ADVERTISEMENT

ಅನುಭವ ಮಂಟಪ| ಸಹಕಾರಿ ರಂಗದ ಕಬ್ಜಾ: ವನ ಸುಡುವ ಕಪಿಚೇಷ್ಟೆ

ಕೆ.ಪಿ.ಸುರೇಶ
Published 20 ಜುಲೈ 2021, 19:44 IST
Last Updated 20 ಜುಲೈ 2021, 19:44 IST
   

ಹೆಗ್ಗಣಕ್ಕೊಂದು ಸ್ವಭಾವವಿದೆ. ಬಿಲದಿಂದ ಹೊರಬಂದು ಏನುಕಾಣುತ್ತೋ- ಗೆಡ್ಡೆ, ಬೇರು, ಮೂಟೆ, ಏನೇ ಇರಲಿ- ಅದನ್ನು
ಕೊರೆದು ಎತ್ತಿ ಹಾಕಿ ಕೆಡಿಸುವುದು. ಅದು ತನ್ನ ಸ್ವಭಾವ ಬಿಡದು.ಸಹಕಾರಿ ರಂಗವನ್ನು ನಿಯಂತ್ರಿಸುವ ಹೆಜ್ಜೆಯನ್ನು ಕೇಂದ್ರಸರಕಾರ ಇಟ್ಟು ಅದಕ್ಕೆ ತನ್ನ ನಂ. 2 ಅಮಿತ್ ಶಾ ಅವರನ್ನೇ ಸಚಿವರಾಗಿನೇಮಿಸಿದಾಗ ಬೇಡವೆಂದರೂ ಇದು ನೆನಪಾಯಿತು.

ಕೆ.ಪಿ.ಸುರೇಶ

ಈಗಾಗಲೇ ನ್ಯಾಯಾಂಗ, ಕಾರ್ಯಾಂಗ, ತನಿಖಾ ಸಂಸ್ಥೆಇತ್ಯಾದಿಗಳನ್ನು ಸರ್ಕಾರಕ್ಕೆ ‘ಸಹಕಾರ’ ನೀಡುವಂತೆ ಮಣಿಸಿರುವಅಮಿತ್ ಶಾ ಈಗ ಸಹಕಾರಿ ಸಚಿವರಾಗಿರುವುದು ಉಚಿತವೇ ಆಗಿದೆ.ಸಂವಿಧಾನದ ಪ್ರಕಾರ ರಾಜ್ಯದ ಪಟ್ಟಿಯಲ್ಲಿರುವ ಈ ರಂಗವನ್ನುತನ್ನ ತೆಕ್ಕೆಗೆ ತೆಗೆದುಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರ ಅನಿರೀಕ್ಷಿತವೇನಲ್ಲ. ಇದು ಒಂಟಿ ನಿರ್ಧಾರವೂ ಅಲ್ಲ.ಈಗಾಗಲೇ, ಕೃಷಿಯಂಥಾ ರಾಜ್ಯ ಪಟ್ಟಿಯ ಕ್ಷೇತ್ರದಲ್ಲಿ ಕೇಂದ್ರಕಾನೂನುಗಳನ್ನು ಜಾರಿ ಮಾಡಿ, ಅದಕ್ಕೆ ಪೂರಕವಾಗುವಂತೆ ಈ
ನಿಯಂತ್ರಣದ ಹೆಜ್ಜೆ ಇರಿಸಿದೆ. ಆದರೆ 97ನೇ ಸಂವಿಧಾನತಿದ್ದುಪಡಿಯಲ್ಲಿ ಅಡಕಗೊಳಿಸಿದ್ದ ಅಂಶಗಳನ್ನುಅಸಿಂಧುಗೊಳಿಸಿರುವ ಸುಪ್ರೀಂ ಕೋರ್ಟಿನ ಕ್ರಮ, ಮೋದಿಸರ್ಕಾರಕ್ಕೆ ಅಪಶಕುನವಾಗಿ ಪರಿಣಮಿಸಿದೆ.

ಖಾಸಗೀಕರಣ, ಜಾಗತೀಕರಣದ ಕಾರ್ಯಸೂಚಿಗೆ ಒಂದು ವಿನ್ಯಾಸ ಇದೆ.ಸರ್ಕಾರಿ ನಿಯಂತ್ರಣ ಅಥವಾ ನಿರ್ವಹಣೆಯಲ್ಲಿರುವ ವ್ಯವಸ್ಥೆ ಅಥವಾಸಂಸ್ಥೆಗಳನ್ನು ದಯನೀಯವಾಗಿ ಕೆಡಿಸಿ ಜನರು ದಿಕ್ಕೆಟ್ಟಾಗಇದಕ್ಕೆ ಪರ್ಯಾಯವಾಗಿ ಖಾಸಗೀಕರಣವನ್ನು ನೆಲೆಗೊಳಿಸುವುದುಲಾಗಾಯ್ತಿನಿಂದ ಬಂದಿರುವ ರೂಢಿ. ಸರ್ಕಾರದ್ದೇ ಆದ ಈಸಂಸ್ಥೆಗಳು ಅಥವಾ ಕ್ಷೇತ್ರಗಳಲ್ಲಿ ಭ್ರಷ್ಟತೆ ಮತ್ತು ಅದಕ್ಷತೆ ಇದೆಎಂದಾದಲ್ಲಿ ಅದು ತನ್ನ ಆಡಳಿತ ಲೋಪದ ಪುರಾವೆಯೇ ವಿನಃಸಂಸ್ಥೆಯ ಅಥವಾ ವ್ಯವಸ್ಥೆಯ ಸಂರಚನಾತ್ಮಕ ದೋಷವಾಗಲುಸಾಧ್ಯವಿಲ್ಲ. ತನ್ನದೇ ಆಡಳಿತ ಯಂತ್ರವನ್ನು ತಿದ್ದುವ ಸಂಕಲ್ಪಬಲ ಇಲ್ಲದಿರುವ ಸರ್ಕಾರವು ದೇಶದ ಗತಿ ಬದಲಾಯಿಸುತ್ತದೆಂದುಹೇಗೆ ನಂಬುವುದು?

ADVERTISEMENT

ಈ ವೈರುಧ್ಯಕ್ಕೆ ಯಾವ ಸರ್ಕಾರವು ಉತ್ತರಿಸಿಲ್ಲ, ಇರಲಿ.ಸಹಕಾರ ಕ್ಷೇತ್ರ ಭ್ರಷ್ಟಾಚಾರದ ಕೂಪವಾಗಿದೆ,ರಾಜಕಾರಣಿಗಳ ಆಡುಂಬೊಲವಾಗಿದೆ ಇತ್ಯಾದಿ ಆರೋಪಗಳಲ್ಲಿಸತ್ಯವಿದೆ. ಇರುವ ನಿಯಮಗಳ ಲೋಪವನ್ನು ಬಳಸಿ ಅಥವಾಅದನ್ನು ಮೀರಿ ಇಂಥಾ ಪ್ರಕ್ರಿಯೆ ನಡೆಯುತ್ತಿದೆ.

ನಿಯಮಾವಳಿಗಳನ್ನು ನೋಡಿದರೆ ಅದರಲ್ಲಿ ದೋಷವಿದೆಎಂಬುದನ್ನು ಯಾವ ತಜ್ಞನೂ ತೋರಿಸಿಕೊಟ್ಟಿಲ್ಲ; ಹೆಚ್ಚೆಂದರೆಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆ ಅಥವಾ ಸೇರ್ಪಡೆ ಮಾಡಬಹುದೆಂಬಮಾತು ಬಿಟ್ಟರೆ ಅನ್ಯ ದೋಷಾರೋಪಣೆ ಎಲ್ಲೂ ಇಲ್ಲ.

ದೇಶದಲ್ಲಿ 98 ಸಾವಿರ ಸಹಕಾರಿ ಸಂಸ್ಥೆಗಳಿದ್ದು ಅದರಲ್ಲಿ 97 ಸಾವಿರಸಂಸ್ಥೆಗಳು ಗ್ರಾಮೀಣ ಕೃಷಿ ಸಹಕಾರಿಗಳೇ! ಎರಡುಶೇಕಡಾದಷ್ಟು ಮಾತ್ರ ನಗರ ಸಹಕಾರಿಗಳಿವೆ.ಸಾಲ ನೀಡಿಕೆಯ ಸಹಕಾರಿಗಳಲ್ಲಿರುವ ಸಂರಚನಾತ್ಮಕವ್ಯವಸ್ಥೆಯೇ ಬೇರೆ, ಸಂಗ್ರಹ-ಮಾರುಕಟ್ಟೆಯ ಹೊಣೆಗಾರಿಕೆಇರುವ ಕ್ಯಾಂಪ್ಕೋ, ಕೆ.ಎಂ.ಎಫ್. ಸಹಕಾರಿಗಳ ಸಂರಚನೆಯೇಬೇರೆ. ಈಗ ಈ ಅಮಿತ್ ಶಾ ಯಾವುದನ್ನು ‘ಬಲಪಡಿಸುವ’ ಗುರಿ ಪಡೆದಿದ್ದಾರೆ ಎಂಬುದು ಇನ್ನೂ ನಿಗೂಢ.

ಆದರೆ ಸರ್ಕಾರ ಮುಂದಿಟ್ಟಿರುವ ಟೀಸರ್‌ನಲ್ಲಿ, ವ್ಯವಹಾರಸುಗಮಗೊಳಿಸುವ ವ್ಯವಸ್ಥೆ ಎಂಬ ಪದ ಪುಂಜ ಇದೆ. ಈ ‘ಈಸ್‌ ಆಫ್‌ ಡೂಯಿಂಗ್‌ ಬ್ಯುಸಿನೆಸ್‌’ ಎಂಬುದೇ ಕಾರ್ಪೊರೇಟ್ ನುಸುಳುವಿಕೆಗೆ ಇರುವಸಂಕೇತ ಪದಪುಂಜ.ಈ ನಿಯಂತ್ರಣದ ಹವಣಿಕೆಯ ಹಿಂದೆ ಏನೇನು ಧ್ಯಾನವಿದೆಎಂಬುದನ್ನು ನೋಡೋಣ.

ಗ್ರಾಮೀಣ/ಕೃಷಿಗೆ ಸಂಬಂಧಿಸಿದ ಪ್ರತೀಯೋಜನೆಯಲ್ಲೂ ಕೇಂದ್ರ ಸರ್ಕಾರ ಆರ್ಥಿಕ ಹೊರೆಇಳಿಸಿಕೊಳ್ಳಲು ಇನ್ನಿಲ್ಲದ ಆಟ ಆಡುತ್ತಿರುವ ಉದಾಹರಣೆ ಗಮನಿಸಿ:ರೈತರ ಬೆಳೆ ಸಾಲದ ಬಡ್ಡಿ ಸಬ್ಸಿಡಿಗೆ ₹24 ಸಾವಿರ ಕೋಟಿ ಬೇಕು ಎಂದುಕೃಷಿ ಇಲಾಖೆ ಮನವಿ ಸಲ್ಲಿಸಿದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಮೊತ್ತವನ್ನು ₹17,863 ಕೋಟಿಗೆ ಇಳಿಸಿತು.ಈ ಹಿಂದೆ ಗ್ರಾಮೀಣ ಸಂತೆಗಳ ಆಧುನೀಕರಣಕ್ಕೆ ₹2 ಸಾವಿರ ಕೋಟಿಅನುದಾನ
ನಿಗದಿ ಮಾಡಿ ಅದರಲ್ಲಿ ಶೇ 1ರಷ್ಟು ಕೂಡಾ ವೆಚ್ಚವಾಗಿರಲಿಲ್ಲ.ನಿಯಮಾವಳಿಗಳ ಕೊಕ್ಕೆಯ ಮೂಲಕ ಸರ್ಕಾರ ಅನುದಾನವಿನಿಯೋಗವಾಗದಂತೆ ನೋಡಿಕೊಳ್ಳುವುದಿದೆ.

ಇವೆಲ್ಲಾ ಆಕಸ್ಮಿಕ ಅಲ್ಲ

ಮೊನ್ನೆ, ಕೃಷಿ ಮಾರುಕಟ್ಟೆ ಬಲಪಡಿಸಲು ಎ.ಪಿ.ಎಂ.ಸಿ. ಕಾಯ್ದೆ, ಅಷ್ಟೇ ಅಲ್ಲ ಕೃಷಿಸಹಕಾರಿ ಬ್ಯಾಂಕುಗಳಿಗೂ ಮೂಲಸಂರಚನೆ ನಿರ್ಮಾಣಕ್ಕೆ ಧನ ಪ್ರಾಪ್ತಿ ಯೋಗ ಕರುಣಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.ಆದರೆ ಇದರಲ್ಲೊಂದು ಕೊಕ್ಕೆ ಇದೆ. ಈ ಧನ ರಾಶಿ ಸಾಲವೇಹೊರತು, ಅನುದಾನವಲ್ಲ. ಕೋಟಿಗಟ್ಟಲೆ ಸಾಲ ಮಾಡುವ ಶಕ್ತಿ ಈಸಹಕಾರಿಗಳಿಗೆ ಇರುವುದು ಸಂಶಯ. ಆದರೆ ಈ ಸಾಲ ಪಡೆದುಮೂಲ ಸಂರಚನೆ ಸೃಷ್ಟಿಸುವಂತೆ ಕೇಂದ್ರದಿಂದ ಒತ್ತಡ ಬರುವುದು ಖಚಿತ. ವಿದ್ಯುತ್ ರಂಗದ ಸುಧಾರಣೆಗೆ ಕೇಂದ್ರ ಹಾಕಿರುವ ಶರತ್ತುಗಳನ್ನು ನೆನಪಿಸಿಕೊಳ್ಳಿ.

ಈಗ ಕಾರ್ಪೊರೇಟ್ ಪ್ರವೇಶಕ್ಕೆ ಹೊಸ ಕಾಯ್ದೆ ಅನುವುಮಾಡಿಕೊಟ್ಟಿದೆಯಾದರೂ ಯಾವ ಕಾರ್ಪೊರೇಟ್ ಸಂಸ್ಥೆ ಕೂಡಾ ತಾನಾಗಿಯೇ ಹಳ್ಳಿಗಳಿಗೆ ನುಗ್ಗಿ ಸಂಗ್ರಹಿಸುವ ಗೋಜಿಗೆಹೋಗುವುದಿಲ್ಲ. ಇದನ್ನು ಮಾಡಲು ಸಂಸ್ಥೆಗಳು ಬೇಕಾಗಿವೆ.ಈಗಾಗಲೇ ಸಹಕಾರಿ ಸಂಸ್ಥೆಗಳು, ರೈತ ಉತ್ಪಾದಕ ಸಂಘಗಳು ಈ ಸಂಗ್ರಾಹಕ ಪಾತ್ರ ವಹಿಸಲು ಸರ್ಕಾರ ಪರವಾನಗಿ ಕೊಟ್ಟಿದೆಯಷ್ಟೇ ಅಲ್ಲ, ಅದನ್ನು ಪ್ರೋತ್ಸಾಹಿಸುತ್ತಿದೆ.

ಆದ್ದರಿಂದ ಅಮಿತ್ ಶಾ ಅವರಿಗೆ ನೀಡಲಾಗಿರುವ ಸುಪಾರಿ ಎರಡಂಶಗಳಕಾರ್ಯಸೂಚಿ ಎಂದು ಖಚಿತವಾಗಿ ಊಹಿಸಬಹುದು.

1. ಈ ಎಲ್ಲಾ ಸಹಕಾರಿಸಂಸ್ಥೆಗಳನ್ನು ನಿಯಮಾವಳಿ ಮತ್ತು ಅನುದಾನಗಳ ಮೂಲಕ ನಿಯಂತ್ರಿಸಿ ಅವು ಕಾರ್ಪೋರೇಟ್‌ಗಳ ಕೃಷಿ ವ್ಯವಹಾರಗಳ ಮಧ್ಯವರ್ತಿ/ ಸೂಲಗಿತ್ತಿಯಾಗುವಂತೆ ರೂಪಾಂತರಿಸುವುದು. 2. ಮಹಾರಾಷ್ಟ್ರ, ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಬೇರು ಮಟ್ಟದ ರಾಜಕೀಯ ನಿಯಂತ್ರಣದ ಸ್ವರೂಪ ಈ ಸಹಕಾರಿ ಸಂಸ್ಥೆಗಳಿಗಿದ್ದು ಅದನ್ನು ಒಡೆದು ಅವುಗಳನ್ನು ಸಂಪೂರ್ಣ ತನ್ನ ಪಕ್ಷ ಮೂಲರಾಜಕೀಯದ ಸಂಸ್ಥೆಯಾಗಿ ರೂಪಾಂತರಿಸುವುದು.

ಇದರೊಂದಿಗೆ ಇನ್ನೊಂದು ದೂರಗಾಮಿ ಯೋಜನೆಯೂ ಇದೆ. ಈಗ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕೃಷಿಯಂಥಾ ಆದ್ಯತಾ ವಲಯಕ್ಕೆ ನಿರ್ದಿಷ್ಟ ಪ್ರಮಾಣದ ಸಾಲ ನೀಡುವ ಹೊಣೆಗಾರಿಕೆಯಿದೆ. ಇದು ರಗಳೆಯ ವ್ಯವಹಾರ! ಇಡೀ ಕೃಷಿ ಸಾಲನೀಡಿಕೆಯನ್ನು ಸಹಕಾರಿ ರಂಗಕ್ಕಷ್ಟೇ ಸೀಮಿತಗೊಳಿಸಿ ಬ್ಯಾಂಕುಗಳನ್ನು ಈಹೊಣೆಗಾರಿಕೆಯಿಂದ ಮುಕ್ತಗೊಳಿಸಿದರೆ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಿ ಕಾರ್ಪೊರೇಟ್ ಸಾಲ ನೀಡಿಕೆಯ ತೂಬುಗಿಂಡಿಯಾಗಿಸುವುದು ಸುಲಭ. ಸತತವಾಗಿ ರಾಜ್ಯ ಪಟ್ಟಿಯ ಕ್ಷೇತ್ರಗಳನ್ನು ಕಬ್ಜಾ ಮಾಡುತ್ತಾ ಅವುಗಳ ಸ್ಥಳೀಯ ಸ್ವಾಯತ್ತೆಯನ್ನು ಮುರಿದು, ಅವುಗಳನ್ನು ತನ್ನ ನಿಯಮಾವಳಿಗಳನ್ನು ಅನುಸರಿಸುವ ಗುಮಾಸ್ತಗಿರಿಗೆ ಇಳಿಸುವುದು ಅಮಿತ್ ಶಾ ಅವರಿಗಿರುವ ಹೊಣೆ. ಈಗದೇಶದಲ್ಲಿ ಯಾವ ಯಾವ ಸಂಸ್ಥೆ/ ಕ್ಷೇತ್ರ ಸ್ವಾಯತ್ತವಾಗಿದೆ
ಎಂಬುದನ್ನು ತಲಾಶ್ ಮಾಡಿ ಅದನ್ನು ಕೇಂದ್ರೀಕೃತನಿಯಂತ್ರಣಗೊಳಿಸುವ ಕಾರ್ಯಸೂಚಿ ಇದು.

ಆದರೆ ಈ ‘ನಿಯೋಗ’ದ ಉತ್ಸಾಹ ಮಹಾ ಭಾರತಕ್ಕೇ ಸರಿ.ವರ್ತಮಾನದಲ್ಲಿ ಈ ನಿಯೋಗದ ಕಾರ್ಯೋತ್ಸಾಹ ದೇಶವನ್ನು ಅಂದರೆ ಅದರ ಜನಸಮುದಾಯಗಳನ್ನು ಇನ್ನಷ್ಟು ರೋಗಿಷ್ಠಗೊಳಿಸುತ್ತದೆ. ‘ಒಣ ಹುಲ್ಲಿಗೆ ಇಟ್ಟ ಬೆಂಕಿ ಹಸಿ ಹುಲ್ಲನ್ನೂ ಸುಡುತ್ತದೆ’ ಎಂಬುದುಮೆಕ್ಸಿಕೋದ ಗಾದೆ. ಈ ಸರ್ಕಾರದ ಹವಣಿಕೆಯನ್ನುನೋಡಿಯೇ ಈ ಗಾದೆ ಸೃಷ್ಟಿಸಿದ್ದಿರಬಹುದು.

ಲೇಖಕ: ಗ್ರಾಮೀಣ–ಕೃಷಿ ಆರ್ಥಿಕ ತಜ್ಞ

***

ಗೃಹದಷ್ಟೇ ಸಹಕಾರ ಸಚಿವಾಲಯವೂ ಪ್ರಭಾವಶಾಲಿ

ದೇಶದಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಯಷ್ಟೇ ಸಹಕಾರಿ ಕ್ಷೇತ್ರವೂ ಬಲಿಷ್ಠವಾಗಿ ಬೆಳೆಯುತ್ತಿದೆ. ಬಹುತೇಕ ಕೃಷಿಕರು ಸಹಕಾರಿ ಕ್ಷೇತ್ರವನ್ನೇ ಅವಲಂಬಿಸಿದ್ದಾರೆ. ರೈತರಿಗೆ ಇನ್ನಷ್ಟು ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸಹಕಾರ ಸಚಿವಾಲಯವನ್ನು ಸ್ಥಾಪಿಸಿದೆ.

ಕೇಂದ್ರದಲ್ಲಿ ಸಹಕಾರಿ ಕ್ಷೇತ್ರವು ಈತನಕ ಕೃಷಿ ಸಚಿವಾಲಯದ ಅಧೀನದಲ್ಲೇ ಇತ್ತು. ಅದನ್ನು ಪ್ರತ್ಯೇಕಿಸುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಹೊಸ ದಿಕ್ಕನ್ನು ನೀಡಲು ಸರ್ಕಾರ ಮುಂದಾಗಿದೆ. ರೈತರಿಗೆ ಸಹಾಯಧನ, ಸಾಲಮನ್ನಾ, ಬಡ್ಡಿ ಮನ್ನಾ ಇನ್ನಿತರ ನೆರವು ಪಡೆಯಲು ಅನುಕೂಲವಾಗಲಿದೆ.

ಸಹಕಾರ ಸಚಿವಾಲಯ ಹೊಸ ಖಾತೆಯಾಗಿರುವುದರಿಂದ ಅದನ್ನು ನಿರ್ವಹಿಸಲು ಪ್ರಭಾವಿ ವ್ಯಕ್ತಿ ಬೇಕಾಗುತ್ತದೆ. ಆ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಅಮಿತ್ ಶಾ ಹೆಗಲಿಗೆ ಹಾಕಿರಬಹುದು. ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸಹಕಾರ ಸಚಿವಾಲಯದ ಮೂಲಕ ರೈತರಿಗೆ ನೆರವಾಗುವ ಅವಕಾಶ ಇರುವುದರಿಂದ ಸಮರ್ಥ ವ್ಯಕ್ತಿಗೆ ಖಾತೆ ನೀಡಲಾಗಿದೆ. ಈ ಮೂಲಕ ಗೃಹ ಇಲಾಖೆಯಷ್ಟೇ ಸಹಕಾರ ಸಚಿವಾಲಯವೂ ಪ್ರಭಾವಶಾಲಿ ಎಂಬ ಸಂದೇಶವನ್ನು ರವಾನಿಸಲಾಗಿದೆ.

ಸಂಜೀವ ಮಠಂದೂರು, ಪುತ್ತೂರು ಶಾಸಕ, ಬಿಜೆಪಿ ಸಹಕಾರ ಪ್ರಕೋಷ್ಠದ,ರಾಜ್ಯ ಸಂಚಾಲಕ

***

ಉದ್ದೇಶ ಏನು ಎಂಬುದೇ ಸ್ಪಷ್ಟವಾಗಿಲ್ಲ

ಕೇಂದ್ರ ಸರ್ಕಾರ ಸಹಕಾರ ಸಚಿವಾಲಯ ಸ್ಥಾಪಿಸಿದೆ. ಆದರೆ, ಅದರ ಉದ್ದೇಶ‌ಏನು ಎಂಬುದನ್ನೇ ಹೇಳಿಲ್ಲ.ಸಹಕಾರ ರಾಜ್ಯ ಪಟ್ಟಿಯಲ್ಲಿರುವ ವಿಷಯವಾಗಿತ್ತು. ಈಗ ಕೇಂದ್ರ ಸರ್ಕಾರ ಅದನ್ನೂ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಹೊರಟಿದೆ.

ಸಹಕಾರ ಕ್ಷೇತ್ರದ ಬಲವರ್ಧನೆಗೆ ರಾಜ್ಯದ ಜೊತೆಗೆ ಕೇಂದ್ರದ ಸಹಭಾಗಿತ್ವ ಹೇಗಿರುತ್ತದೆ. ಕೇಂದ್ರ ಸರ್ಕಾರವೂ ಆರ್ಥಿಕ ನೆರವು ನೀಡಿ ಈ ಕ್ಷೇತ್ರದ ಸಬಲೀಕರಣಕ್ಕೆ ಒತ್ತು ನೀಡಿ ಮತ್ತಷ್ಟು ಜನರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು.

ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್‌ಗಳು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಧೀನದಲ್ಲಿದ್ದರೂ ಅದರ ನೇರ ನಿಯಂತ್ರಣಕ್ಕೆ ಒಳಪಟ್ಟಿರಲಿಲ್ಲ. ಡಿಸಿಸಿ ಬ್ಯಾಂಕ್‌ಗಳ ಸಮ್ಮತಿಯನ್ನೂ ಪಡೆಯದೆ ಅವುಗಳನ್ನು ಆರ್‌ಬಿಐ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಇದೇ ಮಾದರಿಯಲ್ಲಿ ಸಹಕಾರಿ ಸಂಸ್ಥೆಗಳನ್ನೂ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದಲೇಕೇಂದ್ರ ಸರ್ಕಾರ ಹೊಸ ಸಹಕಾರ ಸಚಿವಾಲಯ ಆರಂಭಿಸಿದರೆ ಅದು ಸರಿಯಾದ ಕ್ರಮವಲ್ಲ.ಪಟ್ಟಣ ಸಹಕಾರ ಬ್ಯಾಂಕ್‌ಗಳಲ್ಲಿ ಶೇ 50ರಷ್ಟು ವೃತ್ತಿಪರ ನಿರ್ದೇಶಕರು ಇರಬೇಕು ಎಂಬ ನಿಯಮ ಮಾಡಿದ್ದು, ಸಹಕಾರ ಕ್ಷೇತ್ರಕ್ಕೂ ಅದನ್ನು ಅನ್ವಯಿಸಿದರೆ ಸಹಕಾರಿಗಳಿಗೆ ಏನು ಕೆಲಸ ಉಳಿಯುತ್ತದೆ. ಡಿಸಿಸಿ ಬ್ಯಾಂಕ್‌ಗಳ ಮೇಲೆ ಸರ್ಕಾರ ನಿಯಂತ್ರಣ ಸಾಧಿಸಿದರೆ ಸಹಕಾರಿ ಕ್ಷೇತ್ರದಲ್ಲಿರುವವರ ಉತ್ಸಾಹವೇ ಕುಗ್ಗಿ ಹೋಗುತ್ತದೆ.

ರಾಜ್ಯ ಸರ್ಕಾರಗಳು ಸಹಕಾರ ಇಲಾಖೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂಬ ಆರೋಪವನ್ನು ನಾನು ಅಲ್ಲಗಳೆಯುವುದಿಲ್ಲ.ಅದರಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಸಂಸ್ಥೆಗಳು ಮತ್ತು ರಾಜ್ಯಗಳನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು. ಇಲ್ಲಿ ಲೋಪ–ದೋಷ ಇವೆ ಎಂದು ಹಿಡಿತ ಸಾಧಿಸಲು ಹೊರಟರೆ ಅದು ಸಹಕಾರ ತತ್ವದ ಮೂಲ ಉದ್ದೇಶಕ್ಕೇ ಕೊಡಲಿ ಪೆಟ್ಟು ನೀಡಿದಂತಾಗುತ್ತದೆ.

ದೇಶದ ಸಹಕಾರಿ ಕ್ಷೇತ್ರದಲ್ಲಿನಮ್ಮ ರಾಜ್ಯದಸಾಧನೆಯು ದೊಡ್ಡಮಟ್ಟದಲ್ಲಿದೆ.ಸಕ್ಕರೆ ಉತ್ಪಾದನೆ ಕ್ಷೇತ್ರದಲ್ಲಿಯೂ ಸಹಕಾರ ತತ್ವದಲ್ಲಿ ನಾವು ಸಾಧನೆ ಮಾಡಿದ್ದೇವೆ. ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಸಂಸ್ಥೆ (ಎನ್‌ಡಿಡಿಬಿ) ರಾಷ್ಟ್ರಮಟ್ಟದಲ್ಲಿಯೇ ಮಾದರಿಯಾದ ಸಹಕಾರ ಸಂಸ್ಥೆಯಾಗಿದೆ.ಸಹಕಾರ ಸಂಘಗಳಿಗೆ ನೆರವು ನೀಡಿ ಸಹಕಾರ ಕ್ಷೇತ್ರವನ್ನು ಬಲವರ್ಧನೆ ಮಾಡುವ ಉದ್ದೇಶ ಇದ್ದರೆ ಸ್ವಾಗತ. ಇದು ನಿಯಂತ್ರಣದ ಅಸ್ತ್ರವಾದರೆ ಸರಿಯಲ್ಲ.

ಶಿವಾನಂದ ಪಾಟೀಲ,ವಿಜಯಪುರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಬಸವನ ಬಾಗೇವಾಡಿ ಶಾಸಕ

***

ನಿಜ ಅರ್ಥದಲ್ಲಿ ಸಹಕಾರದ ಲಾಭ ದೊರೆಯಲಿ

ಸಹಕಾರ ಕ್ಷೇತ್ರ ಈಗ ಹಲವು ರಾಜಕಾರಣಿಗಳು ಹಾಗೂ ಪ್ರಭಾವಿಗಳ ಕಪಿಮುಷ್ಠಿಯಲ್ಲಿದೆ. ಅನೇಕರು ಸಹಕಾರ ಕ್ಷೇತ್ರವನ್ನು ರಾಜಕೀಯ ದಾಳ ಮಾಡಿಕೊಂಡಿದ್ದಾರೆ. ಸಹಕಾರ ಎನ್ನುವುದು ಎಲ್ಲ ಸಮುದಾಯದವರನ್ನು ಒಳಗೊಂಡಿರಬೇಕು. ಆದರೆ, ಪ್ರಬಲ ಸಮುದಾಯ ಹಾಗೂ ಮನೆತನಗಳು ಸಹಕಾರ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿವೆ. ಡಿಸಿಸಿ ಬ್ಯಾಂಕ್‌ಗಳು ಹಾಗೂ ಸಹಕಾರ ಸಕ್ಕರೆ ಕಾರ್ಖಾನೆಗಳು ಇದಕ್ಕೆ ಉತ್ತಮ ನಿದರ್ಶನ.

ಎಲ್ಲ ಸಮುದಾಯದ ಜನರಿಗೂ ನಿಜ ಅರ್ಥದಲ್ಲಿ ಸಹಕಾರದ ಲಾಭ ದೊರೆಯಬೇಕು ಎನ್ನುವುದೇ ಸಹಕಾರ ಸಚಿವಾಲಯ ಸ್ಥಾಪನೆಯ ಉದ್ದೇಶವಾಗಬೇಕು. ಸಹಕಾರ ಕ್ಷೇತ್ರದಿಂದ ಬಂದ ರಾಜಕಾರಣಿಗಳ ಶಕ್ತಿಗುಂದಿಸುವ ಉದ್ದೇಶದಿಂದಲೇ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಲಾಗುತ್ತಿದೆ ಎಂದು ಊಹಿಸಿಕೊಳ್ಳುವುದಕ್ಕಿಂತಲೂ ಹಾಲು ಉತ್ಪಾದಕರು, ಕೃಷಿಕರು, ಕುಶಲಕರ್ಮಿಗಳು, ಮಹಿಳಾ ಸ್ವಸಹಾಯ ಸಂಘಗಳಿಗೆ ಅಧಿಕಾರ ಒದಗಿಸಿಕೊಡುವ ಹಾಗೂ ಇವರ ಮೂಲಕ ಸಹಕಾರ ಕ್ಷೇತ್ರವನ್ನು ಬಲಪಡಿಸುವ ಉದ್ದೇಶವೂ ಇರಬಹುದು.

ಸಹಕಾರ ಕ್ಷೇತ್ರ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ‘ಅರೆ ಸರ್ಕಾರ’ವಾಗಿ ಕೆಲಸ ಮಾಡಬೇಕು. ಸಹಕಾರ ಕ್ಷೇತ್ರದಲ್ಲಿ ಸಾರಿಗೆ ಸಂಸ್ಥೆ, ಆಸ್ಪತ್ರೆಗಳು ಬರಬೇಕು. ಅಧಿಕಾರ ವಿಕೇಂದ್ರೀಕರಣ ಆಗಬೇಕು.

2006ರಲ್ಲಿ ನಾನು ಇಸ್ರೇಲ್‌ಗೆ ಹೋಗಿದ್ದೆ. ನಮ್ಮ ರೈತರು ಅಲ್ಲಿಯ ಹಾಗೆ ₹1 ಕೋಟಿ ಕೊಟ್ಟು ಕೃಷಿ ಯಂತ್ರ ಖರೀದಿಸಲು ಸಾಧ್ಯವಿಲ್ಲ. ಸಹಕಾರ ಕ್ಷೇತ್ರದ ಮೂಲಕ ಸಾಗುವಳಿ ಮಾಡಿದರೆ ಕೃಷಿಕರಿಗೆ ಒಳಿತಾಗಲಿದೆ. ಕೃಷಿ ಕ್ಷೇತ್ರವೂ ಅಭಿವೃದ್ಧಿ ಕಾಣಲಿದೆ. ಸಹಕಾರ ರಾಜ್ಯದ ಪಟ್ಟಿಯಲ್ಲಿರುವ ಇಲಾಖೆಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿಕೊಂಡು ಒಳ್ಳೆಯ ಕೆಲಸ ಮಾಡಲು ಸಾಧ್ಯವಿದೆ.

ಮೊದಲು ಕೇಂದ್ರದಲ್ಲಿ ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಸಹಕಾರ ಬರುತ್ತಿತ್ತು. ಇನ್ನು ಕೇಂದ್ರದಲ್ಲಿ ಸಹಕಾರಕ್ಕೆ ಪ್ರಾತಿನಿಧ್ಯ ಸಿಗಲಿದೆ. ಗ್ರಾಮೀಣ ಪ್ರದೇಶದ ಸಹಕಾರ ಸಂಘಗಳಿಗೆ ಬಲ ದೊರೆಯಲಿದೆ. ರಾಜ್ಯದಲ್ಲಿ 80 ಲಕ್ಷ ರೈತರಿದ್ದಾರೆ. ಅದರಲ್ಲಿ 22 ಲಕ್ಷ ರೈತರು ₹13 ಸಾವಿರ ಕೋಟಿ ಸಾಲ ಪಡೆದಿದ್ದಾರೆ. ರೈತರ ಸಹಕಾರ ಸಂಘಗಳು ಅಸ್ತಿತ್ವಕ್ಕೆ ಬಂದರೆ ಬಡ್ಡಿ ರಹಿತವಾಗಿ ಸಾಲ ಪಡೆಯುವ ಅವಕಾಶವೂ ಬರಬಹುದು.

– ಬಂಡೆಪ್ಪ ಕಾಶೆಂಪುರ, ಜೆಡಿಎಸ್‌ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.