ADVERTISEMENT

ಸಂಗತ ಅಂಕಣ| ಬರಲಿದೆ ಇನ್ನೊಂದು ಹಗಲು ನಕ್ಷತ್ರ!

400 ವರ್ಷಗಳಿಂದ ನಮಗೆ ಕಾಣಸಿಗದ ನಕ್ಷತ್ರಸ್ಫೋಟದ ಅಪೂರ್ವ ಅನುಭವಕ್ಕೆ ಸಿದ್ಧರಾಗೋಣ

ಬಿ.ಎಸ್.ಶೈಲಜಾ
Published 10 ಜೂನ್ 2023, 0:12 IST
Last Updated 10 ಜೂನ್ 2023, 0:12 IST
   

ಹಗಲಿಗೆ ಒಂದೇ ನಕ್ಷತ್ರ- ನಮ್ಮ ಸೂರ್ಯ. ಅದರ ಪ್ರಖರತೆಯಲ್ಲಿ ಇನ್ನುಳಿದ ನಕ್ಷತ್ರಗಳೆಲ್ಲ ಕಾಣದಂತಾಗುತ್ತವೆ. ಇದು ಹೊಸ ವಿಷಯವೇನಲ್ಲ. ಆದರೆ ಹಿಂದೆ ಹಗಲಿನಲ್ಲೂ ಜನ ಇನ್ನೊಂದು ನಕ್ಷತ್ರವನ್ನು ಕಂಡಿದ್ದರು (1054, 1572 ಮತ್ತು 1604ರಲ್ಲಿ). ಸ್ತಂಭೀಭೂತರಾದವರು ಕಂಡದ್ದನ್ನು ಬರೆದಿಟ್ಟಿದ್ದರಿಂದ ನಮಗಿಂದು ಅದು ತಿಳಿದಿದೆ. ಆದರೆ ಹಾಗೆ ಇನ್ನೊಂದು ನಕ್ಷತ್ರ ಹೇಗೆ ಕಾಣಲು ಸಾಧ್ಯ? ಅದು ಯಾವುದು?

ಈ ಬಗೆಯ ನಕ್ಷತ್ರಸ್ಫೋಟಕ್ಕೆ ಸೂಪರ್ನೋವಾ ಎಂಬ ಹೆಸರಿದೆ. 400 ವರ್ಷಗಳಿಂದ ಇಂತಹ ಒಂದು ನೋಟ ಜನಸಾಮಾನ್ಯರಿಗೆ ಸಿಕ್ಕಿರಲಿಲ್ಲ. ಈಗ ಒಂದು ಪರಿಚಿತ ನಕ್ಷತ್ರವು ಸ್ಫೋಟಕ್ಕೆ ಅಣಿಯಾಗುತ್ತಿರುವ ಸೂಚನೆ ಸಿಕ್ಕಿದೆ.

ರಾತ್ರಿಯ ಆಕಾಶದಲ್ಲಿ ಬಹಳ ಆಕರ್ಷಕವಾಗಿ ಕಾಣುವ ನಕ್ಷತ್ರಪುಂಜ ಒರೈಯನ್ ಅಥವಾ ಮಹಾವ್ಯಾಧ. ಇದರಲ್ಲಿದೆ ಕೆಂಪು ದೈತ್ಯ ಆರಿದ್ರಾ (ಬೆಟೆಲ್‌ಜ್ಯೂಸ್). ಅದರ ವ್ಯಾಸ ನಮ್ಮ ಸೌರಮಂಡಲದ ಗುರುಗ್ರಹದ ಕಕ್ಷೆಯಷ್ಟು. ಆದ್ದರಿಂದ ಅದು ದೈತ್ಯ ಎಂಬ ಬಿರುದನ್ನು ಪಡೆದುಕೊಂಡಿದೆ. ಯಾವುದೇ ದೊಡ್ಡ ದೂರದರ್ಶಕದಲ್ಲಿಯೂ ಅದು ಒಂದು ಚುಕ್ಕೆಯಂತೆಯೇ ಕಾಣುತ್ತದೆ. ಆದರೂ ಒಂದು ನೂರು ವರ್ಷಗಳ ಹಿಂದೆಯೇ ವ್ಯತೀಕರಣ ವಿಧಾನದಿಂದ ನಕ್ಷತ್ರ ವ್ಯಾಸವನ್ನು ಅಳತೆ ಮಾಡುವ ವಿಧಾನವನ್ನು ಪರಿಶೀಲಿಸಲು ಈ ನಕ್ಷತ್ರವೇ ಉದಾಹರಣೆಯಾಗಿತ್ತು.

ADVERTISEMENT

ಬರಿಗಣ್ಣಿನಿಂದ ಸುಲಭವಾಗಿ ಗುರುತಿಸಬಹುದಾದ್ದರಿಂದ ವೀಕ್ಷಕರು ಅದರ ಪ್ರಕಾಶದಲ್ಲಿ ಸಣ್ಣ ಸಣ್ಣ ಪ್ರಮಾಣದ ವ್ಯತ್ಯಾಸಗಳನ್ನು ಗಮನಿಸಿದ್ದಾರೆ. ಇದರಲ್ಲೊಂದು ನಿಯತಕಾಲಿಕತೆ ಇದೆ ಎಂಬುದನ್ನು ಈಚಿನ ಅಧ್ಯಯನ ತೋರಿಸಿದೆ. ಸುಮಾರು 6 ವರ್ಷಗಳ ಏರಿಳಿತವಿದೆ ಎಂದು ಈ ದಾಖಲೆಗಳು ತೋರಿಸುತ್ತವೆ.

ಬೆಟೆಲ್‌ಜ್ಯೂಸ್ 2019ರ ಡಿಸೆಂಬರ್‌ನಲ್ಲಿ ಸುದ್ದಿ ಮಾಡಿತು. ಅದರ ಪ್ರಕಾಶ ಕಡಿಮೆಯಾಯಿತು. ಎರಡು ಮೂರು ತಿಂಗಳಲ್ಲಿ ಪುನಃ ಪ್ರಕಾಶಮಾನವಾಯಿತು. ಆಗಸ್ಟ್ 2020ರಲ್ಲಿ ಮತ್ತೆ ಪ್ರಕಾಶ ಕುಂದಿತು. ಹಳೆಯ ನಿಯತಕಾಲಿಕ ವ್ಯತ್ಯಾಸಗಳ ಸರಣಿಗಳ ಆಧಾರದ ಮೇಲೆ ಲೆಕ್ಕ ಹಾಕಿದ ತಜ್ಞರು, 2022ರ ಜುಲೈನಲ್ಲಿ ಪುನಃ ಅದರ ಪ್ರಕಾಶ ಕುಂದಬಹುದು ಎಂದಿದ್ದರು. ಆದರೆ ಈಗ ಅದು ಮತ್ತೆ ಸತತವಾಗಿ ಪ್ರಕಾಶ ಹೆಚ್ಚಿಸಿಕೊಳ್ಳುತ್ತಿದೆ. ಪರೀಕ್ಷಿಸಬೇಕೆ? ಸ್ವಲ್ಪ ತಾಳೆ ಇರಲಿ. ಈಗದು ಸೂರ್ಯನೊಡನೆ ಉದಯಿಸಿ ಕಂತುತ್ತಿದೆ. ಇನ್ನೊಂದು ತಿಂಗಳ ನಂತರ ಮುಂಜಾವಿನಲ್ಲಿ ಪೂರ್ವದಲ್ಲಿ ಕಾಣುತ್ತದೆ.

ಅನೇಕ ಹವ್ಯಾಸಿ ವೀಕ್ಷಕರು ಒದಗಿಸಿದ್ದ ಪ್ರಕಾಶದ ಅಳತೆಗಳಲ್ಲಿ ಪುರ್ಕಿಂಜೆ ಪರಿಣಾಮದ ಪ್ರಭಾವ ಇದೆಯೇ ಎಂಬುದನ್ನು ಪರಿಶೀಲಿಸಲಾಯಿತು. ಕೆಂಪು ಬಣ್ಣದ ಗುಲಾಬಿ ಹೂವು ಹಗಲಿನಲ್ಲಿ ಕಾಣುವಂತೆ ಚಂದ್ರನ ಬೆಳಕಿನಲ್ಲಿ ಕಾಣುವುದಿಲ್ಲ ಎಂಬುದನ್ನು ನೀವು ಗಮನಿಸಿರಬೇಕು. ಇದಕ್ಕೆ ಕಾರಣ ನಮ್ಮ ಕಣ್ಣಿನೊಳಗಿನ ಸಂವೇದಕಗಳು. ಪ್ರಕಾಶಮಾನವಾದ ಬೆಳಕಿನಲ್ಲಿ ಅವು ನಮಗೆ ತೋರಿಸಿಕೊಡುವ ಬಣ್ಣವು ಮಂದ ಬೆಳಕಿನಲ್ಲಿಯ ಬಣ್ಣಕ್ಕಿಂತ ಗಾಢವಾಗಿರುತ್ತದೆ. ಇದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ ಝೆಕ್ ವಿಜ್ಞಾನಿ ಯಾನ್ ಎವಾಂಜೆಲಿಸ್ಟ ಪುರ್ಕಿಂಜೆ, ಮಂದ ಬೆಳಕಿನಲ್ಲಿ ನೀಲಿ ಸಂವೇದಕಗಳು ಕೆಂಪು ಸಂವೇದಕಗಳಿಗಿಂತ ಹೆಚ್ಚು ಕ್ರಿಯಾಶೀಲವಾಗುತ್ತವೆ ಎಂದು ತೋರಿಸಿಕೊಟ್ಟರು.

ಸೂರ್ಯಾಸ್ತದಂತಹ ಸಂಜೆಯ ದೃಶ್ಯಗಳನ್ನು ಚಿತ್ರಿಸುವ ಕಲಾವಿದರಿಗೆ ಈ ಅನುಭವವಾಗಿರುತ್ತದೆ. ಹೀಗೆ ನಮ್ಮ ಕಣ್ಣಿನ ಸಂವೇದಕಗಳು ಕಡಿಮೆ ಬೆಳಕಿನಲ್ಲಿ ಕೆಂಪುಬಣ್ಣಕ್ಕೆ ಕಡಿಮೆ ಸ್ಪಂದಿಸಿರುವುದರಿಂದ ಕೆಂಪು ನಕ್ಷತ್ರವಾದ ಆರಿದ್ರಾ ಅನೇಕರ ಕಣ್ಣಿಗೆ ಮಂಕಾಗಿ ಕಂಡಿರಬಹುದು ಎಂಬುದು ತರ್ಕ. ಆದರೆ ಕ್ಯಾಮೆರಾದಂತಹ ಉಪಕರಣಗಳೂ ಪ್ರಕಾಶ ಕುಂದಿದ್ದು ನಿಜ ಎಂದು ರುಜುವಾತುಪಡಿಸಿದವು.

ಈ ನಕ್ಷತ್ರದ ಅಂತರಾಳದ ವಿದ್ಯಮಾನಗಳನ್ನು ನಾವು ನೇರವಾಗಿ ತಿಳಿಯುವಂತಿಲ್ಲ. ನಮ್ಮಿಂದ 548 ಜ್ಯೋತಿರ್ವರ್ಷ ದೂರದಲ್ಲಿರುವ ಈ ನಕ್ಷತ್ರ ಬಹಳಷ್ಟು ಪ್ರಮಾಣದಲ್ಲಿ ವಸ್ತುವನ್ನು ಚಿಮ್ಮಿಸಿ ಬಹಳ ವಸ್ತುವನ್ನು ಕಳೆದುಕೊಳ್ಳುತ್ತದೆ. ಸೂರ್ಯ ಕೂಡ ಸೌರ ಮಾರುತದ ಮೂಲಕ ವಸ್ತುವನ್ನು ಕಳೆದುಕೊಳ್ಳುತ್ತದೆ. ಆದರೆ ಬೆಟೆಲ್‌ಜ್ಯೂಸ್ ನಕ್ಷತ್ರ ಇದರ ಲಕ್ಷ ಪಟ್ಟು ಹೆಚ್ಚು ವಸ್ತುವನ್ನು ಚಿಮ್ಮಿಸುತ್ತದೆ. ಹಾಗಾಗಿ ಆ ವಸ್ತು ದೂಳಿನ ಮೋಡದಂತೆ ನಕ್ಷತ್ರವನ್ನು ಆವರಿಸಿರಬೇಕು ಎಂಬುದು ವಿವರಣೆ.

ಹೀಗೆ ಇತರ ನಕ್ಷತ್ರಗಳಿಗೂ ಆಗುತ್ತಿರಬಹುದು. ಆದರೆ ಆರಿದ್ರಾ ನಕ್ಷತ್ರದಲ್ಲಿ ಈ ಬಗೆಯ ಉತ್ಸರ್ಜನೆ ಬಹಳ ತ್ವರಿತವಾಗಿ ನಡೆಯುತ್ತಿದೆ. ದೈತ್ಯ ಹಂತವಾದ ಮೇಲೆ ಸೂಪರ್‌ನೋವಾ ಸ್ಫೋಟ ಆಗಿ ನಕ್ಷತ್ರದ ಅವಸಾನವಾಗುತ್ತದೆ. ಹೈಡ್ರೋಜನ್‌ ಸಂಲಯನದಿಂದ ಹೀಲಿಯಂ, ಹೀಲಿಯಂ ಸಂಲಯನದಿಂದ ಕಾರ್ಬನ್‌- ಹೀಗೆ ಹಂತ ಹಂತವಾಗಿ ನಡೆಯುವ ಸಂಲಯನ ಕ್ರಿಯೆಗಳಲ್ಲಿ ಈ ನಕ್ಷತ್ರ ಯಾವ ಹಂತವನ್ನು ತಲುಪಿದೆ? ಆ ಹಂತದಲ್ಲಿ ಕೇಂದ್ರದಲ್ಲಿ ನ್ಯೂಟ್ರಾನ್ ನಕ್ಷತ್ರ ಉಂಟಾಗುತ್ತದೆಯೋ, ಕಪ್ಪುಕುಳಿ ಉಂಟಾಗುತ್ತದೆಯೋ ಎಂಬುದನ್ನು ಇಂತಹ ಉತ್ಸರ್ಜನೆಯ ವಿದ್ಯಮಾನಗಳೇ ನಿರ್ಧರಿಸುವುದರಿಂದ ಆರಿದ್ರಾ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.

ಇತ್ತೀಚೆಗೆ ಪ್ರಕಟವಾದ ಅಧ್ಯಯನದ ಪ್ರಕಾರ, ಅದು ಈಗಾಗಲೇ ಕಾರ್ಬನ್‌ ಸಂಲಯನದ ಹಂತವನ್ನು ತಲುಪಿದೆ. ಮುಂದಿನ ಆಕ್ಸಿಜನ್‌, ನಿಯಾನ್‌- ಈ ಎಲ್ಲ ಹಂತಗಳೂ ನಡೆಯಬೇಕಿದೆ. ಆದರೆ ಅವುಗಳೆಲ್ಲ ಬಹಳ ಕ್ಷಿಪ್ರವಾಗಿ ನಡೆಯುವಂತಹವು. ಕ್ಷಿಪ್ರ ಎಂದರೆ ಖಗೋಳೀಯ ಅಳತೆಗಳಲ್ಲಿ ಕೆಲವೇ ತಿಂಗಳಾಗಬಹುದು, ಹತ್ತು ವರ್ಷಗಳೂ ಆಗಬಹುದು. ಕಾದು ನೋಡಬೇಕಷ್ಟೇ.

ಆಗ ನಮ್ಮ ಆಕಾಶದಲ್ಲಿ ಕನಿಷ್ಠ ಒಂದು ವರ್ಷ ಹಗಲಿನಲ್ಲಿಯೂ ಈ ನಕ್ಷತ್ರ ದರ್ಶನ ಸಾಧ್ಯ. ಅದರ ಪ್ರಕಾಶ ಗೆಲೆಲಿಯೋ ಅಥವಾ ಕೆಪ್ಲರ್‌ ಇವರು ಕಂಡದ್ದಕ್ಕಿಂತ ಬಹಳ ಹೆಚ್ಚು. ಇದನ್ನು ಊಹಿಸಿಕೊಳ್ಳಲು ಹುಣ್ಣಿಮೆಯ ಚಂದ್ರನನ್ನು ಚುಕ್ಕೆಯ ಗಾತ್ರಕ್ಕಿಳಿಸಿ. ಪ್ರಕಾಶವನ್ನು ಕುಗ್ಗಿಸಬೇಡಿ. ನೀವು ನಡುರಾತ್ರಿಯಲ್ಲೂ ಹೊರಗೆ ಕುಳಿತು ಪೇಪರ್‌ ಓದಬಹುದು ಅಥವಾ ನಿಮ್ಮ ನೆರಳನ್ನೂ ಕಾಣಬಹುದು. ಇಂತಹದ್ದೊಂದು ಅಪೂರ್ವ ಅನುಭವಕ್ಕೆ ಸಿದ್ಧರಾಗೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.