ಫಲ್ಗುಣಿ ನದಿ ತೀರದ ಸುಂದರ ಪರಿಸರದಲ್ಲಿರುವ ವೇಣೂರಿನ ವಿರಾಗಿಗೆ ಈಗ ಮಹಾಮಜ್ಜನದ ಸಡಗರ. 35 ಅಡಿ ಎತ್ತರ, ಏಕಶಿಲೆಯಲ್ಲಿ ರೂಪುಗೊಂಡಿರುವ ವೇಣೂರಿನ ನಗುಮೊಗದ ಬಾಹುಬಲಿ ಮೂರ್ತಿ ಕಲಾ ಶ್ರೀಮಂತಿಕೆಗೆ ಹೆಸರುವಾಸಿ.
ಸುಂದರ ಆವರಣ, ಧ್ವಜಸ್ತಂಭ, ದೊಡ್ಡ ಮುಖಮಂಟಪ. ಉಭಯ ಪಾರ್ಶ್ವಗಳಲ್ಲಿ ಆನೆಗಳ ವಿಗ್ರಹ. ಪದ್ಮಪೀಠದ ಮೇಲೆ ನೆಲೆ ನಿಂತಿರುವ ಗೊಮ್ಮಟೇಶ್ವರ. ಸಪ್ತ ಜೈನ ಬಸದಿ. ಸುತ್ತಲೂ ಹಸಿರುಹೊನಲು. ಸನಿಹದಲ್ಲೇ ಶ್ರೀಮಹಾಲಿಂಗೇಶ್ವರ ದೇವಸ್ಥಾನ... ಇವೆಲ್ಲವೂ ಇಲ್ಲಿಯ ಸೌಂದರ್ಯಕ್ಕೆ ಮೆರುಗು ತಂದಿವೆ.
ಈ ಕೈವಲ್ಯಮೂರ್ತಿಗೆ 1928, 1956ರಲ್ಲಿ ತಿಮ್ಮಣ್ಣರಸರಾದ ಹರಿಶ್ಚಂದ್ರ ಅಜಿಲ ಅವರ ನೇತೃತ್ವದಲ್ಲಿ ಎರಡು ಮಹಾಮಸ್ತಕಾಭಿಷೇಕ ನಡೆದಿದ್ದವು. ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪದ್ಮಪ್ರಸಾದ್ ಅಜಿಲ ಅವರು ಈ ಅರಸು ಮನೆತನದ ಚುಕ್ಕಾಣಿ ಹಿಡಿದ ನಂತರ ಹಾಗೂ ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ 2000, 2012ರಲ್ಲಿ ಮಹಾಮಸ್ತಕಾಭಿಷೇಕ ನಡೆದವು. ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ಮಾಡಲಾಗುತ್ತಿದ್ದು, ಈ ಶತಮಾನದಲ್ಲಿ ಮೂರನೇ ಮಹಾಮಸ್ತಕಾಭಿಷೇಕಕ್ಕೆ ಜೈನ ಧರ್ಮದ ಶ್ರಾವಕ–ಶ್ರಾವಕಿಯರು ಅಣಿಯಾಗುತ್ತಿದ್ದಾರೆ.
ತುಳುನಾಡು ಆಳಿದ ಜೈನ ರಾಜರ ವಂಶಗಳಲ್ಲಿ ‘ತಿಮ್ಮಣ್ಣರಸ ಅಜಿಲ’ರ ವಂಶವು ವೇಣೂರಿನಲ್ಲಿ ಆಡಳಿತ ನಡೆಸಿತ್ತು. ಈ ಮನೆತನದವರಿಗೆ ‘ಅಜಿಲ’ ಎಂದು ಕರೆಯಲಾಗುತ್ತಿದೆ. ತಿಮ್ಮಣ್ಣ ಅಜಿಲ (IV) ಕ್ರಿ.ಶ. 1550ರಿಂದ 1610ರವರೆಗೆ ಇಲ್ಲಿ ರಾಜ್ಯಭಾರ ಮಾಡಿದರು. ಶ್ರವಣಬೆಳಗೊಳದಲ್ಲಿ ಚಾವುಂಡರಾಯ ಗೊಮ್ಮಟೇಶ್ವರ ಮೂರ್ತಿ ಪ್ರತಿಷ್ಠಾಪಿಸಿದಂತೆ, ತಮ್ಮ ರಾಜ್ಯದಲ್ಲಿಯೂ ಒಂದು ಬಾಹುಬಲಿಯ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಅವರು ಬಯಸುತ್ತಾರೆ. ವೇಣೂರು ಸಮೀಪದ ‘ಕಲ್ಯಾಣಿ’ ಸ್ಥಳದಲ್ಲಿರುವ ಕರಿಕಲ್ಲಿನಿಂದ ಬಾಹುಬಲಿ ಮೂರ್ತಿಯನ್ನು ಕೆತ್ತಿಸುತ್ತಾರೆ. ನಂತರ ಅದನ್ನು ಪ್ರತಿಷ್ಠಾಪಿಸುತ್ತಾರೆ.
ಪ್ರಾಕಾರದ ಹೊರಗಡೆ ಅಂಗಣದಲ್ಲಿ ಬ್ರಹ್ಮದೇವ ಸ್ತಂಭವಿದ್ದು, ಇದರ ತುದಿಯಲ್ಲಿ ದಕ್ಷಿಣಾಭಿಮುಖವಾಗಿ ಕುಳಿತಿರುವ ಬ್ರಹ್ಮದೇವನ ಮೂರ್ತಿ ಇದೆ. ಅದರ ಎಡ ಮತ್ತು ಬಲ ದಿಕ್ಕಿನಲ್ಲಿರುವ ಶಿಲೆಯಲ್ಲಿ, ‘ಚಾವುಂಡ ವಂಶದ ತಿಮ್ಮರಾಜನು ಶ್ರವಣಬೆಳಗೊಳದ ತನ್ನ ಗುರುಗಳಾದ ಶ್ರೀ ಚಾರುಕೀರ್ತಿ ಸ್ವಾಮಿ ಅವರ ಅಪ್ಪಣೆ ಪ್ರಕಾರ ಶ್ರೀ ಬಾಹುಬಲಿ ಸ್ವಾಮಿಯ ಪ್ರತಿಮೆಯನ್ನು ಕ್ರಿ.ಶ 01.03.1604ರ ಗುರುವಾರ ದಿನ ಪ್ರತಷ್ಠಾಪಿಸಿದ’ ಎಂದು ಅದರಲ್ಲಿ ಬರೆಯಲಾಗಿದೆ. ಈ ಮೂರ್ತಿ ಪ್ರತಿಷ್ಠಾಪನೆಯಾಗಿ 420 ವರ್ಷವಾಗುತ್ತಿದೆ.
ಮರಳಿನಲ್ಲಿ ಹೂತಿದ್ದರು: ವೀರ ಪಾಂಡ್ಯನ ರಾಜಧಾನಿ ಕಾರ್ಕಳದಲ್ಲಿ ಪ್ರತಿಷ್ಠಾಪಿಸಿದ್ದ ಗೊಮ್ಮಟೇಶನ ಮೂರ್ತಿ ಕೆತ್ತಿದ ಶಿಲ್ಪಿಯನ್ನು ಕರೆಯಿಸಿ ವೇಣೂರು ಸಮೀಪದ ‘ಕಲ್ಯಾಣಿ’ ಎಂಬ ಸ್ಥಳದಲ್ಲಿರುವ ಕರಿಕಲ್ಲಿನಿಂದ ಬಾಹುಬಲಿಯ ಮೂರ್ತಿಯನ್ನು ವೇಣೂರಿನ ಅರಸ ತಿಮ್ಮಣ್ಣ ಅಜಿಲ (IV) ಕೆತ್ತಿಸುತ್ತಾರೆ.
ಕಾರ್ಕಳ ಪಾಂಡ್ಯ ನಗರವನ್ನು ಆಳುತ್ತಿದ್ದ ದಾವಣಿ ಇಮ್ಮಡಿ ಭೈರವರಾಯನಿಗೆ ತಿಮ್ಮಣ್ಣರಸ ಬಾಹುಬಲಿ ಮೂರ್ತಿ ಪ್ರತಿಷ್ಠಾಪಿಸುತ್ತಿರುವ ವಿಷಯ ಗೊತ್ತಾಗುತ್ತದೆ. ಇನ್ನೊಂದು ಮೂರ್ತಿ ಪ್ರತಿಷ್ಠಾಪನೆಯಾದರೆ ತನ್ನ ಹಿರಿಯನಾದ ವೀರ ಪಾಂಡ್ಯನ ಕೀರ್ತಿಗೆ ಕುಂದುಬರುವುದೆಂದು ಭಾವಿಸಿದ ಆತ, ಈ ಬಾಹುಬಲಿಯ ಮೂರ್ತಿಯನ್ನು ವೇಣೂರಿನಲ್ಲಿ ಪ್ರತಿಷ್ಠಾಪಿಸದೆ ಅದನ್ನು ಕಾರ್ಕಳಕ್ಕೆ ಕಳಿಸಬೇಕು ಎಂಬ ಸಂದೇಶ ರವಾನಿಸುತ್ತಾನೆ. ಇದಕ್ಕೆ ಅಂಜದ ತಿಮ್ಮಣ್ಣರಸ, ತಾವು ಕೆತ್ತಿಸಿರುವ ಮೂರ್ತಿಯನ್ನು ವೇಣೂರಿನಲ್ಲಿ ಪ್ರತಿಷ್ಠಾಪಿಸಿಯೇ ಸಿದ್ಧ ಎನ್ನುತ್ತಾರೆ. ಕುಪಿತನಾದ ಭೈರವರಾಯ, ಅಜಿಲರ ಗಡಿ ಪ್ರದೇಶವಾದ ನಾರಾವಿ ಮೇಲೆ ದಾಳಿ ಮಾಡುತ್ತಾನೆ. ತಿಮ್ಮಣ್ಣರಸ ಸಹ ಯುದ್ಧಕ್ಕೆ ಸಿದ್ಧರಾಗುತ್ತಾರೆ. ಭೈರವರಾಯನು ವೇಣೂರಿಗೆ ಬಂದರೂ ಆತನಿಗೆ ಈ ಮೂರ್ತಿ ಸಿಗಬಾರದು ಎಂದು ಅದನ್ನು ಅಲ್ಲಿಯ ನದಿಯ ಮರಳಿನಲ್ಲಿ (ಹೊಯ್ಗೆ) ಅಡಗಿಸಿ ಇಡುತ್ತಾರೆ. ತನ್ನ ಸೇನಾಧಿಪತಿಯನ್ನು ಕಳುಹಿಸಿ ಯುದ್ಧ ನಡೆಸಿ ಭೈರವರಾಯನನ್ನು ಸೋಲಿಸುತ್ತಾರೆ. ಮರಳಿನಲ್ಲಿ ಹೂತಿಟ್ಟ ಬಾಹುಬಲಿ ಮೂರ್ತಿ ತೆಗೆಸಿ ಫಲ್ಗುಣಿ ನದಿಯ ದಂಡೆಯಲ್ಲಿ ಪ್ರತಿಷ್ಠಾಪಿಸುತ್ತಾರೆ ಎಂಬುದು ಈ ಭಾಗದಲ್ಲಿ ಪ್ರಚಲಿತದಲ್ಲಿರುವ ಮಾತು.
ಆದರೆ, ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳುವುದು ಹೀಗೆ: ‘ಮೂರ್ತಿಯನ್ನು ಅಡಗಿಸಿಟ್ಟಿದ್ದರು ಎಂಬುದು ನಿಜ. ಆದರೆ, ಮೂರ್ತಿ ಪ್ರತಿಷ್ಠಾಪನೆಯಾದ ನಂತರ ಇದು ನಡೆದಿದ್ದು ಎಂದು ಇತಿಹಾಸಕಾರರೊಬ್ಬರು ದಾಖಲಿಸಿದ್ದಾರೆ. ಅವರು ನೀಡಿರುವ ಕಾರಣವೇ ಬೇರೆ. ಈ ಕಾರಣ ಏನೇ ಇರಲಿ. ತ್ಯಾಗ, ಮೈತ್ರಿ ಮತ್ತು ಶಾಂತಿಯ ಸಂದೇಶಕ್ಕೆ ಸಾಕ್ಷಿಯಾಗಿದೆ ಈ ಮೂರ್ತಿ’.
50 ಅಡಿ ಅಟ್ಟಳಿಗೆ: ಮಹಾಮಸ್ತಕಾಭಿಷೇಕಕ್ಕಾಗಿ ಸುಮಾರು ₹80 ಲಕ್ಷ ವೆಚ್ಚದಲ್ಲಿ ಮೂರು ಕಡೆ 50 ಅಡಿ ಎತ್ತರದ ಕಬ್ಬಿಣದ ಅಟ್ಟಳಿಗೆ ಗೋಪುರ ನಿರ್ಮಿಸಲಾಗಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ರಾಜ್ಯ ಸರ್ಕಾರ ಕೈಜೋಡಿಸಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ₹1 ಕೋಟಿ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಬಾಹುಬಲಿ ಬೆಟ್ಟಿದಲ್ಲಿರುವ ಬಸದಿಗಳ ನವೀಕರಣ, ಮೂರ್ತಿ ಪರಿಸರದಲ್ಲಿ ಗ್ರಾನೈಟ್ ಹಾಸು ಸೇರಿದಂತೆ ಅಗತ್ಯ ಕಾಮಗಾರಿ ಕೈಗೊಳ್ಳಲಾಗಿದೆ.
ಅಮೋಘಕೀರ್ತಿ ಮುನಿಮಹಾಜರು ಮತ್ತು ಅಮರಕೀರ್ತಿ ಮುನಿ ಮಹಾರಾಜರ ಉಪಸ್ಥಿತಿಯಲ್ಲಿ, ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಮಸ್ತಕಾಭಿಷೇಕ ನಡೆಯಲಿದೆ. ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಅಳದಂಗಡಿಯ ಪದ್ಮಪ್ರಸಾದ ಅಜಿಲ ಅವರ ನೇತೃತ್ವದಲ್ಲಿ ವಿವಿಧ ಸಮಿತಿ ರಚಿಸಲಾಗಿದೆ. ಹೊಂಬುಜ, ಕಾರ್ಕಳ, ಶ್ರವಣಬೆಳಗೊಳ, ನರಸಿಂಹರಾಜಪುರ, ಜೈನಮಠದ ಭಟ್ಟಾರಕರು ಮಸ್ತಕಾಭಿಷೇಕದ ಅವಧಿಯಲ್ಲಿ ಪ್ರವಚನ ನೀಡಲಿದ್ದಾರೆ.
ಒಂಬತ್ತು ದಿನ ನಡೆಯುವ ಮಹಾಮಜ್ಜನ ಬೇರೆ ಬೇರೆ ಭಕ್ತರ ವತಿಯಿಂದ ನೆರವೇರಿಸಲಿದ್ದು, ಕೊನೆಯ ದಿನದ ಮಜ್ಜನವನ್ನು ಮಹಾಮಜ್ಜನ ಸಮಿತಿ ವತಿಯಿಂದ ನಡೆಸಲಾಗುತ್ತದೆ. ಮೊದಲ ದಿನ 108, ಎರಡನೇ ದಿನ 216, ಬಳಿಕ 504 ಕಲಶಗಳೊಂದಿಗೆ ನಡೆಯುವ ಮಹಾಮಜ್ಜನ ಕೊನೆಯ ದಿನ 1008 ಕಲಶಗಳೊಂದಿಗೆ ಪೂರ್ಣಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಪಂಚಕಲ್ಯಾಣ ಮಹೋತ್ಸವವೂ ನಡೆಯಲಿದೆ. ಪ್ರತಿ ದಿನ ಸುಮಾರು 50 ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ, ವಸ್ತುಪ್ರದರ್ಶನ, ಪುಸ್ತಕ ಮಳಿಗೆ, ಯಕ್ಷಗಾನ ಕಾರ್ಯಕ್ರಮಗಳ ಮೂಲಕ ಜ್ಞಾನ ದಾಸೋಹದೊಂದಿಗೆ ಧರ್ಮ ಪ್ರಭಾವನಾ ಕಾರ್ಯವೂ ನಡೆಯಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಮಸ್ತಕಾಭಿಷೇಕ ಸಮಿತಿ ಕಾರ್ಯಾಲಯವನ್ನು ತೆರೆಯಲಾಗಿದೆ. ವಿಳಾಸ: ಮಸ್ತಕಾಭಿಷೇಕ ಸಮಿತಿ, ಬಾಹುಬಲಿ ಬೆಟ್ಟದ ಬಳಿ, ವೇಣೂರು-574242. ಮೊ: 9606356288., www.venur.in, info@venur.in
ಜಗತ್ತಿನಲ್ಲಿ ನಿಶಸ್ತ್ರೀಕರಣದ ಮೂಲಕ ಮೋಹ ಮತ್ತು ಲೋಭವನ್ನು ತೊರೆಯಬೇಕು. ತ್ಯಾಗದಿಂದ ಪ್ರೀತಿ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂಬ ಸಂದೇಶದೊಂದಿಗೆ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಇದು ಕೇವಲ ಧಾರ್ಮಿಕ ವಿಧಿ ಅಲ್ಲ; ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧ ವೃದ್ಧಿಯ ದಿಬ್ಬಣ. ಜಗತ್ತಿಗೆ ಈಗ ಅಗತ್ಯವಿರುವ ದಯೆ– ದಾನ–ಧರ್ಮಗಳಂತಹ ವಿಚಾರ ಪ್ರಚೋದಕ ಉಪನ್ಯಾಸಗಳ ಸಮ್ಮೇಳನ.
–ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡುಬಿದಿರೆ ಜೈನಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.