ADVERTISEMENT

ವಿಶ್ಲೇಷಣೆ | ಕುನೊ ಉದ್ಯಾನ: ಚೀತಾಗಳ ಸಾವೇಕೆ?

ಸಾವಿಗೆ ಆತಂಕಪಡುವ ಅಗತ್ಯ ಇಲ್ಲವಾದರೂ ನಿಖರ ಕಾರಣ ತಿಳಿಯಬೇಕಾಗಿದೆ

ಎಸ್.ಆರ್.ಕೃಷ್ಣಮೂರ್ತಿ
Published 27 ಮೇ 2023, 0:10 IST
Last Updated 27 ಮೇ 2023, 0:10 IST
   

ನಮ್ಮ ದೇಶದ ವನ್ಯಜೀವಿ ಇತಿಹಾಸದಲ್ಲಿ ಚೀತಾಗಳ ಖಂಡಾಂತರ ಸ್ಥಳಾಂತರ ಅತ್ಯಂತ ಮಹತ್ವಾಕಾಂಕ್ಷೆಯ ಪ್ರಯೋಗ. ಒಂಬತ್ತು ತಿಂಗಳ ಹಿಂದೆ ಪ್ರಾರಂಭವಾದ ಈ ಯೋಜನೆಯಲ್ಲಿ, ನಮೀಬಿಯಾದಿಂದ ಎಂಟು ಮತ್ತು ದಕ್ಷಿಣ ಆಫ್ರಿಕಾದಿಂದ ಹನ್ನೆರಡು ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಸ್ಥಳಾಂತರಿಸಲಾಗಿದೆ.

ಅಲ್ಲಿ ನಿರ್ಮಿಸಲಾಗಿರುವ, 500  ಹೆಕ್ಟೇರ್‌ಗಳಲ್ಲಿ ಬೇಲಿ ಹಾಕಿದ ವಿಶೇಷ ಆವರಣದಲ್ಲಿ ಈ ಚೀತಾಗಳನ್ನು ನೆಲೆಗೊಳಿಸಿ, ಅವು ಅಲ್ಲಿಗೆ ಹೊಂದಿಕೊಂಡ ನಂತರ, ಮೊದಲ ಹಂತದಲ್ಲಿ ನಾಲ್ಕು ಚೀತಾಗಳನ್ನು ಆವರಣದಿಂದ ಹೊರತಂದು, ರಾಷ್ಟ್ರೀಯ ಉದ್ಯಾನದ 748 ಚದರ ಕಿ.ಮೀ. ವಿಸ್ತೀರ್ಣದ ಉದುರೆಲೆ ಕಾಡು ಮತ್ತು ಹುಲ್ಲುಗಾವಲಿನ ಆವಾಸದಲ್ಲಿ ಮುಕ್ತವಾಗಿ ಬಿಡಲಾಗಿದೆ. ಆದರೆ ಈ ನಡುವೆ ಐದು ವರ್ಷದ ಸಾಶಾ, ಆರು ವರ್ಷದ ಉದಯ್ ಮತ್ತು ಎರಡು ವರ್ಷದ ದಕ್ಷಾ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾವಿಗೀಡಾಗಿವೆ. ಮಾರ್ಚ್ ತಿಂಗಳ ಅಂತ್ಯದಲ್ಲಿ ಹೆಣ್ಣು ಚೀತಾ ಜ್ವಾಲಾ ಹಾಕಿದ ನಾಲ್ಕು ಮರಿಗಳಲ್ಲಿ ಮೂರು ಸಾವನ್ನಪ್ಪಿವೆ. ಅತ್ಯಂತ ಸಡಗರ, ಸಂಭ್ರಮದಿಂದ ಪ್ರಾರಂಭವಾದ ಯೋಜನೆಯಲ್ಲಿ ಸಂಭವಿಸಿರುವ ಈ ಸಾವುಗಳು ಆತಂಕ, ಕಳವಳಕ್ಕೆ ದಾರಿ ಮಾಡಿಕೊಟ್ಟಿವೆ.

ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಸ್ಥಳಾಂತರಗೊಂಡ ಚೀತಾಗಳಲ್ಲಿ ಮೂರು ವಯಸ್ಕ ಚೀತಾಗಳು ಸತ್ತಿರುವುದು ದುರದೃಷ್ಟಕರ ಹೌದು. ಆದರೆ ನಿಸರ್ಗ ವ್ಯವಸ್ಥೆಯಲ್ಲಿ ಅದು ಅಸಹಜವೇನಲ್ಲ. ಆಫ್ರಿಕಾದ ಹುಲ್ಲುಗಾವಲು ಮೈದಾನ ಪ್ರದೇಶಗಳಲ್ಲಿ ಚೀತಾಗಳು ಬದುಕುಳಿಯುವ ಪ್ರಮಾಣ ಶೇ 10ಕ್ಕಿಂತ ಹೆಚ್ಚಿಲ್ಲ. 10 ಚೀತಾ ಮರಿಗಳಲ್ಲಿ ಬದುಕುಳಿದು ವಯಸ್ಕ ಹಂತ ತಲುಪುವುದು ಒಂದು ಚೀತಾ ಮಾತ್ರ. ಈ ಸ್ಥಳಾಂತರ ಯೋಜನೆಯನ್ನು ರೂಪಿಸುವ ಹಂತದಲ್ಲಿ, ಯೋಜನೆ ಪ್ರಾರಂಭವಾದ ಒಂದು ವರ್ಷದ ಅಂತ್ಯದ ವೇಳೆಗೆ, ಅಂದರೆ 2023ರ ಸೆಪ್ಟೆಂಬರ್- ಅಕ್ಟೋಬರ್ ವೇಳೆಗೆ, ಸ್ಥಳಾಂತರಿಸಿದ 20  ಚೀತಾಗಳಲ್ಲಿ ಗರಿಷ್ಠ 10 ಬದುಕುಳಿಯುವ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗಿತ್ತು.

ADVERTISEMENT

ಈ ಕಾರಣದಿಂದ, ಮೂರು ಚೀತಾಗಳ ಸಾವು ತೀವ್ರ ಆತಂತಕ್ಕೆ ಕಾರಣವಾಗಬೇಕಿಲ್ಲ ಎಂಬುದು ವನ್ಯಜೀವಿ ತಜ್ಞರ ಅಭಿಪ್ರಾಯ. ಆದರೆ ಚೀತಾಗಳ ಸಾವಿಗೆ ಕಾರಣ ತಿಳಿಯುವುದು ಮಾತ್ರ ತೀರಾ ಅಗತ್ಯ. ಈಗ ಲಭ್ಯವಿರುವ ಮಾಹಿತಿಯಂತೆ, ಸಾಶಾ ಮೂತ್ರಪಿಂಡದ ತೊಂದರೆಯಿಂದ, ಉದಯ್ ಹೃದಯ, ಶ್ವಾಸಕೋಶಗಳ ವೈಫಲ್ಯದಿಂದ ಮತ್ತು ದಕ್ಷಾ ಸಂತಾನೋತ್ಪಾದನೆಯ ಸಮಯದಲ್ಲಿ ಗಂಡು ಚೀತಾದ ಆಕ್ರಮಣಕಾರಿ ವರ್ತನೆಯಿಂದ ಸತ್ತಿವೆ. ಜ್ವಾಲಾದ ಮೂರು ಮರಿಗಳು ನಿತ್ರಾಣಗೊಂಡು, ಕುನೋದ 45 ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ ನಿರ್ಜಲೀಕರಣದಿಂದ ಪ್ರಾಣಬಿಟ್ಟಿವೆ.

2008ರಷ್ಟು ಹಿಂದೆಯೇ, ಪ್ರತಿಷ್ಠಿತ ‘ಸೈನ್ಸ್’ ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನಾ ಲೇಖನದಲ್ಲಿ, ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಚೀತಾಗಳ ಸಾವಿಗೆ ಮೂತ್ರಪಿಂಡಗಳ ವೈಫಲ್ಯ ಬಹುಮುಖ್ಯ ಕಾರಣವೆಂದು ಗುರುತಿಸಲಾಗಿತ್ತು. ಅಮಿಲಾಯ್ಡೋಸಿಸ್ ಎಂಬ ಜೈವಿಕ ಪ್ರಕ್ರಿಯೆಯಲ್ಲಿ, ಚೀತಾಗಳ ದೇಹದ ಸಹಜ ಪ್ರೋಟೀನ್, ಅಪಸಾಮಾನ್ಯ (ಅಬ್‌ನಾರ್ಮಲ್) ಪ್ರೋಟೀನ್ ಆಗಿ ಪರಿವರ್ತನೆಗೊಂಡು, ಯಕೃತ್ತು ಮತ್ತು ಗುಲ್ಮಗಳಲ್ಲಿ ಸಂಗ್ರಹಗೊಂಡು, ಕಡೆಗೆ ಮೂತ್ರಪಿಂಡ ವಿಫಲವಾಗುವುದರ ಮೇಲೆ ಸಂಶೋಧನಾ ಲೇಖನ ಬೆಳಕು ಚೆಲ್ಲಿತ್ತು.

1980- 2008ರ ಅವಧಿಯಲ್ಲಿ, ಮುಕ್ತ ಸಂಚಾರಕ್ಕೆ ಅವಕಾಶವಿಲ್ಲದೇ ಆವರಣಗಳಿಗೆ ಸೀಮಿತವಾದ ಚೀತಾಗಳಲ್ಲಿ ಅಮಿಲಾಯ್ಡೋಸಿಸ್ ಪ್ರಮಾಣ ಶೇ 20ರಿಂದ ಶೇ 70ಕ್ಕೆ ಏರಿರುವುದನ್ನು ಅಧ್ಯಯನಗಳು ಖಚಿತಪಡಿಸಿವೆ. ದಕ್ಷಿಣ ಆಫ್ರಿಕಾದಿಂದ ಕುನೋಗೆ ಬಂದ 12 ಚೀತಾಗಳನ್ನು 9 ತಿಂಗಳಷ್ಟು ಮುಂಚೆಯೇ ಸೆರೆಹಿಡಿದು ವಿಶೇಷ ಆವರಣದಲ್ಲಿ ಇಡಲಾಗಿತ್ತು ಮತ್ತು ಸಾಶಾದ ಆರೋಗ್ಯ ಸರಿ ಇರಲಿಲ್ಲವೆಂಬ ಅಂಶಗಳು ಈ ಕಾರಣದಿಂದ ಮುಖ್ಯವಾಗುತ್ತವೆ.

ನಮೀಬಿಯಾದ ಅರಣ್ಯಗಳಲ್ಲಿ ಚೀತಾಗಳ ಸಾವಿಗೆ ಎರಡನೆಯ ಮುಖ್ಯ ಕಾರಣವೆಂದರೆ, ಬ್ಯಾಕ್ಟೀರಿಯಾಗಳಿಂದ ತಗಲುವ ಆಂತ್ರಾಕ್ಸ್ ಸೋಂಕು ರೋಗ. ನಮೀಬಿಯಾದ ಎಟೋಶ ರಾಷ್ಟ್ರೀಯ ಉದ್ಯಾನದಲ್ಲಿ ಆಂತ್ರಾಕ್ಸ್ ಪ್ರಕರಣಗಳು ಸಾಮಾನ್ಯ. ಈ ಸೋಂಕು ರೋಗಕ್ಕೆ ಬಲಿಯಾಗಿ ಸತ್ತ ಪ್ರಾಣಿಗಳ ಕಳೇಬರವನ್ನು ತಿನ್ನುವ ಜೀವಿಗಳಲ್ಲಿ, ಕಾಲಕ್ರಮೇಣ ಆಂತ್ರಾಕ್ಸ್ ವಿರುದ್ಧ ರೋಗರಕ್ಷೆ ಬೆಳೆದುಬರುತ್ತದೆ. ಆದರೆ ಚೀತಾಗಳು ಕಳೇಬರವನ್ನು ತಿನ್ನದೇ ಸ್ಪ್ರಿಂಗ್‌ಬೋಕ್ ಚಿಗರೆಗಳನ್ನು ಬೇಟೆಯಾಡಿ ತಿನ್ನುತ್ತವೆ. ಈ ಕಾರಣದಿಂದ ಆಫ್ರಿಕಾದ ಚೀತಾಗಳಲ್ಲಿ ಆಂತ್ರಾಕ್ಸ್ ವಿರುದ್ಧ ರೋಗರಕ್ಷೆ ಬೆಳೆದುಬಂದಿಲ್ಲ. ಭಾರತದ ವನ್ಯಜೀವಿಗಳಲ್ಲಿ ಆಂತ್ರಾಕ್ಸ್ ಪ್ರಮಾಣ ಬಹಳ ಕಡಿಮೆಯಾಗಿದ್ದರೂ ಈಗಾಗಿರುವ ಚೀತಾಗಳ ಸಾವಿನ ಕಾರಣದಿಂದ ಈ ಅಂಶದತ್ತ ಗಮನ ಹರಿಸಬೇಕಾಗುತ್ತದೆ.

ನಮೀಬಿಯಾದಲ್ಲಿರುವ ಲೆಬ್ನೀಜ್ ಇನ್‌ಸ್ಟಿಟ್ಯೂಟ್ ಆಫ್ ಜೂ ಆ್ಯಂಡ್ ವೈಲ್ಡ್‌ಲೈಫ್ ರಿಸರ್ಚ್ ಸಂಸ್ಥೆಯ ಸಂಶೋಧಕರು ಚೀತಾಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ಅಧ್ಯಯನಗಳನ್ನು ನಡೆಸಿಕೊಂಡು ಬಂದಿದ್ದಾರೆ. 100  ಚದರ ಕಿ.ಮೀ. ಪ್ರದೇಶ ಒಂದು ಚಿರತೆಯನ್ನು ಪೋಷಿಸಬಲ್ಲದು ಎಂಬ ಅಂಶವನ್ನು ಈ ಅಧ್ಯಯನಗಳು ಸ್ಪಷ್ಟವಾಗಿ ತೋರಿಸಿವೆ. ಆದರೆ ಕುನೋ ಅರಣ್ಯ ಪ್ರದೇಶದಲ್ಲಿ ಚೀತಾಗಳಿಗೆ ಆಹಾರವಾಗುವ ಬಲಿಪ್ರಾಣಿಗಳ ದಟ್ಟಣೆ ಹೆಚ್ಚಾಗಿರುವುದರಿಂದ, 100 ಚದರ ಕಿ.ಮೀ ಪ್ರದೇಶ 3 ಚೀತಾಗಳನ್ನು ಪೋಷಿಸಬಲ್ಲದು ಎಂಬ ಮೂಲ ಗ್ರಹಿಕೆಯೊಂದಿಗೆ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಈ ಗ್ರಹಿಕೆಗೆ ವೈಜ್ಞಾನಿಕ ಆಧಾರವಿಲ್ಲವೆಂಬುದು ಲೆಬ್ನೀಜ್ ಸಂಶೋಧಕರ ಅಭಿಪ್ರಾಯ. ಚೀತಾಗಳ ‘ಸ್ಪೇಶಿಯಲ್ ಎಕಾಲಜಿ’ಗೆ ಗಮನಕೊಡದೇ ಅವುಗಳನ್ನು ಕುನೋಗೆ ಸ್ಥಳಾಂತರಿಸಲಾಗಿದೆ ಎಂಬ ಟೀಕೆಯನ್ನೂ ಈ ಸಂಶೋಧಕರು ಮಾಡಿದ್ದಾರೆ.

ಜೀವಿ ಪ್ರಭೇದವೊಂದಕ್ಕೆ ಲಭ್ಯವಿರುವ ನೈಸರ್ಗಿಕ ವಾಸಕ್ಷೇತ್ರದ ವಿಸ್ತೀರ್ಣ, ಆ ಪ್ರಭೇದದ ಜೀವಿಗಳ ಸಂಖ್ಯೆ, ಚಲನವಲನ, ಇತರ ಜೀವಿ ಪ್ರಭೇದಗಳೊಂದಿಗೆ ವರ್ತಿಸುವ ರೀತಿಯಂತಹವುಗಳನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಸ್ಪೇಶಿಯಲ್ ಇಕಾಲಜಿ ತಿಳಿಸುತ್ತದೆ. ಈ ಅಧ್ಯಯನ ಕೂಡ ಒಂದು ಚೀತಾ ಪೋಷಣೆಗೆ 100 ಚದರ ಕಿ.ಮೀ ಅರಣ್ಯ ಪ್ರದೇಶ ಅಗತ್ಯವೆಂಬುದನ್ನು ಸೂಚಿಸುತ್ತದೆ.

‘ಜರ್ನಲ್ ಆಫ್ ಕನ್ಸರ್‌ವೇಶನ್ ಸೈನ್ಸ್ ಆ್ಯಂಡ್ ಪ್ರಾಕ್ಟೀಸ್’ನ ಏಪ್ರಿಲ್ ಸಂಚಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನಾ ಲೇಖನದಲ್ಲಿ, ಗರಿಷ್ಠ 7ರಿಂದ 8 ಚೀತಾಗಳನ್ನು ಪೋಷಿಸಬಲ್ಲ , 748 ಚದರ ಕಿ.ಮೀ ವಿಸ್ತೀರ್ಣದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 20 ಚೀತಾಗಳನ್ನು ಸ್ಥಳಾಂತರಿಸಿರುವುದರಿಂದ, ಅವು ಉದ್ಯಾನದ ವ್ಯಾಪ್ಯಿಯನ್ನು ದಾಟಿ, ಅರಣ್ಯದಂಚಿನ ಹಳ್ಳಿಗಳ ಸಮೀಪದಲ್ಲಿ ಮಾನವ- ವನ್ಯಜೀವಿಗಳ ಘರ್ಷಣೆಯ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತವೆಂಬ ಎಚ್ಚರಿಕೆಯಿದೆ. ಈ ಸೂಚನೆ ಈಗಾಗಲೇ ನಿಜವಾಗಿದ್ದು, ಹಳ್ಳಿಗಳ ಸಮೀಪಕ್ಕೆ ಬಂದಿದ್ದ ಚೀತಾಗೆ ಅರಿವಳಿಕೆ ನೀಡಿ, ಅದನ್ನು ಮತ್ತೆ ಅರಣ್ಯಕ್ಕೆ ವಾಪಸ್‌ ತರಲಾಗಿದೆ.

ನಮೀಬಿಯಾ, ದಕ್ಷಿಣ ಆಫ್ರಿಕಾಗಳಲ್ಲಿ ಚೀತಾಗಳ ನಿರ್ವಹಣೆಗಿರುವ ಕ್ರಮಗಳತ್ತಲೂ ನಾವು ಆಸಕ್ತಿಯಿಂದ ಗಮನಹರಿಸಿಲ್ಲವೆಂಬ ದೂರಿದೆ. 2012ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಚೀತಾ ಯೋಜನೆ ಪ್ರಾರಂಭವಾದಾಗ, ಬೇಲಿ ಹಾಕಿದ 40 ವಿಶಾಲ ಆವರಣಗಳಲ್ಲಿ 247 ಚೀತಾಗಳನ್ನು ವಿತರಿಸಲಾಗಿತ್ತು. ಯಾವುದೇ ಆವರಣದಲ್ಲಿ ಚೀತಾಗಳ ಉಳಿವಿಗೆ ಸವಾಲಾಗುವ ಸಂದರ್ಭ ಒದಗಿದಾಗ ಅವುಗಳನ್ನು ಬೇರೆಯ ಆವರಣಕ್ಕೆ ಸ್ಥಳಾಂತರಿಸುವ ವ್ಯವಸ್ಥೆಯನ್ನು ರೂಪಿಸಲಾಗಿತ್ತು. ಈ ಮುನ್ನೆಚ್ಚರಿಕೆಯಿಂದ 2012ರಲ್ಲಿ 247ರಷ್ಟಿದ್ದ ಚೀತಾಗಳು 2018ರಲ್ಲಿ 328 ಆಗಿದ್ದವು. ಇಂತಹ ಪರ್ಯಾಯ ವ್ಯವಸ್ಥೆ ಅಗತ್ಯವೆಂಬುದು ತಜ್ಞರ ಅಭಿಪ್ರಾಯ.

ಲೆಬ್ನೀಜ್ ಸಂಶೋಧಕರ ಅಧ್ಯಯನದಂತೆ, ಅರಣ್ಯ ಪ್ರದೇಶದಲ್ಲಿ ಚೀತಾಗಳ ಸರಹದ್ದು (ಟೆರಿಟೊರಿ) ಒಂದರ ಪಕ್ಕ ಒಂದರಂತೆ ಇರದೆ ಅವುಗಳ ನಡುವೆ ಅಂತರವಿರುತ್ತದೆ. ಎರಡು ಸರಹದ್ದುಗಳ ಕೇಂದ್ರಗಳ ನಡುವೆ ಸುಮಾರು 25 ಕಿ.ಮೀಗಳ ಅಂತರ ಇರುವುದು ಸಾಮಾನ್ಯ. ಎರಡು ಚೀತಾಗಳ ಸರಹದ್ದಿನ ನಡುವಿನ ಪ್ರದೇಶದಲ್ಲಿ ಸರಹದ್ದನ್ನು ಸ್ಥಾಪಿಸಿಕೊಂಡಿರದ ಗಂಡು ಚೀತಾಗಳು ಮತ್ತು ಹೆಣ್ಣು ಚೀತಾಗಳಿರುತ್ತವೆ. ಇಂತಹ ನೈಸರ್ಗಿಕ ವ್ಯವಸ್ಥೆಗೆ ಅತಿ ವಿಶಾಲವಾದ ಆವಾಸ ಬೇಕು. ಕುನೋದಲ್ಲಿ ಇಂತಹ ವಿಶಾಲವಾದ ಆವಾಸವಿಲ್ಲದಿರುವುದರಿಂದ, ಕೆಲವು ಚೀತಾಗಳನ್ನು ರಾಜಸ್ಥಾನದ ಜೈಸಲ್ಮೇರ್‌ ಬಳಿಯ ಶಹ್‌ಘರ್ ದಿಣ್ಣೆ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂಬ ಸಲಹೆಯಿದೆ. ಚೀತಾಗಳ ಸಾವಿನಿಂದ ಕಳವಳಗೊಂಡಿರುವ ಸುಪ್ರೀಂ ಕೋರ್ಟ್‌ ಈ ಸಲಹೆಯನ್ನು ಪರಿಶೀಲಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮೇ 18ರಂದು ಸೂಚನೆ ನೀಡಿದೆ.

ರಾಜಸ್ಥಾನದಲ್ಲಿ ಬೇರೆ ಪಕ್ಷಕ್ಕೆ ಸೇರಿದ ಸರ್ಕಾರವಿದೆಯೆಂಬ ಕಾರಣಕ್ಕೆ ಈ ಸಲಹೆಗೆ ಗಮನಕೊಡದಂತೆ ಇರಬೇಡಿ ಎಂದು ಲಘು ಧಾಟಿಯ ಚಾಟಿಯನ್ನೂ ಬೀಸಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಮೊತ್ತಮೊದಲ ಬಾರಿಗೆ ಮಧ್ಯಪ್ರದೇಶ ಸರ್ಕಾರವೂ ಕೆಲವು ಚೀತಾಗಳನ್ನು ರಾಜಸ್ಥಾನಕ್ಕೆ ಸ್ಥಳಾಂತರಿಸಲು ಕೇಂದ್ರ ಸರ್ಕಾರದ ಅನುಮತಿ ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.