ADVERTISEMENT

ವಿಶ್ಲೇಷಣೆ | ಶಿಕ್ಷಣದ ಹಕ್ಕು: ಬಜೆಟ್‌ನಲ್ಲಿ ಸಿಕ್ಕಿದ್ದೇನು?

ಒಕ್ಕೂಟ ಸರ್ಕಾರವು ಶಿಕ್ಷಣಕ್ಕೆ ಸಂಬಂಧಿಸಿದ ಆರ್ಥಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ

ವಿ.ಪಿ.ನಿರಂಜನಾರಾಧ್ಯ
Published 29 ಜುಲೈ 2024, 0:30 IST
Last Updated 29 ಜುಲೈ 2024, 0:30 IST
   

ಭಾರತದ ಸಾರ್ವಜನಿಕ ಶಾಲಾ ಶಿಕ್ಷಣ ವ್ಯವಸ್ಥೆಯು ವಿಶ್ವದಲ್ಲಿ ಒಂದು ದೊಡ್ಡ ಶಿಕ್ಷಣ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಯುಡೈಸ್‌’ 2021- 22ರ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು 11.68 ಲಕ್ಷ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿವೆ. ಇವುಗಳಲ್ಲಿ ಸುಮಾರು 15.62 ಕೋಟಿ ವಿದ್ಯಾರ್ಥಿಗಳಿದ್ದು, 57.67 ಲಕ್ಷ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಮಗ್ರ ಶಿಕ್ಷಣ ಅಭಿಯಾನವು ಪ್ರಧಾನಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ್‌ (ಮಧ್ಯಾಹ್ನದ ಉಪಾಹಾರ) ಯೋಜನೆಯೂ ಒಳಗೊಂಡಂತೆ ಪೂರ್ವ ಪ್ರಾಥಮಿಕದಿಂದ ಪ್ರೌಢ ಶಿಕ್ಷಣದವರೆಗೆ ಉಚಿತ ಶಿಕ್ಷಣದ ಹಕ್ಕನ್ನು ಒದಗಿಸುವ ಮಹತ್ವದ ಯೋಜನೆಯಾಗಿದೆ. ಶಿಕ್ಷಣ ಆಯೋಗ ಮತ್ತು ಶಿಕ್ಷಣ ನೀತಿಗಳು ಹೇಳುವಂತೆ, ಬಲಿಷ್ಠ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು ದೇಶದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯನ್ನು ಸಾಧಿಸಲು ಬುನಾದಿಯಾಗಿರುತ್ತದೆ. ಕೊಠಾರಿ ಆಯೋಗ ಹೇಳುವಂತೆ, ದೇಶದ ಭವಿಷ್ಯ ಆಕೆಯ ತರಗತಿಗಳಲ್ಲಿ ರೂಪಿತವಾಗುತ್ತದೆ. ಹಾಗಾದರೆ, ನಮ್ಮ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ನಲ್ಲಿ ದೇಶದ ಭವಿಷ್ಯವನ್ನು ರೂಪಿಸುವ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಬಲವರ್ಧನೆಗೆ ಏನು ದೊರೆತಿದೆ ಎಂಬುದನ್ನು ವಿಶ್ಲೇಷಿಸಬೇಕಾದುದು ಅಗತ್ಯ.

ಸಚಿವರು ಬಜೆಟ್‌ ಮಂಡಿಸುತ್ತಾ ‘ದೇಶವನ್ನು ಸದೃಢಗೊಳಿಸಲು ಮತ್ತು ಸರ್ವತೋಮುಖ ಅಭಿವೃದ್ಧಿ
ಯತ್ತ ಕೊಂಡೊಯ್ಯಲು ಎನ್‌ಡಿಎ ಮೈತ್ರಿಕೂಟಕ್ಕೆ ಮತದಾರರು ಒಂದು ಅನನ್ಯ ಅವಕಾಶವನ್ನು ನೀಡಿದ್ದಾರೆ. ಮಧ್ಯಂತರ ಬಜೆಟ್‌ನಲ್ಲಿ ನಾವು ಭರವಸೆ ನೀಡಿದ್ದಂತೆ, ನಮ್ಮ ‘ವಿಕಸಿತ ಭಾರತ’ದಲ್ಲಿ ವಿವರವಾದ ಮಾರ್ಗಸೂಚಿಯನ್ನು ಪ್ರಸ್ತುತಪಡಿಸುತ್ತಿದ್ದೇವೆ’ ಎಂದು ಹೇಳಿ, 9 ಆದ್ಯತಾ ಕ್ಷೇತ್ರಗಳನ್ನು ಪ್ರಸ್ತಾಪಿಸಿದರು. ದುರದೃಷ್ಟವೆಂದರೆ, ಈ ಪಟ್ಟಿಯಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಬಲವರ್ಧನೆಯ ಬಗ್ಗೆ ಯಾವುದೇ ನಿರ್ದಿಷ್ಟ ಪ್ರಸ್ತಾಪ ಇರಲಿಲ್ಲ. ಒಂದು ಬಲಿಷ್ಠ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಳ್ಳದೆ ಬಲಿಷ್ಠ ಭಾರತ ನಿರ್ಮಿಸಲು ಹಾಗೂ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಹೇಗೆ ಸಾಧ್ಯ?

ADVERTISEMENT

2024- 25ನೇ ಸಾಲಿನ ಬಜೆಟ್‌ನಲ್ಲಿ ಶಿಕ್ಷಣದ ಪಾಲು ಶೇಕಡ 2.5ರಷ್ಟು. ದೇಶದ ಜಿಡಿಪಿಗೆ ಹೋಲಿಸಿದಾಗ ಇದರ ಪ್ರಮಾಣ ಬರೀ ಶೇ 0.37. ಕೊಠಾರಿ ಆಯೋಗದ ಶಿಫಾರಸಿನ ಅನ್ವಯ, ಶಿಕ್ಷಣಕ್ಕಾಗಿ ನಾವು ಜಿಡಿಪಿಯ ಶೇ 6ರಷ್ಟನ್ನು ಮೀಸಲಿಡುವ ಮಹತ್ವಾಕಾಂಕ್ಷೆಯನ್ನು 1966ರಿಂದ ಪ್ರಸ್ತಾಪಿಸುತ್ತಲೇ ಬಂದಿದ್ದೇವೆ. 2020ರ ರಾಷ್ಟ್ರೀಯ ಶಿಕ್ಷಣ ನೀತಿಯೂ ಒಳಗೊಂಡಂತೆ ದೇಶದ ಎಲ್ಲಾ ಶಿಕ್ಷಣ ನೀತಿಗಳು ಶೇ 6ರಷ್ಟನ್ನು ಮೀಸಲಿಡಬೇಕಾದ ಅಗತ್ಯವನ್ನು ಪುನರುಚ್ಚರಿಸುತ್ತಲೇ ಬಂದಿವೆ.

ರಾಷ್ಟ್ರೀಯ ಶಿಕ್ಷಣ ನೀತಿ–2020 (ಎನ್‌ಇಪಿ) ಅನುಷ್ಠಾನಗೊಂಡ ಮೊದಲ ವರ್ಷ ಅಂದರೆ 2020–21ರಲ್ಲಿ ಶಿಕ್ಷಣಕ್ಕೆ ಮೀಸಲಿಟ್ಟ ಅನುದಾನ ಜಿಡಿಪಿಯ ಶೇ 0.43ರಷ್ಟಿತ್ತು. ಈಗ ಅದು ಶೇ 0.37ಕ್ಕೆ ಇಳಿದಿದೆ. ಎನ್‌ಇಪಿ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಒಕ್ಕೂಟ ಸರ್ಕಾರವು ರಾಷ್ಟ್ರೀಯ ಮಹತ್ವದ ಮತ್ತು ಸಂವಿಧಾನಬದ್ಧ ಶಿಕ್ಷಣದ ಮೂಲಭೂತ ಹಕ್ಕನ್ನು ರಾಷ್ಟ್ರ ಮಟ್ಟದಲ್ಲಿ ಜಾರಿಗೊಳಿಸಲು ಬಜೆಟ್‌ನಲ್ಲಿ ಸಮಗ್ರ ಶಿಕ್ಷಣ ಅಭಿಯಾನಕ್ಕೆ ತೆಗೆದಿರಿಸಿರುವ ಅನುದಾನ ಬರೀ ₹ 37,500 ಕೋಟಿ. 2023- 24ರ ಬಜೆಟ್‌ನಲ್ಲಿ ₹ 37,453.47 ಕೋಟಿ ಅನುದಾನ ಒದಗಿಸಲಾಗಿತ್ತು. ಅಂದರೆ, ಇದಕ್ಕೆ ಹೋಲಿಸಿದರೆ, ಈ ಮಹತ್ವದ ರಾಷ್ಟ್ರೀಯ ಯೋಜನೆಗೆ ಈ ಬಾರಿ ಹೆಚ್ಚಳವಾಗಿದ್ದು ಬರೀ ₹ 46.53 ಕೋಟಿ. ಇದೇ ಸಂದರ್ಭದಲ್ಲಿ, ಪಿಎಂ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (ಪಿಎಂಶ್ರೀ) ಯೋಜನೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ₹ 2,050 ಕೋಟಿ ಅನುದಾನ ಹೆಚ್ಚಿಸಲಾಗಿದೆ.

ಸಮಗ್ರ ಶಿಕ್ಷಣ ಅಭಿಯಾನಕ್ಕೆ ಒಕ್ಕೂಟ ಸರ್ಕಾರ ತೆಗೆದಿರಿಸಿರುವ ಅನುದಾನವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಒಕ್ಕೂಟ ಪ್ರಾಯೋಜಿತ ಈ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ದೊಡ್ಡಮಟ್ಟದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂಬುದು ಸ್ಪಷ್ಟ. ದೇಶದ ಎಲ್ಲಾ ಮಕ್ಕಳಿಗೆ ಸಿಗಲೇಬೇಕಾದ ಮತ್ತು ಶಿಕ್ಷಣದ ಮೂಲಭೂತ ಹಕ್ಕನ್ನು ಜಾರಿಗೊಳಿಸುವ ಉದ್ದೇಶದ ಸಮಗ್ರ ಶಿಕ್ಷಣ ಅಭಿಯಾನಕ್ಕೆ ಒದಗಿಸಿರುವ ಅನುದಾನದ ಪ್ರಮಾಣ ತೀರಾ ಕಡಿಮೆ. ಪ್ರಧಾನಮಂತ್ರಿ ಹೆಸರಿನಲ್ಲಿ ರೂಪುಗೊಂಡಿರುವ ಒಕ್ಕೂಟ ಯೋಜನೆಗಳಿಗೆ ಒದಗಿಸಿರುವ ಅನುದಾನದ ಮೊತ್ತಕ್ಕೆ ಹೋಲಿಸಿ ನೋಡಿದರೆ ಇದು ಯಾರಿಗಾದರೂ ಸ್ಪಷ್ಟವಾಗುತ್ತದೆ. ಇದು, ಸಂವಿಧಾನಬದ್ಧ ನ್ಯಾಯಸಮ್ಮತ ಹಕ್ಕನ್ನು ದುರ್ಬಲಗೊಳಿಸಿ ಅದನ್ನು ಕ್ರಮೇಣ ಕಸಿಯುವ  ಸೂಚನೆಯಾಗಿದೆ. ಮತ್ತೊಂದೆಡೆ, ಪ್ರಧಾನಮಂತ್ರಿ ಅವರ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸುವ ಯೋಜನೆಗಳು ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆಯನ್ನು ಪಡೆದಿರುವುದು ಗಮನಾರ್ಹ.

ಭಾರತದಲ್ಲಿ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಶಿಕ್ಷಣದ ಜವಾಬ್ದಾರಿ ಹೊಂದಿವೆ. ರಾಜ್ಯ ಸರ್ಕಾರಗಳು ಶಾಲೆಗಳನ್ನು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸು
ತ್ತವೆ. ಉದಾಹರಣೆಗೆ, ಪ್ರಸಕ್ತ ಬಜೆಟ್‌ನಲ್ಲಿ ಒಕ್ಕೂಟ ಸರ್ಕಾರವು ಸಮಗ್ರ ಶಿಕ್ಷಣ ಅಭಿಯಾನಕ್ಕೆ ಒದಗಿಸಿರುವ ಅತ್ಯಲ್ಪ ಮೊತ್ತದ ಅನುದಾನವನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗುತ್ತದೆ. ಈ ಅನುದಾನದಿಂದ ಶಿಕ್ಷಣದ ಮೂಲಭೂತ ಹಕ್ಕನ್ನು ಜಾರಿಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎದುರಿಸಬೇಕಾದ ದುಃಸ್ಥಿತಿಯನ್ನು ಯಾರು ಬೇಕಾದರೂ ಊಹಿಸಬಹುದು. ಜೊತೆಗೆ, ಅಭಿಯಾನದ ಅಡಿಯಲ್ಲಿ ಈ ಅನುದಾನವನ್ನು ಪಡೆಯಲು ರಾಜ್ಯ ಸರ್ಕಾರಗಳು ಪಿಎಂಶ್ರೀ ಯೋಜನೆಯಲ್ಲಿ ತಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸಬೇಕು. ಅದಕ್ಕಾಗಿ ಶಿಕ್ಷಣ ಸಚಿವಾಲಯದ ಜತೆ ಒಪ್ಪಂದಪತ್ರಕ್ಕೆ ಸಹಿ ಹಾಕಬೇಕು.

ಇಲ್ಲವಾದಲ್ಲಿ, ಅಭಿಯಾನದ ಅಡಿಯಲ್ಲಿ ರಾಜ್ಯಗಳಿಗೆ ದೊರೆಯಬಹುದಾದ ಅತ್ಯಲ್ಪ ಅನುದಾನವನ್ನು ಸಹ ನಿರಾಕರಿಸಲಾಗುತ್ತದೆ. ಇತ್ತೀಚೆಗೆ ಇಂತಹ ಒಪ್ಪಂದಪತ್ರಕ್ಕೆ ಸಹಿ ಮಾಡಲು ನಿರಾಕರಿಸಿದ ಪಶ್ಚಿಮ ಬಂಗಾಳ, ದೆಹಲಿ ಮತ್ತು ಪಂಜಾಬ್ ರಾಜ್ಯಗಳಿಗೆ ಅಭಿಯಾನದ ಅಡಿಯಲ್ಲಿ ನೀಡಬೇಕಾದ ಮೂರು ಮತ್ತು ನಾಲ್ಕನೇ ಕಂತುಗಳನ್ನು ಸ್ಥಗಿತಗೊಳಿಸಲಾಗಿದೆ. ಇದು, ನಮ್ಮ ಒಕ್ಕೂಟ ವ್ಯವಸ್ಥೆ ಯಾವ ಕಡೆ ಸಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ.

ಬಜೆಟ್‌ನ ವಿನ್ಯಾಸವನ್ನು ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಿದರೆ, ಅದರಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಮೀಸಲಿಟ್ಟಿರುವ ಶೇ 75ರಷ್ಟು ಮೊತ್ತವನ್ನು ಶಿಕ್ಷಣದ ಸೆಸ್ ಮೂಲಕ ಒದಗಿಸಿರುವುದು ತಿಳಿಯುತ್ತದೆ. ಅದರಲ್ಲಿ ಶೇ 59ರಷ್ಟು ಮೊತ್ತವು ಪ್ರಾಥಮಿಕ ಶಿಕ್ಷಣದ ಸೆಸ್ ಮೂಲಕ ಹಾಗೂ ಶೇ 16ರಷ್ಟು ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಸೆಸ್‌ ಮೂಲಕ ಪೂರೈಕೆಯಾಗುತ್ತದೆ. ಇದೇ ರೀತಿ, ಉನ್ನತ ಶಿಕ್ಷಣ ಇಲಾಖೆಯ ಬಜೆಟ್‌ನ ಶೇಕಡ 33ರಷ್ಟು ಅನುದಾನವನ್ನು ಶಿಕ್ಷಣದ ಸೆಸ್ ಮೂಲಕ ಒದಗಿಸಲಾಗಿದೆ.

ಮತ್ತಷ್ಟು ಒಳಹೊಕ್ಕು ಇದನ್ನು ನೋಡಿದರೆ, ಸಮಗ್ರ ಶಿಕ್ಷಣ ಅಭಿಯಾನ ಮತ್ತು ಪ್ರಧಾನಮಂತ್ರಿ ಪೋಷಣ್‌ ಅಭಿಯಾನಕ್ಕೆ ಶೇ 99.9ರಷ್ಟು ಮೊತ್ತವು ಶಿಕ್ಷಣದ ಸೆಸ್ ಮೂಲಕ ಬರುತ್ತದೆ. ಅಂದರೆ ಬಜೆಟ್‌ನಲ್ಲಿ ತೆಗೆದಿರಿಸಿರುವ ಅಷ್ಟೂ ಅನುದಾನವು ಸೆಸ್‌ ರೂಪದಲ್ಲೇ ಸಂಗ್ರಹಗೊಳ್ಳುತ್ತದೆ ಎಂಬುದು ತಿಳಿದುಬರುತ್ತದೆ.

ಈ ಎಲ್ಲ ಅಂಶಗಳನ್ನು ಗಮನಿಸಿದರೆ, ಒಕ್ಕೂಟ ಸರ್ಕಾರದ ಈ ಬಜೆಟ್‌, ರಾಜ್ಯ ಸರ್ಕಾರಗಳನ್ನು ಅಸಹಾಯಕ ಸ್ಥಿತಿಗೆ ದೂಡುತ್ತದೆ. ಅದರಲ್ಲೂ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲು ಸಾಧ್ಯವಾಗದ ಸ್ಥಿತಿಗೆ ನೂಕುತ್ತದೆ. ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದ್ದರೂ ಒಕ್ಕೂಟ ಸರ್ಕಾರವು ಅದರ ಆರ್ಥಿಕ ಜವಾಬ್ದಾರಿಯಿಂದ ನುಣುಚಿಕೊಳ್ಳತೊಡಗಿದೆ. ಇದು, ಒಕ್ಕೂಟ ವ್ಯವಸ್ಥೆಯನ್ನು ಸಬಲಗೊಳಿಸುವ ಮಾರ್ಗ ಖಂಡಿತವಾಗಿಯೂ ಅಲ್ಲ.

ಲೇಖಕ: ಅಭಿವೃದ್ಧಿ ಶಿಕ್ಷಣ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.