ಆಫ್ರಿಕಾದ ಚೀತಾಗಳನ್ನು ನಮ್ಮ ನೆಲದಲ್ಲಿ ಪುನರ್ ನೆಲೆಗೊಳಿಸುವ ‘ಚೀತಾ ಯೋಜನೆ’ಗೆ ಒಂದು ವರ್ಷ ತುಂಬಿದೆ. ಬರಮಾಡಿಕೊಂಡಿದ್ದ 20 ಚೀತಾಗಳಲ್ಲಿ 6 ವಯಸ್ಕ ಹಾಗೂ ಹೊಸದಾಗಿ ಜನಿಸಿದ 3 ಮರಿಗಳು ಮೃತಪಟ್ಟಿದ್ದು, ಇಡೀ ಯೋಜನೆಯೇ ತೀಕ್ಷ್ಣ ಟೀಕೆಗೆ ಒಳಗಾಗಿದೆ. ಇಲ್ಲಿನ ವಾಯುಗುಣಕ್ಕೆ ಅವು ಹೊಂದಿಕೊಳ್ಳಲಾರವು ಎಂಬ ಅನುಮಾನ ಶುರುವಾಗಿದೆ.
ಇತ್ತ ನಮ್ಮದೇ ನೆಲದ ಚಿರತೆಗಳು ಮಾನವ ನೆಲೆಗೆ ನುಗ್ಗಿ ದಾಂದಲೆ ಎಬ್ಬಿಸಿ ಆಸ್ತಿ– ಪ್ರಾಣಹಾನಿಗೆ ಕಾರಣವಾಗುತ್ತಿರುವುದು ಇಲ್ಲವೇ ಜನರ ಆಕ್ರೋಶಕ್ಕೆ ಸಿಲುಕಿ ಸಾಯುತ್ತಿರುವುದು ಹಲವು ಪ್ರಶ್ನೆಗಳನ್ನು ಎತ್ತಿದೆ. ಚಿರತೆಯ ಉಪಟಳದಿಂದ ಬೇಸತ್ತ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳು ಚಿರತೆಗಳ ಸಂತಾನಶಕ್ತಿಹರಣಕ್ಕೆ ಮುಂದಾಗಿವೆ. ವಿಸ್ತೃತ ಯೋಜನೆ ತಯಾರಿಸಿ, ಕೇಂದ್ರಕ್ಕೆ ಸಲ್ಲಿಸಿ ಅನುಮತಿಗಾಗಿ ಕಾಯುತ್ತಿವೆ. ಇದು ಅವೈಜ್ಞಾನಿಕ ಎಂದಿರುವ ವನ್ಯಜೀವಿ ತಜ್ಞರು, ಅವಸರದ ಕ್ರಮ ಸರಿಯಲ್ಲ, ಚಿರತೆ– ಮಾನವ ಸಂಘರ್ಷಕ್ಕೆ ಅವುಗಳ ಆವಾಸ ನಾಶವೇ ಕಾರಣ, ಮೊದಲು ಅದನ್ನು ಸರಿಪಡಿಸಿ ಎಂದಿದ್ದಾರೆ.
ಬಾವಿಗೆ ಬಿದ್ದ ಚಿರತೆಯನ್ನು ಜನ ರಕ್ಷಿಸಿದರು ಎಂದೋ ಚಿರತೆ ಶಾಲೆಗೇ ನುಗ್ಗಿತು ಎಂದೋ ಮನೆಯ ಅಂಗಳದಲ್ಲಿದ್ದ ನಾಯಿಯನ್ನು ಹೊತ್ತೊಯ್ದಿದೆ ಎಂದೋ ಹೊಲದ ದಾರಿಯಲ್ಲಿ ಬರುತ್ತಿದ್ದ ರೈತನ ಮೇಲೆ ಎರಗಿತು ಎಂದೋ ಅರಣ್ಯ ಇಲಾಖೆಯವರು ಅದನ್ನು ಬಲೆ ಬೀಸಿ ಹಿಡಿದರು ಎಂದೋ... ಹೀಗೆ ಚಿರತೆಯ ಕುರಿತು ಒಂದಿಲ್ಲೊಂದು ಪ್ರಕರಣ ದಿನವೂ ವರದಿಯಾಗುತ್ತಿದೆ. ಚಿರತೆಯ ಆಕ್ರಮಣಕ್ಕೆ ನಲುಗಿದ ಕುಟುಂಬಗಳು, ಸಾರ್ವಜನಿಕರು ವಿಪರೀತ ಸಿಟ್ಟಿಗೆದ್ದು ಅದರ ಪ್ರಾಣ ತೆಗೆದ ಪ್ರಕರಣಗಳೂ ನಡೆದಿವೆ. ತಮ್ಮ ಆವಾಸದಲ್ಲಿ ಆಹಾರ ದೊರಕದೆ ಮನುಷ್ಯವಾಸದ ಪ್ರದೇಶಗಳಿಗೆ ಬರುವ ಚಿರತೆಗಳ ಸಂಖ್ಯೆ ಕಳೆದೊಂದು ದಶಕದಲ್ಲಿ ಗಣನೀಯವಾಗಿ ಏರಿದೆ. ಪ್ರಾಣ ಕಳೆದುಕೊಂಡ ಇಲ್ಲವೆ ತೀವ್ರವಾಗಿ ಗಾಯಗೊಂಡವರ ಸಂಖ್ಯೆಯೂ ಏರುಹಾದಿಯಲ್ಲಿದೆ.
ದೇಶದ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 12,852 ಚಿರತೆಗಳಿವೆ ಎಂದು ಅಂದಾಜಿಸಲಾಗಿದೆ. ಅತಿ ಹೆಚ್ಚು (3,421) ಮಧ್ಯಪ್ರದೇಶ ರಾಜ್ಯದಲ್ಲಿವೆ. ಗುಜರಾತ್‍ನಲ್ಲಿ 2,274, ಕರ್ನಾಟಕ 1,783 ಮತ್ತು ಮಹಾರಾಷ್ಟ್ರದಲ್ಲಿ 1,690 ಚಿರತೆಗಳಿವೆ. ಉಳಿದ ರಾಜ್ಯಗಳಲ್ಲಿನ ಗಣತಿ ವರದಿ ಲಭ್ಯವಿಲ್ಲ. ಮಹಾರಾಷ್ಟ್ರದ 2021ರ ಮಾನವ– ಚಿರತೆ ಸಂಘರ್ಷದ ವರದಿಯಂತೆ, ಅಲ್ಲಿರುವ 376 ಅರಣ್ಯ ವಲಯಗಳ ಪೈಕಿ 333ರಲ್ಲಿ ಚಿರತೆಗಳಿವೆ. ಅದರಲ್ಲೂ ಶೇ 70ರಷ್ಟು ಚಿರತೆಗಳು ಸಂರಕ್ಷಿತ ಅರಣ್ಯ ಪ್ರದೇಶಗಳಿಂದ ಹೊರಗಿವೆ.
ಹಿಂದಿನ ಐದಾರು ವರ್ಷಗಳಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ ಎನ್ನುವ ಅರಣ್ಯಾಧಿಕಾರಿಗಳು, ಏರುತ್ತಿರುವ ವ್ಯಾವಸಾಯಿಕ ಮೂಲ ಸೌಲಭ್ಯಗಳೇ ಅದಕ್ಕೆ ಕಾರಣ ಎಂದಿದ್ದಾರೆ. ವರ್ಷದ ಎಲ್ಲ ಕಾಲದಲ್ಲೂ ವ್ಯವಸಾಯಕ್ಕೆ ನೀರು ದೊರಕುತ್ತಿರುವುದರಿಂದ ಸಾತಾರ, ಸೊಲ್ಲಾಪುರ, ಪುಣೆ, ಅಹಮದ್‍ನಗರ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ವಾಣಿಜ್ಯ ಬೆಳೆಗಳಾದ ಕಬ್ಬು, ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಯಲಾಗುತ್ತಿದೆ. ಸದಾ ಅಡಗಿಕೊಳ್ಳಬೇಕೆನ್ನುವ ಸ್ವಭಾವದ ಚಿರತೆಗಳಿಗೆ ಇವು ಪ್ರಶಸ್ತ ತಾಣಗಳು. ಈ ಹೊಲ, ಗದ್ದೆಗಳಿಗೆ ಆಹಾರ ಅರಸಿ ಬರುವ ಕಾಡುಹಂದಿಗಳೇ ಚಿರತೆಗಳ ಸ್ವಾದಿಷ್ಟ ಆಹಾರ. ಊರಂಚಿನಲ್ಲಿ ಜನ ಬಿಸಾಕುವ ಕಸಕ್ಕೆ ಬಾಯಿ ಹಾಕಲು ಬರುವ ಹಂದಿಗಳನ್ನು ಹುಡುಕಿ ಚಿರತೆಗಳು ಬರುತ್ತವೆ. ಆಗ ಮನುಷ್ಯರ ಕಣ್ಣಿಗೆ ಬಿದ್ದು ಅವಘಡಗಳಾಗುತ್ತವೆ. ಆದ್ದರಿಂದ ಅರಣ್ಯದಂಚು ಮತ್ತು ಊರಿನ ಹೊರವಲಯಗಳಲ್ಲಿ ಕಸ ಗುಡ್ಡೆ ಹಾಕುವುದನ್ನು ನಿಲ್ಲಿಸಬೇಕು. ಇಸ್ರೇಲಿನಲ್ಲಿ ನರಿಗಳ ಹಾವಳಿ ಜಾಸ್ತಿಯಾದಾಗ ಕಾಡಂಚಿನ ಕೆಲವು ಹಳ್ಳಿಗಳ ತಿಪ್ಪೆಯನ್ನು ಸ್ವಚ್ಛ ಮಾಡಲಾಯಿತು. ನಂತರದ ದಿನಗಳಲ್ಲಿ ಒಂದೇ ಒಂದು ನರಿ ಅತ್ತ ಕಡೆ ತಲೆಹಾಕಿರಲಿಲ್ಲ.
ವಾಸ್ತವ ಬೇರೆಯೇ ಇದೆ. ಚಿರತೆಗಳು ಸಾಮಾನ್ಯವಾಗಿ ವಾಸಿಸಲು ಇಷ್ಟಪಡುವ ಬಂಡೆ ಪ್ರದೇಶಗಳಲ್ಲೀಗ ಗ್ರ್ಯಾನೈಟ್ ಗಣಿಗಾರಿಕೆ ನಡೆಯುತ್ತಿದೆ. ಕುರುಚಲು ಕಾಡುಗಳು ಹೊಲ, ಗದ್ದೆಗಳಾಗಿ ಒತ್ತುವರಿಯಾಗಿವೆ, ನಿತ್ಯಹರಿದ್ವರ್ಣ ಕಾಡುಗಳು ವಿದ್ಯುತ್ತು, ನೀರಿನ ಯೋಜನೆಗಳಿಗಾಗಿ ಮುಳುಗಡೆಯಾಗಿವೆ. ರಸ್ತೆ, ಕಾಲುವೆ, ರೈಲ್ವೆ ಲೈನ್‌ಗಳಿಗಾಗಿ ಕಾಡುಗಳು ಛಿದ್ರಗೊಂಡಿವೆ. ನಿಲ್ಲಲು ನೆಲೆಯಿಲ್ಲದೆ ಚಿರತೆಗಳು ಅನಿವಾರ್ಯವಾಗಿ ಕಬ್ಬು ಮತ್ತು ಮೆಕ್ಕೆಜೋಳದ ಹೊಲಗಳಿಗೆ ನುಗ್ಗುತ್ತಿವೆ. ನಲವತ್ತರಿಂದ ಅರವತ್ತೈದು ಕಿಲೊ ತೂಗುವ ಇವು ಭಾರಿ ಪ್ರಮಾಣದ ಆಹಾರವನ್ನೇನೂ ಬಯಸುವುದಿಲ್ಲ. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಎಲ್ಲ ಬಗೆಯ ಆವಾಸಗಳಿಗೆ ಹೊಂದಿಕೊಳ್ಳುವ ಗುಣ ಪಡೆದಿರುವ ಚಿರತೆಗಳು ಮಾನವ ನೆಲೆಗೆ ಬರುತ್ತಿರುವುದು ಸಂಘರ್ಷಕ್ಕೆ ಕಾರಣವಾಗಿದೆ.
2014–18ರ ನಡುವಿನ ಅವಧಿಯಲ್ಲಿ ಚಿರತೆಗಳ ಸಂಖ್ಯೆ ಶೇ 63ರಷ್ಟು ಹೆಚ್ಚಿದೆ. ಮೊದಲೆಲ್ಲ ನೂರು ಚದರ ಕಿ.ಮೀ ವ್ಯಾಪ್ತಿಯಲ್ಲಿ ಎರಡರಿಂದ ಮೂರು ಚಿರತೆಗಳು ಇರುತ್ತಿದ್ದವು. ಈಗ ಸಂಖ್ಯೆ ಆರಕ್ಕೇರಿದೆ. ಕಾಡುಗಳಲ್ಲಿ ಜನಿಸಿದ ಮರಿಗಳ ಮರಣ ಪ್ರಮಾಣ ಶೇ 50ಕ್ಕಿಂತ ಕಡಿಮೆ. ಆದರೆ ಅರೆನಗರ ಮತ್ತು ಹಳ್ಳಿಗಳ ವ್ಯಾಪ್ತಿಯ ಹೊಲ ಗದ್ದೆಗಳಲ್ಲಿ ಜನಿಸುವ ಮರಿಗಳಿಗೆ ಯಾವುದೇ ಅಪಾಯ ಇಲ್ಲವಾದ್ದರಿಂದ ಚಿರತೆಗಳ ಸಂಖ್ಯೆ ಸಹಜವಾಗಿಯೇ ಏರಿಕೆ ಕಂಡಿದೆ. ಒಂದು ಲೆಕ್ಕದಂತೆ, ಮಹಾರಾಷ್ಟ್ರದಲ್ಲಿ 2010ರಿಂದ 18ರವರೆಗೆ 97 ಜನ ಚಿರತೆ ದಾಳಿಗೆ ಬಲಿಯಾಗಿದ್ದರು. ನಂತರದ ಮೂರು ವರ್ಷಗಳಲ್ಲಿ ಚಿರತೆ ದಾಳಿಯಿಂದ ಸತ್ತವರ ಸಂಖ್ಯೆ 58. ಮನುಷ್ಯರಷ್ಟೇ ಅಲ್ಲ, ದೊಡ್ಡ ಸಂಖ್ಯೆಯ ಚಿರತೆಗಳೂ ಪ್ರಾಣ ತೊರೆದಿವೆ.
ಆಹಾರ ಹುಡುಕಿ ಬರುವ ಚಿರತೆಗಳು ಅಲ್ಲಲ್ಲಿ ಕಾಣಿಸಿಕೊಂಡಿವೆ ಎಂದಾಕ್ಷಣ ಅವುಗಳ ಸಂಖ್ಯೆ ಹೆಚ್ಚಿದೆ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸುವ ದೆಹಲಿ ಮೂಲದ ವೈಲ್ಡ್‌ಲೈಫ್ ಎಸ್‍ಒಎಸ್‍ನ ಕಾರ್ತಿಕ್ ಸತ್ಯನಾರಾಯಣನ್, ಚಿರತೆಗಳ ಸಂತಾನಶಕ್ತಿಹರಣಕ್ಕಾಗಿ ಬೃಹತ್ ಮೊತ್ತದ ಹಣ ಖರ್ಚು ಮಾಡುವುದು ತರವಲ್ಲ ಎನ್ನುತ್ತಾರೆ. ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ನೋಡಲ್ ಅಧಿಕಾರಿ ಕಮರ್ ಖುರೇಶಿ, ವನ್ಯಜೀವಿಗಳ ಸಂತಾನಶಕ್ತಿಹರಣ ಪ್ರಯೋಗ ತುಂಬಾ ಸಂಕೀರ್ಣವಾದದ್ದು, ಅದಕ್ಕಾಗಿ ದೊಡ್ಡ ಸಂಖ್ಯೆಯ ತಜ್ಞರ ಅವಶ್ಯಕತೆ ಇದೆ, ಅಲ್ಲದೆ ಈ ಕೆಲಸ ದೀರ್ಘಕಾಲದವರೆಗೆ ದೊಡ್ಡ ಪ್ರಮಾಣದಲ್ಲಿ ನಡೆಯಬೇಕು ಮತ್ತು ಪುನರಾವರ್ತಿಸುವಂತೆ ಇರಬೇಕು ಎನ್ನುತ್ತಾ, ಈಗಾಗಲೇ ಕೋತಿ, ನಾಯಿಗಳ ಸಂತಾನಶಕ್ತಿಹರಣದ ವಿಚಾರದಲ್ಲಿ ದೊಡ್ಡ ಯಶಸ್ಸೇನೂ ಸಿಕ್ಕಿಲ್ಲ, ಆದ್ದರಿಂದ ಜಾಗರೂಕರಾಗಿ ಯೋಜನೆ ಜಾರಿ ಮಾಡಬೇಕು ಎಂದು ಎಚ್ಚರಿಸಿದ್ದಾರೆ.
ಯೋಜನೆಯನ್ನು ದೊಡ್ಡದಾಗಿ ಜಾರಿ ಮಾಡುವ ಮುನ್ನ ಸೆರೆಸಿಕ್ಕ ಇಲ್ಲವೇ ಗಾಯಗೊಂಡ ಚಿರತೆಗಳ ಮೇಲೆ ಪ್ರಯೋಗ ಮಾಡಿ ನೋಡಬೇಕು. ಸಂಖ್ಯೆಯನ್ನು ನಿಯಂತ್ರಿಸಲೇಬೇಕು ಎಂದಾದರೆ ಶೇ 70ರಷ್ಟು ಚಿರತೆಗಳ ಸಂತಾನಶಕ್ತಿಯ ಹರಣ ಮಾಡಬೇಕು. ಸ್ವಚ್ಛಂದ ಸಂತಾನವೃದ್ಧಿ ಪ್ರವೃತ್ತಿಯ ಚಿರತೆಗಳ ಲೋಕದಲ್ಲಿ ಇದು ಯಶಸ್ವಿಯಾಗುತ್ತದೆಯೇ ಎಂಬ ಅನುಮಾನಗಳಿವೆ.
ಸಂತಾನಶಕ್ತಿಹರಣದ ನಂತರ, ಸರಹದ್ದಿನ ನಿರ್ವಹಣೆಗಾಗಿ ಚಿರತೆಗಳ ನಡುವೆ ನಡೆಯುವ ಹೋರಾಟದ ಮಾದರಿಯೇ ಬದಲಾಗಬಹುದು ಎಂಬ ಮಾತಿದೆ. ತಮ್ಮ ಮೂಲ ಆವಾಸ ಕಳೆದುಕೊಂಡು ಮನುಷ್ಯವಾಸದ ಜಾಗಕ್ಕೆ ಕಾಲಿಟ್ಟಿರುವ ಚಿರತೆಗಳೊಂದಿಗೆ ಸಹಬಾಳ್ವೆ ನಡೆಸುವುದೊಂದೇ ದಾರಿ ಎನ್ನುವ ಮಾತು ಬಹಳ ದಿನಗಳಿಂದ ಕೇಳಿಬರುತ್ತಿದೆ. ಅದು ಸಾಧ್ಯವೂ ಹೌದು ಎನ್ನುವ ತಜ್ಞರು, ಮಹಾರಾಷ್ಟ್ರ ರಾಜ್ಯದ ಜುನ್ನಾರ್ ತಾಲ್ಲೂಕಿನ ಉದಾಹರಣೆ ನೀಡುತ್ತಾರೆ. ಆದರೆ ಅಲ್ಲಿ ಚಿರತೆಗಳಿಂದಾದ 27 ದಾಳಿಗಳ ಬಗ್ಗೆಯಾಗಲೀ ಸಂಭವಿಸಿದ ಮೂರು ಜನರ ಸಾವಿನ ಕುರಿತಾಗಲೀ ಯಾರೂ ಚಕಾರ ಎತ್ತುವುದಿಲ್ಲ.
ವಿಚಿತ್ರವೆಂದರೆ, ಕಾಡಿನವಾಸಿಗಳಿಗೆ ಚಿರತೆಗಳಿಂದ ಯಾವತ್ತೂ ತೊಂದರೆಯಾಗಿಲ್ಲ. ಸಮಸ್ಯೆ ಇರುವುದು ಕಾಡಿನ ಅಂಚಿನ ಪ್ರದೇಶಗಳಲ್ಲಿ ಮಾತ್ರ. ಅಂದರೆ ಅದಕ್ಕೆ ಪರಿಹಾರ ಹುಡುಕುವುದನ್ನು ಬಿಟ್ಟು ಚಿರತೆಯ ಸಂತಾನಶಕ್ತಿ ಹರಣಕ್ಕೆ ಕೈ ಹಾಕುವುದು ಎಷ್ಟು ಸರಿ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.