ADVERTISEMENT

ವಿಶ್ಲೇಷಣೆ | ದೇಶ ಎಷ್ಟು ಹುಲಿ ಪೋಷಿಸಬಹುದು?

ಹುಲಿಗಳ ಹೆಚ್ಚಳದ ಸಂಭ್ರಮದ ಸಮಯದಲ್ಲೇ ನಡೆಯುತ್ತಿದೆ ಅವುಗಳ ಭವಿಷ್ಯದ ಚರ್ಚೆ

ಎಚ್.ಆರ್.ಕೃಷ್ಣಮೂರ್ತಿ
Published 30 ಅಕ್ಟೋಬರ್ 2023, 19:30 IST
Last Updated 30 ಅಕ್ಟೋಬರ್ 2023, 19:30 IST
   

ದೇಶದಲ್ಲಿ 1973ರಲ್ಲಿ ಹುಲಿ ಯೋಜನೆ ಪ್ರಾರಂಭ ಆದಾಗ ಇದ್ದ ಹುಲಿಗಳ ಸಂಖ್ಯೆ 1,827. ಐವತ್ತು ವರ್ಷಗಳ ನಂತರ ಅವುಗಳ ಸಂಖ್ಯೆ 3,167ಕ್ಕೆ ಏರಿದೆ. ಇದೇ ಅವಧಿಯಲ್ಲಿ ಹುಲಿ ಯೋಜನಾ ಪ್ರದೇಶಗಳ ಸಂಖ್ಯೆ 9ರಿಂದ 53ಕ್ಕೆ ಏರಿದೆ. ಹುಲಿಗಳ ಸಂಖ್ಯೆಯ ಹೆಚ್ಚಳದ ಸಂಭ್ರಮದ ಸಮಯದಲ್ಲೇ ಮುಂದಿನ ದಶಕಗಳಲ್ಲಿ ಅವುಗಳ ಭವಿಷ್ಯಕ್ಕೆ ಸಂಬಂಧಿಸಿ ವ್ಯಾಪಕ ಚರ್ಚೆಗಳೂ ನಡೆಯುತ್ತಿವೆ.

ನಮ್ಮ ದೇಶದ ಅರಣ್ಯಗಳು ಒಟ್ಟಾರೆಯಾಗಿ ಎಷ್ಟು ಹುಲಿಗಳನ್ನು ಪೋಷಿಸಬಹುದೆಂಬುದು ಈ ಚರ್ಚೆಯ ಒಂದು ಮುಖ್ಯ ವಿಷಯ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಗ್ಲೋಬಲ್ ಟೈಗರ್ ಫೋರಂ ಅಭಿಪ್ರಾಯದಂತೆ ನಮ್ಮ ಅರಣ್ಯಗಳಲ್ಲಿ ಬದುಕಬಹುದಾದ ಹುಲಿಗಳ ಗರಿಷ್ಠ ಸಂಖ್ಯೆ 3,500ರಿಂದ 4,000. ಆದರೆ ವನ್ಯಜೀವಿ ವಿಜ್ಞಾನಿಗಳು ಇದನ್ನು ಒಪ್ಪುವುದಿಲ್ಲ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ 2018ರ ವರದಿಯಂತೆ ನಮ್ಮ ದೇಶದ ಶೇ 50ರಷ್ಟು ಹುಲಿ ಸಂರಕ್ಷಣಾ ಯೋಜನಾ ಪ್ರದೇಶಗಳ ನಿರ್ವಹಣೆ, ಕಾರ್ಯಾಚರಣೆಯ ಕಾರ್ಯಕ್ಷಮತೆ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಿದೆ. 18 ಹುಲಿ ಸಂರಕ್ಷಣಾ ಪ್ರದೇಶಗಳಲ್ಲಿ ಹುಲಿಗಳ ದಟ್ಟಣೆ 100 ಚ.ಕಿ.ಮೀಗೆ ಕೇವಲ ಒಂದು! ನಾಲ್ಕು ಹುಲಿಯೋಜನೆಯ ಕ್ಷೇತ್ರದಲ್ಲಿ ಹುಲಿಗಳೇ ಇರಲಿಲ್ಲ.

ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ದೇಶದ ಕೆಲವು ಭಾಗಗಳಲ್ಲಿ ಮಾತ್ರ. ಹೀಗಾಗಿ ಎಲ್ಲ 53 ಹುಲಿ ಯೋಜನೆಗಳ ಪ್ರದೇಶಗಳನ್ನು ವ್ಯವಸ್ಥಿತವಾದ, ವೈಜ್ಞಾನಿಕ ನಿರ್ವಹಣೆಗೆ ಒಳಪಡಿಸಿದರೆ, 75,796 ಚ.ಕಿ.ಮೀ.ಗಳ ಒಟ್ಟು ವಿಸ್ತೀರ್ಣದ ಪ್ರದೇಶದಲ್ಲೇ ಸುಮಾರು 5,000 ಹುಲಿಗಳು ಬದುಕುವುದು ಸಾಧ್ಯ. ಇದರೊಂದಿಗೆ ದೇಶದಲ್ಲಿ ಹುಲಿಗಳಿಗೆ ಸೂಕ್ತ ನೆಲೆಯನ್ನೊದಗಿಸಬಲ್ಲ 3.8 ಲಕ್ಷ ಚ.ಕಿ.ಮೀ.ಗಳಷ್ಟು ಅರಣ್ಯವಿದ್ದರೂ ಬದುಕಿ, ಸಮರ್ಥವಾಗಿ ಸಂತತಿಯನ್ನು ಮುಂದುವರಿಸಬಲ್ಲ ಹುಲಿ ಸಂಕುಲಗಳಿರುವುದು 50,000 ಚ.ಕಿ.ಮೀ. ಪ್ರದೇಶದ ಅರಣ್ಯಗಳಲ್ಲಿ ಮಾತ್ರ.

ADVERTISEMENT

ಹೀಗಾಗಿ ಹುಲಿ ಯೋಜನಾ ಪ್ರದೇಶಗಳಲ್ಲಿ, ಅದರ ಹೊರಗಿನ ಸಂರಕ್ಷಿತ ಪ್ರದೇಶಗಳಲ್ಲಿ ಮತ್ತು ಇತರ ಅರಣ್ಯಗಳಲ್ಲಿ, ಅರಣ್ಯ ಮತ್ತು ವನ್ಯಜೀವಿ ನಿರ್ವಹಣಾ ವಿಧಾನಗಳಲ್ಲಿ ಬದಲಾವಣೆಗಳನ್ನು ತಂದಲ್ಲಿ ಹುಲಿಗಳ ಸಂಖ್ಯೆಯನ್ನು 10 ಸಾವಿರದಿಂದ 15 ಸಾವಿರದವರೆಗೂ ಹೆಚ್ಚಿಸಲು ಅವಕಾಶಗಳಿವೆ. ಛತ್ತೀಸಗಢ, ಒಡಿಶಾ, ಜಾರ್ಖಂಡ್, ಅರುಣಾಚಲ ಪ್ರದೇಶ ಮತ್ತು ವಿಜೋರಾಂನಲ್ಲಿರುವ ಹುಲಿಗಳ ಆವಾಸದಲ್ಲಿ, ಹುಲಿ ಮತ್ತು ಅದರ ಬಲಿಪ್ರಾಣಿಗಳ ನಡುವಿನ ಸಂಬಂಧವನ್ನು ವೈಜ್ಞಾನಿಕವಾಗಿ ನಿರ್ವಹಿಸಿದರೆ ಹುಲಿಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಬಹುದೆಂಬುದು ವಿಜ್ಞಾನಿಗಳ ವಾದ.

ಹುಲಿಗಳು ವಿಶಾಲ ಭೂಪ್ರದೇಶದ ಪ್ರಾಣಿಗಳು. ಸುಮಾರು ಎರಡು ವರ್ಷಗಳ ಕಾಲ ತಾಯಿಯೊಂದಿಗೇ ಬದುಕುವ ಮರಿಗಳು ಆನಂತರ ತಮ್ಮ ಜನ್ಮಕ್ಷೇತ್ರದಿಂದ ದೂರಕ್ಕೆ ಚೆದರುತ್ತವೆ. ಈ ಚೆದರುವಿಕೆ ಹುಲಿಗಳ ಜೀನೀಯ ವೈವಿಧ್ಯದ ಆರೋಗ್ಯಕ್ಕೆ ಬಹು ಮುಖ್ಯ. ಹುಲಿಗಳಿರುವ ವಿವಿಧ ಅರಣ್ಯಗಳ ನಡುವಿನ ಸಂಪರ್ಕದ ಕೊಂಡಿದಾರಿಯಲ್ಲಿ (ಕಾರಿಡಾರ್) ಅಡೆತಡೆಗಳಿಲ್ಲದಿದ್ದಾಗ ಹುಲಿಗಳ ಸಂಚಾರ ಸುಗಮವಾಗುತ್ತದೆ. ಇದರೊಡನೆ ಸಂರಕ್ಷಿತ ಪ್ರದೇಶಗಳ ಹೊರಗಿರುವ ಶೇ 30ರಷ್ಟು ಹುಲಿಗಳ ಸಂಚಾರಕ್ಕೂ ಕೊಂಡಿದಾರಿಗಳು ಅಗತ್ಯ. ಸಣ್ಣ ವಿಸ್ತೀರ್ಣದ ಸಂರಕ್ಷಿತ ಪ್ರದೇಶವನ್ನು ಅಕ್ಕಪಕ್ಕದ ಅರಣ್ಯಗಳೊಂದಿಗೆ ಕೊಂಡಿದಾರಿಗಳ ಮೂಲಕ ಜೋಡಿಸುವುದರಿಂದ ಒಳತಳೀಕರಣದಿಂದ(ಇನ್‍ಬ್ರೀಡಿಂಗ್) ಹುಲಿಗಳು ಕಣ್ಮರೆಯಾಗುವ ಪ್ರಮಾಣವನ್ನು ಶೇ 70 ರಷ್ಟು ಕಡಿಮೆ ಮಾಡಬಹುದು ಎಂಬುದನ್ನು ಸಂಶೋಧನೆಗಳು ತೋರಿಸಿಕೊಟ್ಟಿವೆ. ಮುಂಬರುವ ದಶಕಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ವ್ಯಾಪಕವಾಗಿ ಅನುಷ್ಠಾನಗೊಳ್ಳಲಿರುವ ಅಭಿವೃದ್ಧಿ ಯೋಜನೆಗಳು, ಈ ಕೊಂಡಿದಾರಿಗಳನ್ನು ಕತ್ತರಿಸಿ, ಹುಲಿಸಂಕುಲಗಳನ್ನು ಸಣ್ಣ ಅರಣ್ಯ ಪ್ರದೇಶಗಳಿಗೆ ಸೀಮಿತಗೊಳಿಸದಂತೆ ನೋಡಿಕೊಳ್ಳುವುದು ಬಹುದೊಡ್ಡ ಸವಾಲಾಗಿದೆ.

ಹುಲಿಗಳ ಸಂರಕ್ಷಣೆ ಮತ್ತು ಅರಣ್ಯದಂಚಿನ ಸಮುದಾಯಗಳ ಜೀವನೋಪಾಯ ಮಾರ್ಗಗಳ ನಡುವೆ ಆರೋಗ್ಯಕರ ಸಂಬಂಧವನ್ನು ರೂಪಿಸಿ, ಕಾಪಾಡುವುದು ಮತ್ತೊಂದು ಮುಖ್ಯ ಸವಾಲು. ಈ ದಿಕ್ಕಿನಲ್ಲಿ ನಡೆದಿರುವ ಸ್ಥಳೀಯ ಸಮುದಾಯಗಳ ಸಹಭಾಗಿತ್ವದ ಪ್ರಯೋಗಗಳನ್ನು ಎಲ್ಲ ಅರಣ್ಯಗಳಿಗೂ ವಿಸ್ತರಿಸಬೇಕು. ಉದಾಹರಣೆಗೆ ಮಹಾರಾಷ್ಟ್ರದ ತಡೋಬಾ ಹುಲಿ ಸಂರಕ್ಷಣಾ ಪ್ರದೇಶದಲ್ಲಿ, ವನ್ಯಜೀವಿ ಪ್ರವಾಸೋದ್ಯಮದಿಂದ ದೊರೆತ ಸುಮಾರು ₹12 ಕೋಟಿಗಳಷ್ಟು ವರಮಾನವನ್ನು ಅಲ್ಲಿನ 94 ಹಳ್ಳಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ತಡೋಬಾ, ಪೆಂಚ್, ಬೋರ್ ಮತ್ತು ಉಮ್ರೆಡ್‍ಖಾರ್ ಹಂಡ್ಲಾ ಸಂರಕ್ಷಿತ ಪ್ರದೇಶಗಳ 25,000 ಕುಟುಂಬಗಳಿಗೆ ಎಲ್‍ಪಿಜಿ ಅನಿಲ ಮತ್ತು ಸ್ಟವ್‍ಗಳನ್ನು ಒದಗಿಸುವ ವೆಚ್ಚವನ್ನು ಹುಲಿ ಪ್ರವಾಸೋದ್ಯಮ ಭರಿಸುತ್ತಿದೆ. ವನ್ಯಜೀವಿ ಸಫಾರಿ ನಡೆಸುವ ಜವಾಬ್ದಾರಿಯನ್ನು ದೇವಡಾ ಮತ್ತು ಅಗರ್‍ಜರಿ ಹಳ್ಳಿಗಳ ತರಬೇತಿ ಪಡೆದ ಯುವಕರಿಗೆ ನೀಡಲಾಗಿದೆ. ಅದರಿಂದ ದೊರೆತ ವರಮಾನವು ಹಳ್ಳಿಗಳ ಪರಿಸರ ಅಭಿವೃದ್ಧಿ ಸಮಿತಿ ಯೋಜನೆಗಳಿಗೆ ಬಳಕೆಯಾಗುತ್ತಿದೆ.

ಹುಲಿಗಳ ಸಂಖ್ಯೆ ಹೆಚ್ಚಾದಂತೆ ಅರಣ್ಯದೊಳಗಿನ ಮತ್ತು ಅರಣ್ಯದಂಚಿನ ಜನಸಮುದಾಯಗಳ ಜೊತೆಗಿನ ಸಂಘರ್ಷದ ಪ್ರಕರಣಗಳೂ ಹೆಚ್ಚುತ್ತವೆ. ಅವುಗಳನ್ನು ಕಡಿಮೆ ಮಾಡಲು ಲಭ್ಯವಿರುವ ಅತಿಮುಖ್ಯ ಸಂರಕ್ಷಣಾ ಕಾರ್ಯೋಪಾಯವೆಂದರೆ, ಉತ್ತಮ ಜೀವನ, ಸೌಲಭ್ಯಗಳನ್ನು ಅರಸಿ ಸ್ವಇಚ್ಛೆಯಿಂದ ಅರಣ್ಯದಿಂದ ಹೊರಬರಲು ಆಶಿಸುವ ಅರಣ್ಯವಾಸಿಗಳಿಗೆ ಆಕರ್ಷಕ ಪ್ರೋತ್ಸಾಹಕಗಳನ್ನು ಒದಗಿಸುವುದು. ಕರ್ನಾಟಕದಲ್ಲಿ ಈ ರೀತಿ ಸ್ವಇಚ್ಛೆಯಿಂದ ಹೊರಬಂದು ಬದುಕು ಕಟ್ಟಿಕೊಂಡ 500 ಕುಟುಂಬಗಳಿವೆ. ಸದ್ಯದಲ್ಲಿ ದೇಶದಾದ್ಯಂತ ಕುಂಟುತ್ತ ಸಾಗಿರುವ ಈ ಯೋಜನೆಗೆ ಅಗತ್ಯ ಆರ್ಥಿಕ ಸಂಪನ್ಮೂಲ ಒದಗಿಸುವುದರ ಮೂಲಕ ಭವಿಷ್ಯದಲ್ಲಿ ಸಂಘರ್ಷದ ಪ್ರಕರಣಗಳನ್ನು ನಿಯಂತ್ರಿಸಬೇಕಾಗಿದೆ. ಸಂರಕ್ಷಿತ ಪ್ರದೇಶದ ಹೊರಗೆ ಕಂಡುಬರುವ ಸಂಘರ್ಷದ ಪ್ರಕರಣಗಳಿಗೆ, ಆಯಾ ಸ್ಥಳ ನಿರ್ದಿಷ್ಟವಾದ ಕಾರ್ಯೋಪಾಯಗಳನ್ನು ಜಾರಿಗೆ ತರುವ ಅಗತ್ಯವಿದೆ. ಇದನ್ನು ಸಾಧಿಸಲು ಪ್ರತಿಯೊಂದು ಹುಲಿ ಯೋಜನಾ ಪ್ರದೇಶದಲ್ಲೂ, ಸ್ಥಳೀಯ ಸಮಸ್ಯೆಗಳ ಪರಿಚಯವಿರುವ, ಅನುಭವಸ್ಥ ವನ್ಯಜೀವಿ ವಿಜ್ಞಾನಿಗಳನ್ನು ಯೋಜನೆಯ ಭಾಗವಾಗಿ ನೇಮಿಸಿಕೊಳ್ಳಬೇಕೆಂಬುದು ಪರಿಣತರ ಒತ್ತಾಯ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಶಾಹಿ ಮನೋಭಾವದ ಕಾರ್ಯವೈಖರಿಯ ಬಗ್ಗೆ ವನ್ಯಜೀವಿ ವಿಜ್ಞಾನಿಗಳ ವಲಯದಲ್ಲಿ ಅಸಮಾಧಾನವಿದೆ. ಹುಲಿಗಳ ಸ್ಥಿತಿಗತಿಯ ನಿಗಾವಣೆ, ಗಣತಿ, ಸಂಶೋಧನೆ, ಶೈಕ್ಷಣಿಕ ಕಾರ್ಯಕ್ರಮಗಳು, ಪ್ರವಾಸೋದ್ಯಮ, ಸಮುದಾಯಗಳ, ಹುಲಿಗಳ ಸ್ಥಳಾಂತರದಂಥ ಸರ್ವಸಮಸ್ತ ಚಟುವಟಿಕೆಗಳೂ ಪ್ರಾಧಿಕಾರದ ಸರ್ಕಾರಿ ಅಧಿಕಾರಿಗಳ ಮೇಲ್ವಿಚಾರಣೆಯಲ್ಲೇ ನಡೆಯಬೇಕಾದ ಉಸಿರುಗಟ್ಟಿಸುವ ಪರಿಸ್ಥಿತಿಯಲ್ಲಿ ಸ್ವತಂತ್ರ ಮನೋಭಾವದ, ಪ್ರತಿಭಾವಂತ ವಿಜ್ಞಾನಿಗಳು ದೂರ ಉಳಿದಿದ್ದಾರೆ. ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಕೇಂದ್ರ ಸರ್ಕಾರದ ಅರಣ್ಯ ಸಚಿವರ ಬದಲಿಗೆ ಅನುಭವಸ್ಥ ವನ್ಯಜೀವಿ ವಿಜ್ಞಾನಿಗೆ ನೀಡಬೇಕು. ಹುಲಿ ಸಂರಕ್ಷಣೆಯಲ್ಲಿ ಅತ್ಯುತ್ತಮ ಪರಿಣತಿಯಿರುವ ತಜ್ಞರನ್ನು ಪ್ರಾಧಿಕಾರದ ಸದಸ್ಯರಾಗಿ ನೇಮಿಸಬೇಕು. ಪ್ರಾಧಿಕಾರಕ್ಕೆ ನಿಯೋಜನೆಯ ಮೇಲೆ ಬರುವ ಸರ್ಕಾರಿ ಅಧಿಕಾರಿಗಳಿಗೆ, ಹುಲಿ ಸಂರಕ್ಷಣೆ, ನಿರ್ವಹಣೆಗೆ ಸಂಬಂಧಿಸಿ ಮೂರು ತಿಂಗಳ ಕ್ಷೇತ್ರಾಧಾರಿತ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕೆಂಬ ಸಲಹೆಗಳನ್ನು ವನ್ಯಜೀವಿ ವಿಜ್ಞಾನಿಗಳು ನೀಡಿದ್ದಾರೆ.

ಹುಲಿ ಸಂರಕ್ಷಣೆಗೆ ಪ್ರಬಲವಾದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಆಯಾಮಗಳಿವೆ. ಭವಿಷ್ಯದ ಹುಲಿ ಸಂರಕ್ಷಣಾ ಕಾರ್ಯಕ್ರಮಗಳನ್ನು ರೂಪಿಸಿ, ಜಾರಿಗೊಳಿಸುವಾಗ ಅರಣ್ಯಗಳ ಸುತ್ತಲಿನ ಜನರ ಸಾಮಾಜಿಕ, ಆರ್ಥಿಕ ನಿರೀಕ್ಷೆ, ಆಕಾಂಕ್ಷೆಗಳನ್ನೂ ಗಮನದಲ್ಲಿಟ್ಟುಕೊಂಡು, ಎಲ್ಲ ಅಭಿವೃದ್ಧಿ ಯೋಜನೆಗಳನ್ನೂ ಸಾರಾಸಗಟಾಗಿ ತಿರಸ್ಕರಿಸದೇ, ಸಾಧ್ಯವಾದ ಕಡೆಗಳಲ್ಲಿ ಅವುಗಳಿಗೆ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾದ ಅಗತ್ಯವಿದೆ. ಸಂರಕ್ಷಣೆಯ ಕೆಲಸಗಳು ವಿಜ್ಞಾನದ ಭದ್ರ ಬುನಾದಿಯ ಮೇಲೆ ನಿಂತು, ವ್ಯಾವಹಾರಿಕ ಜಾಣ್ಮೆಯನ್ನು ಒಳಗೊಂಡಾಗ ಮಾತ್ರ ಸಂರಕ್ಷಣೆಯ ಪ್ರಯತ್ನಗಳು ಸಫಲವಾಗುತ್ತವೆ. ಹುಲಿಗಳ ಸಂರಕ್ಷಣೆ ಮತ್ತು ಪುನಶ್ಚೇತನದ ಜವಾಬ್ದಾರಿ ಹೊತ್ತಿರುವ ಹುಲಿಸಂರಕ್ಷಣಾ ಪ್ರಾಧಿಕಾರ ಮತ್ತು ದೇಶದ ಎಲ್ಲ ಅರಣ್ಯ ಇಲಾಖೆಗಳು, ಕಳೆದ ಐದು ದಶಕಗಳ ಸಂಶೋಧನೆಗಳಿಂದ ದೊರೆತಿರುವ ವೈಜ್ಞಾನಿಕ ಕೌಶಲ, ಪರಿಣತಿ ಮತ್ತು ಅಮೂಲ್ಯ ಮಾಹಿತಿಯನ್ನು ಮಂದಿನ ದಶಕಗಳಲ್ಲಿ ಸಮರ್ಥವಾಗಿ ಬಳಸಿಕೊಳ್ಳಬೇಕಾದ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.