ಕೆಲವು ಸಂಗತಿಗಳನ್ನು ಊಹಿಸುವುದು ಕಷ್ಟ. ಅಚಾನಕ್ ಆಗಿ ಸಂಭವಿಸುವ ಕೆಲವು ಪ್ರಕರಣಗಳು ದಿಗ್ಭ್ರಮೆ, ಆತಂಕ ಅಥವಾ ಅಚ್ಚರಿಯನ್ನಷ್ಟೇ ಮೂಡಿಸುವುದಿಲ್ಲ, ಅಂತಹ ಪ್ರಕರಣಗಳಿಂದ ಬೇರೂರಿದ್ದ ನಂಬಿಕೆಗಳು ಕದಲಬಹುದು, ಗ್ರಹಿಕೆ ತಪ್ಪು ಎನಿಸಬಹುದು ಮತ್ತು ಭ್ರಮೆ ಕಳಚಿ ಬೀಳಬಹುದು.
ರಷ್ಯಾಕ್ಕೆ ಸಂಬಂಧಿಸಿದಂತೆ ಅಂತಹದೊಂದು ಪ್ರಕರಣ ಜೂನ್ 24ರಂದು ನಡೆಯಿತು. ಉಕ್ರೇನ್ ಸೈನಿಕರ ವಿರುದ್ಧ ರಷ್ಯಾವು ವ್ಯಾಗ್ನರ್ ಪಡೆಯನ್ನು ಬಳಸುತ್ತಿದೆ ಎಂಬುದು ಗೋಪ್ಯವಾಗಿಯೇನೂ ಇರಲಿಲ್ಲ. ರಷ್ಯಾದ ಕೈದಿಗಳಿಗೆ ಸಜೆ ಕಡಿತಗೊಳಿಸುವ ಮತ್ತು ಹಣ ನೀಡುವ ಆಮಿಷವೊಡ್ದಿ ವ್ಯಾಗ್ನರ್ ಪಡೆಯನ್ನು ಕಟ್ಟಲಾಗಿದೆ. ವ್ಯಾಗ್ನರ್ ಸೈನಿಕರು ಯುದ್ಧನೀತಿಯನ್ನು ಅನುಸರಿಸುವುದಿಲ್ಲ, ಸೆರೆ ಸಿಕ್ಕ ಶತ್ರುಪಡೆಯ ಸೈನಿಕರನ್ನು ಹಿಂಸಿಸಿ ಕೊಲ್ಲುತ್ತಾರೆ ಎಂಬೆಲ್ಲಾ ಮಾತುಗಳು ಜಾಗತಿಕ ಚಾವಡಿಯಲ್ಲಿ ಕೇಳಿಬರುತ್ತಿದ್ದವು.
ಆದರೆ ರಷ್ಯಾದ ಪರ ಕಾದಾಡಲು ಸಜ್ಜುಗೊಂಡವರೇ ರಷ್ಯಾದ ವಿರುದ್ಧ ತಿರುಗಿಬೀಳಬಹುದು ಎಂದು ಯಾರೂ ಊಹಿಸಿರಲಿಲ್ಲ.
ಸೋವಿಯತ್ ಅವಧಿಯಲ್ಲಿ ಅದರ ರಕ್ಷಣಾ ಮತ್ತು ಗುಪ್ತಚರ ಇಲಾಖೆಯಾದ ಕೆಜಿಬಿಯಲ್ಲಿ ಕಾರ್ಯನಿರ್ವಹಿಸಿದ್ದ, ತಂತ್ರಗಾರಿಕೆಯಲ್ಲಿ ನಿಪುಣ ಎನಿಸಿರುವ ಪುಟಿನ್ ಕೂಡ ಈ ಬಗ್ಗೆ ಯೋಚಿಸಿರಲಿಲ್ಲವೇ? ಜೂನ್ 24ರಂದು ವ್ಯಾಗ್ನರ್ ಪಡೆ ಮಾಸ್ಕೊ ಕಡೆ ದಾಂಗುಡಿಯಿಟ್ಟಾಗ, ಪುಟಿನ್ ಅವರಂತಹ ಗಟ್ಟಿಗ ಕೂಡ ಕೆಲವು ಗಂಟೆಗಳ ಕಾಲ ವಿಚಲಿತಗೊಂಡಂತೆ ಕಂಡರು.
ಸಾಮಾನ್ಯವಾಗಿ ಯಾವುದೇ ಭಾವನೆಯನ್ನು ಸುಲಭಕ್ಕೆ ಅಭಿವ್ಯಕ್ತಿಸದ, ಗಂಭೀರ ಮುಖಮುದ್ರೆಯ ಪುಟಿನ್, ಅಂದು ಮುಂಜಾನೆ ರಷ್ಯಾದ ನಾಗರಿಕರನ್ನು ಉದ್ದೇಶಿಸಿ ಗಡಿಬಿಡಿಯಲ್ಲಿ ನಾಲ್ಕು ಮಾತನಾಡಿದರು. ವ್ಯಾಗ್ನರ್ ಪಡೆ ನಂಬಿಕೆದ್ರೋಹದ ಕೆಲಸ ಮಾಡಿದೆ, ಬೆನ್ನಿಗೆ ಚೂರಿ ಇರಿದವರನ್ನು ಶಿಕ್ಷಿಸದೇ ಬಿಡುವುದಿಲ್ಲ, ರಷ್ಯಾವನ್ನು ಪ್ರೀತಿಸುವ ಯಾರೂ ಈ ದ್ರೋಹಿಗಳ ಜೊತೆ ಸಹಕರಿಸಬಾರದು ಎಂದು ಮನವಿ ಮಾಡಿದರು.
ಆನಂತರ ಪುಟಿನ್ ಕೈಗೊಂಡ ಕ್ರಮವೇನು ಎಂಬುದು ಜಗತ್ತಿಗೆ ತಿಳಿಯಲಿಲ್ಲ. ಕೆಲ ಗಂಟೆಗಳ ಬಳಿಕ ವ್ಯಾಗ್ನರ್ ನಾಯಕ ಪ್ರಿಗೋಜಿನ್, ಮಾಸ್ಕೊ ಮುತ್ತಿಗೆಯನ್ನು ಕೈಬಿಟ್ಟಿರುವುದಾಗಿ ಹೇಳಿದರು. ವ್ಯಾಗ್ನರ್ ಪಡೆಗೆ ಬೆಲಾರಸ್ ಆಶ್ರಯ ನೀಡಲಿದೆ ಎಂಬ ಸುದ್ದಿ ಬಂತು. ರಷ್ಯಾದಲ್ಲಿ ಮಾರನೆಯ ಬೆಳಗು ಆತಂಕಮುಕ್ತವಾಗಿತ್ತು.
ಜೂನ್ 24ರಂದು 24 ಗಂಟೆಗಳ ಅವಧಿಯಲ್ಲಿ ನಡೆದ ಈ ವಿದ್ಯಮಾನದಿಂದ ವ್ಯಾಗ್ನರ್ ಪಡೆಯ ನಾಯಕ ಪ್ರಿಗೋಜಿನ್ ಖಳನಾಯಕನಾಗಿ ಜಗತ್ತಿಗೆ ಪರಿಚಯವಾದರೆ, ಬೆಲಾರಸ್ ಅಧ್ಯಕ್ಷ ಲುಕಶೆಂಕೋ ನಾಯಕನಾಗಿ ಹೊರಹೊಮ್ಮಿದರು. ಪುಟಿನ್ ಅವರ ಅಸಹಾಯಕತೆ, ರಷ್ಯಾದ ಆಂತರಿಕ ಒಡಕು, ಆಡಳಿತದ ದೌರ್ಬಲ್ಯ ಜಾಹೀರಾಯಿತು.
ಹಾಗಾದರೆ ಪುಟಿನ್ ಪ್ರಬಲ ನಾಯಕನಾಗಿ ಉಳಿದಿಲ್ಲವೇ? ಈ ಪ್ರಶ್ನೆಯನ್ನು ಇಟ್ಟುಕೊಂಡೇ ಕೆಲವು ಸಂಗತಿಗಳನ್ನು ಗಮನಿಸಬೇಕು. ವ್ಯಾಗ್ನರ್ ನಾಯಕ ಪ್ರಿಗೋಜಿನ್ ಏಕಾಏಕಿ ಉಕ್ರೇನ್ ಗಡಿ ಬಿಟ್ಟು ಮಾಸ್ಕೊದತ್ತ ಹೆಜ್ಜೆ ಹಾಕಲಿಲ್ಲ. ಅವರು ಮೊದಲಿಗೆ ರಷ್ಯಾದ ರಕ್ಷಣಾ ಸಚಿವರ ವಿರುದ್ಧ ಮಾತನಾಡಿದರು. ಭ್ರಷ್ಟ ಅಧಿಕಾರಿಗಳು ಮತ್ತು ಸೇನಾ ಮುಖ್ಯಸ್ಥರು ತಮ್ಮ ಸ್ವಾರ್ಥಕ್ಕಾಗಿ ರಷ್ಯಾದ ಹಿತವನ್ನು ಬಲಿ ಕೊಡುತ್ತಿದ್ದಾರೆ, ವ್ಯಾಗ್ನರ್ ಸೈನಿಕರಿಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿಲ್ಲ, ಹಾಗಾಗಿ ಯುದ್ಧದಲ್ಲಿ ಹಿನ್ನಡೆಯಾಗುತ್ತಿದೆ, ನೂರಾರು ಸೈನಿಕರು ಪ್ರಾಣತೆರುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಆರೋಪಿಸಿದರು.
ರಕ್ಷಣಾ ಸಚಿವರ ಕುರಿತು ಟೀಕೆ ಬಂದಾಗ ಪುಟಿನ್ ಪ್ರತಿಕ್ರಿಯಿಸಲಿಲ್ಲ. ವ್ಯಾಗ್ನರ್ ಪಡೆ ಮಾಸ್ಕೊದತ್ತ ಮುಖಮಾಡಿದಾಗ, ರಷ್ಯಾದ ಆಂತರಿಕ ಭದ್ರತಾ ಪಡೆ ಮತ್ತು ಸೇನೆ, ನಿಮ್ಮ ಯೋಜನೆಯನ್ನು ಕೈಬಿಡಿ ಎಂದು ವ್ಯಾಗ್ನರ್ ಪಡೆಗೆ ಮನವಿ ಮಾಡಿದವೇ ಪರಂತು ದಂಗೆಯನ್ನು ಮಟ್ಟಹಾಕುವ ದಿಸೆಯಲ್ಲಿ ವ್ಯಾಗ್ನರ್ ಗುಂಪಿನ ಮೇಲೆ ಎರಗಲಿಲ್ಲ!
ಇದೀಗ ವ್ಯಾಗ್ನರ್ ಪ್ರಕರಣ ನಡೆದು ಎರಡು ವಾರಗಳು ಕಳೆದರೂ, ಪ್ರಿಗೋಜಿನ್ ಎಲ್ಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ. ವ್ಯಾಗ್ನರ್ ಗುಂಪಿನ ವಿರುದ್ಧ ಪುಟಿನ್ ಏನಾದರೂ ಕ್ರಮ ಕೈಗೊಂಡರೇ ಎಂಬ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ! ಈ ಎಲ್ಲ ಸಂಗತಿಗಳನ್ನು ಗಮನಿಸಿದಾಗ, ಮೇಲ್ನೋಟಕ್ಕೆ ಪುಟಿನ್ ಅಸಹಾಯಕರಂತೆ ಕಂಡರೂ, ಒಟ್ಟಾರೆಯಾಗಿ ಈ ವ್ಯಾಗ್ನರ್ ಪ್ರಕರಣ ಅವರ ತಂತ್ರಗಾರಿಕೆಯ ಒಂದು ಭಾಗವೇ ಎಂಬ ಸಣ್ಣ ಅನುಮಾನಕ್ಕೂ ಜಾಗ ಒದಗಿಸಿದೆ.
ಉಕ್ರೇನ್ ಯುದ್ಧ ಇದೀಗ 500 ದಿನಗಳನ್ನು ಪೂರೈಸಿದೆ. ಯುದ್ಧ ಆರಂಭವಾದಾಗ ಎರಡು ಸಾಧ್ಯತೆಗಳ ಬಗ್ಗೆ ಚರ್ಚೆ ನಡೆದಿತ್ತು. ಮೊದಲನೆಯದು, ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಹೇರಿದ ಆರ್ಥಿಕ ದಿಗ್ಬಂಧನದಿಂದ ರಷ್ಯಾದ ಜನ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಯುದ್ಧ ದೀರ್ಘಾವಧಿಗೆ ಮುಂದುವರಿದರೆ, ರಷ್ಯಾದ ಜನ ಪುಟಿನ್ ಅವರ ವಿರುದ್ಧ ದಂಗೆ ಏಳಬಹುದು. ಆಗ ಯುದ್ಧ ಅಂತ್ಯಗೊಳ್ಳಬಹುದು. ಎರಡನೆಯದು, ಅಮೆರಿಕದ ಶಸ್ತ್ರಾಸ್ತ್ರಗಳಿಂದಾಗಿ ಉಕ್ರೇನ್ ಸೈನಿಕರು ಮೇಲುಗೈ ಸಾಧಿಸಬಹುದು. ದಿನಕಳೆದಂತೆ ರಷ್ಯಾದ ಸೈನಿಕರು ನೈತಿಕ ಸ್ಥೈರ್ಯ ಕಳೆದುಕೊಳ್ಳಬಹುದು. ಈ ‘ಅನವಶ್ಯಕ ಯುದ್ಧ’ ರಷ್ಯಾದ ಸೇನೆಯಲ್ಲಿ ಒಡಕು ಉಂಟು ಮಾಡಿ ಸೇನಾ ದಂಗೆಗೆ ಕಾರಣವಾಗಬಹುದು. ಹಾಗಾದಾಗ ಯುದ್ಧದ ಅಂತ್ಯ ಸಾಧ್ಯ ಎನ್ನಲಾಗಿತ್ತು.
ಆದರೆ ಈ 500 ದಿನಗಳಲ್ಲಿ ರಷ್ಯಾ ಆರ್ಥಿಕವಾಗಿ ಹೆಚ್ಚು ಬಾಧೆಗೊಳಗಾದಂತೆ ಕಾಣುತ್ತಿಲ್ಲ. ಅದು ತನ್ನ ಉತ್ಪನ್ನಗಳಿಗೆ ಬದಲಿ ಗ್ರಾಹಕರನ್ನು ಹುಡುಕಿಕೊಂಡಿದೆ. ಅಗತ್ಯ ವಸ್ತುಗಳನ್ನು ಮತ್ತೊಂದು ದಿಕ್ಕಿನಿಂದ ಪಡೆಯುತ್ತಿದೆ. ಹಾಗಾಗಿ ಪುಟಿನ್ ವಿರುದ್ಧ ಜನ ದಂಗೆ ಏಳುವ ಸಾಧ್ಯತೆ ಕ್ಷೀಣಿಸಿದೆ. ಆದರೆ ಎರಡನೇ ಸಾಧ್ಯತೆಯನ್ನು ಪೂರ್ಣವಾಗಿ ತಳ್ಳಿಹಾಕುವಂತಿಲ್ಲ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹಿನ್ನಡೆ ಮುಂದುವರಿದರೆ, ರಷ್ಯಾದ ಸೇನೆಯಲ್ಲಿ ಗುಪ್ತವಾಗಿರುವ ಭಿನ್ನಮತ ಬಹಿರಂಗಗೊಳ್ಳಬಹುದು. ವ್ಯಾಗ್ನರ್ ದಂಗೆ ಅದರ ಮುನ್ಸೂಚನೆ ಆಗಿರಬಹುದು ಅಥವಾ ವ್ಯಾಗ್ನರ್ ಪಡೆಯನ್ನು ದ್ರೋಹಿಗಳು ಎನ್ನುವ ಮೂಲಕ ಪುಟಿನ್, ಭಿನ್ನಮತಕ್ಕೆ ಆಸ್ಪದವಿಲ್ಲ ಎಂಬ ಸಂದೇಶ ರವಾನಿಸಿರಬಹುದು.
ಹಾಗಾದರೆ ಮುಂದೇನು? ಪ್ರಬಲ ಪುಟಿನ್ ಅವರಿಗಿಂತ, ಅಸಹಾಯಕ ಪುಟಿನ್ ಹೆಚ್ಚು ಅಪಾಯಕಾರಿ. ಈ ಸತ್ಯ ಅಮೆರಿಕಕ್ಕೆ ಕೂಡ ಗೊತ್ತಿದೆ. ಪರಿಸ್ಥಿತಿ ಕೈ ಮೀರಿದರೆ ಪುಟಿನ್ ಯಾವ ದುಃಸಾಹಸಕ್ಕೂ ಕೈ ಹಾಕಬಹುದು, ಪರಮಾಣು ಅಸ್ತ್ರಗಳನ್ನು ಬಳಸಲು ಮುಂದಾಗಬಹುದು ಎಂಬ ಆತಂಕ ಇದ್ದೇ ಇದೆ. ಒಂದೊಮ್ಮೆ ಪುಟಿನ್ ಅಸಹಾಯಕ ಸ್ಥಿತಿ ತಲುಪಿದರೆ, ಅವರು ಚೀನಾದ ಮೇಲೆ ಹೆಚ್ಚಿನ ಅವಲಂಬನೆ ತೋರಬಹುದು. ಈ ಅವಕಾಶವನ್ನು ಚೀನಾ ತನ್ನ ಹಿತಕ್ಕೆ ಬಳಸಿಕೊಂಡರೆ, ಭಾರತ ಮತ್ತು ರಷ್ಯಾ ನಡುವಿನ ಸಂಬಂಧದಲ್ಲಿ ವ್ಯತ್ಯಾಸಗಳಾಗಬಹುದು.
ಇತ್ತ, ಇಂದಿನಿಂದ (ಜುಲೈ 11) ಎರಡು ದಿನ ಲಿಥುವೇನಿಯಾದ ರಾಜಧಾನಿಯಲ್ಲಿ ನ್ಯಾಟೊ ರಾಷ್ಟ್ರಗಳ ವಾರ್ಷಿಕ ಶೃಂಗಸಭೆ ನಡೆಯುತ್ತಿದೆ. ವ್ಯಾಗ್ನರ್ ದಂಗೆಯಿಂದ ಕಂಗೆಟ್ಟಿರುವ ಪುಟಿನ್ ಅವರನ್ನು ಮತ್ತಷ್ಟು ದುರ್ಬಲಗೊಳಿಸಲು ನ್ಯಾಟೊ ರಾಷ್ಟ್ರಗಳು ಹೊಸ ತಂತ್ರಗಳನ್ನು ಹೆಣೆಯಬಹುದು. ಉಕ್ರೇನಿಗೆ ಶಕ್ತಿ ತುಂಬುವ ಯೋಜನೆ ರೂಪಿಸಬಹುದು. ಈಗಾಗಾಲೇ ಅಮೆರಿಕವು ವಿವಾದಿತ ಮತ್ತು ಅಪಾಯಕಾರಿ ಕ್ಲಸ್ಟರ್ ಮ್ಯುನಿಷನ್‌ಗಳನ್ನು (ಸಿಡಿಗುಂಡುಗಳ ಗೊಂಚಲು) ಉಕ್ರೇನಿಗೆ ಪೂರೈಸುವುದಾಗಿ ಹೇಳಿದೆ. ಮತ್ತಷ್ಟು ಶಸ್ತ್ರಾಸ್ತ್ರಗಳು ಉಕ್ರೇನ್ ಬತ್ತಳಿಕೆ ಸೇರಬಹುದು.
1991ರಲ್ಲಿ ರಷ್ಯಾದ ಕಟ್ಟರ್‌ವಾದಿಗಳು ಅಂದಿನ ಸೋವಿಯತ್ ನಾಯಕ ಗೋರ್ಬಚೆವ್ ವಿರುದ್ಧ ದಂಗೆ ಎದ್ದಿದ್ದರು. ದಂಗೆ ವಿಫಲವಾದರೂ ಗೋರ್ಬಚೆವ್ ಅವರ ವರ್ಚಸ್ಸು ಕುಗ್ಗಿತ್ತು. ನಂತರ ಆದ ಬೆಳವಣಿಗೆಗಳು ಸೋವಿಯತ್ ವಿಘಟನೆಗೆ ಕಾರಣವಾದವು. ಗೋರ್ಬಚೆವ್ ಅವರಂತೆ ಪುಟಿನ್ ಉದಾರಿಯಲ್ಲ. ಯಾರನ್ನೂ ಮತ್ತು ಯಾವುದನ್ನೂ ಅಷ್ಟು ಸುಲಭಕ್ಕೆ ಮರೆಯುವುದಿಲ್ಲ ಮತ್ತು ಕ್ಷಮಿಸುವುದೂ ಇಲ್ಲ ಎನ್ನುವುದು ಪುಟಿನ್ ವ್ಯಕ್ತಿತ್ವದ ಹೆಗ್ಗುರುತು. ಪ್ರಿಗೋಜಿನ್ ನಡೆಯನ್ನು ಪುಟಿನ್ ಕ್ಷಮಿಸಿದರೆ ಅದು ಮತ್ತೊಂದು ಅಚ್ಚರಿ ಮತ್ತು ಅದನ್ನು ಅನುಮಾನದಿಂದಲೇ ಜಗತ್ತು ನೋಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.