ಕೇಂದ್ರ ಆರೋಗ್ಯ ಸಚಿವಾಲಯವು ಎರಡು ವರ್ಷಗಳ ಕಾಲ ನಡೆಸಿದ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯಿಂದ, ‘ಪ್ರತೀ 1,000 ಸಂಖ್ಯೆಯ ಪುರುಷರಿಗೆ 1,020 ಮಹಿಳೆಯರಿದ್ದಾರೆ’ ಎಂಬ ಸ್ತ್ರೀ– ಪುರುಷ ಅನುಪಾತದ ಅಂಶ ನವೆಂಬರ್‌ನಲ್ಲಿ ಹೊರಬಿದ್ದಿದೆ. 1876ರ ನಂತರ ನಡೆಸಿದ ಸಮೀಕ್ಷೆಗಳೆಲ್ಲದರ ಪೈಕಿ, ಈ ಸಮೀಕ್ಷೆ ಮೊದಲ ಬಾರಿಗೆ, ಸ್ತ್ರೀಯರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ ಎಂದು ತೋರಿಸಿದೆ.
ಅಲ್ಲದೆ, 1992ರಲ್ಲಿ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷಾ ಘಟಕ ಪ್ರಾರಂಭವಾದ ನಂತರ ಮೊದಲ ಬಾರಿಗೆ, ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿರುವುದಾಗಿ ದಾಖಲಾಗಿದೆ. ಸ್ತ್ರೀ– ಪುರುಷರ ನಡುವೆ ಇರುವ ತಾರತಮ್ಯವನ್ನು ನಿವಾರಿಸಲು ನಡೆಸಿದ ಸರ್ಕಾರದ ಪ್ರಾಮಾಣಿಕ ಪ್ರಯತ್ನದಿಂದಾಗಿ ‘ಪ್ರಥಮ ಬಾರಿಗೆ ಮಹಿಳೆಯರ ಸಂಖ್ಯೆ ಪುರುಷರ ಸಂಖ್ಯೆಗಿಂತ ಹೆಚ್ಚಾಗಿದೆ’ ಎಂದು ಆರೋಗ್ಯ ಸಚಿವಾಲಯ ಸಂತಸ ವ್ಯಕ್ತಪಡಿಸಿದೆ. ಅದರ ಬೆನ್ನಲ್ಲೇ, ‘ಇದು ಸರ್ಕಾರವು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಕೈಗೊಂಡ ಕ್ರಮಗಳ ಫಲ’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಭಾರತದ ಜನಸಂಖ್ಯಾ ಪ್ರತಿಷ್ಠಾನ ‘ಸ್ತ್ರೀ– ಪುರುಷ ಅನುಪಾತದಲ್ಲಿ ಕಂಡುಬಂದಿರುವ ಈ ಸುಧಾರಣೆ ಸ್ವಾಗತಾರ್ಹ. ಈ ದಿಕ್ಕಿನಲ್ಲಿ ಕೈಗೊಂಡಿರುವ ಪ್ರಯತ್ನಗಳು ಸಕಾರಾತ್ಮಕವಾಗಿವೆ ಎಂಬುದನ್ನು ಇದು ತೋರಿಸುತ್ತದೆ. ಆದರೆ, ಸ್ತ್ರೀ– ಪುರುಷ ಸಮಾನತೆಯನ್ನು ಸಾಧಿಸುವುದಕ್ಕೆ ಮಾಡಬೇಕಾದ ಪ್ರಯತ್ನಗಳು ಬಹಳಷ್ಟಿವೆ’ ಎಂದು ಪ್ರತಿಕ್ರಿಯಿಸಿದೆ.
‘ಈ ಏರಿಕೆಗೆ ಮಹಿಳೆಯರ ಜೀವಿತಾವಧಿ ದೀರ್ಘವಾಗಿರುವುದು ಕಾರಣ. ಇವತ್ತಿಗೂ ನವಜಾತ ಶಿಶುಗಳ ಅನುಪಾತ ಪ್ರತೀ 1,000 ಗಂಡುಮಕ್ಕಳಿಗೆ ಹೆಣ್ಣುಮಕ್ಕಳ ಸಂಖ್ಯೆ 929ರಲ್ಲೇ ಇದೆ. ಇದು ಗಂಡುಮಕ್ಕಳ ಆಯ್ಕೆಯ ಬಗ್ಗೆ ಇರುವ ಮೋಹವನ್ನು ತೋರಿಸುತ್ತದೆ. ಕೋವಿಡ್ ಕಾರಣದಿಂದಾಗಿ ತಡವಾಗಿರುವ ಜನಗಣತಿಯನ್ನು ನಡೆಸಿದ ನಂತರ ಹೊರಬರುವ ಅಂಕಿ ಅಂಶಗಳಿಂದ ಮಾತ್ರ ಈ ಬಗ್ಗೆ ಸ್ಪಷ್ಟವಾದ ಚಿತ್ರಣ ಸಿಗುವುದು ಸಾಧ್ಯ’ ಎಂಬ ಎಚ್ಚರಿಕೆಯನ್ನೂ ನೀಡಿದೆ. ಈ ಅಂಕಿ ಅಂಶಗಳು ಸ್ತ್ರೀ– ಪುರುಷ ಅನುಪಾತದಲ್ಲಿ ಕಂಡುಬರುವ ಏರುಪೇರನ್ನು ಸರಿಪಡಿಸಲು ನಾವು ಕೈಗೊಂಡಿರುವ ಮಹಿಳಾಪರ ಕ್ರಮಗಳು ಕಾರಣವಲ್ಲ ಎಂಬುದನ್ನು ನಮಗೆ ಮನದಟ್ಟು ಮಾಡಿಸುವ ರೀತಿಯಲ್ಲಿ ಈ ಪ್ರತಿಕ್ರಿಯೆ ಇದೆ.
ಈ ಸಮೀಕ್ಷೆಗೆ ಒಳಪಡಿಸಿರುವುದು ಭಾರತದ 6,36,699 ಮನೆಗಳನ್ನು. ಸ್ತ್ರೀ– ಪುರುಷ ಅನುಪಾತದ ಸ್ಪಷ್ಟ ಚಿತ್ರಣ ಸಿಕ್ಕುವುದು ಜನಗಣತಿಯಲ್ಲಿ ದೊರೆಯುವ ಅಂಕಿ ಅಂಶಗಳಿಂದ ಮಾತ್ರವಾದ್ದರಿಂದ, ಈ ಸಮೀಕ್ಷೆಯಿಂದ ಹೊರಬಿದ್ದಿರುವ ಫಲಿತಾಂಶವು ಸಮಾಜದಲ್ಲಿ ಆಳವಾಗಿ ಬೇರೂರಿರುವ ಪಿತೃಪ್ರಧಾನ ಮನೋಧರ್ಮದ ಬದಲಾವಣೆಯ ಸೂಚಿ ಅಲ್ಲವೇ ಅಲ್ಲ. ಏಕೆಂದರೆ, ಈ ಸಮೀಕ್ಷೆಯಿಂದ ಹೊರಬಿದ್ದಿರುವುದು ಸ್ತ್ರೀ– ಪುರುಷರ ಲಿಂಗಾನುಪಾತವೇ ವಿನಾ ನವಜಾತ ಶಿಶುಗಳ ಲಿಂಗಾನುಪಾತವಲ್ಲ.
2015- 16ರಲ್ಲಿ ಬಿಡುಗಡೆ ಮಾಡಿದ ವರದಿಯ ಪ್ರಕಾರ, ನವಜಾತ ಶಿಶುಗಳ ಪೈಕಿ ಪ್ರತೀ 1,000 ಗಂಡುಮಕ್ಕಳಿಗೆ 919 ಹೆಣ್ಣುಮಕ್ಕಳ ಅನುಪಾತವಿದ್ದರೆ, 2019- 21ರ ಸಮೀಕ್ಷಾ ವರದಿಯ ಪ್ರಕಾರ, ಈ ಅನುಪಾತ 1,000 ಗಂಡು ಮಕ್ಕಳಿಗೆ 929 ಹೆಣ್ಣು ಮಕ್ಕಳು.ಈ ಎರಡೂ ವರದಿಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಕಂಡು ಬರುವುದು ಅತ್ಯಲ್ಪ ವ್ಯತ್ಯಾಸ. ಇದು, ಸಮಾಜದಲ್ಲಿ ಇನ್ನೂ ಗಂಡುಮಕ್ಕಳನ್ನು ಪಡೆಯುವ ಆಯ್ಕೆಯ ಮನೋಭಾವ ಕಡಿಮೆಯಾಗಿಲ್ಲ ಎಂಬುದನ್ನು ತೋರಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, ನವಜಾತ ಶಿಶುಗಳ ಸಹಜ ಲಿಂಗಾನುಪಾತ 1,000 ಗಂಡುಮಕ್ಕಳಿಗೆ 952 ಹೆಣ್ಣುಮಕ್ಕಳು.
ಅಂತರರಾಷ್ಟ್ರೀಯ ಜನಸಂಖ್ಯಾ ವಿಜ್ಞಾನ ಸಂಸ್ಥೆಯ ಮೂಲಗಳಂತೆ, ಈ ಸಮೀಕ್ಷೆಯಿಂದ ಹೊರಬಿದ್ದಿರುವ ಆಶಾದಾಯಕ ಲಿಂಗಾನುಪಾತದ ಸಂಖ್ಯೆಗೆ ಕಾರಣ ಎರಡು. ಒಂದು, ಇದು ಸಮೀಕ್ಷೆಯ ಕಾಲದಲ್ಲಿ ಮನೆಯಲ್ಲಿ ಹಾಜರಿದ್ದ ಪುರುಷರು ಮತ್ತು ಮಹಿಳೆಯರ ಸಂಖ್ಯೆಯನ್ನು ಆಧರಿಸಿದೆ. ಎರಡನೆಯದು, ಕಳೆದ ಮೂವತ್ತು ವರ್ಷಗಳಲ್ಲಿ ಭಾರತದ ಲಿಂಗಾನುಪಾತದಲ್ಲಿ ಆಗಿರುವ ಗಣನೀಯ ಏರಿಕೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಈ ಸಮೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಲಾಗಿರುವುದು. ಮೊದಲನೆಯ ಹಂತದ ಸಮೀಕ್ಷೆಯನ್ನು 2019ರ ಜೂನ್ ಮತ್ತು 2020ರ ಜನವರಿ 30ರವರೆಗೆ ಮತ್ತು ಎರಡನೇ ಹಂತದ ಸಮೀಕ್ಷೆಯನ್ನು 2020ರ ಜನವರಿ 2ರಿಂದ 2021ರ ಏಪ್ರಿಲ್ 30ರವರೆಗೆ ನಡೆಸಲಾಯಿತು. ಸಮೀಕ್ಷೆ ನಡೆದ ಈ ಎರಡನೇ ಹಂತವು, ದೇಶದಲ್ಲಿ ಕೊರೊನಾ ಮಹಾಮಾರಿ ಅತ್ಯಂತ ತೀವ್ರ ಸ್ವರೂಪವನ್ನು ಪಡೆದುಕೊಂಡು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದ ಮತ್ತು ಗ್ರಾಮೀಣ ಪ್ರದೇಶಗಳಿಂದ ವಲಸೆ ಹೋಗಿದ್ದ ಬಹುಪಾಲು ಕಾರ್ಮಿಕರು ಕೆಲಸ ಕಳೆದುಕೊಂಡು ತಮ್ಮ ತಮ್ಮ ಗ್ರಾಮಗಳಿಗೆ ಹಿಂತಿರುಗಿದ್ದ ಅವಧಿಯಾಗಿತ್ತು.
ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷಾ ಘಟಕದ ಸಮೀಕ್ಷೆಯು ಕೆಲವು ರಾಜ್ಯಗಳ ಕೆಲವು ಪ್ರದೇಶಗಳಿಗೆ ಸೀಮಿತವಾಗಿರುವುದರಿಂದ, ಇದು ಇಡೀ ದೇಶದ ಚಿತ್ರಣವನ್ನು ಬಿಂಬಿಸುತ್ತದೆ ಎಂದು ಭಾವಿಸಲಾಗದು.
ನವೆಂಬರ್ 25ರಂದು, ಅಂತರರಾಷ್ಟ್ರೀಯ ಮಹಿಳೆಯರ ವಿರುದ್ಧದ ಹಿಂಸೆಯ ನಿರ್ಮೂಲನಾ ದಿನ. ಈ ದಿನವನ್ನು ಅಂತರರಾಷ್ಟ್ರೀಯ ದಿನವನ್ನಾಗಿ 1992ರಲ್ಲಿ ವಿಶ್ವಸಂಸ್ಥೆ ಘೋಷಿಸಿತು. ಮಹಿಳೆಯ ಮೇಲೆ ಮಾನಸಿಕವಾಗಿ, ದೈಹಿಕವಾಗಿ ಅಥವಾ ಲೈಂಗಿಕವಾಗಿ ನಡೆಯುವ ದೌರ್ಜನ್ಯವನ್ನು ಹಿಂಸೆ ಎಂದು ವಿಶ್ವಸಂಸ್ಥೆ ಪರಿಭಾವಿಸುತ್ತದೆ. ಆದರೆ, ಇಂದಿಗೂ ಕುಟುಂಬದ ಸದಸ್ಯರಿಂದ ಹಿಡಿದು ಅಪರಿಚಿತರವರೆಗೆ ಎಲ್ಲರಿಂದಲೂ ಮಹಿಳೆ ಇಂಥ ಎಲ್ಲ ದೌರ್ಜನ್ಯಗಳಿಗೆ ಒಳಗಾಗುತ್ತಲೇ ಇದ್ದಾಳೆ.
ವಿಶ್ವಸಂಸ್ಥೆ ವರದಿಯ ಪ್ರಕಾರ, ಮೂವರಲ್ಲಿ ಒಬ್ಬಳು ಮಹಿಳೆ ತನ್ನ ಜೀವಿತಾವಧಿಯಲ್ಲಿ ದೌರ್ಜನ್ಯಕ್ಕೆ ಒಳಗಾಗಿರುತ್ತಾಳೆ. 13 ರಾಷ್ಟ್ರಗಳ ಅಂಕಿ ಅಂಶಗಳ ಆಧಾರದ ಮೇಲೆ, ಮಹಿಳೆಯರ ಮೇಲಾಗುವ 10 ದೌರ್ಜನ್ಯಗಳ ಪೈಕಿ ವರದಿಯಾಗುವುದು ಸರಾಸರಿ ಒಂದು ಮಾತ್ರ ಎಂದೂ ವಿಶ್ವಸಂಸ್ಥೆಯು ವರದಿಯೊಂದರಲ್ಲಿ ತಿಳಿಸಿದೆ. ಭಾರತ ಇದಕ್ಕೆ ಹೊರತಲ್ಲ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊದ ಹಿಂದಿನ ವರ್ಷದ ವರದಿಯ ಪ್ರಕಾರ, ದೇಶದಲ್ಲಿ ಪ್ರತೀ 35 ನಿಮಿಷಗಳಿಗೆ ಒಂದರಂತೆ ಮಹಿಳೆಯ ಮೇಲೆ ಅಪರಾಧ ಕೃತ್ಯ ನಡೆಯುತ್ತದೆ. ಇದರಲ್ಲಿ, ಮಹಿಳೆ ಅತಿ ಹೆಚ್ಚಿನ (ಶೇ 30ರಷ್ಟು) ಹಿಂಸೆಗೆ ಒಳಗಾಗುವುದು ಅವಳ ಗಂಡ ಮತ್ತು ಅವನ ಸಂಬಂಧಿಗಳಿಂದ. ಇದಲ್ಲದೆ, ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದಂಥ ಹಿಂಸೆಗೆ ನಿರಂತರವಾಗಿ ಒಳಗಾಗುತ್ತಾಳೆ.
ಇಂಥ ಪರಿಸ್ಥಿತಿಯಲ್ಲಿ, ಮಹಿಳೆಯರ ಸಂಖ್ಯೆಯು ಪುರುಷರ ಸಂಖ್ಯೆಗಿಂತ ಜಾಸ್ತಿಯಾಗಿದೆ ಎಂಬ ಏಕಮಾತ್ರ ಕಾರಣದಿಂದ, ನಾವು ಅಭಿವೃದ್ಧಿಹೊಂದಿದ ದೇಶಗಳ ಸಾಲಿನಲ್ಲಿ ನಿಲ್ಲುತ್ತೇವೆ ಎಂದು ಬೀಗುವುದು ಸರಿಯಲ್ಲ.
ಮಹಿಳೆಗಿರುವ ಸೀಮಿತ ಉದ್ಯೋಗಾವಕಾಶಗಳು ಮತ್ತು ಹೆಚ್ಚಿನ ಕೌಟುಂಬಿಕ ಕರ್ತವ್ಯಗಳಿಂದಾಗಿ ಭಾರತದ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆ ಕುಂಠಿತವಾಗಿದೆ. ಹಾಗಾಗಿ ದೇಶದ ಆರ್ಥಿಕತೆಗೆ ಅವಳ ಕೊಡುಗೆ ಅತ್ಯಲ್ಪ. ಜಾಗತಿಕ ಜಿಡಿಪಿಗೆ ಮಹಿಳೆಯರ ಕೊಡುಗೆ ಸರಾಸರಿ ಶೇ 37 ಇದ್ದರೆ ಭಾರತದ ಮಹಿಳೆಯರ ಕೊಡುಗೆ ಕೇವಲ ಶೇ 18ರಷ್ಟಿದೆ. ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಲಿಂಗ ಅಂತರದ ಬಗೆಗಿನ ವರದಿಯ ಪ್ರಕಾರ, 153 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಸ್ಥಾನ 143ನೆಯದು.
ಈ ಹಿನ್ನೆಲೆಯಲ್ಲಿ, ಕೇವಲ ಸಂಖ್ಯೆಯಲ್ಲಿ ಲಿಂಗ ಸಮಾನತೆ ಸಾಧಿಸಿದರೆ ಸಾಕೇ ಎಂಬುದು, ಈ ಸಂದರ್ಭದಲ್ಲಿ ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ.
‘ಲಿಂಗ ಸಮಾನತೆ ಎಂಬುದು ಸಾಧಿಸಬೇಕಾದ ಗುರಿ ಅಲ್ಲ. ಬಡತನವನ್ನು ನಿವಾರಿಸುವುದು, ಸುಸ್ಥಿರ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವುದು ಮತ್ತು ಉತ್ತಮ ಆಡಳಿತವನ್ನು ಕಟ್ಟುವುದಕ್ಕೆ ಇರಬೇಕಾದ ಪೂರ್ವಷರತ್ತು’ ಎಂಬ, ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿಯಾಗಿದ್ದ ಕೋಫಿ ಅನ್ನಾನ್ ಅವರ ಮಾತುಗಳು ದಾರಿ ತಪ್ಪದಂತೆ ನಮ್ಮನ್ನು ಮುನ್ನಡೆಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.