ADVERTISEMENT

ಹುಚ್ಚುಕೋಡಿ ಮನಸ್ಸು ಹದಿಹರೆಯದ ವಯಸ್ಸು

ನಡಹಳ್ಳಿ ವಂಸತ್‌
Published 21 ಏಪ್ರಿಲ್ 2023, 20:45 IST
Last Updated 21 ಏಪ್ರಿಲ್ 2023, 20:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹರೆಯ ಬಂದಾಗ ಯಾರೂ ಕಾಣಲ್ಲ ಅಂತ ಮಕ್ಕಳ ಮೇಲೆ ರೇಗಾಡುವ ಮೊದಲು ಅವರ ಮುಂಗೋಪ, ಹತಾಶೆ, ಸಿಟ್ಟು–ಸೆಡವು ಎಲ್ಲದರ ಹಿಂದಿರುವ ಕಾರಣವನ್ನು ಅರಿಯಲು ಪ್ರಯತ್ನಿಸಿ. ಹರೆಯಕ್ಕೂ ಹಾರ್ಮೋನಿಗೂ ನಿಕಟವಾದ ಸಂಬಂಧವಿದೆ ಎಂಬುದೇನೋ ನಿಜ. ಆದರೆ, ಪೋಷಕರ ಮೊನಚು ಮಾತುಗಳು ಕೆಲವೊಮ್ಮೆ ಹರೆಯದ ಮನಸ್ಸನ್ನು ವ್ಯಗ್ರಗೊಳಿಸುತ್ತದೆ. ಈ ವಯಸ್ಸಿನ ಮಕ್ಕಳನ್ನು ನಿಭಾಯಿಸುವ ಬಗೆಯನ್ನು ಶಿವಮೊಗ್ಗದ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಇಲ್ಲಿ ತಿಳಿಸಿದ್ದಾರೆ.

ಗಂಡು ಹೆಣ್ಣುಗಳನ್ನು ಪ್ರಕೃತಿ ದೈಹಿಕವಾಗಿ ಭಿನ್ನವಾಗಿ ರೂಪಿಸಿರುವುದು ಸಂತಾನಾಭಿವೃದ್ಧಿಯ ಉದ್ದೇಶಗಳಿಗೆ ಮಾತ್ರ. ಇದಕ್ಕಾಗಿ ಪ್ರಕೃತಿ ಇಬ್ಬರ ದೇಹಗಳಲ್ಲೂ ಬೇರೆಬೇರೆಯಾದ ಹಾರ್ಮೋನ್‌ಗಳು ಮತ್ತು ರಾಸಾಯನಿಕಗಳು ಸೃಜಿಸುವ ವ್ಯವಸ್ಥೆಯನ್ನು ರೂಪಿಸಿದೆ. ಗಂಡು ಹೆಣ್ಣುಗಳಲ್ಲಿ ಭಾವನೆಗಳು, ವರ್ತನೆಗಳು, ಅನುಭವ, ಸಂವೇದನೆಗಳ ಮಟ್ಟದಲ್ಲಿಯೇ ಭಿನ್ನತೆ ಇರಬೇಕು ಎನ್ನುವುದು ಪ್ರಕೃತಿಯ ನಿರ್ದೇಶನವಲ್ಲ.

ಹನ್ನೆರಡರ ಹರೆಯದ ರಂಜನಾ (ಹೆಸರು ಬದಲಿಸಿದೆ), ಇತ್ತೀಚೆಗೆ ಹೆಚ್ಚುಹೆಚ್ಚು ಅಂತರ್ಮುಖಿಯಾಗುತ್ತಿದ್ದಳು. ತನ್ನ ಊಟ–ಉಡುಗೆಗಳ ಕಡೆಗೆ ಅವಳ ಗಮನ ಕಡಿಮೆಯಾಗುತ್ತಿತ್ತು. ಜೊತೆಗೆ ಮುಂಗೋಪವೂ ಹೆಚ್ಚಾಗುತ್ತಿತ್ತು. ’ಹದಿವಯಸ್ಸಿನ ಹಾರ್ಮೋನ್‌ಗಳ ಪ್ರಭಾವವಿರಬಹುದು’ ಎನ್ನುವ ವೈದ್ಯರ ವಿವರಣೆ ಆಕೆಯ ತಾಯಿಗೆ ಸಮಾಧಾನ ತಂದಿರಲಿಲ್ಲ. ನನ್ನ ಸಹಾಯವನ್ನು ಕೇಳಿ ಬಂದರು. ಆಗ ಮನೆಯ ವಾತಾವರಣದ ವಿವರಗಳನ್ನು ಪಡೆಯುತ್ತಾ ಹೋದೆ.

ADVERTISEMENT

ಸಾಂಪ್ರದಾಯಿಕ ಪರಿಸರದಲ್ಲಿ ಬೆಳೆಯುತ್ತಿದ್ದ ರಂಜನಾಳ ಮೇಲೆ ಹದಿವಯಸ್ಸಿನ ಭಾರ ಹೆಚ್ಚತೊಡಗಿತ್ತು. ಮನೆಯ ಹಿರಿಯರು ಅವಳ ಪ್ರತಿ ಮಾತು ವರ್ತನೆಗಳನ್ನು ಅಳೆದು, ತೂಕ ಮಾಡಿ ಸರಿತಪ್ಪುಗಳನ್ನು ನಿರ್ಧರಿಸುತ್ತಿದ್ದರು. ಎಲ್ಲಾ ವಿಚಾರಗಳಲ್ಲಿಯೂ ನಿಯಮಗಳು ನಿರ್ಬಂಧಗಳು ಇರುತ್ತಿದ್ದವು. ಸ್ವಲ್ಪವೇ ತಪ್ಪಿದರೂ ದೂಷಣೆ ಬುದ್ಧಿವಾದಗಳ ಸುರಿಮಳೆಯಾಗುತ್ತಿತ್ತು. ಒಂದು ಮುಕ್ತವಾದ ನಗು ಕೂಡ ಸಾಧ್ಯವಾಗದೇ ಅವಳು ಚಡಪಡಿಸುತ್ತಿದ್ದಳು. ಕೊನೆಗೆ ಹಿರಿಯರಿಗೆ ಒಪ್ಪಿಗೆಯಾಗುವಂತೆ ಇರುವುದು ಹೇಗೆಂದು ತಿಳಿಯದೆ ಎಲ್ಲರಿಂದ ಮಾನಸಿಕವಾಗಿ ದೂರವಾಗಿ ತನ್ನದೇ ಚಿಪ್ಪಿನೊಳಗೆ ಸೇರಿಕೊಂಡಿದ್ದಳು. ಅವಳ ಬೇಸರ, ಹತಾಶೆ, ಅಸಹಾಯಕತೆಗಳು ಮುಂಗೋಪವಾಗಿ ಮಾತ್ರ ಹೊರಬರುತ್ತಿತ್ತು. ಕೋಪ ತೋರಿಸಿದಾಗಲೆಲ್ಲಾ ಹಿರಿಯರ ನಿರ್ಬಂಧ ಉಪದೇಶಗಳು ಹೆಚ್ಚುತ್ತಿತ್ತು. ಹಾಗಾಗಿ ಕೋಪವನ್ನೂ ಹತ್ತಿಕ್ಕಿ ಭಾವನಾತ್ಮಕ ಒಳಜಗತ್ತಿಗೆ ಕಲ್ಲಾಗತೊಡಗಿದ್ದಳು.

ಈ ಮೇಲೆ ತಿಳಿಸಿದ ಪ್ರಕರಣದಲ್ಲಿ ಏನು ನಡೆಯುತ್ತಿದೆ? ಮನೆಯ ಹಿರಿಯರು ಹೇರುತ್ತಿರುವ ನೀತಿ ನಿಯಮ ನಿರ್ಬಂಧಗಳ ಹಿಂದಿರುವ ಮನೋಭಾವವೇನು? – ಇಂಥ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳಲು ಶತಶತಮಾನಗಳಿಂದ ರೂಢಿಸಿಕೊಂಡು ಬಂದಿರುವ ಪುರುಷಪ್ರಧಾನ ವ್ಯವಸ್ಥೆಯ ಅಲಿಖಿತ ನಿಯಮಗಳ ಕಡೆ ಗಮನಹರಿಸ ಬೇಕಾಗುತ್ತದೆ. ಅಮೆರಿಕದ ಸ್ತ್ರೀವಾದಿ ಚಿಂತಕಿ ಕ್ಯಾರೊಲ್‌ ಗಿಲ್ಲಿಗಾನ್‌ ಅವರ ಸಂಶೋಧನೆಗಳು ಹೇಳುವಂತೆ ಗಂಡು ಮಕ್ಕಳನ್ನು ಗಂಡಾಗಿಸುವ ಪ್ರಯತ್ನ ಅವರ 4 ರಿಂದ 5ನೇ ವರ್ಷದಲ್ಲಿ ಪ್ರಾರಂಭವಾದರೆ, ಹೆಣ್ಣು ಮಕ್ಕಳನ್ನು ಹೆಣ್ಣಾಗಿಸುವ ಪ್ರಯತ್ನ ಸುಮಾರು 12 ರಿಂದ 13ನೇ ವಯಸ್ಸಿನಲ್ಲಿ ಶುರುವಾಗುತ್ತದೆ.

ಪುರುಷಪ್ರಧಾನ ಚಿಂತನೆಗಳಲ್ಲಿ ಗಂಡಾಗುವುದು ಎಂದರೆ ದುಃಖ ನೋವು ಹತಾಶೆ ಅಸಹಾಯಕತೆಯಂತಹ ಮೃದು ಭಾವನೆಗಳನ್ನು ಹತ್ತಿಕ್ಕಿ ಗಟ್ಟಿತನದ ಮುಖವಾಡ ಹೊತ್ತು ಬದುಕುವುದು ಎನ್ನುವುದಾದರೆ ಹೆಣ್ಣಾಗು ವುದಕ್ಕೆ ಭಾವಸೂಕ್ಷ್ಮತೆಯಿಂದ ವರ್ತಿಸಿ ಗಂಡಿನ ಭಾವೋದ್ವೇಗಗಳ ಭಾರವನ್ನು ಹೊತ್ತುಕೊಂಡು, ತನ್ನ ಭಾವನೆಗಳನ್ನು ಹತ್ತಿಕ್ಕಿ ಜೀವಿಸುವುದು ಎನ್ನುವ ಅರ್ಥ ನೀಡಲಾಗಿದೆ. ಅಂದರೆ ಗಂಡು ಹೆಣ್ಣುಗಳಿಬ್ಬರಲ್ಲಿಯೂ ಇರಬೇಕಾದ ಎಲ್ಲಾ ಮಾನವ ಸಹಜ ಭಾವನೆಗಳನ್ನು ಬದಲಾಯಿಸಿ ಆಯಾ ಲಿಂಗಕ್ಕೆ ಅನುಗುಣವಾಗಿ ಭಾವನೆಗಳನ್ನು ವಿಭಜಿಸಲಾಯಿತು. ಹಾಗಾಗಿ ಗಂಡುಮಕ್ಕಳು ಅಳುವುದು ದುಃಖಿಸುವುದು ದೌರ್ಬಲ್ಯವಾಗಿ ಕಂಡರೆ ಹೆಣ್ಣುಮಕ್ಕಳು ಕೋಪಿಸಿಕೊಳ್ಳುವುದು ಪ್ರತಿಭಟಿಸುವುದು ದುರ್ಗುಣಗಳೆಂದು ಹೆಸರು ಪಡೆಯಿತು.

ಭಾವನೆಗಳನ್ನು ಹತ್ತಿಕ್ಕಿಕೊಂಡು ಬದುಕುವ ಮಹಿಳೆಯರು ಹೆಚ್ಚಾಗಿ ಖಿನ್ನತೆಗೆ ಒಳಗಾದರೆ ಭಾವನೆಗಳನ್ನು ಅನುಭವಿಸುವುದೇ ದೌರ್ಬಲ್ಯವೆಂದುಕೊಂಡು ಅಗತ್ಯವಿಲ್ಲದ ಗಟ್ಟಿತನವನ್ನು ಪ್ರದರ್ಶಿಸುವ ಒತ್ತಡದಲ್ಲಿ ಒಳಗಿನ ಮೃದುತ್ವವನ್ನು ಕಳೆದುಕೊಂಡು ಗಂಡು ಕ್ರೂರಿಯಾಗುತ್ತಾನೆ ಎಂದು ಸಂಶೋಧನೆಗಳು ಹೇಳುತ್ತವೆ. ಇದೇ ಕಾರಣಕ್ಕಾಗಿಯೇ ಅಪರಾಧಗಳಿಂದ ಜೈಲು ಸೇರುವುದು ಮತ್ತು ನಶೆಯ ವಸ್ತುಗಳ ಬಳಕೆಯಲ್ಲಿ ಪುರುಷರು ಮುಂದಿರುತ್ತಾರೆ ಎಂದು ದಾಂಪತ್ಯ ಚಿಕಿತ್ಸಕ ಟೆರೆನ್ಸ್‌ ರಿಯಲ್‌ ಹೇಳುತ್ತಾರೆ.

ಹೊರಗಿನ ಅಸುರಕ್ಷಿತ ವಾತಾವರಣದಲ್ಲಿ ಹೆಣ್ಣುಮಕ್ಕಳಿಗೂ ಗಂಡುಮಕ್ಕಳಂತೆ ಪೂರ್ಣ ಸ್ವಾತಂತ್ರ ಕೊಡುವುದು ಅಪಾಯವಲ್ಲವೇ ಎನ್ನುವ ಸಾಕಷ್ಟು ಪೋಷಕರ ಆತಂಕವನ್ನು ಅಲ್ಲಗಳೆಯಲಾಗುವುದಿಲ್ಲ.

ರಂಜನಾಳ ಮೇಲೆ ಮನೆಯ ಹಿರಿಯರಿಗೆ ಪ್ರೀತಿ ಕಾಳಜಿಗಳು ಇತ್ತೆನ್ನುವುದನ್ನು ಅನುಮಾನಿಸಬೇಕಾಗಿಲ್ಲ. ಆದರೆ ಪುರುಷಪ್ರಧಾನ ಚಿಂತನೆಗಳ ಆಕಾರಕ್ಕೆ ಅವಳನ್ನು ಹೊಂದಿಸುವ ಅವರ ಪ್ರಯತ್ನದಲ್ಲಿ ಅವಳ ಭಾವನಾತ್ಮಕ ಜಗತ್ತಿಗೆ ಹಾನಿಯಾಗುತ್ತಿತ್ತು. ಇದನ್ನು ಗುರುತಿಸಲಾಗದ ಅವರು ಹೆಣ್ಣುಮಕ್ಕಳನ್ನು ಬೆಳೆಸುವುದೇ ಹೀಗೆ ಎನ್ನುವ ತರ್ಕವನ್ನು ಬಳಸುತ್ತಿದ್ದರು.

ಇಲ್ಲಿ, ಬಲವಂತವಾಗಿ ಹೆಣ್ತನವನ್ನು ಹೇರುವ ಹಿರಿಯರ ಪ್ರಯತ್ನದಿಂದ ರಂಜನಾ ತನ್ನ ಸಹಜ ಜೀವಂತಿಕೆಯನ್ನೇ ಕಳೆದುಕೊಂಡಿದ್ದಳು. ಸ್ವೇಚ್ಚೆಯಾಗದಂತೆ ತನ್ನ ಸ್ವಾತಂತ್ರವನ್ನು ಪಡೆದುಕೊಳ್ಳಲು ಅವಳು ಕಲಿಯುತ್ತಾ ಬಂದಾಗ ಮನೆಯ ವಾತಾವರಣದಲ್ಲಿ ತಾತ್ಕಾಲಿಕ ಏರುಪೇರುಗಳಾಗಿತ್ತು. ಆದರೆ ನಿಧಾನವಾಗಿ ಮನೆಯ ಹಿರಿಯರೂ ಕೂಡ ಅವಳಲ್ಲಿನ ಬದಲಾವಣೆಯನ್ನು ಗುರುತಿಸತೊಡಗಿದಾಗ ಸಂಬಂಧಗಳು ಹೊಸ ಸಮೀಕರಣಕ್ಕೆ ಹೊಂದಿಕೊಳ್ಳತೊಡಗಿದವು.

ಪೋಷಕರು ಏನು ಮಾಡಬಹುದು?

* ಹೆಣ್ಣು ಮಕ್ಕಳಿಗಾಗಿ ವಿಶೇಷ ನಿಯಮಗಳ ಅಗತ್ಯವೇನಿರುವುದಿಲ್ಲ. ಇಬ್ಬರಿಗೂ ತಮ್ಮ ಭಾವನೆಗಳನ್ನು ಅನುಭವಿಸುವ ವ್ಯಕ್ತಪಡಿಸುವ ಅವಕಾಶವಿರಬೇಕು.

* ಎಲ್ಲಾ ಮಕ್ಕಳಿಗೆ ಹದಿವಯಸ್ಸು ಮತ್ತು ಲೈಂಗಿಕತೆಯ ಕುರಿತಾದ ವೈಜ್ಞಾನಿಕ ತಿಳಿವಳಿಕೆಗಳನ್ನು ನೀಡಬೇಕು. ಪೋಷಕರಿಗೆ ಇವುಗಳ ಮಾಹಿತಿಯಿಲ್ಲದಿದ್ದರೆ ವೈದ್ಯರ ಸಹಾಯ ಪಡೆಯಬಹುದು.

* ಅಪಾಯಗಳಿಂದ ರಕ್ಷಿಸುವುದು ಮಾತ್ರ ಪೋಷಕರ ಕರ್ತವ್ಯವಲ್ಲ. ಜೀವನದುದ್ದಕ್ಕೂ ಹೆಣ್ಣುಮಕ್ಕಳು ರಕ್ಷಕನ ನಿರೀಕ್ಷೆಯಲ್ಲಿಯೇ ಇರುವುದು ದೌರ್ಬಲ್ಯವೇ ಆಗಬಹುದಲ್ಲವೇ? ಹಾಗಾಗಿ ಅಪಾಯಗಳನ್ನು ಎದುರಿಸುವ ತರಬೇತಿಯ ಅಗತ್ಯವೂ ಇರುತ್ತದೆ. ಅಪಾಯ ಎಂದರೆ ಕೇವಲ ದೈಹಿಕ ಅಪಾಯ ಮಾತ್ರವಲ್ಲ. ಅಸಭ್ಯವಾದ ಮಾತು ನಡವಳಿಕೆಗಳೂ ಕೂಡ ಒಂದು ರೀತಿಯ ಆಕ್ರಮಣವೇ. ಅಂತಹ ಸಂದರ್ಭಗಳಲ್ಲಿ ಘನತೆಯಿಂದ ಪ್ರತಿಭಟಿಸುವುದನ್ನು ಕೂಡ ಪೋಷಕರು ಕಲಿಸಬೇಕಾಗುತ್ತದೆ.

* ಸಭ್ಯತೆ ಸೌಜನ್ಯಗಳ ಮುಖವಾಡದಲ್ಲಿ ತಮಗೆ ಆಗುವ ಅವಮಾನ ನೋವುಗಳನ್ನು ಹತ್ತಿಕ್ಕಿ ಮೌನವಾಗಿರ ಬೇಕೆನ್ನುವ ತರಬೇತಿ ಹೆಣ್ಣುಮಕ್ಕಳ ದೈಹಿಕ ಮಾನಸಿಕ ಆರೋಗ್ಯಕ್ಕೆ ಅಪಾಯಕಾರಿ. ಕೋಪ ನಮಗೆಲ್ಲಾ ಆತ್ಮರಕ್ಷಣೆ ಮಾಡಿಕೊಳ್ಳಲು ಪ್ರಕೃತಿ ನೀಡಿರುವ ಒಂದು ವರ. ಆದರೆ ಕೆಟ್ಟ ಮಾತು ಅಥವಾ ವರ್ತನೆಗಳ ಮೂಲಕ ಕೋಪವನ್ನು ತೋರಿಸುವ ಪ್ರವೃತ್ತಿಯನ್ನು ಬದಲಾಯಿಸಬೇಕು. ಅಸಮ್ಮತಿ ಭಿನ್ನಾಭಿಪ್ರಾಯಗಳನ್ನು ಗೌರವಯುತವಾಗಿ ವ್ಯಕ್ತಪಡಿಸಲು ಚರ್ಚೆಮಾಡಲು ಅವಕಾಶವಿರಬೇಕು.

* ಮನೆಯ ವಾತಾವರಣದಲ್ಲಿ ಸಿಗದೆ ಇರುವ ಪ್ರೀತಿ ಬೆಂಬಲಗಳ ಹುಡುಕಾಟದಲ್ಲಿ ಹೆಣ್ಣುಮಕ್ಕಳು ಹೊರಗಡೆಯ ಆಮಿಷಗಳಿಗೆ ಸುಲಭವಾಗಿ ಬಲಿಯಾಗುತ್ತಾರೆ. ಹಾಗಾಗಿ ಮಕ್ಕಳ ಎಲ್ಲಾ ಮಾತುಗಳಿಗೂ ಸಮ್ಮತಿಸದಿದ್ದರೂ ಮನೆಯವರಿಂದ ಮಾನಸಿಕವಾಗಿ ದೂರಹೋಗದಂತೆ ಪೋಷಕರು ಎಚ್ಚರವಹಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.