ADVERTISEMENT

ಉಕ್ರೇನ್‌ನ ಬಾಹ್ಯಾಕಾಶ ಇಂಟರ್ನೆಟ್ ಸೇವೆಯನ್ನು ಉಳಿಸುವುದೇ ರಷ್ಯಾ? 

ಗಿರೀಶ್ ಲಿಂಗಣ್ಣ
Published 28 ಮಾರ್ಚ್ 2022, 14:16 IST
Last Updated 28 ಮಾರ್ಚ್ 2022, 14:16 IST
ಉಕ್ರೇನ್
ಉಕ್ರೇನ್   

ಉಕ್ರೇನ್‌ ಅನ್ನು ದುರ್ಬಲಗೊಳಿಸುವುದಕ್ಕಾಗಿ ಅಲ್ಲಿನ ಮೂಲಸೌಕರ್ಯದ ಸ್ಥಾಪನೆಗಳನ್ನೇ ಗುರಿಯಾಗಿಸಿಕೊಂಡು ರಷ್ಯಾ ನಿರಂತರವಾಗಿ ದಾಳಿಗಳನ್ನು ಮಾಡುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ, ಸಂವಹನಕ್ಕಾಗಿ ಮಾತ್ರವಲ್ಲದೆ ಹಣಕಾಸು ವ್ಯವಸ್ಥೆಯನ್ನು ನಿರ್ವಹಿಸಲೂ ಬಳಸಲಾಗುತ್ತಿದ್ದ ಅಲ್ಲಿನ ಅಂತರ್ಜಾಲ ಸೇವೆಯನ್ನು ಸಂಪೂರ್ಣವಾಗಿ ಹದಗೆಡಿಸಿದೆ. ಉಕ್ರೇನ್ ಜನರ ನಡುವೆ ಹಾಗೂು ಹೊರ ಪ್ರಪಂಚದ ಜತೆಗಿನ ಸಂವಹನವನ್ನು ನಿಷ್ಕ್ರಿಯಗೊಳಿಸಲು ರಷ್ಯಾ ಬಯಸಿದೆ. ಮತ್ತೊಂದೆಡೆ, ಉಕ್ರೇನಿಯನ್ನರ ಮೇಲೆ ವ್ಲಾಡಿಮಿರ್ ಪುಟಿನ್ ಅವರು ಎಸಗುತ್ತಿರುವ ಅಮಾನವೀಯ ದುರಂತವನ್ನು ಈ ಜಗತ್ತು ನೋಡಿದೆ.

ಆದರೆ, ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸುವ ರಷ್ಯಾದ ದುಷ್ಟ ಗುರಿಯು ಅಪೇಕ್ಷಿತ ಫಲಿತಾಂಶವನ್ನು ನೀಡಲಿಲ್ಲ. ಏಕೆಂದರೆ, ಉಕ್ರೇನ್ ವೈವಿಧ್ಯಮಯ ಇಂಟರ್ನೆಟ್ ಸೇವೆಗಳನ್ನು ಹೊಂದಿದೆ. ಒಂದನ್ನೇ ನೆಚ್ಚಿಕೊಂಡಿಲ್ಲ. ಈ ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸುವಂತಹ ಕೇಂದ್ರೀಕೃತ ಸ್ವಿಚ್ ಕೂಡ ಇಲ್ಲ. ರಷ್ಯಾ ಭೌತಿಕವಾಗಿ ಉಕ್ರೇನ್‌ ಒಳಗೆ ಪ್ರವೇಶಿಸಿದರೆ, ಅದು ಇಂಟರ್ನೆಟ್ ವಿನಿಮಯ ಕೇಂದ್ರಗಳು ಮತ್ತು ಡೇಟಾ ಕೇಂದ್ರಗಳನ್ನು ನಾಶಪಡಿಸುತ್ತದೆ. ಹೀಗಿರುವಾಗ, ರಷ್ಯಾವು ಇಡೀ ದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಆದರೂ ಅದು ಅನೇಕ ನಗರಗಳು ಮತ್ತು ಅವುಗಳ ಮೂಲಸೌಕರ್ಯಗಳನ್ನು ವ್ಯಾಪಕವಾಗಿ ಹಾನಿಗೊಳಿಸಿದೆ.

ಯುದ್ಧದ ಆರಂಭದಲ್ಲಿ, ಉಕ್ರೇನಿನ ಟೆಲಿಕಾಂ ಅಧಿಕಾರಿಗಳು ತಮ್ಮ ಸೇವೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದಕ್ಕಾಗಿ ಮೊಬೈಲ್ ಫೋನ್ ನೆಟ್‌ವರ್ಕ್‌ಗಳಿಗೆ ಪರ್ಯಾಯ ರೇಡಿಯೊ ತರಂಗಗಳನ್ನು ಬಿಡುಗಡೆ ಮಾಡಿದರು. ಆದರೆ, ಈ ವ್ಯವಸ್ಥೆ ತಾತ್ಕಾಲಿಕ ನೆಲೆಯಲ್ಲಿತ್ತು. ಇಂಟರ್ನೆಟ್ ಜಾಲದ ಒಂದು ಭಾಗವು ರಷ್ಯಾದ ಆಕ್ರಮಣವನ್ನು ತಡೆದುಕೊಳ್ಳಲು ಸಮರ್ಥವಾಗಿದೆ ಮತ್ತು ಉಕ್ರೇನ್‌ನ ಸಂವಹನವನ್ನು ಜೀವಂತವಾಗಿ ಇರಿಸಿದೆ. ಆದರೆ, ದಾಳಿಗಳ ಪರಿಣಾಮವಾಗಿ ಸಹಜವಾಗಿಯೇ ದೇಶದ ಅನೇಕ ಭಾಗಗಳಲ್ಲಿ ಇಂಟರ್ನೆಟ್ ಸೇವೆಗಳು ಒಂದೋ ನಿಲುಗಡೆಗೊಂಡಿವೆ ಅಥವಾ ಅವುಗಳ ವೇಗ ತುಂಬ ಕಡಿಮೆಯಾಗಿದೆ. ವಿಶೇಷವೆಂದರೆ, ಉಕ್ರೇನಿಯನ್ನರಂತೆ, ಅವರ ಇಂಟರ್ನೆಟ್ ಸಂಪರ್ಕವೂ ಬಹುಬೇಗನೆ ಸಹಜ ಸ್ಥಿತಿಗೆ ಮರಳುತ್ತದೆ.

ADVERTISEMENT

ಸೇವಾದಾತರು ತಮ್ಮದೇ ಆದ ಪರ್ಯಾಯ ಮೂಲಸೌಕರ್ಯಗಳ ಮೂಲಕ ಸಂಪರ್ಕಗಳನ್ನು ಮರುಸ್ಥಾಪಿಸುತ್ತಿದ್ದಾರೆ. ತಂತ್ರಜ್ಞರ ಅನೇಕ ತಂಡಗಳು ಮತ್ತು ಕಂಪನಿಗಳು ಇಂಟರ್ನೆಟ್ ಸಂಪರ್ಕ ಹೇಗೆ ವ್ಯತ್ಯಯವಾಗುತ್ತಿದೆ ಎಂದು ಅಧ್ಯಯನ ಮಾಡುತ್ತಿವೆ ಮತ್ತು ಪರ್ಯಾಯ ಕ್ರಮಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರುತ್ತಿವೆ. ತಜ್ಞರ ಪ್ರಕಾರ, ಸೈಬರ್ ಉಪಕರಣಗಳ ಬಳಕೆಯಲ್ಲಿ ಉಕ್ರೇನ್‌ನ ತಾಂತ್ರಿಕ ಸಾಮರ್ಥ್ಯಗಳನ್ನು ಅಂದಾಜಿಸುವಲ್ಲಿ ವ್ಲಾಡಿಮಿರ್ ಪುಟಿನ್ ಲೆಕ್ಕಾಚಾರ ತಪ್ಪಾಗಿದೆ.

ಉಕ್ರೇನ್‌ ನೆರವಿಗೆ ಬರುತ್ತಿರುವ ಒಂದು ಅಂಶವೆಂದರೆ ತಕ್ಷಣವೇ, ಸ್ಟಾರ್‌ಲಿಂಕ್ ಒದಗಿಸಿದ ಉಪಗ್ರಹ ಇಂಟರ್ನೆಟ್ ಸೇವೆಯಾಗಿದೆ. ಇದು ಅಮೆರಿಕದ ಸ್ಪೇಸ್‌ಎಕ್ಸ್ (SpaceX) ಒಡೆತನದಲ್ಲಿದೆ. ಅತ್ಯಂತ ಶ್ರೀಮಂತ ಉದ್ಯಮಿಯಾಗಿರುವ ಶ್ರೀಮಂತ ಎಲೋನ್ ಮಸ್ಕ್ ಅವರ ಒಡೆತನದ ಈ ಕಂಪನಿಯು ಭೂಮಿಯ ಕೆಳ ಕಕ್ಷೆಯಲ್ಲಿ ಕಾರ್ಯನಿರ್ವಹಿಸುವ ಸುಮಾರು 2,000 ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಉಕ್ರೇನ್ ಕೋರಿಕೆಯ ಮೇರೆಗೆ, ಮಸ್ಕ್ ಕಂಪನಿಯು ಮಿಂಚಿನ ವೇಗದಲ್ಲಿ ಕೆಲಸ ಮಾಡಲು ಪ್ರಾರಂಭಿಸಿತು. ಭಾರತ ಸೇರಿದಂತೆ ಎಲ್ಲ ದೇಶಗಳಲ್ಲಿ ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ತಂತಿ ಆಧಾರಿತ ಮತ್ತು ಸೆಲ್-ಟವರ್ ಆಧಾರಿತ ವ್ಯವಸ್ಥೆಗಳಿಗೆ ಹೋಲಿಸಿದರೆ ಬಾಹ್ಯಾಕಾಶ ಆಧಾರಿತ ಇಂಟರ್ನೆಟ್ ಸೇವೆಯನ್ನು ಹದಗೆಡಿಸುವುದು ಕಷ್ಟದ ಕೆಲಸ.

ಉಕ್ರೇನ್‌ನ ರಾಜಧಾನಿ ಕೀವ್‌ಗೆ ಮಸ್ಕ್ ಅವರು ವಿಶೇಷ ಉಪಕರಣಗಳನ್ನು ರವಾನಿಸಿದರು, ಇದು ಬಾಹ್ಯಾಕಾಶದಿಂದ ಇಂಟರ್ನೆಟ್ ಸಂಪರ್ಕವನ್ನು ಸಕ್ರಿಯಗೊಳಿಸಿತು. ಸ್ಪೇಸ್ ಎಕ್ಸ್ (SpaceX)ನ ಇಂಟರ್ನೆಟ್ ಸೇವೆಯು ಈ ವರೆಗೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಕಂಪನಿಯು ದೇಶದ ಎಲ್ಲ ನಾಗರಿಕರಿಗೆ ಇಂಟರ್ನೆಟ್ ಸೌಲಭ್ಯವನ್ನು ನೀಡುವ ಬದಲು ಉಕ್ರೇನ್ ಸರ್ಕಾರ ಮತ್ತು ಅದರ ಅಧಿಕಾರಿಗಳಿಗೆ ಸಂವಹನ ಸೌಲಭ್ಯವನ್ನು ನೀಡುವತ್ತ ಗಮನಹರಿಸಿದೆ.

ಉಕ್ರೇನ್‌ನಲ್ಲಿ ಈಗ ನಡೆಯುತ್ತಿರುವ ಭೌತಿಕ ಯುದ್ಧವು ಕೊನೆಗೊಳ್ಳುವುದೋ ಅಥವಾ ಮುಂದುವರಿಯುವುದೋ ಎನ್ನುವುದು ಸ್ಪಷ್ಟವಿಲ್ಲ. ಆದರೆ, ಕಳೆದ ಕೆಲವು ವಾರಗಳಿಂದ ಅಂತರ್ಜಾಲದಲ್ಲಿ ವರ್ಚುವಲ್ ಯುದ್ಧವು ತೀವ್ರಗೊಳ್ಳುತ್ತಿದೆ. ಉಕ್ರೇನ್‌ನ ಅತಿ ಕಿರಿಯ ಸಚಿವರಾದ ಮೈಖೈಲೊ ಫೆಡೋರೊವ್ ಅವರು ಈ ಬಿಕ್ಕಟ್ಟಿನ ನಡುವೆಯೂ ಸೃಜನಾತ್ಮಕವಾಗಿ ಕೆಲಸ ಮಾಡುತ್ತಿದ್ದಾರೆ. ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಆಧುನಿಕ ಯುದ್ಧದ ಅಸ್ತ್ರಗಳಾಗಿ ಪರಿವರ್ತಿಸಿದ್ದಾರೆ. ಯುದ್ಧ ಆರಂಭವಾಗಿ ಒಂದು ವಾರ ಪೂರ್ಣಗೊಂಡಿರಲಿಲ್ಲ, ಆಗಲೇ, 'ತಮ್ಮ ದೇಶವು ಐಟಿ ಸೈನ್ಯವನ್ನು ಅಭಿವೃದ್ಧಿಪಡಿಸುತ್ತಿದೆ' ಎಂದು ಟ್ವೀಟ್ ಮಾಡಿದ್ದರು. ಸೈಬರ್ ಕ್ಷೇತ್ರದ ಮುಂಚೂಣಿಯಲ್ಲಿದ್ದುಕೊಂಡು ಹೋರಾಡುವುದಕ್ಕಾಗಿ ತಮ್ಮ ಜತೆಗೆ ಕೈಜೋಡಿಸುವಂತೆ ಡಿಜಿಟಲ್ ಪ್ರತಿಭೆಗಳನ್ನು ಅವರು ಆಹ್ವಾನಿಸಿದರು. ಅವರ ಆಹ್ವಾನವನ್ನು ಸ್ಪೇಸ್‌ಎಕ್ಸ್ (SpaceX) ಸಿಇಒ ಎಲೋನ್ ಮಸ್ಕ್ ಒಪ್ಪಿಕೊಂಡಿದ್ದಾರೆ ಮತ್ತು ಉಕ್ರೇನ್‌ನಲ್ಲಿ ತಮ್ಮ ಕಂಪನಿಯ ಸ್ಟಾರ್‌ಲಿಂಕ್ ಉಪಗ್ರಹ ಸೇವೆಯನ್ನು ಒದಗಿಸಿದ್ದಾರೆ.

ಸಾಮಾನ್ಯ ಜನರಿಗೆ ಸಹಾಯ ಮಾಡಲು ಉಕ್ರೇನ್‌ನಲ್ಲಿ ಸ್ಟಾರ್‌ಲಿಂಕ್‌ನ ಎಷ್ಟು ಟರ್ಮಿನಲ್‌ಗಳಿವೆ ಎಂಬ ವಿವರಗಳನ್ನು ಬಹಿರಂಗ ಮಾಡಿಲ್ಲ. ಆದರೆ, ರಾಜಕೀಯ ಮತ್ತು ರಕ್ಷಣಾ ಅಧಿಕಾರಿಗಳು ತಾತ್ಕಾಲಿಕವಾಗಿ ರಚಿಸಲಾದ ಸಂವಹನ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ‘ವಿದ್ಯುತ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಸಾಫ್ಟ್‌ವೇರ್ ನವೀಕರಿಸುತ್ತಿದ್ದೇವೆ. ಇನ್ನುಮುಂದೆ, ಸ್ಟಾರ್‌ಲಿಂಕ್ ಅನ್ನು ಕಾರ್ ಸಿಗರೇಟ್ ಲೈಟರ್‌ನಿಂದಲೂ ನಡೆಸಬಹುದಾಗಿದೆ’ಎಂದು ಮಸ್ಕ್ ಅವರು ಘೋಷಿಸಿದ್ದಾರೆ. ಮೊಬೈಲ್ ರೋಮಿಂಗ್ ಅನ್ನು ಸಕ್ರಿಯಗೊಳಿಸಲಾಗಿದೆ. ಈ ಮೂಲಕ ಚಲಿಸುವ ವಾಹನದಲ್ಲಿ ಹಂತಗಳಲ್ಲಿ ಕಾರ್ಯ ನಿರ್ವಹಿಸುವ ಆಂಟೆನಾ ಈ ನೆಟ್ವರ್ಕ್‌ನ ಸಿಗ್ನಲ್‌ಗಳನ್ನು ನಿರ್ವಹಿಸುತ್ತದೆ.

ರಷ್ಯಾದ ಮದ್ದು-ಗುಂಡುಗಳು ಮತ್ತು ಕ್ಷಿಪಣಿಗಳಿಗೆ ಸೂಕ್ತವಾದ ಪ್ರತ್ಯುತ್ತರಗಳನ್ನು ನೀಡಲು ಪ್ರಯತ್ನಿಸುತ್ತಿರುವ ತಂತ್ರಜ್ಞಾನವನ್ನು ಶ್ಲಾಘಿಸುವಾಗ, ಉಪಗ್ರಹ ಇಂಟರ್ನೆಟ್ ಬಳಕೆಗೆ ಇದು ಎಷ್ಟು ಸುರಕ್ಷಿತವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಬೇಕಾಗಿದೆ. ಪ್ರಸರಣದಲ್ಲಿ ಡೇಟಾವನ್ನು ಕದಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದ್ದರಿಂದ, ಬಳಕೆದಾರರು ವಾಯುದಾಳಿಯ ಗುರಿಯಾಗಬಹುದು. ತಂತ್ರಜ್ಞಾನವು ಸಂವಹನಕ್ಕಾಗಿ ರೇಡಿಯೋ ತರಂಗಗಳನ್ನು ಬಳಸುತ್ತದೆ. ಈ ಸಂಕೇತಗಳನ್ನು ಪ್ರತಿಬಂಧಿಸುವುದು ಸಾಧ್ಯವಿದೆ. ಟೊರೊಂಟೊ ವಿಶ್ವವಿದ್ಯಾನಿಲಯದ ಸಿಟಿಜನ್ ಲ್ಯಾಬ್‌ನ ಸಂಶೋಧಕ ಜಾನ್ ಸ್ಕಾಟ್-ರೈಲ್ಟನ್ ಅವರ ಪ್ರಕಾರ, ಉಕ್ರೇನ್‌ನಲ್ಲಿ ಸ್ಟಾರ್‌ಲಿಂಕ್ ಬಳಕೆದಾರ ಟರ್ಮಿನಲ್‌ಗಳು ಮತ್ತು ಭೂಮಿಯಿಂದ ಕಡಿಮೆ ಎತ್ತರದ ಕಕ್ಷೆಯಲ್ಲಿರುವ ಉಪಗ್ರಹಗಳ ನಡುವಿನ ಪ್ರಸರಣವು ವಾಯುದಾಳಿಯನ್ನು ತಾಳಿಕೊಳ್ಳುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಉಪಗ್ರಹ ಸಂವಹನದ ಆಧಾರದ ಮೇಲೆ ಜನರನ್ನು ಗುರಿಯಾಗಿಸುವ ಇತಿಹಾಸವನ್ನು ರಷ್ಯಾ ಹೊಂದಿದೆ ಎಂದು ಅವರು ಎಚ್ಚರಿಸಿದ್ದಾರೆ. ಅವರು ಇಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್‌ನ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ: "ಇದು ನೋಡಲು ಉತ್ತೇಜನಕಾರಿಯಾಗಿದೆ. ಆದರೆ ನೆನಪಿಡಿ: ಪುಟಿನ್ ಉಕ್ರೇನನ್ನು ವಾಯುಶಕ್ತಿಯ ಮೂಲಕ ನಿಯಂತ್ರಿಸಿದರೆ, ಬಳಕೆದಾರರ ಅಪ್ಲಿಂಕ್ ಪ್ರಸರಣಗಳು ಈ ವಾಯುದಾಳಿಗಳಿಗೆ ಅಪಾಯದ ಸೂಚಕ (ಬೀಕನ್)ಗಳಾಗುತ್ತವೆ." ಒಟ್ಟು 15 ಟ್ವೀಟ್‌ಗಳ ಸರಣಿಯಲ್ಲಿ ಅವರು, ಉಪಗ್ರಹ ಇಂಟರ್ನೆಟ್ ಸಂಪರ್ಕವನ್ನು ಬಳಸುವುದರೊಂದಿಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಉಕ್ರೇನ್‌ಗೆ ಎಚ್ಚರಿಕೆ ನೀಡಿದ್ದಾರೆ.

ತನ್ನ ಕಂಪನಿಯ ಸೇವೆ ಲೋಪರಹಿತ ಎಂದು ಮಸ್ಕ್ ಅವರೂ ಹೇಳುತ್ತಿಲ್ಲ. ಅಗತ್ಯವಿರುವಾಗ ಮಾತ್ರ ಆಂಟೆನಾವನ್ನು ಆನ್ ಮಾಡುವಂತಹ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಅವರು ಸ್ಟಾರ್‌ಲಿಂಕ್ ಬಳಕೆದಾರರಿಗೆ ಸಲಹೆ ನೀಡಿದ್ದಾರೆ.

ಯುದ್ಧ ವಲಯಗಳಲ್ಲಿ ಸೆಲ್ಯುಲಾರ್ ಮತ್ತು ಇಂಟರ್ನೆಟ್ ಸಂಪರ್ಕವನ್ನು ಒದಗಿಸುವ ಮಾರ್ಗವನ್ನು ಸುಗಮಗೊಳಿಸುವ ಕಾನೂನನ್ನು ಜಾರಿಗೊಳಿಸಲು ಅಮೆರಿಕ ಸರ್ಕಾರವು ಮನಸ್ಸು ಮಾಡಿದೆ ಎಂದು ವರದಿಯಾಗಿದೆ.

ವಾಸ್ತವವಾಗಿ, ತಂತ್ರಜ್ಞಾನವು ಅನುಕೂಲಗಳ ಜತೆಗೆ ಋಣಾತ್ಮಕ ಅಥವಾ ಅಹಿತಕರ ಪರಿಣಾಮಗಳನ್ನೂ ಹೊಂದಿರುತ್ತದೆ. ಆದರೆ, ತಂತ್ರಜ್ಞಾನದ ನೆರವಿಲ್ಲದೆ ಬದುಕಲಾರದ ಸ್ಥಿತಿಗೆ ನಾವೆಲ್ಲರೂ ತಲುಪಿದ್ದೇವೆ. ತಂತ್ರಜ್ಞಾನವನ್ನು ಒಳ್ಳೆಯದು ಅಥವಾ ಕೆಟ್ಟದ್ದಕ್ಕಾಗಿ ಬಳಸುವುದು ನಮ್ಮ ಕೈಯಲ್ಲೇ ಇದೆ.

– ಲೇಖಕರು:ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.