ADVERTISEMENT

ವಿಶ್ಲೇಷಣೆ: ಟೋಪಿ ಬದಲಿಸುವ ಆಟ

ನಾವು ನೀರು ಹಾಕಿ ಬೆಳೆಸುವ ಬಿತ್ತುಗಳು ನಮ್ಮನ್ನು ಬಲಪಡಿಸುವಂತಿರಲಿ

ಸಬಿತಾ ಬನ್ನಾಡಿ
Published 21 ಫೆಬ್ರುವರಿ 2024, 20:23 IST
Last Updated 21 ಫೆಬ್ರುವರಿ 2024, 20:23 IST
<div class="paragraphs"><p>ವಿಶ್ಲೇಷಣೆ: ಟೋಪಿ ಬದಲಿಸುವ ಆಟ</p></div>

ವಿಶ್ಲೇಷಣೆ: ಟೋಪಿ ಬದಲಿಸುವ ಆಟ

   

‘ಎಂಟು ತಿಂಗಳ ಕೆಳಗೆ ಇಲ್ಲಿ ಈ ಫೋಟೊಗಳು ಇರಲಿಲ್ಲ. ಅದಕ್ಕೆ ಬದಲಾಗಿ ಜಾರ್ಜ್ ರಾಜ ರಾಣಿಯರ ಪಟಗಳಿದ್ದವು. ಆಗಸ್ಟ್ 14ನೇ ತಾರೀಕು ಸಾಯಂಕಾಲ ಅವುಗಳನ್ನು ತೆಗೆದು ಬೇರೆ ಕಡೆಗೆ ಸಾಗಿಸಿ ಈ ಪಟಗಳನ್ನು ಇಲ್ಲಿ ಹಚ್ಚಬೇಕಾಯಿತು... ಬ್ರಿಟಿಷ್ ಸರ್ಕಾರ ಇರುವವರೆಗೆ ಚಕ್ರವರ್ತಿಗಳ ಪಟ ಹಾಕುತ್ತಿದ್ದೆ. ಈಗ ಅವರೇ ನೆಹರೂರವರಿಗೆ ಅಧಿಕಾರ ಕೊಟ್ಟು ಹೊರಟುಹೋದರು. ಸರಿ, ನಾವೂ ಗಾಂಧಿ, ನೆಹರೂ ಪಟ ಹಾಕಿದೆವು. ಅಂದೇ ನಾಲ್ಕಾಣೆ ಕೊಟ್ಟು ನಾನು ಕಾಂಗ್ರೆಸ್ ಸದಸ್ಯನಾದದ್ದೂ ಆಯಿತು. ಖಾದಿ ಬಟ್ಟೆ ಹಾಕಿದ್ದೂ ಆಯಿತು’ ಎಂದು ಶ್ರೀಮಂತ ಬಂಡವಾಳಿಗನೊಬ್ಬ ಸ್ವಾತಂತ್ರ್ಯ ಬಂದ ಕಾಲದಲ್ಲಿ ಹೇಳುವ, ಮುಂದೆ ಇಂತಹವರೇ ರಾಜಕೀಯದಲ್ಲಿ ಮುನ್ನೆಲೆಗೆ ಬರುವ ಈ ಮೇಲಿನ ಮಾತುಗಳು ಬಸವರಾಜ ಕಟ್ಟೀಮನಿಯವರ ‘ಜ್ವಾಲಾಮುಖಿಯ ಮೇಲೆ’ (1951) ಕಾದಂಬರಿಯಲ್ಲಿ ಬರುತ್ತವೆ.

ಹೋರಾಡಿದವರು ಹಿನ್ನೆಲೆಯಲ್ಲಿ ಉಳಿದು, ನಡುವೆ ಟೋಪಿ ಬದಲಿಸಿದವರು ಮುನ್ನೆಲೆಗೆ ಬರುವ ಸಂಗತಿಯೆಡೆಗೆ ಬೆಳಕು ಚೆಲ್ಲುವ ಈ ಕತೆ ನಮಗೆ ಈಗಲೂ ಚಿರಪರಿಚಿತ. ಸಾಮಾಜಿಕ ಚರಿತ್ರೆಯಂತೆ ನಿರೂಪಿತವಾದ ಕಟ್ಟೀಮನಿಯವರ ಕೃತಿಗಳು ಇನ್ನೂ ಹಲವು ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತವೆ. ಅವರ ‘ಅಜ್ಞಾತವಾಸಿ’ ಕತೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರನ ಹೆಂಡತಿ ಬ್ರಿಟಿಷ್ ಸರ್ಕಾರದ ಪೊಲೀಸರಿಂದ ನಿರಂತರವಾಗಿ ಹಿಂಸೆ, ಅತ್ಯಾಚಾರಗಳಿಗೆ ಬಲಿಯಾಗುತ್ತಾಳೆ. ಸಾವು ಬಂದರೂ ಆಕೆ ತನ್ನ ಗಂಡನ ಕುರಿತು ಯಾವುದೇ ಸುಳಿವು ಬಿಟ್ಟುಕೊಡುವುದಿಲ್ಲ. ದುರಂತವೇನೆಂದರೆ, ಈ ಪೊಲೀಸರು ಬ್ರಿಟಿಷ್ ಸರ್ಕಾರದಲ್ಲಿದ್ದ ಭಾರತೀಯರೇ ಆಗಿದ್ದರು. ಕನ್ನಡದ ಹೆಣ್ಣಿನ ಮೇಲೆ ಆಕ್ರಮಣ ಮಾಡಿದ ಕನ್ನಡಿಗರೇ ಆಗಿದ್ದರು. ಹಾಗಾದರೆ, ಇವರು ಸ್ವಾತಂತ್ರ್ಯಾನಂತರ ಏನಾದರು?  ಭಾರತೀಯ ಸರ್ಕಾರದಲ್ಲೂ ಇವರೇ ಮುಂದುವರಿದರೇ ಅಥವಾ ಇವರಂತೆ ಇರುವವರು ಮುಂದುವರಿದರೇ? ಇದು ಬಹಳ ಮಹತ್ವದ ಪ್ರಶ್ನೆ. ಯಾಕೆಂದರೆ ಇವರು ಬದಲಾಗದೆ ಇನ್ನಾವ ಬದಲಾವಣೆ ಸಾಧ್ಯ?

ADVERTISEMENT

ಅದುವರೆಗೂ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರತಿಪಾದಿಸಿದ ಸುಧಾರಣಾ ಸಿದ್ಧಾಂತವು ಮುಂದೆ ಸರ್ಕಾರಗಳ ನೀತಿಯಾಗಿ ಚಲಾವಣೆಗೆ ಬಂದಿತೇ? ಸುಧಾರಣೆಯ ಅಂಶಗಳನ್ನು ಜನಮನದೊಳಗೆ ಅಂತರ್ಗತಗೊಳಿಸಲು ಕಾರ್ಯಪಡೆ ಸಿದ್ಧವಾಯಿತೇ? ಅದು ನಾವು ಅನುಸರಿಸಲೇಬೇಕಾದ ಜೀವನ ಕ್ರಮ ಎಂಬ ನಂಬಿಕೆ ಪಸರಿಸಲು ನಮ್ಮ ಶಿಕ್ಷಣ ಕ್ರಮಕ್ಕೆ ಸಾಧ್ಯವಾಯಿತೇ? ಕೊನೆಯ ಪಕ್ಷ ಮನಃಸ್ಥಿತಿ ಬದಲಾಯಿತೇ? ಅಥವಾ ಬರೀ ಕಾನೂನಿನ ಭೀತಿಯಷ್ಟೇ ಆಗಿ, ‘ಒಳಗೆ ಕುದಿ ಹೊರಗೆ ವಿಧಿ’ ಎಂಬಂತೆ ಅದೂ ಟೋಪಿ ಧರಿಸಿತೇ?

ಹಲವರು ಈ ಕುದಿ ಹೊರಬರುವುದಕ್ಕೆ ಸೂಕ್ತ ಸಮಯವನ್ನು ಕಾಯುತ್ತಿದ್ದಾರೆ ಎಂಬುದು ಇಂದಿನ ವಾಸ್ತವವೂ ಆಗಿದೆಯಲ್ಲವೇ? ಇಷ್ಟಾಗಿಯೂ ಭಾರತವು ಹೊಂದಿದ ಸಂವಿಧಾನದ ಕಾರಣದಿಂದ ಮತ್ತು ಇವೆಲ್ಲದರ ನಡುವೆಯೂ ಕಲ್ಯಾಣ ರಾಜ್ಯದ ಕಲ್ಪನೆಯು ಸಂಪೂರ್ಣ ಅಳಿಯದ ಕಾರಣದಿಂದ ಸಾಮಾನ್ಯ ಭಾರತೀಯರ ಸ್ಥಿತಿಯಲ್ಲಿ ಹಲವು ರೀತಿಯ ಪಲ್ಲಟಗಳು ಕಾಣಿಸಿಕೊಂಡವು. ಸರ್ಕಾರಿ ಶಾಲೆಗಳಲ್ಲಿ ಪಡೆದುಕೊಂಡ ಸಮಾನ ಶಿಕ್ಷಣ, ಚಿಕ್ಕಪುಟ್ಟ ಉದ್ಯೋಗಗಳು, ಕಾನೂನಿನ ಮೂಲಕವಾದರೂ ಸಿಕ್ಕಿದ ಸಣ್ಣ ಮಟ್ಟದ ಸಮಾನತೆ, ಆಸ್ತಿ ಹಂಚಿಕೆ, ಹುಟ್ಟೂರಿನಿಂದ ಆಚೆಗೂ ಪಡೆದುಕೊಳ್ಳಬಹುದಾದ, ಕಟ್ಟಿಕೊಳ್ಳಬಹುದಾದ ಬದುಕಿನ ಸಾಧ್ಯತೆಗಳು, ಶಿಕ್ಷಣ ವಲಯ, ಬ್ಯಾಂಕ್‌ನಂತಹ ಕ್ಷೇತ್ರಗಳಲ್ಲಿ ತೆರೆದುಕೊಂಡ ಸರ್ಕಾರಿ ಉದ್ಯೋಗಗಳು, ಶ್ರೇಣೀಕೃತ ಸಮಾಜದಲ್ಲಿ ಕಾಣಿಸಿಕೊಂಡ ಚಲನೆಗಳು, ವಿಜ್ಞಾನದ ವಿಕಾಸದಿಂದ ದೊರಕಿದ ಆರೋಗ್ಯ ಕ್ಷೇತ್ರದ ಕ್ರಾಂತಿಕಾರಕ ಬದಲಾವಣೆಗಳು ಹೀಗೆ ಹತ್ತು ಹಲವು ಬದಲಾವಣೆಗಳಿಗೆ ತೆರೆದುಕೊಂಡ ನಮ್ಮ ಬದುಕುಗಳು ಅವುಗಳೆಡೆಗೆ ಒಂದು ಮಟ್ಟದ ಋಣಭಾರವನ್ನು ಹೊಂದಿವೆ.

ಒಂದೆಡೆ ನಂಬಿಕೆಗಾಗಿ, ಸ್ವಾಭಿಮಾನಕ್ಕಾಗಿ ಛಲ ಬಿಡದೆ ಹೋರಾಡುವ, ಜೀವ ಕೊಡುವ ಜನರು ಇರುವಂತೆಯೇ, ಇನ್ನೊಂದೆಡೆ, ತಮ್ಮ ಹಿತಾಸಕ್ತಿಗಾಗಿ ತಮ್ಮದೇ ಶತ್ರುಗಳೊಂದಿಗೆ ಕೈಜೋಡಿಸುವ, ತಮ್ಮನ್ನು ನಂಬಿದವರ ಕತ್ತು ಕುಯ್ಯುವ ಮತ್ತು ನಿರ್ಲಜ್ಜೆಯಿಂದ ತಮ್ಮ ನಡೆಗಳನ್ನು ಸಮರ್ಥಿಸಿಕೊಳ್ಳುವ ಜನರು ನಿರಂತರವಾಗಿ ಕಾಣಿಸುತ್ತಾರೆ. ಈಗಿಲ್ಲಿ ಯಾರನ್ನು ಬುದ್ಧಿವಂತರೆಂದು ಭಾವಿಸಬೇಕು? ಯಾಕೆಂದರೆ, ಯಾರು ಜೀವವನ್ನೇ ಪಣವಾಗಿಟ್ಟು ಹೋರಾಡುತ್ತಾರೋ, ಯಾರು ಪ್ರಾಮಾಣಿಕವಾಗಿ ತಮ್ಮ  ಬದುಕನ್ನು ಜನರ ಸೇವೆಗಾಗಿ ಮುಡಿಪಾಗಿಡುತ್ತಾರೋ ಅವರನ್ನು ಜನ ನೆನಪಿಟ್ಟುಕೊಳ್ಳುತ್ತಾರೆಯೇ? ಯಾವಾಗ ಒಂದು ಸಮಾಜದಲ್ಲಿ ಜನರೇ ಭ್ರಷ್ಟರಾಗತೊಡಗುತ್ತಾರೋ ಆಗ ಅಲ್ಲಿ ಯಾವ ಭರವಸೆಯೂ ಉಳಿಯುವುದಿಲ್ಲ.

ಕರ್ನಾಟಕದ ಪ್ರಾಮಾಣಿಕ ರಾಜಕಾರಣಿ ಶಾಂತವೇರಿ ಗೋಪಾಲಗೌಡರ ಪರಿಚಯ ಅವರದೇ ಶಿವಮೊಗ್ಗ ಜಿಲ್ಲೆಯ ಯುವಜನರಲ್ಲಿ ಹೆಚ್ಚಿನವರಿಗೆ ಇಲ್ಲ. ಕುದ್ಮುಲ್ ರಂಗರಾಯರು ಯಾರಿಗಾಗಿ ಹೋರಾಟ ಮಾಡಿದರು, ಯಾವುದರ ವಿರುದ್ಧ ಹೋರಾಟ ಮಾಡಿದರು ಎಂಬುದು ಮಂಗಳೂರಿನ ಫಲಾನುಭವಿಗಳಿಗೆ ನೆನಪಿರುವುದಿಲ್ಲ. ಬಹುಶಃ ಇದು ಎಲ್ಲ ಜಿಲ್ಲೆಗಳ ಕಥೆ ಇರಬೇಕು. ಆದರೆ, ಇಂತಹ ಒಳಿತಿನ ಕತೆಗಳು ಎಳೆಯರ ಮನದೊಳಗೆ ಬೆಳೆಯಬೇಕಿರುವುದು ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ತೀರಾ ಅವಶ್ಯವಾದುದು.

ಮನುಷ್ಯನ ಏಳಿಗೆಯನ್ನು ಬರೀ ವಸ್ತುಮೂಲದಿಂದ ಗುರುತಿಸುವ, ಅಳೆಯುವ, ಅದಕ್ಕಾಗಿ ಹೋರಾಡುವ ಚಿಂತನಾಕ್ರಮವನ್ನು ಪುನರ್‌ಪರಿಶೀಲಿಸುವ ಕಾಲ ಈಗ ಬಂದಿರುವಂತಿದೆ.
ಇಂದು ಮನುಷ್ಯರ ಮನಸ್ಸುಗಳನ್ನು ಕೆರಳಿಸದೆ ಏನನ್ನೂ ಪಡೆಯಲಾಗದು ಎಂಬ ಹಂತಕ್ಕೆ ಬಂದಿರುವಾಗ, ಇದಕ್ಕಾಗಿ ಹೆಣೆಯುವ ಆಟಗಳು ಮನುಷ್ಯರೊಳಗೆ ರಾಕ್ಷಸರನ್ನು ಪ್ರತಿಷ್ಠಾಪಿಸಲು ಸ್ಪರ್ಧೆಗಿಳಿದಂತೆ ಕಾಣುತ್ತಿವೆ. ಆದರೆ ಇದಕ್ಕೂ ಒಂದು ಕೊನೆ ಎನ್ನುವುದು ಇರಲೇಬೇಕಲ್ಲವೇ?

ಕೆರಳಿಸುವಿಕೆಯ ಹಿಂದೆ ಆಳುವಿಕೆಯ ಕೇಡು ಇದ್ದೇ ಇರುತ್ತದೆ. ‘ವೀ ಫಾರ್ ವೆಂಡೇಟಾ’ ಎನ್ನುವ ಕಾಮಿಕ್ ಕಾದಂಬರಿಯನ್ನು ಆಧಾರವಾಗಿಸಿಕೊಂಡ ಇಂಗ್ಲೆಂಡಿನ ಇದೇ ಹೆಸರಿನ ಸಿನಿಮಾ ಹೇಳ ಹೊರಡುವುದೂ ಇದನ್ನೇ. ಕಾಲ್ಪನಿಕ ಭವಿಷ್ಯದಲ್ಲಿ ಸರ್ವಾಧಿಕಾರಿಯು ಆಳುವಂತಾದಲ್ಲಿ ಏನಾಗಬಹುದು ಎನ್ನುವುದನ್ನು ಹೇಳುತ್ತಾ, ಆ ಸರ್ವಾಧಿಕಾರಿಗೆ ಜೊತೆ ನೀಡುವ ಭಟ್ಟಂಗಿ ಮಾಧ್ಯಮಗಳು, ಅಧಿಕಾರಿಗಳನ್ನು ಬಳಸಿಕೊಳ್ಳುತ್ತಾ, ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಆತ ಹೇಗೆ ಕಲ್ಪಿತ ಶತ್ರುಗಳನ್ನು ಹುಟ್ಟುಹಾಕಿಕೊಳ್ಳುತ್ತಾನೆ ಮತ್ತು ಇವರಿಂದಾಗಿ ದೇವರುಗಳಿಗೆ ಎಂತಹ ಆತಂಕ ಎದುರಾಗುತ್ತದೆ ಎಂಬ ಭೀತಿಯನ್ನು ಜನರೊಳಗೆ ಹುಟ್ಟಿಸಿ, ತನ್ನೆಲ್ಲ ಕೃತ್ಯಗಳಿಗೆ ಜನರ ಒಪ್ಪಿಗೆಯನ್ನು ಹೇಗೆ ಉತ್ಪಾದಿಸುತ್ತಾನೆ ಎನ್ನುವುದನ್ನೂ ಹೇಳುತ್ತದೆ. ಆದರೆ ಅಂತಹ ಕಠಿಣ ಕಾಲದಲ್ಲೂ ಪ್ರತಿರೋಧವೊಂದು ಹುಟ್ಟಿಯೇ ಹುಟ್ಟುತ್ತದೆ ಎನ್ನುವುದನ್ನೂ ಈ ಕತೆ ಹೇಳುತ್ತದೆ.

ಮುಖವಾಡವನ್ನು ಧರಿಸಿ ಊಹಾತೀತವಾಗಿ ಭ್ರಷ್ಟರನ್ನು ಚೆಂಡಾಡುವ, ವಿ ಅಕ್ಷರದಲ್ಲಿ ಗುರುತಿಸಿಕೊಳ್ಳುವ ನಾಯಕನನ್ನು ಉಗ್ರಗಾಮಿ ಎಂದು ಘೋಷಿಸಿ ಬಲಿಹಾಕಲು ಪ್ರಭುತ್ವ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಅಷ್ಟರಲ್ಲಾಗಲೇ ಆತ ಜನರ ಮನಸ್ಸನ್ನು ಪ್ರಭಾವಿಸಿ ಪ್ರತಿರೋಧಕ್ಕೆ ಸಿದ್ಧಪಡಿಸಿರುತ್ತಾನೆ. ಆತ ಧರಿಸುವ ವಿಶಿಷ್ಟ ಮುಖವಾಡವನ್ನು ಜನರು ತಾವಾಗಿಯೇ ಬಯಸಿ ಧರಿಸಿ ಮೆರವಣಿಗೆ ಬರುತ್ತಾರೆ. ಈ ಮುಖವಾಡವು ಪ್ರತಿರೋಧದ ಸಂಕೇತವೇ ಆಗುತ್ತದೆ. ಬರೀ ಸಿನಿಮಾದಲ್ಲಷ್ಟೇ ಅಲ್ಲ, ಯುರೋಪಿನ ಹಲವು ದೇಶಗಳಲ್ಲೂ ಈ ಮುಖವಾಡವು ಪ್ರತಿರೋಧದ ಸಂಕೇತವಾಗಿ ಬಳಕೆಯಾಗತೊಡಗಿದ್ದೊಂದು ವಿಶೇಷ.

ಬೌದ್ಧ ಧರ್ಮವು ಸಂಪತ್ತು, ಪ್ರಸಿದ್ಧಿ, ಅಧಿಕಾರ ಮತ್ತು ಕಾಮವು ಕೊನೆಯಿಲ್ಲದ ಮಹಾಬಯಕೆಗಳಾಗಿದ್ದು, ಇವುಗಳೇ ನಮ್ಮ ಸಂತೋಷಕ್ಕೆ ಅಡ್ಡಿ ಮಾಡುವ ಶತ್ರುಗಳು ಎನ್ನುತ್ತದೆ (ಆದರೆ ನಾವಾದರೋ ಇವುಗಳನ್ನೇ ನಮ್ಮ ಸಂತೋಷದ ಕೀಲಿಕೈಗಳು ಎಂದು ಭಾವಿಸಿದ್ದೇವೆ). ಇವು ನಮ್ಮ ಸಂತೋಷಕ್ಕೆ ಅಡ್ಡಿ ಮಾಡದಂತಿರಲು ನಾವು ನಮ್ಮ ಮನಸ್ಸಿನ ತಳದಲ್ಲಿರುವ ಒಳ್ಳೆಯ ಬಿತ್ತುಗಳಾದ ಆತ್ಮವಿಶ್ವಾಸ, ನಂಬಿಕೆ, ಶ್ರದ್ಧೆ, ಮನಃಪೂರ್ವಕತೆ, ಏಕಾಗ್ರತೆ, ಒಳನೋಟಗಳಿಗೆ ನೀರೆರೆದು ಮೇಲಕ್ಕೆ ತಂದು, ಕೆಟ್ಟ ಬಿತ್ತುಗಳಾದ ಕೋಪ, ಹಿಂಸೆ, ದ್ವೇಷದಂತಹವನ್ನು ತಳಕ್ಕೆ ಕಳಿಸಿದರೆ, ಸಂತೋಷದ ತಳಹದಿ ಸಿದ್ಧವಾಗುತ್ತದೆ. ಹಾಗೆಯೇ ದೇವರನ್ನು ಕಾಣುವುದೆಂದರೆ, ತನ್ನೊಳಗನ್ನು ನೋಡಿಕೊಳ್ಳುವುದು, ಮನುಷ್ಯರೊಳಗೆ ಅರಸುವುದು ಎಂದು ಬುದ್ಧ ಹೇಳುತ್ತಾನೆ. ಬಹುಶಃ ಇದನ್ನು ಅರಿತ ದಿನ ಟೋಪಿ ಬದಲಿಸುವ ಆಯಾಸವೂ ಕೊನೆಗೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.