ಇತಿಹಾಸದ ಚಕ್ರ ಮುಂದಕ್ಕೆ ಮಾತ್ರ ಚಲಿಸುತ್ತದೆ ಎಂಬುದು ನಮ್ಮಲ್ಲಿನ ಆಧಾರವಿಲ್ಲದ ನಂಬಿಕೆ ಮಾತ್ರ. ಸ್ವಲ್ಪ ಎಚ್ಚರ ತಪ್ಪಿದರೂ ಅದು ಹಿಮ್ಮುಖವಾಗಿ ಚಲಿಸಿ, ಪ್ರಪಾತದೆಡೆಗೆ ಸಾಗುವ ಸಾಧ್ಯತೆಗಳು ಪ್ರಖರವಾಗಿರುತ್ತವೆ. ಇಂದಿನವರ ಬಾಯಿಯಲ್ಲಿ ಹಿಂದಿನ ಅದೇ ತಾರತಮ್ಯದ, ವಿಭಜನೆಯ, ಆಯ್ದ ಶ್ರೇಷ್ಠತೆಯ, ಅಹಮ್ಮಿನ ಹೂಂಕಾರದ ಮತ್ತು ಪುರಾತನದ ಕನವರಿಕೆಯ ಮಾತುಗಳೇ ಮೊನಚುಗಳಾಗಿ ಬರುತ್ತವೆಂದರೆ ಅವರು ಅದನ್ನು ಮರುಸ್ಥಾಪಿಸುವ ಅವಕಾಶಕ್ಕಾಗಿ ಕಾದು ಕೂತಿದ್ದಾರೆ, ಹೊಂಚು ಹಾಕುತ್ತಿದ್ದಾರೆ ಎಂದೇ ಅರ್ಥ.
ಈ ಕಾರಣದಿಂದಲೇ, ಇತಿಹಾಸದ ಗಾಯಗಳನ್ನು ನೆನಪಿಸಿದರೆ, ‘ಇಲ್ಲವೇ ಇಲ್ಲ. ಅದೆಲ್ಲ ಬರೀ ಸುಳ್ಳು. ನಿಮ್ಮನ್ನು ದಿಕ್ಕು ತಪ್ಪಿಸಲು ಹೂಡುವ ತಂತ್ರ’ ಎಂದು ಅವರು ದಿಕ್ಕು ತಪ್ಪಿಸುತ್ತಿರುತ್ತಾರೆ. ಗಾಯಗೊಂಡ ತಲೆಮಾರುಗಳೇ ಮಾಯವಾದ ಮೇಲೆ ಹೊಸ ತಲೆಮಾರಿನವರ ಎದುರಿಗೆ ಮಾರೀಚನ ವೇಷ ತೊಡುತ್ತಾರೆ. ಇದುವರೆಗೂ ದೊರಕಿದ ಎಷ್ಟೋ ಬಿಡುಗಡೆಗಳನ್ನು ಮರೆಮಾಚಿ ಇಂದಿನ ವ್ಯವಸ್ಥೆಯೊಳಗಿನ ಕೆಲವು ತಪ್ಪು ನಡೆಗಳನ್ನು ನೆಪವಾಗಿಸಿಕೊಂಡು ವಿಭಜನೆಯ ತಮ್ಮ ಶಾಸನಗಳನ್ನು ಒಗ್ಗೂಡುವಿಕೆಯೆಂಬಂತೆ ಬಿಂಬಿಸಿ ಜಾರಿಗೆ ತರಲು ತುದಿಗಾಲಲ್ಲಿ ನಿಂತಿರುತ್ತಾರೆ.
ಬರೀ ಮೂವತ್ತೊಂದು ವರ್ಷಗಳ ಹಿಂದೆ ಹೀಗೊಂದು ಇತಿಹಾಸದ ಚಕ್ರ ನೋಡು ನೋಡುತ್ತಿದ್ದಂತೆಯೇ ಉರುಳುರುಳಿ ಬಿದ್ದದ್ದನ್ನು ನೆನಪಿಸಿಕೊಳ್ಳಬೇಕಾದ ಕಾಲ ಬಂದಿದೆ. ಯಾಕೆಂದರೆ ಈ ಬೆಳವಣಿಗೆಗಳು ವಿಶ್ವವ್ಯಾಪಿಯಾಗಿ ನಡೆಯುವ ಎಲ್ಲ ಲಕ್ಷಣಗಳಿವೆ. 1939ರಿಂದ ಇರಾನ್‌ನಲ್ಲಿ ಬಹಳ ಇತ್ಯಾತ್ಮಕವಾದ ಬೆಳವಣಿಗೆಗಳಾದವು. ಶಾ ರೇಹ್‌ಜಾ ಖಾನ್, ಮಹಿಳೆಯರಿಗೆ ಎಲ್ಲ ರಂಗಗಳಲ್ಲಿ ಮುಕ್ತ ಅವಕಾಶ ನೀಡಿದರು, ಉನ್ನತ ಶಿಕ್ಷಣ ಪಡೆಯುವುದನ್ನು ಪ್ರೋತ್ಸಾಹಿಸಿದರು. ತಲೆಯ ಮೇಲೆ ಸ್ಕಾರ್ಫ್ ಕೂಡ ಧರಿಸಬೇಕಾಗಿಲ್ಲ ಎಂದು ಆದೇಶಿಸಿದರು. ಇದರ ಫಲವಾಗಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬಂದರು. ಆಧುನಿಕ ಉಡುಗೆಗಳನ್ನು ಧರಿಸಿ, ಗಂಡಸರ ಜೊತೆಗೆ ಸಮಸಮವಾಗಿ ವೃತ್ತಿಯಲ್ಲಿ ಬೆರೆಯುತ್ತಾ, ವೀಕೆಂಡ್‌ಗಳಲ್ಲಿ ಪಿಕ್‌ನಿಕ್‌ಗಳನ್ನು ಮಾಡಿಕೊಂಡು ಒಂದು ಸಂತಸದ ಸಾಮಾಜಿಕ ವಾತಾವರಣ ಸೃಷ್ಟಿಯಾಗಿ ಎಲ್ಲವೂ ಚೆನ್ನಾಗಿದೆ ಎಂಬ ನಿರುಮ್ಮಳ ಭಾವ ಮೂಡಿದ ಆ ಸುಂದರ ಕಾಲವು 70ರ ದಶಕದತನಕವೂ ಮುನ್ನಡೆಯಿತು.
ಆದರೆ, ಇವನ್ನೆಲ್ಲ ನೋಡಿ ಕುದಿಗೊಂಡ ಮನಸ್ಸುಗಳು ಕಾಲಕ್ಕೆ ಕಾದಿದ್ದವು. ತಾವು ಅಧಿಕಾರ ಪಡೆಯಬೇಕೆಂದರೆ ಪ್ರತಿಚಿಂತನೆಯನ್ನು ಜನರ ಮನದೊಳಗೆ ಹರಿಬಿಡಬೇಕು. ‘ಇದು ಸ್ವರ್ಗವಲ್ಲ, ಧರ್ಮದ ವಿಡಂಬನೆ’ ಎಂದು ಬಿಂಬಿಸಬೇಕು. ತಮ್ಮ ಧರ್ಮದ ಮೇಲೆ ದಾಳಿಯಾಗುತ್ತಿದೆ ಎಂದು ಜನರೊಳಗೆ ಭಯವನ್ನು ಬಿತ್ತಬೇಕು ಎಂದು ಲೆಕ್ಕಹಾಕಿದ್ದವು. ಮಾತ್ರವಲ್ಲ, ಆಧುನಿಕತೆಯೆಂಬುದು ಎಡಪಂಥೀಯ ಚಿಂತನೆಯಾಗಿದ್ದು ಅದನ್ನು ವಿರೋಧಿಸಬೇಕು ಎನ್ನುವುದನ್ನು ಕಾರ್ಯಗತಗೊಳಿಸತೊಡಗಿದರು. ‘ನಮ್ಮ ಧರ್ಮದ ಅನನ್ಯತೆಯನ್ನು ಸ್ಥಾಪಿಸುವುದು ಎಷ್ಟು ಮುಖ್ಯ’ ಎಂಬ ಪ್ರವಚನದಿಂದ ಜನ ಕ್ರಮೇಣ ಪ್ರಭಾವಿತರಾಗತೊಡಗಿದರು.
ಮಹಿಳೆಯರೂ ಇದಕ್ಕೆ ಕೈಜೋಡಿಸಿ, ತಲೆಯ ಮೇಲೆ ಸ್ಕಾರ್ಫ್ ಧರಿಸುವುದು ತಮ್ಮ ಪರಂಪರೆ ಎಂದು ಭಾವಿಸಿದರು. 1979ರಲ್ಲಿ ದಂಗೆಯೆದ್ದು ಆಗಿನ ಸರ್ಕಾರವನ್ನು ಕೆಳಕ್ಕಿಳಿಸಿ ಬಂದ ಇಸ್ಲಾಂ ಮೂಲಭೂತವಾದಿ ಆಯತ್ ಉಲ್ಲಾ ಖಮೇನಿ ದೇಶದ ಹೆಸರನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಎಂದು ಬದಲಿಸಿ ಹೆಣ್ಣುಮಕ್ಕಳು ಬುರ್ಖಾ ಧರಿಸುವುದನ್ನು ಕಡ್ಡಾಯ ಮಾಡಿದ. ಧರ್ಮದ ಬಗೆಗೆ ವಿಮರ್ಶೆ ಮಾಡುವವರ ವಿರುದ್ಧ ಫತ್ವಾ ಹೊರಡಿಸಿದ. ಆಧುನಿಕ ರಾಷ್ಟ್ರದಿಂದ ಧಾರ್ಮಿಕ ರಾಷ್ಟ್ರವಾಗಿ ಇರಾನ್ ಪರಿವರ್ತನೆ ಆಯಿತು. ನೈತಿಕ ಪೊಲೀಸ್‌ಗಿರಿಯ ಹೆಸರಿನಲ್ಲಿ ಎಲ್ಲೆಲ್ಲೂ ಕ್ರೂರವಾಗಿ ವರ್ತಿಸುವ ಗೂಂಡಾಗಳ ಪಡೆ ಸಿದ್ಧವಾಯಿತು. ತಲೆವಸ್ತ್ರದ ಮರೆಯಿಂದ ಒಂದು ಕೂದಲು ಕಂಡರೂ ಅಂಥವಳನ್ನು ಎಳೆದಾಡಿ ದಂಡಿಸುವುದು ಹೆಚ್ಚಾಯಿತು. ಇದರ ವಿರುದ್ಧ ಅಲ್ಲಿನ ಹೆಂಗಳೆಯರು ಎರಡು ವರ್ಷಗಳಿಂದ ಆಗಾಗ ಪ್ರತಿಭಟನೆ ಮಾಡಿ ಜೈಲುಪಾಲಾಗಿ, ಕೊಲೆಯಾಗಿ ಮಾಯವಾಗುತ್ತಿದ್ದಾರೆ.
ಮೊನ್ನೆ ಮೊನ್ನೆ ರಾಜಧಾನಿ ಟೆಹರಾನಿನಲ್ಲಿ ವಿಶ್ವವಿದ್ಯಾಲಯದ ಮುಂಭಾಗದಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಹೀಗೇ ಝಂಕಿಸಿದಾಗ ಆಕೆ ಉಡುಪನ್ನು ಕಿತ್ತುಹಾಕಿ ಒಳಉಡುಪಿನಲ್ಲಿ ತಿರುಗಾಡಿ ಪ್ರತಿಭಟಿಸಿದಳು. ಅವಳಿಗೆ ತಲೆ ಸರಿ ಇಲ್ಲ ಎಂದು ಹೇಳಿ ಅವಳನ್ನು ಜೈಲಿಗೆ ಹೊತ್ತೊಯ್ದಿದ್ದಾರೆ. ಯಾವ್ಯಾವ ಚಿತ್ರಹಿಂಸೆಗೆ ಆ ಬಾಲೆ ಒಳಗಾಗಿದ್ದಾಳೋ ಲೋಕಕ್ಕೆ ಗೊತ್ತಾಗುವುದೇ ಇಲ್ಲ. ಇಂತಹ ಉಸಿರುಗಟ್ಟಿಸುವ ವಾತಾವರಣವನ್ನು ಧರ್ಮ, ದೇಶ, ಪರಂಪರೆ, ಅನನ್ಯತೆಯ ಹೆಸರಿನಲ್ಲಿ ಸೃಷ್ಟಿಸುವಾಗ ಮೊದಲು ಬಲಿಯಾಗುವುದು ಹೆಣ್ಣು ಎಂಬ ಸತ್ಯವನ್ನು ಹೇಳಿದರೆ ಎಷ್ಟೋ ಸಲ ಹೆಣ್ಣುಮಕ್ಕಳೇ ಇದನ್ನು ಒಪ್ಪುವುದಿಲ್ಲ. ಯಾಕೆಂದರೆ ಈಗೀಗ ಮಹಿಳಾ ನಾಯಕಿಯರು ಮುನ್ನೋಟವಿಲ್ಲದೇ ಅಧಿಕಾರಕ್ಕಾಗಿ, ಗೆಲುವಿಗಾಗಿ, ಕೆಲವೊಮ್ಮೆ ಇವನ್ನೆಲ್ಲಾ ನಿಜವೆಂದೇ ನಂಬಿ ನಮ್ಮ ದೇಶದಲ್ಲೂ ಹೀಗೆಲ್ಲ ಮಾತಾಡತೊಡಗಿದ್ದಾರೆ.
ತಮ್ಮಿಂದ ಯಾರು ಈ ಮಾತನ್ನು ಆಡಿಸುತ್ತಿದ್ದಾರೆ ಎಂಬುದನ್ನು ಅರಿಯಲೂ ಅವರಿಗೆ ಮುಸುಕಿದ ಮುಸುಕು ಬಿಡುತ್ತಿಲ್ಲ. ಇಂಥದ್ದೇ ಬೆಳವಣಿಗೆ ಅಫ್ಗಾನಿಸ್ತಾನದಲ್ಲೂ ಆಯಿತು. ಅಲ್ಲಿಯೂ ಹೊಸ ಬದಲಾವಣೆಗಳನ್ನು ಎಡಪಂಥೀಯವೆಂದು ಹೀಗಳೆಯಲಾಯಿತು. ಜನರನ್ನು ಎಡಪಂಥ–ಬಲಪಂಥವೆಂದು ವಿಭಜಿಸಲಾಯಿತು. ಇಸ್ಲಾಂ ರಾಷ್ಟ್ರೀಯತೆಯನ್ನಿಟ್ಟುಕೊಂಡು ಯಾವೆಲ್ಲಾ ರಾಷ್ಟ್ರಗಳು ಹೀಗೆ ನಲಿವಿಲ್ಲದ–ಸೊಗಸಿಲ್ಲದ ಸಾಮಾಜಿಕತೆಯನ್ನು ಹೇರಿದ್ದಾವೋ ಅವರನ್ನೇ ಅನುಕರಣೆ ಮಾಡುವ ಅಗತ್ಯ ಇದೆಯೇ?
ಸಂವಿಧಾನದ ಆಧಾರದಲ್ಲಿ ನಾವು ಸ್ನೇಹದ ನಗುವನ್ನು ಅನುಭವಿಸುತ್ತಿರುವುದನ್ನು ಮರೆಮಾಚಬೇಕಾಗಿದೆಯೇ? ಹಿಂದೂ ರಾಷ್ಟ್ರದ ಅಜೆಂಡಾ ಏನು ಎಂದು ಎಲ್ಲಾದರೂ ಬಹಿರಂಗವಾಗಿದೆಯೇ? ಉತ್ತರಪ್ರದೇಶದ ಮಹಿಳಾ ಆಯೋಗ ನಡೆಸಿರುವ ಮಾತುಕತೆ, ಚಿಂತನೆಯು ಆ ಅಜೆಂಡಾದ ಕೆಲವು ಲಕ್ಷಣಗಳ ಮುನ್ಸೂಚನೆಯಂತೆ ಕಾಣುತ್ತಿದೆ. ಯಾವುದಾದರೂ ಕೆಲವು ಬಿಡಿ ಘಟನೆಗಳನ್ನು ಎದುರಿಟ್ಟುಕೊಂಡು ತಮ್ಮ ಹೊಂಚು ಶುರುಮಾಡುವುದು ಇಂತಹ ಸನ್ನಿವೇಶಗಳಲ್ಲಿ ಸಾಮಾನ್ಯ ಸಂಗತಿ. ಉತ್ತರಪ್ರದೇಶದಲ್ಲಿ ದೇಶದಲ್ಲೇ ಅತಿಹೆಚ್ಚು ಸಂಖ್ಯೆಯಲ್ಲಿ ಅತ್ಯಾಚಾರಗಳಾಗುತ್ತಿರುವುದನ್ನು ಅಪರಾಧ ದಾಖಲೆಗಳ ರಾಷ್ಟ್ರೀಯ ಬ್ಯೂರೊ ವರದಿಯೇ ಹೇಳಿದೆ. ಇದನ್ನು ತಡೆಯುವ ಬಗೆಗೆ ಎಲ್ಲ ರಾಜ್ಯಗಳಲ್ಲೂ ಗಂಭೀರವಾಗಿ ಯೋಚಿಸಬೇಕಾದುದು ಅತೀ ಅವಶ್ಯಕ. ಕಾನೂನು ಸುವ್ಯವಸ್ಥೆ ವಿಫಲವಾಗಿರುವುದು ಕಣ್ಣಿಗೆ ರಾಚುವಂತಿದೆ.
ಹೀಗಿರುವಾಗ ಅಲ್ಲಿನ ಮಹಿಳಾ ಆಯೋಗವು ಹಾಸ್ಯಾಸ್ಪದ ಮಾತುಗಳನ್ನು ಆಡಿದೆ. ಬಟ್ಟೆ ಹೊಲಿಯುವ ದರ್ಜಿ, ಜಿಮ್ ತರಬೇತುದಾರ, ವಾಹನ ಚಾಲಕ... ಇಂತಹ ವೃತ್ತಿಯಲ್ಲಿರುವವರು ಅತ್ಯಾಚಾರಿಗಳ ಪಟ್ಟಿಯಲ್ಲಿದ್ದಾರೆ. ಹೀಗಾಗಿ, ‘ಮಹಿಳೆಯರ ಕೂದಲನ್ನು ಪುರುಷರು ಕತ್ತರಿಸಬಾರದು ಹಾಗೂ ಅವರು ಮಹಿಳೆಯರಿಗೆ ಬಟ್ಟೆ ಹೊಲಿಯಲು ಅಳತೆ ತೆಗೆದುಕೊಳ್ಳುವ ಕೆಲಸ ಮಾಡಬಾರದು, ಜಿಮ್‌ಗಳಲ್ಲಿ ಮಹಿಳೆಯರಿಗೆ ಮಹಿಳಾ ತರಬೇತಿದಾರರು ಇರಬೇಕು’ ಎಂದಿದ್ದಾರೆ ಆಯೋಗದ ಪ್ರಮುಖರು. ಯಾಕೋ ವಾಹನ ಚಾಲನೆಗೆ ಮಹಿಳೆಯರೇ ಇರಬೇಕು ಎಂದಿಲ್ಲ! ಅಲ್ಲದೇ, ರಾಜಕಾರಣಿಗಳ ಕುಟುಂಬದವರೂ ಅತ್ಯಾಚಾರಿಗಳ ಪಟ್ಟಿಯಲ್ಲಿರುವುದು ಇವರಿಗೆ ಮರೆತೇಹೋಗಿದೆ. ಹೀಗೇ ಮುಂದುವರಿದರೆ ಶಾಲೆ, ಬಸ್ಸು, ಮಾಲ್, ಸಿನಿಮಾ, ಮದುವೆ ಮಂಟಪ ಎಲ್ಲದರಲ್ಲೂ ಪ್ರತ್ಯೇಕ ಮಾಡಬೇಕು ಎಂದೂ ಹೇಳಬಹುದು.
ಮಾತ್ರವಲ್ಲ, ಗಲ್ಫ್ ದೇಶಗಳಲ್ಲಿ ಇರುವಂತೆ ಹುಡುಗಿಯರಿಗೆ ಶಿಕ್ಷಕಿಯರಷ್ಟೇ ಪಾಠ ಮಾಡಬೇಕಾಗಬಹುದು. ಬುರ್ಖಾ ಬದಲಿಗೆ ಗೂಂಘಟ್‌ಗಳನ್ನು ಕಡ್ಡಾಯ ಮಾಡಿ ಚಲಿಸುವ ಗೋಡೆಗಳನ್ನೇ ನಿರ್ಮಿಸಿದರೂ ಆಶ್ಚರ್ಯ ಇಲ್ಲ. ಕೊನೆಗೆ ಹೆಣ್ಣುಮಕ್ಕಳು ಗಂಡನನ್ನು ನೋಡಿಕೊಂಡಿರುವುದೇ ಭೂಷಣ ಎಂದು ಫತ್ವಾ ಹೊರಡಿಸಬಹುದು. ಈ ಗೋಡೆಗಳೊಳಗಿನ ಅತ್ಯಾಚಾರವನ್ನು ನಿಲ್ಲಿಸುವುದು ಹೇಗೆ? ಪ್ರತ್ಯೇಕತೆಯ ಈ ಚಿಗುರನ್ನು ಈಗಲೇ ಚಿವುಟಬೇಕಾಗಿದೆ. ಈಗ ಬೇಕಿರುವುದು, ಚಿಕ್ಕ ವಯಸ್ಸಿನಿಂದಲೇ ಗಂಡು ಮತ್ತು ಹೆಣ್ಣುಮಕ್ಕಳಿಗೆ ಪರಸ್ಪರರ ಬಗ್ಗೆ ಅರಿವು ಮೂಡಿಸುವುದು. ಲೈಂಗಿಕ ಶಿಕ್ಷಣ ನೀಡಿ ಅತ್ಯಾಚಾರದಂತಹ ಆಕ್ರಮಣ ಅದೆಷ್ಟು ಹೀನ ಎಂಬುದನ್ನು ಮನಗಾಣಿಸುವುದು. ಸೆಕ್ಸ್ ಬಗೆಗೆ ಎಲ್ಲವನ್ನೂ ಮುಚ್ಚಿಟ್ಟು ಹದಿಹರೆಯದಲ್ಲಿ ಇಂಟರ್‌ನೆಟ್, ಗೆಳೆಯರ ಜಾಲದಲ್ಲಿ ತಪ್ಪು ಮಾಹಿತಿ ಪಡೆದು ಅಪರಾಧಿಗಳಾಗುವುದನ್ನು ತಡೆಯುವುದು.
ಇದಕ್ಕಾಗಿ ಗಂಡುಮಕ್ಕಳ ಜೊತೆಗೆ ಹೆಂಗಸರು ಹೆಚ್ಚು ಹೆಚ್ಚು ಮಾತಾಡಬೇಕಾಗಿದೆ. ತಾನು ಪುರುಷನೆಂಬ ಅಹಮಿಕೆ, ಕುಟುಂಬ ಮತ್ತು ಸಮಾಜದಲ್ಲಿ ಪುರುಷನೇ ಪ್ರಧಾನ ಎಂಬ ಹುಸಿಭಾವವನ್ನು ಮುರಿದು ಇಬ್ಬರಿಗೂ ಸಮಾನ ಮೌಲ್ಯವಿದೆ ಎಂಬುದನ್ನು ಕಾರ್ಯರೂಪಕ್ಕೆ ತರಲು ಎಲ್ಲರೂ ಸಜ್ಜಾಗಬೇಕಿದೆ. ಪ್ರಗತಿಪರವಾಗಿ ಇರುವುದನ್ನು ಲೇವಡಿ ಮಾಡುತ್ತಾ ಇಂತಹ ಮೂಢರನ್ನೆಲ್ಲಾ ತಜ್ಞರಾಗಿಸಿದರೆ, ಪೀಠದಲ್ಲಿ ಕೂರಿಸಿದರೆ ಏನಾಗಬಹುದು ಎನ್ನುವುದಕ್ಕೆ ಉದ್ದೇಶಿತ ಈ ಪ್ರಸ್ತಾವ ಒಂದು ಜ್ವಲಂತ ನಿದರ್ಶನ. ಆದರೆ ಇದು ನಿರ್ಲಕ್ಷಿಸುವ ವಿಚಾರವಲ್ಲ, ಎಚ್ಚರಕ್ಕೇ ಎಚ್ಚರ ಬರಬೇಕಾದ ವಿಚಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.