ADVERTISEMENT

ವಿಶ್ಲೇಷಣೆ: 2024ರ ಚುನಾವಣೆಗೆ 2014ರ ಕಥೆ

ರೋಹಿಣಿ ನಿಲೇಕಣಿ
Published 31 ಮಾರ್ಚ್ 2024, 23:38 IST
Last Updated 31 ಮಾರ್ಚ್ 2024, 23:38 IST
   

ಸರಿಯಾಗಿ ಹತ್ತು ವರ್ಷಗಳ ಹಿಂದೆ ನಾವು ನನ್ನ ಪತಿ ನಂದನ್ ನಿಲೇಕಣಿ ಅವರಿಗಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಇಳಿದಿದ್ದೆವು. ಆ ಕಥೆ ಕೊನೆಗೊಂಡಿದ್ದು ಹೇಗೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಅಂದು ನಾವು ಕಲಿತಿದ್ದು ಈಗ ದೇಶದಾದ್ಯಂತ ಕಾಣುತ್ತಿರುವ ಆ ಕಥೆಯ ಮುಂದುವರಿದ ಭಾಗಕ್ಕೆ ಬಹಳ ಸಂಗತವಾಗಿದೆ.

ರಾಜಕಾರಣವು ವಿಶ್ವದ ಅತ್ಯಂತ ಕಷ್ಟದ ಕೆಲಸವಾಗಿರಬಹುದು ಎಂಬುದು ಸಮಸ್ತ ಮತದಾರರು ಒಪ್ಪಿಕೊಳ್ಳಬಹುದಾದ ಮೊದಲ ಸಂಗತಿ. ರಾಜಕಾರಣಿಯು ವರ್ಷದ ಅಷ್ಟೂ ದಿನ, ಹಗಲು–ರಾತ್ರಿ ಹೇಗೆ ಕೆಲಸ ಮಾಡುತ್ತಾನೆ ಎಂಬುದನ್ನು ನಾವು ಖುದ್ದಾಗಿ ಕಂಡೆವು. ಹಲವು ಬಾರಿ ಯಾವ ಪ್ರತಿಫಲವೂ ಇಲ್ಲದೆ, ಮತದಾರರ ಬೇಡಿಕೆಗಳಿಗೆ ಸ್ಪಂದಿಸಲು ಅವರು ಕೆಲಸ ಮಾಡುತ್ತಾರೆ. ಹೀಗಾಗಿ, ನಾವು ಹತ್ತಾರು ಪಕ್ಷಗಳ ಸಹಸ್ರಾರು ಅಭ್ಯರ್ಥಿಗಳಿಗೆ, ಅವರಲ್ಲಿ ಗೆಲ್ಲುವವರ ಸಂಖ್ಯೆ 543 ಮಾತ್ರ, ಒಮ್ಮೆ ಮೆಚ್ಚುಗೆ ಸೂಚಿಸೋಣವೇ?

ಎರಡನೆಯ ಸಂಗತಿ, ಬಹಳಷ್ಟು ಮತದಾರರು, ಅದರಲ್ಲೂ ಮುಖ್ಯವಾಗಿ ನಗರಗಳ ಸ್ಥಿತಿವಂತ ವರ್ಗದವರು, ಚುನಾವಣೆಗಳನ್ನು ಬಹಳ ಹಗುರವಾಗಿ ತೆಗೆದುಕೊಳ್ಳುತ್ತಾರೆ ಎಂಬುದು. 21 ದೇಶಗಳಲ್ಲಿ ಇರುವಂತೆ ಭಾರತದಲ್ಲಿ ಮತದಾನ ಕಡ್ಡಾಯವಲ್ಲ. ಇಲ್ಲಿ ಮತದಾನವೆಂದರೆ ಹಕ್ಕನ್ನು ಸಂಭ್ರಮದಿಂದ ಚಲಾಯಿಸುವುದು. ಆದರೆ, ಚುನಾವಣೆಗಳಲ್ಲಿ ಭಾಗಿಯಾಗದೆ ಇದ್ದಾಗ ನಮ್ಮನ್ನು ನಾವೇ ನಿರಾಸೆಗೊಳಿಸಿ

ADVERTISEMENT

ಕೊಂಡಂತಾಗುತ್ತದೆ. ಚುನಾವಣೆಗಳು ಅಮೂಲ್ಯವಾದ ಬೇಸಿಗೆ ರಜೆಯ ಸಂದರ್ಭದಲ್ಲಿ ಬರುತ್ತವೆ, ನಮ್ಮಲ್ಲಿ ಕೆಲವರ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟುಹೋಗಿರುತ್ತದೆ ಎಂಬುದು ನಿಜ. ಆದರೆ, ಮತದಾನ ಮಾಡುವುದು ಸಮಯ ವ್ಯರ್ಥ ಮಾಡುವ ಕೆಲಸ ಎಂದು ದೇಶದ ಬಹುಜನರು ಆಲೋಚಿಸಿದರೆ ಏನಾಗಬಹುದು ಎಂಬುದನ್ನು ಯೋಚಿಸಿ. ಮೂರನೆಯ ಸಂಗತಿಯೆಂದರೆ, ತಮ್ಮ ಅಭ್ಯರ್ಥಿಗಳಿಂದ ಜನ ಏನನ್ನು ನಿರೀಕ್ಷಿಸಬೇಕು ಎಂಬುದು. ನಾವು ಆಯ್ಕೆ ಮಾಡುವವರ ಮುಖ್ಯ ಕೆಲಸವು ಒಳ್ಳೆಯ ಶಾಸನ ರಚಿಸುವವರಾಗಿ ಸಂಸತ್ತಿಗೆ ನೆರವಾಗಬೇಕಿರುವುದು ಎಂಬುದು ಬಹುತೇಕ ಮತದಾರರಿಗೆ ಅರ್ಥವಾಗದೇ ಇರಬಹುದು. ಇದನ್ನು ಮಾಧ್ಯಮಗಳು ಮುಖ್ಯವಾಗಿ ತೋರಿಸುವುದಿಲ್ಲ. ರಾಜಕಾರಣಿಗಳು ಈ ಬಗ್ಗೆ ಮಾತನಾಡುವುದು ಬಹಳ ಕಡಿಮೆ.

ಸಂಸದರು ತಮ್ಮ ಕ್ಷೇತ್ರದ ಜನರನ್ನು ಪ್ರತಿನಿಧಿಸುವ, ಸರ್ಕಾರದ ವೆಚ್ಚಗಳಿಗೆ ಅಂಗೀಕಾರ ನೀಡುವ, ಕಾರ್ಯಾಂಗದ ಕೆಲಸಗಳ ಮೇಲೆ ಒಂದಿಷ್ಟು ನಿಗಾ ಇರಿಸುವ ಹೊಣೆ ಹೊಂದಿದ್ದಾರೆ. ಆದರೆ ಅವರ ಮುಖ್ಯ ಕೆಲಸ ಶಾಸನಗಳನ್ನು ಅರ್ಥಮಾಡಿಕೊಂಡು, ಅವುಗಳ ಬಗ್ಗೆ ಚರ್ಚಿಸಿ, ಅವುಗಳ ಅಂಗೀಕಾರಕ್ಕೆ ನೆರವಾಗುವುದು. ಈ ಶಾಸನಗಳು ದೇಶದಲ್ಲಿ ಕೆಲಸಗಳು ಸುಗಮವಾಗಿ, ನ್ಯಾಯಸಮ್ಮತವಾಗಿ ನಡೆಯಲು ನೆರವಾಗುತ್ತವೆ. ಆದರೆ 2014ರ ನಮ್ಮ ಅನುಭವದ ಆಧಾರದಲ್ಲಿ ಹೇಳುವುದಾದರೆ, ಮತದಾರರು ಬಯಸುವುದು ಅಥವಾ ಅವರು ಅರ್ಥಮಾಡಿಕೊಂಡಿರುವುದು ಇದನ್ನಲ್ಲ.

ಹಲವು ಕೊಳೆಗೇರಿಗಳಲ್ಲಿ, ಮಧ್ಯಮ ವರ್ಗದವರ ಬಡಾವಣೆಗಳಲ್ಲಿ ಹಾಗೂ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ನಾವು ಜನರ ಮಾತಿಗೆ ಇಡೀ ದಿನ ಕಿವಿಯಾಗುತ್ತಿದ್ದೆವು. ಬಹಳ ಸೆಕೆ ಇದ್ದ ಒಂದು ದಿನ ಒಂದು ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ, ನಂದನ್ ಅವರು ಚುನಾಯಿತರಾದರೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಹೇಗೆ ಕೆಲಸ ಮಾಡಲಿದ್ದಾರೆ ಎಂಬ ಬಗ್ಗೆ ನನ್ನ ಭಾವುಕ ಮಾತುಗಳನ್ನು ಆಲಿಸಿದ ನಂತರ ವ್ಯಕ್ತಿಯೊಬ್ಬರು ‘ಬಹಳ ಚೆನ್ನಾಗಿದೆ. ಆದರೆ ನನ್ನ ನೆರೆಯ ವ್ಯಕ್ತಿ ಮಧ್ಯರಾತ್ರಿ 1 ಗಂಟೆಯ ಹೊತ್ತಿನಲ್ಲಿ ನಾಯಿಗೆ ಆಹಾರ ಹಾಕುತ್ತಿರುತ್ತಾರೆ. ಅವರ ವಿಚಾರವಾಗಿ ಏನು ಮಾಡುತ್ತಾರೆ’ ಎಂದು ಪ್ರಶ್ನಿಸಿದ್ದರು! ಮಧ್ಯಮ ವರ್ಗದವರ ಬಡಾವಣೆಯಲ್ಲಿ ಜನ ಬೀದಿ ದೀಪಗಳ ಬಗ್ಗೆ, ಉದ್ಯಾನವನ್ನು ಹಸಿರಾಗಿ ಇರಿಸುವ ಬಗ್ಗೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದರು. ‘ನನ್ನ ಮತ ಉಚಿತವಾಗಿ ಬೇಕಾ? ನೀವು ನನಗೇನು ಕೊಡುತ್ತೀರಿ’ ಎಂದು ಮಹಿಳೆಯೊಬ್ಬರು ಪ್ರಶ್ನಿಸಿದ್ದರು. ಕಷ್ಟಪಟ್ಟು ಕೆಲಸ ಮಾಡುವ, ನೈತಿಕವಾಗಿ ಉತ್ತಮನಾಗಿರುವ ಅಭ್ಯರ್ಥಿ ಎಂದು ನಾನು ಏನೋ ಹೇಳಲು ಮುಂದಾದಾಗ, ಆಕೆಗೆ ಅದು ತಮಾಷೆಯಂತೆ ಅನ್ನಿಸಿತು.

ಕೊಳೆಗೇರಿಗಳಲ್ಲಿ ಜನರು ‘ಬರೀ ನೀರು ಕೊಡಿ ಸಾಕು’ ಎಂದಿದ್ದರು. ಇತರ ಕೆಲವರು ವಿದ್ಯುತ್ ಸಂಪರ್ಕ, ಸಾರಿಗೆ ಮತ್ತು ಆಸ್ಪತ್ರೆಗಳ ಬಗ್ಗೆ ಮಾತನಾಡಿದ್ದರು. ತಮ್ಮಲ್ಲಿನ ಹತಾಶೆಗಳನ್ನು ಅಭ್ಯರ್ಥಿಗಳ ಹಾಗೂ ಅವರ ಜೊತೆಗಾರರ ಎದುರು ಹೇಳಿಕೊಳ್ಳಲು ಅದು ಜನರಿಗೆ ಸಿಕ್ಕ ಒಂದು ಅವಕಾಶವಾಗಿತ್ತು. ಬೆಂಗಳೂರಿನಂತಹ ಸುಶಿಕ್ಷಿತ ನಗರಗಳಲ್ಲಿ ಕೂಡ ಜನರಿಗೆ ತಮ್ಮ ಸಂಸದರಿಂದ ಬೇಕಾಗಿರುವುದು ತಾವು ಒಗ್ಗೂಡಿ ಪಡೆದುಕೊಳ್ಳಬೇಕಿರುವ ಅಥವಾ ತಮ್ಮ ಕಾರ್ಪೊರೇಟರ್‌ಗಳು, ಸ್ಥಳೀಯ ಅಧಿಕಾರಿಗಳು, ಶಾಸಕರಿಂದ ಪಡೆದುಕೊಳ್ಳಬೇಕಿರುವ ಸಂಗತಿಗಳು ಎಂಬುದು ನಮಗೆ ನಿಧಾನವಾಗಿ ಗೊತ್ತಾಯಿತು. ಸ್ಥಳೀಯ ಮಟ್ಟದಲ್ಲಿ ಎದುರಾಗುವ ಸಮಸ್ಯೆಗಳಿಗೆ ಜನರು ನೇರ ಪರಿಹಾರವನ್ನು ಬಯಸುತ್ತಾರೆ.

ಇವುಗಳಿಗೆ ಕಾರಣವಿಲ್ಲ ಎನ್ನಲಾಗದು. ಮೂಲಭೂತ ಸೇವೆಗಳು ಸೇರಿದಂತೆ ಹಲವು ಸೇವೆಗಳನ್ನು ಒದಗಿಸಬೇಕಿರುವುದು ತೀರಾ ಮಹತ್ವದ್ದು. ಆದರೆ ಪ್ರಶ್ನೆ ಇರುವುದು ಅವುಗಳನ್ನು ಒದಗಿಸಬೇಕಿರುವವರು ಯಾರು ಎಂಬುದು. ಇದನ್ನು ಬಹಳ ಸಣ್ಣ ಮೊತ್ತದ ಎಂಪಿಲ್ಯಾಡ್‌ ಅನುದಾನ ಹೊರತುಪಡಿಸಿ ಬೇರೆ ಯಾವುದೇ ಶಾಸನಾತ್ಮಕ ಸಂಪನ್ಮೂಲ ಅಥವಾ ಅಧಿಕಾರ ಇಲ್ಲದ ಸಂಸದರಿಂದ ಒದಗಿಸುವುದು ಆಗದ ಕೆಲಸ.

ಇನ್ನಷ್ಟು ಹೆಚ್ಚು ಸಂಕೀರ್ಣವಾದ ಸಮಸ್ಯೆಗಳನ್ನು ಪರಿಹರಿಸಲು ಸಮರ್ಥ ಅಧಿಕಾರಿಗಳ ಜೊತೆ ಕೆಲಸ ಮಾಡುವ ಅರಿವಿರುವ ರಾಜಕಾರಣಿಗಳು ಆಧುನಿಕ ಪ್ರಜಾತಂತ್ರ ವ್ಯವಸ್ಥೆಗೆ ಬೇಕು. ಬಹಳ ಸಂದರ್ಭಗಳಲ್ಲಿ ನಮ್ಮ ನೀತಿಗಳು, ಕಾನೂನುಗಳು ಚರ್ಚೆಗಳಿಲ್ಲದೆ ಜಾರಿಗೆ ಬಂದಿರುತ್ತವೆ. ಬಹುತೇಕ ಸಂದರ್ಭಗಳಲ್ಲಿ ಅವು ನಮ್ಮ ದಿನನಿತ್ಯದ ಬದುಕಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಯಲು ಆಗುವುದಿಲ್ಲ.

ಉದಾಹರಣೆಗೆ ಹೇಳುವುದಾದರೆ, ‘ದೂರಸಂಪರ್ಕ ಕಾಯ್ದೆ– 2023’ ಇಂಟರ್ನೆಟ್ ಸೇವೆಗಳನ್ನು ಅಮಾನತಿನಲ್ಲಿ ಇರಿಸಲು ಸರ್ಕಾರಕ್ಕೆ ಮತ್ತಷ್ಟು ಬಲ ನೀಡುತ್ತದೆ. ಕೆಲವು ಗಂಟೆಗಳಿಗಿಂತ ಹೆಚ್ಚು ಹೊತ್ತಿನವರೆಗೆ ಇಂಟರ್ನೆಟ್ ಇಲ್ಲದೆ ಬದುಕುವುದು ಹೇಗೆಂಬುದು ನಗರವಾಸಿ ಮತದಾರರಿಗೆ ಗೊತ್ತಿಲ್ಲ. ನಮ್ಮ ಸಂಸದರು ಇಲ್ಲಿ ಮಧ್ಯಪ್ರವೇಶಿಸಿ, ಅತ್ಯಂತ ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸದಂತೆ ನೋಡಿಕೊಳ್ಳಬೇಕು ಅಲ್ಲವೇ? ಕೆಲಸದ ಭವಿಷ್ಯದ ಸ್ವರೂಪಕ್ಕೆ ಸಂಬಂಧಿಸಿದ ನೀತಿಗಳು ಹೊಸ, ಯುವ ಮತದಾರರ ಪಾಲಿಗೆ ಅತ್ಯಂತ ಮಹತ್ವದವು. ಹಾಗೆಯೇ, ಮಹಿಳೆಯರ ಪಾಲಿಗೆ ಸುರಕ್ಷತೆ, ಆರೋಗ್ಯ, ಸಮಾನತೆಗೆ ಸಂಬಂಧಿಸಿದ ಕಾನೂನುಗಳು ತಕ್ಷಣದ ಯಾವುದೇ ಸೌಲಭ್ಯಗಳಿಗಿಂತ ಹೆಚ್ಚು ಮಹತ್ವ

ದ್ದಾಗುತ್ತವೆ. 17ನೇ ಲೋಕಸಭಾ ಚುನಾವಣೆಯಲ್ಲಿ ಮತದಾರರಾಗಿ ನಮಗೆ ಹಳೆಯ ಮಾದರಿಗಳನ್ನು ಪಕ್ಕಕ್ಕೆ ಇರಿಸಲು ಒಂದು ಅವಕಾಶ ಇದೆ. ಹೊಸ ಕಾನೂನುಗಳನ್ನು ರೂಪಿಸುವಾಗ ಅಥವಾ ಹಳೆಯ ಕಾನೂನುಗಳಿಗೆ ತಿದ್ದುಪಡಿ ತರುವಾಗ ನಮ್ಮ ಸ್ವಾತಂತ್ರ್ಯದ ಪರವಾಗಿ ಮಾತನಾಡುವವರನ್ನು ನಾವು ಚುನಾಯಿಸಬಹುದು.

ಒಳ್ಳೆಯ ಸಂಸದೀಯ ಪಟುಗಳು ಒಳ್ಳೆಯ ಶಾಸನಗಳನ್ನು ರೂಪಿಸುತ್ತಾರೆ. ಒಳ್ಳೆಯ ಶಾಸನಗಳು ಒಳ್ಳೆಯ ಸಮಾಜವನ್ನು ಕಟ್ಟುತ್ತವೆ. ಒಳ್ಳೆಯ ಶಾಸನಗಳನ್ನು ಚೆನ್ನಾಗಿ ಅನುಷ್ಠಾನಕ್ಕೆ ತಂದಾಗ ಪ್ರಜಾತಂತ್ರ ವ್ಯವಸ್ಥೆಯು ಸಮಾನತೆ, ನ್ಯಾಯ, ಹಕ್ಕುಗಳಿಂದ ಕೂಡಿ ಹೆಚ್ಚು ಶ್ರೀಮಂತವಾಗುತ್ತದೆ. ಇಂದು ರೂಪುಗೊಳ್ಳುವ ಒಳ್ಳೆಯ ಕಾನೂನುಗಳು ಮುಂದೆ ಅಸಂಖ್ಯ ತಲೆಮಾರುಗಳಿಗೆ ಒಳ್ಳೆಯ ಭವಿಷ್ಯವನ್ನು ಕಟ್ಟಿಕೊಡುತ್ತವೆ.

ಸ್ಥಳೀಯ ಸಮಸ್ಯೆಗಳು ನಮ್ಮ ಸಂಸದರನ್ನು ತಮ್ಮತ್ತ ಸೆಳೆಯಬೇಕಿಲ್ಲ; ಆ ವಿಷಯಗಳಿಗೆ ನಾವು ಸ್ಥಳೀಯ ಸರ್ಕಾರವನ್ನು ಹೊಣೆಗಾರ ಆಗಿಸಬೇಕು. 543 ಮಂದಿ ನಾಯಕರನ್ನು ಸದ್ಯದ ಅಗತ್ಯಗಳಿಗಿಂತ ಹೆಚ್ಚಿನ ಮಹತ್ವದ ವಿಷಯಗಳ ಬಗ್ಗೆ ಗಮನಹರಿಸುವ ಕೆಲಸಕ್ಕೆ ಬಿಡಬಹುದು. ನಮ್ಮೆಲ್ಲರನ್ನು ಚೆನ್ನಾಗಿ ಪೊರೆಯಲು ಬೇಕಿರುವ ಒಳ್ಳೆಯ ಶಾಸನಗಳನ್ನು ರೂಪಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಭಾರತದ ಸಮಾಜವು ಭಾರತದ ಪ್ರಜಾತಂತ್ರವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು.

ಲೇಖಕಿ: ‘ರೋಹಿಣಿ ನಿಲೇಕಣಿ ಫಿಲಾಂಥ್ರೊಪೀಸ್‌’ನ ಅಧ್ಯಕ್ಷೆ‌

(ಲೇಖನವು ಈ ಮೊದಲು ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ನಲ್ಲಿ ಪ್ರಕಟವಾಗಿತ್ತು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.