ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರ‘ಸಿಎಎ ಎತ್ತುವ ತಾತ್ವಿಕ ಪ್ರಶ್ನೆಗಳು’ ಲೇಖನದ ಕುರಿತು ನಾನು ನೀಡಿದ್ದ ಪ್ರತಿಕ್ರಿಯೆಗೆ ಉತ್ತರ ನೀಡುತ್ತಾ ‘ಇದು ವಾಸ್ತವಕ್ಕೆ ಕುರುಡಾಗಿರುವ ಪ್ರತಿಕ್ರಿಯೆ’ ಎಂದಿರುವುದರಿಂದ ವಾಸ್ತವಕ್ಕೆ ಬೆಳಕು ಹಿಡಿಯುವ ಪ್ರಯತ್ನವಷ್ಟೇ ಇದು.
ಮಟ್ಟು ಅವರು ‘ಕಾಶ್ಮೀರದ ವಿಷಯ ಆಂತರಿಕ ವಿಚಾರ ಎನ್ನುವುದು ಭಾರತದ ಸ್ಥಾಪಿತ ನಿಲುವು. ಹೀಗಿದ್ದರೂ ಭಾರತ - ಪಾಕಿಸ್ತಾನದ ನಡುವಿನ ಮಾತುಕತೆಗಳು ಕಾಶ್ಮೀರ ಮತ್ತು ಅದಕ್ಕೆ ಸಂಬಂಧಿಸಿದ ಗಡಿಯಾಚೆಗಿನ ಭಯೋತ್ಪಾದನೆಯ ಸುತ್ತಲೇ ನಡೆದಿವೆ’ ಎಂದು ಹೇಳಿದ್ದಾರೆ.
ನಿಜ, ನಮ್ಮೆಲ್ಲರಿಗೂ ತಿಳಿದಿರುವಂತೆ ಕಾಶ್ಮೀರದ ವಿಷಯ ಭಾರತ ಪಾಕಿಸ್ತಾನಗಳ ನಡುವಿನ ದೀರ್ಘಕಾಲದ ಗಡಿ ವ್ಯಾಜ್ಯ. ಉಭಯ ದೇಶಗಳೂ ಹಕ್ಕುಸಾಧನೆ ಮಾಡುತ್ತಾ ಬಂದಿರುವ ಭೂ ಪ್ರದೇಶದ ವಿಷಯ ಅದು. ಗಡಿ ವ್ಯಾಜ್ಯಗಳನ್ನು ಗಡಿ ಹಂಚಿಕೊಂಡಿರುವ ದೇಶಗಳು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕಾಗುತ್ತದೆ. ಈ ವ್ಯಾಜ್ಯವೇ ಎರಡು ದೇಶಗಳ ನಡುವಿನ ಹಗೆ ಮತ್ತು ಭಯೋತ್ಪಾದನೆಯಂತಹ ಪರೋಕ್ಷ ಯುದ್ಧಕ್ಕೆ ಮುಖ್ಯ ಕಾರಣ ಎಂದು ಮನವರಿಕೆಯಾಗಿರುವುದರಿಂದ ಎರಡೂ ದೇಶಗಳು ಹಲವು ಸುತ್ತಿನ ಮಾತುಕತೆ, ಶೃಂಗಸಭೆ ನಡೆಸಿವೆ. ಕಾಶ್ಮೀರದ ಈ ಬಿಕ್ಕಟ್ಟು ಆರಂಭವಾದದ್ದು ಹೇಗೆ, ದೇಶ ವಿಭಜನೆಯ ಸಮಯದಲ್ಲೇ ಬಗೆಹರಿಸಿಕೊಳ್ಳಬಹುದಾಗಿದ್ದ ವಿಷಯವನ್ನು ವ್ರಣವಾಗುವಂತೆ ಮಾಡಿದವರು ಯಾರು ಎಂಬ ವಿಷಯ ಪ್ರಸ್ತಾಪಿಸಿದರೆ, ಮಟ್ಟು ಅವರು ಕ್ರೈಸ್ತರನ್ನು ಅಲ್ಪಸಂಖ್ಯಾತರ ಪಟ್ಟಿಗೆ ಸೇರಿಸಲು ಡೊನಾಲ್ಡ್ ಟ್ರಂಪ್ ಬಗೆಗಿನ ಅಂಜಿಕೆ ಕಾರಣ ಎಂದಷ್ಟೇ ಆಭಾಸವಾಗುವುದರಿಂದ ಆ ಚರ್ಚೆಗೆ ಹೋಗುವುದಿಲ್ಲ.
ಕಾಶ್ಮೀರದ ವಿಷಯವನ್ನು ಕೇಂದ್ರ ಸ್ಥಾನದಲ್ಲಿಟ್ಟುಕೊಂಡು ನಡೆದ ಶೃಂಗಸಭೆ, ಮಾತುಕತೆಗಳಲ್ಲಿ ಚರ್ಚೆಯಾಗಿರುವುದು ಗಡಿಯ ವಿಚಾರ, ಉಭಯ ದೇಶಗಳು ನಿಯೋಜಿಸಿರುವ ಸೇನೆಯನ್ನು ಹಿಂತೆಗೆದುಕೊಳ್ಳುವ, ಮುಕ್ತ ಸಂಚಾರಕ್ಕೆ, ವ್ಯಾಪಾರಕ್ಕೆ ಅನುವು ಮಾಡಿಕೊಡಬಹುದೇ ಎಂಬ ಎರಡು ದೇಶಕ್ಕೆ ಸಂಬಂಧಿಸಿದ ಸಂಗತಿಗಳು. ಹಾಗಾಗಿ ಕಾಶ್ಮೀರದ ವ್ಯಾಜ್ಯವನ್ನು ಹಾಗೂ ಪಾಕಿಸ್ತಾನದ ಪ್ರತೀ ಊರು, ನಗರಗಳಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಹೋಲಿಸಿ ಒಂದೇ ತಕ್ಕಡಿಯಲ್ಲಿಡಲು ಸಾಧ್ಯವೇ? ಒಂದೊಮ್ಮೆ ‘ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಚರ್ಚಿಸೋಣ ಬನ್ನಿ’ ಎಂದು ಭಾರತ ಕರೆದರೆ, ಪಾಕಿಸ್ತಾನ ಗೋಣಲ್ಲಾಡಿಸಿ ಚರ್ಚೆಗೆ ಬಂದು ಕೂರುತ್ತದೆಯೇ? ಭಾರತದ ಕೇರಳ, ಗುಜರಾತ್ ಮತ್ತಿನ್ನೆಲ್ಲೋ ನಡೆದ ಘಟನೆಗಳನ್ನು ಇಟ್ಟುಕೊಂಡು ಪಾಕಿಸ್ತಾನ ಚರ್ಚೆಗೆ ಬನ್ನಿ ಎಂದರೆ ಭಾರತ ಒಪ್ಪಿತೇ? ಎಂಬುದನ್ನು ‘ಆಗ್ರಾ ಶೃಂಗಸಭೆ’ಯನ್ನು ಹತ್ತಿರದಿಂದ ವರದಿ ಮಾಡಿರುವ ಕನ್ನಡದ ಏಕೈಕ ಪತ್ರಕರ್ತ ಎನಿಸಿಕೊಂಡಿರುವ ಮಟ್ಟು ಅವರೇ ಹೇಳಬೇಕು.
ಅಷ್ಟಕ್ಕೂ ಕಾಶ್ಮೀರದ ಗಡಿ ಸಮಸ್ಯೆ, ಆಕ್ರಮಿತ ಕಾಶ್ಮೀರದ ಹಕ್ಕುಸಾಧನೆಯ ವಿಷಯಗಳು ದ್ವಿಪಕ್ಷೀಯ. ಆದರೆ ಭಾರತದ ಅಧೀನದಲ್ಲಿರುವ ಕಾಶ್ಮೀರದ ಯಾವುದೇ ಸಂಗತಿ ಆಂತರಿಕವಾಗುತ್ತದೆ, ಏಕಪಕ್ಷೀಯ ತೀರ್ಮಾನಕ್ಕೆ ಒಳಪಡುವಂತಹದ್ದಾಗಿರುತ್ತದೆ. ಹಾಗಾಗಿಯೇ ಕಾಶ್ಮೀರಕ್ಕೆ ಅನ್ವಯವಾಗುವ 370ನೇ ವಿಧಿಯನ್ನು ರದ್ದು ಮಾಡಿದಾಗ, ಅಂತರ್ಜಾಲ ಸಂಪರ್ಕ ಇತ್ಯಾದಿ ಸೌಲಭ್ಯ ಕಡಿತಗೊಳಿಸಿದಾಗ ಆಕ್ಷೇಪಿಸಿದ ಪಾಕಿಸ್ತಾನಕ್ಕೆ ಭಾರತ ಇದು ನಮ್ಮ ಆಂತರಿಕ ವಿಚಾರ ಎಂದದ್ದು ಮತ್ತು ಹಲವು ದೇಶಗಳು ಆ ಮಾತಿಗೆ ಸಮ್ಮತಿಸಿದ್ದು. ಅಂತೆಯೇ ಪಾಕಿಸ್ತಾನದ ಅಲ್ಪಸಂಖ್ಯಾತರ ವಿಷಯ. ಈ ವಿಷಯಗಳು ಮಾನವ ಹಕ್ಕಿಗೆ ಸಂಬಂಧಿಸಿದ್ದು ಎನಿಸಿಕೊಳ್ಳುತ್ತವೆ ಮತ್ತು ವಿಶ್ವಸಂಸ್ಥೆ ಚರ್ಚೆಗೆ ಸೂಕ್ತ ವೇದಿಕೆಯಾಗುತ್ತದೆ.
ಇದನ್ನೂ ಓದಿ:ಸಿಎಎ ಬಗ್ಗೆ ಎತ್ತಿದ ತಾತ್ವಿಕ ಪ್ರಶ್ನೆಗಳು ಘನವಲ್ಲ | ದಿನೇಶ್ ಅಮಿನ್ ಮಟ್ಟು ಬರಹಕ್ಕೆ ಸುಧೀಂದ್ರ ಬುಧ್ಯ ಪ್ರತಿಕ್ರಿಯೆ
ಎರಡನೆಯದಾಗಿ, ‘ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಧಾರ್ಮಿಕ ದೌರ್ಜನ್ಯವನ್ನು ಆಂತರಿಕ ವಿಷಯ ಎಂದು ಭಾರತ ಪರಿಗಣಿಸಿದರೆ, ಈಗಿನ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹೇಗೆ ಅನುಷ್ಠಾನಗೊಳಿಸಲು ಸಾಧ್ಯ’ ಎಂದು ಮಟ್ಟು ಅವರು ಪ್ರಶ್ನಿಸಿದ್ದಾರೆ. ಯಾಕೆ ಸಾಧ್ಯವಿಲ್ಲ? ಪೌರತ್ವ ತಿದ್ದುಪಡಿ ಕಾಯ್ದೆ ಪಾಕಿಸ್ತಾನದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವ ಯಾವ ಕೆಲಸವನ್ನೂ ಮಾಡುವುದಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಗಾನಿಸ್ತಾನ ದೇಶಗಳಲ್ಲಿ ದೌರ್ಜನ್ಯಕ್ಕೆ ಒಳಗಾದ ಧಾರ್ಮಿಕ ಅಲ್ಪಸಂಖ್ಯಾತರು 2014ರ ಡಿಸೆಂಬರ್ 31ಕ್ಕೆ ಮುನ್ನ ಭಾರತ ಪ್ರವೇಶಿಸಿದ್ದರೆ ಅವರಿಗೆ ಸರಳ, ತ್ವರಿತ ಮಾರ್ಗದಲ್ಲಿ ಭಾರತದ ಪೌರತ್ವ ನೀಡುವುದಷ್ಟೇ ಪೌರತ್ವ ತಿದ್ದುಪಡಿ ಕಾಯ್ದೆಯ ಕೆಲಸ.
ನಿಜ, ಪಾಕಿಸ್ತಾನದಲ್ಲಿ ಹಿಂದೂ, ಕ್ರೈಸ್ತ, ಬೌದ್ಧ, ಸಿಖ್ ಇತ್ಯಾದಿ ಸಮುದಾಯಗಳ ಜೊತೆಗೆ ಅಹ್ಮದಿಯರೂ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾರೆ. ಆ ಸಮುದಾಯವನ್ನೂ ಒಳಗೊಳ್ಳುವಂತೆ ಅಭಿಪ್ರಾಯ ರೂಪಿಸುವುದು, ಸರ್ಕಾರದ ಮೇಲೆ ಒತ್ತಡ ತರುವುದು ಸರಿ. ಆದರೆ ಅದನ್ನೇ ಮುಂದುಮಾಡಿ ಇಟ್ಟ ಮೊದಲ ಹೆಜ್ಜೆಗೆ ಅಡ್ಡಿಯುಂಟು ಮಾಡಬಾರದಷ್ಟೇ.
ಮೂರನೆಯದಾಗಿ, ‘ಧಾರ್ಮಿಕ ದೌರ್ಜನ್ಯವನ್ನೇ ಮುಂದಿಟ್ಟುಕೊಂಡು ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್‌ಸಿ ಮೂಲಕ 130 ಕೋಟಿ ಜನರ ನಿದ್ದೆಗೆಡುವಂತೆ ಮಾಡುವಷ್ಟು ಈ ವಿಷಯ ಗಂಭೀರವೇ’ ಎಂದು ಪ್ರಶ್ನಿಸಲಾಗಿದೆ. ಇದು ‘ಗುಮ್ಮ ಬಂತು ಗುಮ್ಮ’ ಎಂದು ಮಕ್ಕಳಿಗೆ ಹೆದರಿಸಿದಂತಿದೆ. ಸಿಎಎ ಜೊತೆಗೆ ಎನ್‌ಪಿಆರ್, ಎನ್‌ಆರ್‌ಸಿ ಎಂಬ ಗುಮ್ಮನನ್ನು ಸೇರಿಸಿ ಜನರಲ್ಲಿ ಆತಂಕ ಹೆಚ್ಚಿಸಲಾಗುತ್ತಿದೆ. ಎನ್‌ಆರ್‌ಸಿ ಕುರಿತು ಸರ್ಕಾರದ ಅಧಿಕೃತ ಆದೇಶ ಹೊರಬಿದ್ದಿದೆಯೇ? ಕ್ಯಾಬಿನೆಟ್ ಚರ್ಚೆ ನಡೆದಿದೆಯೇ? 2010ರಲ್ಲಿ ‘ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ನಾಗರಿಕರ ಗುರುತು, ದಾಖಲೆಗಳನ್ನು ಪಟ್ಟಿ ಮಾಡುವ ಗುರುತಿನ ಚೀಟಿ ನೀಡುವ ಪ್ರಕ್ರಿಯೆಯನ್ನು ಆರಂಭಿಸುತ್ತಿದ್ದೇವೆ’ ಎಂದು ಎನ್ಪಿಆರ್ ಪ್ರಕ್ರಿಯೆಯನ್ನು ಮುಂದೆ ತಂದವರು ಮನಮೋಹನ್ ಸಿಂಗ್ ಅವರ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಪಿ. ಚಿದಂಬರ್ ಅಲ್ಲವೇ?
ಇದನ್ನೂ ಓದಿ:ವಾಸ್ತವಕ್ಕೆ ಕುರುಡಾಗಿರುವ ಪ್ರತಿಕ್ರಿಯೆ | ಸುಧೀಂದ್ರ ಬುಧ್ಯ ಬರಹಕ್ಕೆ ದಿನೇಶ್ ಅಮಿನ್ ಮಟ್ಟು ಪ್ರತಿಕ್ರಿಯೆ
ಕಾಲಕಾಲಕ್ಕೆ ದೇಶನಿವಾಸಿಗಳ ಗುರುತಿನ ಪಟ್ಟಿ ಸಿದ್ಧಪಡಿಸುವುದು ಒಂದು ದೇಶಕ್ಕೆ ಅಗತ್ಯವಲ್ಲವೇ? ಅಷ್ಟಕ್ಕೂ ಒಂದೊಮ್ಮೆ ಪೌರತ್ವ ನೋಂದಣಿ ಆರಂಭವಾದರೆ ಅದರಲ್ಲಿ ಆತಂಕಕ್ಕೊಳಗಾಗುವುದು ಏನಿದೆ? ಇದು ಗುರುತಿನ ದಾಖಲೆಗಳನ್ನು, ವಿವರಗಳನ್ನು ನೀಡುವ ಸಾಮಾನ್ಯ ಪ್ರಕ್ರಿಯೆ. ನಿಮ್ಮ ಬಳಿ ಇರುವ ಮಾಹಿತಿಯೇ ಸಾಕು, ಯಾವುದೇ ದಾಖಲೆ ನೀಡುವುದು ಕಡ್ಡಾಯವಲ್ಲ ಎಂಬ ಸ್ಪಷ್ಟನೆಗಳು ಬಂದ ಮೇಲೂ ಅದನ್ನು ಭ್ರಮೆಯ ಪರದೆಯಲ್ಲಿ ನೋಡಿ, ’ನೀವು ಪೌರತ್ವ ಕಳೆದುಕೊಳ್ಳುವ ಅಪಾಯವಿದೆ, ದಾಖಲೆ ಇಲ್ಲದವರು ಎರಡನೇ ದರ್ಜೆಯ ನಾಗರೀಕರಾಗಬೇಕಾಗುತ್ತದೆ, ನಿಮ್ಮನ್ನು ದೇಶದಿಂದ ಹೊರದಬ್ಬಲಾಗುತ್ತದೆ’ ಎಂದು ಭೀತಿ ಹುಟ್ಟಿಸುವುದು ಎಷ್ಟು ಸರಿ?
ನಾಲ್ಕನೆಯದಾಗಿ, ‘ಪಾಕಿಸ್ತಾನ, ಅಫ್ಘಾನಿಸ್ತಾನ ’ಇಸ್ಲಾಮಿಕ್ ಸ್ಟೇಟ್’ ಎನ್ನುವುದು ಸರಿ, ಆದರೆ ಬಾಂಗ್ಲಾದೇಶ ಇಸ್ಲಾಮನ್ನು ಅಧಿಕೃತ ಧರ್ಮ ಎಂದು ಸ್ವೀಕರಿಸಿದ್ದರೂ, ಜಾತ್ಯತೀತ ಆಶಯಗಳಿಗೆ ಬದ್ದವಾಗಿರುವ ದೇಶ’ ಎಂಬ ಅಭಿಪ್ರಾಯ ಲೇಖಕರದ್ದು. ಹಾಗೇ ಇಟ್ಟುಕೊಳ್ಳೋಣ. ಆದರೆ ಬಾಂಗ್ಲಾದೇಶದಲ್ಲಿ ಬೌದ್ಧ, ಹಿಂದೂ, ಕ್ರೈಸ್ತರ ಮೇಲೆ ನಿರಂತರ ಹಲ್ಲೆಯಾಗುತ್ತಿರುವುದರ ಬಗ್ಗೆ (ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯೇ ತನ್ನ ವರದಿಯಲ್ಲಿ ಉಲ್ಲೇಖಿಸಿದಂತೆ), ದೌರ್ಜನ್ಯಕ್ಕೆ ಒಳಗಾದವರು ಭಾರತಕ್ಕೆ ಬರುತ್ತಿರುವುದರ ಬಗ್ಗೆ ಏನು ಹೇಳುವುದು?
2003ರಲ್ಲಿ ಮನಮೋಹನ್ ಸಿಂಗ್ ರಾಜ್ಯಸಭೆಯಲ್ಲಿ ಮಾತನಾಡುತ್ತಾ ’ಬಾಂಗ್ಲಾದಲ್ಲಿ ಉಳಿದು ಹೋಗಿರುವ ಅಲ್ಪಸಂಖ್ಯಾತರು ನಿರಂತರ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ನಿರಾಶ್ರಿತರಾಗಿ ಭಾರತದತ್ತ ಬರುವ ಅವರಿಗೆ ಪೌರತ್ವ ನೀಡುವುದು ಭಾರತದ ನೈತಿಕ ಹೊಣೆಯಾಗುತ್ತದೆ.’ ಎಂದು ನೆನಪಿಸಿದ್ದು ಇದೇ ಬಾಂಗ್ಲಾದೇಶದ ಕುರಿತಾಗಿಯೇ. ಅದು ಬಿಡಿ, ಜಾತ್ಯತೀತ ಆಶಯಗಳಿಗೆ ಬದ್ಧವಾಗಿರುವ ಬಾಂಗ್ಲಾದೇಶದಲ್ಲಿ ಎಷ್ಟು ಮಂದಿ ಅಲ್ಪಸಂಖ್ಯಾತರು ರಾಜಕೀಯವಾಗಿ ಗುರುತಿಸಿಕೊಳ್ಳಲು, ಬೆಳೆಯಲು ಸಾಧ್ಯವಾಗಿದೆ? ಹಿಂದೂ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸುರೇಂದ್ರ ಕುಮಾರ್ ಸಿನ್ಹ ಅವರನ್ನು 2017ರಲ್ಲಿ ಕಾನೂನು ತಿದ್ದುಪಡಿ ಮಾಡಿ, ಬಾಂಗ್ಲಾದೇಶದ ಸಂಸತ್ತಿಗೆ ನ್ಯಾಯಮೂರ್ತಿಗಳನ್ನು ಬದಲಾಯಿಸುವ ವಿಶೇಷ ಅಧಿಕಾರ ನೀಡಿ ರಾಜೀನಾಮೆ ಕೊಡಿಸಲಾಗಿದ್ದರ ಬಗ್ಗೆಯೂ ನೋಡಬೇಕಲ್ಲವೇ. ಸಿನ್ಹಾ ಅವರ A Broken Dream: Rule of Law, Human Rights and Democracy ಎಂಬ ಆತ್ಮಕತೆ ನೋಡಿದರೆ ಜಾತ್ಯತೀತ ಆಶಯಗಳಿಗೆ ಬಾಂಗ್ಲಾದೇಶ ಎಷ್ಟು ಬದ್ಧವಾಗಿದೆ ಎಂಬುದನ್ನು ತಿಳಿಯಬಹುದು.
ಇದನ್ನೂ ಓದಿ:Explainer | ಏನಿದು ಪೌರತ್ವ ತಿದ್ದುಪಡಿ ಮಸೂದೆ?
ಬಿಡಿ, ಸಿಎಎ ಶಾಸನವಾಗಿ ಅಂಗೀಕಾರವಾದ ಮೇಲೆ ಸ್ಫೋಟಗೊಂಡ ಪ್ರತಿಭಟನೆಗೆ ಮುಖ್ಯ ಕಾರಣ, ಈ ವಿಷಯನ್ನು ಎರಡೂ ಬದಿಯ ಪಕ್ಷಗಳು ತಮ್ಮ ಸ್ವಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಂಡದ್ದು ಮತ್ತು ಬುದ್ಧಿಜೀವಿಗಳು ಎನಿಸಿಕೊಂಡ ‘ಒಂದು ವರ್ಗ’ಉತ್ಪ್ರೇಕ್ಷಿತ ವ್ಯಾಖ್ಯಾನ ನೀಡಿದ್ದು.
ಬಿಜೆಪಿ ‘ಈ ಕಾಯಿದೆಯಿಂದ ನಾವು ಮುಸಲ್ಮಾನರನ್ನು ಹೊರಗಿಟ್ಟಿದ್ದೇವೆ’ ಎಂಬುದಕ್ಕೇ ಪ್ರಾಶಸ್ತ್ಯ ಕೊಟ್ಟು ಹೇಳಿತು. ಅದಕ್ಕೆ ಹಿಂದೂ ಮತಬ್ಯಾಂಕ್ ಖುಷಿಗೊಳ್ಳಲಿ ಎಂಬ ಉದ್ದೇಶ ಇತ್ತು. ಬಿಜೆಪಿಯೇತರ ಪಕ್ಷಗಳು, ಬುದ್ಧಿಜೀವಿಗಳು ಎನಿಸಿಕೊಂಡವರು ’ಮುಸಲ್ಮಾನರನ್ನಷ್ಟೇ ಹೊರಗಿಟ್ಟಿದ್ದಾರೆ’ ಎನ್ನುತ್ತಾ ಮುಸಲ್ಮಾನರ ಮತಬ್ಯಾಂಕ್ ಸಂರಕ್ಷಿಸಿಕೊಳ್ಳಲು ಹೊರಟವು. ಆದರೆ ಈ ಕಾಯಿದೆಗಳು ಸೂಕ್ತ ಕಾನೂನು ಪ್ರಕ್ರಿಯೆ ನಡೆಸದೆ ಯಾರನ್ನೂ ದೇಶದಿಂದ ಹೊರ ಕಳುಹಿಸುವ ಗುರಿ ಇರಿಸಿಕೊಂಡಿಲ್ಲ ಎಂಬುದು ಹೆಚ್ಚು ಜನರನ್ನು ತಲುಪಲಿಲ್ಲ.
ಈ ಬೆಳವಣಿಗೆಗಳನ್ನು ನೋಡಿದರೆ, ನೋಟ್ ಬ್ಯಾನ್‌ನಂತಹ ಕ್ರಮವೂ ಜನರನ್ನು ವಿಚಲಿತರನ್ನಾಗಿಸದೇ ಎರಡನೇ ಬಾರಿಗೆ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ರಾಮಜನ್ಮಭೂಮಿ ವಿಷಯವಾಗಿ ಬಂದ ನ್ಯಾಯಾಲಯದ ತೀರ್ಪು, ತಲಾಖ್ ಕುರಿತಂತೆ, ಕಾಶ್ಮೀರಕ್ಕೆ ಅನ್ವಯವಾಗುತ್ತಿದ್ದ 370 ನೇ ವಿಧಿಗೆ ಸಂಬಂಧಿಸಿದಂತೆ ಸರ್ಕಾರ ಇಟ್ಟ ಹೆಜ್ಜೆ ಹಾಗೂ ಈ ಎಲ್ಲದರ ಕುರಿತ ಅಸಮಾಧಾನವೇ ಸಿಎಎ ನೆಪದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಪುಷ್ಠಿ ಕೊಟ್ಟಿರಬಹುದೇ?
ಕೊನೆಯದಾಗಿ, ಅಕಾರಣವೋ ಸಕಾರಣವೋ ಮೋದಿ ಮತ್ತು ಅಮಿತ್ ಶಾ ಅವರ ಬಗೆಗಿನ ಪೂರ್ವಗ್ರಹವನ್ನು ಮಟ್ಟು ಅವರು ಒಪ್ಪಿಕೊಂಡಿದ್ದಾರೆ. ನನಗೆ ಆ ಇಬ್ಬರ ಬಗ್ಗೆ ಕುರುಡು ಭಕ್ತಿ ಇದೆ ಎಂದಿದ್ದಾರೆ. ಖಂಡಿತ ಇಲ್ಲ. ಭಕ್ತಿಯಿದ್ದರೆ ಅದು ದೈವದ ಮೇಲೆ ಹಾಗೂ ದೇಶದ ಮೇಲೆ ಅಷ್ಟೇ.
ನಮಸ್ಕಾರ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.