ADVERTISEMENT

ವಿಶ್ಲೇಷಣೆ: ಪ್ರಜಾಪ್ರಭುತ್ವದ ಬಲವರ್ಧನೆಯ ಅಗತ್ಯ...

ಅಭಿವ್ಯಕ್ತಿ ಸ್ವಾತಂತ್ರ್ಯವು ವಿಶ್ವಮಟ್ಟದಲ್ಲಿ ಹಲವು ಬಗೆಯ ಕಂಟಕಗಳನ್ನು ಎದುರಿಸುತ್ತಿದೆ

ವಿ.ಪಿ.ನಿರಂಜನಾರಾಧ್ಯ
Published 26 ಸೆಪ್ಟೆಂಬರ್ 2024, 19:02 IST
Last Updated 26 ಸೆಪ್ಟೆಂಬರ್ 2024, 19:02 IST
   

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಇತ್ತೀಚೆಗಷ್ಟೇ ಆಚರಿಸಿದ್ದೇವೆ. ಜಾಗತಿಕವಾಗಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಜಾಪ್ರಭುತ್ವದ ಸ್ಥಿತಿಗತಿಯನ್ನು ವಸ್ತುನಿಷ್ಠವಾಗಿ ಅವಲೋಕಿಸುವ ಮತ್ತು ಅದನ್ನು ಇನ್ನಷ್ಟು ಬಲಪಡಿಸಲು ಅಗತ್ಯವಾದ ಕಾರ್ಯತಂತ್ರಗಳನ್ನು ರೂಪಿಸುವ ಅವಕಾಶವನ್ನು ಈ ಸಂದರ್ಭವು ನಮಗೆ ಒದಗಿಸುತ್ತದೆ. ಪ್ರಜಾಪ್ರಭುತ್ವವು ಸ್ವಚ್ಛ, ನ್ಯಾಯಯುತ, ಪಾರದರ್ಶಕ, ಉತ್ತರದಾಯಿತ್ವ ಮತ್ತು ಭ್ರಷ್ಟಾಚಾರರಹಿತ  ಆಡಳಿತ ವ್ಯವಸ್ಥೆ, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ತಾರತಮ್ಯರಹಿತ ಸಮ ಸಮಾಜವನ್ನು ಕಟ್ಟಿಕೊಡುವ ಗುರಿಯನ್ನು ಹೊಂದಿದೆ.

ಪ್ರಜಾಪ್ರಭುತ್ವದ ಆದರ್ಶ ಮತ್ತು ಉದಾತ್ತ ಗುರಿಗಳನ್ನು ಸಾಕಾರಗೊಳಿಸಲು ಅಂತರರಾಷ್ಟ್ರೀಯ ಸಮುದಾಯ, ರಾಷ್ಟ್ರೀಯ ಆಡಳಿತ ವ್ಯವಸ್ಥೆಗಳು, ಸ್ಥಳೀಯ ಸರ್ಕಾರಗಳು, ನಾಗರಿಕ ಸಮಾಜ ಮತ್ತು ವ್ಯಕ್ತಿಗಳ ಸಂಪೂರ್ಣ ಭಾಗವಹಿಸುವಿಕೆಯು ಒಂದು ಅಪೇಕ್ಷಿತ ಅಗತ್ಯವಾಗಿದೆ. ಪ್ರಜಾಪ್ರಭುತ್ವದ ಬಲವರ್ಧನೆಯ ಭಾಗವಾಗಿ ಸರ್ಕಾರಗಳು ಜನರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುವ, ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದ ನಡೆ ಹಾಗೂ ಕ್ರಿಯೆಗಳನ್ನು ವಿರೋಧಿಸುವ ವಿಷಯದಲ್ಲಿ ಪೂರ್ಣ ಸ್ವಾತಂತ್ರ್ಯವನ್ನು ನೀಡಬೇಕಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯವು ಮಾನವನ ಮೂಲಭೂತ ಹಕ್ಕಾಗಿದೆ. ಮಾನವ ಹಕ್ಕುಗಳ ಮೊದಲ ಸಾರ್ವತ್ರಿಕ ಘೋಷಣೆಯ ವಿಧಿ 19ರ ಅನ್ವಯ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ. ಈ ಹಕ್ಕು ಯಾವುದೇ ಬಗೆಯ ಹಸ್ತಕ್ಷೇಪವಿಲ್ಲದೆ ಅಭಿಪ್ರಾಯಗಳನ್ನು ಹೊಂದುವ ಮತ್ತು ಭೌಗೋಳಿಕ ಗಡಿಗಳನ್ನು ಲೆಕ್ಕಿಸದೆ ಯಾವುದೇ ಮಾಧ್ಯಮದ ಮೂಲಕ ಮಾಹಿತಿ ಮತ್ತು ಅಭಿಪ್ರಾಯವನ್ನು ಶೋಧಿಸುವ, ಪಡೆಯುವ ಮತ್ತು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಒಳಗೊಂಡಿದೆ.

ADVERTISEMENT

ಇದೇ ರೀತಿ, ನಮ್ಮ ಭಾರತ ಸಂವಿಧಾನದ ವಿಧಿ 19ರ ಅನ್ವಯ ಎಲ್ಲ ನಾಗರಿಕರಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಶಸ್ತ್ರಾಸ್ತ್ರಗಳಿಲ್ಲದೆ ಶಾಂತಿಯುತವಾಗಿ ಒಂದೆಡೆ ಸೇರುವ ಸ್ವಾತಂತ್ರ್ಯ, ಸಂಘ-ಸಂಸ್ಥೆ, ಒಕ್ಕೂಟಗಳು ಅಥವಾ ಸಹಕಾರ ಸಂಘಗಳನ್ನು ರಚಿಸಿಕೊಳ್ಳುವ ಸ್ವಾತಂತ್ರ್ಯ, ಭಾರತದ ಭೂಪ್ರದೇಶದಾದ್ಯಂತ ಮುಕ್ತವಾಗಿ ಓಡಾಡುವ, ಯಾವುದೇ ಭಾಗದಲ್ಲಿ ವಾಸಿಸುವ ಮತ್ತು ನೆಲಸುವ, ಯಾವುದೇ ವೃತ್ತಿ ಅಥವಾ ಯಾವುದೇ ಉದ್ಯೋಗ ಮಾಡುವ ಅಥವಾ ವ್ಯಾಪಾರವನ್ನು ಕೈಗೊಳ್ಳುವ ಸ್ವಾತಂತ್ರ್ಯವನ್ನು ನೀಡಲಾಗಿದೆ.

ಆದರೆ, ಭಾರತವನ್ನೂ ಒಳಗೊಂಡಂತೆ ಪ್ರಪಂಚದಾದ್ಯಂತ ಇಂದು ಸರ್ಕಾರಗಳು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಅಧಿಕಾರವನ್ನು ಬಳಸಿ ನಾಗರಿಕ ಸ್ವಾತಂತ್ರ್ಯಗಳನ್ನು ಅದರಲ್ಲೂ ವಿಶೇಷವಾಗಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸುವ ಕೆಲಸವನ್ನು ಅವ್ಯಾಹತವಾಗಿ ಮಾಡುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಜನವಿರೋಧಿ ಅಥವಾ ಪ್ರಜಾಪ್ರಭುತ್ವ ವಿರೋಧಿ ತೀರ್ಮಾನಗಳನ್ನು ಕೈಗೊಂಡಾಗ, ಜನ ತಮ್ಮ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿ ಸಂಘಟಿತರಾಗಿ ಶಾಂತಿಯುತ ಪ್ರತಿಭಟನೆ ನಡೆಸುವ ಮೂಲಭೂತ ಹಕ್ಕನ್ನು ಸರ್ಕಾರಗಳು ಯಾವುದೇ ಒಂದು ಬಗೆಯಲ್ಲಿ ದಮನಗೊಳಿಸುವ ಕೆಲಸವನ್ನು ಮಾಡುತ್ತಿವೆ.

ಅಭಿಪ್ರಾಯಭೇದವನ್ನು ಒಪ್ಪುವುದು ಹಾಗೂ ಭಿನ್ನಾಭಿಪ್ರಾಯವನ್ನು ದಾಖಲಿಸುವುದು ಪ್ರಜಾಪ್ರಭುತ್ವದ ಜೀವಾಳ. ಭಿನ್ನಾಭಿಪ್ರಾಯ ಹೊಂದುವುದು ಮಾನವನ ಮೂಲಭೂತ ಲಕ್ಷಣ. ಎಲ್ಲವನ್ನೂ ಒಪ್ಪುವ ವ್ಯಕ್ತಿ ಮಾನವ ಇತಿಹಾಸದಲ್ಲಿ ವಿರಳ. ತತ್ವಶಾಸ್ತ್ರಜ್ಞರು ಹೇಳುವಂತೆ, ಒಂದು ಮಗು ಕೂಡ ಬೇಕು- ಬೇಡ ಎಂದು ಹೇಳುವ ಮೂಲಕ ಅಭಿಪ್ರಾಯ ಅಥವಾ ಭಿನ್ನಾಭಿಪ್ರಾಯವನ್ನು ದಾಖಲಿಸಲು ಪ್ರಾರಂಭಿಸುತ್ತದೆ. ಅಂದರೆ, ಪ್ರಾಥಮಿಕವಾಗಿ ನಾವು ‘ವ್ಯಕ್ತಿ’ ಎನಿಸಿಕೊಳ್ಳುವುದು ನಮ್ಮ ಅಭಿಪ್ರಾಯ ಅಥವಾ ಭಿನ್ನಾಭಿಪ್ರಾಯವನ್ನು ದಾಖಲಿಸುವ ಮೂಲಕ. ನಿಜ ಹೇಳಬೇಕೆಂದರೆ, ಭಿನ್ನಾಭಿಪ್ರಾಯವಿಲ್ಲದ ಕುಟುಂಬ, ಸಮಾಜ, ದೇಶ ಅಥವಾ ಜಗತ್ತು ಇರಲು ಸಾಧ್ಯವಿಲ್ಲ. ಯಾವುದೇ ಬಗೆಯ ಭಿನ್ನಾಭಿಪ್ರಾಯವನ್ನು ತಳ್ಳಿಹಾಕುವ ಬದಲು ಅದನ್ನು ಅರ್ಥಮಾಡಿಕೊಂಡು ನಿಭಾಯಿಸಲು ಕಲಿಯುವುದು ಶಾಂತಿ, ಸಾಮರಸ್ಯ, ಸಹಬಾಳ್ವೆ ಮತ್ತು ನೆಮ್ಮದಿಗೆ ರಹದಾರಿಯಾಗುತ್ತದೆ. ಆಗ ಕುಟುಂಬ, ದೇಶ ಮತ್ತು ಜಗತ್ತು ಶಾಂತಿ- ಸಾಮರಸ್ಯದ ತೋಟಗಳಾಗುತ್ತವೆ.

ತಜ್ಞರು ಪ್ರತಿಪಾದಿಸುವಂತೆ, ಕಾರ್ಯನಿರತ ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯವು ನಿರ್ಣಾಯಕ ಪಾತ್ರ ವಹಿಸುತ್ತದೆ. ಒಪ್ಪದಿರುವ, ಚರ್ಚಿಸುವ, ಸಂವಾದಿಸುವ ಮತ್ತು ಮಂಥನ ನಡೆಸುವ ಪ್ರಜಾಸತ್ತಾತ್ಮಕ ಕ್ರಿಯೆಯು ಸಹಮತವನ್ನು  ಮೂಡಿಸುವ ಬಲಿಷ್ಠ ಸಾಧನವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಭಿನ್ನಾಭಿಪ್ರಾಯಗಳು ಸಹಜ ಹಾಗೂ ಅಗತ್ಯ. ಅದರಲ್ಲೂ ರಾಜಕೀಯ ಭಿನ್ನಾಭಿಪ್ರಾಯಗಳಂತೂ ಸರ್ವೇ ಸಾಮಾನ್ಯ. ಇದು ವಿರೋಧ ಪಕ್ಷಗಳಿಗೆ ಸರ್ಕಾರದ ನೀತಿ, ನಿರ್ಧಾರ, ಕಾರ್ಯಕ್ರಮ ಮತ್ತು ಕಾನೂನುಗಳನ್ನು ಟೀಕಿಸುವ ಹಕ್ಕನ್ನು ಒದಗಿಸುತ್ತದೆ.

ಪ್ರಜಾಪ್ರಭುತ್ವದಲ್ಲಿ ಮೌಲ್ಯಾಧಾರಿತ ತಾತ್ವಿಕ ಭಿನ್ನಾಭಿಪ್ರಾಯವು ಉತ್ತಮ ಆಡಳಿತ ಒದಗಿಸುವುದರ ಜೊತೆಗೆ ಸರ್ಕಾರವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಜೊತೆಗೆ ಸಾಮಾಜಿಕ, ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ಉಲ್ಲಂಘಿಸುವಂತಹ ಸರ್ಕಾರದ ಕ್ರಮಗಳನ್ನು ಪ್ರಶ್ನಿಸಲು ಮತ್ತು ಶಾಂತಿಯುತವಾಗಿ ಪ್ರತಿಭಟಿಸಲು ಎಲ್ಲಾ ನಾಗರಿಕರಿಗೆ ಅನುವು ಮಾಡಿಕೊಡುತ್ತದೆ. ಶಾಂತಿಯುತ ಪ್ರತಿಭಟನೆಗಳು ಮತ್ತು ಚರ್ಚೆಗಳು ಸಾರ್ವಜನಿಕ ಜಾಗೃತಿ ಮೂಡಿಸಲು ಸಹಾಯ ಮಾಡುತ್ತವೆ ಮತ್ತು ಸರ್ಕಾರ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಒದಗಿಸುತ್ತವೆ.

‘ವಿಶ್ವದಲ್ಲಿ ಪ್ರಜಾಪ್ರಭುತ್ವ– 2024’ ವರದಿಯ ಪ್ರಕಾರ, ವಿಶ್ವದಲ್ಲಿ ಸಾಧಾರಣ ವ್ಯಕ್ತಿ ಅನುಭವಿಸುವ ಪ್ರಜಾಪ್ರಭುತ್ವದ ಮಟ್ಟವು 1985ರಲ್ಲಿದ್ದ ಮಟ್ಟಕ್ಕೆ ಇಳಿದಿದೆ. ಅಂದರೆ, ಸುಮಾರು 40 ವರ್ಷಗಳಷ್ಟು ಹಿಂದಕ್ಕೆ ಸರಿದಿದೆ. ದೇಶಗಳನ್ನು ಆಧರಿಸಿದ ಸರಾಸರಿಯ ಪ್ರಕಾರ ಇದು 1998ರ ಮಟ್ಟಕ್ಕೆ ಇಳಿದಿದೆ. ಈ ಬಗೆಯ ಕುಸಿತವು ಪೂರ್ವ ಯುರೋಪ್, ದಕ್ಷಿಣ ಮತ್ತು ಮಧ್ಯ ಏಷ್ಯಾದಲ್ಲಿ ಎದ್ದುಕಾಣುತ್ತಿದೆ. ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ರಾಷ್ಟ್ರಗಳ  ಸ್ಥಿತಿಯು ಜಾಗತಿಕವಾದ ಈ ಪ್ರವೃತ್ತಿಗೆ ವಿರುದ್ಧವಾಗಿದ್ದು, ಪ್ರಜಾಪ್ರಭುತ್ವದ ಮಟ್ಟ ಹೆಚ್ಚಿದೆ. ಚಿಕ್ಕ ದೇಶಗಳಿಗಿಂತ ದೊಡ್ಡ ದೇಶಗಳು ಹೆಚ್ಚಿನ ಮಟ್ಟಿಗೆ ಅರ್ಥಪೂರ್ಣ ಪ್ರಜಾಪ್ರಭುತ್ವವನ್ನು ಹೊಂದಿವೆ.

ಈ ವರದಿಯ ಮತ್ತೊಂದು ಪ್ರಮುಖ ಅಂಶವೆಂದರೆ, ಪ್ರಪಂಚವು ಪ್ರಜಾಪ್ರಭುತ್ವ ಮತ್ತು ನಿರಂಕುಶ ಪ್ರಭುತ್ವಗಳ ನಡುವೆ ಬಹುಮಟ್ಟಿಗೆ ಸಮನಾಗಿ ಹಂಚಿಹೋಗಿದೆ. ವಿಶ್ವದ ಜನಸಂಖ್ಯೆಯ ಶೇಕಡ 71ರಷ್ಟು, ಅಂದರೆ 570 ಕೋಟಿಯಷ್ಟು ಜನರು ನಿರಂಕುಶ ಪ್ರಭುತ್ವದ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ಪ್ರಮಾಣವು ಹತ್ತು ವರ್ಷಗಳಷ್ಟು ಹಿಂದಿನ ಸ್ಥಿತಿಗೆ ಹೋಲಿಸಿದರೆ ಶೇಕಡ 48ರಷ್ಟು ಹೆಚ್ಚಾಗಿದೆ. ಜಾಗತಿಕವಾಗಿ ಹಾಗೂ ರಾಷ್ಟ್ರಗಳ ಮಟ್ಟದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಮುಕ್ತ ಹಾಗೂ ಪಾರದರ್ಶಕ ಚುನಾವಣೆಗಳನ್ನು ನಡೆಸುವ ಪರಿಸ್ಥಿತಿಯು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಈ ಅವಧಿಯಲ್ಲಿ, ಹೆಚ್ಚು ದೇಶಗಳಲ್ಲಿ ಪ್ರಜಾಪ್ರಭುತ್ವದ ಬಹುತೇಕ ಸಾಂಸ್ಥಿಕ ಸಂಸ್ಥೆಗಳು ಮತ್ತು ಘಟಕಗಳು ಬಲವರ್ಧನೆಗೊಂಡು ಉತ್ತಮವಾಗುವ ಬದಲು ದುರ್ಬಲಗೊಂಡಿವೆ.

ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಅತ್ಯಂತ ಕೆಟ್ಟ ಸ್ಥಿತಿಯನ್ನು ಎದುರಿಸುತ್ತಿದೆ. 2023ರಲ್ಲಿ ವರದಿಯಾದಂತೆ, ಸುಮಾರು 35 ದೇಶಗಳಲ್ಲಿ ಇದು ಹದಗೆಟ್ಟಿದೆ. ಮುಕ್ತ ಹಾಗೂ ಪಾರದರ್ಶಕ ಚುನಾವಣೆಗಳು ಕೆಟ್ಟ ಸ್ಥಿತಿಯಲ್ಲಿರುವ ವ್ಯವಸ್ಥೆಯ ಪಟ್ಟಿಯಲ್ಲಿ ಎರಡನೇ ಸಾಲಿನಲ್ಲಿವೆ. 23 ದೇಶಗಳಲ್ಲಿ ಪರಿಸ್ಥಿತಿ ಹದಗೆಟ್ಟಿದ್ದರೆ, 12 ದೇಶಗಳಲ್ಲಿ ಸುಧಾರಿಸುತ್ತಿದೆ. ಸಂಘ-ಸಂಸ್ಥೆಗಳನ್ನು ಕಟ್ಟಿಕೊಳ್ಳುವ ಸ್ವಾತಂತ್ರ್ಯ ಕೂಡ ಮೊಟಕಾಗಿದೆ. ಸುಮಾರು 20 ದೇಶಗಳು ಈ ಹಕ್ಕನ್ನು ನಿರ್ಬಂಧಿಸಿವೆ. ಜಗತ್ತು ನಿರಂಕುಶ ಪ್ರಭುತ್ವದ ಕಡೆಗೆ ಸಾಗುತ್ತಿರುವ ಅಲೆಯು ಗಮನಾರ್ಹವಾಗಿ ಹೆಚ್ಚುತ್ತಿದೆ.

ಪ್ರಪಂಚದ 42 ದೇಶಗಳು ನಿರಂಕುಶಾಧಿಕಾರ ಅಥವಾ ನಿರಂಕುಶ ಪ್ರಭುತ್ವಕ್ಕೆ ಒಳಪಟ್ಟಿವೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎನಿಸಿಕೊಂಡಿರುವ ಮತ್ತು ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 18ರಷ್ಟು ಜನಸಂಖ್ಯೆಯನ್ನು ಹೊಂದಿರುವ ಭಾರತದ ಸ್ಥಿತಿ ಕೂಡ ಉತ್ತಮವಾಗಿಲ್ಲ ಎಂದು ವರದಿ ತಿಳಿಸುತ್ತದೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಪ್ರಜಾಪ್ರಭುತ್ವದ ಮೂಲ ಲಕ್ಷಣಗಳಾದ ಬಹುತ್ವ, ಬಹುಸಂಸ್ಕೃತಿ, ಬಹುಭಾಷೆ, ವೈವಿಧ್ಯದ ನೆಲೆಯಲ್ಲಿ ವಿವಿಧ ಅಭಿಪ್ರಾಯ ಅಥವಾ ಭಿನ್ನಾಭಿಪ್ರಾಯಗಳ ಮೂಲಕ ಟೀಕೆ ಮಾಡುವ ಸ್ವಾತಂತ್ರ್ಯವನ್ನು ಕಾನೂನುಬದ್ಧವಾಗಿ ರಕ್ಷಿಸುವ ಕೆಲಸ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವ ಅರ್ಥಪೂರ್ಣವಾಗುತ್ತದೆ. ಈ ಕೆಲಸ ತುರ್ತಾಗಿ ಆಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.