ದೇಶದ ಪಶ್ಚಿಮ ಕರಾವಳಿಯುದ್ದಕ್ಕೂ, ಅಂದರೆ ಗುಜರಾತಿನಿಂದ ಕನ್ಯಾಕುಮಾರಿಯವರೆಗೂ ಹರಡಿರುವ ಪಶ್ಚಿಮಘಟ್ಟದ ಸಾಲು ‘ಸಹ್ಯಾದ್ರಿ ಪರ್ವತಶ್ರೇಣಿ’. ಇಲ್ಲಿರುವ ವಿಶೇಷವಾದ ಸಸ್ಯ–ಪ್ರಾಣಿ ಸಂಕುಲ ವಿಶ್ವದ ಬೇರೆಲ್ಲಿಯೂ ಕಾಣಸಿಗದು. ಈ ಪರ್ವತಸಾಲು 8–9 ಶ್ರೇಣಿಗಳಲ್ಲಿ ಹರಡಿಕೊಂಡಿದ್ದು, ಅವುಗಳ ಪೈಕಿ 3ರಿಂದ 5 ಪರ್ವತಶ್ರೇಣಿಗಳಲ್ಲಿ ಸೂಕ್ತ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಏಕೆಂದರೆ, ಇವು ಮಾನವನಿರ್ಮಿತ ವಿಕೃತಿಗಳಿಂದ ಅಪಾಯಕ್ಕೆ ಸಿಲುಕಿವೆ. ಭೂದೇವಿಯ ಸ್ತನಮಂಡಲಗಳಲ್ಲಿ ಒಂದೆಂದು ಪರಿಗಣಿತವಾಗಿರುವ ಈ ಸಹ್ಯಾದ್ರಿ ಬೆಟ್ಟಸಾಲುಗಳ ಉಳಿವು ನಮ್ಮೆಲ್ಲರ ಹೊಣೆ.
ಸಹ್ಯಾದ್ರಿ ಎಂದರೆ ದಟ್ಟಕಾಡಿನ ಬೆಟ್ಟಸಾಲುಗಳು ಮಾತ್ರವಲ್ಲ, ನಡುನಡುವೆ ಹುಲ್ಲುಗಾವಲುಗಳೂ ಇವೆ, ಶೋಲಾ ಅರಣ್ಯವಿದೆ, ಕೃಷಿಭೂಮಿ, ತರಿ ಜಮೀನುಗಳಿವೆ, ಜಲಮೂಲಗಳು, ನದಿ, ಕೆರೆ ಕೊಳ್ಳಗಳ ಉಗಮಸ್ಥಾನಗಳೂ ಇವೆ. ಸಹ್ಯಾದ್ರಿಯ ಗರ್ಭದಿಂದ ಆವಿರ್ಭವಿಸಿ ಅವೆಷ್ಟೋ ನದಿಗಳು ಹುಟ್ಟುಪಡೆಯುತ್ತವೆ. ಇವುಗಳಲ್ಲಿ ಒಂದೆರಡು ನದಿಗಳು ಅರಬ್ಬಿ ಸಮುದ್ರವನ್ನು ಸೇರಿದರೆ, ಮಿಕ್ಕುಳಿದವು ಕಿಲೊಮೀಟರುಗಟ್ಟಲೆ ಯಾನ ಮಾಡಿ ತಮ್ಮ ಸುತ್ತಲಿನ ಜನರ ಬದುಕನ್ನು ಹಸನು ಮಾಡಿ ಬಂಗಾಳಕೊಲ್ಲಿಯನ್ನು ಸೇರುತ್ತವೆ.
ಸಹ್ಯಾದ್ರಿಯ ಪರ್ವತಶ್ರೇಣಿ ಪ್ರದೇಶದ ನಿತ್ಯ ಹರಿದ್ವರ್ಣದ ಹಸಿರು ಅದೆಷ್ಟು ಮನಮೋಹಕವೆಂದರೆ, ಅದನ್ನು ಬೇರೆಲ್ಲೂ ಕಾಣುವುದು ಸಾಧ್ಯವಿಲ್ಲ. ಅಪರೂಪದ ಅಸಂಖ್ಯ ಪ್ರಾಣಿಪಕ್ಷಿಗಳಿಗೆ ಸಹ್ಯಾದ್ರಿ ತವರುಮನೆ. ವಿಶ್ವದಲ್ಲಿ ಬೇರೆಲ್ಲೂ ಕಾಣಸಿಗದ ಸುಮಾರು 300 ಸಸ್ಯ–ವೃಕ್ಷ ಪ್ರಭೇದಗಳು ಸಹ್ಯಾದ್ರಿಯ ಮಡಿಲಲ್ಲಿವೆ. ಅವುಗಳಲ್ಲಿ ನಾಗಪುಷ್ಪ, ಸಾಲುಧೂಪ, ಸೀತಾ ಅಶೋಕ, ಗೌರಿಪುಷ್ಪದಂತಹ ಅನೇಕ ವೃಕ್ಷತಳಿಗಳು ಸೇರಿವೆ. ಇಲ್ಲಿರುವ ಸಸ್ಯ-ವೃಕ್ಷಗಳು ಮಾತ್ರವಲ್ಲ ಅನೇಕಾನೇಕ ಬಳ್ಳಿಗಳಲ್ಲಿ ಇರುವ ಔಷಧೀಯ ಮೌಲ್ಯ ಅಪಾರವಾದದ್ದು. ಇಲ್ಲಿ ಏನೇನಿದೆ ಎಂಬುದರ ಬಗ್ಗೆ ಸಂಶೋಧನೆ ಮಾಡಲು ದಶಕಗಳು ಸಾಲವು.
ವಿಷಾದವೆಂದರೆ, ಇಂತಹ ಯಾವ ಸಂಗತಿಗಳನ್ನೂ ಗಮನಕ್ಕೆ ತೆಗೆದುಕೊಳ್ಳದೆ, ಪ್ರಕೃತಿಮಾತೆ ನಮಗೆ ಕೊಟ್ಟಿರುವ ಈ ಕೊಡುಗೆಯ ಮಹತ್ವವನ್ನು ಅರಿತುಕೊಳ್ಳದೆ, ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿದುರುಳಿಸಿ, ಬೆಟ್ಟಗಳನ್ನು ಪುಡಿಗಟ್ಟಿ ವಿಕೃತಿಯನ್ನು ಮೆರೆಯಲಾಗುತ್ತಿದೆ. ಈ ಮೂಲಕ ನಮ್ಮ ಸರ್ಕಾರಗಳು ಮತ್ತು ಅವರಿಂದ ಗುತ್ತಿಗೆ ಪಡೆದ ಕೆಲವು ಖಾಸಗಿ ಕಂಪನಿಗಳು ಮಾಡುತ್ತಿರುವ ಕೆಲಸ ಅಕ್ಷಮ್ಯ ಅಪರಾಧ.
ವೃಕ್ಷಗಳೆಂದರೆ ಕಣ್ಣಿಗೆ ಕಾಣುವ ದೇವರು ಎಂಬ ಪೂಜನೀಯ ಭಾವ ನಮ್ಮ ಎಲ್ಲ ಮತಪಂಥಗಳಲ್ಲೂ ಇದೆ. ಹಿಂದೂ ಧರ್ಮದಲ್ಲಿ ವೃಕ್ಷವೆಂದರೆ ದೇವರು, ಮಾತೆ. ಇಸ್ಲಾಂ ಧರ್ಮದಲ್ಲೂ ವೃಕ್ಷಕ್ಕೆ, ಪ್ರಕೃತಿಗೆ ಪವಿತ್ರ ಸ್ಥಾನವಿದೆ. ವೃಕ್ಷಗಳು ದಯಾಮಯನು ನಮಗೆ ಕೊಟ್ಟಿರುವ ಪವಿತ್ರ ಉಡುಗೊರೆಗಳು ಎಂದು ಕುರಾನ್‌ನಲ್ಲಿ ಉಲ್ಲೇಖವಿದೆ. ಜಪಾನೀಯರು ಕೂಡ ಮರಗಳನ್ನು, ಪರ್ವತಗಳನ್ನು ದೇವತೆಗಳೆಂದು ಪೂಜಿಸುತ್ತಾ ಬಂದಿದ್ದಾರೆ. ಎಂತಹ ವಿಪರ್ಯಾಸವೆಂದರೆ, ನಮ್ಮ ಸಹ್ಯಾದ್ರಿಯ ಭಾಗವಾಗಿರುವ ಕುದುರೆಮುಖ ಪರ್ವತಶ್ರೇಣಿಯನ್ನು ಕಬ್ಬಿಣದ ಅದಿರಿಗಾಗಿ ಪುಡಿ ಮಾಡಿ ಬೆತ್ತಲೆ ಮಾಡಿದ್ದೇವೆ. ಅಲ್ಲಿನ ಹಸಿರು ಬಹುತೇಕ ಮಾಯವಾಗಿದೆ, ಜಲಮೂಲಗಳಿಗೆ ಅಡಚಣೆಯಾಗಿದೆ, ನೀರು, ಗಾಳಿ ಕಲುಷಿತವಾಗಿವೆ.
ಎರಡು ದಶಕಗಳಿಂದ ಸಹ್ಯಾದ್ರಿಯುದ್ದಕ್ಕೂ ಮರಗಳ ಮಾರಣಹೋಮ ನಿರಂತರವಾಗಿ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಿಗೆ, ರೈಲು ಮಾರ್ಗಗಳಿಗೆ, ಉಷ್ಣವಿದ್ಯುತ್ ಸ್ಥಾವರಗಳಿಗೆ... ಹೀಗೆ ನಾನಾ ಉದ್ದೇಶಗಳಿಗಾಗಿ ಆಗಿರುವ ಹಾನಿಯು ಲೆಕ್ಕಕ್ಕೆ ಸಿಗುವುದಿಲ್ಲ. ಸಹ್ಯಾದ್ರಿಯೆಡೆಗೆ ನಾವು ತೋರಿರುವ ಉಗ್ರ ಕ್ರೌರ್ಯದ ಕಾರಣದಿಂದ ಇಂದು ಮುಂಗಾರು ಮಳೆಯೂ ಹಿಂದಿನಂತೆ ಆಗುತ್ತಿಲ್ಲ. ಮೇಘಸ್ಫೋಟ ಆಗುತ್ತಿದೆ. ನಿಯಮಿತವಾಗಿ ಮಳೆಗಾಲಕ್ಕೆ ಸೀಮಿತವಾಗಿದ್ದ ಮಳೆ ವರ್ಷಪೂರ್ತಿ ಸುರಿಯುತ್ತಿದೆ. ಹವಾಮಾನ ಬದಲಾಗಿದೆ, ಭೂಕುಸಿತಕ್ಕೂ ಕಾರಣವಾಗಿದೆ, ಕೃಷಿಕರ ಬದುಕು ತತ್ತರಿಸಿದೆ. ಪ್ರಕೃತಿಯ ಮೂಲಸ್ವರೂಪಕ್ಕೆ ಧಕ್ಕೆ ಮಾಡಿ ಅವೈಜ್ಞಾನಿಕವಾಗಿ ಏನನ್ನೇ ಮಾಡಿದರೂ ಅದರ ಘೋರ ಪರಿಣಾಮವನ್ನು ಅನುಭವಿಸಬೇಕಾದವರು ನಾವೇ ಎಂಬ ಕಿಂಚಿತ್ ಅರಿವೂ ನಮಗೆ ಮತ್ತು ನಮ್ಮನ್ನಾಳುವ ಅಧಿಕಾರಸ್ಥರಿಗೆ ಬರಲಿಲ್ಲವಲ್ಲ ಎಂಬುದು ವಿಪರ್ಯಾಸ.
ಪ್ರಾಕೃತಿಕ ಹಾನಿ ಮತ್ತು ಅದರಿಂದ ಆಗಿರುವ, ಆಗಬಹುದಾದ ಪ್ರತಿಕೂಲ ಪರಿಣಾಮಗಳ ಮೌಲ್ಯಮಾಪನ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೋತಿವೆ. ಸರ್ಕಾರಗಳು ಹಮ್ಮಿಕೊಳ್ಳುತ್ತಿರುವ ಅನೇಕ ಕಾಮಗಾರಿಗಳು ಪರಿಸರ ನಾಶಕ್ಕೆ ಕಾರಣವಾಗುತ್ತಿವೆ. ಅಭಿವೃದ್ಧಿಯ ಹೆಸರಿನಲ್ಲಿ ಸ್ವಂತಕ್ಕೆ ಏನೇನು ಮಾಡಿಕೊಳ್ಳಬಹುದು ಎಂಬ ಚಿಂತನೆಯಲ್ಲೇ ಮುಳುಗಿರುವ ರಾಜಕಾರಣಿಗಳು, ಭ್ರಷ್ಟತೆಯನ್ನೇ ಮೈತುಂಬಾ ಹೊದ್ದಿರುವ ಅಧಿಕಾರಿ ವರ್ಗದವರು ಪರಿಸರವನ್ನು ಹಾಳುಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಸಹ್ಯಾದ್ರಿಯ ದೇಹದ ಭಾಗವನ್ನು ಕೊಚ್ಚಿ, ರಕ್ತಸಿಕ್ತಗೊಳಿಸಿ ಮಾಡಿರುವ ಲೂಟಿ, ಮೂಲಸೌಕರ್ಯದ ಹೆಸರಿನಲ್ಲಿ ನಡೆಸಿರುವ ವಿಕೃತಿಗಳು ಒಂದೆರಡಲ್ಲ. ಸಹ್ಯಾದ್ರಿ ತಾಯಿಗೆ ಆಗಿರುವ ಗಾಸಿಯನ್ನು ನೋಡಿ ನಾವೆಲ್ಲ ಏನೂ ಮಾಡಲಾಗದೆ ಕೈಕಟ್ಟಿ ಕುಳಿತಿದ್ದೇವೆ, ಮೂಕರಾಗಿದ್ದೇವೆ. ಆಹಾರ, ಜಲ ಮತ್ತು ಉತ್ತಮ ಆರೋಗ್ಯವನ್ನು ಹೊಂದುವ ದಿಸೆಯಲ್ಲಿ ನಮ್ಮ ದೇಶಕ್ಕೆ ಪ್ರಕೃತಿ ಪುನಃಸ್ಥಾಪನೆ ಕಾಯ್ದೆಯ ಅಗತ್ಯವಿದೆ ಮತ್ತು ಅದನ್ನು ಬಹಳ ಕಟ್ಟುನಿಟ್ಟಿನಿಂದ ಜಾರಿಗೆ ತರಬೇಕಿದೆ.
ಭೂಮಿತಾಯಿಯ ಅವನತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಕೊಳ್ಳೆ ಹೊಡೆಯುವಿಕೆ ಭಾರತಕ್ಕೆ ಮಾತ್ರ ಸೀಮಿತವಾದ ಸಂಗತಿಯಲ್ಲ. ಅದು ವಿಶ್ವದಾದ್ಯಂತ ನಡೆಯುತ್ತಿದೆ. ನಮ್ಮ ದೇಶದ ಹಿಮಾಲಯ, ವಿಂಧ್ಯಾ, ಅರಾವಳಿ, ಪಶ್ಚಿಮ-ಪೂರ್ವಘಟ್ಟ ಪ್ರದೇಶಗಳ ಮಹತ್ವವೆಂದರೆ, ಅವು ಸಾಗರಪ್ರವಾಹವನ್ನು ನಿಯಂತ್ರಿಸುತ್ತವೆ. ಈ ಪರ್ವತಸಾಲುಗಳಿಗೆ ಸಂಬಂಧಿಸಿದಂತೆ ಸಣ್ಣ ವಿಕೃತಿ ನಡೆದರೂ ಅದರ ಪರಿಣಾಮಗಳು ಭೀಕರವಾಗಿರುತ್ತವೆ. ಇಂತಹ ಸಂಗತಿಗಳನ್ನು ಅರಿತುಕೊಂಡು ಐರೋಪ್ಯ ಒಕ್ಕೂಟವು ಈ ವರ್ಷ ಜಾರಿಗೆ ತಂದಿರುವ ಹೊಸ ಕಾನೂನು ಒಂದು ಮಾದರಿಯಾಗಿದೆ. ಮಾನವನಿರ್ಮಿತ ವಿಪತ್ತುಗಳನ್ನು ನಿಗ್ರಹಿಸಿ ಪ್ರಕೃತಿಯನ್ನು ಯಥಾಸ್ಥಿತಿಯಲ್ಲಿ ಉಳಿಸುವಲ್ಲಿ ಯುರೋಪಿಯನ್ನರು ಅನುಷ್ಠಾನಕ್ಕೆ ತಂದಿರುವ ಈ ಕಾನೂನು ಒಂದು ಉತ್ತಮ ಉಪಕ್ರಮ. ನಮ್ಮಲ್ಲೂ ಇಂತಹದ್ದೊಂದು ಕಾನೂನಿನ ಅಗತ್ಯವಿದೆ. ಪ್ರಕೃತಿಯ ಪುನಃಸ್ಥಾಪನೆ ಎಂದರೆ, ಈಗ ಆಗಿರುವ ವಿಕೃತಿಗಳನ್ನು ಸರಿಪಡಿಸುವುದರ ಜೊತೆಗೆ ಇನ್ನು ಮುಂದೆ ಯಾವುದೇ ಪರಿಸರಹಾನಿ ಆಗದಂತೆ ಕ್ರಮ ವಹಿಸುವುದು.
ಈಗ ಆಗಿರುವ ಪ್ರಕೃತಿ ಹಾನಿಯ ಶೇ 20ರಷ್ಟನ್ನು 2030ರ ವೇಳೆಗೆ ಸರಿಪಡಿಸುವುದು ಮತ್ತು 2050ರ ವೇಳೆಗೆ ಶೇ 50ರಷ್ಟನ್ನು ಸರಿಪಡಿಸಿ ಮರುಸ್ಥಾಪಿಸುವುದು. ಇದು ಒಕ್ಕೂಟ ಹಾಕಿಕೊಂಡಿರುವ ಗುರಿ. ನಮ್ಮ ದೇಶದಲ್ಲೂ ಇಂತಹದ್ದೊಂದು ಗುರಿ ಹಾಕಿಕೊಂಡು ಸಾಗುವ ಮೂಲಕ, ಈಗಾಗಲೇ ಸಕಲ ಚರಾಚರ ಜೀವಜೀವಿಗಳಿಗೆ ಆಗಿರುವ ಹಾನಿಯನ್ನು ಸರಿಪಡಿಸುವುದು ಸರ್ಕಾರ ಮತ್ತು ನಮ್ಮೆಲ್ಲರ ಜವಾಬ್ದಾರಿ.
ಇತ್ತೀಚಿನ ದಶಕಗಳಲ್ಲಿ ಆಗಿರುವ ಪರಿಸರ ಹಾನಿಯ ಪ್ರಮಾಣ ಗಂಭೀರ ಸ್ವರೂಪದ್ದಾಗಿದ್ದು, ಇದು ಹೀಗೆಯೇ ಮುಂದುವರಿದಲ್ಲಿ, ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ.
ನಮ್ಮ ದೇಶದಲ್ಲಿ ‘ಗ್ರೀನ್ ಇಂಡಿಯಾ’ ಎಂಬ ಘೋಷವಾಕ್ಯ ತುಂಬಾ ಜನಪ್ರಿಯ. ಪ್ರಧಾನಮಂತ್ರಿ ಕೃಷಿ ಯೋಜನೆ, ಸಮಗ್ರ ಪಶ್ಚಿಮಘಟ್ಟ ಪುನಃಸ್ಥಾಪನೆ ಯೋಜನೆ ಎಲ್ಲವೂ ಬರೀ ಕಾಗದ, ಕಡತಗಳಿಗೆ ಸೀಮಿತವಾಗಿರುವುದನ್ನು ನಾವೆಲ್ಲ ಕಾಣುತ್ತಿದ್ದೇವೆ. ನಮ್ಮಲ್ಲಿ ಆಗಿರುವ ಪ್ರಕೃತಿಹಾನಿಯನ್ನು ತಡೆಗಟ್ಟಲು ಬಲವಾದ ಕಾಯ್ದೆ ಬೇಕು, ಅದರ ಮೂಲಕ ವಾರ್ಷಿಕ ಗುರಿಗಳನ್ನು ನಿಗದಿಪಡಿಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಿದೆ. ನದಿಗಳು, ಪರ್ವತಗಳು, ನೈಸರ್ಗಿಕ ಅರಣ್ಯಗಳನ್ನು ಕಾಪಾಡುವ, ಅವುಗಳನ್ನು ಮರುಸ್ಥಾಪನೆ ಮಾಡುವ ಕೆಲಸ ಆದ್ಯತೆಯ ಮೇಲೆ ನಡೆಯಬೇಕಿದೆ.
ಇಂತಹದ್ದೊಂದು ಕ್ರಮ ಕಟ್ಟುನಿಟ್ಟಾಗಿ ಜಾರಿಗೆ ಬರದೇ ಇದ್ದಲ್ಲಿ, ನಮ್ಮ ಪ್ರಾಕೃತಿಕ ಸಂಪತ್ತನ್ನು ಉಳಿಸಿಕೊಳ್ಳುವುದು, ಮುಂದಿನ ಪೀಳಿಗೆಯ ಬದುಕು ಹಸನಾಗುವಂತೆ ನೋಡಿಕೊಳ್ಳುವುದು ಸಾಧ್ಯವಿಲ್ಲ. ವಿಶ್ವದ ಅತ್ಯಂತ ವಿಶಿಷ್ಟ ಜೈವಿಕ ವೈವಿಧ್ಯ ಪ್ರದೇಶವಾದ ಸಹ್ಯಾದ್ರಿ ಉಳಿಯಬೇಕು. ಆ ದಿಸೆಯಲ್ಲಿ ಕಾರ್ಯಪ್ರವೃತ್ತರಾಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.