ADVERTISEMENT

ವಿಶ್ಲೇಷಣೆ: ರೀಸೆಸ್ ಮಂಗಗಳ ನೆಲೆ ವಿಸ್ತರಣೆ

ಈ ಆಕ್ರಮಣಕಾರಿ ಮಂಗಗಳಿಂದ ಮಲೆನಾಡಿನ ಕೆಂಪುಮೂತಿ ಮಂಗಗಳಿಗೆ ಆಪತ್ತು

ಅಖಿಲೇಶ್ ಚಿಪ್ಪಳಿ
Published 14 ಜನವರಿ 2024, 22:08 IST
Last Updated 14 ಜನವರಿ 2024, 22:08 IST
ವಿಶ್ಲೇಷಣೆ
ವಿಶ್ಲೇಷಣೆ   

ನಗರವಾಸಿಗಳ ವಾರಾಂತ್ಯದ ಮೋಜು ಮಸ್ತಿಯಿಂದಾಗಿ ಪಶ್ಚಿಮಘಟ್ಟಗಳು ನಲುಗುತ್ತಿವೆ.  ಅಭಿವೃದ್ಧಿಯ ಹೆಸರಿನಲ್ಲಿ ಅನೇಕ ಯೋಜನೆಗಳು ಹನುಮಂತನ ಬಾಲದಂತೆ ಬೆಳೆಯುತ್ತಿವೆ. ಪರಿಸರ ಪ್ರವಾಸೋದ್ಯಮವು ಸರ್ಕಾರದ ಖಜಾನೆಗೆ ಕನ್ನ ಹಾಕುತ್ತಿದೆ. ಇದೇ ಹೊತ್ತಿನಲ್ಲಿ, ಮನುಷ್ಯೇತರ ಪ್ರಾಣಿಗಳು ತಮ್ಮ ನೆಲೆ ವಿಸ್ತರಣೆ
ಮಾಡಿಕೊಳ್ಳುತ್ತಿರುವ ವಿಚಿತ್ರ ವಿದ್ಯಮಾನ ನಡೆಯುತ್ತಿದೆ.

2017ರಲ್ಲಿ ಆಡಳಿತದ ಅವಧಿ ಮುಗಿಸಿದ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನಂತರದ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸುವುದಕ್ಕೆ ಕಾರಣವಾದ ಅಂಶಗಳಲ್ಲಿ, ವೋಟಿನ ಹಕ್ಕನ್ನೇ ಹೊಂದಿರದ ಮಂಗಗಳ ವಿಷಯ ಸಹ ಸೇರಿತ್ತು ಎಂಬುದನ್ನು ನಂಬುವುದು ಕಷ್ಟ! ಆದರೆ, ಇದು ಸತ್ಯ. ರೀಸೆಸ್ ಮಂಗಗಳ ಉಪಟಳ ಎಷ್ಟು ಹೆಚ್ಚಿತ್ತೆಂದರೆ, ಅಲ್ಲಿ ಲಾಗಾಯ್ತಿನಿಂದ ಬಾಸ್ಮತಿ ಭತ್ತ ಬೆಳೆಯುತ್ತಿದ್ದ ರೈತರು, ಈ ಮಂಗಗಳ ದಾಳಿಯಿಂದಾಗಿ ಬಾಸ್ಮತಿ ಬೆಳೆಯುವುದನ್ನೇ ನಿಲ್ಲಿಸಿದರು. ಆ ಸರ್ಕಾರದ ಅವಧಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟದ ಬಾಬ್ತು ಸಾವಿರ ಕೋಟಿ ರೂಪಾಯಿಗೂ ಹೆಚ್ಚು.

ಮಂಗಗಳನ್ನು ನಿಯಂತ್ರಿಸಲು ವಿಫಲವಾದ ಸರ್ಕಾರದ ವಿರುದ್ಧ ಚುನಾವಣೆಯಲ್ಲಿ ರೈತರು ಮತ ಚಲಾಯಿಸಿದರು ಎಂಬ ವಿಶ್ಲೇಷಣೆಗಳು ಆಗ ಪ್ರಕಟ
ಆಗಿದ್ದವು. ಮಂಗಗಳಿಂದ ಆದ ನಷ್ಟವನ್ನು ಭರಿಸಲು ಸರ್ಕಾರ ₹ 500 ಕೋಟಿಯ ಪ್ಯಾಕೇಜ್ ನೀಡಿದರೂ ಪ್ರಯೋಜನಕ್ಕೆ ಬರಲಿಲ್ಲ. ಒಂದೂವರೆ ಲಕ್ಷಕ್ಕೂ ಹೆಚ್ಚು ಮಂಗಗಳನ್ನು ಹಿಡಿದು ಸಂತಾನಶಕ್ತಿಹರಣ ಶಸ್ತ್ರ
ಚಿಕಿತ್ಸೆ ಮಾಡಲಾಯಿತು. ಒಂದು ವರ್ಷದ ಅವಧಿಗೆ ಈ ಮಂಗಗಳನ್ನು ಪೀಡೆಯೆಂದು ಪರಿಗಣಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿತು.

ADVERTISEMENT

ಈಗ ಸುಮಾರು 60-70 ವರ್ಷಗಳ ಹಿಂದೆ, ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ರೀಸೆಸ್ ಮಂಗಗಳು ದಾಟಿ ಬರದಂತೆ ಗೋದಾವರಿ ಹಾಗೂ ತಪತಿ ನದಿಗಳು ನೈಸರ್ಗಿಕ ತಡೆಗೋಡೆಗಳಂತೆ ಕಾರ್ಯ ನಿರ್ವಹಿ
ಸುತ್ತಿದ್ದವು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ನದಿಗಳಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿದ್ದು, ಜಲಸಾರಿಗೆಯನ್ನು
ಅಭಿವೃದ್ಧಿಪಡಿಸಿದ್ದರಿಂದಾಗಿ ನೈಸರ್ಗಿಕ ಗೋಡೆಗೆ ಅಡ ಚಣೆ ಉಂಟಾಯಿತು. ಜೊತೆಗೆ ಉತ್ತರ ಭಾರತದಲ್ಲಿ ಮಂಗಗಳ ಉಪಟಳ ಹೆಚ್ಚಾದ ಕಾರಣಕ್ಕೆ, ಈ ಎರಡೂ ನದಿಗಳನ್ನು ಬಳಸಿಕೊಂಡು, ಅವುಗಳನ್ನು ಹಿಡಿದು ದಕ್ಷಿಣ ಭಾರತಕ್ಕೆ ಬಿಡಲಾಯಿತು.

ಉತ್ತರ ಭಾರತದ ರೀಸೆಸ್ ಮಂಗಗಳು ದಕ್ಷಿಣ ಭಾರತದ ಕೆಂಪುಮೂತಿಯ ಮಂಗಗಳಿಗಿಂತ ಗಾತ್ರದಲ್ಲಿ ದೊಡ್ಡವು ಹಾಗೂ ಹೆಚ್ಚು ಆಕ್ರಮಣಕಾರಿ. ರೀಸೆಸ್ ಮಂಗಗಳು ಅತಿ ಚಳಿಯ ಹಿಮಾಲಯದಲ್ಲೂ ಸುಡು ಬಿಸಿಲಿನ ಪ್ರದೇಶದಲ್ಲೂ ದಟ್ಟಡವಿಯಲ್ಲೂ ಹೊಂದಿ ಕೊಂಡು ಬದುಕಬಲ್ಲ ಸಾಮರ್ಥ್ಯ ಹೊಂದಿದ್ದರೂ ಕುರುಚಲು ಕಾಡು ಅವುಗಳಿಗೆ ಪ್ರಶಸ್ತವಾದ ಪ್ರದೇಶ ವಾಗಿದೆ. ಐವತ್ತು ವರ್ಷಗಳಿಂದ ಇವು ತಮ್ಮ ನೆಲೆ
ವಿಸ್ತರಣೆಯಲ್ಲಿ ತೊಡಗಿಕೊಂಡಿದ್ದು, ಕೆಂಪುಮೂತಿಯ ಮಂಗಗಳ ಆವಾಸಸ್ಥಾನವನ್ನು ಅತಿಕ್ರಮಿಸುತ್ತಿವೆ. ಹೀಗೆ ದಕ್ಷಿಣ ಭಾರತದ ಸುಮಾರು 28,000 ಚದರ ಕಿ.ಮೀ. ಪ್ರದೇಶವನ್ನು ಆಕ್ರಮಿಸಿಕೊಂಡಿವೆ. ಮೊದಲು ಹೇರಳ ವಾಗಿ ಕಂಡುಬರುತ್ತಿದ್ದ ಕೆಂಪುಮೂತಿಯ ಮಂಗಗಳು ರೀಸೆಸ್ ಮಂಗಗಳ ಅತಿಕ್ರಮಣದಿಂದಾಗಿ ತಮ್ಮ ಮೂಲ ನೆಲೆಯನ್ನು ಕಳೆದುಕೊಂಡಿವೆ. ಇದೀಗ
ಬಾಗಲಕೋಟೆಯವರೆಗೂ ರೀಸೆಸ್ ಮಂಗಗಳು ತಮ್ಮ ನೆಲೆಯನ್ನು ವಿಸ್ತರಿಸಿಕೊಂಡಿವೆ.

ಬಾಗಲಕೋಟೆಯಿಂದ ಬೆಳಗಾವಿಯ ಮೂಲಕ
ಪಶ್ಚಿಮಘಟ್ಟಗಳಿಗೆ ರೀಸೆಸ್ ಮಂಗಗಳು ಲಗ್ಗೆಯಿಡುವ ಸಾಧ್ಯತೆಯ ದಿನಗಳು ದೂರವಿಲ್ಲ. ಪಶ್ಚಿಮಘಟ್ಟ
ಪ್ರದೇಶವು ಜಗತ್ತಿನಲ್ಲೇ ಅತ್ಯಪರೂಪದ ಸಿಂಹಬಾಲದ ಸಿಂಗಳೀಕಗಳ ನೆಲೆಯಾಗಿದೆ. ನಾಡಿನಲ್ಲೂ ಕಾಡಿನಲ್ಲೂ ವಿಜೃಂಭಿಸುವ ರೀಸೆಸ್ ಮಂಗಗಳು, ಕೆಲವೇ ನೂರರಷ್ಟು ಸಂಖ್ಯೆಯಲ್ಲಿ ಇರುವ ಸಿಂಗಳೀಕಗಳ ಆವಾಸಸ್ಥಾನವನ್ನು ಆಕ್ರಮಿಸಿಕೊಳ್ಳಬಹುದು ಎಂಬ ಆತಂಕ ಎದುರಾಗಿದೆ. ಜೊತೆಗೆ ಕೆಂಪುಮೂತಿಯ ಮಂಗಗಳ ನೆಲೆಯನ್ನೂ ಆಕ್ರಮಿಸಿಕೊಳ್ಳುತ್ತಾ ಸಾಗುವ ಸಾಧ್ಯತೆಯೇ ಹೆಚ್ಚು. ಮಲೆನಾಡು ಈಗಾಗಲೇ  ಕೆಂಪುಮೂತಿಯ ಮಂಗಗಳಿಂದಾಗುವ ಬೆಳೆಹಾನಿಯಿಂದ ಜರ್ಝರಿತವಾಗಿದ್ದು, ಅವುಗಳಿಗಿಂತ ಆಕ್ರಮಣ
ಕಾರಿಯಾದ ರೀಸೆಸ್ ಮಂಗಗಳ ಹಾವಳಿಯೇನಾದರೂ ಶುರುವಾದರೆ ತತ್ತರಿಸಿ ಹೋಗಲಿದೆ. ಹಾಲಿ ಇರುವ ಸಂಘರ್ಷದ ಹತ್ತಾರು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ರೈತ ಮತ್ತು ಮಂಗಗಳ ನಡುವಿನ ಸಂಘರ್ಷ ಉಲ್ಬಣಿಸಲಿದೆ.

ಮಂಗಗಳ ವಲಸೆ ನೈಸರ್ಗಿಕವಾದುದು ಎಂದು ಪರಿಗಣಿಸಿದರೂ, ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ವಲಸೆ ಬರಲು ಮಾನವನ ಅಭಿವೃದ್ಧಿ ಚಟುವಟಿಕೆಗಳೇ ನೇರ ಕಾರಣ ಎಂಬುದು ಅಂಗೈ ಹುಣ್ಣಿನಷ್ಟೇ ಸತ್ಯ.

ಇದೇ ಹೊತ್ತಿನಲ್ಲಿ, ಪಕ್ಷಿ ಪ್ರಪಂಚದಲ್ಲೂ ಒಂದು ರೀತಿಯ ದಬ್ಬಾಳಿಕೆ ಪ್ರಾರಂಭವಾಗಿದ್ದನ್ನು ಪಕ್ಷಿ ತಜ್ಞರು ಗಮನಿಸುತ್ತಿದ್ದಾರೆ. ಮನೆಯ ಹೂದೋಟದಲ್ಲಿ ನಿಯ ಮಿತವಾಗಿ ಮಧುಪಾನ ಮಾಡಲು ಬರುವ ಹಕ್ಕಿಗಳನ್ನು ಕೆಲವರಾದರೂ ಗಮನಿಸಿಯೇ ಇರುತ್ತಾರೆ. ಚಿಟ್ಟೆಗಳಂತೆ ತೋರುವ ಇವು ಅಪಾರ ವೇಗದಲ್ಲಿ ಹೂವಿಂದ ಹೂವಿಗೆ ಹಾರುತ್ತಾ ಮಕರಂದ ಹೀರುತ್ತಾ ಸಾಗುತ್ತವೆ. ಇದರಲ್ಲೊಂದು ಪ್ರಭೇದ ಕೆಂಪುಬೆನ್ನಿನ ಹೂಗುಬ್ಬಿ. ಪಶ್ಚಿಮಘಟ್ಟಗಳ ಕಾಡುಗಳಲ್ಲಿ ವಾಸಿಸುವ ಈ ಚಿಕ್ಕ ಹಕ್ಕಿಯು ಪರಾಗಸ್ಪರ್ಶ ಕ್ರಿಯೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.

ಪಶ್ಚಿಮಘಟ್ಟಗಳು ವೇಗವಾಗಿ ಪತನ ಹೊಂದುತ್ತಿರು ವುದರಿಂದಾಗಿ, ಈ ಹೂಗುಬ್ಬಿಗಳ ನೈಸರ್ಗಿಕ ನೆಲೆ ನಾಶವಾಗುತ್ತಿದೆ. ಅನಿವಾರ್ಯವಾಗಿ ಅವು ಜನವಸತಿ ಪ್ರದೇಶಗಳನ್ನು ತಮ್ಮ ಆಹಾರ ಹಾಗೂ ಸಂತಾನೋ ತ್ಪತ್ತಿಗಾಗಿ ಅವಲಂಬಿಸಿಕೊಳ್ಳುತ್ತಿವೆ. ಆದರೆ, ತನ್ನದೇ ವಂಶಸ್ಥರಿಂದಾಗಿ ಇವು ಕ್ರಮೇಣ ನೇಪಥ್ಯಕ್ಕೆ ಸರಿಯುತ್ತಿವೆ. ಭಾರತ ಸೇರಿದಂತೆ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಮ್ಯಾನ್ಮಾರ್‌ ದೇಶಗಳಲ್ಲಿ ಕಂಡುಬರುವ ಕರಿ ಹೂಗುಬ್ಬಿಯು ಜನವಸತಿ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಬದುಕುವ ಪ್ರಭೇದವಾಗಿದೆ. ಕೆಂಪು ಬೆನ್ನಿನ ಹೂಗುಬ್ಬಿಗಿಂತ ಗಾತ್ರದಲ್ಲಿ ಕೊಂಚ ದೊಡ್ಡದಾಗಿದೆ ಹಾಗೂ ಆಕ್ರಮಣಕಾರಿಯಾಗಿದೆ. ಅತ್ತ ಕಾಡಿನಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಕೆಂಪುಬೆನ್ನಿನ ಹೂಗುಬ್ಬಿಯು ಜನವಸತಿ ಪ್ರದೇಶದಲ್ಲಿ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಿದೆಯಾದರೂ ಆಕ್ರಮಣಕಾರಿಯಾದ ಕರಿ ಹೂಗುಬ್ಬಿಯು ಇದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಮಧುಪಾನ ಮಾಡಲು ಬರುವ ಕೆಂಪುಬೆನ್ನಿನ ಹೂಗುಬ್ಬಿಯನ್ನು ಅಟ್ಟಾಡಿಸುತ್ತಿರುವ ವಿದ್ಯಮಾನ ಇತ್ತೀಚೆಗೆ ಹೆಚ್ಚಾಗುತ್ತಿದೆ.

ಸಸ್ಯಗಳು ತಮ್ಮ ಸಂತಾನೋತ್ಪತ್ತಿಯನ್ನು ಬೆಳೆಸಿಕೊಳ್ಳಲು ಪರಾಗಸ್ಪರ್ಶದಂತಹ ನೈಸರ್ಗಿಕ ಕ್ರಿಯೆಯ ಮೇಲೆ ಅವಲಂಬಿತವಾಗಿವೆ. ಇದಕ್ಕೆ ಪೂರಕವಾಗಿ ನಿರ್ದಿಷ್ಟ ಸಸ್ಯ ಪ್ರಭೇದಗಳಿಗೆ ಮಾತ್ರ ಹೊಂದಿಕೆಯಾಗುವಂತೆ ನಿರ್ದಿಷ್ಟ ಪಕ್ಷಿಗಳು ಕಾಲಕಾಲಕ್ಕೆ ವಿಕಾಸ ಹೊಂದಿವೆ. ಪರಾಗಸ್ಪರ್ಶ ಕ್ರಿಯೆಗಾಗಿ ಕೆಂಪು ಬೆನ್ನಿನ ಹೂಗುಬ್ಬಿಯನ್ನೇ ನೆಚ್ಚಿಕೊಂಡಿರುವ ಅನೇಕ ಸಸ್ಯಪ್ರಭೇದಗಳಿವೆ. ಈ ಹೂಗುಬ್ಬಿ ಮಾಡುವ ನೈಸರ್ಗಿಕ ಕ್ರಿಯೆಯನ್ನು ಕೊಕ್ಕಿನ ರಚನೆಯ ಕಾರಣಕ್ಕೆ ಕರಿ ಹೂಗುಬ್ಬಿ ಮಾಡಲು ಸಾಧ್ಯವಾಗುವುದಿಲ್ಲ.

ರೀಸೆಸ್ ಮಂಗಗಳ ನೆಲೆ ವಿಸ್ತರಣೆ, ಕರಿ ಹೂಗುಬ್ಬಿಯ ಆಕ್ರಮಣಕಾರಿ ವರ್ತನೆ, ಕೆಂಪುಬೆನ್ನಿನ ಹೂಗುಬ್ಬಿಯ ಬದುಕಿನ ಹೋರಾಟದಂತಹ ವಿದ್ಯಮಾನಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ. ಆನೆಯಂತಹ ಬೃಹತ್ ದೇಹಿಗಳ ಆವಾಸಸ್ಥಾನವನ್ನೇ ಅಪಹರಿಸುತ್ತಿರುವ ಮನುಷ್ಯರ ದುರಾಸೆಗೆ ಮಿತಿಯೆಲ್ಲಿದೆ? ಅಭಿವೃದ್ಧಿಯೆಂಬ ಮಾಯೆಯೊಳಗೆ ಬಂದಿಯಾಗಿರುವ ಮನುಕುಲಕ್ಕೆ ಮಂಗಗಳು, ಹೂಗುಬ್ಬಿಗಳು ಯಾವ ಲೆಕ್ಕ?

ಹಕ್ಕಿಗಳು ವಾತಾವರಣದ ವೈಪರೀತ್ಯಗಳಿಗೆ ಎಷ್ಟು ಸೂಕ್ಷ್ಮವಾಗಿ ಸ್ಪಂದಿಸುತ್ತವೆಂದರೆ, ಒಟ್ಟಾರೆ ಪರಿಸರದ ಅವನತಿಗೆ ಅವು ನೇರ ದಿಕ್ಸೂಚಿಗಳೆಂದು ಪಕ್ಷಿತಜ್ಞರು ಎಚ್ಚರಿಸಿದ್ದಾರೆ. ಈ ಹಿಂದೆ ಅಮೆರಿಕದ ಕೆಂಪುತಲೆಯ ಗಿಡುಗ ಸಂತತಿ ಅವನತಿ ಹೊಂದುತ್ತಿತ್ತು. ಇದಕ್ಕೆ ಕಾರಣ ಏನಿರಬಹುದು ಎಂದು ಪತ್ತೆ ಕಾರ್ಯ ಪ್ರಾರಂಭಿಸಿದಾಗ, ಅಮೆರಿಕದ ಪರಿಸರದಲ್ಲಿ ಅಪಾಯಕಾರಿ ಮಟ್ಟದಲ್ಲಿ ಕ್ಲೋರಿನೇಟೆಡ್ ಹೈಡ್ರೊಕಾರ್ಬನ್ ಎಂಬ ವಿಷ ಪತ್ತೆ ಆಯಿತು. ಇದು ಮನುಷ್ಯರಿಗೂ ಅಪಾಯಕಾರಿ ರಾಸಾಯನಿಕ ಸಂಯೋಜನೆಯಾಗಿತ್ತು. ಈ ವಿಷವು ಮನುಷ್ಯರಿಗಿಂತ ಮೊದಲೇ ಪಕ್ಷಿಗಳಲ್ಲಿ ಕಾಣಿಸಿಕೊಂಡಿದ್ದರಿಂದ ಅಲ್ಲಿ ಗಂಭೀರ ಸ್ವರೂಪದ ಅಧ್ಯಯನ ನಡೆಯಲು ಸಾಧ್ಯವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.