ಜೀಪು ನಿಧಾನವಾಗಿ ಬೆಟ್ಟ ಮತ್ತು ಕಾಡಿನ ಏರು ಹಾದಿಯಲ್ಲಿ ಹೋಗುತ್ತಿದ್ದರೆ, ರಸ್ತೆಯೂ ಕಾಣದಂತಹ ಮಬ್ಬುಗತ್ತಲು. ಕಾಡಿನ ನಡುವೆ ಹೀಗೆ ಹೋಗುತ್ತಿರುವಾಗ ಕುತೂಹಲ ಮತ್ತು ಆತಂಕ. ಮಿಲಿಟರಿಯ ಬೆಂಗಾವಲು ಪಡೆ ನಮ್ಮನ್ನು ಹಿಂಬಾಲಿಸುತ್ತಿತ್ತು. ಹಾಗೇ ಏರುತ್ತಿರುವಾಗ ಇದ್ದಕ್ಕಿದ್ದಂತೆ ಬೆಳಕು ಚೆಲ್ಲಿತು. ಧಿಗ್ಗನೆ ಕಂಡ ಬೆಳಕಿಗೆ ನಾವೆಲ್ಲಾ ‘ಹಾ’ ಎಂದು ಉತ್ಸಾಹಿತರಾದೆವು. ಮಾತ್ರವಲ್ಲ, ಇದುವರೆಗೂ ಇದ್ದ ಬೃಹತ್ ಮರಗಳು ಮರೆಯಾಗಿ ಈಗ ಹಸಿರು ತುಂಬಿದ ಗದ್ದೆಗಳ ರಮಣೀಯ ದೃಶ್ಯ. ಕ್ರಮೇಣ ಅಲ್ಲಲ್ಲಿ ಸೋಲಾರ್ ರಸ್ತೆ ದೀಪಗಳು ಕಾಣಿಸುತ್ತಾ ಚಿಕ್ಕ ಚಿಕ್ಕ ಮನೆಗಳ ಪುಟ್ಟ ಊರು ಮೈತೆರೆದುಕೊಂಡಿತು. ಆಗ ಹೆಚ್ಚೂಕಡಿಮೆ ಸಂಜೆ ನಾಲ್ಕು ಗಂಟೆಯ ಸಮಯ.
‘ಹಿಂದೆಲ್ಲಾ ಮರುದಿನ ಬೆಳಿಗ್ಗೆ ನಾಲ್ಕು ಗಂಟೆಯ ಹೊತ್ತಿಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ಬಾರಿ ನಿಮ್ಮನ್ನು ಹಿಂದಿನ ದಿನವೇ ಕರೆತರಲಾಗಿದೆ’ ಎಂದು ಡ್ರೈವರ್ ಹೇಳಿದಾಗ, ಊರಿನ ಸೌಂದರ್ಯ ನೋಡಿ, ಇಂದು ಬಂದಿದ್ದೇ ಒಳ್ಳೆಯದಾಯಿತು ಎಂದು ಮನಸ್ಸು ಹೇಳುತ್ತಿತ್ತು. ಇದು 2013ರ ಅಸೆಂಬ್ಲಿ ಎಲೆಕ್ಷನ್ ಸಮಯದಲ್ಲಿ, ನಕ್ಸಲೈಟರ ಪ್ರಭಾವವಿದ್ದ ಹಳ್ಳಿಯೊಂದಕ್ಕೆ ಚುನಾವಣಾ ಅಧಿಕಾರಿಯಾಗಿ ಕರ್ತವ್ಯಕ್ಕೆ ಹೋಗಿದ್ದಾಗಿನ ಅನುಭವ. ನಾವು ಅಲ್ಲಿಗೆ ಹೋಗಿ ಇಳಿಯುತ್ತಿದ್ದಂತೆಯೇ ಮಿಲಿಟರಿಯವರು ಆ ಪುಟ್ಟ ಶಾಲೆಯ ನೆಲ ಮತ್ತು ಚಾವಣಿಯ ಮೇಲೆ ನಾಲ್ಕೂ ದಿಕ್ಕಿಗೆ ಮುಖಮಾಡಿ ತಮ್ಮ ಗನ್‍ನ್ನು ಗುರಿಯಾಗಿಸಿ ಸಜ್ಜಾಗಿ ಪಹರೆ ನಿಂತರು.
ನಕ್ಸಲರು ಚುನಾವಣಾ ಪ್ರಕ್ರಿಯೆಯನ್ನು ಒಪ್ಪುವವರಲ್ಲ. ಅವರು ತಳೆಯುವ ಹಿಂಸೆಯ ದಾರಿಯನ್ನು ಒಪ್ಪುವುದು ಸಾಧ್ಯವಿಲ್ಲ. ಹೀಗಿದ್ದೂ ಹಳ್ಳಿಯ ಜನರಿಗೆ ನಕ್ಸಲರ ಕುರಿತಾದ ಧೋರಣೆ ಯಾವುದು ಎಂಬ ಬಗೆಗೆ ನನಗೆ ಕುತೂಹಲ ಇತ್ತು. ಅಲ್ಲಿ 250 ವೋಟುಗಳು ಮಾತ್ರ ಇದ್ದಿದ್ದರಿಂದ ಗಡಿಬಿಡಿ ಇರಲಿಲ್ಲ. ಜನ ಆರಾಮಾಗಿ ವೋಟು ಹಾಕಿದರು. ಪೋಲಿಂಗ್ ಏಜೆಂಟರು ಮಾತಿಗೆ ಸಿಕ್ಕರು. ಆ ಕಡಿಮೆ ಅವಕಾಶದಲ್ಲೂ ನಾನು ಆ ಜನರ ಭಾವವನ್ನು ತಿಳಿಯಲು ಪ್ರಯತ್ನಿಸಿದೆ. ಅವರ್‍ಯಾರೂ ಆತಂಕಿತರಾಗಿರಲಿಲ್ಲ, ಬಾಯಿ ಬಿಡುತ್ತಲೂ ಇರಲಿಲ್ಲ. ಆದರೆ ಕೆಲವರು, ‘ತಮ್ಮ ಜಮೀನುಗಳಿಗೆ ಹಕ್ಕುಪತ್ರವೂ ಇದ್ದಿರಲಿಲ್ಲ. ‘ಅವರು’ ಬಂದ ಮೇಲೆ ನಮ್ಮೆಡೆಗೆ ಎಲ್ಲರ ಗಮನ ಬಂದು ಈಗ ಕೆಲವು ಸೌಲಭ್ಯಗಳು ಸಿಕ್ಕಿವೆ’ ಎಂದು ನೇರವಾಗಿಯೇ ಹೇಳಿದರು. ಮಳೆಗಾಲದಲ್ಲಿ ಸಂಪೂರ್ಣ ನಡುದ್ವೀಪದಂತೆ ಆಗಿ ಇತರ ಪ್ರದೇಶಗಳೊಂದಿಗೆ ಸಂಪರ್ಕವನ್ನೇ ಕಳೆದುಕೊಳ್ಳುವ ಆ ಕಾಡ ನಡುವಿನ ಹಳ್ಳಿ ಹೀಗೆ ಗಮನ ಸೆಳೆಯುವಂತಾಗಿತ್ತು. ಎಲ್ಲವೂ ಸುಸೂತ್ರವಾಗಿ ನಡೆದು ನಾವು ಮರಳಿದೆವು.
ಕರ್ನಾಟಕದಲ್ಲಿ ನಕ್ಸಲರು ಕ್ರಮೇಣ ಮರೆಯಾಗಿದ್ದಾರೆ. 2013- 18ರ ಅವಧಿಯಲ್ಲಿ ಬಹಳಷ್ಟು ನಕ್ಸಲರು ಶರಣಾಗಿ ಸಾಮಾನ್ಯ ಜೀವನದೆಡೆ ಕಾಲಿಟ್ಟಿದ್ದಾರೆ. ಬಡಜನರಿಗೆ ಹೊಟ್ಟೆ ತುಂಬುವ ಅನ್ನ ಸಿಗುವುದಕ್ಕೂ ಈ ಬೆಳವಣಿಗೆಗಳಿಗೂ ನೇರ ಸಂಬಂಧ ಇದ್ದೇ ಇರುತ್ತದೆ. ಈ ಕಾರಣಕ್ಕೆ, ನಿಜವಾದ ಸಂತ್ರಸ್ತರಿಗೆ ಅನ್ನಭಾಗ್ಯದಂತಹ ಯೋಜನೆ ಈ ಕ್ಷಣಕ್ಕೂ ನಮ್ಮ ದೇಶದ ಅಗತ್ಯಗಳಲ್ಲೊಂದು. ಈ ಬಗ್ಗೆ ಶೈಕ್ಷಣಿಕವಾಗಿ ಅಧ್ಯಯನಗಳು ಆಗಬೇಕು. ಮತ್ತು ಹೀಗೆ ನಮ್ಮ ಕಣ್ಣ ಮರೆಯಲ್ಲಿರುವ ಜನರ ಸಮಸ್ಯೆಗಳನ್ನು ಅರಿಯುವ ಕೆಲಸಗಳಾಗಬೇಕು. ಹಾಗೆ ನೋಡಹೋದರೆ ದೇಶದಾದ್ಯಂತ ಬಡತನ ನಿವಾರಣೆಗೆ ಕೇಂದ್ರ, ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ನಿರ್ದಿಷ್ಟವಾದ, ಖಚಿತವಾದ ಯೋಜನೆಗಳು ಜಾರಿಯಾಗಬೇಕಿತ್ತು. ಆದರೆ ಇವು ಆಯಾ ರಾಜ್ಯಗಳ ವ್ಯಾಪ್ತಿಯಲ್ಲಿ ಉಳಿದಿದ್ದೇ ಹೆಚ್ಚು ಮತ್ತು ಬಡತನದ ಸ್ವರೂಪ ಬದಲಾಯಿತೇ ವಿನಾ ಬಡತನ ಬದಲಾಗಲಿಲ್ಲ.
ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಇರುವ ಜನರ ಸ್ಥಿತಿಗತಿಗಳಲ್ಲಿ ವ್ಯತ್ಯಾಸ ಇದೆ. ಕೂಲಿ ಹೆಚ್ಚು ಇರುವ, ಕಾರ್ಮಿಕರ ಅಲಭ್ಯತೆ ಇರುವ ಕರಾವಳಿ ಪ್ರದೇಶಗಳಿಗೂ, ಸರಿಯಾಗಿ ಕೂಲಿ ಸಿಗದ ಉತ್ತರ ಕರ್ನಾಟಕದ ಭಾಗಗಳಿಗೂ ತುಂಬಾ ಭಿನ್ನತೆ ಇದ್ದು, ಕೃಷಿಯಂತಹ ಕ್ಷೇತ್ರಗಳಲ್ಲಿರುವ ಕಾರ್ಮಿಕರ ಅಲಭ್ಯತೆಯನ್ನು ಸರಿದೂಗಿಸುವ ಯೋಜನೆಗಳು ಬರಬೇಕಾಗಿದೆ. ಇಷ್ಟಾಗಿ, ದೇಶದ ಇನ್ನಿತರ ಕೆಲವು ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕದ ಸ್ಥಿತಿ ಉತ್ತಮವೆನಿಸಿಬಿಡುತ್ತದೆ. ಇಂದಿಗೂ ನಮ್ಮಲ್ಲಿಗೆ ಬರುವ ಉತ್ತರ ಮತ್ತು ಈಶಾನ್ಯ ರಾಜ್ಯಗಳ ಕೂಲಿ ಕಾರ್ಮಿಕರು ಅಲ್ಲಿ ದಿನಕ್ಕೆ ನೂರೈವತ್ತು, ಇನ್ನೂರು ರೂಪಾಯಿಗೆ ದುಡಿಯುವುದು ಕೇಳಿ ಆಶ್ಚರ್ಯವಾಗುತ್ತದೆ. ಅಲ್ಲಿನ ಬಡಜನರ ದಾರುಣ ಸ್ಥಿತಿಯನ್ನು ತೀವ್ರವಾಗಿ ದಾಖಲಿಸಿರುವ ಮನೋರಂಜನ್ ಬ್ಯಾಪಾರಿಯವರ, ‘ಚಾಂಡಾಳನೊಬ್ಬನ ಆತ್ಮವಿಮರ್ಶೆ’ (ಅನು: ಡಾ. ಎಚ್.ಎಸ್.ನಾಗಭೂಷಣ) ಎಂಬ ಆತ್ಮಕಥನ ಓದುತ್ತಿದ್ದರೆ, ‘ಹೀಗೂ ಇದೆಯೇ?’ ಎಂದು ಕರುಳು ಚುರುಗುಟ್ಟುತ್ತದೆ.
ಕನಿಷ್ಠ ಒಂದು ಹೊತ್ತಿನ ಊಟಕ್ಕಾಗಿ ಸಿಗುವ ಯಾವ ಕೆಲಸವನ್ನಾದರೂ ಮಾಡಲು ತಯಾರಿದ್ದೂ, ವಾರಗಟ್ಟಲೆ ಉಪವಾಸ ಇರಬೇಕಾಗುವ, ಜಾತಿಯ ಕಾರಣಕ್ಕೆ ಅಮಾನುಷ ಹಿಂಸೆ ಅನುಭವಿಸುವ ಸ್ಥಿತಿಯೇ ಕೃತಿಯುದ್ದಕ್ಕೂ ತೆರೆದುಕೊಳ್ಳುತ್ತದೆ. ಅತ್ಯಂತ ಕಠಿಣ, ಕಲ್ಮಷ, ಕೊಳಕುಗಳ ನಡುವೆ ಮಾಡುವ ಕೆಲಸಗಳಿಗೂ ಸರಿಯಾದ ಕೂಲಿಯಿಲ್ಲ. ಜೈಲು ಪಾಲಾಗುವುದೇ ಉತ್ತಮ ಎಂಬ ಪರಿಸ್ಥಿತಿ. ಪ್ರತಿಭಾವಂತ ಲೇಖಕರಾದ ಬ್ಯಾಪಾರಿ, ಅಕ್ಷರ ಕಲಿತದ್ದು ಜೈಲಿನಲ್ಲಿ. ಬಂಗಾಳ ಮತ್ತು ಅತ್ಯಂತ ಶ್ರೀಮಂತ ಸಂಪನ್ಮೂಲವುಳ್ಳ ಭೂಭಾಗವಿದ್ದು (ಆಳುವವರು ಕೊಳ್ಳೆಹೊಡೆಯುವ) ಛತ್ತೀಸ್‍ಗಢದ ದಂಡಕಾರಣ್ಯದ ಅವರ ಬದುಕುಗಳನ್ನು ಅರ್ಥ ಮಾಡಿಕೊಳ್ಳಲು ಇದೊಂದು ಉದಾಹರಣೆ ಸಾಕಾಗಬಹುದು: ‘ಈ ದಿನ ಸಂಜೆ ಮನೆಗೆ ಸೋತು ಸುಣ್ಣವಾದ ಸೈನಿಕನಂತೆ ವಾಪಸಾದೆ. ಈ ನನ್ನ ಸ್ಥಿತಿಗೆ ಯಾರನ್ನು ಶಪಿಸಬೇಕು ಎಂದು ಗೊತ್ತಾಗಲಿಲ್ಲ. ಯಾರಿಗೂ ನ್ಯಾಯ ಸಿಗಲಿಲ್ಲ. ಮುಖ್ಯವಾಗಿ ನನ್ನ ಹೆಂಡತಿ, ಮಕ್ಕಳಿಗೆ. ಆಕೆಯದು ಅಂಗನವಾಡಿ ಕೆಲಸ. ಗುಡ್ಡಗಾಡಿನ ಏರಿಳಿತದ ಕೆಟ್ಟ ರಸ್ತೆಗಳಲ್ಲಿ ಇಪ್ಪತ್ತು ಮೈಲಿ ಸೈಕಲ್ ತುಳಿತ. ಮೊದಲನೆಯದು ಸಿಸೇರಿಯನ್, ಎರಡನೆಯದು ಫೋರ್‌ಸೆಪ್. ಇಷ್ಟರ ನಡುವೆ ನಸ್‍ಬಂದಿ ಶಸ್ತ್ರಚಿಕಿತ್ಸೆ. ದಿನಾ ಸಂಜೆ ಸುಸ್ತಾಗಿ ಆಕೆ ಮನೆಗೆ ಬರುವಾಗ ಸಂಕಟವಾಗುತ್ತಿತ್ತು’. 250 ರೂಪಾಯಿಗಳಿಗೆ ಹೀಗೆ ಆಕೆ ದುಡಿಯುತ್ತಿದ್ದಳು.
ಈಗಲೂ ಎಷ್ಟೋ ರಾಜ್ಯಗಳಲ್ಲಿ ಅಂಗನವಾಡಿ ಸಿಬ್ಬಂದಿಗೆ ಮೂರೋ, ನಾಲ್ಕೋ ಸಾವಿರ ಪಗಾರ ಅಷ್ಟೇ. ಬ್ಯಾಪಾರಿಯವರು ಹೇಳುವಂತೆ, ಅನಕ್ಷರಸ್ಥ ಬಡಜನ ಯಾವ ಕೆಂಪು ಪುಸ್ತಕವನ್ನೂ ಓದಿ ನಕ್ಸಲೈಟ್ ಆಗಿಲ್ಲ. ಅವರಿಗೆ ಅದು ಗೊತ್ತೇ ಇಲ್ಲ. ಅವರು ತಮ್ಮ ಅನುಭವಗಳಿಂದ ತಮ್ಮ ವಿಮೋಚಕರನ್ನು ಹಾರೈಸಿ ಕೂತಿರುತ್ತಾರೆ. ಆ ವಿಮೋಚಕರು ಸರ್ಕಾರ ಮತ್ತು ಸರ್ಕಾರದ ಪ್ರತಿನಿಧಿಗಳೇ ಆಗಿದ್ದಲ್ಲಿ ಅವರನ್ನೂ ಪ್ರೀತಿಯಿಂದಲೇ ನೋಡಿಕೊಳ್ಳುತ್ತಾರೆ. ಆಗ ಕಾಡ ಪೊದೆಗಳಿಂದ ಬಂದೂಕಿನ ಮೊನೆಗಳು ತಲೆಯೆತ್ತುವ ಸಾಧ್ಯತೆಯೇ ಇರುವುದಿಲ್ಲ.
ಹೊಟ್ಟೆ ತುಂಬಿದವರಲ್ಲಿ ಹಲವರ ಒಂದು ಸಾಮಾನ್ಯ ವರ್ತನೆಯನ್ನು ಗಮನಿಸಬೇಕು. ನಮ್ಮದೇ ತೆರಿಗೆ ಹಣದಿಂದ ಅತಿ ಶ್ರೀಮಂತರ ಲಕ್ಷಾಂತರ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದಾಗ ಆಕ್ರೋಶ ಕಾಣಿಸುವುದಿಲ್ಲ ಅಥವಾ ಅದು ಅವರಿಗೆ ಅರಿವಿಗೇ ಬರುವುದಿಲ್ಲ. ನಮ್ಮ ನೆಲ ಜಲ ಕಾಡು ಖನಿಜಗಳ ಸಂಪತ್ತನ್ನು ಯಾರೋ ಕೆಲವೇ ಕೆಲವು ವ್ಯವಹಾರಿಗಳು ಲೂಟಿ ಹೊಡೆದಾಗಲೂ ಏನೂ ಅನ್ನಿಸುವುದಿಲ್ಲ. ಬಡವರಿಗೆ ಕೊಡುವ ತುತ್ತಿನೆಡೆಗೆ ಮಾತ್ರ ಹೊಟ್ಟೆ ಹೊಸೆದುಕೊಳ್ಳುವಷ್ಟು ಅಸಹನೆ!
ಒಂದು ಕಾಯಿಲೆ, ಒಂದು ಮದುವೆಯು ಜೀವಮಾನದ ದುಡಿಮೆಯನ್ನೇ ತಿಂದು ತೇಗುವ ಕಾಲ ಇದು. ಸ್ವಾವಲಂಬನೆಯ ದಾರಿಯನ್ನು ತೋರುವುದೇ ಅತ್ಯುತ್ತಮ ದಾರಿ ಎಂಬೆಡೆಗೆ ಎರಡು ಮಾತಿಲ್ಲ. ಆ ದಾರಿ ತೋರಲು ಸರ್ಕಾರಗಳನ್ನು ಒತ್ತಾಯಿಸೋಣ. ಆದರೆ ಬಡವರ ಬಗೆಗಿನ ಅಸಹನೆಯ ವಿಕಾರ ಅಭಿವ್ಯಕ್ತಿಯ ಹಿಂದೆ ಇರುವುದು ಅವರು ಸದಾ ನಮ್ಮ ಸೇವಕರಷ್ಟೇ ಆಗಿರಬೇಕು ಎಂಬ, ಶತಮಾನಗಳಿಂದ ಪೋಷಿತವಾದ ಶ್ರೇಣೀಕೃತ, ತಪ್ತ ಮನಃಸ್ಥಿತಿಯೇ ಆಗಿದ್ದು, ಅರಿವಿನ ಕಣ್ಣಿನ ಪೊರೆ ಕಳಚಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.