ADVERTISEMENT

ಸುತ್ತಿಗೆಯೊಂದು ಬೇಕಿದೆ ನಮಗೂ

ಶೋಷಿತರ ಪರವಾಗಿ ಧ್ವನಿ ಎತ್ತುವುದು ಮುಳುವಾಗಿ ಪರಿಣಮಿಸುತ್ತಿದೆಯೇ?

ರೇಣುಕಾ ನಿಡಗುಂದಿ
Published 18 ಅಕ್ಟೋಬರ್ 2019, 20:00 IST
Last Updated 18 ಅಕ್ಟೋಬರ್ 2019, 20:00 IST
   

ಅವರೊಬ್ಬ ಪ್ರಾಧ್ಯಾಪಕ. ಜನಪರ ಹೋರಾಟದಲ್ಲಿ ಗುರುತಿಸಿಕೊಂಡವರು. ಅವರು ಬೆಳಗಿನ ನಿದ್ದೆಯ ಮಂಪರಿನಿಂದ ಇನ್ನೂ ಹೊರಬಂದಿರಲಿಲ್ಲ. ಆಗ... ಯಾವ ಸೂಚನೆಯನ್ನೂ ನೀಡದೆ ಪೊಲೀಸರು ಅವರ ಮನೆಗೆ ನುಗ್ಗುತ್ತಾರೆ. ಯಾರ‍್ಯಾರೊಂದಿಗೆ ಅವರು ಸಂಪರ್ಕದಲ್ಲಿದ್ದಾರೆ, ಏನನ್ನು ಓದುತ್ತಾರೆ, ಏನೆಲ್ಲ ಬರೆಯುತ್ತಾರೆ,ಅವರ ಗೆಳೆಯರು, ಬಂಧುಗಳು ಯಾರ‍್ಯಾರು ಎಂದೆಲ್ಲ ತಲಾಷ್‌ ಮಾಡತೊಡಗುತ್ತಾರೆ.

ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಹೀಗೆ, ದೆಹಲಿ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ.ಹನಿಬಾಬು ಅವರ ಮನೆಗೆಈಚೆಗೆ ಬೆಳಗಿನ ಜಾವ ಬಂದು, ಬಾಗಿಲು ತೆರೆಸಿ ಒಳನುಗ್ಗಿದರು. ಆರು ತಾಸುಗಳ ಕಾಲ ಮನೆಯನ್ನು ಜಾಲಾಡಿದರು. ಕೊನೆಗೆ ಪುಸ್ತಕದ ಕಪಾಟಿನಿಂದ ಅವರು ಮುಖ್ಯವಾಗಿ ವಶಪಡಿಸಿಕೊಂಡದ್ದು ‘ಫ್ರಂ ವರ್ಣಾ ಟು ಜಾತಿ’ ಎಂಬ ಪುಸ್ತಕ, ‘ಅಂಡರ್‌ಸ್ಟ್ಯಾಂಡಿಂಗ್‌ ಮಾವೊಯಿಸ್ಟ್ಸ್‌’ ವಿಷಯದ ಮೇಲಿನ ಟಿಪ್ಪಣಿಗಳ ಗುಚ್ಛದ ಜೊತೆಗೆ ಲ್ಯಾಪ್‌ಟಾಪ್, ಫೋನ್ ಹಾಗೂ ಹಾರ್ಡ್ ಡಿಸ್ಕ್‌ಗಳನ್ನು.

ಭೀಮಾ ಕೋರೆಗಾಂವ್‌ ಸಮರದ 200ನೇ ವರ್ಷಾಚರಣೆ ಪ್ರಯುಕ್ತ 2017ರ ಡಿಸೆಂಬರ್‌ನಲ್ಲಿ ಆಯೋಜಿಸಿದ್ದ ‘ಎಲ್ಗಾರ್ ಪರಿಷತ್‌’ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿ, ಹಿಂಸಾಚಾರಕ್ಕೆ ಕಾರಣರಾಗಿದ್ದರು ಎಂಬ ಆರೋಪದ ಮೇಲೆ, ಮಾವೊವಾದದ ಪರ ಒಲವಿರುವ ಲೇಖಕ ವರವರ ರಾವ್, ಸುಧಾ ಭಾರದ್ವಾಜ್, ಅರುಣ್ ಫೆರೇರಾ ಮತ್ತು ವರ್ನನ್ ಗೊನ್ಸಾಲ್ವೆಸ್‌ ಅವರನ್ನು ಕಳೆದ ವರ್ಷ ಬಂಧಿಸಲಾಗಿದೆ. ಇದೇ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ, ಕಲ್ಲುತೂರಾಟ ಮತ್ತು ಹಿಂಸಾಚಾರವನ್ನು ಪ್ರಚೋದಿಸಿದ್ದರು ಎನ್ನಲಾದ ಶಿವ್‌ ಪ್ರತಿಷ್ಠಾನ್‌ ಹಿಂದೂಸ್ತಾನ್‌ ಸಂಘಟನೆಯ ಸಂಸ್ಥಾಪಕ ಸಂಭಾಜಿ ಭಿಡೆ ಮತ್ತು ಮಿಲಿಂದ ಏಕಬೋಟೆ ಅವರ ಮೇಲೆ ದಲಿತರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಯಿತು. ಏಕಬೋಟೆ ಅವರನ್ನು ಬಂಧಿಸಲಾಯಿತಾದರೂ ಭಿಡೆ ಅವರನ್ನು ಬಂಧಿಸುವ ಧೈರ್ಯವನ್ನು ಪೊಲೀಸರು ಮಾಡಲಿಲ್ಲ. ಏಕೆಂದರೆ ಎಂಬತ್ತೈದು ವರ್ಷ ವಯಸ್ಸಿನ ಭಿಡೆ ಸಾಮಾನ್ಯರಲ್ಲ. ಅವರಿಗೆ ಅಪಾರ ಶಿಷ್ಯವರ್ಗವಿದೆ. ಅಷ್ಟೇ ಪ್ರಭಾವಶಾಲಿಯೂ ಹೌದು.

ADVERTISEMENT

ಬಂಧಿತ ಗೊನ್ಸಾಲ್ವೆಸ್ ಅವರ ವಿಚಾರಣೆ ವೇಳೆ, ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರು ‘ನೀವು, ವಾರ್ ಅಂಡ್ ಪೀಸ್ ಪುಸ್ತಕವನ್ನು ಮನೆಯಲ್ಲಿ ಯಾಕೆ ಇಟ್ಟುಕೊಂಡಿದ್ದಿರಿ’ ಎಂದು ಕೇಳಿ ವಿವಾದಕ್ಕೆ ಒಳಗಾಗಿದ್ದರು. ಬಳಿಕ ಸ್ಪಷ್ಟನೆಯನ್ನೂ ನೀಡಿ ‘ವಾರ್‌ ಅಂಡ್‌ ಪೀಸ್‌ ಕೃತಿಯ ಮಹತ್ವದ ಕುರಿತು ನನಗೆ ಅರಿವಿದೆ’ ಎಂದು ಹೇಳಿದ್ದರು.

ಇದೇನೇ ಇರಲಿ,ವರ್ಣ, ಜಾತಿ ಅಥವಾ ಯುದ್ಧಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಇಟ್ಟುಕೊಳ್ಳುವುದು ಆಕ್ಷೇಪಾರ್ಹವೇ ಎಂಬ ಪ್ರಶ್ನೆ ಏಳುತ್ತದೆ.

ಛತ್ತೀಸಗಡದ ದಮನಿತರ ಪರವಾಗಿ 29 ವರ್ಷಗಳಿಂದ ಕೆಲಸ ಮಾಡುತ್ತಿದ್ದ ವಕೀಲೆ, ನಾಗರಿಕ ಹಕ್ಕುಗಳ ಕಾರ್ಯಕರ್ತೆ ಸುಧಾ ಭಾರದ್ವಾಜ್‌ ಅಮೆರಿಕದ ಪೌರತ್ವ ಹೊಂದಿದ್ದಾರೆ. ಅವರು ಅಲ್ಲಿ ಆರಾಮವಾಗಿ ಜೀವನ ನಡೆಸಬಹುದಿತ್ತು. ಆದರೆ ಸಾಮಾಜಿಕ ಪ್ರಜ್ಞೆ ಅವರನ್ನು ಇಲ್ಲಿಗೆ ಕರೆತಂದಿತು. ಈ ಸಾಮಾಜಿಕ ಪ್ರಜ್ಞೆಯೇ ಅವರನ್ನು ಜೈಲಿಗೂ ತಳ್ಳಿದೆ ಎಂಬುದು ವಿಪರ್ಯಾಸ.

ಪ್ರತಿ ಯುಗವೂ ತನ್ನ ಕಾಲದ ಸತ್ಯ ಮತ್ತು ಮಿಥ್ಯೆಗಳಿಗೆ ಸಾಕ್ಷಿಯಾಗಿರುತ್ತದೆ. ಪ್ರಜಾಪ್ರಭುತ್ವದ ನ್ಯಾಯಾಂಗ ವ್ಯವಸ್ಥೆ ಯಲ್ಲಿ ಪ್ರತಿಯೊಬ್ಬ ನಾಗರಿಕನೂ ಸಮಾನ ಮತ್ತು ನ್ಯಾಯ ಎಲ್ಲರಿಗೂ ಸಮನಾಗಿ ಸಿಗಬೇಕು. ಆದರೆ, ಎಷ್ಟೋ ಬಾರಿ ನಿಜವಾದ ಅಪರಾಧಿಗಳು ನುಣುಚಿಕೊಂಡು, ತಪ್ಪು ಮಾಡದವರು, ಶೋಷಿತರ ಪರ ಧ್ವನಿ ಎತ್ತಿದವರು ಶಿಕ್ಷೆ ಅನುಭವಿಸುವಂತೆ ಆಗುತ್ತದೆ!

ಒಂದು ವಿದ್ಯಮಾನದ ನೈಜ ಚಿತ್ರಣವನ್ನು ಕಟ್ಟಿ ಕೊಟ್ಟು, ಸಮಾಜದಲ್ಲಿ ಅಭಿಪ್ರಾಯವನ್ನು ರೂಪಿಸುವಲ್ಲಿ ಮಾಧ್ಯಮದ ಪಾತ್ರ ದೊಡ್ಡದು. ಸಮಾಜದಲ್ಲಿನ ಅನ್ಯಾಯ, ಅಪರಾಧಗಳನ್ನು ಸರಿಯಾಗಿ ಗುರುತಿಸಿ, ಪ್ರಕರಣ ದಾಖಲಿಸುವ ಗುರುತರ ಹೊಣೆ ಪೊಲೀಸ್‌ ವ್ಯವಸ್ಥೆಯದು. ಆದರೆ, ಈ ಎರಡೂ ವ್ಯವಸ್ಥೆಗಳು ದಕ್ಷತೆಯಿಂದ, ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸದೆ ಸಮಾಜದ ಹಾದಿ ತಪ್ಪಿಸುತ್ತಿವೆ ಎಂಬುದಕ್ಕೂ ನಿದರ್ಶನ ಗಳು ಸಿಗುತ್ತವೆ.

ಇಂಥ ಒಂದು ಘಟನೆಯನ್ನು ಚೈತನ್ಯ ತಮ್ಹಾಣೆ ಅವರು ನಿರ್ದೇಶಿಸಿದ ಮರಾಠಿ ಸಿನಿಮಾ ‘ಕೋರ್ಟ್’ ಎಳೆ ಎಳೆಯಾಗಿ ಬಿಚ್ಚಿಡುತ್ತದೆ. ಅಧ್ಯಾಪಕ, ಜನಪದ ಗಾಯಕ ನಾರಾಯಣ್ ಕಾಂಬ್ಳೆ ಅವರು ದಲಿತ ಸಮಾಜವನ್ನು ಜಾಗೃತಗೊಳಿಸುವ ಹಾಡನ್ನು ಹಾಡಿದ್ದಕ್ಕೆ, ಒಳಚರಂಡಿ ಕೆಲಸಗಾರನನ್ನು ಆತ್ಮಹತ್ಯೆಗೆ ಪ್ರೇರೇಪಿಸಿದನೆಂದು ಆರೋಪಿಸಿ ಪೊಲೀಸರು ಬಂಧಿಸುತ್ತಾರೆ. ಅತ್ತ ಕಾಂಬ್ಳೆಯ ಜಾಮೀನಿಗಾಗಿ ಕ್ರಿಮಿನಲ್ ವಕೀಲ, ಮಾನವ ಹಕ್ಕುಗಳ ಕಾರ್ಯಕರ್ತ ಮನವಿ ಸಲ್ಲಿಸಿದರೆ, ಇತ್ತ ಜಾಮೀನು ನೀಡಕೂಡದೆಂದು ವಿರೋಧಿಸಿ ಪಬ್ಲಿಕ್ ಪ್ರಾಸಿಕ್ಯೂಟರ್, ವ್ಯವಸ್ಥೆ ಮತ್ತು ರಾಜ್ಯದ ಪರ ವಾದ ಮಾಡುತ್ತಾರೆ. ಹೀಗೆ ನ್ಯಾಯಾಲಯದ ಕಲಾಪಗಳು ಪಡೆದುಕೊಳ್ಳುವ ತಿರುವುಗಳು ಬೆಚ್ಚಿಬೀಳಿಸುತ್ತವೆ. ಸಾಮಾನ್ಯ ಜನರಿಂದ ನ್ಯಾಯ ಹೇಗೆ ನುಣುಚಿಕೊಳ್ಳುತ್ತದೆ ಎಂಬುದನ್ನು ‘ಕೋರ್ಟ್‌’ ಕಟ್ಟಿಕೊಡುತ್ತದೆ.ದಮನಿತರಿಗಾಗಿ ದನಿಯೆತ್ತಿ ದವರನ್ನು, ಮಾನವ ಹಕ್ಕುಗಳಿಗಾಗಿ ಹೋರಾಡುವವರನ್ನು ಜಾಮೀನು ನೀಡದೆ ಬಂಧನದಲ್ಲಿ ಇಟ್ಟಿರುವುದು ಇಂದಿನ ದುರಿತಕಾಲದ ಸತ್ಯ.

ಇತಿಹಾಸ ಮರುಕಳಿಸುತ್ತದೆ ಎನ್ನುತ್ತಾರೆ. 1930ರ ದಶಕದಲ್ಲಿ ಜರ್ಮನ್ ವಿದ್ಯಾರ್ಥಿ ಸಂಘವು ನಾಜಿ ಜರ್ಮನಿ ಮತ್ತು ಆಸ್ಟ್ರಿಯಾದಲ್ಲಿ ನೂರಾರು ಬರಹಗಾರರ ಪುಸ್ತಕಗಳನ್ನು ಸುಟ್ಟುಹಾಕುವ ಮಹಾಯಜ್ಞ ವನ್ನು ನಡೆಸಿತು. ಕಾರಣ, ನಾಜಿ ಸಿದ್ಧಾಂತವನ್ನು ವಿರೋಧಿಸುವ ಯಾವುದೂ ಈ ಭೂಮಿಯ ಮೇಲೆ ಇರಕೂಡದು ಎಂಬುದಾಗಿತ್ತು! ಜರ್ಮನ್ ಶುದ್ಧ ತಳಿ, ಜರ್ಮನ್ ಶುದ್ಧ ಭಾಷೆ, ಜರ್ಮನ್ ಶುದ್ಧ ಸಂಸ್ಕೃತಿಯನ್ನು ಸ್ಥಾಪಿಸುವ ಸಲುವಾಗಿ ಯಹೂದಿ ಬೌದ್ಧಿಕತೆಯನ್ನು ನಾಶಗೊಳಿಸುವುದೇ ನಾಜಿಗಳ ಉದ್ದೇಶವಾಗಿತ್ತು. ಹಾಗೆ ಸುಟ್ಟುಹೋದ ಲಕ್ಷಾಂತರ ಪುಸ್ತಕಗಳಲ್ಲಿ ಕಾರ್ಲ್‌ ಮಾರ್ಕ್ಸ್, ಕಾರ್ಲ್‌ ಕೌಟ್ಸ್ಕಿ, ಆಲ್ಬರ್ಟ್ ಐನ್‌ಸ್ಟೀನ್‌, ಸಿಗ್ಮಂಡ್ ಫ್ರಾಯ್ಡ್, ಮ್ಯಾಗ್ನಸ್ ಹಿರ್ಷ್‌ಫೆಲ್ಡ್, ವಾಲ್ಟರ್ ಮೆಹ್ರಿಂಗ್, ಅರ್ನಾಲ್ಡ್ ಮುಂತಾದ ಮಹನೀಯರ ಕೃತಿಗಳಿದ್ದವು.

ನಾಜಿಗಳ ದೌರ್ಜನ್ಯ ಇಷ್ಟಕ್ಕೇ ನಿಲ್ಲುವುದಿಲ್ಲ. ಮುಂದಿನ ಪೀಳಿಗೆಗೆ ಅವರ ಕೃತಿಗಳು ಲಭ್ಯವಾಗದಂತೆ ಗ್ರಂಥಾಲಯ, ಶಾಲೆ ಮತ್ತು ವಿಶ್ವವಿದ್ಯಾಲಯಗಳ ಪಠ್ಯಕ್ರಮದಿಂದಲೂ ಅವುಗಳನ್ನು ನಿಷೇಧಿಸಲಾಗುತ್ತದೆ. ಅನೇಕ ಲೇಖಕರನ್ನು ಕಾನ್ಸನ್‌ಟ್ರೇಷನ್
ಕ್ಯಾಂಪಿಗೆ ದಬ್ಬಲಾಗುತ್ತದೆ, ಕೆಲವರನ್ನು ಬಂಧನ ದಲ್ಲಿ ಇರಿಸಲಾಗುತ್ತದೆ, ಕೆಲವರ ಪೌರತ್ವವನ್ನು ಕಿತ್ತುಕೊಳ್ಳಲಾಗುತ್ತದೆ. ನಾಜಿಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡವರೆಷ್ಟೋ ಗಡಿಪಾರಾದವರೆಷ್ಟೋ! ನಾಜಿ ಕ್ರೂರಿಗಳು ಹೀಗೆ ಬ್ರೆಕ್ಟ್‌ನ ಪುಸ್ತಕಗಳನ್ನು ಮುಟ್ಟುಗೋಲು ಹಾಕಿಕೊಂಡಾಗ ಆತ ಅಮೆರಿಕಕ್ಕೆ ತೆರಳುತ್ತಾನೆ. ಈ ಯುಗದ ಕರಾಳ ಇತಿಹಾಸದ ಸತ್ಯಗಳಿವು.

ಯುದ್ಧಕಾಲದ ಸಾಮಾಜಿಕ ಸಂಘರ್ಷವನ್ನು ಕವಿತೆ– ನಾಟಕಗಳ ಮೂಲಕ ಅಭಿವ್ಯಕ್ತಿಸಿದ ಬರ್ಟೋಲ್ಟ್ ಬ್ರೆಕ್ಟ್, ‘ಕಲೆಯು ವಾಸ್ತವಕ್ಕೆ ಹಿಡಿದ ಕನ್ನಡಿಯಲ್ಲ, ರೋಗಗ್ರಸ್ತ ಸಮಾಜವನ್ನು ಬಡಿದು ಕುಟ್ಟಿ ಸರಿಮಾಡುವ ಸುತ್ತಿಗೆ’ ಎಂದಿದ್ದಾನೆ. ಸಂಕುಚಿತ ಮನಸ್ಸುಗಳನ್ನು ಕುಟ್ಟಿ ಸರಿ ಮಾಡಲು ಸುತ್ತಿಗೆಯೊಂದು ಬೇಕಿದೆ ನಮಗೂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.