಜಿಕ ಸ್ವಾತಂತ್ರ್ಯ. ಇದು ಡಾ.ಬಿ.ಆರ್. ಅಂಬೇಡ್ಕರ್ ಅವರ ನಾಯಕತ್ವದಲ್ಲಿ ನಡೆದದ್ದು. ರಾಜಕೀಯ, ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯದ ಆಶಯಗಳು ಕೇವಲ ಆದ್ಯತೆಗೆ ಸಂಬಂಧಿಸಿದ್ದೇ ಹೊರತು ಪರಸ್ಪರ ಸಂಘರ್ಷದ ಗುರಿಯನ್ನು ಹೊಂದಿರಲಿಲ್ಲ. ಅವರೆಲ್ಲರ ಗುರಿ ಒಂದೇ ಆಗಿತ್ತು. ಆದರೆ ಮಾರ್ಗಗಳು ಭಿನ್ನವಾಗಿದ್ದವು. ಇತರ ಮಾರ್ಗಗಳ ಚಿಂತಕರುಗಾಂಧೀಜಿ ಜೊತೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ವೈಚಾರಿಕ ಸಂಘರ್ಷಗಳೂ ಸಾಕಷ್ಟು ಬಾರಿ ನಡೆದಿವೆ. ಆದರೆ ವ್ಯಕ್ತಿಗತ ದ್ವೇಷ ಅವರಲ್ಲಿ ಖಂಡಿತ ಇರಲಿಲ್ಲ.

ಪೂನಾ ಒಪ್ಪಂದದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರು ಗಾಂಧಿಯವರನ್ನು ತೀವ್ರವಾಗಿ ವಿರೋಧಿಸುತ್ತಾರೆ. ನಂತರವೂ ಗಾಂಧಿಯವರನ್ನು ತೀಕ್ಷ್ಣವಾಗಿ ವಿಮರ್ಶಿಸುತ್ತಾರೆ. ‘ಪ್ರತ್ಯೇಕ ದಲಿತ ಮತಕ್ಷೇತ್ರ’ಗಳನ್ನು ಒಪ್ಪದ ಗಾಂಧಿ ಆಮರಣ ಉಪವಾಸ ಆರಂಭಿಸುತ್ತಾರೆ. ಅವರ ಆರೋಗ್ಯ ಸಂಪೂರ್ಣ ವಿಷಮಿಸುತ್ತದೆ. ಆಗ ಅಂಬೇಡ್ಕರ್ ಗಾಂಧೀಜಿಯ ಆರೋಗ್ಯವನ್ನು ಗಮಮನಿಸಿ ತಮ್ಮ ನಂಬಿಕೆಗೆ, ನಿಲುವಿಗೆ ವಿರುದ್ಧವಾಗಿ ಪೂನಾ ಒಪ್ಪಂದಕ್ಕೆ ಸಹಿ ಹಾಕುತ್ತಾರೆ.

ಗಾಂಧೀಜಿ ನಿಲುವಿನಿಂದ ಬೇಸತ್ತು, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 1939ರಲ್ಲಿ ರಾಜೀನಾಮೆ ಕೊಟ್ಟು, ಬ್ರಿಟಿಷರ ವಿರುದ್ಧ ಹೋರಾಡಲು ವಿದೇಶದಲ್ಲಿ ಸೇನೆ ಕಟ್ಟಿ, ಅಲ್ಲಿಂದ ಮಾಡಿದ ರೇಡಿಯೊ ಭಾಷಣದಲ್ಲಿ ಸುಭಾಷ್‌ಚಂದ್ರ ಬೋಸ್ ಅವರು ಗಾಂಧೀಜಿಯವರನ್ನು ‘ರಾಷ್ಟ್ರಪಿತ’ ಎಂದು ಸಂಬೋಧಿಸುತ್ತಾರೆ. ಭಗತ್‍ ಸಿಂಗ್, ರಾಜಗುರು, ಸುಖದೇವ್ ಅವರಿಗೆ ಗಲ್ಲು ಶಿಕ್ಷೆಯಾದಾಗ ಗಾಂಧೀಜಿ ವೈಸ್‍ರಾಯ್ ಇರ್ವಿನ್ ಜೊತೆ ಇನ್ನೂ ಸಮರ್ಥವಾಗಿ ಚರ್ಚಿಸಿ ಆ ಯುವಕರನ್ನು ಉಳಿಸಿಕೊಳ್ಳಬಹುದಿತ್ತು ಎಂದು ಕೆಲವರು ಟೀಕಿಸುತ್ತಾರೆ. ಆದರೆ ಭಗತ್‍ ಸಿಂಗ್ ಕೊನೆಯ ಉಸಿರಿನವರೆಗೂ ಇಂಥ ಟೀಕೆ ಮಾಡದೇ ನೇಣಿಗೇರಿದ. ಭಗತ್‍ ಸಿಂಗ್ ಸಂಗಡಿಗರು ಹುತಾತ್ಮರಾಗಲು ತೀರ್ಮಾನಿಸಿದ್ದರು. ಕಮ್ಯುನಿಸ್ಟರು ಗಾಂಧಿಯೊಂದಿಗೆ ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದರು. ಆದರೆ ವ್ಯಕ್ತಿಗತವಾಗಿ ಗಾಂಧೀಜಿ ಬಗ್ಗೆ ಅಪಾರ ಗೌರವ ಹೊಂದಿದ್ದರು. ಗಾಂಧೀಜಿಯ ವಿಚಾರಗಳನ್ನು ವಿರೋಧಿಸುತ್ತಲೇ ಅವರ ಜೀವನ ವಿಧಾನಗಳನ್ನು ಅಳವಡಿಸಿಕೊಂಡ ಹಲವಾರು ಕಮ್ಯುನಿಸ್ಟರನ್ನು ನಾನು ನೋಡಿದ್ದೇನೆ. ಅಂದಿನ ಕಮ್ಯುನಿಸ್ಟ್ ನಾಯಕ ಪಿ.ಸಿ. ಜೋಷಿಯವರನ್ನು ‘ಗಾಂಧಿವಾದಿ ಕಮ್ಯುನಿಸ್ಟ್‌’ ಎಂದೇ ಲೇವಡಿ ಮಾಡುತ್ತಿದ್ದರು. ಈ ಎಲ್ಲ ಭಿನ್ನತೆಗಳ ಮಧ್ಯೆಯೂ ಸ್ವಾತಂತ್ರ್ಯಗಂಗೆಯ ಪ್ರವಾಹ ತೀವ್ರವಾಗಿತ್ತು, ಏಕಮುಖಿಯಾಗಿತ್ತು.

ಗಾಂಧೀಜಿಯವರ ವ್ಯಕ್ತಿತ್ವವನ್ನು ಸಹಿಸಲಾಗದ ಒಂದು ಬಣವಿತ್ತು. ಅದು ಕೋಮುವಾದಿ ಬಣ. ವಿ.ಡಿ. ಸಾವರಕರ್‌ ಅವರನ್ನು ಬಂಧನದಿಂದ ಬಿಡುಗಡೆಗೊಳಿಸಲು ಗಾಂಧೀಜಿ ಪ್ರಯತ್ನಿಸಿದರು. ರತ್ನಗಿರಿಯಲ್ಲಿ ಸಾವರಕ್‌ ಅವರು ಸ್ಥಾನಬದ್ಧತೆಯಲ್ಲಿದ್ದಾಗ ಗಾಂಧೀಜಿ, ಪತ್ನಿ ಕಸ್ತೂರಬಾರೊಂದಿಗೆ ಅವರ ಮನೆಗೆ ಹೋಗಿ ಸಾಂತ್ವನ ಹೇಳಿ ಬರುತ್ತಾರೆ. ಗಾಂಧಿ ತಾವೊಬ್ಬ ಸನಾತನಿ, ಹಿಂದೂ ಎಂದು ಬಹಿರಂಗವಾಗಿ ಹೇಳಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳಿಗೂ ಹೋಗಿ ಖುಷಿಪಟ್ಟು ಬಂದಿದ್ದಾರೆ. ಅಂಥ ವ್ಯಕ್ತಿಯ ಹತ್ಯೆ ಸನಾತನಿಗಳಿಂದಲೇ ನಡೆಯಿತು. ಕೊಲೆ ಆರೋಪಿಗಳ ಪಟ್ಟಿಯಲ್ಲಿ ವಿ.ಡಿ. ಸಾವರಕರ್ ಅವರ ಹೆಸರು ಎಂಟನೇ ನಂಬರ್‍ನಲ್ಲಿತ್ತು.

ಗಾಂಧಿ ಹತ್ಯೆ ಸ್ವತಂತ್ರ ಭಾರತದ ಮೊದಲ ರಾಜಕೀಯ ಹತ್ಯೆ. ಗಾಂಧಿಯಿಂದ ಗೌರಿವರೆಗೆ ನಡೆದ ಹತ್ಯೆಗಳು ತಾತ್ವಿಕ ಕಾರಣಕ್ಕಾಗಿಯೇ ಹೊರತು ವೈಯಕ್ತಿಕ ಕಾರಣಕ್ಕಲ್ಲ ಎನ್ನುವುದೂ ಅಷ್ಟೇ ಸತ್ಯ. 1919ರಲ್ಲಿ ಜಲಿಯನ್‍ವಾಲಾಭಾಗ್‌ ಹತ್ಯಾಕಾಂಡದಲ್ಲಿ ಬ್ರಿಟಿಷರ ಕ್ರೌರ್ಯ ನೋಡಿ, ಆಫ್ರಿಕಾದಲ್ಲಿದ್ದಾಗ ಬ್ರಿಟಿಷರು ತಮಗೆ ನೀಡಿದ್ದ ‘ಕೈಸರ್‌–ಇ–ಹಿಂದ್‌’ ಪುರಸ್ಕಾರವನ್ನು ಗಾಂಧೀಜಿ ತಮ್ಮ ಧಿಕ್ಕಾರದೊಂದಿಗೆ ಹಿಂದಿರುಗಿಸುತ್ತಾರೆ. ಇಂದಿಗೂ ಆ ಮಾದರಿಯನ್ನು ಭಾರತೀಯ ಪ್ರಗತಿಪರ ಬುದ್ಧಿಜೀವಿಗಳು ಅನುಸರಿಸುತ್ತಿದ್ದಾರೆ.

ಗಾಂಧಿ ಕಾಂಗ್ರೆಸ್ ನಾಯಕರಾಗಿ 1919ರ ರೌಲಟ್ ಕಾಯ್ದೆ ವಿರೋಧಿಸಿ, ಸತ್ಯಾಗ್ರಹ ಸಭಾ ಸ್ಥಾಪಿಸಿದರು. ಅದೇ ವರ್ಷ ಖಿಲಾಫತ್ ಚಳವಳಿಯ ಮೂಲಕ ಹಿಂದೂ-ಮುಸ್ಲಿಂ ಏಕತೆಯನ್ನು ಕಂಡರು. ಅದೇ ವರ್ಷ ಚಂಪಾರಣ್‌ ನೀಲಿ ಬೆಳೆಗಾರರ ಪರ ಹೋರಾಟದಲ್ಲಿ ‘ಅಸಹಕಾರ’ವನ್ನು ಒಂದು ಸಿದ್ಧಾಂತವಾಗಿಸಿದರು. 1920ರ ಅಸಹಕಾರ ಚಳವಳಿಯ ಹೊತ್ತಿಗೆ ಗಾಂಧೀಜಿ ರಾಷ್ಟ್ರ ನಾಯಕತ್ವದ ದಾರಿಯಲ್ಲಿದ್ದರು. ಸಂದರ್ಭ ಒಬ್ಬ ನಾಯಕನನ್ನು ಸೃಷ್ಟಿಸಿತ್ತು. ಒಂದು ಶತಮಾನ ಕಳೆದಿದೆ. 2019ಕ್ಕೆ ಭಾರತದಲ್ಲಿ ಶಾಂತಿ, ಸೌಹಾರ್ದ, ಸಹಬಾಳ್ವೆ, ಸ್ವಾವಲಂಬನೆ ಮತ್ತು ಸ್ವಾತಂತ್ರ್ಯ ಕಾಪಾಡುವಂಥ ವ್ಯಕ್ತಿಗಳು, ವೇದಿಕೆಗಳು ಬೆಳೆಯಲಿ ಎಂದು ಗಾಂಧೀ ಜಯಂತಿಯ ಸಂದರ್ಭದಲ್ಲಿ ಆಶಿಸುವುದು ಇಂದಿನ ಜರೂರು.

ಇದೇ ಸಂದರ್ಭದಲ್ಲಿ ಭಾರತದ ಶೇಕಡಾ ಒಂದರಷ್ಟು ಜನರ ಕೈಯಲ್ಲಿ ಶೇ 73ರಷ್ಟು ಸಂಪತ್ತು ಶೇಖರಣೆಯಾದ ವರದಿ ಇದೆ. ಗಾಂಧೀಜಿಯವರ ಕನಸಿನ ‘ಟ್ರಸ್ಟಿಷಿಪ್’ ಸಿದ್ಧಾಂತವನ್ನು ಈಗ ವಿಮರ್ಶಿಸಬೇಕು. ಕೃಷಿಯಲ್ಲಿ ಕಾರ್ಪೊರೇಟ್ ಕಂಪನಿಗಳು ಬರುತ್ತಿವೆ. ಇಂಥ ಸಂದರ್ಭದಲ್ಲಿ ಅವರ ‘ಗ್ರಾಮ ಸ್ವರಾಜ್ಯ’ದ ಕನಸು, ಚಿಂತನೆಗಳು, ವಾದಗಳು ಏನಾಗುತ್ತಿವೆ ಎಂಬುದನ್ನು ಗಮನಿಸಬೇಕು. ಸಿದ್ಧಾಂತ, ವಾದ ನಿಂತ ನೀರಾಗಬಾರದು. ನಮ್ಮ ಕಣ್ಣಿಗೆ ಈಗ ‘ಗಾಂಧಿಯ ಹೆಗಲೇರಿದ ಗಾಂಧಿ’ ಬೇಕಾಗಿದೆ. ಕಾರಣ ಇಂದು ಗಾಂಧಿ ಹತ್ಯೆಗೈದವರು ಹೀರೋಗಳಾಗುತ್ತಿದ್ದಾರೆ, ಗಾಂಧಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.