ಕಳೆದ ವಾರ, ದಕ್ಷಿಣ ಕರ್ನಾಟಕದ ತುದಿ ಭಾಗದ ಹಲ್ಲರೆ ಗ್ರಾಮದಲ್ಲಿ ಸೂತ್ರದ ಗೊಂಬೆಯಾಟದ ದೃಶ್ಯ ಭಾಗಗಳನ್ನು ನೋಡುವ ಅವಕಾಶ ಸಿಕ್ಕಿತು. ಕರ್ನಾಟಕದಲ್ಲಿ ಈ ತೊಗಲು ಗೊಂಬೆ, ಸೂತ್ರದ ಗೊಂಬೆಯಾಟಗಳು ಅಳಿಯುತ್ತಾ ಪಳೆಯುಳಿಕೆಗಳಾಗಿ ಜೀವ ಹಿಡಿದುಕೊಂಡಿವೆ. ಈ ಹೊತ್ತು ಸೂತ್ರದ ಗೊಂಬೆಯ ಸೂತ್ರಧಾರರು ಇದೇ ಆಟವನ್ನು ನಂಬಿ ಬದುಕಲು ಸಾಧ್ಯವಿಲ್ಲ.
ಕಳೆದ ದಶಕಗಳಲ್ಲಿ ಇವುಗಳ ಆಟದ ಪ್ರಯಾಣ ಹೇಗಿತ್ತೆಂದರೆ, ಸೂತ್ರಧಾರ ಭಾಗವತರು, ಬಣ್ಣ ಬಳಿದುಕೊಂಡ ದೇವಾನುದೇವತೆಗಳು, ರಾಕ್ಷಸರು ಮತ್ತು ನಕ್ಕು ನಗಿಸುವ ಹನುಮನಾಯಕ, ಬಂಗಾರಕ್ಕನ ಗೊಂಬೆಗಳು ಎತ್ತಿನಗಾಡಿ ಏರಿ, ಕುಯ್ಲು ಮುಗಿಯುವ ಇಂಥ ಚಳಿಗಾಲಕ್ಕೆ ಪ್ರಯಾಣ ಹೊರಟರೆ, ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದುದು ಯುಗಾದಿಯ ಹೊತ್ತಿಗೆ. ಸುತ್ತೇಳು ಗ್ರಾಮಗಳ ಜನರಿಗೆ ಈ ಗೊಂಬೆಗಳು ಬರಿಯ ಗೊಂಬೆಗಳಲ್ಲ, ತಮ್ಮ ಗ್ರಾಮಸಮ್ಮುಖಕ್ಕೆ ಆಗಮಿಸಿದ ದೇವತೆಗಳು. ಅವರ ಬದುಕಿನ ನೈತಿಕ ಪಠ್ಯಗಳ ಬೋಧಕರು. ಗ್ರಾಮೀಣ ಜನ, ಬಯಲಾಟ ಪಠ್ಯ ಬರೆದುಕೊಂಡು ತಾವು ರಂಗಮಂಚ ಏರುವ ಮೊದಲೇ ಈ ತೊಗಲು ಮತ್ತು ಸೂತ್ರದ ಗೊಂಬೆಗಳು ರಂಗಸ್ಥಳ ಹತ್ತಿದ್ದಕ್ಕೆ ಮಹಾಭಾರತವೇ ಮೊದಲಾಗಿ ಶಾಸನಗಳಲ್ಲಿ ದಾಖಲೆಗಳಿವೆ.
ಹಲ್ಲರೆ ಗ್ರಾಮದಲ್ಲಿ ಸೂತ್ರಧಾರ ಶಿವಬುದ್ಧಿಯವರ ತಂಡದವರು ಮೊನ್ನೆ ಪ್ರದರ್ಶಿಸಿದ ಗೊಂಬೆಯಾಟದ ಮೊದಲ ಸಂಭಾಷಣೆ ‘ಅಯ್ಯಾ ವಸಿಷ್ಠ ಮಹರ್ಷಿಯೇ, ಈ ಛಪ್ಪನ್ನೈವತ್ತಾರು ದೇಶದಲ್ಲಿ ಸತ್ಯವನ್ನೇ ನುಡಿಯುವ ದೊರೆಯು ಅದಾರೆಂದು ನೀನು ಹೇಳಬಲ್ಲೆಯಾ? ಸತ್ಯದ ಹಾದಿಯೆಂದರೆ ಅದು ಸುಳ್ಳುಗಳ ಹಳ್ಳವನ್ನು ಹರಿಸಿದಷ್ಟು ಸದರವೆಂದು ತಿಳಿದೆಯಾ?’ ಎಂದೇ ಆರಂಭಗೊಂಡಿತು. ಅದಕ್ಕೆ ಅಲ್ಲೇ ಬಂದ ಪ್ರತ್ಯುತ್ತರವೆಂದರೆ, ‘ಅಯ್ಯಾ ವಿಶ್ವಾಮಿತ್ರ ಮುನಿವರೇಣ್ಯನೇ, ಈ ಲೋಕದೊಳಗಿರುವ ಹುಲುಮಾನವರಿಂದ ಹಿಡಿದು ನಿತ್ಯ ಹರಸಾಹಸಗೈವ ಕಿರೀಟಧಾರಕರವರೆಗೆ ಪಾಲಿಸಲಾಗದ ಕಷ್ಟದ ಮಾರ್ಗವೆಂದರೆ ಸತ್ಯ. ಆದರೆ ಈ ಹೊತ್ತು ಏನಾಗಿರುವುದೆಂದು ಬಲ್ಲೆಯಾ? ಆಹಾ, ಸತ್ಯವೆಂದರೆ ಅದು ಪಾಲಿಸುವುದೂ ಸುಲಭ, ಆಡುವುದೂ ಸದರ’ ಎಂದಲ್ಲಿ ಸಭಾಸದರಿಗೆ ಆಶ್ಚರ್ಯ! ಅದರ ಮುಂದಿನ ಒಕ್ಕಣೆಯೆಂದರೆ, ‘ಸುಳ್ಳನ್ನೇ ಸತ್ಯವೆಂದು ನಿತ್ಯವೂ ಹೇಳಿದರಾಯಿತು’ ಎನ್ನುವಲ್ಲಿ ಸಭಾಸದರಿಗೆ ನಗು. ಹೀಗೆ ಸತ್ಯವೆಂಬುದು ನಗೆಪಾಟಲಾಗಿ ಹೋಗಿರುವುದರ ಸತ್ಯವನ್ನು ಪ್ರದರ್ಶಿಸಿದ ಗೊಂಬೆಯಾಟದ ಶೀರ್ಷಿಕೆ ‘ರಾಜಾ ಸತ್ಯ ಹರಿಶ್ಚಂದ್ರ’.
ಇದರ ಮುಂದಿನ ದೃಶ್ಯವನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ಗ್ರಾಮಸ್ಥರು ಬಂದು ಹರಿಶ್ಚಂದ್ರನ ಸಮ್ಮುಖವಾಗಿ ‘ಎಲೈ ಪರಾಕ್ರಮಿಯೇ, ನಮ್ಮ ಹೊಲಗದ್ದೆಯ ಬೇಸಾಯಕ್ಕೆ ಕಾಡುಪ್ರಾಣಿಗಳ ಸಂಕಟ ಇನ್ನಿಲ್ಲದಂತಾಗಿಬಿಟ್ಟಿದೆಯಲ್ಲ. ಅವುಗಳ ಅಟಮಟದಲ್ಲಿ ನಮ್ಮ ಬೆನ್ನು ಮೂಳೆ ಲಟಕಟಿಸಿ ಹೋಗುತ್ತಿದೆಯಲ್ಲಾ’ ಎಂಬ ಸಂಭಾಷಣೆ ಕೇಳಿಸಿತು. ಕುತೂಹಲವೆನಿಸಿ, ಈ ಸಂಭಾಷಣೆ ಪಠ್ಯದಲ್ಲಿರುವಂಥದ್ದೇ ಎಂದು ಪ್ರದರ್ಶನಾನಂತರ ಸೂತ್ರಧಾರನನ್ನು ಕೇಳಿದರೆ, ಹರಿಶ್ಚಂದ್ರ, ಚಂದ್ರಮತಿ, ವಸಿಷ್ಠ, ವಿಶ್ವಾಮಿತ್ರರದೆಲ್ಲಾ ಬರಹ ಸಂಭಾಷಣೆ. ಆದರೆ ರೈತರ ಸಮಸ್ಯೆಯು ಪಠ್ಯದಲ್ಲಿ ಇಲ್ಲವೆಂದೂ ಆಗ ಈಗ ನಡೆಯುವುದನ್ನೆಲ್ಲಾ ತಾವು ಆಟದಲ್ಲಿ ಸೇರಿಸಿಕೊಳ್ಳುತ್ತೇವೆ ಎಂದರು. ಊರಿಗೆ ಪತ್ರಿಕೆ ಬರುವ ಸಾಧ್ಯತೆಗಳು ಕಡಿಮೆಯಿದ್ದು, ಮನೆಗಳಲ್ಲಿರುವ ಟಿ.ವಿ.ಗಳ ದೃಶ್ಯಮುಖೇನ ರಾಜಕಾರಣ ಸಂಗತಿಗಳನ್ನು ಗೊಂಬೆಯಾಟಕ್ಕೆ ಸೇರಿಸಿಕೊಂಡಿರುವುದಾಗಿ ಹೇಳಿದರು. ಇದು ಜಗತ್ತಿನ ಜಾನಪದದ ನಿರಂತರ ವಿದ್ಯಮಾನ. ಶಿಷ್ಟ ಪರಂಪರೆಯ ಪಠ್ಯಗಳಲ್ಲಿ ವಿದ್ವಾಂಸರಿಗೆ ಯಾವ ಪ್ರಕ್ಷಿಪ್ತ, ಪಾಠಾಂತರಗಳು ವರ್ಜ್ಯವೋ ಅದು ಜಾನಪದದಲ್ಲಿ ಸ್ವೀಕಾರಾರ್ಹ.
ಎಂಥದ್ದೇ ದುಃಸ್ಥಿತಿಯಲ್ಲೂ ಲಾಗಾಯ್ತಿನಿಂದ ಬಂದ ಅಂತರಂಗದ ನೆನಪುಗಳು ಯಾವುದೇ ಸಮೂಹದಿಂದ ಅಳಿಯುವುದಿಲ್ಲ. ಶತಶತಮಾನಗಳ ಜನಪದ ಮೌಖಿಕ ಕಲೆಯ ನೆನಪು ಗ್ರಾಮೀಣರನ್ನು ಕಾಡುತ್ತ, ಆಡಿಸುತ್ತ, ಹಾಡಿಸುತ್ತಲೇ ಇದೆ. ಇಂಥದ್ದೇ ವಾತಾವರಣದಲ್ಲಿ ಬೆಳೆದು, ವಿದ್ಯೆ ಮತ್ತು ಬದುಕಿನ ಕಾರಣದಿಂದ ದೇಶದೇಶಕ್ಕೆ ಹಾರಿದವರ ಅಂತರಂಗದಲ್ಲೂ ಅವರವರ ಜನಪದದ ಮೂಲಸಂಗತಿಗಳು ಮನೆಮಾಡಿಕೊಂಡೇ ಇರುತ್ತವೆ. ಸಮಯಾಸಮಯದಲ್ಲಿ ನನ್ನ ನೆನಪಿನ ಅಗತ್ಯ ನಿನಗಿದೆ ಎನ್ನುತ್ತವೆ. ಹಾಗಾಗಿ ಕೆನಡಾದ ಟೊರಾಂಟೊ ಕನ್ನಡ ಸಂಘದವರು ಮೈಸೂರಿನ ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟಿನ ಡಾ. ಮನೋಹರ ಅವರನ್ನು ಇಂಥದ್ದೊಂದು ಸೂತ್ರದ ಗೊಂಬೆಯಾಟವನ್ನು ಅಂತರ್ಜಾಲದ ನೆರವಿನಿಂದ ತೋರಿಸಲು ಸಾಧ್ಯವೇ ಎಂದು ಕೇಳಿದ ಕಾರಣಕ್ಕೆ, ನಮ್ಮೆಲ್ಲರ ಅಂತರಂಗ ಸಂಬಂಧಿಯಾದ ಪರಂಪರಾನುಗತ ಜನಪದ ಸಾಹಿತ್ಯ ಮತ್ತು ಕಲೆಯ ಬಗ್ಗೆ ಇಲ್ಲಿ ಪ್ರಸ್ತಾಪಿಸಬೇಕಾಗಿದೆ.
ಅಮೆರಿಕದ ನ್ಯೂಜೆರ್ಸಿ ಕನ್ನಡ ಸಂಘದವರಿಗೆ ಕನ್ನಡದ ಆದಿಕವಿ ಪಂಪ, ಹರಿಹರ, ರಾಘವಾಂಕ, ಕುಮಾರವ್ಯಾಸಾದಿ ಮಹಾಕವಿಗಳನ್ನು ಕುರಿತು ಮಾತನಾಡಬಹುದೇ ಎಂದರೆ ಅವರು ಮಲೆಯ ಮಹದೇಶ್ವರ, ಮಂಟೇಸ್ವಾಮಿಯನ್ನು ಕುರಿತು ಮಾತನಾಡಿ ಎಂದರು. ಅಕಸ್ಮಾತ್ತಾಗಿ ಅದೇ ಅರಿವು ಟ್ರಸ್ಟಿನವರು ಮೂರು ವರ್ಷಗಳ ಹಿಂದೆ ನಿರ್ಮಿಸಿದ್ದ ಮಂಟೇಸ್ವಾಮಿ, ಮಹದೇಶ್ವರ ಸಾಕ್ಷ್ಯಚಿತ್ರದಲ್ಲಿಯ ಹಾಡು, ಸಂಭಾಷಣೆ, ಇನ್ನಿತರ ದೃಶ್ಯ ಸಂಬಂಧಿ ಚಿತ್ರಗಳನ್ನು ನೋಡುತ್ತ ಚರ್ಚಿಸಿದ್ದು ಮೂರೂವರೆ ಗಂಟೆಯ ಕಾಲ. ಅವರ ಚರ್ಚೆಯ ಹಸಿವು, ಊಟದ ನಂತರವೂ ತಣಿಯುವಂತಿರಲಿಲ್ಲ.
ಜಗತ್ತಿನ ಇನ್ನಿತರ ದೇಶಭಾಗಗಳಲ್ಲಿ ಜನಪದ ಕಲೆ, ಸಾಹಿತ್ಯ ಇಲ್ಲವೆಂದಲ್ಲ. ಅಮೆರಿಕದ ಬೋಸ್ಟನ್ನಿನ ವಸ್ತುಸಂಗ್ರಹಾಲಯದ ಒಳಗೇ ಇರುವ ಹೋಟೆಲಿನ ವೇದಿಕೆಯಲ್ಲಿ ಆ ದೇಶದ್ದೇ ಜನಪದ ಕಲೆಗಳ ಪ್ರದರ್ಶನ ನಡೆಯುತ್ತಿರುತ್ತದೆ. 1980ರ ದಶಕದಲ್ಲಿ ರಷ್ಯಾದಿಂದ ಬಂದಿದ್ದ ಸೂತ್ರದ ಗೊಂಬೆಯಾಟದ ಒಂದು ತಂಡವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ನೀಡುವಾಗ್ಗೆ, ಆಗಿನ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರು ಆ ಪ್ರದರ್ಶನವನ್ನು ಸಂಪೂರ್ಣ ವೀಕ್ಷಿಸಿದರು. ಆದರೆ ಭಾರತೀಯ ಗೊಂಬೆಯಾಟದ ಕಥನ, ಪ್ರದರ್ಶನ ಮಾದರಿ, ಅದರ ವೈವಿಧ್ಯತೆಯ ಸತ್ವ ಜಗತ್ತಿನ ಬೇರಾವುದೇ ಆಟಕ್ಕೆ ಅಥವಾ ಇನ್ನಿತರ ಕಲೆಗಳಿಗೆ ಮಿಗಿಲಾದುದು ಎಂಬುದನ್ನು ಪಾಶ್ಚಾತ್ಯ ವಿದ್ವಾಂಸರೇ ಒಪ್ಪಿಕೊಂಡಿದ್ದಾರೆ. ಹಾಗಾಗಿ, ಇಲ್ಲಿಯ ಜಾನಪದ ಅಧ್ಯಯನಕ್ಕೆ ವಿದೇಶಗಳ ಜಾನಪದಾಸಕ್ತ ವಿದ್ವಾಂಸರು ಕಳೆದ ಶತಮಾನದಿಂದಲೇ ಆಗಮಿಸಲು ತೊಡಗಿದರು. ಆದರೆ ಈಚಿನ ಒಂದೆರಡು ದಶಕಗಳಲ್ಲಿ ಜಾನಪದವನ್ನು ಕುರಿತ ಅಧ್ಯಯನಾಸಕ್ತಿ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಕ್ಷೀಣ ಗತಿಯಲ್ಲಿದೆ.
ಅಮೆರಿಕದಲ್ಲಿ ಜಾನಪದಕ್ಕೆ ಹೆಸರಾಗಿದ್ದ ಇಂಡಿಯಾನ ವಿಶ್ವವಿದ್ಯಾಲಯದಲ್ಲೇ ಅದರ ಅಧ್ಯಯನ ಕುಂದಿ, ಭಾರತದಲ್ಲಿಯೂ ಅಸ್ಸಾಮಿನ ಗುವಾಹಟಿ; ಗುಜರಾತ್, ರಾಜಸ್ಥಾನ, ಆಂಧ್ರಪ್ರದೇಶವೇ ಅಲ್ಲದೆ ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲೂ ಜನಪದ ಸಂಗ್ರಹ, ಅದರ ಅಧ್ಯಯನ ಇಳಿಮುಖವಾಗಿದೆ. ಅದಕ್ಕಿರುವ ಕಾರಣಗಳು ಅನೇಕವಾಗಿ, ಅದರಲ್ಲಿ ಮುಖ್ಯವಾದದ್ದು ವ್ಯವಸಾಯದ ಬದುಕೇ ತಾತ್ಸಾರಕ್ಕೆ ಒಳಗಾಗುತ್ತಿರುವುದು. ಶ್ರಮಸಂಸ್ಕೃತಿಯ ಕಾಯಕವೇ ಕನಿಷ್ಠ, ಅದು ಗೌರವ ತರುವಂಥದ್ದಲ್ಲ ಅನ್ನಿಸಿ ರೈತರ ನಡು ಮುರಿಯುತ್ತಿರುವುದರಿಂದ, ಅವರು ಆಡಿಸುವ ಗೊಂಬೆಗಳ ಸೂತ್ರ ಹಿಡಿಯುವುದು ಅಥವಾ ಇನ್ನಿತರ ಕಲೆಗಳ ಉಳಿಗಾಲ ದುಸ್ತರವಾಗಿದೆ.
ಇಂಥದ್ದರ ನಡುವೆಯೂ ಕರ್ನಾಟಕದಲ್ಲಿ ಜನಪದ ಕಲಾವಿದರನ್ನು ಗುರುತಿಸುವುದು, ಅವರಿಗೆ ಪ್ರಶಸ್ತಿ, ಮಾಸಾಶನ ನೀಡುತ್ತಿರುವುದು ಇದ್ದೇ ಇದೆ. ಈ ಕ್ರಮ ದೇಶದ ಬೇರಾವ ಭಾಗದಲ್ಲೂ ಇಲ್ಲ. ಇದೀಗಲೂ ಜನಪದ ಕಲಾ ಪ್ರದರ್ಶನಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಅವುಗಳನ್ನು ಜಾಲತಾಣಗಳಿಗೆ ಹಾಕುವ ಕೆಲಸವೂ ನಡೆಯುತ್ತಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಇದೇ ವಾರ ಏರ್ಪಡಿಸಿದ್ದ ‘ಜನಪದ ಕಾವ್ಯ ಸಪ್ತಾಹ’ದಲ್ಲಿ ಕೂಡ ಕಲಾವಿದರೂ ವಿದ್ವಾಂಸರೂ ಅತ್ಯುತ್ಸಾಹದಿಂದ ಭಾಗವಹಿಸಿದ್ದು ಮುಂದೆ ಅವು ಜಾಲತಾಣದಲ್ಲಿ ಉಳಿಯಲಿವೆ.
ಭಾರತೀಯ ಅಂತರಂಗದ ಆಧಾರವೆನ್ನಿಸುವ ನಮ್ಮ ನಿತ್ಯದ ಅನ್ನದ ಶಕ್ತಿಯ ಮೂಲಾಧಾರವೆನ್ನಿಸುವ ರೈತರೊಂದಿಗೆ ಅವರ ಕಲೆಯನ್ನೂ ಬದುಕಿಸಬೇಕಿದೆ. ಹಾಗಿಲ್ಲದಿದ್ದರೆ, ಕಾಲಾನುಕಾಲದ ಒಂದು ಜೀವಂತ ಬದುಕೆಂಬುದು ನಮ್ಮ ಕಣ್ಣೆದುರೇ ಕಳೆದುಹೋಗುತ್ತದೆ. ಸತ್ಯಕ್ಕಾಗಿ ಸಿಂಹಾಸನವನ್ನು ತ್ಯಾಗ ಮಾಡಿದ ಹರಿಶ್ಚಂದ್ರನ ಕತೆಯ ಜಾಗದಲ್ಲಿ ನಿಜವಲ್ಲದ ಕುರ್ಚಿ, ಅಧಿಕಾರ ಮದ, ಭ್ರಷ್ಟ ಮುಖಗಳ ಮಾತಾಗಿ ‘ಎಲಾಎಲಾ, ಈ ಲೋಕದಲ್ಲಿ ನಿತ್ಯವೂ ಸುಳ್ಳನ್ನೇ ಸತ್ಯವಾಗಿಸುವ ದೊರೆಗಳಲ್ಲಿ ಮೇಲೆನಿಸುವವರು ಯಾರಯ್ಯ’ ಎಂಬ ನಾಟಕ ಸಂಭಾಷಣೆ ಉಳಿಯುವಂತಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.