ಹಿಂದೂ ಮಹಾಸಾಗರದಲ್ಲಿ ಜನರ ಬಂಡಾಯದ ಬೆಂಕಿ ಹತ್ತಿಕೊಂಡಿದೆ. ರಾಜಪಕ್ಸ ಕುಟುಂಬದ ಆಡುಂಬೊಲವಾಗಿದ್ದ ಶ್ರೀಲಂಕಾದ ಅಧ್ಯಕ್ಷ ಭವನ ಹೊಕ್ಕ ಪ್ರತಿಭಟನಕಾರರು ಭವನದ ಕೊಳದಲ್ಲಿ ಈಜಾಡಿದ್ದಾರೆ. ಅಧ್ಯಕ್ಷ ಪೀಠದಲ್ಲಿ ಕೂತು ಫೋಟೊ ತೆಗೆಸಿಕೊಂಡಿದ್ದಾರೆ. ದೇಶದಿಂದಲೇ ಪಲಾಯನ ಮಾಡಿ ಮಾಲ್ಡೀವ್ಸ್, ಸಿಂಗಪುರ ಅಲೆದ ಅಧ್ಯಕ್ಷ ಗೊಟಬಯ ರಾಜಪಕ್ಸ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕಾಯಿತು. ಈಚಿನ ತಿಂಗಳುಗಳ ಶ್ರೀಲಂಕಾದ ಸ್ಫೋಟದ ಈ ಚಿತ್ರಗಳು ಎಲ್ಲರ ಕಣ್ಣೆದುರಿಗಿವೆ.
ದೂರದೃಷ್ಟಿ ಇಲ್ಲದ ನೀತಿಗಳ ಪರಿಣಾಮವಾಗಿ ಅರ್ಥವ್ಯವಸ್ಥೆ ಕುಂಟತೊಡಗಿತ್ತು. ನಂತರ ಕೊರೊನಾ ತಂದ ಆರ್ಥಿಕ ಸ್ಥಗಿತವು ಜನರು ತತ್ತರಿಸುವಂತೆ ಮಾಡಿತ್ತು. ಕಳೆದ ಜನವರಿ- ಜೂನ್ ನಡುವೆಯಂತೂ ಅಗತ್ಯ ವಸ್ತುಗಳ ಬೆಲೆಗಳು ಶೇಕಡ ಐವತ್ತಕ್ಕಿಂತಲೂ ಮೇಲೇರಿದವು. ವಿದ್ಯುತ್ ವ್ಯತ್ಯಯದಿಂದ ಉದ್ಯಮಗಳು ನರಳುತ್ತಿದ್ದವು. ಚೀನಾದ ಸರ್ಕಾರಿ ಸ್ವಾಮ್ಯದ ಬ್ಯಾಂಕಿನ ಸಾಲ ತೀರಿಸಲಾಗದೆ ಹಂಬನ್‌ತೋಟ ಬಂದರನ್ನೇ 2018ರಲ್ಲಿ ಚೀನಾಕ್ಕೆ 99 ವರ್ಷಗಳ ಅವಧಿಗೆ ಗುತ್ತಿಗೆಗೆ ಕೊಟ್ಟಿದ್ದ ಲಂಕಾ ಸರ್ಕಾರವು ವಿದೇಶಿ ಸಾಲಗಳ ಬಡ್ಡಿಯನ್ನೂ ಕಟ್ಟಲಾಗದ ಸ್ಥಿತಿ ತಲುಪಿತ್ತು. ಆಳುವವರ ತಾಳಕ್ಕೆ ಕುಣಿಯುವ ಗುಲಾಮ ಆರ್ಥಿಕ ತಜ್ಞರೂ ಈ ಬಿಕ್ಕಟ್ಟಿಗೆ ಅಳಿಲುಸೇವೆ ಸಲ್ಲಿಸಿದ್ದರು!
ದೇಶದ ಕೇಂದ್ರೀಯ ಬ್ಯಾಂಕಿನ ವಹಿವಾಟಿನಲ್ಲಿ ಮತಿಗೆಟ್ಟ ಸರ್ಕಾರಗಳು ಕೈಯಾಡಿಸಿದರೆ ಏನಾಗುತ್ತದೆ ಎಂಬುದಕ್ಕೆ ಶ್ರೀಲಂಕಾ ಉದಾಹರಣೆಯಂತಿದೆ. ಕೊರೊನಾ ಕಾಲದಲ್ಲಿ ಪ್ರವಾಸೋದ್ಯಮಕ್ಕೆ ಬಿದ್ದ ಹೊಡೆತವೂ ಸೇರಿ ಶ್ರೀಲಂಕಾದ ಆರ್ಥಿಕತೆ ಪೂರಾ ಕುಸಿದೇಹೋಯಿತು. ಒಂದು ಕಾಲಕ್ಕೆ ಭಾರತಕ್ಕಿಂತ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಮಾರುತ್ತಿದ್ದ ಶ್ರೀಲಂಕಾದಲ್ಲಿ ಬಂಕುಗಳ ಎದುರು ವಾಹನಗಳು ದಿನಗಟ್ಟಲೆ ಕ್ಯೂ ನಿಂತಿವೆ. ಟ್ಯಾಕ್ಸಿಯಿಂದಲೇ ಬದುಕು ನಡೆಸುವ ಡ್ರೈವರ್‌ನೊಬ್ಬ ಮೂರು ದಿನ ವ್ಯಾನಿನಲ್ಲೇ ಕೂತಿದ್ದಾನೆ. ಕಚೇರಿಗಳಲ್ಲಿ ವಾರಕ್ಕೆ ನಾಲ್ಕು ದಿನದ ಕೆಲಸ ಘೋಷಿಸಲಾಯಿತು. ಬಡಜನರನ್ನಂತೂ ಕೇಳುವವರೇ ಇರಲಿಲ್ಲ. ಇದೆಲ್ಲದರಿಂದ ರೋಸಿದ ಜನರ ಪ್ರತಿಭಟನೆ ದೇಶದೆಲ್ಲೆಡೆ ಹಬ್ಬತೊಡಗಿತು.
ಮಾನವ ಸಂಪನ್ಮೂಲವನ್ನು ಸಮೃದ್ಧವಾಗಿ ತೊಡಗಿಸಿದ್ದ ಶ್ರೀಲಂಕಾ ಈಚಿನ ದಶಕದಲ್ಲಿ ಸೇತುವೆ, ರಸ್ತೆಗಳನ್ನು ಕಟ್ಟಲು ಕೂಡ ಚೀನಾವನ್ನು ಅವಲಂಬಿಸಲಾರಂಭಿಸಿತ್ತು. ದಯನೀಯ ಸ್ಥಿತಿಯಲ್ಲಿದ್ದ ದೇಶದಲ್ಲಿ ಹುಸಿ ಗರ್ವದ ಮೂಲಕ ವಾಸ್ತವಸ್ಥಿತಿಯನ್ನು ಮರೆಮಾಚುವ ಕೆಲಸ ಶುರುವಾಯಿತು. ಮಹಿಂದ ರಾಜಪಕ್ಸ ಮೊದಲು ಅಧ್ಯಕ್ಷರಾದಾಗ, ಹಿಂದೊಮ್ಮೆ ಶ್ರೀಲಂಕಾದ ಮಿಲಿಟರಿ ಅಧಿಕಾರಿಯಾಗಿದ್ದ ಸಹೋದರ ಗೊಟಬಯ ರಾಜಪಕ್ಸ ಅವರನ್ನು ರಕ್ಷಣಾ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು. ನಿರ್ದಯಿಯಾದ ಗೊಟಬಯ 2009ರಲ್ಲಿ ತಮಿಳು ವಿಮೋಚನಾ ಪಡೆಯ ಹೋರಾಟವನ್ನು ಕ್ರೂರವಾಗಿ ಹತ್ತಿಕ್ಕಿದ್ದರಿಂದ ಮಹಿಂದ ರಾಜಪಕ್ಸ ‘ತಮಿಳರ ಭಯೋತ್ಪಾದನೆಯಿಂದ ದೇಶವನ್ನು ಪಾರು ಮಾಡಿದ ಹೀರೊ’ ಆದರು; ‘ಚಕ್ರವರ್ತಿ ಮಹೇಂದ್ರ’ ಅನ್ನಿಸಿಕೊಂಡರು.
ನಡುನಡುವೆ ಕೈತಪ್ಪಿದ ಅಧಿಕಾರ ಮತ್ತೆ ರಾಜಪಕ್ಸ ಕುಟುಂಬಕ್ಕೇ ಬಂತು. 2019ರಲ್ಲಿ ಕ್ರೈಸ್ತರ ‘ಈಸ್ಟರ್ ಡೇ’ ದಿನ ಇಸ್ಲಾಮಿಕ್ ಗುಂಪೊಂದು ಚರ್ಚಿನ ಮೇಲೆ ಬಾಂಬ್ ದಾಳಿ ನಡೆಸಿತು. ಮುಂದಿನ ಚುನಾವಣೆಯಲ್ಲಿ ಈ ಅಂಶವನ್ನೇ ಬಂಡವಾಳವಾಗಿಸಿಕೊಂಡು ಗೆದ್ದ ಮಹಿಂದ ಪ್ರಧಾನಿಯಾದರು; ಸಹೋದರ ಗೊಟಬಯ ಶ್ರೀಲಂಕಾದ ಅಧ್ಯಕ್ಷರಾದರು. ‘ಬರೀ ಸಿಂಹಳೀಯರ ವೋಟಿನ ಬಲದಿಂದಲೇ ರಾಷ್ಟ್ರಾಧ್ಯಕ್ಷನಾದೆ’ ಎಂದು ಘೋಷಿಸಿಬಿಟ್ಟರು. ಶ್ರೀಲಂಕಾದಲ್ಲಿ ಒಳಗೊಳಗೇ ಇದ್ದ ಜನಾಂಗೀಯ ತಿಕ್ಕಾಟವನ್ನು ಹೆಚ್ಚಿಸುವ ಮಾತು, ಕ್ರಿಯೆ ಶುರು ಮಾಡಿದರು. ಇದರಿಂದಾಗಿ ಲಂಕಾದ ತಮಿಳರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿಸಿ, ತಮಿಳರ ವಿರುದ್ಧ ಸಿಂಹಳೀಯರಲ್ಲಿ ಪೂರ್ವಗ್ರಹ ಹೆಚ್ಚಿಸುವ ಪ್ರಯತ್ನಗಳು ಶುರುವಾದವು. ಚರ್ಚ್ ದಾಳಿಯ ನಂತರ ಮುಸ್ಲಿಮರನ್ನೂ ಶತ್ರುಗಳನ್ನಾಗಿಸಿ, ಒಡೆದು ಆಳುವ ಕೆಲಸ ಮತ್ತಷ್ಟು ಮುಂದುವರಿಯಿತು.
ಯಾರು, ಯಾರ ಹೆಸರಿನಲ್ಲಿ, ಯಾವ ಕಾರಣಗಳಿಗೆ, ಯಾವಾಗ ಭಯೋತ್ಪಾದನೆ ಸೃಷ್ಟಿಸುತ್ತಾರೆ... ಇವೆಲ್ಲ ಆಳುವ ವರ್ಗಗಳ ನಿಗೂಢ ನಡೆಗಳು! ಒಂದೆಡೆ, ಅಧಿಕಾರ ಉಳಿಸಿಕೊಳ್ಳಲು ತಮಿಳರು, ಮುಸ್ಲಿಮರ ವಿರುದ್ಧ ಅಪಪ್ರಚಾರ; ಮತ್ತೊಂದೆಡೆ ಅಧಿಕಾರ ಕೇಂದ್ರೀಕರಿಸಿಕೊಳ್ಳಲು ರಾಜಪಕ್ಸ ಕುಟುಂಬ ರಾಜಕಾರಣ! ಇದಕ್ಕೆ ತಕ್ಕಂತೆ ಎತ್ತ ಬೇಕಾದರತ್ತ ತಿರುಗಬಲ್ಲ ಭ್ರಷ್ಟರು, ದಲ್ಲಾಳಿಗಳು ಪಾರ್ಲಿಮೆಂಟ್ ಪ್ರವೇಶಿಸತೊಡಗಿದರು. ಭಾರತದಿಂದ ಅಷ್ಟಿಷ್ಟು ಕಲಿತಿದ್ದ ಪಂಚಾಯತ್ ರಾಜ್ ವಿಕೇಂದ್ರೀಕರಣದ ರಾಜಕೀಯವೂ ಮಾಯವಾಯಿತು.
ರಾಜಪಕ್ಸ ಕುಟುಂಬದ ಈಚಿನ ವರ್ಷಗಳ ರಾಜಕೀಯ ವಂಶವೃಕ್ಷ ನೋಡಿ: ಮಹಿಂದ ರಾಜಪಕ್ಸ, ಪ್ರಧಾನಿ. ತಮ್ಮ ಗೊಟಬಯ ರಾಜಪಕ್ಸ, ರಾಷ್ಟ್ರಾಧ್ಯಕ್ಷ. ಮತ್ತೊಬ್ಬ ತಮ್ಮ ಚಮಲ್, ನೀರಾವರಿ ಸಚಿವ. ಮಗದೊಬ್ಬ ತಮ್ಮ ಬೇಸಿಲ್, ಹಣಕಾಸು ಸಚಿವ. ಮಹಿಂದ ಅವರ ಮಗ ನಮಲ್, ಕ್ರೀಡಾ-ಯುವಜನ ಖಾತೆ ಸಚಿವ. ಮತ್ತೊಬ್ಬ ಮಗ ಯೋಶಿತಾ, ಪ್ರಧಾನಮಂತ್ರಿ ಕಾರ್ಯಾಲಯದ ಸಿಬ್ಬಂದಿಯ ಮುಖ್ಯಾಧಿಕಾರಿ. ಚಮಲ್ ಅವರ ಮಗ ಶಶೀಂದ್ರ, ಕೃಷಿ ಇಲಾಖೆ ರಾಜ್ಯ ಸಚಿವ. ಮಹಿಂದ ಅವರ ಭಾವ ನಿಶಾಂತ ವಿಕ್ರಮಸಿಂಘೆ ಶ್ರೀಲಂಕಾ ಏರ್‌ಲೈನ್ಸ್ ಅಧ್ಯಕ್ಷ! ಇಂಥ ಸ್ವಚ್ಛಂದ ಸ್ವಜನಪಕ್ಷಪಾತದ ಚಕ್ರವರ್ತಿ ಮಹಿಂದ, ಜನರ ಕಣ್ಣಲ್ಲಿ ಖಳನಾಯಕನಾಗಿದ್ದು ಸಹಜವಾಗಿತ್ತು.
2014ರಲ್ಲಿ ಪ್ರಧಾನಿ ಮಹಿಂದ ತಮ್ಮ ತಂದೆ ತಾಯಿಯನ್ನು ಅಮರರನ್ನಾಗಿಸಲು ಮ್ಯೂಸಿಯಂ ನಿರ್ಮಿಸಿದರು. ಇದಕ್ಕೆ ಬಳಕೆಯಾದದ್ದು ಆರು ಕೋಟಿ ರೂಪಾಯಿ ಸರ್ಕಾರಿ ಹಣ! ರಕ್ಷಣಾ ಕಾರ್ಯದರ್ಶಿಯಾಗಿದ್ದ ಗೊಟಬಯ, ನೌಕಾಪಡೆಯನ್ನೇ ಈ ಕೆಲಸಕ್ಕೆ ಬಳಸಿಕೊಂಡರು. ಇವೆಲ್ಲ ಜನರ ತಲೆಯಲ್ಲಿ ಎಂಥ ರೊಚ್ಚು ಹುಟ್ಟಿಸುತ್ತವೆಂಬುದು ಗೊತ್ತಾದದ್ದು ಪ್ರತಿಭಟನಕಾರರು ಈ ಮ್ಯೂಸಿಯಂ ಧ್ವಂಸ ಮಾಡಿದಾಗಲೇ. ಬದುಕಿರುವಾಗಲೇ ತಂತಮ್ಮ ಹೆಸರಿನಲ್ಲಿ ಬಸ್ ನಿಲ್ದಾಣ, ರಸ್ತೆ, ಕಟ್ಟಡಗಳನ್ನು ಉದ್ಘಾಟಿಸಿಕೊಳ್ಳುವ ನಿರ್ಲಜ್ಜರಿಗೆ ಜನರ ಇಂಥ ಅಸಹ್ಯದ ಅರಿವಿರಲಾರದು!
ಶ್ರೀಲಂಕಾದ ಜೀವನ್ಮರಣದ ಬಿಕ್ಕಟ್ಟಿಗೆ ವಂಶಾಡಳಿತ, ಆರ್ಥಿಕತೆಯ ಜೊತೆಗೇ ಬಹುಸಂಖ್ಯಾತರನ್ನು ರೈಲು ಹತ್ತಿಸುವ ರಾಜಕಾರಣ ತಂದೊಡ್ಡುವ ದುರಂತವೂ ಕಾರಣವಾಗಿದೆ. ಇಂಥ ಬಹುಸಂಖ್ಯಾತತ್ವದ ಅಹಂಕಾರದ ಅಪಾಯವನ್ನು ಭಾರತವೂ ಅರಿಯಬೇಕು. ವಿಭಜಕ ನಾಯಕರಿಗೆ ಈ ಅಪಾಯ ಅರ್ಥವಾಗದಿದ್ದರೂ ಒಡಕಿನ ಬಿಸಿ ತಾಗುವ ಜನರಿಗಾದರೂ ಇದು ಅರ್ಥವಾಗಬೇಕು. ರಾಜಪಕ್ಸ ನೇತೃತ್ವದ ಸರ್ಕಾರವು ತಮಿಳರು, ಮುಸ್ಲಿಮರ ಬಗೆಗಿನ ಪೂರ್ವಗ್ರಹವನ್ನೇ ಬಂಡವಾಳವಾಗಿಸಿಕೊಂಡು ಆಳುತ್ತಿದ್ದುದರ ಅಪಾಯ ಸಿಂಹಳೀಯರಿಗೆ ಕೊನೆಗೂ ಅರ್ಥವಾಗಿದೆ. ಈಗಿನ ಪ್ರತಿಭಟನೆಯನ್ನು ಅಲ್ಪಸಂಖ್ಯಾತರ ತಲೆಗೆ ಕಟ್ಟಲೆತ್ನಿಸಿದ ಸರ್ಕಾರಿ ಚೇಲಾಗಳ ಸುಳ್ಳುಗಳನ್ನು ಸಿಂಹಳೀಯರೂ ಅರಿತರು. ಪ್ರತಿಭಟನೆಗಳಲ್ಲಿ ಕಾಣುತ್ತಿದ್ದ ‘ಗೊಟಾ ಗೋ ಹೋಮ್’ ಪ್ಲೆಕಾರ್ಡುಗಳು ಯಾವುದೋ ಒಂದು ಧರ್ಮದ ಗುಂಪಿನ ಪ್ರತಿಕ್ರಿಯೆಗಳಾಗಿರಲಿಲ್ಲ.
ಪ್ರತಿಭಟನೆಯೊಂದರಲ್ಲಿ ಬೌದ್ಧ ಧರ್ಮಗುರುವೊಬ್ಬ ಹೇಳಿದ: ‘ಇಲ್ಲಿ ಕ್ಯಾಥೊಲಿಕ್ ಕ್ರಿಶ್ಚಿಯನ್ನರಿದ್ದಾರೆ, ಹಿಂದೂ ತಮಿಳರಿದ್ದಾರೆ, ಮುಸ್ಲಿಮರಿದ್ದಾರೆ, ಬೌದ್ಧರಿದ್ದಾರೆ. ಇದು ನಿಜವಾದ ಶ್ರೀಲಂಕಾ’. ತಮ್ಮ ದೋಷಗಳನ್ನು ಮುಚ್ಚಿಡಲು ಅಲ್ಪಸಂಖ್ಯಾತ ಗುಮ್ಮನನ್ನು ಎಬ್ಬಿಸುವ ಸರ್ಕಾರಿ ಕುಟಿಲ ನಡೆ ಎಲ್ಲೆಡೆಯೂ ನಡೆಯುತ್ತಿರುತ್ತದೆ. ‘ಎಲ್ಲಿ ಅಲ್ಪಸಂಖ್ಯಾತರು ನೆಮ್ಮದಿಯಿಂದ ಇರುತ್ತಾರೋ ಆ ದೇಶ ನೆಮ್ಮದಿಯಿಂದ ಇರುತ್ತದೆ’ ಎಂಬ ಗಾಂಧೀಜಿಯ ಮಾತು ಶ್ರೀಲಂಕಾದ ಜನರಿಗೆ ಈಚೆಗೆ ಅರ್ಥವಾಗತೊಡಗಿದೆ. ಅಲ್ಲಿನ ನ್ಯಾಯಾಂಗ ಕೂಡ ಈ ಬಿಕ್ಕಟ್ಟಿನಲ್ಲಿ ದೃಢವಾಗಿ ನಿಂತಿದೆ.
ಗೊಟಬಯ ರಾಜೀನಾಮೆಯ ನಂತರ ಹೊಸ ಸರ್ಕಾರ ರಚನೆಯ ಸಿದ್ಧತೆ ಶುರುವಾಗಿದೆ, ಆದರೆ ಪಾರ್ಲಿಮೆಂಟಿನಲ್ಲಿ ಗೊಟಬಯ ಪ್ರತಿನಿಧಿಸುವ ‘ಶ್ರೀಲಂಕಾ ಪೊದುಜನ ಪೆರಮುನ’ ಪಕ್ಷದ ಸದಸ್ಯರ ಸಂಖ್ಯೆಯೇ ಹೆಚ್ಚು. ತನ್ನ ತಪ್ಪುಗಳನ್ನು ಮುಚ್ಚಿಹಾಕಲು ರಾಜಪಕ್ಸ ಕುಟುಂಬ ಹಿಂಬಾಗಿಲ ಆಡಳಿತಕ್ಕೆ ರೆಡಿಯಾಗಲೂಬಹುದು. ಆದರೆ ಯಾವ ಸರ್ಕಾರವೂ ಸುಲಭವಾಗಿ ಬಗೆಹರಿಸಲಾರದ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾ, ಅಂತರರಾಷ್ಟ್ರೀಯ ರಾಜಕಾರಣದಲ್ಲಿ ಯಾರ ದಾಳವಾಗುತ್ತದೆ, ಎಂಥ ಆರ್ಥಿಕ ದಾಸ್ಯಕ್ಕೆ ಈಡಾಗುತ್ತದೆ ಎಂಬುದು ಭಾರತಕ್ಕೆ ನಿಜಕ್ಕೂ ಸವಾಲಾಗಬಲ್ಲ ಪ್ರಶ್ನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.