ಚಾವಣಿಯಿಲ್ಲದ ಗೋಡೆಯೊಂದಕ್ಕೆ ಆತುಕೊಂಡು ಕುಳಿತ ಆ ಮಕ್ಕಳು ಪಾಠವನ್ನೇನೋ ಕಲಿಯಬೇಕಿದೆ. ಆದರೆ, ಅಲ್ಲಿ ಕಲಿಸಲು ಮೇಷ್ಟ್ರೇ ಇಲ್ಲ. ಅದೇ ಮಕ್ಕಳ ಗುಂಪಿನಲ್ಲಿದ್ದ ಹುಡುಗನೊಬ್ಬ ಕೈಯಲ್ಲಿ ಪುಸ್ತಕ ಹಿಡಿದು ನಿಂತ ಚಿತ್ರವೊಂದು ಮನ ಕಲಕುವಂತೆ ಮಾಡುತ್ತದೆ. ಅದಕ್ಕಿಂತ ಹೆಚ್ಚಾಗಿ ಕಾಡುವ, ಹೃದಯವನ್ನೇ ಹಿಂಡಿಬಿಡುವ, ಕಣ್ಣೀರಿನ ಧಾರೆ ಹರಿಸುವ ನೋಟವೆಂದರೆ, ರೆಡ್‌ಕ್ರಾಸ್‌ನ ಕಾಬೂಲ್ ಆರೈಕೆ ಕೇಂದ್ರದಲ್ಲಿ ಬಿಡಾರ ಹೂಡಿರುವ ಮಕ್ಕಳು ಅನುಭವಿಸುತ್ತಿರುವ ಕೊನೆಯಿಲ್ಲದ ಸಂಕಟದ್ದು. ದೀಪಾವಳಿಯಲ್ಲಿ ನಾವು ಪಟಾಕಿ ಸಿಡಿಸುವಂತೆ ಎಲ್ಲೆಂದರಲ್ಲಿ ಬಾಂಬ್ ಸ್ಫೋಟಿಸುವ ಈ ಭೂಮಿಯಲ್ಲಿ ಕೈ ಕಳೆದುಕೊಂಡ, ಕಾಲು ಮುರಿದುಕೊಂಡ ಪುಟಾಣಿಗಳು ಬಾಲ್ಯವನ್ನೂ ಕಳೆದುಕೊಂಡು ಹಾಸಿಗೆಯಲ್ಲಿ ಮುದುರಿ ಮಲಗಿದ ದೃಶ್ಯ ದುಃಖವನ್ನು ಉಮ್ಮಳಿಸುವಂತೆ ಮಾಡುತ್ತದೆ. ಈ ನೆಲದ ಸೂರುಗಳಲ್ಲಿ ಸೂರ್ಯನ ಕಿರಣಗಳ ಸುಳಿವಿಲ್ಲದೆ ಹಗಲಿನಲ್ಲೂ ಕತ್ತಲು ಆವರಿಸಿದೆ. ಯಾರಾದರೂ ಒಳನುಗ್ಗಿ ತಪಾಸಣೆ ಮಾಡಿಯಾರು ಎಂಬ ಭಯದಿಂದ ಮನೆಯಲ್ಲಿನ ಮಹಿಳೆಯರೂ ಬುರ್ಖಾ ಧರಿಸಿ ಕುಳಿತಿದ್ದಾರೆ.
ಹೌದು, ಇದು ಅಫ್ಗಾನಿಸ್ತಾನ. ರೆಡ್‌ಕ್ರಾಸ್‌ನ ಆರೈಕೆ ಕೇಂದ್ರಗಳಲ್ಲಿ ಕೈ–ಕಾಲು ಮುರಿದುಕೊಂಡು ಬಿದ್ದ ಮಕ್ಕಳಂತೆಯೇ ಮಾನವೀಯ ಅಂತಃಕರಣವೂ ಊನಗೊಂಡು ಅಂಗಾತ ಮಲಗಲು ಕಾರಣವಾದ ಭೂಮಿ.
ಅಮೆರಿಕನ್ನರೇನೋ ಇಲ್ಲಿನ ತಮ್ಮ ಸುದೀರ್ಘ ಸಾಗರೋತ್ತರ ಸಮರವನ್ನು ಈಗ ಕೊನೆಗೊಳಿಸಿದ್ದಾರೆ. ಬ್ರೌನ್ ವಿಶ್ವವಿದ್ಯಾಲಯದ ಲೆಕ್ಕಾಚಾರದ ಪ್ರಕಾರ, 2001ರಿಂದ ಇಲ್ಲಿಯವರೆಗೆ ಅಮೆರಿಕ, ಅಫ್ಗಾನಿಸ್ತಾನದಲ್ಲಿ ಸಾರಿದ ಯುದ್ಧಕ್ಕಾಗಿ ಮಾಡಿದ ವೆಚ್ಚ 2.26 ಸಾವಿರ ಕೋಟಿ ಅಮೆರಿಕನ್ ಡಾಲರ್ (ಸುಮಾರು 170 ಲಕ್ಷ ಕೋಟಿ ರೂಪಾಯಿ). ಇನ್ನು ಅಫ್ಗಾನಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ತನ್ನ ಸೇನೆಗಾಗಿ ಅಮೆರಿಕದ ರಕ್ಷಣಾ ಇಲಾಖೆ ವ್ಯಯಿಸಿದ್ದು ಬರೋಬ್ಬರಿ ಸಾವಿರ ಕೋಟಿ ಅಮೆರಿಕನ್ ಡಾಲರ್ (71.45 ಲಕ್ಷ ಕೋಟಿ ರೂಪಾಯಿ). ಈ ಅವಧಿಯಲ್ಲಿ ಆಫ್ಗನ್ ನದಿಗಳಲ್ಲಿ ಎಷ್ಟು ನೀರು ಹರಿದಿದೆಯೋ ಗೊತ್ತಿಲ್ಲ. ಆದರೆ, ಅಮೆರಿಕದ ಹಣವಂತೂ ನೀರಿನಂತೆ ಹರಿದಿದೆ.
ಸೇನೆಯ ಸಾಹಸದಲ್ಲಿ, ಮದ್ದು ಗುಂಡಿನ ಸದ್ದಿನಲ್ಲಿ ಎರಡು ದಶಕಗಳೇ ಉರುಳಿ ಹೋಗಿವೆ, ಅಮೆರಿಕ ತನ್ನ 4,500 ಸೈನಿಕರನ್ನೂ ಕಳೆದುಕೊಂಡಿದೆ. ‘ಸಾಮ್ರಾಟರ ಸ್ಮಶಾನ ಭೂಮಿ’ ಎಂಬ ಚಾರಿತ್ರಿಕ ಹಣೆಪಟ್ಟಿಯನ್ನು ಅಂಟಿಸಿಕೊಂಡ ಈ ನೆಲದಲ್ಲಿ ಬೂದಿಯಿಂದ ಎದ್ದುಬಂದ ತಾಲಿಬಾನ್ ಮತ್ತೆ ಪಟ್ಟಾಭಿಷೇಕ ಮಾಡಿಕೊಂಡಿದೆ. ಅಫ್ಗಾನಿಸ್ತಾನದಲ್ಲಿ ನಡೆಸಿದ ಯುದ್ಧದ ಉಸ್ತುವಾರಿ ನೋಡಿಕೊಂಡ ಅಮೆರಿಕದ ಐದನೇ ಅಧ್ಯಕ್ಷರು ಈ ಘಟನೆಗೆ ಈಗ ಮೌನ ಪ್ರೇಕ್ಷಕರಾಗಿ ಕೈಕಟ್ಟಿ ಕುಳಿತಿದ್ದಾರೆ.
ಆಫ್ಗನ್ ರಾಷ್ಟ್ರೀಯ ಸೇನೆಯು ಮೂರು ಲಕ್ಷ ಸೈನಿಕರ ಬಲಾಢ್ಯ ದಂಡು. ಜಗತ್ತಿನ ಅತ್ಯಂತ ಶಕ್ತಿಶಾಲಿ ಸೈನ್ಯದಿಂದ ತರಬೇತಿಯನ್ನೂ ಪಡೆದಿದ್ದ ಪಡೆ ಅದು. ಜತೆಗಿದ್ದ ವಿದೇಶಿ ದಂಡುಗಳು ಅಫ್ಗಾನಿಸ್ತಾನದಿಂದ ಕಾಲು ಕೀಳುತ್ತಿದ್ದಂತೆಯೇ 80 ಸಾವಿರ ಉಗ್ರರ ಬಲದ ತಾಲಿಬಾನ್‌ನ ಮುಂದೆ ರಾಷ್ಟ್ರೀಯ ಸೇನೆ ಮಂಡಿಯೂರಿದೆ. ಒಂದಿನಿತೂ ಪ್ರತಿರೋಧ ತೋರದೆ ಶರಣಾಗಿದೆ. ಅಧ್ಯಕ್ಷರಾಗಿದ್ದ ಆಶ್ರಫ್ ಘನಿ ಅವರಂತೂ ದೇಶದಿಂದಲೇ ಪಲಾಯನ ಮಾಡಿದ್ದಾರೆ. ಅಧ್ಯಕ್ಷರಂತೆಯೇ ದೇಶದಿಂದ ಹೊರಹೋಗಲು ಸಾವಿರಾರು ಜನ ಮಾಡಿದ ದುಸ್ಸಾಹಸ ಹೇಗಿತ್ತೆಂದರೆ, ಕಾಬೂಲ್ ವಿಮಾನ ನಿಲ್ದಾಣದ ಬಹು ಎತ್ತರದ ಆವರಣ ಗೋಡೆಯನ್ನೂ ಅವರು ಏರಿಬಿಟ್ಟಿದ್ದರು. ಹಾರಲು ಸಜ್ಜಾದ ಅಮೆರಿಕದ ವಿಮಾನದ ರೆಕ್ಕೆಗಳನ್ನೂ ಬಿಡದಂತೆ ಏರಿ ಜಾರಿಬಿದ್ದು ಪ್ರಾಣ ತೆತ್ತರು.
ಜಗತ್ತಿನ ಕಡು ಬಡತನದ ರಾಷ್ಟ್ರಗಳಲ್ಲಿ ಒಂದೆನಿಸಿದೆ ಅಫ್ಗಾನಿಸ್ತಾನ. ಈ ದೇಶದ ಶೇ 90ರಷ್ಟು ಜನರ ದೈನಂದಿನ ಆದಾಯ 150 ರೂಪಾಯಿಗಿಂತ ಕಡಿಮೆ. ಅದರ ಮೇಲೆ ಸದಾ ಯುದ್ಧದ ಕರಿನೆರಳು ಬೇರೆ. ಉಗ್ರರ ಬಂಡಾಯದ ಅಗ್ನಿಕುಂಡದಲ್ಲಿ ಅವರ ಬದುಕು ಬೆಂದುಹೋಗಿದೆ. ಈ ಮಧ್ಯೆ, ಅಲ್ಲಿನ ರಾಷ್ಟ್ರೀಯ ರಕ್ಷಣಾ ವ್ಯವಸ್ಥೆಯ ಎಲ್ಲ ಪದರುಗಳು ಇಸ್ಪೀಟ್ ಎಲೆಗಳಂತೆ ಉದುರಿಹೋಗಿವೆ. ರಾಜಧಾನಿ ಕಾಬೂಲ್‌ಅನ್ನು ಒಂದೇ ಒಂದು ಗುಂಡು ಹಾರಿಸದೆ ತಾಲಿಬಾನ್ ತನ್ನ ವಶಕ್ಕೆ ತೆಗೆದುಕೊಂಡಿದೆ. ತಾಲಿಬಾನ್ ಕೈ ಮೇಲಾಗುತ್ತಿದ್ದಂತೆಯೇ ಕೆಲಸ ಮಾಡುವ, ಮುಕ್ತವಾಗಿ ಓಡಾಡುವ ಸ್ವಾತಂತ್ರ್ಯವನ್ನೇ ಕಳೆದುಕೊಳ್ಳುವ ಭೀತಿ ದೇಶದ ಮಹಿಳೆಯರನ್ನು ಆವರಿಸಿದೆ.
ಏನಿದು ತಾಲಿಬಾನ್?
ತಾಲಿಬಾನ್ ಎಂದರೆ ಪ್ಯಾಸ್ತೊ ಭಾಷೆಯಲ್ಲಿ ‘ವಿದ್ಯಾರ್ಥಿಗಳು’ ಎಂದರ್ಥ. ಅಫ್ಗಾನಿಸ್ತಾನದ ದಕ್ಷಿಣ ಭಾಗದ ಪ್ರಮುಖ ನಗರ ಕಂದಹಾರದಲ್ಲಿ ಈ ಗುಂಪು ಮೊದಲ ಬಾರಿಗೆ ಬೆಳಕಿಗೆ ಬಂದಿದ್ದು 1994ರಲ್ಲಿ. 1980ರ ದಶಕದಲ್ಲಿ ಸೋವಿಯತ್ ಒಕ್ಕೂಟದ ಸೈನ್ಯವನ್ನು ಎದುರು ಹಾಕಿಕೊಂಡಿದ್ದ ಮುಜಾಹಿದೀನ್ ಸಂಘಟನೆಯ ಸದಸ್ಯರೇ ಮುಂದೆ ತಾಲಿಬಾನ್‌ನೊಂದಿಗೆ ಗುರುತಿಸಿಕೊಂಡರು. ಪಾಕಿಸ್ತಾನದಿಂದ ಈ ಸಂಘಟನೆಗೆ ಮದ್ದು ಗುಂಡುಗಳು ಸರಬರಾಜು ಆಗಿದ್ದು, ಅಗತ್ಯ ನೆರವೂ ಸಿಕ್ಕಿದ್ದು ಈಗ ಗುಟ್ಟಿನ ಸಂಗತಿಯಾಗಿ ಏನೂ ಉಳಿದಿಲ್ಲ.
ಅಧಿಕಾರಕ್ಕೆ ಬಂದರೆ ಇಸ್ಲಾಮಿಕ್ ಕಾನೂನು ಜಾರಿಗೆ ತರುವುದಾಗಿ ಘೋಷಿಸಿದ್ದ ತಾಲಿಬಾನ್ ಸಂಘಟನೆ 1996ರಲ್ಲಿ ತಾನೇ ಸರ್ಕಾರವನ್ನು ರಚಿಸಿತ್ತು. ಮಹಿಳೆಯರು ಅಡಿಯಿಂದ ಮುಡಿಯವರೆಗೆ ಬಟ್ಟೆ ಧರಿಸುವುದನ್ನು ಕಡ್ಡಾಯಗೊಳಿಸಿದ್ದ ತಾಲಿಬಾನ್ ಸರ್ಕಾರ, ಯಾವುದೇ ಮಹಿಳೆ ಒಬ್ಬಂಟಿಯಾಗಿ ಪ್ರಯಾಣ ಮಾಡದಂತೆಯೂ ನಿರ್ಬಂಧ ವಿಧಿಸಿತ್ತು. ಟಿ.ವಿ ವೀಕ್ಷಿಸದಂತೆ, ಸಂಗೀತ ಆಲಿಸದಂತೆ ಪ್ರತಿಬಂಧಕಾಜ್ಞೆ ಹೊರಡಿಸಿತ್ತು. ಇಸ್ಲಾಮೇತರ ಎಲ್ಲ ರಜಾ ದಿನಗಳನ್ನು ರದ್ದುಗೊಳಿಸಿತ್ತು.
ತಾಲಿಬಾನ್ ನಿಯಂತ್ರಿತ ಅಫ್ಗಾನಿಸ್ತಾನದಲ್ಲಿ ನೆಲೆ ಪಡೆದಿದ್ದ ಅಲ್ ಕೈದಾ ಮುಖ್ಯಸ್ಥ ಒಸಾಮಾ ಬಿಲ್ ಲಾಡೆನ್ ಇಶಾರೆಯಲ್ಲಿ ಅಮೆರಿಕದ ಮೇಲೆ ನಡೆದ 9/11 ದಾಳಿ ದೇಶದ ಚಿತ್ರಣವನ್ನೇ ಬದಲಾಯಿಸಿಬಿಟ್ಟಿತು. 9/11 ದಾಳಿ ನಡೆದ ಒಂದು ತಿಂಗಳ ಬಳಿಕ ಅಫ್ಗಾನಿಸ್ತಾನಕ್ಕೆ ಬಂದಿಳಿದು ಠಿಕಾಣಿ ಹೂಡಿದ ಅಮೆರಿಕದ ಸೈನ್ಯ, ಅಲ್ ಕೈದಾ ಸಂಘಟನೆಯ ‘ಸುರಕ್ಷಿತ ಸ್ವರ್ಗ’ವನ್ನು ಧ್ವಂಸ ಮಾಡುವ ಕಾರ್ಯಾಚರಣೆಯನ್ನೂ ಆರಂಭಿಸಿತು. ತಾಲಿಬಾನ್ ಉಗ್ರರನ್ನು ಅಮೆರಿಕ ಹಾಗೂ ಅದರ ಸಹವರ್ತಿ ರಾಷ್ಟ್ರಗಳ ಸೇನೆ ಸಂಪೂರ್ಣವಾಗಿ ಹತ್ತಿಕ್ಕಿತು. ತಾಲಿಬಾನ್ ಅಧಿಕಾರವನ್ನೂ ಕಳೆದುಕೊಂಡಿತು. ಅಧಿಕಾರ ಕಳೆದುಕೊಂಡ ಮೇಲೂ ಆ ಸಂಘಟನೆಯ ಉಗ್ರರು ದಂಗೆ ಎದ್ದು, ಅಮೆರಿಕದ ಸೈನ್ಯದ ಮೇಲೆ ಮುಗಿಬಿದ್ದು ಸೆಣಸುತ್ತಲೇ ಇದ್ದರು. ಆಫ್ಗನ್ ಸರ್ಕಾರದ ಬೆಂಬಲಕ್ಕೆ ನಿಂತಿದ್ದ ಅಮೆರಿಕ, ತಾಲಿಬಾನ್ ಬಲವನ್ನು ಹಿಮ್ಮೆಟ್ಟಿಸುತ್ತಲೇ ಇತ್ತು. ಕೆಲವೊಮ್ಮೆ ಕೈ ಮೇಲಾದರೂ ಹಲವು ಸಲ ಪೆಟ್ಟು ತಿಂದ ತಾಲಿಬಾನ್ ಮಾತ್ರ ಕಳೆದ ಎರಡು ದಶಕಗಳಲ್ಲಿ ಹೋರಾಟವನ್ನು ಬಿಟ್ಟುಕೊಟ್ಟಿರಲಿಲ್ಲ.
ಡ್ರಗ್ಸ್ ಕಾಳದಂಧೆಯಲ್ಲಿ ತೊಡಗಿಸಿಕೊಂಡ ತಾಲಿಬಾನ್, ಅದರಿಂದಲೇ ದೊಡ್ಡ ವರಮಾನವನ್ನು ಗಳಿಸುತ್ತಿದೆ. ಅದೇ ಈ ಸಂಘಟನೆಯ ಹಣಕಾಸಿನ ಮುಖ್ಯ ಮೂಲವಾಗಿದೆ ಎಂಬುದು ಆಫ್ಗನ್ ವ್ಯವಹಾರಗಳ ತಜ್ಞರು ನೀಡುವ ಮಾಹಿತಿ. ಕಳೆದ ವರ್ಷ ನ್ಯಾಟೊ, ತಾಲಿಬಾನ್ ಕುರಿತು ಗುಪ್ತ ವರದಿಯೊಂದನ್ನು ಸಿದ್ಧಪಡಿಸಿತ್ತು. ಆ ವರದಿಯಲ್ಲಿನ ವಿವರಗಳು ರೇಡಿಯೊ ಫ್ರೀ ಯುರೋಪ್, ರೇಡಿಯೊ ಲಿಬರ್ಟಿಗೆ ಸೋರಿಕೆಯಾಗಿದ್ದವು. ಗಣಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳಿಂದಲೂ ತಾಲಿಬಾನ್‌ಗೆ ಅಪಾರ ಪ್ರಮಾಣದ ಹಣ ಹರಿದು ಬರುತ್ತಿರುವ ಸಂಗತಿ ಆಗ ಬಯಲಾಗಿತ್ತು.
ಈ ಮಧ್ಯೆ, ತಾಲಿಬಾನ್ ವಿರುದ್ಧದ ಸುದೀರ್ಘ ಸೆಣಸಾಟದಿಂದ ಹೈರಾಣಾದ ಅಮೆರಿಕ ತನ್ನ ಲಕ್ಷ್ಯವನ್ನು ಇರಾಕ್ ಕಡೆಗೆ ಕೇಂದ್ರೀಕರಿಸತೊಡಗಿತು. ಯುದ್ಧದ ದೊಣ್ಣೆನಾಯಕರ ಉದಾಸೀನ ಮನೋಭಾವ, ಪಾಕಿಸ್ತಾನದ ಕುಮ್ಮಕ್ಕು ಹಾಗೂ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿದ್ದ ಆಫ್ಗನ್ ಸರ್ಕಾರದ ಕುರಿತು ಜನರಲ್ಲಿ ಮೂಡಿದ್ದ ಅನಾದರ ಎಲ್ಲವೂ ತಾಲಿಬಾನ್ ಮತ್ತೆ ಸಶಕ್ತವಾಗಿ ಹೊರಹೊಮ್ಮಲು ನೀರೆರೆದವು. ಅಧಿಕಾರ ಪಡೆಯಲೂ ಆಸರೆಯಾದವು.
ಅಫ್ಗಾನಿಸ್ತಾನದಲ್ಲಿ ಯುದ್ಧ ಎಂದಿಗೂ ಕೊನೆಗೊಳ್ಳುವುದಿಲ್ಲ ಎಂದು ಅಮೆರಿಕಕ್ಕೆ ಮನವರಿಕೆ ಆದಬಳಿಕ ಅದು ಅಲ್ಲಿಂದ ಹೊರಹೋಗಲು ಯೋಜನೆಯೊಂದನ್ನು ರೂಪಿಸಿತು. 2021ರ ಸೆಪ್ಟೆಂಬರ್ 11ರೊಳಗೆ ತನ್ನೆಲ್ಲ ಸೈನ್ಯವನ್ನು ವಾಪಸ್ ಕರೆಸಿಕೊಳ್ಳುವುದಾಗಿ 2020ರ ಫೆಬ್ರುವರಿ 29ರಂದು ದೋಹಾದಲ್ಲಿ ಘೋಷಿಸಿತು. ಅಫ್ಗಾನಿಸ್ತಾನದ ಯುದ್ಧ ತಂತ್ರಗಾರಿಕೆಯಲ್ಲಿ ಅಮೆರಿಕ ಹೆಚ್ಚಾಗಿ ಅವಲಂಬಿಸಿದ್ದು ಪಾಕಿಸ್ತಾನವನ್ನು. ಸೈನಿಕರಿಗೆ ಆಹಾರಸಾಮಗ್ರಿ ಪೂರೈಕೆ ಸೇರಿದಂತೆ ಬಹುತೇಕ ಅಗತ್ಯಗಳಿಗೆ ಅಮೆರಿಕಕ್ಕೆ ಪಾಕಿಸ್ತಾನದ ನೆರವು ಅನಿವಾರ್ಯವಾಗಿತ್ತು. ಇತ್ತ ಅಮೆರಿಕಕ್ಕೆ ಬೆಂಬಲ ನೀಡುತ್ತಲೇ ಅತ್ತ ತಾಲಿಬಾನ್ ಜತೆಗೂ ಪಾಕಿಸ್ತಾನ ಕೈಜೋಡಿಸಿತು. ಅಫ್ಗಾನಿಸ್ತಾನ, ಹಲವು ದೇಶಗಳ ಯುದ್ಧ ತಂತ್ರಗಳ ಆಟದ ಅಂಗಳವಾಯಿತು.
ಆಫ್ಗನ್‌ನ ಜನಸಾಮಾನ್ಯರ ಬದುಕು ಹಸನಾಗುವಂತೆ ಯಾರೊಬ್ಬರೂ ನೆರವು ನೀಡಲಿಲ್ಲ. ಯುದ್ಧದ ಉನ್ಮಾದದಲ್ಲಿ ಇದ್ದವರಿಗೆ ಅದು ಮುಖ್ಯವಾಗಿರಲೂ ಇಲ್ಲ. ಕೃಷಿ ಮತ್ತು ಹೈನುಗಾರಿಕೆ ಈ ದೇಶದ ಜನರ ಪ್ರಮುಖ ಜೀವನಾಧಾರವಾಗಿವೆ. ದೇಶದ ಒಟ್ಟು ಭೂಪ್ರದೇಶದ ಎಂಟನೇ ಒಂದು ಭಾಗ ಮಾತ್ರ ಕೃಷಿಯೋಗ್ಯವಾಗಿದ್ದು, ಅದರ ಅರ್ಧದಷ್ಟು ಭೂಮಿಯಲ್ಲೂ ಕೃಷಿ ಚಟುವಟಿಕೆ ನಡೆಸುವುದು ಅಲ್ಲಿನ ಜನರ ಪಾಲಿಗೆ ಸಾಧ್ಯವಾಗಿಲ್ಲ. ಕಳೆದ ಎರಡು ದಶಕಗಳ ‘ಪ್ರಜಾ ಸರ್ಕಾರ’ದ ಅವಧಿಯಲ್ಲೂ ಅವರ ಜೀವನದಲ್ಲಿ ಅಂತಹ ಗಮನಾರ್ಹ ಬದಲಾವಣೆ ಏನೂ ಆಗಿಲ್ಲ.
ಅಫ್ಗಾನಿಸ್ತಾನದ ಮರುನಿರ್ಮಾಣ ಕಾರ್ಯದಲ್ಲಿ ಭಾರತವೂ ತೊಡಗಿಸಿಕೊಂಡಿದ್ದು, ಮೂಲಸೌಕರ್ಯ ವೃದ್ಧಿ, ಸಂಸತ್ ಭವನ ನಿರ್ಮಾಣ, ಕೌಶಲಾಭಿವೃದ್ಧಿ ಮತ್ತಿತರ ಚಟುವಟಿಕೆಗಳಲ್ಲಿ ಭಾರಿ ಪ್ರಮಾಣದ ಹಣವನ್ನು ತೊಡಗಿಸಿದೆ. ಅದರ ಈ ಹೂಡಿಕೆಯಲ್ಲಿ ಸ್ವಹಿತಾಸಕ್ತಿಯೂ ಇದೆ. ಭಾರತದೊಂದಿಗೆ ಪರ್ಷಿಯಾ ಹಾಗೂ ಸೆಂಟ್ರಲ್ ಏಷ್ಯಾದ ಸಂಪರ್ಕ ಸೇತು ಎನಿಸಿರುವ ಅಫ್ಗಾನಿಸ್ತಾನ, ಸಾವಿರಾರು ವರ್ಷಗಳಿಂದ ಪ್ರಮುಖ ವ್ಯಾಪಾರಿ ಕೇಂದ್ರವಾಗಿತ್ತು. ಒಂದು ಕಾಲದಲ್ಲಿ ಬಹುತೇಕ ಆಫ್ಗನ್ ಸಂಗೀತಗಾರರು ಪಾಟಿಯಾಲಾ ಘರಾಣಾದ ಶಿಷ್ಯವೃಂದಕ್ಕೆ ಸೇರಿದವರಾಗಿದ್ದರು. ಭಾರತದ ಸಿನಿಮಾಗಳು, ಟಿ.ವಿ ಧಾರಾವಾಹಿಗಳು ಇಲ್ಲಿ ಭಾರಿ ಜನಪ್ರಿಯವಾಗಿದ್ದವು. ಸಾಸ್ ಭೀ ಕಭಿ ಬಹೂ ಥಿ, ಕಸೌಟಿ ಜಿಂದಗಿ ಕೀ, ಕುಂ ಕುಂ, ಕಹಾನಿ ಘರ್ ಘರ್ ಕೀ ಮೊದಲಾದ ಧಾರಾವಾಹಿಗಳನ್ನು ಇಲ್ಲಿನ ಜನ ಮುಗಿಬಿದ್ದು ನೋಡುತ್ತಿದ್ದರು.
ತಾಲಿಬಾನ್ ಆಡಳಿತ ಮತ್ತೆ ಮರುಸ್ಥಾಪನೆ ಆಗಿದ್ದರಿಂದ ಭಾರತ ಈಗ ಭದ್ರತೆ ಸೇರಿದಂತೆ ಎಲ್ಲ ವಿಷಯಗಳಲ್ಲೂ ಜಾಗೃತಿ ವಹಿಸಬೇಕಿದೆ. ಭಾರತದ ಹೂಡಿಕೆಯ ಭವಿಷ್ಯದ ಕುರಿತು ಸ್ಪಷ್ಟತೆ ಇಲ್ಲ. ಅಫ್ಗಾನಿಸ್ತಾನದಲ್ಲಿ ಏನೇ ಸಂಭವಿಸಿದರೂ ಅದರ ಪರಿಣಾಮ ನೇರವಾಗಿ ನಮ್ಮ ಮೇಲೂ ಆಗುತ್ತದೆ. ಮೊದಲ ಸಲ ತಾಲಿಬಾನ್ ಅಧಿಕಾರಕ್ಕೆ ಬಂದಾಗ ಪಾಕಿಸ್ತಾನ ಹಾಗೂ ಸೌದಿ ಅರೇಬಿಯಾ ಸರ್ಕಾರಗಳು ಮಾತ್ರ ಅದನ್ನು ಮಾನ್ಯ ಮಾಡಿದ್ದವು. ಆದರೆ, ಈ ಸಲ ಕಾಬೂಲ್ ವಶಪಡಿಸಿಕೊಳ್ಳಲು ತಾಲಿಬಾನ್ ಮುನ್ನುಗ್ಗುತ್ತಿರುವಾಗಲೇ ಮಾಸ್ಕೊ, ಟೆಹರಾನ್, ಬೀಜಿಂಗ್ ಮೊದಲಾದ ಕಡೆಗಳಿಂದ ಅದಕ್ಕೆ ಮಾನ್ಯತೆ ಸಿಕ್ಕಿದೆ. ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಅಲ್ಲಿಂದ ಹೊರಟಿರುವ ಸಂದೇಶಗಳು ಮಿಶ್ರಭಾವವನ್ನು ಉಂಟುಮಾಡಿವೆ. ಎಲ್ಲರಿಗೂ ಕ್ಷಮಾದಾನದ ಘೋಷಣೆ ಮಾಡುವ ಮೂಲಕ ತಾಲಿಬಾನ್ ತುಸು ಬದಲಾದಂತೆ ತೋರಿಸಿಕೊಳ್ಳುತ್ತಿದೆ. ಆದರೆ, ಅದರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಅನಿವಾರ್ಯವಾಗಿದೆ.
ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ನೀಡುವ ಕುರಿತು ತಾಲಿಬಾನ್ ಸಂಘಟನೆಯಲ್ಲಿ ಚಿಂತನೆ ನಡೆದಿರುವುದು ಸತ್ಯವಾದರೂ ಇಂತಹ ವಿಷಯಗಳಲ್ಲಿ ಅದರ ರಾಜಕೀಯ ವಿಭಾಗದ ಮಾತಿಗಿಂತಲೂ ಸೇನಾ ವಿಭಾಗದ ಮಾತಿಗೆ ಮಾನ್ಯತೆ ದೊರೆಯುವ ಸಾಧ್ಯತೆ ಹೆಚ್ಚು. ಏಕೆಂದರೆ, ಈಗ ಸಿಕ್ಕ ಅಧಿಕಾರ ಅದರ ಹೋರಾಟದ ಫಲ. ಸಿದ್ಧಾಂತದ ವಿಷಯದಲ್ಲಿ ತಾಲಿಬಾನ್‌ನ ವಿವಿಧ ಗುಂಪುಗಳಲ್ಲಿ ಅಂತಹ ಭಿನ್ನಾಭಿಪ್ರಾಯ ಢಾಳಾಗಿ ಗೋಚರಿಸಿಲ್ಲ. ಕಳೆದ ಸಲದಂತೆ ಜಗತ್ತಿನಲ್ಲಿ ಮೂಲೆಗುಂಪಾಗಿ ಉಳಿಯಲು ಬಯಸದ ತಾಲಿಬಾನ್, ವಿವಿಧ ರಾಷ್ಟ್ರಗಳ ವಿಶ್ವಾಸ ಗಳಿಸುವ ಕಡೆಗೆ ಗಮನಹರಿಸಿದಂತಿದೆ. ಆದರೆ, ಅಂತಹ ವಿಶ್ವಾಸ ಗಿಟ್ಟಿಸುವುದು ಅಷ್ಟು ಸುಲಭವಲ್ಲ. ಎಲ್ಲರನ್ನೂ ಒಳಗೊಳ್ಳುವ ಸರ್ಕಾರದ ರಚನೆ, ಆಧುನಿಕ ಕಾನೂನುಗಳಿಗೆ ಅನುಗುಣವಾದ ಆಡಳಿತ, ಲಿಂಗ ಸಮಾನತೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಭಯೋತ್ಪಾದನೆಗೆ ಆಫ್ಗನ್ ನೆಲ ‘ಲಾಂಚ್ ಪ್ಯಾಡ್’ ಆಗದಂತೆ ನೋಡಿಕೊಳ್ಳುವಲ್ಲಿ ತಾಲಿಬಾನ್ ತೋರುವ ವರ್ತನೆಯಲ್ಲಿ ಜಗತ್ತು ಅವರನ್ನು ನಂಬುವ ಪ್ರಶ್ನೆ ಅಡಗಿದೆ. ಅಲ್ ಕೈದಾ ಹಾಗೂ ಇಸ್ಲಾಮಿಕ್ ಸ್ಟೇಟ್‌ನ ಬೇರುಗಳು ಅಫ್ಗಾನಿಸ್ತಾನದಲ್ಲೂ ಹರಡಿಕೊಂಡಿದ್ದು, ಅದನ್ನು ಕಿತ್ತೊಗೆಯಬೇಕು ಎಂದೂ ಜಗತ್ತು ಬಯಸಿದೆ. ತಾಲಿಬಾನ್ ಈ ಬಯಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಹೇಗೆ ಹೆಜ್ಜೆ ಹಾಕಲಿದೆ ಎಂಬುದು ಕುತೂಹಲಕಾರಿಯಾಗಿದೆ.
ಚಾವಣಿಯಿಲ್ಲದ ಗೋಡೆಗೆ ಆತುಕೊಂಡು ಕುಳಿತ ಮಕ್ಕಳಿಗೆ ಮೇಷ್ಟ್ರು ಸಿಗುವರೇ? ರೆಡ್‌ಕ್ರಾಸ್‌ನ ಕೈಯಿಲ್ಲದ, ಕಾಲು ಮುರಿದುಕೊಂಡ ಮಕ್ಕಳ ದಸ್ತಾವೇಜಿನ ಪಟ್ಟಿ ಮತ್ತೆ ಬೆಳೆಯದಂತೆ ಅಲ್ಲಿ ಶಾಂತಿ ನೆಲೆಸುವುದೇ ಎಂಬ ಪ್ರಶ್ನೆ ಉಳಿದೆಲ್ಲಕ್ಕಿಂತಲೂ ಬಹುಮುಖ್ಯವಾಗಿದೆ.
ಸ್ತ್ರೀ ಸ್ವಾತಂತ್ರ್ಯ ಮತ್ತೆ ಹರಣ
ಇಪ್ಪತ್ತು ವರ್ಷಗಳ ಹಿಂದೆ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರದಲ್ಲಿದ್ದಾಗ ಮಹಿಳೆಯರು ಒಬ್ಬಂಟಿಯಾಗಿ ಮನೆಬಿಟ್ಟು ಹೊರಹೋಗುವಂತಿರಲಿಲ್ಲ. ಅಡಿಯಿಂದ ಮುಡಿಯವರೆಗೆ ಬುರ್ಖಾ ಧರಿಸಿಕೊಂಡು, ಮನೆಯ ಪುರುಷ ಸಂಬಂಧಿಯೊಬ್ಬರ ಜತೆಯಲ್ಲೇ ಹೊರಹೋಗಬೇಕಿತ್ತು. ಮಹಿಳೆಯರಿಗೆ ಕೆಲಸ ಮಾಡುವುದಕ್ಕಾಗಲಿ ಇಷ್ಟಪಟ್ಟ ಉಡುಗೆ ತೊಡುವುದಕ್ಕಾಗಲಿ, ಸಂಗೀತ ಕೇಳುವುದಕ್ಕಾಗಲಿ, ಹಾಡು ಹಾಡುವುದಕ್ಕಾಗಲಿ ಅನುಮತಿ ಇರಲಿಲ್ಲ. ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಉರುಳಿ, ಪ್ರಜಾಪ್ರಭುತ್ವ ಸರ್ಕಾರ ರಚನೆಯಾದ ಮೇಲೆ ಮಹಿಳೆಯರಿಗೆ ಕೆಲಸ ಮಾಡಲು ಅನುಮತಿ ಸಿಕ್ಕಿತು. ಸರ್ಕಾರಿ ಇಲಾಖೆಗಳಲ್ಲೂ ಅವರನ್ನು ನೇಮಕಮಾಡಿಕೊಳ್ಳಲಾಯಿತು. ಕಾಬೂಲ್‌ನಲ್ಲಿ ಫ್ಯಾಷನ್ ಷೋಗಳು ನಡೆಯತೊಡಗಿದವು. ಮನೆಯ ಕತ್ತಲಲ್ಲೇ ಬಂದಿಯಾಗಿದ್ದ ಸುಂದರಿಯರು ಅಲಂಕಾರ ಮಾಡಿಕೊಂಡು ರ‍್ಯಾಂಪ್ ಮೇಲೆ ಹೆಜ್ಜೆ ಹಾಕತೊಡಗಿದರು. ತಮಗೆ ಇಷ್ಟವಾದ ದಿರಿಸು ತೊಟ್ಟು ಸಂಭ್ರಮಿಸಿದರು. ಹೋಟೆಲ್‌ಗಳಲ್ಲಿಯೂ ಅವರ ಕಿಲಕಿಲ ನಗು ಕೇಳಬಹುದಾಗಿತ್ತು. ಸಿನಿಮಾ ಹಾಲ್‌ಗಳು ಮತ್ತೆ ತೆರೆದವು. ಚಿತ್ರ ನೋಡಲು ಜನ ಮುಗಿಬಿದ್ದರು. ತಾಲಿಬಾನ್ ಸರ್ಕಾರ ಮರುಸ್ಥಾಪನೆ ಆಗಿದ್ದರಿಂದ ಎಲ್ಲವೂ ಈಗ ಮೊದಲಿದ್ದ ಸ್ಥಾನಕ್ಕೆ ಬಂದು ನಿಂತಿವೆ.
ಲೇಖಕ: ವಿದೇಶಾಂಗ ನೀತಿ ಹಾಗೂ ಜಾಗತಿಕ ರಾಜಕೀಯ ವಿದ್ಯಮಾನಗಳ ವಿಶ್ಲೇಷಕ, ದೆಹಲಿ ಮೂಲದ ಪತ್ರಕರ್ತ
ಕನ್ನಡಕ್ಕೆ: ಪ್ರವೀಣ ಕುಲಕರ್ಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.