ADVERTISEMENT

ವಿಶ್ಲೇಷಣೆ: ವಿವಾದದ ಸುಳಿಯಲ್ಲಿ ನದಿ ಜೋಡಣೆ

ನದಿ ಸಂಪರ್ಕ ಯೋಜನೆಗಳು ತ್ವರಿತಗತಿಯಲ್ಲಿ ಮುನ್ನಡೆಯಲಿವೆಯೆಂದು ಸಂಭ್ರಮಿಸುವುದು ಅವಸರದ ನಡೆ

ಡಾ.ಎಚ್.ಆರ್.ಕೃಷ್ಣಮೂರ್ತಿ
Published 2 ಮೇ 2021, 20:08 IST
Last Updated 2 ಮೇ 2021, 20:08 IST
   

ಬೇಡ್ತಿ ಮತ್ತು ವರದಾ ನದಿ ಜೋಡಣೆಯ ಪ್ರಸ್ತಾವದ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಮಾರ್ಚ್ 24ರಂದು ಶಿರಸಿಯಲ್ಲಿ ಪರಿಣತರು ಒಟ್ಟಾಗಿ ಸೇರಿದ್ದ ಸಮಯದಲ್ಲೇ ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯದ ಅಧಿಕಾರಿಗಳು ಸಂಭ್ರಮದ ಲಹರಿಯಲ್ಲಿದ್ದರು.

ಎರಡೇ ದಿನಗಳಷ್ಟು ಹಿಂದೆ, ಮಾರ್ಚ್ 22ರ ವಿಶ್ವ ಜಲ ದಿನಾಚರಣೆಯಂದು, ಜಲಶಕ್ತಿ ಸಚಿವಾಲಯದ ಸತತ ಪ್ರಯತ್ನದಿಂದ, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ಸರ್ಕಾರಗಳು ಕೆನ್ ಮತ್ತು ಬೆಟ್ವಾ ನದಿಗಳ ಜೋಡಣೆಯಿಂದ ದೊರೆಯುವ ನೀರಿನ ಹಂಚಿಕೆಯ ಒಪ್ಪಂದಕ್ಕೆ ಸಹಿ ಹಾಕಿದ್ದವು. ಸುಮಾರು ಎರಡು ದಶಕಗಳ ಕಾಲ ಕಗ್ಗಂಟಾಗಿದ್ದ ಈ ಸಮಸ್ಯೆ ಬಗೆಹರಿದಿದ್ದ
ರಿಂದ, ಕೆನ್ ಮತ್ತು ಬೆಟ್ವಾ ನದಿಗಳ ಜೋಡಣೆಯ ಕಾಮಗಾರಿಗಳು ಪ್ರಾರಂಭವಾಗಿ, ದೇಶದ ಉಳಿದ 29 ನದಿಗಳ ತ್ವರಿತಗತಿಯ ಜೋಡಣೆಗೆ ಪ್ರೇರಣೆಯಾಗಲಿದೆ ಎಂಬ ನಿರೀಕ್ಷೆಯೇ ಸಂಭ್ರಮಕ್ಕೆ ಕಾರಣವಾಗಿತ್ತು.

ಕೆನ್ ಮತ್ತು ಬೆಟ್ವಾ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದ ಮೂಲಕ ಹರಿದು ಮುಂದೆ ಯಮುನೆಯನ್ನು ಸೇರುವ ಎರಡು ಮುಖ್ಯ ನದಿಗಳು. ಈ ನದಿಗಳನ್ನು ಜೋಡಿಸಿ, ಕೆನ್ ನದಿಯಲ್ಲಿರುವ ಹೆಚ್ಚುವರಿ ನೀರನ್ನು ಬೆಟ್ವಾಗೆ ವರ್ಗಾಯಿಸುವುದು ಯೋಜನೆಯ ಮುಖ್ಯ ಉದ್ದೇಶ. ನದಿ ಜೋಡಣೆ ಪೂರ್ಣಗೊಂಡ ನಂತರ, ಮಧ್ಯಪ್ರದೇಶದ 8.11 ಲಕ್ಷ ಹೆಕ್ಟೇರ್, ಉತ್ತರಪ್ರದೇಶದ 2.51 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆತು, ಎರಡೂ ರಾಜ್ಯಗಳ 62 ಲಕ್ಷ ಜನರಿಗೆ ಕುಡಿಯುವ ನೀರು ಲಭಿಸುವುದರೊಡನೆ, 103 ಮೆಗಾವಾಟ್‍ಗಳಷ್ಟು ವಿದ್ಯುತ್‌ ಉತ್ಪಾದನೆ ಆಗಲಿದೆಯೆಂದು ಯೋಜನಾ ವರದಿ ತಿಳಿಸುತ್ತದೆ.

ADVERTISEMENT

ಎರಡು ಹಂತಗಳಲ್ಲಿ ನಡೆಯಲಿರುವ ಈ ನದಿಗಳ ಜೋಡಣೆಯಲ್ಲಿ ಮಧ್ಯಪ್ರದೇಶದ ಚತ್ತಾರ್‍ಪುರ ಜಿಲ್ಲೆಯ ದೌಧನ್ ಹಳ್ಳಿಯ ಬಳಿ ಕೆನ್ ನದಿಗೆ ಅಡ್ಡವಾಗಿ 77 ಮೀಟರ್ ಎತ್ತರ ಮತ್ತು ಸುಮಾರು 2 ಕಿ.ಮೀ. ಅಗಲದ ಕಟ್ಟೆ ನಿರ್ಮಾಣವಾಗಲಿದೆ. ಅಲ್ಲಿಂದ 230 ಕಿ.ಮೀ. ಉದ್ದದ ಕಾಲುವೆಯ ಮೂಲಕ ನೀರನ್ನು ಬೆಟ್ವಾ ನದಿಗೆ ವರ್ಗಾಯಿಸಲಾಗುತ್ತದೆ. ದೌಧನ್ ಅಣೆಕಟ್ಟೆಯಿಂದ ಉಂಟಾಗುವ ಹಿನ್ನೀರಿನ ಜಲಾಶಯದಿಂದ 10 ಹಳ್ಳಿಗಳು ಮುಳುಗಡೆಯಾಗಲಿದ್ದು, 1,585 ಕುಟುಂಬಗಳ 10,000 ಜನರನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಗುತ್ತದೆ. ಇದರೊಂದಿಗೆ ವಿಶ್ವವಿಖ್ಯಾತ ಪನ್ನಾ ಹುಲಿ ಸಂರಕ್ಷಣಾ ಯೋಜನಾ ಪ್ರದೇಶದ ಕೇಂದ್ರ ಭಾಗದ 4,400 ಹೆಕ್ಟೇರ್ ಪ್ರದೇಶವೂ ಜಲಾಶಯದ ನೀರಿನಲ್ಲಿ ಮುಳುಗುತ್ತದೆ.

ಈ ಯೋಜನೆಯನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಹೊತ್ತಿರುವ ನ್ಯಾಷನಲ್ ವಾಟರ್ ಡೆವಲಪ್‍ಮೆಂಟ್ ಏಜೆನ್ಸಿ, ಯೋಜನೆಗೆ ಸಂಬಂಧಿಸಿದಂತೆ ‘ಪರಿಸರ ಪರಿಣಾಮ ಮೌಲ್ಯಮಾಪನಾ ವರದಿ’ಯನ್ನು (ಎನ್‍ವೈರನ್ಮೆಂಟ್ ಇಂಪ್ಯಾಕ್ಟ್ ಅಸೆಸ್‍ಮೆಂಟ್) ಸಿದ್ಧಪಡಿಸಿ, 2015ರಲ್ಲಿ ಅನುಮೋದನೆಗಾಗಿ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಸಲ್ಲಿಸಿತು. ಈ ವರದಿಯ ವಿರುದ್ಧ ತೀವ್ರ ವಿರೋಧಗಳಿದ್ದರೂ ಕೆಲವು ಬದಲಾವಣೆಗಳನ್ನು ಸೂಚಿಸಿದ ನಂತರ ಮಂಡಳಿಯು ಕೆನ್-ಬೆಟ್ವಾ ಯೋಜನೆಯ ಮೊದಲ ಹಂತಕ್ಕೆ ಅನುಮತಿ ನೀಡಿತು. ಆದರೆ ಮುಂಬೈ ಕನ್ಸರ್‍ವೇಷನ್ ಟ್ರಸ್ಟ್ ಈ ಅನುಮೋದನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು.

ನ್ಯಾಯಾಲಯದ ನಿರ್ದೇಶನದಂತೆ, ಸುಪ್ರೀಂ ಕೋರ್ಟ್‌ನ ‘ಸೆಂಟ್ರಲ್ ಎಂಪವರ್ಡ್ ಕಮಿಟಿ’ ಈ ಅರ್ಜಿಯ ಕೂಲಂಕಷವಾದ ವಿಚಾರಣೆ ನಡೆಸಿ, 2019ರ ಆಗಸ್ಟ್ 30ರಂದು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದೆ. ಪರಿಸರ ಪರಿಣಾಮ ಮೌಲ್ಯಮಾಪನದಲ್ಲಿನ ತಪ್ಪುಗಳು, ಕೊರತೆಗಳು, ಪರಿಶೀಲಿಸದೇ ಕೈಬಿಟ್ಟಿರುವ ವಿಷಯಗಳು, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅವಸರದ ನಿರ್ಧಾರಗಳು ಮುಂತಾದವುಗಳನ್ನು ವರದಿ ಎಳೆಎಳೆಯಾಗಿ ಬಿಚ್ಚಿ ತೋರಿಸಿದೆ.

ಕೆನ್ ನದಿ ಹಾಗೂ ಅದರ ಜಲಾನಯನ ಪ್ರದೇಶದಲ್ಲಿ ಹೆಚ್ಚುವರಿ ನೀರಿದೆ ಎಂಬ ಮೂಲಭೂತ ಅಂಶವನ್ನೇ ಕಮಿಟಿ ಮೊದಲು ಪ್ರಶ್ನಿಸಿದೆ. ನದಿ ಜೋಡಣೆಯ ಮೊದಲ ಹಂತದಿಂದ ದೊರೆಯುತ್ತದೆ ಎಂದು ವರದಿ ತಿಳಿಸುವ ಬಹುತೇಕ ಪ್ರಯೋಜನಗಳು, ಅದೇ ಪ್ರದೇಶದಲ್ಲಿನ ಬೇರೆ ಬೇರೆ ಯೋಜನೆಗಳಿಂದ ಈಗಾಗಲೇ ದೊರೆಯುತ್ತಿವೆ ಎಂಬ ಅಂಶದತ್ತ ಗಮನ ಸೆಳೆಯುವ ಈ ಸಮಿತಿಯ ವರದಿ, ನೀರಿನ ಸಂರಕ್ಷಣೆಗಿರುವ ಹತ್ತು ಹಲವಾರು ಮಾರ್ಗಗಳನ್ನು ಉದಾಹರಿಸಿ, ಅವುಗಳನ್ನು ಯೋಜನೆಯ ಬದಲಿಗೆ ಪರ್ಯಾಯ ಉಪಾಯಗಳಾಗಿ ಪರಿಶೀಲಿಸದಿರುವುದಕ್ಕೆ ಕಾರಣಗಳನ್ನು ಕೇಳಿದೆ.

ಪನ್ನಾ ಹುಲಿ ಸಂರಕ್ಷಣಾ ಪ್ರದೇಶದ ಕೇಂದ್ರ ಭಾಗದ 4,400 ಹೆಕ್ಟೇರ್ ಪ್ರದೇಶ ಮುಳುಗಡೆಯಾಗಿ ಅಲ್ಲಿನ 50ಕ್ಕೂ ಹೆಚ್ಚಿನ ಹುಲಿಗಳಿಗೆ ಹಾಗೂ ಇತರ ಜೀವಿಗಳಿಗೆ ಆಗುವ ತೊಂದರೆಗಳನ್ನು ವನ್ಯಜೀವಿ ಮಂಡಳಿ ಗಂಭೀರವಾಗಿ ಪರಿಗಣಿಸಿಯೇ ಇಲ್ಲವೆಂದು ಖಾರವಾಗಿ ಪ್ರತಿಕ್ರಿಯಿಸಿದೆ. ಅಷ್ಟೇ ಅಲ್ಲ, ದೌಧನ್ ಅಣೆಕಟ್ಟೆಯ ಕೆಳಭಾಗದಲ್ಲಿರುವ ಘರಿಯಾಲ್ ವನ್ಯಧಾಮ ಮತ್ತು ಅಪರೂಪದ ರಣಹದ್ದು ಪ್ರಭೇದಗಳಿಗೆ ತಾಣವಾಗಿರುವ ಪ್ರದೇಶದ ಬಗ್ಗೆ ಮಂಡಳಿ ಯಾವ ಕಾಳಜಿಯನ್ನೂ ತೋರಿಲ್ಲವೆಂಬ ಅಂಶವನ್ನೂ ಪ್ರಸ್ತಾಪಿಸಿದೆ.

ಪನ್ನಾ ಕೇವಲ ಹುಲಿ ಸಂರಕ್ಷಣಾ ಪ್ರದೇಶವಲ್ಲ. ಅದು ಪನ್ನಾ ರಾಷ್ಟ್ರೀಯ ಉದ್ಯಾನವನ. ಈ ಪ್ರದೇಶದಲ್ಲಿ ಹರಿಯುವಾಗ ಕೆನ್ ನದಿ 60 ಕಿ.ಮೀ. ಉದ್ದ, 150ರಿಂದ 180 ಕಿ.ಮೀ. ಆಳದ ಕಮರಿಯನ್ನು ಸೃಷ್ಟಿಸಿದೆ. ನದಿಯ ಎರಡೂ ಪಕ್ಕಗಳಲ್ಲಿರುವ ಕೋಡುಗಲ್ಲುಗಳು, ಇಳಿಜಾರು ಬಂಡೆಗಳು, ಅನೇಕ ಜಲಪಾತಗಳು ಇಲ್ಲಿ ವಿಶಿಷ್ಟವಾದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ಆಶ್ರಯ ನೀಡಿವೆ. ಹುಲಿಯ ಜೊತೆಗೆ ಅಲ್ಲಿನ ಪರಿಸರ, ಜೀವಜಾಲದ ಭಾಗವಾದ ಈ ಎಲ್ಲವನ್ನೂ ಸಂರಕ್ಷಿಸಬೇಕು. ಅದೇ ರಾಷ್ಟ್ರೀಯ ಉದ್ಯಾನದ ಪರಿಕಲ್ಪನೆ. ಆದರೆ ಮಂಡಳಿ ಇಂತಹ ಸಮಗ್ರ ದೃಷ್ಟಿಯನ್ನು ತೋರದೇ ಯೋಜನೆಗೆ ಅನುಮತಿ ನೀಡಿರುವುದನ್ನು ಕಮಿಟಿ ಎತ್ತಿ ತೋರಿದೆ.

ನದಿ ಸಂಪರ್ಕ ಯೋಜನೆಯ ವೆಚ್ಚ- ಲಾಭ ವಿಶ್ಲೇಷಣೆಯಲ್ಲಿ, ವೆಚ್ಚದಡಿಯಲ್ಲಿ ಬರಬೇಕಾದ ಹಲವಾರು ಅಂಶಗಳನ್ನು ಕೈಬಿಟ್ಟಿರುವುದನ್ನು ಎತ್ತಿ ತೋರಿರುವ ವರದಿ, ಒಟ್ಟಾರೆಯಾಗಿ ಯೋಜನೆಯಿಂದ ದೊರೆಯುವ ಲಾಭಕ್ಕಿಂತ ವೆಚ್ಚವೇ ಹೆಚ್ಚು ಎಂಬ ನಿರ್ಧಾರಕ್ಕೆ ಬಂದಿದೆ. ಈ ವರದಿ ಈಗ ಸುಪ್ರೀಂ ಕೋರ್ಟ್‌ ಮುಂದಿದ್ದು ಅದರ ಪರಿಶೀಲನೆಗೆ ಬರಬೇಕಾಗಿದೆ.

ಕೆನ್-ಬೆಟ್ವಾ ಯೋಜನೆ ಕಾರ್ಯಗತವಾಗಲು ಪರಿಸರ, ಅರಣ್ಯ ಮತ್ತು ವಾಯುಗುಣ ಬದಲಾವಣೆ ಸಚಿವಾಲಯದ ಅನುಮೋದನೆಯೂ ಬೇಕು. ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಗೆ ಈ ಅನುಮೋದನೆ 2017ರ ಆಗಸ್ಟ್‌ನಲ್ಲಿ ದೊರೆಯಿತು. ಅದೇ ವರ್ಷ ಅಕ್ಟೋಬರ್‌ನಲ್ಲಿ ಈ ಅನುಮೋದನೆಯನ್ನು, ‘ಸೌತ್ ಏಷ್ಯಾ ನೆಟ್‌ವರ್ಕ್ ಆನ್ ಡ್ಯಾಮ್ಸ್, ರಿವರ್ಸ್ ಅಂಡ್ ಪೀಪಲ್‌’ ಸಂಸ್ಥೆಯ ಸಂಚಾಲಕ ಹಿಮಾಂಶು ಥಕ್ಕರ್ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿದರು. ಈ ಅನುಮೋದನೆ
ಯನ್ನು ಅಸಮರ್ಪಕವಾದ, ಅಪೂರ್ಣವಾದ, ಮಾಹಿತಿಯನ್ನು ಮುಚ್ಚಿಟ್ಟಿರುವ, ದಾರಿ ತಪ್ಪಿಸುವ ಅಂಶಗಳಿರುವ ಪರಿಸರ ಪರಿಣಾಮ ಮೌಲ್ಯಮಾಪನಾ ವರದಿಯ ಮೂಲಕ ಪಡೆಯಲಾಗಿದೆ ಎಂದು ಹಿಮಾಂಶು ಥಕ್ಕರ್ ತಮ್ಮ ಅರ್ಜಿಯಲ್ಲಿ ನಮೂದಿಸಿದ್ದಾರೆ.

ಆ ವರದಿಯನ್ನು ಪರಿಶೀಲಿಸಿದ ಸಚಿವಾಲಯದ ‘ಫಾರೆಸ್ಟ್ ಅಡ್ವೈಸರಿ ಕಮಿಟಿ’ ತನ್ನ ಅಂತಿಮ ಶಿಫಾರಸಿನಲ್ಲಿ ‘ದೀರ್ಘಾವಧಿಯಲ್ಲಿ, ಕೆನ್-ಬೆಟ್ವಾ ಯೋಜನೆಯಿಂದ ವನ್ಯಜೀವಿಗಳಿಗಾಗಲೀ ಅಲ್ಲಿನ ಜನರಿಗಾಗಲೀ
ಪ್ರಯೋಜನವಾಗುವುದಿಲ್ಲ. ಲಾಭಕ್ಕಿಂತ ವೆಚ್ಚವೇ ಹೆಚ್ಚಾಗುವುದರಿಂದ ಯೋಜನೆ ಕಾರ್ಯಸಾಧುವಲ್ಲ. ಹೀಗಾಗಿ ಯೋಜನೆಯನ್ನು ಕೈಬಿಡುವುದೇ ಮೇಲು’ ಎಂಬ ಸಲಹೆಯನ್ನು ಕೊಟ್ಟಿದ್ದರೂ ಅದನ್ನು ಪರಿಗಣಿಸಿಲ್ಲ ಎಂಬ ಅಂಶ ಅರ್ಜಿಯಲ್ಲಿದೆ.

ಒಟ್ಟಾರೆಯಾಗಿ, ಕೆನ್-ಬೆಟ್ವಾ ಯೋಜನೆ ಕಾರ್ಯಗತವಾಗಬೇಕಾದರೆ ಸುಪ್ರೀಂ ಕೋರ್ಟ್‌ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮುಂದೆ ಇರುವ ಎರಡು ಪ್ರಕರಣಗಳು ಇತ್ಯರ್ಥವಾಗಬೇಕು. ಯೋಜನೆಗೆ ಅನುಮೋದನೆ ನೀಡಿರುವ ಪ್ರಕ್ರಿಯೆ, ಅನುಸರಿಸಿರುವ ವಿಧಾನ, ಮೂಲಭೂತವಾಗಿ ಪರಿಸರ ಪರಿಣಾಮ ಮೌಲ್ಯಮಾಪನೆಯಲ್ಲಿರುವ ತಪ್ಪುಗಳು, ಉಲ್ಲಂಘನೆಯಾಗಿರುವ ಹಲವಾರು ನಿಯಮಗಳು, ಪರಿಣತರ ಅಭಿಪ್ರಾಯಗಳನ್ನು ಕಡೆಗಣಿಸಿರುವ ರೀತಿ ಮುಂತಾದವುಗಳೆಲ್ಲವನ್ನೂ ನ್ಯಾಯಾಲಯ ಪರಿಶೀಲಿಸಲಿದೆ. ಈ ಅಡೆತಡೆಗಳನ್ನು ದಾಟುವ ಮೊದಲೇ, ಕೆನ್-ಬೆಟ್ವಾ ಸೇರಿದಂತೆ ಉಳಿದೆಲ್ಲ ನದಿ ಸಂಪರ್ಕ ಯೋಜನೆಗಳು ತ್ವರಿತಗತಿಯಲ್ಲಿ ಮುನ್ನಡೆಯಲಿವೆಯೆಂದು ಸಂಭ್ರಮಿಸುವುದು ಬಹಳ ಅವಸರದ ನಡೆ ಎಂಬುದು ಪರಿಣತರ ಅಭಿಪ್ರಾಯ.

ಡಾ. ಎಚ್.ಆರ್.ಕೃಷ್ಣಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.