ADVERTISEMENT

ಗ್ಯಾರಂಟಿಗಳ ಯಶಸ್ಸು: ಮನೆಗಳಿಂದ ಹೊರಬಂದು ಅರಮನೆಗಳನ್ನ ನೋಡುತ್ತಿರುವ ತಾಯಂದಿರು!

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 13:51 IST
Last Updated 10 ಅಕ್ಟೋಬರ್ 2024, 13:51 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ

ಮೈಸೂರು ಕರ್ನಾಟಕವೆಂದು ನಾಮಕರಣಗೊಂಡು 50 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ‘ಕರ್ನಾಟಕ ಸುವರ್ಣ ಸಂಭ್ರಮ’ ಆಚರಿಸುತ್ತಿರುವ ಈ ಶುಭಸಂದರ್ಭದಲ್ಲಿ ಈ ಬಾರಿಯ ದಸರಾ ನಮಗೆಲ್ಲರಿಗೂ ವಿಶೇಷವಾಗಿದೆ. ಅದರಲ್ಲೂ ಕರ್ನಾಟಕದ ಪಂಚ ಗ್ಯಾರಂಟಿಗಳು ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದಂತೆ.

ADVERTISEMENT

ಝಗಮಗಿಸುವ ವಿದ್ಯುದ್ದೀಪಗಳು, ಕಣ್ಕುಕ್ಕುವ ಜಂಬೂ ಸವಾರಿ, ಬೆಟ್ಟದ ಮೇಲೆ ವಿರಾಜಮಾನೆ ನಾಡತಾಯಿ ಚಾಮುಂಡೇಶ್ವರಿ. ವೈಭವೋಪೇತ ನಾಡಹಬ್ಬ ದಸರಾ ಬೆಳಕಿನ ಹಬ್ಬ ದೀಪಾವಳಿಯಂತೆ ಜಗತ್ತಿನಾದ್ಯಂತ ಬೆಳಗುತ್ತದೆ. ಜಗದ್ವಿಖ್ಯಾತ ಈ ದಸರಾ ಸಂಭ್ರಮವನ್ನ ಕಣ್ತುಂಬಿಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಕನಸು. ಈ ಕನಸನ್ನ ಹಲವರು ನನಸಾಗಿಸಿಕೊಂಡರೂ ನಮ್ಮ ಗ್ರಾಮೀಣ ಯುವತಿಯರು, ಮಹಿಳೆಯರು ಇವುಗಳಿಂದ ಕೊಂಚ ಹಿಂದೆಯೇ! ಕುಟುಂಬಗಳ ಕಟ್ಟಳೆ, ಆರ್ಥಿಕ ಸಮಸ್ಯೆಗಳಿಂದ ಅದೆಷ್ಟೋ ಮಹಿಳೆಯರ ಕನಸಾಗಿಯೇ ಉಳಿದಿದ್ದ ಮೈಸೂರು ದಸರಾ, ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ನನಸಾಗಿದೆ; ವಿದ್ಯುದ್ದೀಪಗಳಲ್ಲಿ ಕಂಗೊಳಿಸುವ ಅರಮನೆಯನ್ನ ಕಣ್ತುಂಬಿಕೊಳ್ಳುವ ಸೌಭಾಗ್ಯ ಲಭಿಸಿದೆ.

ಹಿಂದೆಲ್ಲ ದಸರಾವೆಂದರೆ, 9 ದಿನಗಳ ಕಾಲ ಉಪವಾಸವಿದ್ದು, ಮನೆಗಳಲ್ಲೇ ಬೊಂಬೆಗಳನ್ನಿಟ್ಟು ಪೂಜೆಗೈದು, ನೆಂಟರಿಷ್ಟರನ್ನು ಕರೆದು ಸಂಭ್ರಮಿಸುವ ಹೆಂಗಳೆಯರ ಹಬ್ಬ. ಅಪ್ಪ- ಗಂಡ ನೀಡಿದ ಹಣದಲ್ಲಿ ಸೀರೆ ಖರೀದಿಸಿ, ಅದರಲ್ಲೊಂದಿಷ್ಟು ದುಡ್ಡನ್ನ ತನ್ನ ಮಕ್ಕಳಿಗೆ ನೀಡಿ ಸಂಭ್ರಮಿಸುವ ಮಹಿಳೆಯರ ಹಬ್ಬ. ಇದ್ದ ದವಸ- ಧಾನ್ಯಗಳಲ್ಲೇ ಹಬ್ಬದೂಟ ಸವಿಯುವ ತಾಯಂದಿರ ಹಬ್ಬ. ಪ್ರತಿವರ್ಷವೂ ಇಷ್ಟಕ್ಕೇ ಸೀಮಿತವಾಗುತ್ತಿದ್ದ ದಸರಾ, ಈ ಬಾರಿ ಈ ಹೆಣ್ಣುಮಕ್ಕಳನ್ನ ಮೈಸೂರಿಗೆ ಹೋಗಿಬರುವಷ್ಟರ ಮಟ್ಟಿಗೆ ಸೌಕರ್ಯ ಕಲ್ಪಿಸಿದೆ ಎಂದರೆ ಅದು ಗ್ಯಾರಂಟಿಗಳ ಸಾಧನೆ.

‘ಶಕ್ತಿ’ ಯೋಜನೆ ಜಾತಿ- ಧರ್ಮದ ಭೇದ- ಭಾವವಿಲ್ಲದೆ ನಮ್ಮ ಹೆಣ್ಣುಮಕ್ಕಳಿಗೆ ಹೊರ ಜಗತ್ತನ್ನ ಪರಿಚಯಿಸುತ್ತಿದೆ; ಹೊಸ ಅನುಭವದ ರಾಶಿಯನ್ನ ನೀಡುತ್ತಿದೆ. ಸವದತ್ತಿಯ ಯಲ್ಲಮ್ಮ, ಧರ್ಮಸ್ಥಳದ ಮಂಜುನಾಥೇಶ್ವರ, ಭಟ್ಕಳದ ಮುರುಡೇಶ್ವರನೆಲ್ಲ ನೋಡಿಬಂದಿರುವ ನಮ್ಮ ತಾಯಂದಿರು, ಉತ್ತರದಲ್ಲಿ ಬೀದರ್‌, ನಿಪ್ಪಾಣಿಯಿಂದ ಹಿಡಿದು ದಕ್ಷಿಣದ ಮಂಗಳೂರಿನವರೆಗೆ ಪ್ರತಿ ಮೂಲೆಯಿಂದಲೂ ಈಗ ಒಂಬತ್ತು ದಿನಗಳ ದಸರಾದ ಸಂಭ್ರಮವನ್ನ ಆಚರಿಸಲು ಮೈಸೂರಿನತ್ತ ಹೋಗಿಬರುತ್ತಿದ್ದಾರೆ; ಮೈಸೂರು ದಸರಾದ ಭಾಗವಾಗುತ್ತಿದ್ದಾರೆ. ಮೈಸೂರಿಗೆ ತೆರಳುವ ನಮ್ಮ ಸರ್ಕಾರಿ ಸಾರಿಗೆ ಬಸ್‌ಗಳು ದಿನವೂ ತಾಯಂದಿರಿಂದ ತುಂಬಿ ತುಳುಕುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಮೈಸೂರಿನ ಬೆಟ್ಟದ ಮೇಲೆ ವಿರಾಜಮಾನಳಾದ ತಾಯಿಯನ್ನ ಕಣ್ತುಂಬಿಕೊಳ್ಳುವ ಸೌಭಾಗ್ಯ ತಾಯಂದಿರಿಗೆ ಲಭಿಸಿದ್ದು ನಮ್ಮ ಸರ್ಕಾರದ ಗ್ಯಾರಂಟಿಗಳಿಂದ ಎಂಬುದು ನನಗದೋ ಹೆಮ್ಮೆ.

ಪ್ರಯಾಣವೀಗ 'ಶಕ್ತಿ'ಯಲ್ಲಿ ಉಚಿತವಾಗಿರುವುದು ಮತ್ತು ಪಾಕೀಟುಗಳು 'ಗೃಹಲಕ್ಷ್ಮೀ'ಯಿಂದ ತುಂಬಿರುವುದು ಪ್ರತಿ ಮಹಿಳೆಯೂ ಸ್ವಾವಲಂಬಿಯನ್ನಾಗಿಸಿದೆ. ಮನೆಯಿಂದ ಹೊರಬಂದು ಹಬ್ಬದ ಸಂಭ್ರಮ ಆಚರಿಸಲು ನೆರವಾಗಿದೆ.

ತನ್ನ ಸಂಸಾರ- ಕುಟುಂಬಕ್ಕಾಗಿ ಮನೆಯೆಂಬ ನಾಲ್ಕು ಗೋಡೆಯ ನಡುವೆ ಬಂಧಿಯಾಗಿ ಜೀವ- ಜೀವನ ಸವೆಸುತ್ತಿದ್ದ ಹೆಣ್ಣುಮಕ್ಕಳು ಆಚೆ ತಿರುಗಾಡುತ್ತಿದ್ದಾರೆಂದರೆ ಅದು ನಮ್ಮ ಸರ್ಕಾರ ನೀಡಿದ ಗ್ಯಾರಂಟಿಯ ಫಲ. ಮಹಿಳೆಯರಿಗೆ ಗೌರವ ನೀಡುವಲ್ಲಿ ಕಾಂಗ್ರೆಸ್ ಯಾವತ್ತೂ ಹಿಂದುಳಿದಿಲ್ಲ. ನಮ್ಮದು ಶ್ರೀಮತಿ ಸರೋಜಿನಿ ನಾಯ್ಡುರಂಥ ಧೀಮಂತೆ, ಶ್ರೀಮತಿ ಇಂದಿರಾಗಾಂಧಿಯಂಥ ಉಕ್ಕಿನ ಮಹಿಳೆಯನ್ನ ದೇಶಕ್ಕೆ ನೀಡಿದ ಪಕ್ಷ.

ಸ್ತ್ರೀಯರ ಸ್ಥಾನ- ಸಮ್ಮಾನಕ್ಕೆ ಧಕ್ಕೆ ಬಾರದಂತೆ, ಪುರುಷರಷ್ಟೇ ಮಹಿಳೆಯರೂ ಸ್ವತಂತ್ರರಾಗಿರಬೇಕೆಂಬ ಉದ್ದೇಶದಿಂದ, ಮಹಿಳಾ ಸಬಲೀಕರಣದ ಮಹತ್ವಾಕಾಂಕ್ಷೆಯಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ನೇತೃತ್ವದಲ್ಲಿ, ಉಪಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಅವರ ಸಹಕಾರದಿಂದ ಕರ್ನಾಟಕದಲ್ಲಿ ಜಾರಿಗೆ ತಂದ ಗ್ಯಾರಂಟಿಗಳು ಸಾರ್ವತ್ರಿಕ ಮೂಲ ಆದಾಯದ ತದ್ರೂಪವೇ ಆಗಿದೆ.

ಈ ಯೋಜನೆಗಳು ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದ್ದು, ಅವರನ್ನು ಅವರ ಮನೆಯೊಳಗೆ ಹೆಚ್ಚು ಸ್ವತಂತ್ರವಾಗಿ ಮತ್ತು ಸಬಲರನ್ನಾಗಿಸುತ್ತದೆ. ಅವರ ಕೈಗೆ ನೇರವಾಗಿ ಆದಾಯದ ಮೂಲವನ್ನು ನೀಡುವ ಮೂಲಕ, ಗೃಹಲಕ್ಷ್ಮಿ ಯೋಜನೆಯು ಮಹಿಳೆಯರು ತಮ್ಮ ಕುಟುಂಬದ ಖರ್ಚುಗಳನ್ನು ನಿಭಾಯಿಸಲು, ಸ್ವತಂತ್ರ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಅವರ ವೈಯಕ್ತಿಕ ಬೆಳವಣಿಗೆ ಮತ್ತು ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಅನುವು ಮಾಡಿಕೊಟ್ಟಿದೆ. ಇದರೊಂದಿಗೆ ಶಕ್ತಿ ಮತ್ತು ಗೃಹಜ್ಯೋತಿ ಕೂಡ ಕುಟುಂಬದ ಉಳಿತಾಯದ ಭಾಗವಾಗಿಬಿಟ್ಟಿದೆ.

ಈ ಯೋಜನೆಗಳು ಕುಟುಂಬದ ಸದಸ್ಯರ ಮೇಲೆ ಮಹಿಳೆಯರ ಆರ್ಥಿಕ ಅವಲಂಬನೆಯನ್ನು ಕಡಿಮೆ ಮಾಡುವುದಲ್ಲದೆ, ಅವರ ಮೇಲೆ ಅವರಿಗೇ ಆತ್ಮವಿಶ್ವಾಸ ಮತ್ತು ದೃಢತೆ ಬೆಳೆಸುತ್ತಿದೆ. ಹೆಣ್ಣು- ಗಂಡೆಂಬ ಅಸಮಾನತೆಯ ಹೊಡೆದೋಡಿಸಿ, ಕರ್ನಾಟಕದಾದ್ಯಂತ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ.

ಬರೋಬ್ಬರಿ 1.22 ಕೋಟಿಗೂ ಅಧಿಕ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ 28,608 ಕೋಟಿ ರೂಪಾಯಿ ಕಳೆದ ಒಂದು ವರ್ಷದಲ್ಲಿ ನೇರವಾಗಿ ಜಮೆಯಾಗಿದೆ. 4 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ 300 ಕೋಟಿಗೂ ಅಧಿಕ ಉಚಿತ ಟಿಕೆಟ್‌ಗಳು ಮಹಿಳೆಯರಿಗೆ ವಿತರಣೆಯಾಗಿದೆ. ಇದರಿಂದ ರಾಜ್ಯದ ಸಾರಿಗೆ ಇಲಾಖೆಗಳ ಆದಾಯ ಶೇ 30ರಷ್ಟು ಹೆಚ್ಚಾಗಿದೆ.

ಪ್ರತಿವರ್ಷವೂ ನವರಾತ್ರಿಯ ಸಂದರ್ಭ ಮೈಸೂರಿಗೆ ದಸರಾ ನೋಡಲು ಹೋಗುವುದನ್ನ ಬಿಡದ ನನಗೆ, ಅದೆಷ್ಟೋ ಬಡ ತಾಯಂದಿರು, ಸಹೋದರಿಯರು, ಹೆಣ್ಮಕ್ಕಳು ‘ಶಕ್ತಿ’ ಪ್ರಯಾಣದಲ್ಲಿ ‘ಗೃಹಲಕ್ಷ್ಮೀ’ಯ ಸಹಾಯದಲ್ಲಿ ಇಂದು ಮೈಸೂರು ನೋಡುತ್ತಿದ್ದಾರೆ; ಚಾಮುಂಡಿ ತಾಯಿಯ ಕಂಡು ಪುಳಕಿತರಾಗುತ್ತಿದ್ದಾರೆ. ಅವರೆಲ್ಲ ಮನೆಗಳಿಂದ ಹೊರಬಂದು ಅರಮನೆಗಳನ್ನ ನೋಡುತ್ತಿದ್ದಾರೆಂಬುದೇ ಖುಷಿ; ಪರಮಾನಂದ. ಇದಕ್ಕಿಂತ ಇನ್ನೇನು ಹೆಚ್ಚು ಬೇಕು ನಮ್ಮಂಥವರಿಗೆ!!

(ಲೇಖಕರು: ಮಾಜಿ ಶಾಸಕರು ಹಾಗೂ ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿಗಳು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.