ಪ್ರಭುತ್ವದ ಕಡು ನಿರ್ಲಕ್ಷಿತ ಸಮುದಾಯವೆಂದರೆ ಬಡ ಸ್ತ್ರೀ ಸಂಕುಲ. ಆದರೆ ಅವರ ಸಹನೆಯೂ ಕಟ್ಟೆಯೊಡೆದು, ಬೀದಿಗಿಳಿದು ತಮ್ಮ ಪ್ರತಿಭಟನೆಗಳನ್ನು ದಾಖಲಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಒಂದೆಡೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರು... ಕನಿಷ್ಠ ವೇತನಕ್ಕೆ ಅತಿ ಹೆಚ್ಚು ದುಡಿಸಿಕೊಳ್ಳುತ್ತಿರುವ ದಮನಕ್ಕೆ ರೋಸಿ ಬೀದಿಗಿಳಿಯುತ್ತಿದ್ದಾರೆ. ಇನ್ನೊಂದೆಡೆ ಕುಟುಂಬದ ಪುರುಷರ ಅತಿಯಾದ ಮದ್ಯಪಾನದ ಚಟದಿಂದಾಗಿ ನಿತ್ಯ ಮನೆಗಳಲ್ಲಿ ಜಗಳ, ಹೊಡೆದಾಟ, ಹಿಂಸೆ ತಾಳಲಾರದೆ ‘ಮದ್ಯನಿಷೇಧ’ಕ್ಕೆ ಆಗ್ರಹಿಸಿ ಸಾವಿರಾರು ಹೆಣ್ಣುಮಕ್ಕಳು ಒಗ್ಗೂಡಿದ್ದಾರೆ. ಎಗ್ಗಿಲ್ಲದಂತೆ ಬೀದಿ ಬೀದಿಯಲ್ಲಿ ಮದ್ಯ ಮಾರಾಟ, ಪ್ರತಿ ತಿಂಗಳೂ ಟಾರ್ಗೆಟ್ ನೀಡಿ, ಬೇಡಿಕೆ ಹೆಚ್ಚಿಸಿ ಜನರನ್ನು ಕುಡಿತದ ದಾಸರನ್ನಾಗಿಸಿ ಕುಟುಂಬಗಳ ನೆಮ್ಮದಿಯನ್ನು ಸುಡುತ್ತಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ಬೀದಿಗಿಳಿದಿದ್ದಾರೆ.
ಹವಾಮಾನ ವೈಪರೀತ್ಯ, ಬರ- ಪ್ರವಾಹ, ತತ್ತರಿಸಿರುವ ಕೃಷಿ, ನಿರುದ್ಯೋಗ... ಈ ಅನಿಶ್ಚಿತ ದುರಂತವನ್ನು ಹೇಗಾದರೂ ಎದುರಿಸಿ, ಬಡತನ ಇರುವಾಗಲೂ ಬದುಕು ನಿರ್ವಹಿಸುತ್ತಿರುವ ಗ್ರಾಮೀಣ ಹೆಣ್ಣುಮಕ್ಕಳ ಪುಡಿಗಾಸೂ ಮದ್ಯದಂಗಡಿಯ ಪಾಲಾಗುತ್ತಿರುವಾಗ ಇನ್ನೂ ಸಹಿಸುವುದೆಂತು? ‘ನಮಗೆ ನಿಮ್ಮ ಭಾಗ್ಯಗಳು ಬೇಡ. ಹೇಗೋ ದುಡಿದು ತಿನ್ನುತ್ತೇವೆ. ಮೊದಲು ಮದ್ಯನಿಷೇಧ ಮಾಡಿ’ ಎಂಬುದು ಇವರ ಆರ್ತನಾದ. ಬಡ ಕುಟುಂಬಗಳ ಪುರುಷರ ಮದ್ಯಪಾನದ ಚಟದಿಂದ, ಸಹಸ್ರಾರು ಮಹಿಳೆಯರು ಕುಟುಂಬ ನಿರ್ವಹಣೆಗಾಗಿ ಮೈಮಾರಿಕೊಳ್ಳುವ ಸ್ಥಿತಿ ತಲುಪಿರುವುದನ್ನು ‘ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿಯ ವರದಿ’ಯೂ ದಾಖಲಿಸಿದೆ. ಈ ದಾರುಣ ಸ್ಥಿತಿಯೂ ಸರ್ಕಾರದ ಕಣ್ಣು ತೆರೆಸಿಲ್ಲ!
ವಿಪರ್ಯಾಸವೆಂದರೆ, ವರ್ಷದಿಂದ ವರ್ಷಕ್ಕೆ ಸರ್ಕಾರದ ಪರವಾನಗಿ ಪಡೆದೇ ಹಳ್ಳಿಗಳಲ್ಲಿ ಮದ್ಯದಂಗಡಿಗಳ ಪ್ರಮಾಣ ಏರುತ್ತಿದೆ. ಪೆಟ್ಟಿಗೆ ಅಂಗಡಿಗಳಲ್ಲೂ ಪ್ಯಾಕೆಟ್‍ಗಳಲ್ಲಿ ಮದ್ಯ ಮಾರಾಟವಾಗುತ್ತಿದೆ! ಸರ್ಕಾರ ಮಾತ್ರ, ಮದ್ಯ ಮಾರಾಟದಿಂದ ದೊರಕುವ ಬೃಹತ್ ವರಮಾನವನ್ನೇ ಅಭಿವೃದ್ಧಿಯೆಂದು ಭ್ರಮಿಸಿ, ಲಜ್ಜೆಯಿಲ್ಲದೇ ಬೀಗುತ್ತಿದೆ.
ನಿಮ್ಹಾನ್ಸ್ ಸಂಸ್ಥೆ ಇತ್ತೀಚೆಗೆ ಐದು ಲಕ್ಷ ಮದ್ಯವ್ಯಸನಿಗಳ ಸಮೀಕ್ಷೆ ನಡೆಸಿ ನೀಡಿರುವ ವರದಿಯು ಮದ್ಯದ ಪರಿಣಾಮಗಳ ಭೀಕರತೆಗೆ ಸಾಕ್ಷಿ. ಮದ್ಯ ಮಾರಾಟದಿಂದ ಸರ್ಕಾರಕ್ಕೆ ಬರುವ ವರಮಾನಕ್ಕಿಂತ ಮೂರು ಪಟ್ಟು ಹೆಚ್ಚು ಹಣ ಸಮಾಜದ ಸ್ವಾಸ್ಥ್ಯ ಕಾಪಾಡಲು ಮತ್ತು ವ್ಯಕ್ತಿಗತ ಆರೋಗ್ಯ ಹಾನಿ ಸರಿದೂಗಿಸಲು ವೆಚ್ಚವಾಗುತ್ತಿದೆ. ಆದರೆ ಈ ಹೊರೆ ಬೀಳುವುದು ಸರ್ಕಾರದ ಮೇಲಲ್ಲ, ಕುಟುಂಬಗಳ ಮೇಲೆ!
ಮದ್ಯಪಾನದಿಂದ ಉಂಟಾಗುವ ಅನಾರೋಗ್ಯ, ಚಿಕಿತ್ಸಾ ವೆಚ್ಚ, ಕೆಲಸಕ್ಕೆ ಗೈರುಹಾಜರಿ, ಕೆಲಸದ ಗುಣಮಟ್ಟದಲ್ಲಿ ಆಗುವ ಕೊರತೆಯಿಂದ ಆಗುವ ನಷ್ಟವು ಮದ್ಯ ಮಾರಾಟದಿಂದ ಬರುವ ವರಮಾನಕ್ಕಿಂತ ಶೇ 60ರಷ್ಟು ಹೆಚ್ಚಿನ ಪ‍್ರಮಾಣದ್ದಾಗಿದೆ! ಶೇ 70ರಷ್ಟು ಅಪಘಾತಗಳು ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದರಿಂದ ಸಂಭವಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರ ಮೇಲಾಗುವ ಶೇ 70ರಿಂದ ಶೇ 85ರಷ್ಟು ದೌರ್ಜನ್ಯಗಳಿಗೆ ಮದ್ಯಪಾನವೇ ಕಾರಣ. ಶೇ 75ರಷ್ಟು ಅತ್ಯಾಚಾರಿಗಳು ಕುಡುಕರೆಂದು ಅಧ್ಯಯನ ವರದಿ ಹೇಳುತ್ತದೆ. ತನ್ನ ಪ್ರಜೆಗಳ ಒಳಿತಿನ ಬಗ್ಗೆ ಜನಪ್ರತಿನಿಧಿಗಳಿಗೆ ಕಿಂಚಿತ್ ಕಾಳಜಿಯಿದ್ದರೂ ವರದಿಯನ್ನೋದಿ ಪಶ್ಚಾತ್ತಾಪದಿಂದ ಎದೆ ನಡುಗಬೇಕು! ಆದರೆ ಜನ, ಕುಟುಂಬ, ಸಮಾಜದ ಸ್ವಾಸ್ಥ್ಯ, ಮುಖ್ಯವಾಗಿ ಹೆಣ್ಣುಮಕ್ಕಳ ಬದುಕನ್ನು ಪಣಕ್ಕಿಟ್ಟು, ಮದ್ಯ ಮಾರಿದ ಆದಾಯದಲ್ಲಿ ರಾಜ್ಯ ನಡೆಸುತ್ತೇವೆ ಎನ್ನುವುದು ನಿರ್ಲಜ್ಜ ಸ್ಥಿತಿಯ ಪರಮಾವಧಿ.
ಬಿಹಾರ, ಗುಜರಾತ್, ಮಣಿಪುರ ಮತ್ತು ನಾಗಾಲ್ಯಾಂಡ್ ಈಗಾಗಲೇ ಸಂಪೂರ್ಣ ಮದ್ಯನಿಷೇಧ ಮಾಡಿವೆ. ಆಂಧ್ರಪ್ರದೇಶ, ತಮಿಳುನಾಡು ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಮದ್ಯಪಾನ ನಿಯಂತ್ರಣ ಕಾನೂನು ಜಾರಿಯಲ್ಲಿದೆ. ಈ ರಾಜ್ಯಗಳಲ್ಲಿ ಈಗ ಅಪರಾಧದ ಪ್ರಮಾಣ ಸರಾಸರಿ ಶೇ 30ರಷ್ಟು ಕಡಿಮೆಯಾಗಿರುವುದು ದಾಖಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ? ಮದ್ಯಪಾನ ಮಾಡುವವರ ಪ್ರಮಾಣ ಕಳೆದ ನಲವತ್ತು ವರ್ಷಗಳಲ್ಲಿ ಪ್ರತಿವರ್ಷ ಸರಾಸರಿ ಶೇ 18ರಷ್ಟು ಅಧಿಕವಾಗುತ್ತಿದೆ. ತನ್ಮೂಲಕ ಸರ್ಕಾರಗಳ ವರಮಾನದ ಪ್ರಮಾಣ ಏರಿದೆ! ಇದರಲ್ಲಿ ಹೆಣ್ಣುಜೀವಗಳ ಕಣ್ಣೀರಿನ ಕೋಡಿಯಿದೆ. ಅಸಹಾಯಕತೆಯಿಂದ ಹಾಕಿದ ಶಾಪವಿದೆ.
ಈ ನರಕದಿಂದ ಮುಕ್ತಿಗಾಗಿ ಮೂರು ದಶಕಗಳಿಂದ ಅಲ್ಲಲ್ಲಿ ಚದುರಿದಂತೆ ಪ್ರತಿಭಟಿಸುತ್ತಿದ್ದ ರಾಜ್ಯದ ನೊಂದ ಸಹೋದರಿಯರು ಈಗ ಒಗ್ಗೂಡಿದ್ದಾರೆ. ಮದ್ಯನಿಷೇಧಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಮುಖಾಮುಖಿಯಾಗಿ ಚಳವಳಿ ನಡೆಸುತ್ತಿದ್ದಾರೆ. ಈಗ್ಗೆ ಕೆಲವು ವರ್ಷಗಳ ಹಿಂದೆ ರಾಯಚೂರು ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟ ನಡೆಯುತ್ತಿತ್ತು. 2016ರ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು, ಎಲ್ಲ ಜಿಲ್ಲೆಗಳಿಗೆ ಸೇರಿದ 40 ಸಾವಿರದಷ್ಟು ಹೆಂಗಳೆಯರು ರಾಯಚೂರಿನಲ್ಲಿ ಒಗ್ಗೂಡಿ ‘ಕರ್ನಾಟಕದಲ್ಲಿ ಮದ್ಯನಿಷೇಧ ಕಾನೂನು ಜಾರಿಯಾಗಬೇಕು’ ಎಂಬ ಒಂದೇ ಬೇಡಿಕೆಯನ್ನು ಇಟ್ಟುಕೊಂಡು ಬೃಹತ್ ಹಾಗೂ ಐತಿಹಾಸಿಕ ಹೋರಾಟಕ್ಕಾಗಿ ಬೀದಿಗಿಳಿದಿದ್ದೇ ನಾಂದಿ. ಅಲ್ಲಿಂದ ಈ ಹೋರಾಟವು ಹಂತ ಹಂತವಾಗಿ ಪ್ರಬಲವಾಗುತ್ತಲೇ ಸಾಗಿದೆ.
ಅಬಕಾರಿ ಇಲಾಖೆಯ ಕಚೇರಿಗಳಲ್ಲಿ ಗಾಂಧೀಜಿಯ ಭಾವಚಿತ್ರದ ಅಡಿಯಲ್ಲೇ ಹೆಚ್ಚೆಚ್ಚು ಮದ್ಯ ಮಾರಾಟ ಮಳಿಗೆಗಳಿಗೆ ಪರವಾನಗಿಯನ್ನು ನೀಡುತ್ತಿರುವುದು ಗಾಂಧಿಯವರನ್ನೇ ಅಪಹಾಸ್ಯ ಮಾಡುವಂತಿದೆ! ಹೀಗೆಂದೇ ‘ಮದ್ಯನಿಷೇಧ ಆಂದೋಲನ ಕರ್ನಾಟಕ’ದ ಗೆಳತಿಯರು, ‘ನಮ್ಮ ಗಾಂಧಿ ನಮಗೆ ಕೊಡಿ. ಇಲ್ಲ, ಸರ್ಕಾರ ಮದ್ಯ ಮಾರಾಟ ನಿಲ್ಲಿಸಲಿ’ ಎಂದು ಹೆಚ್ಚಿನ ಜಿಲ್ಲೆಗಳಲ್ಲಿ ಹೋರಾಟ ನಡೆಸಿದ್ದರು. ಮದ್ಯನಿಷೇಧಕ್ಕೆ ಒತ್ತಾಯಿಸಿ, ಬಸವಕಲ್ಯಾಣದಿಂದ ಬೆಂಗಳೂರಿಗೆ ಹಾಗೂ ಮದ್ದೂರಿನಿಂದ ಆದಿಚುಂಚನಗಿರಿಗೆ ಪಾದಯಾತ್ರೆ ಮಾಡಿ, ದಾರಿಯುದ್ದಕ್ಕೂ ಅರಿವು ಮೂಡಿಸಿ, ಚಳವಳಿಯನ್ನು ಸಶಕ್ತಗೊಳಿಸಿದ್ದರು.
ಇದಾವುದಕ್ಕೂ ಮಿಸುಕಾಡದ ಸರ್ಕಾರದ ಕಣ್ಣು ತೆರೆಸಲು 3,000 ಹೆಣ್ಣುಮಕ್ಕಳ ನೇತೃತ್ವದಲ್ಲಿ, ಬೆಂಬಲಿಗರು ಕಳೆದ ವರ್ಷದ ಜ. 19ರಂದು ಚಿತ್ರದುರ್ಗದಿಂದ ಪಾದಯಾತ್ರೆ ಆರಂಭಿಸಿ, 12 ದಿನಗಳು ನಡೆದು, ಗಾಂಧೀಜಿ ಹುತಾತ್ಮರಾದ ಜ. 30ರಂದು ಬೆಂಗಳೂರು ತಲುಪಿದ್ದರು. ಪಾದಯಾತ್ರೆಯಲ್ಲಿ ರೇಣುಕಮ್ಮ ಎಂಬ ಬಡ ಹೋರಾಟಗಾರ್ತಿ ಅಪಘಾತಕ್ಕೀಡಾಗಿ ಪ್ರಾಣತ್ಯಾಗ ಮಾಡಿದರೂ ಆಗಿನ ಸರ್ಕಾರ ಮಿಸುಕಲಿಲ್ಲ! ಆದರೆ ‘ಸಂಪೂರ್ಣ ಮದ್ಯ ನಿಷೇಧ’ವೊಂದೇ ಸ್ವಸ್ಥ ಸಮಾಜಕ್ಕೆ ದಾರಿ ಎಂಬ ಕನಸು ಹೊತ್ತಿರುವ ಈ ತಾಯಂದಿರು 2019ರ ನ. 23ರಂದು ಬೆಂಗಳೂರಿನಲ್ಲಿ ಮತ್ತೆ ಉಪವಾಸ ಕೂರಲು ನಿರ್ಧರಿಸಿದರೂ ಅದಕ್ಕೆ ಅನುಮತಿ ನಿರಾಕರಿ
ಸಲಾಯಿತು. ಚಳವಳಿಯ ಪ್ರಾತಿನಿಧ್ಯ ವಹಿಸಿ ಪ್ರತೀ ಜಿಲ್ಲೆಯಿಂದ ಆಗಮಿಸಿದ್ದ ನೂರಾರು ತಾಯಂದಿರು ರೈಲು ನಿಲ್ದಾಣದಲ್ಲೇ ಧರಣಿ ಕೂತರು. ಆಗ ಉಪಮುಖ್ಯಮಂತ್ರಿಗಳು ಧರಣಿ ಸ್ಥಳಕ್ಕೆ ತೆರಳಿ, 15 ದಿನಗಳಲ್ಲಿ ಮುಖ್ಯಮಂತ್ರಿಯೊಂದಿಗೆ ಭೇಟಿ ಏರ್ಪಡಿಸುವುದಾಗಿ ಮಾತುಕೊಟ್ಟು ಹೋಗಿ ಎರಡು ತಿಂಗಳೇ ಕಳೆದು ಹೋಗಿದೆ. ಮದ್ಯ ರಾಕ್ಷಸನ ಹಾವಳಿಯಿಂದ ನೊಂದು ಹೋಗಿರುವ ತಾಯಂದಿರು ಇದೇ 27ರಿಂದ ಬಾಗಲಕೋಟೆಯ ಕೂಡಲಸಂಗಮದಲ್ಲಿ ಮತ್ತೆ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಿದ್ದಾರೆ. ಮದ್ಯನಿಷೇಧ ಬರೀ ಗಾಂಧೀಜಿ ಕನಸಲ್ಲ, ಸಂವಿಧಾನದ ಆಶಯವೂ ಆಗಿದೆ.
ಸಂವಿಧಾನದ 73ನೇ ತಿದ್ದುಪಡಿಯ ಆಶಯದಂತೆ, ಗ್ರಾಮಗಳ ಭವಿಷ್ಯವನ್ನು ನಿರ್ಧರಿಸುವ ಹಕ್ಕನ್ನು ಗ್ರಾಮಸಭೆಗೆ ನೀಡುವ ಮೂಲಕ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯದಂಗಡಿ ನಿಷೇಧಿಸುವ ಅಧಿಕಾರಕ್ಕಾಗಿ, ಸಂವಿಧಾನದ ವಿಧಿ 47ರಲ್ಲಿ ಇರುವಂತೆ ‘ಮದ್ಯಮುಕ್ತ ಕರ್ನಾಟಕ ನೀತಿ’ ಜಾರಿಗೆ ಮೂರು ತಿಂಗಳಲ್ಲಿ ಸಮಿತಿ ರಚಿಸುವಂತೆ ಒತ್ತಾಯಿಸಲಿಕ್ಕಾಗಿ, ಮದ್ಯದ ಅಕ್ರಮ ಮಾರಾಟ ನಿಲ್ಲಿಸಲಿಕ್ಕಾಗಿ... ಎಂಬೆಲ್ಲ ಬೇಡಿಕೆಗಳನ್ನಿಟ್ಟು, ವ್ಯವಸ್ಥೆಯ ಕಣ್ಣು ತೆರೆಸಲು ಈ ತಾಯಂದಿರು ಉಪವಾಸ ಕೂರಲಿದ್ದಾರೆ. ಅಹಿಂಸಾತ್ಮಕ ಪ್ರತಿರೋಧದ ಕಿಚ್ಚು ಸರ್ಕಾರಕ್ಕೆ ಈಗಲಾದರೂ ತಟ್ಟಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.