ಕಳೆದ ತಿಂಗಳು ನಡೆದ ಸಂಸತ್ ಚುನಾವಣೆಯಲ್ಲಿ ರಾಷ್ಟ್ರೀಯವಾದಿ ಸ್ವೀಡನ್ ಡೆಮಾಕ್ರಟ್ಸ್ ಪಕ್ಷವು ಶೇಕಡ 17.5ರಷ್ಟು ಮತಗಳನ್ನು ಪಡೆಯಿತು ಎಂಬುದು ತಿಳಿದ ಹೊತ್ತಿನಲ್ಲಿ ನಾನು ನಮ್ಮ ಸ್ಟಾಕ್‌ಹೋಮ್‌ನ ಮನೆಯಲ್ಲಿ ನನ್ನ ಮಗಳಿಗೆ ಹಾಲುಣಿಸುತ್ತಿದ್ದೆ. ಸಾಂಪ್ರದಾಯಿಕ ಎಡ ಅಥವಾ ಬಲಪಂಥೀಯ ರಾಜಕೀಯ ಪಕ್ಷಗಳು ಬಹುಮತ ಪಡೆಯದ ಕಾರಣ, ನವ ನಾಝಿ ಆಂದೋಲನದಲ್ಲಿ ಬೇರು ಹೊಂದಿರುವ ಸ್ವೀಡನ್ ಡೆಮಾಕ್ರಟ್ಸ್ ಪಕ್ಷ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
ಚುನಾವಣೆಗೆ ಕೆಲವು ದಿನಗಳು ಇರುವಾಗ ನನ್ನ ಇ–ಮೇಲ್‌ಗೆ ಜನಾಂಗೀಯ ಸಂದೇಶ ಇರುವ ಮೇಲ್ ಬಂದಿತ್ತು. ಕಟ್ಟರ್ ಬಲಪಂಥೀಯ ಪಕ್ಷವೊಂದು ಕಳುಹಿಸಿದ್ದ ಮೇಲ್ ಅದು. ಆ ಮೇಲ್‌ನಲ್ಲಿ ವಲಸಿಗರನ್ನು ಉದ್ದೇಶಿಸಿ, ‘ಮನೆಗೆ ವಾಪಸ್ ಕಳುಹಿಸುವ ಸಂದರ್ಭ ಬಂದಿದೆ’ ಎಂದು ಹೇಳಲಾಗಿತ್ತು.
ಈ ಸಂದೇಶವು, ನಮ್ಮ ಕುಟುಂಬದ ಮಹಿಳೆಯರು ಹಾಗೂ ನಾವು ಹೊಂದಿರುವ ವಲಸೆಯ ಹಿನ್ನೆಲೆಯ ಬಗ್ಗೆ ಆಲೋಚಿಸುವಂತೆ ಮಾಡಿತು.
1900ರ ಆರಂಭದ ಕಾಲದಲ್ಲಿ ಸ್ವೀಡನ್ ದೇಶಕ್ಕೆ ಹೊರಗಿನಿಂದ ಜನ ವಲಸೆ ಬರುತ್ತಿರಲಿಲ್ಲ. ಸ್ವೀಡನ್‌ನಿಂದ ಜನ ಹೊರಗೆ ವಲಸೆ ಹೋಗುತ್ತಿದ್ದರು. ಆ ಕಾಲದಲ್ಲಿ, ದೇಶಬಿಟ್ಟು ಅಮೆರಿಕದ ಕಡೆ ಹೊರಟ ಲಕ್ಷಾಂತರ ಸ್ವೀಡಿಶ್ ಪ್ರಜೆಗಳ ಪೈಕಿ ನನ್ನ ಮುತ್ತಜ್ಜಿ (ತಂದೆಯ ಕಡೆ) ಆ್ಯಗ್ನೆಸ್ ಎಸ್ತರ್ ಅವರೂ ಒಬ್ಬರು. ಅವರು ಸ್ವಂತ ಜಮೀನು ತೊರೆದು ಎಲ್ಲಿಸ್ ದ್ವೀಪದಲ್ಲಿದ್ದ ತನ್ನ ಅಣ್ಣಂದಿರನ್ನು ಸೇರಿಕೊಳ್ಳಲು ಹೋದರು. ಆದರೆ ಅವರು ಅಲ್ಲಿ ಹೆಚ್ಚು ದಿನ ಇರಲಿಲ್ಲ. ನ್ಯೂಯಾರ್ಕ್‌ನ ಬಿಸಿಗಾಳಿಯನ್ನು ತಡೆದುಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ತನ್ನ ದೇಶದಲ್ಲಿ ಭೇಟಿಯಾಗಿದ್ದ ಕೆಂದಲೆಯ ಹುಡುಗನನ್ನು ಮದುವೆಯಾಗಲು ಅವರು ಬಯಸಿದರು.
ಇದಾದ ಸುಮಾರು 50 ವರ್ಷಗಳ ನಂತರ, ನನ್ನ ಅಜ್ಜಿ (ತಾಯಿಯ ಅಮ್ಮ) ಇಸಬೆಲ್ಲಾ ತಮ್ಮ ಇಬ್ಬರು ಚಿಕ್ಕ ಮಕ್ಕಳೊಂದಿಗೆ ಹುಟ್ಟೂರು ಸಾರ್ಡೀನಿಯಾ ತೊರೆಯಲು ತಯಾರಾಗುತ್ತಿದ್ದರು. ಆಗ ಅವರಿಗೆ 18 ವರ್ಷ ವಯಸ್ಸು. ಅವರೆಲ್ಲ ಈಶಾನ್ಯ ಫ್ರಾನ್ಸ್‌ನ ಆಲ್ಸೇಸ್-ಲೊರೇನ್ ಪ್ರದೇಶದ ಕಲ್ಲಿದ್ದಿಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಅಜ್ಜನನ್ನು ಸೇರಲು ಹೋಗುತ್ತಿದ್ದರು. ಅಜ್ಜನದ್ದು ಅಪಾಯಕಾರಿ ಕೆಲಸ. ಆದರೆ, ಸಾರ್ಡೀನಿಯಾದ ಬಹುಪಾಲು ಜನರಿಗೆ ಆಗ ಇದ್ದ ಆಯ್ಕೆಗಳಿಗಿಂತ ಇದು ಉತ್ತಮವಾಗಿತ್ತು. ಎರಡನೆಯ ಮಹಾ
ಯುದ್ಧದ ನಂತರದಲ್ಲಿ ಇಸಬೆಲ್ಲಾ ಮತ್ತು ಅವರ ಕುಟುಂಬಕ್ಕೆ ಅದೆಂತಹ ಬಡತನ ಎದುರಾಯಿತೆಂದರೆ, ತಮ್ಮ ಕೊನೆಯ ಮಗಳ ಪೋಷಣೆಯ ದಿನಗಳಲ್ಲಿ ಅವರಿಗೆ ತಿನ್ನಲು ಬ್ರೆಡ್ ಹಾಗೂ ಹುರಿದ ಈರುಳ್ಳಿ ಬಿಟ್ಟರೆ ಬೇರೇನೂ ಇರುತ್ತಿರಲಿಲ್ಲ.
ಭವಿಷ್ಯವನ್ನು ಅರಸುತ್ತಾ, ಆಗ ಎರಡು ವರ್ಷದವಳಾಗಿದ್ದ ನನ್ನ ತಾಯಿ ಹಾಗೂ ಆಕೆಯ ಪುಟ್ಟ ತಮ್ಮನನ್ನು ಕಟ್ಟಿಕೊಂಡು ಅಜ್ಜಿ ಹಡಗೊಂದರಲ್ಲಿ ಮೆಡಿಟರೇನಿಯನ್ ಸಮುದ್ರ ದಾಟಿದಳು. ಇಂದು ಕೂಡ ಹಲವರು ಈ ಸಮುದ್ರ ದಾಟುತ್ತಿದ್ದಾರೆ ಮತ್ತು ಇಂದಿನ ಪರಿಸ್ಥಿತಿ ಇನ್ನೂ ಕೆಟ್ಟದ್ದಾಗಿದೆ. ಆಕೆಯ ಕುಟುಂಬ ನಂತರ ಪ್ಯಾರಿಸ್‌ನಲ್ಲಿ ನೆಲೆಸಿತು. ಅಲ್ಲೇ ಒಂದು ಉಪಾಹಾರ ಗೃಹ ತೆರೆದು, ನಿಧಾನವಾಗಿ ಒಳ್ಳೆಯ ಬದುಕನ್ನು ಕಟ್ಟಿಕೊಂಡರು.
ನನ್ನ ತಾಯಿ ಕೂಡ ವಲಸಿಗಳು. ತಂದೆ ಸ್ವೀಡನ್ ಮೂಲದವರು. 1974ರ ಒಂದು ಬೇಸಿಗೆಯ ರಾತ್ರಿ ನನ್ನ ತಾಯಿ, ಅಂದರೆ ಆಗ 19 ವರ್ಷ ವಯಸ್ಸಿನವಳಾಗಿದ್ದ ಮೌರಾ ಇಸಬೆಲ್, ನನ್ನ ತಂದೆಯನ್ನು ಪ್ಯಾರಿಸ್ಸಿನ ಕೆಫೆಯೊಂದರಲ್ಲಿ ಭೇಟಿಯಾದರು. ಒಂದೇ ವರ್ಷದಲ್ಲಿ ಇಬ್ಬರೂ ಪ್ಯಾರಿಸ್‌ನಲ್ಲಿ ಮದುವೆ ಆದರು. ಆದರೆ, ಸ್ವೀಡನ್ನಿನಲ್ಲಿ ನೆಲೆ ಕಂಡುಕೊಳ್ಳಲು ನಿರ್ಧರಿಸಿದರು.
ನನ್ನ ತಾಯಿ ಇಲ್ಲಿಗೆ ಮೊದಲ ಬಾರಿಗೆ ಬಂದಾಗ ಸರ್ಕಾರಿ ಅಧಿಕಾರಿಯೊಬ್ಬ ‘ವಿದೇಶೀಯಳಾದ ನೀನು ಮನೆಗೆಲಸ ಮಾಡಬಹುದು. ನಿನ್ನ ವಿದ್ಯಾರ್ಹತೆ ಲೆಕ್ಕಕ್ಕೆ ಬರುವುದಿಲ್ಲ’ ಎಂದು ಹೇಳಿದ್ದನಂತೆ. ಇದರಿಂದ ವಿಚಲಿತರಾಗದ ನನ್ನ ತಾಯಿ ಬಹುಬೇಗ ಸ್ವೀಡಿಷ್ ಭಾಷೆ ಕಲಿತು, ಒಂದು ನೌಕರಿ ಗಿಟ್ಟಿಸಿಕೊಂಡರು. ಇಂದಿಗೂ ಅವರು ಗ್ರಂಥಪಾಲಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಆದರೆ ನೀವು ಎಷ್ಟೇ ಹೊಂದಿಕೊಂಡರೂ, ಏಕರೂಪಿ ಸಮಾಜ ಇರುವ ಸ್ವೀಡನ್ನಿನಲ್ಲಿ ನೀವು ಜೀವಮಾನವಿಡೀ ‘ವಲಸಿಗ’ ಎಂಬ ಹಣೆಪಟ್ಟಿ ಕರೆಸಿಕೊಳ್ಳಬೇಕಾಗಬಹುದು. ಒಮ್ಮೆ ಗ್ರಂಥಾಲಯದಲ್ಲಿ ಓದುಗನೊಬ್ಬ ನನ್ನ ತಾಯಿಯನ್ನು ಕಂಡು ‘ಮನೆಗೆ ವಾಪಸ್ಸಾಗು’ ಎಂದು ಕಿರುಚಿದ್ದನಂತೆ. ಈ ಸ್ಥಿತಿ ನನ್ನ ತಾಯಿಗೆ ಬರಬಹುದಾದರೆ ಸಮಾಜದ ಪರಿಧಿಗೆ ತಳ್ಳಲ್ಪಟ್ಟಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರ ಪಾಡು ಏನು ಎಂದು ನಾನು ಯೋಚಿಸುತ್ತೇನೆ.
ಹೊರ ದೇಶಗಳಲ್ಲಿ ಹುಟ್ಟಿದ ಸ್ವೀಡನ್ ವಾಸಿಗಳಿಗೆ, ಅವರು ಹುಟ್ಟಿದ ದೇಶಕ್ಕೆ ಮರಳಲು ‘ಸಹಾಯ’ ಮಾಡುವ ಬಯಕೆ ಸ್ವೀಡನ್ ಡೆಮಾಕ್ರಟ್ಸ್ ಪಕ್ಷದವರದು. ‘ವಲಸಿಗರು ಸ್ವೀಡನ್ನಿನವರಲ್ಲದ ಕಾರಣ ಅವರಿಗೆ ಕೆಲಸ ಹುಡುಕಿಕೊಳ್ಳಲು ಆಗುತ್ತಿಲ್ಲ’ ಎಂದು ಆ ಪಕ್ಷದ ನಾಯಕರೊಬ್ಬರು ಟಿ.ವಿ. ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಇತಿಹಾಸವನ್ನು ಅವಲೋಕಿಸಿದರೆ, ಸ್ವೀಡನ್ ತನ್ನಲ್ಲಿ ಆಶ್ರಯ ಬೇಡಿ ಬಂದವರ ಪಾಲಿಗೆ ಉದಾರ ನೀತಿಗಳನ್ನು ಹೊಂದಿತ್ತು. ಯುದ್ಧ ಹಾಗೂ ಭಯೋತ್ಪಾದನೆಯ ಕಾರಣದಿಂದಾಗಿ ಸಿರಿಯಾ, ಆಫ್ಘಾನಿಸ್ತಾನ ಮತ್ತು ಇರಾಕ್‌ನಿಂದ ಬಂದ ನಿರಾಶ್ರಿತರಲ್ಲಿ ಅತಿ ಹೆಚ್ಚಿನ ಜನರನ್ನು ಕರೆದುಕೊಂಡ ದೇಶಗಳಲ್ಲಿ ಸ್ವೀಡನ್ ಸಹ ಒಂದು. ನಾನು ಇವನ್ನೆಲ್ಲ ಬರೆಯುತ್ತಿರುವ ಹೊತ್ತಿನಲ್ಲಿ, ‘ಮಾಡರೇಟ್ ಪಾರ್ಟಿ’ ಹಾಗೂ ಬಲಪಂಥೀಯ ಒಲವುಳ್ಳ ಮೈತ್ರಿಕೂಟದ ನಾಯಕ ಉಲ್ಫ್ ಕ್ರಿಸ್ಟರ್‌ಸನ್ ಅವರಿಗೆ ಸರ್ಕಾರ ರಚಿಸುವ ಜವಾಬ್ದಾರಿ ವಹಿಸಲಾಗಿದೆ. ಕ್ರಿಸ್ಟರ್‌ಸನ್ ಈಗ ನೆರವು ಯಾಚಿಸಿ ಸ್ವೀಡನ್ ಡೆಮಾಕ್ರಟ್ಸ್‌ಗಳ ಕಡೆ ನೋಟ ಹರಿಸುವ ಸಾಧ್ಯತೆ ಇದೆ.
ಕೇವಲ ಒಂದು ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ವಲಸೆಗಾಗಿ ತೆರಬೇಕಾದ ಬೆಲೆಯ ವಿಚಾರ ಮತ್ತೆ ಮತ್ತೆ ಚರ್ಚೆಗೆ ಬರುತ್ತದೆ. ಆದರೆ ದೇಶದ ಜನಸಂಖ್ಯೆಯಲ್ಲಿ ಅಂದಾಜು ಐದನೆಯ ಒಂದರಷ್ಟು ಜನ ವಿದೇಶಗಳಲ್ಲಿ ಜನಿಸಿದವರು. ಜನರನ್ನು ಸಂಖ್ಯೆಯ ಮಟ್ಟಕ್ಕೆ ಇಳಿಸಿ ನೋಡುವ ಚರ್ಚೆಯ ನಡುವೆ, ವಲಸಿಗರು ದೇಶದ ಬೊಕ್ಕಸಕ್ಕೆ ಮುಂದೆ ಎಷ್ಟು ಕೊಡುಗೆ ನೀಡಬಲ್ಲರು ಎಂಬ ಅಂಶ ಕಳೆದುಹೋಗಿದೆ. ವಯಸ್ಸಾದವರ ಸಂಖ್ಯೆ ಹೆಚ್ಚಿದಂತೆಲ್ಲ ಬೇರೆ ಬೇರೆ ಕ್ಷೇತ್ರಗಳಲ್ಲಿಕೆಲಸಗಾರರ ಕೊರತೆ ಕೂಡ ಹೆಚ್ಚಲಿದೆ. ವಲಸಿಗರನ್ನು ಸ್ವಾಗತಿಸದಿದ್ದರೆ, ಅವರಿಗೆ ವಾಸಿಸಲು ಜಾಗ ಕೊಡದಿದ್ದರೆ ಈ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ?
ನಾನು, ನನ್ನ ಅಣ್ಣ ಹುಟ್ಟಿದ ನಂತರ, ನನ್ನ ತಾಯಿಗೆ 1980ರ ದಶಕದ ಮಧ್ಯಭಾಗದಲ್ಲಿ ಸ್ವೀಡನ್ನಿನ ಪೌರತ್ವ ಸಿಕ್ಕಿತು. ತಾನು ತನ್ನ ಮಕ್ಕಳಿಗಿಂತ ಭಿನ್ನವಾದ ಪೌರತ್ವ ಹೊಂದಿರುವುದು ಅಪಾಯ ತರಬಹುದು ಎಂದು ಅವರಿಗೆ ಅನಿಸಿತ್ತು. ಆಕೆಯಲ್ಲಿ ಮೂಡಿದ ಭಯಕ್ಕೆ ಆಧಾರ ಇತ್ತೇ ಎಂಬುದನ್ನು ಪತ್ತೆಮಾಡುವ ಪ್ರಮೇಯ ಎಂದಿಗೂ ಬಾರದಿರಲಿ ಎಂದು ಆಶಿಸುವೆ.
ನನ್ನ ಮಕ್ಕಳ ಬಗ್ಗೆ ಯೋಚಿಸಿ, ಅವರು ನಮ್ಮ ಮನೆಯ ಮಹಿಳೆಯರ ಹಾದಿಯಲ್ಲೇ ಸಾಗಲಿ ಎಂದು ಆಶಿಸುತ್ತೇನೆ. ಅವರಿಗೆ ತಾವು ಬಯಸಿದ ವ್ಯಕ್ತಿಯನ್ನು ಪ್ರೀತಿಸುವ ಅವಕಾಶ ಇರಲಿ. ಆ ವ್ಯಕ್ತಿಯನ್ನು ಸ್ವೀಡನ್ ಸಮಾಜ ಸ್ವಾಗತಿಸುವಂತಾಗಲಿ.
ದಿ ನ್ಯೂಯಾರ್ಕ್ ಟೈಮ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.