ನನ್ನ ಮಗ ಸಲಿಂಗಿ. ಇದನ್ನು ಒಪ್ಪಿಕೊಳ್ಳುವುದಕ್ಕೆ ನನಗೆಈಗ ಯಾವ ಅಳುಕೂ ಇಲ್ಲ. ಆತ ಕಳೆದ ಇಪ್ಪತ್ತು ವರ್ಷಗಳಿಂದ ತನ್ನ ಸಂಗಾತಿಯ ಜೊತೆ ಬದ್ಧತೆಯಿಂದ, ಸಂತೋಷದಿಂದ ಸಂಬಂಧ ಕಾಪಾಡಿಕೊಂಡಿದ್ದಾನೆ. ನನ್ನ ಕುಟುಂಬ ಮತ್ತು ಹತ್ತಿರದ ಸ್ನೇಹಿತರು ಇದನ್ನು ಘನತೆಯಿಂದ ಒಪ್ಪಿಕೊಂಡಿದ್ದೇವೆ. ಆದರೆ, ಸಲಿಂಗ ಸಂಬಂಧ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳುವ ಕ್ಷಣದವರೆಗೆ ಈ ವಿಚಾರವಾಗಿ ನಾನು ಸಾರ್ವಜನಿಕವಾಗಿಮಾತನಾಡುವ ಧೈರ್ಯ ತೋರಿಸಿರಲಿಲ್ಲ. ಹಾಗೆ ಮಾತನಾಡಿದರೆ ಅವನಿಗೆ ಏನಾದರೂ ತೊಂದರೆ ಆದೀತು ಎಂಬ ಭಯ ಇತ್ತು. ತೀರ್ಪು ಬಂದ ನಂತರ, ನಮ್ಮ ಮೇಲಿನ ದೊಡ್ಡ ಹೊರೆಯೊಂದು ಇಲ್ಲವಾದ ಭಾವನೆ ನನ್ನಲ್ಲಿ ಮತ್ತು ನನ್ನ ಪತ್ನಿಯಲ್ಲಿ ಇದ್ದಕ್ಕಿದ್ದಂತೆ ಮೂಡಿದೆ. ‘ನನ್ನನ್ನು ನಾನು ಇರುವಂತೆಯೇ ಸ್ವೀಕರಿಸಿ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಡಿರುವ ವಿವೇಕದ ಮಾತುಗಳು ನನ್ನ ಕಿವಿಯಲ್ಲಿ ಇನ್ನೂ ರಿಂಗಣಿಸುತ್ತಿವೆ.
ನಮ್ಮ ದೇಶ ಪುರಾತನ ಕಾಲದಿಂದ ಪಾಲಿಸಿಕೊಂಡು ಬಂದಿರುವುದಕ್ಕೆ ವಿರುದ್ಧವಾದ, ದಬ್ಬಾಳಿಕೆಯ ವಸಾಹತುಶಾಹಿ ಕಾನೂನಿನ ಅಡಿ ನಾವು 157 ವರ್ಷ ಬಾಳ್ವೆ ನಡೆಸಿದ್ದೇವೆ. ಈ ನಡುವೆ, ಆಂಗ್ಲರು ತಮ್ಮ ತಪ್ಪನ್ನು ಅರ್ಥ ಮಾಡಿಕೊಂಡರು. ಅಂದರೆ, ‘ಲೈಂಗಿಕ ಆಕರ್ಷಣೆಗಳು ಸಹಜವಾಗಿ ಬರುವಂಥವು. ಜನರಿಗೆ ಅವುಗಳ ಮೇಲೆ ನಿಯಂತ್ರಣ ಇಲ್ಲ’ (ಈ ಮಾತನ್ನು ತೀರ್ಪಿನಲ್ಲಿ ಹೇಳಲಾಗಿದೆ) ಎಂಬುದನ್ನು ಅರ್ಥ ಮಾಡಿಕೊಂಡ ಬ್ರಿಟಿಷರು, ಈ ಕಾನೂನನ್ನು ಬ್ರಿಟನ್ನಿನಲ್ಲಿ ಬಹಳ ಹಿಂದೆಯೇ ರದ್ದು ಮಾಡಿದರು. ವಸಾಹತುಶಾಹಿ ವ್ಯವಸ್ಥೆಯ ಪ್ರಭಾವ ಅದೆಷ್ಟು ಆಳವಾಗಿತ್ತೆಂದರೆ, ಸೆಕ್ಷನ್ 377 ಎನ್ನುವ ಭಾರತೀಯವಲ್ಲದ ಕಾನೂನು ನಮ್ಮನ್ನು ವಸಾಹತು ಮಾಡಿಕೊಂಡಿದ್ದವರು ಇಲ್ಲಿಂದ ಹೊರನಡೆದ 71 ವರ್ಷಗಳವರೆಗೆ ಕಾನೂನು ಪುಸ್ತಕದಲ್ಲಿ ಉಳಿದುಕೊಂಡಿತ್ತು.
1947ರಲ್ಲಿ ರಾಜಕೀಯವಾಗಿ ಸ್ವತಂತ್ರವಾಗುವುದು ಅಂದರೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟು ನಾನು ದೊಡ್ಡವನಾಗಿರಲಿಲ್ಲ. ಆದರೆ, 1991ರ ವೇಳೆಗೆ, ನಮ್ಮ ಆರ್ಥಿಕ ಸ್ವಾತಂತ್ರ್ಯವನ್ನು ಸಂಭ್ರಮದಿಂದ ಆಚರಿಸುವಷ್ಟು ದೊಡ್ಡವ ಆಗಿದ್ದೆ. ಹಾಗೆಯೇ, 2018ರ ಸೆಪ್ಟೆಂಬರ್ 6ರಂದು ನಮಗೆ ದೊರೆತ ‘ಭಾವನಾತ್ಮಕ ಸ್ವಾತಂತ್ರ್ಯ’ಕ್ಕೆ ಮೆಚ್ಚುಗೆ ಸೂಚಿಸಲಾರದಷ್ಟು ವಯಸ್ಸೇನೂ ನನಗೆ ಆಗಿರಲಿಲ್ಲ. ಸಂಪ್ರದಾಯಗಳ ನೆರಳಿನಿಂದ ಆಧುನಿಕತೆಯತ್ತ ಸಾಗುತ್ತಿರುವ ಹಂತದಲ್ಲಿರುವ ದೇಶ ನಮ್ಮದು. ನಾವು ನಮ್ಮ ಆರ್ಥಿಕ ಮತ್ತು ರಾಜಕೀಯ ಜೀವನದ ಬಗ್ಗೆ ಎಷ್ಟು ಮುಕ್ತವಾಗಿ ಮಾತನಾಡುತ್ತೇವೋ, ಎಷ್ಟು ಮುಕ್ತವಾಗಿ ಕ್ರಿಯಾಶೀಲರಾಗುತ್ತೇವೋ ಅಷ್ಟೇ ಮುಕ್ತವಾಗಿ ನಮ್ಮ ಭಾವನಾತ್ಮಕ ವಿಚಾರಗಳ ಬಗ್ಗೆಯೂ ಮಾತು, ಕ್ರಿಯೆ ಇರಬೇಕು. ನಾವು ಬಹುಕಾಲದಿಂದ ನಮ್ಮ ಭಾವನೆಗಳನ್ನು ಹತ್ತಿಕ್ಕಿಕೊಂಡಿದ್ದೇವೆ. ಪುರುಷ ಪ್ರಧಾನ ಪಡಿಯಚ್ಚಿನಲ್ಲಿ ಬಾಳ್ವೆ ನಡೆಸಿಕೊಂಡು ಬಂದಿದ್ದೇವೆ. ರಹಸ್ಯ ಎಂಬುದು ಆರೋಗ್ಯಕರ ಸಮಾಜಕ್ಕೆ ಒಳ್ಳೆಯದಲ್ಲ.
ಐತಿಹಾಸಿಕ ತೀರ್ಪಿಗೆ ಪೂರಕವಾಗಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಪಶ್ಚಿಮದ ಮಹಾನ್ ಲೇಖಕರ ಮಾತುಗಳನ್ನು ಉಲ್ಲೇಖಿಸಿದ್ದಾರೆ. ನ್ಯಾಯಮೂರ್ತಿಗಳು ಭಾರತದ ಕೆಲವು ಶಾಸ್ತ್ರ ಗ್ರಂಥಗಳನ್ನು ಕೂಡ ಉಲ್ಲೇಖಿಸಬಹುದಿತ್ತು. ಅವುಗಳಲ್ಲಿ ಕೂಡ ಲೈಂಗಿಕ ಬಹುತ್ವದ ಬಗ್ಗೆ ಗಮನಾರ್ಹ ಸಹಿಷ್ಣುತೆ ವ್ಯಕ್ತವಾಗಿದೆ. ಹೆಣ್ಣು ಗಂಡಾಗಿ ಪರಿವರ್ತನೆ ಆದ, ಗಂಡು ಹೆಣ್ಣಾಗಿ ಪರಿವರ್ತನೆ ಆದ ಕತೆಗಳು ನಮ್ಮ ಮಹಾಕಾವ್ಯಗಳಲ್ಲಿ ಹೇರಳವಾಗಿವೆ. ಅವು ಈ ಕಥೆಗಳನ್ನು ವಿಕಾರಗಳಿಲ್ಲದೆ ಹೇಳುತ್ತವೆ. ಹಾಗೆ ಹೇಳುವ ಸಂದರ್ಭದಲ್ಲಿ ನಾಚಿಕೆ ಅಥವಾ ಅಪರಾಧ ಪ್ರಜ್ಞೆ ಕಾಣುವುದಿಲ್ಲ. ವನಿತಾ ಮತ್ತು ಕಿದ್ವಾಯಿ ಬರೆದಿರುವ ‘ಸೇಮ್ ಸೆಕ್ಸ್ ಲವ್ ಇನ್ ಇಂಡಿಯಾ: ರೀಡಿಂಗ್ ಫ್ರಂ ಲಿಟರೇಚರ್ ಅಂಡ್ ಹಿಸ್ಟರಿ’ ಪುಸ್ತಕದಲ್ಲಿ ಇಂತಹ ಕಥೆಗಳ ಸಾಕಷ್ಟು ಉದಾಹರಣೆಗಳು ಇವೆ.
ಕಾಮ ಮತ್ತು ಭೋಗವನ್ನು ಜೀವನದ ಪುರುಷಾರ್ಥಗಳಲ್ಲಿ ಒಂದು ಎನ್ನುವ ಹಂತಕ್ಕೆ ಒಯ್ದ ಏಕೈಕ ನಾಗರಿಕತೆ ಭಾರತದ್ದು. ಧರ್ಮ, ಅರ್ಥ, ಮೋಕ್ಷಗಳ ಜೊತೆಯಲ್ಲೇ ಕಾಮವನ್ನೂ ನಾವು ಪೂರೈಸಿಕೊಳ್ಳಬೇಕು. ‘ಧರ್ಮ’ದ ಬಗ್ಗೆ ನಮ್ಮನ್ನು ಮತ್ತೆ ಮತ್ತೆ ನೆನಪಿಸಲಾಗುತ್ತದೆ. ಆದರೆ, ನಮಗೆ ನಾವೇ ಮಾಡಿಕೊಳ್ಳಬೇಕಿರುವ ಕರ್ತವ್ಯ ‘ಕಾಮ’ ಎಂಬ ಆಲೋಚನೆ ನಮ್ಮಿಂದ ದೂರವಾಗಿಬಿಟ್ಟಿರುತ್ತದೆ. ಮನುಷ್ಯನ ಸ್ಥಿತಿ ತಂದಿಡುವ ಒಂಟಿತನಕ್ಕೆ ಲೈಂಗಿಕ ಸುಖ ಎಂಬುದು ಪರಿಹಾರ ಇದ್ದಂತೆ.
ಕ್ರೈಸ್ತ ಪರಂಪರೆಯ ಪ್ರಕಾರ ಆರಂಭದಲ್ಲಿ ಇದ್ದಿದ್ದು ಒಂದು ಬೆಳಕು. ಋಗ್ವೇದದ ಪ್ರಕಾರ ಆರಂಭದಲ್ಲಿ ಇದ್ದಿದ್ದು ‘ಕಾಮ’, ಆಸೆಯ ಬೀಜದಿಂದ ಬ್ರಹ್ಮಾಂಡ ಸೃಷ್ಟಿಯಾಯಿತು. ‘ಪ್ರಜ್ಞೆ’ಯ ಮೊದಲ ಕೆಲಸ ‘ಬಯಕೆ’. ಇದನ್ನು ಭಾರತೀಯರು ‘ಶಕ್ತಿ’ ಎಂದರು. ಇದು ಲೈಂಗಿಕ ಇಚ್ಛೆ ಹಾಗೂ ಜೀವ ಸ್ವಭಾವದ ಮೂಲ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಕ್ರೈಸ್ತ ಸಂಪ್ರದಾಯದಲ್ಲಿ ಬಯಕೆ ಎಂಬುದನ್ನು ಪಾಪ, ನಾಚಿಕೆ ಹಾಗೂ ಅಪರಾಧ ಪ್ರಜ್ಞೆಯ ಜೊತೆ ಸಮೀಕರಿಸಲಾಯಿತು. ಇಂದಿನ ಭಾರತದ ಮಧ್ಯಮ ವರ್ಗದಲ್ಲಿ ಲೈಂಗಿಕತೆಯ ಬಗ್ಗೆ ಇರುವ ನಾಚಿಕೆಯ ಸ್ವಭಾವಕ್ಕೆ ನಾವು ಬ್ರಿಟಿಷರತ್ತ ಬೆರಳು ಮಾಡುತ್ತೇವೆ. ಆದರೆ, ‘ಕಾಮ’ದ ವಿಚಾರವಾಗಿ ಭಾರತೀಯರ ಮನಸ್ಸಿನ ಆಳದಲ್ಲಿ ಇರುವುದು ಕೆಟ್ಟದ್ದನ್ನು ಮಾತ್ರ ಕಾಣುವ ಧೋರಣೆ.
‘ಕಾಮ’ದ ತೃಪ್ತಿಕೊಡದ ಸ್ವಭಾವವು ಎರಡೂವರೆ ಸಾವಿರ ವರ್ಷಗಳಿಗೂ ಹಿಂದೆ ಉತ್ತರ ಭಾರತದ ಅರಣ್ಯಗಳಲ್ಲಿನ ಯೋಗಿಗಳು, ವಿರಾಗಿಗಳು ಮತ್ತು ಬುದ್ಧನನ್ನು ಆಲೋಚನೆಗೆ ಈಡುಮಾಡಿತ್ತು. ‘ಕಾಮ’ವನ್ನು ತೃಪ್ತಿಪಡಿಸುವ ಮಾರ್ಗಗಳನ್ನು ಹುಡುಕುವ ಯತ್ನವನ್ನು ಅವರು ನಡೆಸಿದರು. ಮನಸ್ಸಿನ ಚಂಚಲತೆಯನ್ನು ತಡೆಯಲು ಪತಂಜಲಿ ಚಿತ್ತ ವೃತ್ತಿ ನಿರೋಧ ಕಲಿಸಿದರು. ‘ಕಾಮ’ ದೇವ ಶಿವನ ಸಹಸ್ರ ವರ್ಷಗಳ ಧ್ಯಾನಕ್ಕೆ ಅಡ್ಡಿ ಮಾಡಿದಾಗ, ಶಿವ ಅವನನ್ನು ಸುಟ್ಟುಹಾಕಿದ. ಹಾಗಾಗಿ, ‘ಕಾಮ’ವು ಮನಸ್ಸಿನಲ್ಲಿ ಅನಂಗ ರೂಪದಲ್ಲಿದ್ದು ಕಾಮವನ್ನು ಗೆಲ್ಲುವುದು ಕಷ್ಟ.
‘ಕಾಮ’ದ ಬಗ್ಗೆ ಕೆಟ್ಟದನ್ನು ಮಾತ್ರ ಕಾಣುವ ಆಲೋಚನೆಗಳಿಗೆ ವಿರುದ್ಧವಾದ ಇನ್ನೊಂದು ಆಲೋಚನೆ ಕೂಡ ನಮ್ಮಲ್ಲಿದೆ. ಅದು ಕಾಮವನ್ನು ‘ಜೀವನದ ಚಾಲಕಶಕ್ತಿ’ ಎಂಬಂತೆ ಕಾಣುತ್ತದೆ. ಈ ಆಲೋಚನಾ ಕ್ರಮದ ಅನ್ವಯ ಕಾಮ ಎಂಬುದು ಕ್ರಿಯೆ, ಸೃಷ್ಟಿ ಮತ್ತು ಸಂತಾನಾಭಿವೃದ್ಧಿಯ ಮೂಲ. ಈ ಆಲೋಚನಾ ಕ್ರಮ ಸಂಸ್ಕೃತದಲ್ಲಿ ‘ಕಾಮಸೂತ್ರ’ ಎಂಬ ಕೃತಿಯ ಜನನಕ್ಕೆ ಕಾರಣವಾಯಿತು. ಇದು ಲೈಂಗಿಕತೆ ಕುರಿತ ಕೈಪಿಡಿ ಅಲ್ಲ. ಇದು ಜೀವನಕಲೆಯ ಬಗ್ಗೆ ಇರುವ ಆಧುನಿಕ ಮತ್ತು ಆಕರ್ಷಕ ಮಾರ್ಗದರ್ಶಿ. ‘ನಿನ್ನ ಬಗ್ಗೆ ಮಾತ್ರ ಮಾತನಾಡಿಕೊಳ್ಳಬೇಡ. ಅವಳ ಬಗ್ಗೆಯೂ ಮಾತನಾಡು’ ಎಂದು ‘ಕಾಮಸೂತ್ರ’ವು ನಗರಕನಿಗೆ ಸಲಹೆ ಮಾಡುತ್ತದೆ. ಹಾಗೆಯೇ, ‘ಸಂಸ್ಕೃತದಲ್ಲಿ ಮಾತ್ರ ಮಾತನಾಡುತ್ತ ದೊಡ್ಡಸ್ತಿಕೆ ತೋರಿಸಬೇಡ, ಜನಸಾಮಾನ್ಯರ ಭಾಷೆಯಾದ ಪ್ರಾಕೃತದಲ್ಲಿ ಮಾತನಾಡು’ ಎಂದೂ ‘ಕಾಮಸೂತ್ರ’ ಹೇಳುತ್ತದೆ.
ಈ ಎರಡು ಆಲೋಚನಾ ಕ್ರಮಗಳ ನಡುವಣ ಸಂಘರ್ಷದಲ್ಲಿ ವಾಸ್ತವವಾದಿಗಳ ಇನ್ನೊಂದು ಆಲೋಚನಾ ಕ್ರಮ ಮೂಡಿತು. ಈ ಆಲೋಚನಾ ಕ್ರಮವನ್ನು ಒಪ್ಪಿದವರು ಧರ್ಮಶಾಸ್ತ್ರಗಳನ್ನು ರಚಿಸಿದರು. ಕಾಮೋದ್ರೇಕ ಮತ್ತು ಕಾಮದ ವಿಚಾರದಲ್ಲಿ ಸಂಯಮ ಎಂಬುದು ಮನುಷ್ಯನ ಸ್ವಭಾವದ ಎರಡು ಮುಖಗಳು ಎಂಬುದನ್ನು ಇವರು ಅರಿತರು. ಹಾಗಾಗಿ, ಲೈಂಗಿಕತೆ ಎಂಬುದು ಮದುವೆ ಎನ್ನುವ ವ್ಯವಸ್ಥೆಯ ನಡುವೆ ಇದ್ದರೆ ಒಳಿತು ಎಂದು ಹೇಳಿದರು. ಮನುಷ್ಯರು ಇತರ ಪ್ರಾಣಿಗಳಂತೆ ಅಲ್ಲ; ಮನುಷ್ಯರು ಸಹಜ ಸ್ವಭಾವಗಳನ್ನು ಮಾತ್ರ ಆಧರಿಸಿ ಜೀವನ ಮಾಡಲಾಗದು ಎಂಬುದನ್ನು ಕಾಮದ ವಿಚಾರದಲ್ಲಿ ವಾಸ್ತವವಾದಿಗಳು ಅರ್ಥ ಮಾಡಿಕೊಂಡರು. ಸಹಜ ಸ್ವಭಾವದಿಂದ ಮೂಡುವ ಬಯಕೆಗಳು ನಮ್ಮ ಇಂದ್ರಿಯಗಳಿಂದ ನಮ್ಮ ಕಲ್ಪನೆಯನ್ನು ತಲುಪುತ್ತವೆ. ಅಲ್ಲಿ ಅವು ನಿರ್ದಿಷ್ಟ ವ್ಯಕ್ತಿಯ ಸುತ್ತ ರಮ್ಯ ಲೋಕವೊಂದನ್ನು ಕಟ್ಟುತ್ತವೆ. ಇದು ಪ್ರೀತಿ ಮೂಡಲು ಕಾರಣವಾಗುತ್ತದೆ. ವಾಸ್ತವವಾದಿಗಳು ಮನುಷ್ಯನ ಈ ಸ್ವಭಾವ ಅರಿತು, ಸಮಾಜ ಸೌಹಾರ್ದದಿಂದ ಇರಬೇಕು ಎಂಬ ಕಾರಣಕ್ಕೆ ಮದುವೆ ಎನ್ನುವ ವ್ಯವಸ್ಥೆಯನ್ನು ರೂಪಿಸಿದರು. ‘ಕಾಮದಲ್ಲಿ ವಾಸ್ತವವಾದ’ವನ್ನು ಮಹಾಭಾರತದಲ್ಲಿ ಕಟ್ಟಿಕೊಡಲಾಗಿದೆ. ಪತ್ನಿ ಪ್ರತಿ ರಾತ್ರಿ ಬೇರೆ ಬೇರೆ ಪುರುಷರ ಜೊತೆ ಮಲಗುತ್ತಾಳೆ ಎಂಬುದು ಗೊತ್ತಿದ್ದರೂ ತಂದೆ ತಲೆಕೆಡಿಸಿಕೊಂಡಿಲ್ಲ ಎಂದು ತಿಳಿದ ಶ್ವೇತಕೇತು ಆಘಾತಕ್ಕೆ ಒಳಗಾಗಿ, ‘ಮದುವೆ ಒಬ್ಬರ ಜೊತೆ ಮಾತ್ರ’ ಎನ್ನುವ ನಿಯಮ ಜಾರಿಗೆ ತರುತ್ತಾನೆ.
ಇಂತಹ ಆಲೋಚನೆಗಳು ಇದ್ದ ಆಧುನಿಕಪೂರ್ವ ಲೋಕದೊಳಕ್ಕೆ ಬ್ರಿಟಿಷರ ಪ್ರವೇಶ ಆಯಿತು. ಅವರಲ್ಲಿ ಇದ್ದಿದ್ದು ಕಾಮದ ವಿಚಾರದಲ್ಲಿ ಕೆಟ್ಟದನ್ನು ಮಾತ್ರ ಕಾಣುವ ಮನಸ್ಥಿತಿ. ಈ ಬಗ್ಗೆ ಜಾರ್ಜ್ ಬರ್ನಾರ್ಡ್ ಶಾ ‘ಬ್ರಿಟಿಷ್ ಮಧ್ಯಮ ವರ್ಗದ ನೈತಿಕತೆ’ ಎಂದು ಕರೆದಿದ್ದರು. ಈ ಮನಸ್ಥಿತಿಯು ಸೆಕ್ಷನ್ 377ರಂತಹ ನಿಯಮಗಳನ್ನು ರೂಪಿಸಿತು. ಅದೃಷ್ಟದ ವಿಚಾರವೆಂದರೆ, 1990ರ ದಶಕದಲ್ಲಿ ಭಾರತದ ನಗರಗಳ ಯುವಕರ ಮನಸ್ಸು ವಸಾಹತುಶಾಹಿ ಪ್ರಭಾವದಿಂದ ಹೊರಬರಲು ಆರಂಭವಾದ ನಂತರ ಭಾರತದ ಇನ್ನಷ್ಟು ಆಶಾಭಾವದ ಯುಗ ಶುರುವಾಯಿತು. ಸಲಿಂಗಿಗಳ ನಡುವಣ ಸಂಬಂಧದ ಬಗ್ಗೆ 2009ರಲ್ಲಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಜೆ.ಪಿ. ಶಾ ಅವರು ನೀಡಿದ ತೀರ್ಪಿನ ಮೂಲಕ ಇದು ಉತ್ತುಂಗ ತಲುಪಿತು. ಆದರೆ, 2013ರಲ್ಲಿ ತುಸು ಪ್ರತಿಗಾಮಿಯಾದ ನಡೆ ಸ್ವಲ್ಪ ಅವಧಿಗೆ ವ್ಯಕ್ತವಾಗಿತ್ತು.
ಹೀಗಿದ್ದರೂ, ಈಗ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಹೊಸ ಶಕೆಯೊಂದು ಆರಂಭವಾಗಿದೆ. ಸಮಾಜದಲ್ಲಿ ಮನೆಮಾಡಿರುವ ಪೂರ್ವಗ್ರಹಗಳನ್ನು ನ್ಯಾಯಾಲಯದ ಒಂದು ತೀರ್ಪು ಹೋಗಲಾಡಿಸಲು ತುಸು ಸಮಯ ಬೇಕಾಗುತ್ತದೆ. ಅದರಲ್ಲೂ, ‘ಲವ್ ಜಿಹಾದ್’, ಪ್ರೇಮಿಗಳ ದಿನ (ಇದನ್ನು ಶಶಿ ತರೂರ್ ಅವರು ನೀಡಿರುವ ಸಲಹೆಯಂತೆ ‘ಕಾಮದೇವ ದಿನ’ ಎಂದು ಕರೆಯಬೇಕು) ವಿಚಾರದಲ್ಲಿ ಬಲಪಂಥೀಯ ಗುಂಪುಗಳು ವೈಚಾರಿಕ ಮನಸ್ಸನ್ನು ಕಳೆದುಕೊಳ್ಳುತ್ತಿರುವಂತೆ ಕಾಣುತ್ತಿರುವ ಈ ಹೊತ್ತಿನಲ್ಲಿ, ರೋಮಿಯೊ ದಳಗಳು ಬೇಕಾಬಿಟ್ಟಿ ಓಡಾಡಿಕೊಂಡಿರುವ ಸಂದರ್ಭದಲ್ಲಿ ತೀರ್ಪು ಪ್ರಭಾವ ಬೀರಲು ತುಸು ಸಮಯ ಬೇಕು.
ನಾಗರಿಕ ಸಮಾಜ ಆಗಿರುವುದು ಅಂದರೆ ‘ನಾನು ನನ್ನ ವಿರುದ್ಧ ಲಿಂಗದವರನ್ನೇ ಇಷ್ಟಪಡುತ್ತೇನೆ. ಆದರೆ, ಸಲಿಂಗ ಸಂಬಂಧ ಹೊಂದುವ ನಿನ್ನ ಇಚ್ಛೆಗೆ ವಿರೋಧ ವ್ಯಕ್ತಪಡಿಸುವುದಿಲ್ಲ’ ಎಂದು ಅರ್ಥ ಎಂಬುದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಅಂತರ್ಗತವಾಗಿದೆ. ಮುಕ್ತ ಮತ್ತು ನಾಗರಿಕ ಸಮಾಜದಲ್ಲಿ ನಾವು ನಮಗಿಂತ ಭಿನ್ನವಾಗಿರುವ ವ್ಯಕ್ತಿಗಳನ್ನು ಗೌರವಿಸುವುದನ್ನು ಕಲಿಯಬೇಕು. ಬೆಡ್‌ರೂಂನಲ್ಲಿ ನಡೆಯುವ ಸಂಗತಿಗಳಲ್ಲಿ ಪ್ರಭುತ್ವ ಮೂಗು ತೂರಿಸಬಾರದು. ನಮ್ಮ ಮುಕ್ತ ಹಾಗೂ ಲವಲವಿಕೆಯ ಪರಂಪರೆಯಿಂದ ನಾವು ಒಳ್ಳೆಯದನ್ನು ಕಲಿಯಬೇಕು. ಜೀವನದ ಚತುರ್ವಿಧ ಪುರುಷಾರ್ಥಗಳ ಸಮತೋಲನದಿಂದ ಸಂತೃಪ್ತಿ ಕಂಡುಕೊಳ್ಳುವ ರಹಸ್ಯ ನಮ್ಮ ಪರಂಪರೆಯಲ್ಲಿ ಅಡಗಿದೆ.
ಲೇಖಕ: ‘ಕಾಮ: ದಿ ರಿಡಲ್ ಆಫ್ ಡಿಸೈರ್’ ಪುಸ್ತಕ ಬರೆದಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.