ADVERTISEMENT

ಸಿಎಎ ಎತ್ತುವ ತಾತ್ವಿಕ ಪ್ರಶ್ನೆಗಳು | ದಿನೇಶ್ ಅಮಿನ್ ಮಟ್ಟು ಬರಹ

ಪಾಕ್‌ನಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಭಾರತ ನಿರ್ದಿಷ್ಟವಾಗಿ ಚರ್ಚಿಸಿದೆಯೇ?

ದಿನೇಶ್ ಅಮಿನ್ ಮಟ್ಟು
Published 15 ಜನವರಿ 2020, 5:54 IST
Last Updated 15 ಜನವರಿ 2020, 5:54 IST
   

ಪ್ರಜೆ ಮತ್ತು ಪ್ರಭುತ್ವದ ನಡುವಿನ ವಿಶ್ವಾಸವೇ ಪ್ರಜಾಪ್ರಭುತ್ವದ ಬುನಾದಿ. ರಾಜಕೀಯ ಸಿದ್ಧಾಂತದ ಬಗೆಗಿನ ಭಿನ್ನ ಅಭಿಪ್ರಾಯಗಳನ್ನು ಇಟ್ಟುಕೊಂಡೇ ಜನ, ಸರ್ಕಾರವನ್ನು ಸ್ವೀಕರಿಸಬಹುದು. ಆದರೆ, ಆಡಳಿತಾರೂಢರು ಬಹಿರಂಗವಾಗಿ ಸಾರುತ್ತಿರುವ ಅಜೆಂಡಾ (ಕಾರ್ಯಸೂಚಿ) ಜೊತೆ ಗುಪ್ತ ಅಜೆಂಡಾ ಇದೆ ಎಂಬ ಅನುಮಾನ ಅವರಿಗೆ ಬರಬಾರದು. ಬಿಜೆಪಿಯ ಸಮಸ್ಯೆ ಇದು. ಇತರ ರಾಜಕೀಯ ಪಕ್ಷಗಳಿಗೂ ಈ ಪಕ್ಷಕ್ಕೂ ಇರುವ ಪ್ರಮುಖ ವ್ಯತ್ಯಾಸ ಕೂಡಾ ಇದೇ ಆಗಿದೆ.

ಜನ, ಬಹುಮತದಿಂದ ನಮ್ಮ ಪಕ್ಷವನ್ನು ಆರಿಸಿಲ್ಲವೇ? ನಮ್ಮ ಚುನಾವಣಾ ಪ್ರಣಾಳಿಕೆಯನ್ನು ಒಪ್ಪಿಕೊಂಡಿ
ಲ್ಲವೇ? ಹಾಗಿದ್ದರೆ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ), ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ (ಎನ್‌ಪಿಆರ್‌) ವಿರೋಧ ಯಾಕೆ ಎಂಬ ಪ್ರಶ್ನೆಗಳನ್ನು ಪ್ರಧಾನಿ ಕೇಳುತ್ತಿದ್ದಾರೆ. ಮೇಲ್ನೋಟಕ್ಕೆ ಪ್ರಶ್ನೆಗಳು ಸರಿಯಾಗಿವೆ. ಹೀಗಾಗಿಯೇ, ರಾಮಮಂದಿರ ನಿರ್ಮಾಣದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗ, ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನವನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿದಾಗ ಜನ ಈಗಿನಂತೆ ಪ್ರತಿಭಟನೆ ನಡೆಸಲಿಲ್ಲ. ಈ ವಿಷಯಗಳನ್ನು ಮೂರು ದಶಕಗಳಿಂದ ನಿರಂತರವಾಗಿ ತನ್ನ ಪ್ರಮುಖ ಕಾರ್ಯಕ್ರಮಗಳಾಗಿ ಬಿಜೆಪಿ ಬಿಂಬಿಸುತ್ತಾ ಬಂದಿರುವುದು ಇದಕ್ಕೆ ಕಾರಣ.

ಹಾಗಿದ್ದರೆ ಸಿಎಎ, ಎನ್ಆರ್‌ಸಿ ಬಗ್ಗೆ ಪ್ರತಿರೋಧ ಯಾಕೆ ಭುಗಿಲೆದ್ದಿದೆ? ಮೊದಲನೆಯದಾಗಿ, ಪ್ರಣಾಳಿಕೆ
ಯಲ್ಲಿ ಸರಳವಾಗಿ ಎರಡು ಸಾಲಿನಲ್ಲಿ ಹೇಳುವ ವಿಚಾರಕ್ಕೂ ಅದು ಕಾಯ್ದೆಯಾಗಿ ಪಡೆಯುವ ರೂಪಕ್ಕೂ ವ್ಯತ್ಯಾಸ ಇರುತ್ತದೆ. ಸಿಎಎ ಬಗ್ಗೆ ಈಗಲೂ ಒಂದು ವರ್ಗದ ಜನರಿಗೆ ವಿರೋಧ ಇಲ್ಲ, ಸಿಎಎ ಜೊತೆ ಎನ್‌ಆರ್‌ಸಿ ಜೋಡಿಸುವುದಕ್ಕೆ ವಿರೋಧ ಇದೆ. ಎನ್‌ಪಿಆರ್ ಬಗ್ಗೆ ಅಲ್ಲ, ಎನ್‌ಪಿಆರ್‌ನ ಪ್ರಶ್ನಾವಳಿಗೆ ಸೇರಿಸಿರುವ ಹೊಸ ಪ್ರಶ್ನೆಗಳ ಬಗ್ಗೆ ವಿರೋಧ ಇದೆ.

ADVERTISEMENT

ಎರಡನೆಯದಾಗಿ, ಜನರು ಕಾನೂನನ್ನು ಮಾತ್ರವಲ್ಲ, ಅದನ್ನು ಅನುಷ್ಠಾನಗೊಳಿಸುವ ನಾಯಕತ್ವ ಮತ್ತು ಪಕ್ಷವನ್ನು ಅವುಗಳ ಸಮಗ್ರ ಹಿನ್ನೆಲೆಯೊಂದಿಗೆ ನೋಡುತ್ತಾರೆ. ಮೋದಿ ಮತ್ತು ಅಮಿತ್‌ ಶಾ ಜೋಡಿಗೆ ಮುಸ್ಲಿಮರ ಬಗ್ಗೆ ಇರುವ ಪೂರ್ವಗ್ರಹವನ್ನು ಗುಜರಾತ್ ನರಮೇಧವೂ ಸೇರಿದಂತೆ ಅಲ್ಲಿ ನಡೆಸಿರುವ ದುಸ್ಸಾ
ಹಸಗಳ ಜೊತೆಯಲ್ಲಿಯೇ ನೋಡುತ್ತಾರೆ. ಅದೇ ರೀತಿ, ಆರ್‌ಎಸ್ಎಸ್ ಪ್ರಣೀತ ಹಿಂದುತ್ವದ ಸಿದ್ಧಾಂತದ ಜೊತೆಯಲ್ಲಿಯೇ ಬಿಜೆಪಿ ನೇತೃತ್ವದ ಸರ್ಕಾರದ ನಡವಳಿಕೆಯನ್ನು ನೋಡುತ್ತಾರೆ. ಜನರಲ್ಲಿ ಹುಟ್ಟಿಕೊಂಡಿರುವ ಈ ಅನುಮಾನಗಳನ್ನು ಪರಿಹರಿಸುವ ಬದಲಿಗೆ ಪ್ರಧಾನಿ ಮತ್ತು ಗೃಹ ಸಚಿವರು ಪರಸ್ಪರ ವೈರುಧ್ಯಗಳಿಂದ ಕೂಡಿದ ಹೇಳಿಕೆಗಳ ಮೂಲಕ ಈ ಕೊರತೆಯನ್ನು ಇನ್ನಷ್ಟು ಹಿಗ್ಗಿಸಿದ್ದಾರೆ.

ತಾಂತ್ರಿಕ ವಿಷಯವನ್ನು ಪಕ್ಕಕ್ಕಿಟ್ಟು, ಇದರ ಹಿಂದಿರುವ ತಾತ್ವಿಕತೆಯ ಸುತ್ತ ಮೂಡಿರುವ ಪ್ರಶ್ನೆಗಳ ಬಗ್ಗೆ ಚರ್ಚೆ ಮಾಡೋಣ. ಮೊದಲನೆಯದಾಗಿ, ಪಾಕಿಸ್ತಾನದಲ್ಲಿ (ಜತೆಗೆ ಬಾಂಗ್ಲಾದೇಶ, ಅಫ್ಗಾನಿಸ್ತಾನ) ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿರುವ ಹಿಂದೂಗಳ ರಕ್ಷಣೆಗಾಗಿ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎನ್ನುವುದು ಸರ್ಕಾರದ ವಾದ. ಭಾರತ– ಪಾಕಿಸ್ತಾನದ ನಡುವೆ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ನೂರಾರು ಸುತ್ತಿನ ಮಾತುಕತೆಗಳಾಗಿವೆ, ಶೃಂಗಸಭೆಗಳಾಗಿವೆ. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ಎಲ್ಲಿಯಾದರೂ ನಿರ್ದಿಷ್ಟವಾಗಿ ಚರ್ಚೆ ನಡೆದಿದೆಯೇ?

ವಿದೇಶಾಂಗ ವ್ಯವಹಾರಗಳ ಚತುರ ಅಟಲ್‌ ಬಿಹಾರಿ ವಾಜಪೇಯಿ ಅವರಾಗಲೀ, ಐದೂವರೆ ವರ್ಷಗಳ ಅವಧಿಯಲ್ಲಿ 60 ದೇಶಗಳನ್ನು ಸುತ್ತಿ ತಮ್ಮ ಬೆಂಬಲಿಗರಿಂದ ವಿಶ್ವಗುರು ಎಂದು ಬೋಪರಾಕು ಹೇಳಿಸಿಕೊಳ್ಳುತ್ತಿರುವ ಮೋದಿ ಅವರಾಗಲೀ ಎಂದಾದರೂ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ, ಈ ಕುರಿತು ಪ್ರಸ್ತಾಪ ಮಾಡಿದ್ದಾರೆಯೇ? ಉದಾಹರಣೆಗೆ, ಶ್ರೀಲಂಕಾದಲ್ಲಿ ತಮಿಳರ ಮೇಲಿನ ದೌರ್ಜನ್ಯದ ವಿಷಯವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಚರ್ಚೆಯಾಗಿದ್ದು ಮಾತ್ರವಲ್ಲ, ಅಲ್ಲಿನ ಸರ್ಕಾರದ ನಡವಳಿಕೆಯನ್ನು ಖಂಡಿಸಿ ಗೊತ್ತುವಳಿಯೊಂದನ್ನು 2012ರಲ್ಲಿ ಅಂಗೀಕರಿಸಲಾಗಿತ್ತು.ಭಾರತದ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ 24 ದೇಶಗಳ ಮುಖ್ಯಸ್ಥರು ಅದಕ್ಕೆ ಸಹಿ ಹಾಕಿದ್ದರು.

ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಬಿಜೆಪಿ ನೇತೃತ್ವದ ಸರ್ಕಾರ ಇಷ್ಟೊಂದು ಗಂಭೀರವಾದ ಸಮಸ್ಯೆಯೆಂದು ತಿಳಿದಿದ್ದರೆ,ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಾದರೂಅದನ್ನು ಪ್ರಸ್ತಾಪಿಸಬೇಕಿತ್ತಲ್ಲವೇ? ಬೆಂಬಲಿಗರು ಹೇಳಿಕೊಳ್ಳುವಂತೆ ಮೋದಿಯವರು ವಿಶ್ವಪ್ರಸಿದ‍್ಧರಾಗಿದ್ದರೆ, ಇಂತಹದ್ದೊಂದು ಗೊತ್ತುವಳಿಯನ್ನು ಅಂಗೀಕರಿಸುವಂತೆ ಮಿತ್ರದೇಶಗಳ ಮನವೊಲಿಸಬೇಕಿತ್ತಲ್ಲವೇ?

ಕಳೆದ ವರ್ಷ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌, ಕಾಶ್ಮೀರದಲ್ಲಿ ಮುಸ್ಲಿಮರ ಮೇಲೆ ಭಾರತ ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಆಗಿನ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್, ಪಾಕಿಸ್ತಾನದಲ್ಲಿ ಅಲ್ಲಿನ ಸರ್ಕಾರವು ಶಿಯಾ ಮತ್ತು ಅಹ್ಮದೀಯ ಜನಾಂಗದ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿದ್ದರು. ಇಷ್ಟನ್ನು ಬಿಟ್ಟರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ.

ಎರಡನೆಯದಾಗಿ, ತುಮಕೂರಿನ ಮಠವೊಂದಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಮೋದಿಯವರು ಸಿಎಎ ಮತ್ತು ಎನ್‌ಆರ್‌ಸಿ ಕಸರತ್ತನ್ನು ಸಮರ್ಥಿಸಿಕೊಳ್ಳುತ್ತಾ, ಪಾಕಿಸ್ತಾನ ಸರ್ಕಾರ ಅಲ್ಲಿನ ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿದರು. ಪ್ರಧಾನಿ ಈ ಆರೋಪ ಮಾಡುವ ಮೊದಲು, ತಮ್ಮದೇ ನೇತೃತ್ವದ ಸರ್ಕಾರದ ಎನ್‌ಸಿಆರ್‌ಬಿಯ ಇತ್ತೀಚಿನ ವರದಿ ಮೇಲೆ ಕಣ್ಣಾಡಿಸಬೇಕಿತ್ತಲ್ಲವೇ? ಈ ದೇಶದಲ್ಲಿ ಪ್ರತಿ ಎರಡು ಗಂಟೆಗೊಬ್ಬರಂತೆ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪ್ರತಿದಿನ ಇಬ್ಬರು ದಲಿತರ ಹತ್ಯೆ ಮತ್ತು ಮೂವರು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಅವರು ಹಿಂದೂಗಳಲ್ಲವೇ?

ತಮ್ಮದೇ ತವರು ನೆಲ ಗುಜರಾತ್‌ನಲ್ಲಿ 2003ರಿಂದ 2018ರವರೆಗಿನ ಅವಧಿಯಲ್ಲಿ ದಲಿತರು ಮತ್ತು ಆದಿವಾಸಿಗಳ ಮೇಲಿನ ದೌರ್ಜನ್ಯದ ಪ್ರಮಾಣವು ಶೇ 70ರಷ್ಟು ಹೆಚ್ಚಾಗಿದೆ. ಅದೇ ಗುಜರಾತ್‌ನ ಊನಾದಲ್ಲಿ ಸತ್ತ ದನದ ಚರ್ಮ ತೆಗೆಯುತ್ತಿದ್ದ ದಲಿತರ ಚರ್ಮ ಸುಲಿಯಲಾಯಿತು. ಒಬ್ಬ ಸಂಸದ, ದಲಿತರನ್ನು ನಾಯಿಗಳು ಎನ್ನುತ್ತಾರೆ. ಇನ್ನೊಬ್ಬ ಸಂಸದೆ, ದಲಿತರು ತಾವು ಚಪ್ಪಲಿ ಇಡುವ ಜಾಗದಲ್ಲಿ ಕೂರುತ್ತಿದ್ದರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇಂತಹ ಪಕ್ಷಕ್ಕೆ ಸೇರಿರುವ ಪ್ರಧಾನಿಯವರಿಗೆ, ಪಾಕಿಸ್ತಾನದಲ್ಲಿನ ದಲಿತರನ್ನು ಧಾರ್ಮಿಕ ದೌರ್ಜನ್ಯದಿಂದ ರಕ್ಷಿಸಲು ಸಿಎಎ ಜಾರಿಗೆ ತರಲಾಗಿದೆ ಎಂದು ಹೇಳುವ ನೈತಿಕತೆ ಇದೆಯೇ?

ಮೂರನೆಯದಾಗಿ, ಸಿಎಎ ಅನ್ನು ಹಿಂದೂ, ಜೈನ, ಬೌದ್ಧ, ಪಾರ್ಸಿ, ಸಿಖ್, ಕ್ರೈಸ್ತ ಧರ್ಮಗಳಿಗೆ ಸೀಮಿತಗೊಳಿಸ
ಲಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಮುಸ್ಲಿಮರನ್ನು ಹೊರಗಿಟ್ಟಿರುವ ಸರ್ಕಾರವು ಕ್ರೈಸ್ತರನ್ನು ಮಾತ್ರ
ಸೇರಿಸಿಕೊಂಡಿದೆ, ಯಾಕೆ? ಮತಾಂತರಕ್ಕೆ ಸಂಬಂಧಿಸಿದಂತೆ ಸಂಘ ಪರಿವಾರಕ್ಕೆ ಮುಸ್ಲಿಮರ ಮೇಲೆ ಇರುವುದ
ಕ್ಕಿಂತ ಹೆಚ್ಚಿನ ಆಕ್ರೋಶಕ್ರೈಸ್ತ ಸಮುದಾಯದ ಮೇಲಿದೆ.

ದಿನೇಶ್ ಅಮಿನ್ ಮಟ್ಟು

ದೌರ್ಜನ್ಯಕ್ಕೊಳಗಾಗಿರುವ ಮುಸ್ಲಿಮರಿಗೆ ಆಶ್ರಯ ನೀಡಲು ಬೇರೆ ಮುಸ್ಲಿಂ ರಾಷ್ಟ್ರಗಳಿವೆ ಎಂದು ಈ ನಿರ್ಧಾರವನ್ನು ಸರ್ಕಾರ ಸಮರ್ಥಿಸುತ್ತಿದೆ. ಇದೇ ತರ್ಕವು ಕ್ರೈಸ್ತರಿಗೂ ಅನ್ವಯವಾಗಬೇಕಲ್ಲವೇ? ವಿಶ್ವದ ಪ್ರತಿ ಮೂವರಲ್ಲಿ ಒಬ್ಬರು ಕ್ರೈಸ್ತರು. ಅಮೆರಿಕ, ಇಂಗ್ಲೆಂಡ್ ಸೇರಿದಂತೆ ವಿಶ್ವದಲ್ಲಿ ಕ್ರೈಸ್ತರು ಬಹುಸಂಖ್ಯಾತರಾಗಿರುವ ಹಲವು ದೇಶಗಳಿಲ್ಲವೇ? ಕಾರಣ ಇದಲ್ಲ, ತಮ್ಮ ತದ್ರೂಪಿಯಂತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಎದುರಿಸುವ ಧೈರ್ಯಮೋದಿಯವರ 56ಇಂಚಿನ ಎದೆಯಲ್ಲಿ ಇಲ್ಲ. ಆ ದೇಶ ತಿರುಗಿಬಿದ್ದರೆ ಎದುರಿಸುವ ಶಕ್ತಿಯೂ ಇಲ್ಲ. ಇದಕ್ಕಾಗಿಯೇ ಈ ಹೊಂದಾಣಿಕೆ.

ತಾತ್ವಿಕ ಹಿನ್ನೆಲೆಯಲ್ಲಿಯೇ ಕೇಳಬಹುದಾದ ಇಂತಹ ಪ್ರಶ್ನೆಗಳಿಗೆ ಪ್ರಧಾನಿಯವರಲ್ಲಿ ಖಂಡಿತ ಉತ್ತರಗಳಿಲ್ಲ, ನಿರುತ್ತರನಾದ ವ್ಯಕ್ತಿ ಅಂತಿಮವಾಗಿ ಪ್ರಯೋಗಿಸುವುದು ತನ್ನ ಬಲವನ್ನು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.