ADVERTISEMENT

ವಿಶ್ಲೇಷಣೆ | ಆತಂಕ ತಂದ ಅಂತರಿಕ್ಷ ನಿಲ್ದಾಣ

ಈ ನಿಲ್ದಾಣದ ನಿರ್ವಹಣೆಗೆ ಸಂಬಂಧಿಸಿ ರಷ್ಯಾ ಸಿಡಿಸಿರುವ ಮಾತಿನ ಬಾಂಬ್‌ ಕಳವಳಕಾರಿಯೇ ಹೌದು

ಟಿ.ಆರ್.ಅನಂತರಾಮು
Published 20 ಮಾರ್ಚ್ 2022, 19:31 IST
Last Updated 20 ಮಾರ್ಚ್ 2022, 19:31 IST
   

ರಷ್ಯಾ ಮತ್ತು ಉಕ್ರೇನ್‌ ನಡುವಿನ ಸಂಘರ್ಷ ಈಗ ಅಂತರಿಕ್ಷಕ್ಕೂ ಬಿಸಿ ಮುಟ್ಟಿಸಿದೆ. ನಮ್ಮ ತಲೆಯ ಮೇಲೆ ನೇರವಾಗಿ 400 ಕಿಲೊ ಮೀಟರ್‌ ಎತ್ತರದಲ್ಲಿ ದಿನಕ್ಕೆ 15 ಬಾರಿ ಸುತ್ತುವ ಅಂತರರಾಷ್ಟ್ರೀಯ ಅಂತರಿಕ್ಷ ನಿಲ್ದಾಣ ಮಾನವಸಹಿತ ಭೂಮಿಯನ್ನು ಪರಿಭ್ರಮಿಸುತ್ತಿರುವ ಬಹುದೊಡ್ಡ ಏಕೈಕ ಕೃತಕ ಉಪಗ್ರಹ. ಸದ್ಯ ಏಳು ಮಂದಿ ಸಂಶೋಧಕರು ಅಲ್ಲಿ ಕಾರ್ಯನಿರತರಾಗಿದ್ದಾರೆ. ಅದರ ಕಮಾಂಡರ್‌ ರಷ್ಯಾ ಸಂಜಾತ.

1998ರಲ್ಲಿ ಈ ನಿಲ್ದಾಣವನ್ನು ಭೂಸಮೀಪ ಕಕ್ಷೆಗೆ ಸೇರಿಸಿದಾಗ, ಅಂತರರಾಷ್ಟ್ರೀಯ ಸಹಕಾರಕ್ಕೆ ಅದು ಮುನ್ನುಡಿ ಬರೆದಂತಿತ್ತು. ಅಮೆರಿಕ, ರಷ್ಯಾ, ಜಪಾನ್‌, ಐರೋಪ್ಯ ಒಕ್ಕೂಟ ಮತ್ತು ಕೆನಡಾ ಇವಿಷ್ಟೂ ಅಂತರಿಕ್ಷ ನಿಲ್ದಾಣದ ಪ್ರಾಮುಖ್ಯ ಅರಿತು ಅದರ ನಿರ್ಮಾಣ, ನಿರ್ವಹಣೆ ಮತ್ತು ಮಾಲೀಕತ್ವದಲ್ಲಿ ಭಾಗಿದಾರ ಆದವು. ಅಲ್ಲಿನ ಸೂಕ್ಷ್ಮ ಗುರುತ್ವ ವಾತಾವರಣದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಲು ಅವಕಾಶವಿದೆ. ಖಗೋಳವಿಜ್ಞಾನ, ಹವಾಮಾನ, ಭೌತವಿಜ್ಞಾನ, ಜೀವಿವಿಜ್ಞಾನ, ವಿಶೇಷವಾಗಿ ಸೂಕ್ಷ್ಮ ಗುರುತ್ವ ಗಗನಯಾನಿಗಳ ಆರೋಗ್ಯದ ಮೇಲೆ ಬೀರುವ ಪರಿಣಾಮ ಅರಿಯಲು ಇದು ಸರಿಯಾದ ವೇದಿಕೆ. ಈ ಅರ್ಥದಲ್ಲಿ ಅದು ‘ಹಾರಾಡುವ ಲ್ಯಾಬ್‌’ ಎಂದೇ ಪ್ರಸಿದ್ಧವಾಗಿದೆ. ಇತ್ತೀಚೆಗೆ ಕಾರ್ಬನ್‌ ಡೈ ಆಕ್ಸೈಡ್‌ ಮಾಲಿನ್ಯವನ್ನು ಅಳೆಯಲು ಉಪಕರಣವನ್ನೂ ಇಡಲಾಗಿದೆ. ಯಾವ ದೇಶವೂ ಸುಳ್ಳು ಹೇಳುವಂತಿಲ್ಲ. ಅಂಕಿಸಂಖ್ಯೆ ಸಮೇತ ಮುಂದಿಡಬಹುದು. ಇದರ ಜೊತೆಗೆ ಚಂದ್ರ, ಮಂಗಳ ಗ್ರಹದ ಶೋಧಕ್ಕೆ ಒಯ್ಯಬಹುದಾದ ಉಪಕರಣಗಳ ಪರೀಕ್ಷೆಗೂ ಇದು ಒದಗಿಬಂದಿದೆ.

ಅಂತರರಾಷ್ಟ್ರೀಯ ಅಂತರಿಕ್ಷ ನಿಲ್ದಾಣದ ಉಪಯೋಗ ಆ ಭಾಗಿದಾರ ದೇಶಗಳಿಗೆ ಮಾತ್ರ ಸೀಮಿತ ವಾಗಿಲ್ಲ. ಹತ್ತೊಂಬತ್ತು ದೇಶಗಳ ಇನ್ನೂರೈವತ್ತಕ್ಕೂ ಮಿಕ್ಕಿ ಸಂಶೋಧಕರು ಅಲ್ಲಿಗೆ ಹೋಗಿದ್ದಾರೆ, ಮರಳಿದ್ದಾರೆ. 66 ಟ್ರಿಪ್‌ಗಳು ಆಗಿವೆ. ಪ್ರತೀ ವ್ಯಕ್ತಿಗೆ ದಿನಕ್ಕೆ 75 ಲಕ್ಷ ಡಾಲರ್‌ ಖರ್ಚು ಬರುತ್ತಿದೆ. ಅದು 24 ಗಂಟೆಯೂ ಸಂಶೋಧನೆಗೆ ತೆರೆದಿದೆ. ಹೆಸರೇನೋ ನಿಲ್ದಾಣ, ಆದರೆ ಅದು ಎಲ್ಲೂ ನಿಲ್ಲುವಂತಿಲ್ಲ. ಸೆಕೆಂಡಿಗೆ 7.6 ಕಿಲೊಮೀಟರ್‌ ವೇಗದಲ್ಲಿ ಭೂಮಿಯನ್ನು ಪರಿಭ್ರಮಿಸುತ್ತಲೇ ಇರಬೇಕು. ಭಾರಿ ವಜನ್‌ ಇದೆ- 500 ಟನ್ನು ತೂಕ. ಒಂದು ಫುಟ್‌ಬಾಲ್‌ ಮೈದಾನಕ್ಕೆ ಹೋಲಿಸಬಹುದಾದಷ್ಟು ವಿಶಾಲ.

ADVERTISEMENT

ಈಗ ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ಈ ಅಂತರಿಕ್ಷ ನಿಲ್ದಾಣದ ಮೇಲೂ ಕರಾಳ ಛಾಯೆಯನ್ನು ಒತ್ತುತ್ತಿದೆ. ಸಹಕಾರ ತತ್ವ ಎನ್ನುವುದನ್ನೇ ಪುನರ್‌ವಿಮರ್ಶೆ ಮಾಡುವಂತೆ ಮಾಡಿದೆ. ರಷ್ಯಾದ ಅಂತರಿಕ್ಷ ವಿಜ್ಞಾನ ಕೇಂದ್ರದ ಡೈರೆಕ್ಟರ್‌ ಜನರಲ್‌ ಇತ್ತೀಚೆಗೆ ಒಂದು ಮಾತಿನ ಬಾಂಬ್‌ ಸಿಡಿಸಿದ್ದಾರೆ. ‘ಇಂದಿನ ಯುದ್ಧ ಪರಿಸ್ಥಿತಿಯಲ್ಲಿ ಅಮೆರಿಕವುರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರುತ್ತಾ ಹೋದರೆ, ನಾಳಿನ ದಿನಗಳಲ್ಲಿ ಈ ಅಂತರಿಕ್ಷ ನಿಲ್ದಾಣದ ನಿರ್ವಹಣೆಯನ್ನು ರಷ್ಯಾ ಕೈಬಿಟ್ಟರೆ ಆಗಬಹುದಾದ ದುರಂತವನ್ನು ಊಹಿಸಿದ್ದೀರಾ? ನಿಯಂತ್ರಣ ತಪ್ಪಿ ಈ ನಿಲ್ದಾಣವು ಅಮೆರಿಕ ಅಥವಾ ಯುರೋಪಿನ ಯಾವ ಭಾಗದ ಮೇಲಾದರೂ ಬೀಳಬಹುದು. ಭಾರತ ಮತ್ತು ಚೀನಾ ಈ ಅಪಾಯದಿಂದ ಮುಕ್ತವಾಗಿವೆ ಎಂದು ನಾವು ಹೇಳಲಾರೆವು’ ಎಂದಿದ್ದಾರೆ. ಇದೊಂದು ಕಳವಳಕಾರಿ ಸುದ್ದಿಯೇ ಹೌದು. 500 ಟನ್ನಿನ ಉಪಗ್ರಹ ಬೀಳುವುದೆಂದರೆ ಎಲ್ಲಿ ಎಂಬುದು ಊಹೆಗೂ ನಿಲುಕದು. ಏಕೆಂದರೆ ನಿಯಂತ್ರಣ ಅಸಾಧ್ಯ.

ಸುತ್ತುತ್ತಿರುವ ಈ ಕೃತಕ ಉಪಗ್ರಹವು ಭೂಮಿಯ ಮೇಲೆ ಏಕೆ ಬೀಳಬೇಕು? ನಿಯಂತ್ರಣ ತಪ್ಪಿದರೆ ಭೂಮಿ ಸೆಳೆಯುತ್ತದೆ ಅಷ್ಟೇ. ಆದರೆ ಹಾಗೆ ನಿಯಂತ್ರಣ ತಪ್ಪಬಾರದು ಎಂದೇ ರಷ್ಯಾ ದೇಶವು ನಿಲ್ದಾಣವನ್ನು ಸುಸ್ಥಿತಿಯಲ್ಲಿ ಅದೇ ಸುರಕ್ಷಿತ ಕಕ್ಷೆಗೆ ಮತ್ತೆ ಮತ್ತೆ ನೂಕುತ್ತದೆ. ವಾಯುಗೋಳದಲ್ಲಾಗುವ ಸೆಳೆತದಿಂದ ತಿಂಗಳಿಗೆ ಸುಮಾರು ಎರಡು ಕಿಲೊಮೀಟರ್‌ ಕೆಳಗೆ ಆ ನಿಲ್ದಾಣ ಇಳಿಯಬಹುದು. ಮತ್ತೆ ಬೂಸ್ಟರ್‌ ಬಳಸಿ ಮೇಲೆತ್ತಬೇಕು. ಈ ತಂತ್ರಜ್ಞಾನವನ್ನು ಸಾಧಿಸಿರುವುದು ರಷ್ಯಾ. ಅದನ್ನು ಹೀಗೆ ನಿರ್ವಹಿಸುತ್ತಿದೆ ಕೂಡ. ಇಲ್ಲೇ ಅಂತರಿಕ್ಷ ನಿಲ್ದಾಣದ ನಿರ್ವಹಣೆಯಲ್ಲಿ ಈ ಭಾಗಿದಾರ ರಾಷ್ಟ್ರಗಳ ಅವಲಂಬನೆ ಇರುವುದು. ಅಂತರಿಕ್ಷ ನಿಲ್ದಾಣದ ರಷ್ಯಾದ ಮಾಡ್ಯೂಲ್‌ನಲ್ಲಿ (ಕೆಲಸ ಮಾಡುವ ಕ್ಯಾಬಿನ್)‌ ವಾಯುಗೋಳ ನಿಯಂತ್ರಣ ವ್ಯವಸ್ಥೆ ಇದೆ, ನೀರಿನ ವ್ಯವಸ್ಥೆ ಇದೆ, ಆಹಾರ ಪೂರೈಕೆಯಾಗುವುದು ಇಲ್ಲಿಂದ. ಹಾಗೆಯೇ ಉಪಕರಣಗಳ ನಿರ್ವಹಣೆಯ ವ್ಯವಸ್ಥೆ ಕೂಡ ರಷ್ಯಾದ ಹೊಣೆ. ಗಗನಯಾನಿಗಳಿಗೆ ಆಕ್ಸಿಜನ್‌ ಪೂರೈಕೆಯಾಗುವುದು ಕೂಡ ರಷ್ಯಾ ಸಿಬ್ಬಂದಿಯ ಸುಪರ್ದಿಯಲ್ಲಿಯೇ.

ಇವೆಲ್ಲವನ್ನೂ ಹೇಗೋ ನಿಭಾಯಿಸಬಹುದು. ಆದರೆ ಬೂಸ್ಟರ್‌ ಬಳಸಿ ಮತ್ತೆ ನಿಲ್ದಾಣವನ್ನು ಸರಿಯಾದ ಕಕ್ಷೆಗೆ ಸೇರಿಸುವುದು ಎಲ್ಲಕ್ಕಿಂತಲೂ ಮಹತ್ತರ ಜವಾ ಬ್ದಾರಿ. ಇಡೀ ಯೋಜನೆಯ ಅಳಿವು ಉಳಿವು ಇದನ್ನು ಅವಲಂಬಿಸಿದೆ. ಕಳೆದ ವರ್ಷವೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ‘ಈ ಅಂತರಿಕ್ಷ ನಿಲ್ದಾಣದ ನಿರ್ವ ಹಣೆಯ ಬಗ್ಗೆ ನಮಗೆ ಆಸಕ್ತಿ ಇಲ್ಲ’ ಎಂದು ಸಾರಿದ್ದರು. ಅಬ್ಬಬ್ಬಾ ಎಂದರೆ ಇನ್ನು ಮೂರು ವರ್ಷ ಮಾತ್ರ ಎಂದು ಗಡುವನ್ನು ನೀಡಿದ್ದರು. ರಷ್ಯಾದ ಗಗನಯಾನಿಗಳು ಈ ನಿಲ್ದಾಣದ ಸ್ಥಿತಿಗತಿ ಕುರಿತು ಜಾಗತಿಕ ಸುದ್ದಿಯನ್ನೂ ಬಿತ್ತರಿಸಿದ್ದರು. ಅದೆಂದರೆ, ರಷ್ಯಾದ ಕ್ಯಾಬಿನ್‌ ಲೀಕಾಗುತ್ತಿದೆ, ಮುದಿಯಾಗಿದೆ, ದುರಸ್ತಿಗೆ ಮೀರಿದ್ದು, ಒಂದು ವೇಳೆ ಇದೇ ಸ್ಥಿತಿ ಮುಂದುವರಿದರೆ ಅಂತರಿಕ್ಷ ನಿಲ್ದಾಣ ಅಪಾಯಕ್ಕೀಡಾಗುತ್ತದೆ. ಈಗ ಪುಟಿನ್‌ ಅವರಿಗೆ ಇದಿಷ್ಟೇ ಸಾಕಾಗಿದೆ- ಅಲ್ಲಿನ ವಿಜ್ಞಾನಿಗಳ ಮೂಲಕ ಎಚ್ಚರಿಕೆಯನ್ನೂ ಕೊಡಿಸುತ್ತಿದ್ದಾರೆ. ಅಂತರಿಕ್ಷ ನಿಲ್ದಾಣ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದರೆ ಅದಕ್ಕೆ ರಷ್ಯಾವನ್ನು ದೂಷಿಸುವಂತಿಲ್ಲ ಎಂದು.

ರಷ್ಯಾದ ಈ ಎಚ್ಚರಿಕೆ ಇಂದಿನ ಕಾವೇರಿದ ವಾತಾವರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ ಇನ್ನು ಮುಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಂಡರೆ ಯೋಜನೆಗಳು ಮುಂದುವರಿಯುವುವೇ? ಯಾವ ದೇಶ ಯಾವ ಗಳಿಗೆಯಲ್ಲಿ ಕೈಕೊಡುತ್ತದೋ? ಯಾವುದೇ ದೇಶವನ್ನು ನೆಚ್ಚಬಹುದೇ? ಇಂಥ ಪ್ರಶ್ನೆಗಳೇಳುವುದು ಅಸಂಭವವಲ್ಲ.

ಈ ಮಧ್ಯೆ ಇನ್ನೊಂದು ಅನಿರೀಕ್ಷಿತ ಬೆಳವಣಿಗೆಗೂ ಅಂತರಿಕ್ಷ ನಿಲ್ದಾಣ ಸಾಕ್ಷಿಯಾಗಿದೆ. 400 ಕಿಲೊಮೀಟರ್‌ ಎತ್ತರ ಎಂದರೆ, ಅದು ಭೂಸಮೀಪದ ಕಕ್ಷೆ. ದಿನಕ್ಕೆ 15 ಬಾರಿ ಭೂಪರಿಭ್ರಮಣೆ ಮಾಡುವ ಈ ಅಂತರಿಕ್ಷ ನಿಲ್ದಾಣ ತೆಗೆಯುವ ಚಿತ್ರಗಳು ಅತ್ಯಂತ ಸ್ಫುಟವಾಗಿರುತ್ತವೆ. ಈಗ ಅಮೆರಿಕ ಆ ಚಿತ್ರಗಳನ್ನು ಉಕ್ರೇನಿಗೆ ರವಾನಿಸಿ, ರಷ್ಯಾದ ಮಿಲಿಟರಿ ಪಡೆಗಳು ಎಲ್ಲಿವೆ, ಎತ್ತ ಸಾಗುತ್ತಿವೆ ಎಂಬ ನಿಖರ ಮಾಹಿತಿಯನ್ನು ಕೊಡುತ್ತಿದೆ. ಉಕ್ರೇನ್‌, ರಷ್ಯಾಕ್ಕೆ ತಿರುಗೇಟು ಕೊಡುತ್ತಿರುವ ಹಿನ್ನೆಲೆಯೂ ಇದೇ ಎಂದು ಯುದ್ಧ ಪರಿಣತರು ಹೇಳುತ್ತಿದ್ದಾರೆ.

ಅಮೆರಿಕದ ದೈತ್ಯ ಉದ್ಯಮಿ, ಆಕಾಶವನ್ನೇ ಆಳಲು ಹೊರಟಿರುವ ಎಲಾನ್‌ ಮಸ್ಕ್‌ ಇನ್ನೊಂದೆಡೆ ಅಂತರಿಕ್ಷ ನಿಲ್ದಾಣದ ಭವಿಷ್ಯ ಕುರಿತು ಭರವಸೆಯ ಮಾತುಗಳನ್ನಾಡುತ್ತಿದ್ದಾರೆ. ‘ಸ್ಪೇಸ್‌ ಎಕ್ಸ್‌ ಡ್ರಾಗನ್‌’ ಎಂಬ ನೌಕೆ ಸಹಾಯಕ್ಕೆ ಬರುತ್ತದೆ. ಅಂತರಿಕ್ಷ ನಿಲ್ದಾಣ ಕಕ್ಷೆಯಿಂದ ಜಾರುವುದಾದರೆ, ಅದನ್ನು ಎತ್ತಿ ಮತ್ತೆ ಕಕ್ಷೆಗೆ ತಳ್ಳುವ ಜವಾಬ್ದಾರಿಯನ್ನು ಅಮೆರಿಕ ಹೊರಬಹುದು. ಅದೊಂದೇ ಕಾರಣಕ್ಕೆ ರಷ್ಯಾಕ್ಕೆ ದುಂಬಾಲು ಬೀಳುವುದು ಬೇಡ ಎಂಬ ಅಭಯ ನೀಡುತ್ತಿದ್ದಾರೆ.

ಸದ್ಯದಲ್ಲಂತೂ ರಷ್ಯಾದ ಮೂವರು ಗಗನಯಾನಿಗಳು ಅಂತರಿಕ್ಷ ನಿಲ್ದಾಣದಲ್ಲಿ ಕಾರ್ಯನಿರತರಾಗಿದ್ದಾರೆ. ರಷ್ಯಾ ಅವರ ಸುರಕ್ಷತೆಯನ್ನು ಪರಿಗಣಿಸಲೇಬೇಕಾಗು ತ್ತದೆ. ತಲೆಯ ಮೇಲೆ ತೂಗುತ್ತಿರುವ ಕತ್ತಿ ಸ್ವಲ್ಪ ಆಚೆ ಸರಿದಂತಾಗಿದೆ. ಆದರೆ ಇದು ಬಿಟ್ಟಿರುವ ಕರಾಳ ಛಾಯೆ ಸುಲಭವಾಗಿ ಮರೆಯಾಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.