ADVERTISEMENT

ತೆಲಂಗಾಣ ಚುನಾವಣಾ ಯಾತ್ರೆ | ‘ಓವೈಸಿ ಪಕ್ಷನಾ? ಏಳು ಸೀಟು ಪಕ್ಕಾ...’

ಸುದೇಶ ದೊಡ್ಡಪಾಳ್ಯ
Published 27 ನವೆಂಬರ್ 2023, 19:24 IST
Last Updated 27 ನವೆಂಬರ್ 2023, 19:24 IST
<div class="paragraphs"><p>ಅಸಾದುದ್ದೀನ್‌ ಓವೈಸಿ,&nbsp;ಅಕ್ಬರುದ್ದೀನ್‌ ಓವೈಸಿ</p></div>

ಅಸಾದುದ್ದೀನ್‌ ಓವೈಸಿ, ಅಕ್ಬರುದ್ದೀನ್‌ ಓವೈಸಿ

   

ಹೈದರಾಬಾದ್‌: ಚಾರ್‌ಮಿನಾರ್‌ ಪ್ರದೇಶದ ಗಲ್ಲಿಗಳಲ್ಲಿ ಮೆಲ್ಲನೆ ನಡೆದು ಸಾಗುತ್ತಿದ್ದೆ. ಇಲ್ಲಿನ ಇಕ್ಕಟ್ಟಾದ ರಸ್ತೆಯ ಎರಡೂ ಕಡೆ ಮುತ್ತು, ಬಟ್ಟೆ ಮತ್ತು ಬಳೆಯ ಅಂಗಡಿಗಳು, ಎಲ್ಲಿಂದಲೋ ತೇಲಿ ಬರುತ್ತಿದ್ದ ಅತ್ತರ್‌ನ ಘಮಲು ಮತ್ತು ದೂರದಿಂದ ಕೇಳಿ ಬರುತ್ತಿದ್ದ ಗಜಲ್‌. ಅವು ನನ್ನನ್ನು ಯಾವುದೋ ಒಂದು ಕಾಲಘಟ್ಟಕ್ಕೆ ಕರೆದುಕೊಂಡು ಹೋಗಿದ್ದವು. ಸೋನೆಮಳೆ ಶುರುವಾಯಿತು. ಅಲ್ಲೇ ಇದ್ದ ಇರಾನಿ ಚಹಾ ಅಂಗಡಿಯ ಒಳಹೊಕ್ಕೆ. ಚಹಾ ಹೀರುತ್ತಾ, ಅಲ್ಲಿದ್ದ ನಾಲ್ಕು ಮಂದಿಯೊಂದಿಗೆ ನಾವು ಸೇರಿಕೊಂಡೆವು. ಅವರು ಆತ್ಮೀಯವಾಗಿಯೇ ಮಾತನಾಡಲು ಶುರು ಮಾಡಿದರು. ಅವರ ಹೈದರಾಬಾದಿ ಉರ್ದು ಅರ್ಥವಾಗುವುದು ಸ್ವಲ್ಪ ಕಷ್ಟವಾಗುತ್ತಿತ್ತು. ಆದರೆ ನನ್ನೊಂದಿಗೆ ಜಾವೇದ್ ಇದ್ದರು. ಸ್ವಲ್ಪ ಹೊತ್ತಿನ ಬಳಿಕ ಮೆಲ್ಲಗೆ ರಾಜಕೀಯ ವಿಷಯಕ್ಕೆ ಮುನ್ನುಡಿ ಬರೆದೆ. ನಾಲ್ಕು ಮಂದಿಯೂ ಬೇರೆ ಬೇರೆ ಕಾರಣಗಳನ್ನು ಕೊಡುತ್ತಾ ಎದ್ದು ಹೋದರು. ಆನಂತರ ಅಂಗಡಿಯೊಂದರ ಹೊರಗೆ ಮುತ್ತುಗಳನ್ನು ಪೋಣಿಸುತ್ತಿದ್ದ ವೃದ್ಧರೊಬ್ಬರು ಕಾಣಿಸಿದರು. ಅವರನ್ನು ಉದ್ದೇಶಿಸಿ, ‘ಈ ಬಾರಿ ಎಲೆಕ್ಷನ್‌ ಹೇಗಿದೆ?’ ಎಂದು ಕೇಳಿದೆ. ಅವರು ತಲೆ ಮೇಲೆತ್ತದೇ, ‘ನನಗೆ ಯಾವುದು ಸರಿ ಅನಿಸುತ್ತದೆಯೋ ಅದನ್ನೇ ಮಾಡುತ್ತೇನೆ’ ಎಂದು ಮಾತುಗಳನ್ನೂ ಮುತ್ತಿನಂತೆಯೇ ಪೋಣಿಸಿದರು!     

ನಾವು ಹೊರಗಿನವರು ಎನ್ನುವುದು ತಿಳಿದ ಮೇಲೆ ತುಟಿಬಿಚ್ಚಲು ಹೆಚ್ಚಿನವರು ಒಪ್ಪಲಿಲ್ಲ. ‘ನಮಗೆ ಎಲೆಕ್ಷನ್‌ ಬಗ್ಗೆ ಏನೂ ಗೊತ್ತಿಲ್ಲ, ವ್ಯಾಪಾರ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವುದೇ ದೊಡ್ಡದು’ ಎಂದು ಮುಗುಮ್ಮಾಗಿ ಹೇಳಿ ವಿಷಯಾಂತರ ಮಾಡುತ್ತಿದ್ದರು. ಪಾನ್‌ಶಾಪ್‌ನ ಮಾಲೀಕ, ಮರ ಕೆತ್ತನೆ ಮಾಡುವ ವ್ಯಕ್ತಿಯೂ ಹಾಗೆಯೇ ನಡೆದುಕೊಂಡರು. ‘ನಾವು ಸ್ಥಳೀಯರಲ್ಲ ಎನ್ನುವುದು ಅವರಿಗೆ ಗೊತ್ತಾಗಿದೆ. ನಾವು ಯಾವುದೋ ಪಕ್ಷದ ಪರವಾಗಿ ಗುಪ್ತವಾಗಿ ಮಾಹಿತಿ ಕಲೆ ಹಾಕಲು ಬಂದಿದ್ದೇವೆ ಅಂದುಕೊಳ್ಳುತ್ತಾರೆ. ಅವರನ್ನು ಒತ್ತಾಯಿಸುವುದು ಬೇಡ’ ಎಂದು ಜಾವೇದ್‌ ನನ್ನನ್ನು ಬೇರೆ ಕಡೆಗೆ ಕರೆದುಕೊಂಡು ಹೋದರು.

ADVERTISEMENT

ರಸ್ತೆಬದಿಯಲ್ಲಿ ಬಾಳೆಹಣ್ಣು ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ಯುವಕ ಮೊದಲಿಗೆ ಮಾತನಾಡಲು ನಿರಾಕರಿಸಿದ. ಬಳಿಕ ಅಕ್ಕಪಕ್ಕ ಯಾರೂ ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಂಡು ಕಣ್ಸನ್ನೆ ಮಾಡಿದ. ಅದನ್ನು ಜಾವೇದ್‌ ಥಟ್ಟನೆ ಗ್ರಹಿಸಿ ‘ಓವೈಸಿಯ ಎಐಎಂಐಎಂ ಪಕ್ಷ’ ಎಂದು ನನಗೆ ತಿಳಿಸಿದರು. ನಾನು ಸೋಜಿಗದಿಂದ ಅದು ಹೇಗೆ ನಿಮಗೆ ಗೊತ್ತಾಯಿತು’ ಎಂದು ಕೇಳಿದೆ. ‘ನಮ್ಮ ಎದುರು ಇರುವುದು ದರುಸಲಂ ಕಟ್ಟಡ, ಅಲ್ಲಿ ಎಐಎಂಐಎಂ ಪಕ್ಷದ ಕಚೇರಿ ಇದೆ’ ಎಂದು ನಗುತ್ತಾ ಹೇಳಿದರು. 

ಅಸಾದುದ್ದೀನ್‌ ಓವೈಸಿ ಹೈದರಾಬಾದ್‌ ಲೋಕಸಭಾ ಕ್ಷೇತ್ರದ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಐಎಂ) ಪಕ್ಷದ ಸಂಸದ. ಈ ಕ್ಷೇತ್ರದ ವ್ಯಾಪ್ತಿಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿದ್ದು, ಆರರಲ್ಲಿ ಎಐಎಂಐಎಂ ಗೆದ್ದಿದೆ. ಗೋಶಾಮಹಲ್‌ನಲ್ಲಿ ಬಿಜೆಪಿಯ ಟಿ.ರಾಜಾಸಿಂಗ್‌ ಶಾಸಕ. ಓವೈಸಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಮುಸ್ಲಿಮರ ಬಾಹುಳ್ಯವಿದೆ. ಮುಸ್ಲಿಮರು ಮತ್ತು ಹಿಂದೂಗಳ ನಡುವೆ ಏನೋ ಸಂಶಯ, ಅಪನಂಬಿಕೆ ಮತ್ತು ಅಭದ್ರತೆ ಭಾವ. ಈ ಭಾವಗಳೇ ಎಐಎಂಐಎಂ ಪಕ್ಷ ಮತ್ತು ಬಿಜೆಪಿಯ ಬಂಡವಾಳ.

‘ಎಐಎಂಐಎಂ ನಮ್ಮ ಮನೆ ಪಕ್ಷವಿದ್ದಂತೆ. ಪಕ್ಷದ ಶಾಸಕರು ನಮ್ಮ ಕಷ್ಟ–ಸುಖಗಳಿಗೆ ತಕ್ಷಣವೇ ಧಾವಿಸಿಬರುತ್ತಾರೆ. ಮಗುವಿಗೆ ನಾಯಿ ಕಚ್ಚಿದರೆ ಅವರೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ, ಕಾಳಜಿ ಮಾಡುತ್ತಾರೆ’ ಎಂದು ಮಹಮ್ಮದ್‌ ಖಾಜಾ ಪಾಷ ಹೆಮ್ಮೆಯಿಂದಲೇ ಹೇಳಿದರು. ಗೋಶಾಮಹಲ್‌ ಸಮೀಪವಿದ್ದ ಗ್ಯಾರೇಜ್‌ ಬಳಿ ಭೇಟಿಯಾದ ಮಹಮ್ಮದ್‌ ಮುಜಾಯಿದ್ದೀನ್‌ ‘ನಮ್ಮ ಪಕ್ಷದ ಶಾಸಕರು ಕಚೇರಿಯಲ್ಲಿ ಜನರಿಗೆ ಸುಲಭವಾಗಿ ಸಿಗುತ್ತಾರೆ. ಚಿಕ್ಕ ಮಗು ಹೋದರೂ ಸಮಸ್ಯೆಯನ್ನು ಕೇಳುತ್ತಾರೆ. ಬೇರೆ ಯಾವ ಪಕ್ಷದ ಶಾಸಕರು ಹೀಗೆ ಮಾಡುತ್ತಾರೆ ಹೇಳಿ? ನಮಗೆ ಓವೈಸಿಯಿಂದ ರಕ್ಷಣೆ ಸಿಕ್ಕಿದೆ. ಅದು ಮುಖ್ಯ ಅಲ್ಲವೇ’ ಎಂದು ನನ್ನನ್ನು ಕೇಳಿದರು.

ಓವೈಸಿ ಸಹೋದರರ (ಅಸಾದುದ್ದೀನ್‌ ಓವೈಸಿ ಮತ್ತು ಅಕ್ಬರುದ್ದೀನ್‌ ಓವೈಸಿ) ಪ್ರಚೋದನಕಾರಿ ಭಾಷಣಕ್ಕೆ ಯುವಕರು ಹುಚ್ಚೆದ್ದು ಕುಣಿಯುತ್ತಾರೆ. ಓವೈಸಿ ತಮ್ಮ ರಕ್ಷಕ ಎನ್ನುವ ಭಾವನೆ ಪ್ರಬಲವಾಗಿದೆ.  ಹೀಗಾಗಿಯೇ ಎಐಎಂಎಐ ಪಕ್ಷವು 2014 ಹಾಗೂ 2019 ರ ವಿಧಾನಸಭೆ ಚುನಾವಣೆಯಲ್ಲಿ ಏಳು ಸ್ಥಾನಗಳನ್ನು ಗೆದ್ದುಕೊಂಡಿತು. ಓವೈಸಿ ಈ ಎರಡೂ ಚುನಾವಣೆಯಲ್ಲಿ ಏಳು ಸ್ಥಾನಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆದ್ದರಿಂದಲೇ ತೆಲಂಗಾಣದಲ್ಲಿ ಎಲ್ಲಿಯೇ ಹೋಗಿ ಕೇಳಿದರೂ ‘ಓವೈಸಿ ಪಾರ್ಟಿಗೆ ಏಳು ಸೀಟು ಪಕ್ಕಾ’ ಎಂದು ಜನ ಹೇಳುತ್ತಾರೆ. ಈ ಬಾರಿ ಒಂಬತ್ತು ಸ್ಥಾನಗಳಲ್ಲಿ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 

ನಾಂಪಲ್ಲಿ ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಯುವ ಅಭ್ಯರ್ಥಿ ಮಹಮ್ಮದ್‌ ಫಿರೋಜ್ ಖಾನ್‌, ಎಐಎಂಐಎಂ ವಿರುದ್ಧ ಕಡಿಮೆ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿ ಮತ್ತೆ ತೀವ್ರ ಪೈಪೋಟಿ ನೀಡುತ್ತಿದ್ದು, ಸಕಾರಾತ್ಮಕ ಫಲಿತಾಂಶದ ಬಗ್ಗೆ ಯವಜನಾಂಗ ಆಶಾಭಾವನೆ ವ್ಯಕ್ತಪಡಿಸಿತು.

‘ಓವೈಸಿ ಸ್ವಹಿತಕ್ಕಾಗಿ ಬಿಆರ್‌ಎಸ್‌ ಪಕ್ಷದೊಂದಿಗೆ ಬಹಿರಂಗವಾಗಿಯೂ, ಬಿಜೆಪಿ ಜೊತೆ ಗುಟ್ಟಾಗಿಯೂ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಆದ್ದರಿಂದಲೇ ಅವರ ಮೇಲೆ ಇ.ಡಿ ದಾಳಿ ನಡೆಯುವುದಿಲ್ಲ. ಮುಸ್ಲಿಮರ ಮತಗಳು ಕಾಂಗ್ರೆಸ್‌ಗೆ ಹೋಗುವುದನ್ನು ತಡೆಯುವುದೇ ಅವರ ಉದ್ದೇಶ’ ಎಂದು ತಮ್ಮ ಗುರುತು ಬಹಿರಂಗಪಡಿಸಬಾರದು ಎನ್ನುವ ಷರತ್ತಿನೊಂದಿಗೆ ಹಲವು ವಿದ್ಯಾವಂತ ಮುಸ್ಲಿಮರು ಸುತ್ತಿಬಳಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

‘ಗೋಶಾಮಹಲ್‌ ಕೂಡ ಪಕ್ಕಾ!’

ಟಿ.ರಾಜಾಸಿಂಗ್‌, ಗೋಶಾಮಹಲ್‌ ಕ್ಷೇತ್ರದ ಬಿಜೆಪಿ ಶಾಸಕ. ರಾಜ್ಯದಲ್ಲಿರುವ ಬಿಜೆಪಿಯ ಏಕೈಕ ಶಾಸಕ. ದ್ವೇಷ ಭಾಷಣದಲ್ಲಿ ಓವೈಸಿ ಸಹೋದರರಿಗೆ ಸರಿಸಾಟಿ. ಇವರ ಮೇಲೆ ಹತ್ತಾರು ಕ್ರಿಮಿನಲ್‌ ಪ್ರಕರಣಗಳಿವೆ. ದ್ವೇಷ ಭಾಷಣದ ವಿಡಿಯೊ ಅನ್ನು ಪೋಸ್ಟ್‌ ಮಾಡಿದ್ದಕ್ಕಾಗಿ ಫೇಸ್‌ಬುಕ್‌ನಿಂದ ನಿಷೇಧಕ್ಕೆ ಒಳಗಾಗಿದ್ದರು. ಪ್ರವಾದಿ ಮೊಹಮ್ಮದ್‌ಗೆ ಅಪಮಾನ ಮಾಡಿ ಜೈಲು ಸೇರಿದ್ದರು. ಬಿಜೆಪಿ ಇವರನ್ನು ಪಕ್ಷದಿಂದ ಅಮಾನತು ಮಾಡಿತ್ತು. ಆದರೆ, ಈ ಚುನಾವಣೆಯಲ್ಲಿ ಮೊದಲ ಪಟ್ಟಿಯಲ್ಲೇ ಅವರಿಗೆ ಟಿಕೆಟ್‌ ಘೋಷಿಸಿತು.

ಗೋಶಾಮಹಲ್‌ನಲ್ಲಿ ರಾಜಸ್ಥಾನ ಮತ್ತು ಗುಜರಾತ್‌ ರಾಜ್ಯಗಳಿಂದ ವಲಸೆ ಬಂದ ಉದ್ಯಮಿಗಳು, ವ್ಯಾಪಾರಿಗಳು ಹೆಚ್ಚು ಇದ್ದಾರೆ. ಇಲ್ಲಿ ವ್ಯಾಪಾರ–ವಹಿವಾಟು ಜೋರಾಗಿದೆ. ಈ ಕ್ಷೇತ್ರದಲ್ಲಿ ಲೋಧಿ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ರಾಜಾಸಿಂಗ್‌ ಇದೇ ಸಮುದಾಯದವರು.

ಹಾರ್ಡ್‌ವೇರ್‌ ಅಂಗಡಿ ಮಾಲೀಕ ಶರತ್ಚಂದ್ರ ಮಂಡಲ್‌ ಪಶ್ಚಿಮ ಬಂಗಾಳದಿಂದ 18 ವರ್ಷಗಳ ಹಿಂದೆಯೇ ಇಲ್ಲಿಗೆ ಬಂದು ನೆಲೆಸಿದ್ದಾರೆ. ಅವರನ್ನು ಮಾತಿಗೆ ಎಳೆಯುವುದು ಕಷ್ಟವಾಯಿತು. ನಿಧಾನವಾಗಿ ಮಾತಿಗೆ ಇಳಿದ ಅವರು, ‘ನಮಗೆ ರಾಜಾಸಿಂಗ್‌ ಬೇಕು. ಅವರಿಂದಾಗಿ ನಾವು ಯಾವುದೇ ಭಯವಿಲ್ಲದೇ ವ್ಯಾಪಾರ ಮಾಡಿಕೊಂಡಿದ್ದೇವೆ‘ ಎಂದು ಹೇಳಿದರು.

ಸ್ವೀಟ್‌ಸ್ಟಾಲ್‌ನ ಮಾಲೀಕ ವಿದ್ಯಾವಂತ. ಆದರೆ, ಚುನಾವಣೆ ಕುರಿತು ಏನೇನೂ ತಿಳಿಯದವರಂತೆ ನಟಿಸಿದರು. ಅಲ್ಲಿ ಮಿಠಾಯಿ ಸವಿಯುತ್ತಿದ್ದ ವ್ಯಕ್ತಿಯೊಬ್ಬರು, ‘ನೀವು ಏನು ಕೇಳುತ್ತಿದ್ದೀರಿ ಎನ್ನುವುದು ಅರ್ಥವಾಯಿತು. ನಾವೆಲ್ಲ ರಾಜಾಸಿಂಗ್‌ಗೆ ವೋಟು ಹಾಕುವುದು. ಏಕೆಂದರೆ, ನಾವು ಹಿಂದೂಗಳು’ ಎಂದು ಗಟ್ಟಿಧ್ವನಿಯಲ್ಲಿ ಸಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.