ADVERTISEMENT

ಹಿಮದ ನಾಡಿನ ಒಡಲ ಉರಿ

ಮೂಲಭೂತವಾದವು ನರಕವನ್ನಲ್ಲದೆ ಇನ್ನೇನನ್ನೂ ಸೃಷ್ಟಿಸಲು ಸಾಧ್ಯವಿಲ್ಲ

ಡಾ.ಸಬಿತಾ ಬನ್ನಾಡಿ
Published 22 ಆಗಸ್ಟ್ 2019, 20:00 IST
Last Updated 22 ಆಗಸ್ಟ್ 2019, 20:00 IST
   

ನಾನು ಸಂತಸ ತುಂಬಿಕೊಂಡಿದ್ದ ಹಸಿರು ಮರವಾಗಿದ್ದೆ ಮರಕಟುಕನೊಬ್ಬ ನನ್ನನ್ನು ತುಂಡರಿಸಿ ಕೆಡವಿ ಚೂರಾದ ಅಂಗಾಂಗಗಳನೆಲ್ಲಾ ಉರಿಸಿ ಬೂದಿಯಾಗಿಸಿ ನಾನು ಹಗಲು ರಾತ್ರಿ ಬಳಲುವಂತೆ ಮಾಡಿದ ಸಂದರ್ಭದಾಚೆಗೆ ಓದುವುದಾದರೆ ಹಲವು ಧ್ವನಿಗಳನ್ನು ಹೊಮ್ಮಿಸುವ ಈ ಕವಿತೆಯ ಸಾಲುಗಳು, ಹದಿನೈದನೇ ಶತಮಾನದ ಕೊನೆಯಲ್ಲಿ ಬದುಕಿದ್ದ ಕಾಶ್ಮೀರಿ ಕವಯತ್ರಿ ಹಬ್ಬಾ ಕಾತೂನಳದು. ಆಶ್ಚರ್ಯ ವೆಂಬಂತೆ ಕಾಶ್ಮೀರಕ್ಕೇ ರೂಪಕವಾಗುವಷ್ಟು ಶಕ್ತಿ ಈ ಸಾಲುಗಳಿಗಿದೆ. ಅಬ್ಬಾ! ಹೆಣ್ಣು, ಭೂಮಿ ಮತ್ತು ಚಿಂತನೆಗಳ ಮೇಲಿನ ಆಕ್ರಮಣ, ಅಟ್ಟಹಾಸ ಹಾಗೂ ಅದು ಹುಟ್ಟಿಸುವ ಅಭದ್ರತೆಗಳಿಗೆ ಕಣ್ಣೆಂಬುದೇ ಇರುವುದಿಲ್ಲವೇ ಎಂಬ ನಿಟ್ಟುಸಿರು ಹೊಮ್ಮುತ್ತದೆ.

ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದಾದ ಸಂದರ್ಭದಲ್ಲಿ ಕೆಲವು ಜೋಕುಗಳು ಹರಿದಾಡುತ್ತಿದ್ದವು. ತತ್‍ಕ್ಷಣಕ್ಕೆ ಮುಖದಲ್ಲಿ ನಗು ಹೊಮ್ಮಿಸುವ ಶಕ್ತಿ ಇವಕ್ಕೆ ಇದ್ದವು. ಇಂತಹ ತಮಾಷೆಗಳನ್ನು ಸೃಷ್ಟಿಸುವವರು ಸಾಧಾರಣವಾಗಿ ಆಕ್ರಮಣಕಾರರಾಗಿರುವುದಿಲ್ಲ. ಎಂಥಾ
ಪರಿಸ್ಥಿತಿಯಲ್ಲೂ ಅದರ ಇನ್ನೊಂದು ಮಗ್ಗುಲನ್ನು ನೋಡ ಬಲ್ಲವರು ಇವರು. ಹಾಗಂತ, ಇವರಲ್ಲಿ ಎಲ್ಲರೂ ಆಕ್ರಮಣಕಾರರಿಗೆ ವಿರುದ್ಧವಾಗಿ ಯೋಚಿಸುವವರೂ ಆಗಿರುತ್ತಾರೆ ಎನ್ನಲಾಗುವುದಿಲ್ಲ. ಇರಲಿ, ಆ ತಮಾಷೆಗಳು ಎರಡು ರೀತಿಯಲ್ಲಿ ಇದ್ದವು. ಒಂದು, ಇನ್ನು ಮುಂದೆ ಕಾಶ್ಮೀರಿ ಹುಡುಗಿಯರನ್ನು ನಮ್ಮ ಹುಡುಗರು ಮದುವೆಯಾಗಬಹುದುಎನ್ನುವುದು. ಇನ್ನೊಂದು, ಇನ್ನು ಮೇಲೆ ಅಲ್ಲಿ ಉಡುಪಿ
ಹೋಟೆಲ್ ಅಥವಾ ಮಲಯಾಳಿಗಳ ಹೋಟೆಲ್ ಎಲ್ಲಾಶುರುವಾಗುತ್ತವೆ, ಅಲ್ಲೊಂದು ಸೈಟ್ ಮಾಡುವುದಕ್ಕೆ ತೊಂದರೆ ಇಲ್ಲ ಎನ್ನುವುದು. ಸರಿ, ಜೋಕ್ ಚೆನ್ನಾಗಿದೆ. ಈಗ ಅದರಾಚೆಗೆ ಯೋಚಿಸಿದಾಗ, ಅರೆ! ನಾವು ಮತ್ತೆ ಹೆಣ್ಣು ಮತ್ತು ಮಣ್ಣನ್ನು ನಮ್ಮದಾಗಿಸಿಕೊಳ್ಳುವ ಯೋಚನೆಗೇ ಬೀಳುತ್ತೇವಲ್ಲಾ ಅನ್ನಿಸಿಬಿಡುತ್ತದೆ.

ಹೆಣ್ಣನ್ನು ಆಕ್ರಮಿಸಿಕೊಳ್ಳುವುದರ ದುರಂತ ಪರಿಣಾಮವೇ ರಾಮಾಯಣ. ನೆಲವನ್ನು ಆಕ್ರಮಿಸಿ ಕೊಳ್ಳುವುದರ ದುರಂತ ಪರಿಣಾಮವೇ ಮಹಾಭಾರತ. ಇವೆಲ್ಲವೂ ಭವಿಷ್ಯವನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದಕ್ಕೆ ಸೂಚನೆಗಳು. ಇತಿಹಾಸವು ಗಾಯಗಳನ್ನು ಮಾತ್ರ ಹೊಂದಿಲ್ಲ. ಗಾಯಗಳಿಗೆ ಮುಲಾಮನ್ನೂ ಹೊಂದಿದೆ. ನಮ್ಮ ಸಂತರು ಆಕ್ರಮಣಗಳನ್ನೆಲ್ಲಾ ವರ್ಜಿಸಿಕೊಳ್ಳುವುದರ ಬಗ್ಗೆ ಮತ್ತೆ ಮತ್ತೆ ಮಾತಾಡುತ್ತಾರೆ. ಶರಣ, ದಾಸ, ಕಬೀರ, ಸೂಫಿ ಇನ್ನೂ ಹಲವು ಪಂಥಗಳು ನಮ್ಮೊಳಗಿನ ದುರಾಸೆಯನ್ನು ನೀಗಿಕೊಂಡು ನಿರುಮ್ಮಳ
ವಾಗಬೇಕು ಎನ್ನುವುದನ್ನೇ ಮೌಲ್ಯವಾಗಿಸುತ್ತವೆ. ಈ ಲೋಕದ ಯಾವ ಪ್ರಭುತ್ವಕ್ಕೂ ತಲೆಬಾಗದ ಸ್ವತಂತ್ರರು ತಾವು ಎಂಬುದನ್ನು ಬಾಳಿ ಬದುಕಿ ತೋರಿಸಿ, ತಮ್ಮ ಚಿಂತನೆಯನ್ನು ಯಾರ ಮೇಲೂ ಹೇರದೇ ಮನಗಾಣಿಸಲು ಮಾತ್ರ ಪ್ರಯತ್ನಿಸಿದವರು ಅವರು. ಈಗಲೂ ಇವು ನಮ್ಮ ಮನಗಳೊಳಗೆ ಮನೆ ಮಾಡಿದರೆ ನಮ್ಮನ್ನು ಹಗುರಾಗಿಸಬಲ್ಲ ಮಂತ್ರಗಳಂತೆ ಕೆಲಸ ಮಾಡುತ್ತವೆ.

ADVERTISEMENT

ಜಾಗತಿಕ ಹಪಹಪಿಯ, ತುಂಡು ಭೂಮಿಯ ಯುರೋಪಿಯನ್ನರು ವಿಶಾಲ ಭೂಮಿಯಿದ್ದ ಅಮೆರಿಕ, ಆಫ್ರಿಕಾ, ಏಷ್ಯಾ, ಆಸ್ಟ್ರೇಲಿಯಾಗಳ ಕಡೆ ಕಣ್ಣು ಹಾಕಿದ ಧೂರ್ತರು. ಆದರೆ ಇದನ್ನವರು ಸಾಹಸ ಎಂಬಂತೆ ಬಿಂಬಿಸಿದರು. ತಮ್ಮ ಚಿಂತನೆಗಳನ್ನೇ ಮೌಲ್ಯವಾಗಿಸಿ ಜಗತ್ತಿನುದ್ದಕ್ಕೂ ಹಬ್ಬಿ ಹರಡಿದರು. ತಾವು ಮಾಡಿದರೆ ಸರಿ, ಬೇರೆಯವರು ಮಾಡಿದರೆ ತಪ್ಪು ಎಂಬ ವಿತಂಡವಾದದ ಜನಕರು ಇವರು. ಯಾಕೆ ಈ ಮಾತೆಂದರೆ, ಇಂದಿನ ಜಾಗತಿಕ ವಿಪ್ಲವಗಳಿಗೆ ಕಾರಣವೇ ಈ ಜಾಗತಿಕ ಶಕ್ತಿಗಳು. ಭಾರತ ಇಂದು ತನ್ನ ಶತ್ರು ಇಂಗ್ಲೆಂಡ್ ಅನ್ನುವುದನ್ನು ಮರೆತಿದೆ. ಅಮೆರಿಕದ ಸಾಮ್ರಾಜ್ಯಶಾಹಿ ದಾಹವೇ ಪಾಕಿಸ್ತಾನವನ್ನು ಕಾಪಿಟ್ಟಿದೆ ಎಂಬುದನ್ನು ಮರೆತಿದೆ. ತನ್ನ ಜನರನ್ನು ಬಡತನದ ಬೇಗೆಗೆ ನೂಕಿ, ಇಂಗ್ಲೆಂಡ್‍ನಲ್ಲಿ ಎಕರೆಗಟ್ಟಲೆ ಜಾಗದಲ್ಲಿ ಬಂಗಲೆಗಳನ್ನು ಕೊಂಡುಕೊಂಡು, ಗಡಿಪಾರಾದಾಗ ಅಲ್ಲಿ ಐಷಾರಾಮಿ ಜೀವನ ನಡೆಸುವ ಪಾಕಿಸ್ತಾನದ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಕಾಶ್ಮೀರದ ಸಮಸ್ಯೆಯನ್ನು ಜೀವಂತವಾಗಿ ಇಡುತ್ತಾರೆ.

ಮತ್ತೆ ಮತ್ತೆ ದಿವಾಳಿಯಾಗುವ ಆ ದೇಶ, ಯುದ್ಧ ಮಾಡುವುದಕ್ಕೆ ಎಲ್ಲಿಂದ ಹಣ ತರುತ್ತಿದೆ ಎನ್ನುವುದು ಕುರುಡರಿಗೂ ಕಾಣಬಹುದಾದ ಸಂಗತಿ. ಆದರೆ ನಾವಾದರೋ ಪಾಕಿಸ್ತಾನವನ್ನು ಮಾತ್ರ ಶತ್ರು ಎಂದುಕೊಂಡು, ನಮ್ಮ ದೇಶದ ಮುಸ್ಲಿಮರೆಲ್ಲರೂ ಪಾಕಿಸ್ತಾನದ ಬೆಂಬಲಿಗರು ಎಂದು ಅನುಮಾನಿಸುತ್ತಾ, ನಮ್ಮ ಮಕ್ಕಳನ್ನು ಇಂಗ್ಲೆಂಡ್, ಅಮೆರಿಕಗಳಲ್ಲಿ ಓದಿಸುವ, ಅವರಲ್ಲಿ ಉದ್ಯೋಗ ಪಡೆದು ಸೆಟಲ್ ಆಗುವುದನ್ನು ಕನಸುತ್ತಾ, ವಾಟ್ಸ್‌ಆ್ಯಪ್, ಫೇಸ್‍ಬುಕ್‍ಗಳಲ್ಲಿ ಪ್ರಚಂಡ ದೇಶಪ್ರೇಮವನ್ನು ಹಂಚಿಕೊಳ್ಳುತ್ತಿರುತ್ತೇವೆ. ಕಾಶ್ಮೀರ ಎಂಬ ಚೆಲುವಿನ, ಮೌನದ ಕಣಿವೆಯಲ್ಲಿ ಗಾಯಗೊಂಡ ಹುಲ್ಲೆಗಳಂತಾಗಿರುವ ಅಲ್ಲಿನ ಪಂಡಿತರನ್ನೂ ಸೇರಿಸಿಕೊಂಡು ಎಲ್ಲಾ ಜನರ ಮನದ ಮಾತುಗಳೇನು ಎಂಬುದನ್ನು ಕೇಳುವ ಆಸಕ್ತಿಗಿಂತಲೂ ಅದು ನಮ್ಮ ದೇಶದ ಭೂಪ್ರದೇಶ ಎಂಬೆಡೆಗೆ ಮಾತ್ರ ನಮ್ಮ ಗಮನವಿದೆ.

ಕಾಶ್ಮೀರದ ಬಗೆಗೆ ನಿರ್ಣಯ ತೆಗೆದುಕೊಳ್ಳುವಾಗಲೆಲ್ಲಾಪ್ರಭುತ್ವಗಳು ಅಲ್ಲಿನ ಜನರ ಭಾವನೆಗಳನ್ನು ಕೇಳಿಯೇ ಇಲ್ಲಅನ್ನಿಸುತ್ತದೆ. ದೇಶ ವಿಭಜನೆಯಾಗುವಾಗ, ಭಾರತದ ಜೊತೆಗೆ ಸೇರಿಕೊಳ್ಳುತ್ತೇವೆ ಎಂದು ಅಲ್ಲಿನ ಜನ ಒಲವು ತೋರಿದಾಗಲೂ ರಾಜಾ ಹರಿಸಿಂಗ್ ತನ್ನ ಸಾಮರ್ಥ್ಯ ಏನುಎನ್ನುವುದನ್ನೇ ಒರೆಗೆ ಹಚ್ಚದೆ, ಸ್ವತಂತ್ರ ದೇಶವಾಗಿರುತ್ತೇವೆಎಂಬ ನಿರ್ಣಯ ತೆಗೆದುಕೊಂಡುಬಿಟ್ಟ. ಜನರ ಅಭಿ
ಪ್ರಾಯ ಕೇಳುವ ಅವಕಾಶವನ್ನು ಅನವಶ್ಯಕವಾಗಿ ಕೈಚೆಲ್ಲಿದ.ಆತ ಹಾಗೆ ನಿರ್ಣಯಿಸಿದ ಮೇಲೆ ಅವರನ್ನು ಅವರಷ್ಟಕ್ಕೇ ಬಿಡಬೇಕಾಗಿದ್ದು ಎರಡೂ ದೇಶಗಳ ನೈತಿಕತೆ ಆಗಿತ್ತು. ಆದರೆ ಪಾಕಿಸ್ತಾನದ ಪ್ರಭುತ್ವ ಮತ್ತೆ ನೈತಿಕತೆ ಮೀರಿ ಆಕ್ರಮಣ ಮಾಡುವಾಗಲೂ ಅಲ್ಲಿನ ಜನರ ಬಗ್ಗೆ ಯೋಚಿಸಲಿಲ್ಲ. ಹಾಗೆ ಯೋಚಿಸಬೇಕಾಗಿಲ್ಲ ಎಂಬುದೇ ಯಾವಾಗಲೂ ಆಕ್ರಮಣಕಾರಿ ಪ್ರಭುತ್ವದ ನಿಲುವಾಗಿರುತ್ತದೆ.

ಭಾರತದ ಸಹಾಯ ಕೋರಿದ ಮೇಲಾದರೂ ಹರಿಸಿಂಗ್ ಸ್ಪಷ್ಟ ನಿಲುವು ತೆಗೆದುಕೊಂಡು ಭಾರತದೊಂದಿಗೆ ವಿಲೀನವಾಗಿದ್ದರೆ ಅಲ್ಲಿಗೆ ಒಂದು ಹಂತ ಮುಗಿಯುತ್ತಿತ್ತು. ಅದಾಗಲಿಲ್ಲ. ಆದರೆ ತೊಂಬತ್ತರ ದಶಕದ ತನಕವೂ ಕಾಶ್ಮೀರ ಬಹುಮಟ್ಟಿಗೆ ಶಾಂತವಾಗಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಆ ಅವಧಿಯಲ್ಲಿ ಆ ಜನರ ಅಭಿಪ್ರಾಯ ಕೇಳಿ ಒಂದು ನಿರ್ಣಯಕ್ಕೆ ಬರಬಹುದಾಗಿತ್ತು. ಆದರೆ, ಅಲ್ಲಿನ ಆಳುವವರು ತಾವು ಶ್ರೀಮಂತರಾಗುತ್ತಾ ತಮ್ಮ ಜನರನ್ನು ಬಡತನದಲ್ಲೇ ಉಳಿಸಿ ನಿರುಮ್ಮಳವಾಗಿದ್ದರು. ಮತ್ತೆ ಇದು ಜನರಿಗೆ ಮಾಡಿದ ವಂಚನೆ. ಎಂಬತ್ತರ ದಶಕದ ಕೊನೆಯಲ್ಲಿ ಜಗತ್ತಿನಾದ್ಯಂತ ವೇಗವಾಗಿ ಬೆಳೆದ ಮೂಲಭೂತವಾದ ನಮ್ಮ ಕಾಶ್ಮೀರವನ್ನೂ ರಣರಂಗವಾಗಿಸಿತು. ಮೂಲಭೂತವಾದ ನರಕವನ್ನಲ್ಲದೆ ಏನನ್ನೂ ಸೃಷ್ಟಿಸುವುದಿಲ್ಲ ಎಂಬುದಕ್ಕೆ, ತೊಂಬತ್ತರ ನಂತರದ ಕಾಶ್ಮೀರ ಎಂಬ ಕಣ್ಣಿಗೆ ಸ್ವರ್ಗವೂ ಮನಕ್ಕೆ ನರಕವೂ ಆದ ಕಣಿವೆಯೇ ಸಾಕ್ಷಿ.

ನಾನು ಯಾವಾಗಲೂ ಅಂದುಕೊಳ್ಳುತ್ತಿದ್ದೆ.ಕಲ್ಲು ಹೊಡೆಯುವ ಕಾಶ್ಮೀರಿಗರ ಮನ ಒಲಿಸಿಕೊಳ್ಳಬೇಕು ಅಂತ. ಇದು ಸಾಧ್ಯವಿರಲಿಲ್ಲವೇ? ಗೊತ್ತಿಲ್ಲ. ನಾವು ಆ ಪ್ರಯತ್ನವನ್ನೇ ಗಂಭೀರವಾಗಿ ಮಾಡಿಲ್ಲ. ಟಿ.ವಿ. ನಿರೂಪಕರೊಬ್ಬರು, ‘ಜನಕ್ಕೇನು, ತೆಪ್ಪಗಿರ್ತಾರೆ. ಅವರನ್ನೇನು ಕೇಳುವುದು, ಒಪ್ಕಂಡ್ ಇರ್ತಾರೆ’ ಎಂದು ಉಡಾಫೆಯಿಂದ ಹೇಳುವುದನ್ನು ಕೇಳುತ್ತಿದ್ದಾಗ, ‘ದೇವರೇ ಇಲ್ಲೀಗ ಕೊಲೆ ಇದೆ, ಕ್ರೌರ್ಯ ಇದೆ. ಇದು ನನ್ನ ಕಾಶ್ಮೀರ ಅಲ್ಲ, ನನಗೆ ಹಳೆಯ ಕಾಶ್ಮೀರವನ್ನು ಮರಳಿಕೊಡು’ ಎಂಬ ಹುಡುಗಿಯೊಬ್ಬಳ ಹಾಡು ಕಿವಿಯಲ್ಲಿ ಗುನುಗುನಿಸುತ್ತಿತ್ತು.

ನೀನು ನಿನ್ನ ದುರಾಸೆಗಳನ್ನು ಕಾಲದನದಿಯಲ್ಲಿ ಕರಗಿಸಿದರೆ

ನೀನು ಎಲ್ಲೆಡೆ ಪರಿಪೂರ್ಣ ದೇವರನ್ನು ಕಾಣಬಲ್ಲೆ
ನೀನು ಇದ ಬಲ್ಲೆ, ನೀನು ಇದರಂತೆ ಇರಬಲ್ಲೆ

ಕಾಶ್ಮೀರದ ಲಲ್ಲೇಶ್ವರಿಯ ಈ ಪದವನ್ನು ಕೇಳಿಸಿಕೊಳ್ಳುವ ಕಿವಿ ಜಗದೆಲ್ಲೆಡೆ ಹುಟ್ಟಿಕೊಳ್ಳಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.