80ರ ದಶಕದಲ್ಲಿ ಆಕಾಶದ ಒಂದು ಭಾಗದಲ್ಲಿ (ಪರ್ಸಿಯುಸ್ ಎಂಬ ಪುಂಜದಲ್ಲಿ) ಆಗಿಂದಾಗ್ಗೆ ಮಿಂಚಿನಂತೆ ಹೊಳೆದು ಮಾಯವಾಗುತ್ತಿದ್ದ ಒಂದು ವಸ್ತು ನಿಗೂಢ ಕಾಯವಿರಬಹುದು ಎಂಬ ಗುಮಾನಿ ಬಂದಿತ್ತು. ದೂರದರ್ಶಕಗಳ ವ್ಯಾಪ್ತಿಗೆ ಸಿಲುಕಿದ್ದರಿಂದ ಹಾರುವ ತಟ್ಟೆ ಮುಂತಾದ ಅವೈಜ್ಞಾನಿಕ ಕಾಲ್ಪನಿಕ ವಸ್ತು ಅಲ್ಲ ಎಂದು ತಿಳಿದಿತ್ತು. ಅದರ ರಹಸ್ಯ ತಿಳಿಯಲು ಹಲವಾರು ದೂರದರ್ಶಕಗಳು ಒಟ್ಟಾಗಿ ಕೆಲಸ ಮಾಡಿದವು. ಅದು ಮಾನವನಿರ್ಮಿತ ಉಪಗ್ರಹದ ಪ್ರತಿಫಲಿತ ಬೆಳಕು ಎಂದು ತಿಳಿದುಬಂದಾಗ ವಿಜ್ಞಾನಿಗಳಿಗಾದ ಬೇಸರ ಅಷ್ಟಿಷ್ಟಲ್ಲ.
ಸುಮಾರು ಹತ್ತು ವರ್ಷಗಳ ಹಿಂದೆ ಭೂಮಿಗೆ ಇನ್ನೊಂದು ಚಂದ್ರ ಇದೆ ಎಂದು ಸುದ್ದಿ ಆಗಿತ್ತು. ಅದೂ ಹೀಗೆ ಭ್ರಮನಿರಸನ ಉಂಟು ಮಾಡಿತು. 60ರ ದಶಕದಲ್ಲಿ ಹಾರಿ ಭೂಮಿಯಿಂದ ತಪ್ಪಿಸಿಕೊಂಡು ಕಳೆದುಹೋಗಿದ್ದ ನೌಕೆಯೊಂದು ಸೂರ್ಯನ ಹಿಡಿತದಿಂದ ತಪ್ಪಿಸಿಕೊಳ್ಳಲಾಗದೆ ತನ್ನದೇ ಒಂದು ಕಕ್ಷೆಯಲ್ಲಿ ತಿರುಗುತ್ತಿತ್ತು. ಅದು ಹತ್ತಿರ ಬಂದಾಗ ಮಾತ್ರ ಕಾಣುವಷ್ಟು ಚಿಕ್ಕದು. ಹಾಗಾಗಿ ಒಂದು ವರ್ಷದ ಅವಧಿಯದು ಎಂದು ಸಾಬೀತಾಗಿ ಇನ್ನೊಂದು ಚಂದ್ರ ಎಂದು ಪ್ರತಿಷ್ಠಾಪಿಸಿಕೊಂಡಿತ್ತು.
ಅಲ್ಲಿಂದ ಇಂದಿನವರೆಗೆ ಗಗನಕ್ಕೆ ಹಾರಿದ ಉಪಗ್ರಹ ಗಳ ಸಂಖ್ಯೆ ಇದೀಗ ಆರು ಅಂಕೆಗಳ ಸಂಖ್ಯೆಯನ್ನು ದಾಟುತ್ತಿದೆ. ಜೊತೆ ಜೊತೆಗೆ ಅದರ ಎರಡರಷ್ಟು ಸಂಖ್ಯೆಯ ತ್ಯಾಜ್ಯವಸ್ತುಗಳೂ ಆಕಾಶದಲ್ಲಿ ಸೇರಿಕೊಳ್ಳುತ್ತಿವೆ. ಇವು ಹೀಗೆ ಖಗೋಳ ವಿಜ್ಞಾನಿಗಳ ದಿಕ್ಕು ತಪ್ಪಿಸುತ್ತಿವೆ.
ಕಳೆದ ವರ್ಷ ಹಾರಿದ ಸ್ಟಾರ್ ಲಿಂಕ್ ಸರಣಿಯ 12,000 ಉಪಗ್ರಹಗಳು ಭಾರಿ ತಲೆನೋವು ಉಂಟುಮಾಡಲಿರುವುದನ್ನು ಊಹಿಸಿ ಖಗೋಳ ವಿಜ್ಞಾನಿಗಳು ಆಕ್ಷೇಪ ವ್ಯಕ್ತಪಡಿಸಿದಾಗ, ಆ ಸಂಸ್ಥೆಯು ಪ್ರತಿಯೊಂದು ತುಣುಕಿನ ಜಾಡನ್ನೂ ವರದಿ ಮಾಡುವ ಜವಾಬ್ದಾರಿ
ಯನ್ನೂ ಕೈಗೆತ್ತಿಕೊಂಡಿತು. ಆದರೆ ಇತ್ತೀಚೆಗೆ ಪ್ರಕಟವಾದ ಸುದ್ದಿ ಖಗೋಳ ವಿಜ್ಞಾನಿಗಳ ಮುನ್ನಡೆಗೆ ತೀವ್ರ ಆಘಾತ ಉಂಟುಮಾಡಿದೆ.
ಜಿಎನ್–ಝಡ್ 11 ಎಂಬುದು ಅತಿ ದೂರದಲ್ಲಿರುವ ಕ್ಷೀಣವಾಗಿ ಕಾಣುವ ಗ್ಯಾಲಕ್ಸಿ. ಇದರ ದೂರವನ್ನು ಮತ್ತು ಕೆಂಪು ಪಲ್ಲಟವನ್ನು ಲೆಕ್ಕ ಹಾಕಿದ ವಿಜ್ಞಾನಿಗಳು, ವಿಶ್ವ ಆರಂಭವಾದ 40 ಕೋಟಿ ವರ್ಷಗಳೊಳ
ಗಾಗಿ ಸೃಷ್ಟಿಯಾದ ಗ್ಯಾಲಕ್ಸಿ ಎಂಬ ರೋಮಾಂಚಕಾರಿ ರಹಸ್ಯವನ್ನು ಬಯಲಿಗೆಳೆದರು. ಅದರ ಬಗ್ಗೆ ಅವಕೆಂಪು ಕಿರಣಗಳ ಅಧ್ಯಯನ ಕೈಗೆತ್ತಿಕೊಂಡ ಜಿಯಾನ್ ಎಂಬ ವಿಜ್ಞಾನಿಯ ತಂಡ ಅದರ ಚಿತ್ರಗಳನ್ನು ಕ್ರೋಡೀಕರಿಸಲು 179 ಸೆಕೆಂಡುಗಳ ಕಾಲ ಸತತವಾಗಿ ಚಿತ್ರೀಕರಣ ನಡೆ ಸಿತು. ಆ ಸರಣಿಯ ಅಧ್ಯಯನ ಮಾಡುವಾಗ, ಮಧ್ಯದಲ್ಲಿ ಇದ್ದಕ್ಕಿದ್ದಂತೆ ಪ್ರಕಾಶ ಹೆಚ್ಚಿದ್ದು ದಾಖಲಾಗಿದ್ದನ್ನು ಗಮ ನಿಸಿದ ಅವರು ಅದರ ಕಾರಣ ಹುಡುಕಿದರು. ಪ್ರಕಾಶದ ತೀವ್ರತೆಯ ಆಧಾರದ ಮೇಲೆ ಅದು ಗ್ಯಾಮಾ ರೇ ಬರ್ಸ್ಟ್ ಎಂದು ತೀರ್ಮಾನಿಸಿದರು. ಕಳೆದ ಡಿಸೆಂಬರ್‌ನಲ್ಲಿ (2020) ಈ ಸಂಶೋಧನಾ ಪ್ರಬಂಧ ಪ್ರಕಟವಾಯಿತು.
ಸೂರ್ಯನಿಗಿಂತ ಅತಿ ಹೆಚ್ಚು (30- 40ರಷ್ಟು) ದ್ರವ್ಯರಾಶಿಯ ನಕ್ಷತ್ರಗಳ ಅವಸಾನದ ಹಂತದಲ್ಲಿ ಅದರ ಕೇಂದ್ರದಲ್ಲಿ ಕಪ್ಪು ಕುಳಿ ಸೃಷ್ಟಿಯಾಗುವ ವಿದ್ಯಮಾನವೇ ಗ್ಯಾಮಾ ರೇ ಬರ್ಸ್ಟ್. ಕ್ಷಣಕಾಲ ಮಾತ್ರ ಅತಿ ಪ್ರಕಾಶದಿಂದ ಬೆಳಗುವ ಚುಕ್ಕೆಗಳನ್ನು ಪತ್ತೆ ಮಾಡುವುದು ಸಾಹಸವೇ ಎನ್ನಬಹುದು. ಕಳೆದ ದಶಕದಲ್ಲಿ ದಾಖಲಾಗಿರುವ ಈ ಬಗೆಯ ಸ್ಫೋಟಗಳನ್ನು ಗಮನಿಸಿದ ವಿಜ್ಞಾನಿಗಳು ಇದು ಸರ್ವೇ ಸಾಮಾನ್ಯವಾಗಿ ನಡೆಯುವ ಘಟನೆಯೂ ಇರಬಹುದು ಎಂದು ತರ್ಕಿಸಿದ್ದಾರೆ. ಆದ್ದರಿಂದ ಇಂತಹ ಒಂದೊಂದು ದಾಖಲೆಯೂ ಬಹಳ ಮಹತ್ವ ಪಡೆಯುತ್ತದೆ.
ಪ್ರಸ್ತುತ ವೀಕ್ಷಣೆ ಇನ್ನೊಂದು ರೀತಿಯಲ್ಲೂ ವಿಶೇಷ ಎನ್ನಿಸಿಕೊಳ್ಳುತ್ತದೆ. ಮಹಾಸ್ಫೋಟವಾದ ಕೇವಲ 40 ಕೋಟಿ ವರ್ಷಗಳ ನಂತರ ಸೃಷ್ಟಿಯಾದ ಈ ಗ್ಯಾಲಕ್ಸಿ, ಸುಮಾರು 1,300 ಕೋಟಿ ವರ್ಷಗಳ ಹಿಂದೆ ವಿಶ್ವ ಹೇಗಿತ್ತು ಎಂದು ತಿಳಿಸಿಕೊಡುವ ಹಳೆಯ ವೃತ್ತಪತ್ರಿಕೆ. ಆಗ ಎಂತಹ ಗ್ಯಾಲಕ್ಸಿಗಳು ರೂಪುಗೊಂಡಿದ್ದಿರಬಹುದು? ನಮ್ಮ ಆಕಾಶಗಂಗೆಗಿಂತ ಅವು ಎಷ್ಟು ಭಿನ್ನವಾಗಿದ್ದಿರ
ಬಹುದು? ಹಾಗಿದ್ದಲ್ಲಿ ಆ ಭಿನ್ನತೆಗೆ ಕಾರಣ ಏನಿರ ಬಹುದು? ಇಂತಹ ಪ್ರಶ್ನೆಗಳಿಗೆ ಉತ್ತರ ಒದಗಿಸಬಲ್ಲ ಖಜಾನೆ. ಉದಾಹರಣೆಗೆ, ಆಗ ಹೀಲಿಯಂ ಎಷ್ಟು ಪ್ರಮಾಣದಲ್ಲಿ ಇದ್ದಿರಬಹುದು? ಇದು ನಮ್ಮ ಮಹಾಸ್ಫೋಟದ ಸಿದ್ಧಾಂತಕ್ಕೇ ಪುಷ್ಟಿ ಕೊಡಬಲ್ಲುದು ಅಥವಾ ಕೊಡಲಿ ಏಟೂ ಆಗಬಹುದು.
ಇಂತಹ ಈ ಗೆಲಾಕ್ಸಿಯಲ್ಲಿ ನಕ್ಷತ್ರದ ಸ್ಫೋಟ ಕಂಡುಬಂದಿತೆಂದರೆ ಅದು ನಕ್ಷತ್ರಗಳ ಹುಟ್ಟು– ಸಾವುಗಳ ಸಿದ್ಧಾಂತಕ್ಕೂ ಪೋಷಕವಾಗಬಲ್ಲುದು. ಸಾಧಾರಣವಾಗಿ ಎಲ್ಲ ಗ್ಯಾಲಕ್ಸಿಗಳಲ್ಲೂ ನಕ್ಷತ್ರಗಳ ಸೃಷ್ಟಿ ನಿರಂತರವಾಗಿ ನಡೆಯುತ್ತಿರುತ್ತದೆ. ಎಷ್ಟು ದ್ರವ್ಯ ರಾಶಿ ನಕ್ಷತ್ರವಾಗಿ ಪರಿವರ್ತಿತವಾಗುತ್ತದೆ ಎನ್ನುವುದನ್ನು ನಿರ್ಧರಿಸುವ ಅಂಶ ಗಳು ಹಲವಾರು- ಆ ಗ್ಯಾಲಕ್ಸಿಯಲ್ಲಿರುವ ಅನಿಲದ ರಾಸಾಯನಿಕ ಸಂಯೋಜನೆ, ಅದರ ವಯಸ್ಸು ಹೀಗೆ. ಈ ಒಂದು ಸ್ಫೋಟ ಈ ಇತಿಮಿತಿಗಳಿಗೊಂದು ಚೌಕಟ್ಟು ಒದಗಿಸಬಲ್ಲುದು.
ಹೀಗೆ ಹೊಸದೊಂದು ಚಿಂತನೆಯನ್ನೇ ಹುಟ್ಟುಹಾಕಿದ ಈ ಸಂಶೋಧನಾ ಪ್ರಬಂಧ ಅನೇಕರನ್ನು ಆ ಗ್ಯಾಲಕ್ಸಿಯತ್ತ ಆಕರ್ಷಿಸಿತು. ನಕ್ಷತ್ರದ ಸಾವು ಎಂಬ ಕ್ಷಣಿಕ ಘಟನೆಯನ್ನು ಹೊಂಚುಹಾಕಿ ಪತ್ತೆ ಮಾಡುವುದು ಸಾಧ್ಯವಿಲ್ಲ. 10 ಕೋಟಿ ವರ್ಷಗಳಿಗೊಂದು ಅವಸಾನವಾಗಿ ಇಂತಹ ಬೆಳಕಿನ ಮಿಂಚನ್ನು ವಿಜ್ಞಾನಿಗಳಿಗೆ ಪ್ರದರ್ಶಿಸ
ಬಹುದು. ಆಗ ಆ ವಿಜ್ಞಾನಿ ತನ್ನ ದೂರದರ್ಶಕದಿಂದ ಅದೇ ದಿಕ್ಕನ್ನು ನೋಡುತ್ತಿರಬೇಕು. ಅದರ ಸಂಭವ ನೀಯತೆ ಕೋಟಿಗೆ ಒಂದು ಎನ್ನುತ್ತದೆ ಲೆಕ್ಕ. ಹಾಗಾದರೆ ಜಿಯಾಂಗ್ ಮತ್ತವರ ತಂಡಕ್ಕೆ ಎಂತಹ ಅದೃಷ್ಟ ಅಲ್ಲವೇ?
ಈ ಬಗೆಯ ‘ಅದೃಷ್ಟ’ದ ಫಲಿತಾಂಶಗಳು ಮನ್ನಣೆ ಪಡೆಯುವುದು ಕಷ್ಟ. ಉಳಿದ ಎಲ್ಲ ಸಾಧ್ಯತೆ
ಗಳನ್ನು ಒರೆಗೆ ಹಚ್ಚಿ ನೋಡುವುದು ಅತಿ ಅವಶ್ಯ ಎಂದು ವಿಜ್ಞಾನಿಗಳು ‘ನೇಚರ್’ ಪತ್ರಿಕೆಗೆ ಬರೆದರು. ಹೀಗೆ ಇತರ ಸಾಧ್ಯತೆಗಳನ್ನು ಹುಡುಕಿದಾಗ ಆಕಾಶ ಎಂಬ ಕಸದ ಬುಟ್ಟಿಯಲ್ಲಿ ತ್ಯಾಜ್ಯವಾಗಿ ಬಿದ್ದಿದ್ದ ವಸ್ತುಗಳ ಹಾಜರಾತಿಯೂ ಬಹು ಮುಖ್ಯ ಅಂಶ. ಇಂತಹ ‘ಕಸ’ಗಳನ್ನೂ ಹಿಂಬಾಲಿಸಿ ದಾಖಲಿಸುವ ಹಲವಾರು ಸೇವಾ ಸಂಸ್ಥೆಗಳಿವೆ. ನಿವೃತ್ತಿ ಪಡೆದ ಗಗನನೌಕೆಗಳು, ಬಹುಹಂತಗಳ ರಾಕೆಟ್ ಹಾರಿಸಿದಾಗ ಕಳಚಿಕೊಳ್ಳುವ ಮೊದಲ ಹಂತಗಳು, ಇಂಧನದ ಟ್ಯಾಂಕ್‌ಗಳು- ಹೀಗೆ ಪ್ರತಿಯೊಂದನ್ನೂ ಹುಡುಕಿ ಪೋಲೆಂಡ್ ದೇಶದ ಇನ್ನೊಂದು ಸಂಶೋಧನಾ ತಂಡ ರಷ್ಯಾದ ಪ್ರೋಟಾನ್ ರಾಕೆಟ್‍ನ ಮೇಲ್ಭಾಗದ ಹಂತದ ಕವಚ ಎಂದು ಗುರುತಿಸಿತು. ಬ್ರೀಝ್ ಎಂ ಹೆಸರಿನ ಇದು ಕೆಳಸ್ತರದ ಕಕ್ಷೆಗಳಿಂದ 36,000 ಕಿ.ಮೀ. ಎತ್ತರದ ಭೂಸ್ಥಾಯಿ ಕಕ್ಷೆಗಳಿಗೆ ಉಪಗ್ರಹಗಳನ್ನು ಸೇರಿಸುವ ಹಂತದಲ್ಲಿ ಬಳಕೆಯಾಗುತ್ತದೆ. ಆ ಜವಾಬ್ದಾರಿ ಮುಗಿದ ಮೇಲೆಯೂ ಅದು ದೀರ್ಘವೃತ್ತದ ಕಕ್ಷೆಯಲ್ಲಿ ಕೆಲಕಾಲ ಸುತ್ತುತ್ತಿರುತ್ತದೆ. ಇಂತಹ ಒಂದು ಸಂದರ್ಭದಲ್ಲಿ ಅದು ಜಿಎನ್- ಝಡ್ 11 ಗೆಲಾಕ್ಸಿಯ ಮುಂದೆಯೇ ಹಾದುಹೋಯಿತು. ಆ ಕ್ಷೀಣ ಗ್ಯಾಲಕ್ಸಿಯ ಪ್ರಕಾಶಕ್ಕೆ ಹೋಲಿಸಿದಾಗ ಸೂರ್ಯನ ಬೆಳಕನ್ನು ಇದು ಪ್ರತಿಫಲಿಸಿದ್ದೇ ಹೆಚ್ಚು ಪ್ರಕಾಶಮಾನವಾಗಿ ಕಂಡಿತು. 179 ಸೆಕೆಂಡುಗಳ ಎಕ್ಸ್‌ಪೋಷರ್ ಅವಧಿಯಲ್ಲಿ ಸೇರಿಹೋಯಿತು.
ಜಿಯಾಂಗ್ ಅವರ ತಂಡ ಇದನ್ನು ನಿರ್ಲಕ್ಷಿಸಿತು ಎಂದು ಹೇಳುವಂತಿಲ್ಲ. ಏಕೆಂದರೆ ತಮ್ಮ ವರದಿಯನ್ನು ಪ್ರಕಟಿಸುವ ಮೊದಲು ಅವರು ಈ ಸಾಧ್ಯತೆಯನ್ನೂ ಪರಿಗಣಿಸಿದ್ದರು. ಅವರ ಪ್ರಕಾರ, ಈ ತ್ಯಾಜ್ಯ ವಸ್ತು ಅವರ ವೀಕ್ಷಣಾ ಪರಿಧಿಯ ಆಚೆಗಿತ್ತು. ದತ್ತಾಂಶವನ್ನು ಒದಗಿಸಿದ ಸಂಸ್ಥೆ (ಧನಸಹಾಯವಿಲ್ಲದೆ) ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.
ಈ ವಿದ್ಯಮಾನ ಅನೇಕ ನೈತಿಕ ಪ್ರಶ್ನೆಗಳನ್ನೂ ಹುಟ್ಟುಹಾಕುತ್ತದೆ. 250 ವರ್ಷಗಳ ಹಿಂದೆ ಬರಿಗಣ್ಣಿನಿಂದ ನಕ್ಷತ್ರದ ಬೆಳಕು ವ್ಯತ್ಯಯವಾಗುವುದನ್ನು ಗುರುತಿಸಿ ದಾಖಲಿಸಿದ ಹುಡುಗ ಜಾನ್ ಗುಡ್‍ರಿಕ್. ಆಗ ಅದು ಮನ್ನಣೆ ಪಡೆಯಲಿಲ್ಲವಾದರೂ ಯಮಳ ನಕ್ಷತ್ರಗಳ ಹೊಸ ಶಾಖೆಯನ್ನೇ ಹುಟ್ಟುಹಾಕಿತು. ಟೀಕೋ ಬ್ರಾಹೆ ಮತ್ತು ಕೆಪ್ಲರ್ ಬರಿಗಣ್ಣಿನಿಂದ ಹೊಸ ನಕ್ಷತ್ರಗಳನ್ನು ಗುರುತಿಸಿದ್ದು ಸೂಪರ್ ನೋವಾಗಳನ್ನು ಅಧ್ಯಯನಕ್ಕೆ ತೆರೆದಿಟ್ಟಿತು. ಇನ್ನು ಮುಂದೆ ಇಂತಹ ವರದಿಗಳೆಲ್ಲ ಅರ್ಥ ಕಳೆದು
ಕೊಳ್ಳುತ್ತವೆ. ಯಾವುದೋ ‘ಕಸ’ ಅಡ್ಡ ಬಂದಿರಬೇಕು ಎಂದು ಅತಿ ಮುಖ್ಯವಾದ ಸ್ಫೋಟಗಳನ್ನೇ ತಿರಸ್ಕರಿಸ ಬಹುದಾದ ಸಾಧ್ಯತೆಗಳೇ ಹೆಚ್ಚಾಗುತ್ತವೆ. ಕಸವನ್ನು ಹಿಂಬಾಲಿಸಿ ವರದಿ ಮಾಡುವ ಉಚಿತ ವೆಬ್‌ಸೈಟ್‌ಗಳೂ ವರ್ಷಕ್ಕೆ 12,000 (ವಾಸ್ತವದಲ್ಲಿ 24,000) ಕಸದ ತುಂಡುಗಳು ಸೇರತೊಡಗಿದಾಗ ಕೈಚೆಲ್ಲಿ ಕುಳಿತು
ಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.