ಪ್ರೇಮ ನಿರಾಕರಣೆಯ ನೆಪದಲ್ಲಿ ಕೊಲೆ, ಲೈಂಗಿಕ ದೌರ್ಜನ್ಯ ಮತ್ತು ಅದರ ವಿಡಿಯೊ ಚಿತ್ರೀಕರಣದ ವಿಕೃತಿಯಂತಹ ಭೀಕರ ಪ್ರಕರಣಗಳ ಜೊತೆಗೆ ಹೆಂಡತಿಯನ್ನು, ಮಕ್ಕಳನ್ನು, ಸೇವಕರನ್ನು ಹೊಡೆಯುವ, ಪೀಡಿಸುವ ಹಿಂಸಾನಂದದ ಬಗೆಗೆ ಬರೆಯಹೊರಟರೆ ಅರಬ್ಬಿ ಸಮುದ್ರವೇ ಶಾಯಿಯಾದರೂ ಸಾಲುವುದಿಲ್ಲ. ಏನಾಗಿದೆ ಈ ಹುಡುಗರಿಗೆ ಎಂದು ದಿಗ್ಭ್ರಮೆ ಆವರಿಸುವಂತಹ ಸುದ್ದಿಗಳ ಮಹಾಪೂರ. ಯಾಕೆ ಈ ಹುಡುಗರು ಹೀಗಾದರು? ಯಾಕೆ ಯಾಕೆ?
ಹುಟ್ಟಿದ ಕೂಡಲೇ ಹೊಕ್ಕುಳಬಳ್ಳಿ ಕಡಿದರೂ ಭಾವುಕವಾಗಿ ತಾಯಿಗೆ ಅಂಟಿಕೊಂಡೇ ಬೆಳೆವ ಹುಡುಗರು, ಸಣ್ಣಪುಟ್ಟ ಅಗತ್ಯಗಳಿಗೂ ಅಮ್ಮ, ಅಕ್ಕ-ತಂಗಿಯರ ಅವಲಂಬಿಸಿದವರು, ಒಂದು ಪೈಸೆ ಸಿಟ್ಟು ಬಂದರೆ ಒಂದು ಸೇರು ಕಣ್ಣೀರು ಸುರಿಸುವ ಭಾವಜೀವಿಗಳು ಅದು ಹೇಗೆ ಮುಖದ ಮೇಲೆ ರೋಮಗಳು ದಟ್ಟೈಸುವ ಹೊತ್ತಿಗೆ ದೂರವಾಗಿ ಯಾವುದೋ ಲೋಕ ಸೇರಿಬಿಡುತ್ತಾರೆ? ನಮ್ಮ ಲೋಕ, ಅವರ ಲೋಕ ಎರಡಾಗುವುದಾದರೂ ಹೇಗೆ? ಇದೇ ಎದೆ, ಯೋನಿ, ಕಿಬ್ಬೊಟ್ಟೆಯ ನಡುವಿನಿಂದಲೇ ಮೂಡಿದವರು ಅದ್ಯಾವ ಗಳಿಗೆಯಲ್ಲಿ ತಮ್ಮ ಪೊರೆದ ಕಾಯದ ರೂಹು ಮರೆತು ಹೆಣ್ಣನ್ನೊಂದು ಮೋಹ, ಉನ್ಮಾದದ ಸಂಕೇತದಂತೆ, ಗಂಡಸುತನದ ಅಹಂಕಾರ ಮೆರೆಸುವ ಯುದ್ಧಭೂಮಿ ಎಂಬಂತೆ ಸ್ವೀಕರಿಸುತ್ತಾರೆ? ಬಾಲ್ಯದಲ್ಲಿ ಹೆಣ್ಣುಮಕ್ಕಳಷ್ಟೇ ಅಥವಾ ಅವರಿಗಿಂತ ಹೆಚ್ಚೇ ಹೆದರುವ ಪುಟ್ಟಣ್ಣರು ಕುತ್ತಿಗೆ ಕೊಯ್ಯುವ, ಇರಿಯುವ, ಹಿಂಸಿಸುವ, ಹೊಡೆಯುವ ಹಿಂಸಾರೂಪಿಗಳಾಗಿ ಪರಿವರ್ತನೆ ಆಗುವ ವಿಷಗಳಿಗೆ ಯಾವುದು? ಗಂಡುಮಕ್ಕಳನ್ನು ನಾವು ಬೆಳೆಸುತ್ತಿರುವ ಕ್ರಮದಲ್ಲೇ ಲೋಪವಿದೆಯೆ?
ಹೌದು, ಹುಡುಗರನ್ನು ಬೆಳೆಸುವ ನಮ್ಮ ಕ್ರಮದಲ್ಲಿಯೇ ಖಂಡಿತವಾಗಿ ತಪ್ಪಿದೆ. ಸ್ವ ಅವಲೋಕನ ಮಾಡಿಕೊಳ್ಳುವ ಮೂಲಕ ಮೇಲಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ, ಆಗ ಮಹಿಳಾ ದೌರ್ಜನ್ಯವೆಂಬ ಪದವೇ ಕಾಣೆಯಾಗುತ್ತದೆ.
ಹುಡುಗರ ಮೇಲೆ ಗಂಡಸುತನದ ಹೇರಿಕೆ ಮನೆಯಿಂದಲೇ ಆರಂಭವಾಗುತ್ತದೆ. ತನ್ನ ಮಗ ಹೀಗಿರಬೇಕು, ಹಾಗಿರಬೇಕು, ಇಷ್ಟು ಗಳಿಸಬೇಕು, ಶೂರನಾಗಿರಬೇಕು, ಫೇಮಸ್ಸಾಗಬೇಕು ಎಂಬಂಥ ಅಸಾಧ್ಯ ನಿರೀಕ್ಷೆಗಳ ಭಾರವನ್ನು ಗಂಡುಮಕ್ಕಳ ಮೇಲೆ ಹೇರುವ ಪಾಲಕರು, ವಿಶೇಷ ಕಾಳಜಿಯಿಂದ ಮಗಂದಿರನ್ನು ತಯಾರು ಮಾಡುತ್ತಾರೆ. ಭಯ, ಅಳು, ನಾಚಿಕೆ, ಹಿಂಜರಿಕೆಯೇ ಮೊದಲಾದ ಮಗುಸಹಜ, ಮಾನವಸಹಜ ಗುಣಗಳ ಹುಡುಗನನ್ನು, ಅವನು ಬೆಳೆಯುತ್ತಾ ಹೋದಂತೆ ಸಮಾಜ ‘ಗಂಡಸು’ ಆಗಿಸುತ್ತದೆ.
ಕಣ್ಣೀರನ್ನು ತಯಾರಿಸುವ ಗ್ರಂಥಿಗಳು ಎಲ್ಲ ಮನುಷ್ಯರಿಗೂ ಇರುವಾಗ, ಕಣ್ಣೀರುಕ್ಕಿಸುವ ಭಾವುಕ ಕ್ಷಣಗಳು ಪ್ರತಿ ಜೀವಿಗೂ ಸಹಜವಾಗಿ ಎದುರಾಗುವಾಗ, ಹುಡುಗರನ್ನು ‘ಹೆಂಗ್ಸರಂಗೆ ಅಳಬೇಡ’ ಎಂಬ ಒತ್ತಾಯ ಹೇರಿ ಬೆಳೆಸುತ್ತೇವೆ. ಎಂತಹ ಹಿಂಸೆ! ‘ಛೀ, ಹುಡ್ಗಿ ಥರಾ ಅಳ್ತೀಯಲ್ಲ’, ‘ಪುಕ್ಕಲ, ನೀನು ಗಂಡು ಹೌದಾ ಅಲ್ವಾ?’, ‘ಅವ್ರು ಅಷ್ಟ್ ಹೇಳ್ದಾಗ ಯಾಕೆ ಸುಮ್ನಿದ್ದೆ? ಕೈಗೆ ಬಳೆ ತೊಟ್ಕಂಡಿದ್ಯ?’ ಎಂಬಂಥ, ದಿನನಿತ್ಯ ಮನೆಯಲ್ಲಿ, ಶಾಲೆಯಲ್ಲಿ, ಸಿನಿಮಾ– ಧಾರಾವಾಹಿಗಳಲ್ಲಿ, ರೀಲ್ಸ್‌ನಲ್ಲಿ ಕೇಳುವುದು ಮಹಿಳೆಯರನ್ನು ಕೀಳುಗೊಳಿಸುವ ಇಂತಹ ಅಮಾನವೀಯ ಮಾತು, ಜೋಕುಗಳನ್ನೇ!
ಇವನ್ನು ಕಂಡುಕೇಳಿ ಬೆಳೆವ ಹುಡುಗರು ತಮ್ಮ ಸಹಜ ಪ್ರಾಕೃತಿಕ ಗುಣಗಳನ್ನು ಕಳೆದುಕೊಂಡು, ಗಂಡಿನ ನಿರೂಪಿತ ಚೌಕಟ್ಟಿನೊಳಗೆ ಕಷ್ಟಪಟ್ಟು ತಮ್ಮನ್ನು ತುರುಕಿಕೊಳ್ಳುತ್ತಾರೆ. ಭಾವುಕತೆಯನ್ನು ಕೊಂದುಕೊಂಡು ಗಂಡು ‘ಆ್ಯಟಿಟ್ಯೂಡ್’ ಬೆಳೆಸಿಕೊಳ್ಳಲು ವಾರ್ತೆ, ಕ್ರೈಂ ಸುದ್ದಿ, ರಾಜಕೀಯ ಸುದ್ದಿ, ನೀಲಿಚಿತ್ರ ವೀಕ್ಷಣೆ, ಆಟ, ಸಭೆ, ಜಾತ್ರೆ, ಪಾರ್ಟಿಗಳಿಗೆ ಅಂಟಿಕೊಳ್ಳುತ್ತಾರೆ.
ಚಾ ಕುಡಿದ ಲೋಟ ತೊಳೆಯುವುದು ಬೇಡ, ತನ್ನ ಅಂಗಿ, ಚಡ್ಡಿ ಒಗೆದುಕೊಳ್ಳುವುದು ಬೇಡ, ಗಂಡಾಗಿ ಪೊರಕೆ ಹಿಡಿದು ಮನೆ ಗುಡಿಸಿ, ಒರೆಸುವುದೇ ಛೇಛೇಛೇ, ಬೇಡವೇ ಬೇಡ ಎಂದು ಕೂರಿಸಿ, ಸೋಮಾರಿಗಳನ್ನಾಗಿಸಿ, ಪರೋಪಜೀವಿಗಳನ್ನಾಗಿಸಿ, ದುಡ್ಡು-ಅಧಿಕಾರದ ಭ್ರಮೆ ಹುಟ್ಟಿಸುವ ಕೆಲಸಗಳಿಗಷ್ಟೇ ಸೀಮಿತಗೊಳಿಸಿ ಗಂಡುಮಕ್ಕಳನ್ನು ಬೆಳೆಸಲಾಗುತ್ತದೆ. ಅದಕ್ಕೆ ಪ್ರತಿಯಾಗಿ ಅವನು ‘ಯಶಸ್ವಿ’ ಗಂಡಸಾಗಬೇಕು, ಕೈತುಂಬ ದುಡಿದು ಹೆಂಡತಿಯನ್ನು ಆಳಬೇಕು. ಕೆಲಸ ಮಾಡುವುದಲ್ಲ, ಮಾಡಿಸುವ ಮೂಲಕ, ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳುವ ಮೂಲಕ ಗಂಡಸುತನವನ್ನು ಮೆರೆಸಬೇಕು. ತನ್ನದಲ್ಲದ ಗುಣಗಳನ್ನು ಹೇರಿಕೊಂಡು, ಅಹಮನ್ನು ಪೋಷಿಸಿಕೊಳ್ಳುವ ಮೂಲಕ ಕುಟುಂಬ, ಜಾತಿ–ಧರ್ಮದ ಹಿರಿಮೆಯನ್ನು ಎತ್ತಿ ಹಿಡಿಯಬೇಕು.
ಗಂಡುಮಕ್ಕಳಿಗೆ ನಾವು ಕೊಡುವ ಈ ಪರಿಯ ಒತ್ತಡದ ಹಿಂಸೆಯಿಂದ ಗಂಡುಗಳೊಳಗಣ ಮಾನವ ಸಹಜ‘ತನ’ಗಳು ನಷ್ಟವಾಗಿ, ಹುಸಿ ಗಂಡಸು‘ತನ’ ಬೆಳೆಯುತ್ತದೆ. ಹಾಗಾಗಲು ಸಾಧ್ಯವಾಗದವರು ಕೀಳರಿಮೆಗೆ ಒಳಗಾಗುತ್ತಾರೆ. ಕೀರಲು ದನಿ, ಹೆಂಡತಿಗಿಂತ ಕಡಿಮೆ ಸಂಬಳ ಪಡೆವವರು, ಗಿಡ್ಡ ಇರುವವರು, ಪೀಚಲು ಮೈಕಟ್ಟು, ಅಂಜುಬುರುಕತನದವರು ತಮ್ಮ ಸಹಜ ಸ್ವಭಾವಕ್ಕೆ ತಕ್ಕಂತೆ ಬದುಕದೆ, ಹೆಣ್ಣುಗಳ ಮೇಲೆ ಬರ್ಬರ ದೌರ್ಜನ್ಯ ಎಸಗಿ ತಮ್ಮ ಗಂಡಸುತನವನ್ನು ಎತ್ತಿಹಿಡಿಯ ಹೊರಡುತ್ತಾರೆ. ಬಹುಶಃ ಕೆಲವೇ ಅಪವಾದಗಳನ್ನು ಹೊರತುಪಡಿಸಿ, ಬೆಳೆಯುವ ಹುಡುಗರ ಕಣ್ಣೆದುರಿನ ಗಂಡಸುತನದ ಮಾದರಿಗಳು ಹೀಗೇ ಇರುತ್ತವೆ. ಭಾರತದ ಶೇ 65ರಷ್ಟು ಮನೆಗಳಲ್ಲಿ ಕೌಟುಂಬಿಕ ದೌರ್ಜನ್ಯ ಸಂಭವಿಸುತ್ತದೆ. ಸ್ವತಃ ಬಲಿಪಶುವಾಗಿರುವ ಮಗುವಿನ ತಾಯಿ ತನ್ನ ಮಗ ಅಂತಹುದೇ ಗಂಡಾಗುವುದನ್ನು ತಪ್ಪಿಸಲಾಗದೆ, ಹಾಗೆಯೇ ಬೆಳೆಸುವ ವೈರುಧ್ಯ ಮುಂದುವರಿಯುತ್ತದೆ. ಗಂಡಾಳಿಕೆಯ ಸಮಾಜ ತಾಯಿಗೆ ನೀಡುವ ತರಬೇತಿ ಹೇಗಿದೆಯೆಂದರೆ, ಹೆಣ್ಣು ಹೆರುವುದು ಹೀನ, ಹೆಣ್ಣುಭ್ರೂಣವನ್ನು ಕಿತ್ತೆಸೆಯುವುದು ನ್ಯಾಯ, ಗಂಡು ಹೆತ್ತು, ದರ್ಪದ ‘ಗಂಡು’ಗಳನ್ನು ಸೃಷ್ಟಿಸಿದರಷ್ಟೇ ಮೌಲ್ಯ ಎಂದವಳು ಭಾವಿಸುತ್ತಾಳೆ. ದರ್ಪ, ಹಿಂಸೆ, ಅಧಿಕಾರದ ಮೂಲಕ ಗಂಡಸುತನವನ್ನು ಸ್ಥಾಪಿಸಿದ ಗಂಡುಗಳೇ ಮಾದರಿಗಳಾಗಿ ಹುಡುಗರೆದುರು ಕಾಣುತ್ತವೆ.
ಇಂತಹ ತಪ್ಪು ಸಾಮಾಜೀಕರಣದಲ್ಲಿ ಭಾರತೀಯ ಸಮಾಜದ ‘ಮುಟ್ಟದಿರುವ’ ರೋಗವೂ ಪ್ರಮುಖ ಪಾತ್ರ ವಹಿಸುತ್ತದೆ. ಸಣ್ಣವರಿರುವಾಗ ಹುಡುಗನನ್ನು ಲೊಚಲೊಚನೆ ಮುದ್ದಿಸುವ ಪಾಲಕರು, ಬೆಳೆಯುತ್ತಾ ಹೋದಂತೆ ಮುಟ್ಟುವುದೇ ಇಲ್ಲ. ಹದಿಹರೆಯ ದಾಟಿದ ಮಕ್ಕಳನ್ನು ಅಪ್ಪಿ, ಮುತ್ತಿಟ್ಟು ಅಭಿನಂದಿಸಿ ಮೆಚ್ಚುಗೆ ಸೂಸುವುದಿಲ್ಲ. ‘ಸುಮ್ನಿರು, ನಿಂಗೇನ್ ಗೊತ್ತಾಗುತ್ತೆ’ ಎಂಬ ಹಿರಿಯರ ದಮನಕಾರಿ ಧೋರಣೆಯಲ್ಲಿ ಮಕ್ಕಳ ಮಾತು, ಅಭಿಪ್ರಾಯಗಳಿಗೆ ಬೆಲೆಯೇ ಇಲ್ಲ. ಅದಕ್ಕೇ ಇರಬೇಕು, ತುಂಬಿದ ಕುಟುಂಬದಲ್ಲಿದ್ದರೂ ಯುವಕವಿಗಳ ಪ್ರೇಮಗೀತೆಗಳು, ‘ಒಂಟಿ ಬಾಳಲ್ಲಿ ನೀ ಬಂದೆ, ಕತ್ತಲು ತುಂಬಿದ ಬದುಕಿಗೆ ಬೆಳಕಾದೆ’ ಎಂದು ಹಾಡುತ್ತವೆ!
ಮನೆಯಲ್ಲಿ ಮುಟ್ಟಿ, ಮುಟ್ಟಿಸಿಕೊಳ್ಳುವ ಆಪ್ತ ಸಂಬಂಧಗಳು ಏರ್ಪಡದೆ, ಹಸಿದ ಅವರ ದೇಹವು ಮುಟ್ಟಲು, ಮುಟ್ಟಿಸಿಕೊಳ್ಳಲು ಬಾಯ್ತೆರೆದು ಕಾದಿರುತ್ತದೆ. ಅಂತಹ ದಾಹದಲ್ಲಿ ನ್ಯಾಯ, ನೀತಿ, ವಿವೇಚನೆ ಕಳೆದುಹೋಗದಂತೆ ವಿವೇಕಯುತ ವ್ಯಕ್ತಿತ್ವ ರೂಪಿಸಿಕೊಳ್ಳಲು ಹಿರಿಯರು ತಾವೇ ಮಾದರಿಯಾಗಿ, ಬೆಂಬಲವಾಗಿ ನಿಲ್ಲಬೇಕು. ಆದರೆ ಭಾರತೀಯ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಅಧಿಕಾರದ್ದಲ್ಲದ ಸಸ್ನೇಹ ಸಂಬಂಧವು ಪಾಲಕರು-ಮಕ್ಕಳ ನಡುವೆ ಇರುವುದಿಲ್ಲ.
ಇಂತಹ ಅಸಮ, ವಿಷಮ ವಾತಾವರಣದಲ್ಲಿ ಗಂಡುಗಳನ್ನು ಅಧಿಕಾರದ ತುಂಡುಗಳು ಎನ್ನುವಂತೆ ಶ್ರೇಣೀಕರಣಗೊಳಿಸಿ ಬೆಳೆಸಿ, ಅಧಿಕಾರ ಸ್ಥಾಪನೆ ಎಂದರೆ ಅಧಿಕಾರಹೀನ, ದುರ್ಬಲರ (ಹೆಣ್ಣುಗಳ) ಮೇಲಿನ ದಬ್ಬಾಳಿಕೆಯೆಂದೇ ಕಲಿಸಿದರೆ, ಬಹುಸಂಖ್ಯೆಯ ಗಂಡುಮಕ್ಕಳು ಇತ್ತೀಚೆಗೆ ರಾಜ್ಯದ ಜನರನ್ನು ನಡುಗಿಸಿರುವ ಸರಣಿ ಪ್ರಕರಣಗಳಿಗೆ ಕಾರಣಕರ್ತರಾಗಿರುವವರಂತೆ ದುಷ್ಟ ವ್ಯಕ್ತಿತ್ವದವರಾಗಿಯೇ ತಯಾರಾಗುತ್ತಾರೆ.
ದರ್ಪ, ಕೇಡಿಗತನ ಹುಟ್ಟಿನಿಂದ ಯಾರಿಗೂ ಬರುವುದಿಲ್ಲ. ತಾಯ್ತನದ ಹಾರ್ಮೋನುಗಳು ಹೆಣ್ಣು, ಗಂಡು ಇಬ್ಬರಲ್ಲೂ ಸ್ರವಿಸಲ್ಪಡುತ್ತವೆ. ಎಷ್ಟೋ ಪುರುಷರು ತಮ್ಮ ಆದಿಮ ಮಾನವ ಗುಣಗಳಾದ ಪ್ರೀತಿ, ಕರುಣೆ, ತಾಯ್ತನ, ಆರೈಕೆ, ಸಹಾಯ, ಸಾಂತ್ವನದ ಗುಣಗಳನ್ನು ಉಳಿಸಿಕೊಂಡು ಲೋಕಕ್ಕೆ ಸಮತೆಯ, ಮಮತೆಯ ಪಾಠ ಹೇಳಿಕೊಟ್ಟಿದ್ದಾರೆ. ಅದಕ್ಕಾಗಿ ಗಂಡನ್ನು ಮನುಷ್ಯನಾಗಲು ಸಮಾಜ ಬಿಡಬೇಕು. ಹುಡುಗರ ಹೆಣ್ಣುಗುಣವನ್ನು ಹೊಸಕಿ, ಕಣ್ಣೀರೂ ಬಾರದ ಅಧಿಕಾರಸ್ಥ ಗಂಡುಗಳನ್ನಾಗಿಸದೆ, ಅವರನ್ನು ಪ್ರೀತಿ, ಕರುಣೆ, ಮಮತೆಯ ಮನುಷ್ಯರನ್ನಾಗಿಸಬೇಕು. ಸಮತೆಯ ಕನಸಿನ ಹೆಣ್ಣು, ಗಂಡು ವಿಶ್ವಮಾನವತ್ವದೆಡೆಗೆ ಜಿಗಿಯಬೇಕು.
ಇದು ನಮ್ಮ ನಿಮ್ಮೆಲ್ಲರ ಹೊಣೆ. ಸಮತೆಯೆಂಬುದು ಸುಲಭಕ್ಕೆ ಎಟಕುವ ಫಲವಲ್ಲ ಅಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.