ADVERTISEMENT

ವಿಶ್ಲೇಷಣೆ | ಡಿಜಿಟಲ್‌ ಸುರಕ್ಷತೆ: ಹೊಸ ಯುಗದ ಅಗತ್ಯ

ಹೊಸ ತಂತ್ರಗಳ ಮೂಲಕ ಸೈಬರ್‌ ಅಪರಾಧಗಳ ಪ್ರಮಾಣ ಹೆಚ್ಚುತ್ತಿದೆ

ಡಾ.ಎಂ.ಎ.ಸಲೀಂ
Published 7 ನವೆಂಬರ್ 2024, 23:45 IST
Last Updated 7 ನವೆಂಬರ್ 2024, 23:45 IST
   

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವು ನಮ್ಮ ನಿತ್ಯದ ಬದುಕಿನ ಬಿಡಿಸಿಕೊಳ್ಳಲಾಗದ ನಂಟಿನಂತಾಗಿದೆ. ಇದೇ ಕಾರಣಕ್ಕಾಗಿ ಈ ಜಗತ್ತಿನಲ್ಲಿ ಎಲ್ಲರಿಗೂ ಮತ್ತು ಎಲ್ಲಕ್ಕೂ ಒಂದು ಅಂತರ್‌ಸಂಪರ್ಕ ರೂಪುಗೊಂಡಿದೆ. ತಂತ್ರಜ್ಞಾನವು ನಮ್ಮ ಬದುಕನ್ನು ಸರಳಗೊಳಿಸಿದೆ ನಿಜ. ಆದರೆ, ಸೈಬರ್ ಸುರಕ್ಷತೆಗೆ, ದತ್ತಾಂಶಗಳ ಖಾಸಗಿತನಕ್ಕೆ ತಂತ್ರಜ್ಞಾನವು ಸವಾಲಾಗಿಯೂ ಪರಿಣಮಿಸಿದೆ.

ಸೈಬರ್‌ ಅಪರಾಧಗಳು ಹಿಂದೆಲ್ಲಾ ವಿಜ್ಞಾನ ಕಥೆಗಳ ಅಥವಾ ಸಿನಿಮಾಗಳ ಕಥಾವಸ್ತುಗಳಾಗಿದ್ದವು.
ಆದರೆ, ಈಗ ಅವು ನಿತ್ಯದ ಕಥಾನಕಗಳಾಗಿವೆ. ಮಾಹಿತಿ ತಂತ್ರಜ್ಞಾನದ ಬಳಕೆ ಅಧಿಕಗೊಂಡಿದ್ದರಿಂದ ಅಪಾಯವೂ ಅಧಿಕಗೊಂಡಿದೆ. ವ್ಯವಸ್ಥಿತವಾದ, ಆಧುನಿಕವಾದ ಹ್ಯಾಕಿಂಗ್‌ ಯತ್ನಗಳು ನಡೆಯುತ್ತಲೇ ಇವೆ. ಖಾಸಗಿ ಮಾಹಿತಿಗಳನ್ನು ಕದಿಯುವುದು, ವ್ಯಕ್ತಿಯ ಗುರುತನ್ನು ಕದ್ದು ತಪ್ಪು ಉದ್ದೇಶಗಳಿಗಾಗಿ ಬಳಕೆ ಮಾಡಿಕೊಳ್ಳುವುದು ಹಾಗೂ ಸಂಸ್ಥೆಗಳ ಅಥವಾ ವ್ಯಕ್ತಿಗಳ ಕಂಪ್ಯೂಟರ್‌ ವ್ಯವಸ್ಥೆಯನ್ನೇ ಹ್ಯಾಕ್‌ ಮಾಡಿ, ಕುತಂತ್ರಾಂಶಗಳನ್ನು ಅಳವಡಿಸುವುದು ಸರ್ವೇಸಾಮಾನ್ಯ ಎಂಬಂತಾಗಿದೆ.

ಭಾರತೀಯ ಸೈಬರ್‌ ಅಪರಾಧಗಳ ಸಮನ್ವಯ ಕೇಂದ್ರ ಇತ್ತೀಚೆಗೆ ಅಂಕಿ ಅಂಶವೊಂದನ್ನು ಬಿಡುಗಡೆ ಮಾಡಿದೆ. ಈ ಪ್ರಕಾರ, 2024ರ ಮೇ ತಿಂಗಳೊಂದರಲ್ಲಿಯೇ ಪ್ರತಿನಿತ್ಯ ಸುಮಾರು ಏಳು ಸಾವಿರ ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗಿವೆ. 2021ರಿಂದ 2023ರ ನಡುವಿನ ಹೋಲಿಕೆಯಲ್ಲಿ, 2024ರಲ್ಲಿ ಸೈಬರ್‌ ಅಪರಾಧ ಪ್ರಕರಣಗಳ ಪ್ರಮಾಣವು ಶೇಕಡ 113.7ರಷ್ಟು ಏರಿಕೆಯಾಗಿದೆ. ಹೊಸ ಹೊಸ ತಂತ್ರಗಳ ಮೂಲಕ ಸೈಬರ್‌ ಅಪರಾಧಗಳ ಸ್ವರೂಪ ಹಾಗೂ ಪ್ರಮಾಣವು ಪ್ರತಿನಿತ್ಯವೂ ಅಧಿಕಗೊಳ್ಳುತ್ತಿದೆ. ಹಣಕಾಸಿನ ವಂಚನೆ, ಅಕ್ರಮ ಕೆಲಸಗಳಿಗೆ ಬೇರೊಬ್ಬರ ಪ್ರೊಫೈಲ್‌ ಬಳಕೆ, ಹ್ಯಾಕಿಂಗ್‌ ಹಾಗೂ ಸೈಬರ್‌ ಬೇಹುಗಾರಿಕೆ– ಇವು ಸೈಬರ್‌ ಅಪರಾಧಗಳ ಕೆಲವು ವಿಧಗಳು. ಹೂಡಿಕೆ ವಂಚನೆ ಹಾಗೂ ಡಿಜಿಟಲ್‌ ಅರೆಸ್ಟ್‌ ಈ ಪಟ್ಟಿಗೆ ಸೇರಿದ ಹೊಸ ಸ್ವರೂಪದ ಸೈಬರ್‌ ಅಪರಾಧಗಳಾಗಿವೆ. ಈ ಎರಡು ಸ್ವರೂಪದ ಅಪರಾಧಗಳು ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿವೆ.

ADVERTISEMENT

ಹೂಡಿಕೆ ವಂಚನೆಯ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಈಗ ದಾಖಲಾಗುತ್ತಿವೆ. ಹೂಡಿಕೆಯಲ್ಲಿ ಆಸಕ್ತಿ ಇರುವವರಿಗೆ ಆಮಿಷ ಒಡ್ಡಿ, ಖೊಟ್ಟಿ ಕಂಪನಿಗಳಲ್ಲಿ ಹಣ ಹೂಡುವಂತೆ ಮಾಡಲಾಗುತ್ತದೆ. ಸಾಮಾನ್ಯವಾಗಿ, ಸಾಮಾಜಿಕ ಜಾಲತಾಣಗಳ ಜಾಹೀರಾತಿನ ಮೂಲಕ ಜನರನ್ನು ಸೆಳೆಯಲಾಗುತ್ತದೆ. ಇಲ್ಲವೇ ಆನ್‌ಲೈನ್‌ ಹೂಡಿಕೆ ಕುರಿತ ಸಲಹೆ ಮತ್ತು ಸೇವೆ ಕಂಪನಿಗಳ ಹೆಸರಿನಲ್ಲಿ ಸಂಪರ್ಕಿಸಲಾಗುತ್ತದೆ. ‘ಈ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಬರುತ್ತದೆ. ರಾತ್ರೋರಾತ್ರಿ ಶ್ರೀಮಂತರಾಗಬಹುದು’ ಎಂಬಂಥ ಬರಹಗಳು, ವಿಡಿಯೊಗಳು ಮೋಸದ ಜಾಹೀರಾತುಗಳಲ್ಲಿರುತ್ತವೆ. ಜನರಿಗೆ ಆಮಿಷ ಒಡ್ಡುವುದಕ್ಕಾಗಿ ವ್ಯಕ್ತಿಯೊಬ್ಬರು ನಿರ್ದಿಷ್ಟ ಕಂಪನಿಯೊಂದರಲ್ಲಿ ಹೂಡಿಕೆ ಮಾಡಿ ಶ್ರೀಮಂತರಾದ ಕಥೆಗಳು, ಅವರ ಐಷಾರಾಮಿ ಜೀವನ ಶೈಲಿಯನ್ನು ಪ್ರದರ್ಶಿಸುವ ದೃಶ್ಯಗಳು ಇರುತ್ತವೆ.

ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳಲ್ಲಿ, ಕೊರಿಯರ್‌ ಕಂಪನಿಯೊಂದರ ಪ್ರತಿನಿಧಿ ಎಂದು ಹೇಳಿಕೊಂಡು ಸಂತ್ರಸ್ತರಿಗೆ ವ್ಯಕ್ತಿಯೊಬ್ಬರು ಕರೆ ಮಾಡುತ್ತಾರೆ. ‘ಈ ಕೊರಿಯರ್‌ನಲ್ಲಿ ಅಕ್ರಮವಾದ ಅಥವಾ ಅನುಮಾನಾಸ್ಪದ ವಸ್ತುವೊಂದಿದೆ. ಇದರಲ್ಲಿ ನಿಮ್ಮ ಹೆಸರು ಹಾಗೂ ನಿಮ್ಮ ಮನೆಯ ವಿಳಾಸ ಇದೆ’ ಎಂದು ಹೇಳುತ್ತಾರೆ. ನಂತರ, ಸಿಬಿಐ ಅಥವಾ ಸಿಐಡಿಯಂಥ ತನಿಖಾ ಸಂಸ್ಥೆಗಳ ಉನ್ನತ ಅಧಿಕಾರಿ ಎಂದು ಹೇಳಿಕೊಂಡು ಮತ್ತೊಬ್ಬ ವ್ಯಕ್ತಿ ಕರೆ ಮಾಡುತ್ತಾರೆ. ‘ತನಿಖೆಗೆ ಸಹಕರಿಸದಿದ್ದರೆ ನಿಮ್ಮನ್ನು ಬಂಧಿಸಲಾಗುವುದು’ ಎಂದು ಬೆದರಿಸಲಾಗುತ್ತದೆ. ‘ದಂಡ’ ಅಥವಾ ‘ಭದ್ರತಾ ಠೇವಣಿ’ ಹೆಸರಿನಲ್ಲಿ ನಿರ್ದಿಷ್ಟ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡುವಂತೆ ಒತ್ತಡ ಹೇರಲಾಗುತ್ತದೆ. ಇಡೀ ಪ್ರಕ್ರಿಯೆಯನ್ನು ವಿಡಿಯೊ ಕರೆಯಲ್ಲಿ ಇದ್ದುಕೊಂಡೇ ಮಾಡಲಾಗುತ್ತದೆ. ಸಂತ್ರಸ್ತರನ್ನು ತಮ್ಮ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ವಂಚಕರು ಈ ವಿಧಾನ ಅನುಸರಿಸುತ್ತಾರೆ.

ಈ ಎಲ್ಲ ಸ್ವರೂಪದ ವಂಚನೆಗಳು ಆನ್‌ಲೈನ್‌ ಮೂಲಕವೇ ನಡೆಯುವುದರಿಂದ ವಂಚಕರಿಗೆ ಭೌಗೋಳಿಕ ಎಲ್ಲೆಗಳಿಲ್ಲ. ಬೇರೆ ಬೇರೆ ದೇಶಗಳಲ್ಲಿ ಕೂತು ಇಂಥ ವಂಚನೆಗಳನ್ನು ಎಸಗುವುದರಿಂದ ವಂಚಕರನ್ನು ಪತ್ತೆ ಮಾಡುವುದು ಅತ್ಯಂತ ಕಷ್ಟಕರವಾಗುತ್ತದೆ. ಸಾಮಾನ್ಯವಾಗಿ ವಿದ್ಯಾವಂತರು, ಉದ್ಯೋಗಸ್ಥರೇ ಸೈಬರ್‌ ಅಪರಾಧಗಳ ಸಂತ್ರಸ್ತರಾಗಿರುತ್ತಾರೆ. ಸಂತ್ರಸ್ತರ ವೈಯಕ್ತಿಕ ಮಾಹಿತಿಯು ವಂಚಕರಿಗೆ ದೊರೆಯುತ್ತಿರುವುದೇ ಡಿಜಿಟಲ್‌ ಅರೆಸ್ಟ್‌ ಅಥವಾ ಹೂಡಿಕೆ ವಂಚನೆ ‍ಪ್ರಕರಣಗಳು ಏರಿಕೆಯಾಗಲು ಬಹುಮುಖ್ಯ ಕಾರಣ. ಬೆದರಿಕೆ ಏನು, ಅದರಿಂದ ಹೇಗೆ ರಕ್ಷಣೆ ಪಡೆದುಕೊಳ್ಳುವುದು, ಅದಕ್ಕಾಗಿ ಯಾವೆಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬೇಕಿದೆ. ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿ ಚಟುವಟಿಕೆ ನಡೆಸುವ ಅಭ್ಯಾಸ ಬೆಳೆಸಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ.

ಭಾರತದಲ್ಲಿ ಸೈಬರ್‌ ಅಪರಾಧಗಳ ಕುರಿತು ದೂರು ನೀಡುವುದಕ್ಕೆ ವ್ಯವಸ್ಥೆ ಇದೆ. ಭಾರತೀಯ ಸೈಬರ್‌ ಅಪರಾಧ ದೂರು ಪೋರ್ಟಲ್‌ನಲ್ಲಿ (cybercrime.gov.in) ದಿನದ 24 ಗಂಟೆಯೂ ದೂರು ದಾಖಲಿಸಲು ಅವಕಾಶವಿದೆ. ಹೂಡಿಕೆ ವಂಚನೆಯಂಥ ಪ್ರಕರಣಗಳಲ್ಲಿ ತಕ್ಷಣದ ಪ್ರತಿಕ್ರಿಯೆಗಾಗಿ ರಾಷ್ಟ್ರೀಯ ಸೈಬರ್‌ ಅಪರಾಧಗಳ ಸಹಾಯವಾಣಿ ‘1930’ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ವಂಚನೆಗೆ ಒಳಗಾಗಿದ್ದು ತಿಳಿದ ತಕ್ಷಣವೇ ಈ ಸಹಾಯವಾಣಿಗೆ ಕರೆ ಮಾಡಿದರೆ, ಹಣ ವರ್ಗಾವಣೆ ಆಗುವುದನ್ನು ಅಧಿಕಾರಿಗಳು ತಡೆಯುತ್ತಾರೆ.

ಸ್ಥಳೀಯ ಪೊಲೀಸ್‌ ಠಾಣೆ ಅಥವಾ ಸೈಬರ್‌ ಅಪರಾಧ ಪೊಲೀಸ್‌ ಠಾಣೆಗಳಲ್ಲಿಯೂ ಸಾರ್ವಜನಿಕರು ದೂರು ದಾಖಲಿಸಬಹುದು. ದೂರು ದಾಖಲಿಸುವ ವೇಳೆ ಎಲ್ಲ ರೀತಿ ಸಾಕ್ಷ್ಯಗಳು ಮತ್ತು ದಾಖಲೆಗಳು ಇರಬೇಕಾಗುತ್ತದೆ. ಹೂಡಿಕೆ ವಂಚನೆಯಂಥ ಪ್ರಕರಣಗಳಲ್ಲಿ ವಂಚನೆಗೆ ಒಳಗಾಗಿದ್ದು ತಿಳಿದ ತಕ್ಷಣವೇ ದೂರು ದಾಖಲಿಸಿದರೆ, ವಂಚಕರನ್ನು ಪತ್ತೆ ಮಾಡುವುದು, ಕಳೆದುಕೊಂಡ ಹಣವನ್ನು ಮರಳಿ ಪಡೆಯುವುದು ಸುಲಭವಾಗುತ್ತದೆ.

ಸೈಬರ್‌ ಹಾಗೂ ದತ್ತಾಂಶ ಸುರಕ್ಷತೆಯನ್ನು ಖಾತರಿ ಮಾಡಿಕೊಳ್ಳಲು ಕೆಲವು ಮುಂಜಾಗ್ರತಾ ಕ್ರಮಗಳನ್ನು
ತೆಗೆದುಕೊಳ್ಳಬೇಕಾಗುತ್ತದೆ. ಅವುಗಳು ಹೀಗಿವೆ: 

ಶಕ್ತಿಯುತ, ವಿಶಿಷ್ಟ ಪಾಸ್‌ವರ್ಡ್‌ಗಳನ್ನು ಬಳಸಬೇಕಾಗುತ್ತದೆ. ಹುಟ್ಟಿದ ದಿನಾಂಕ, ಹೆಸರುಗಳು ಅಥವಾ ಸುಲಭವಾಗಿ ಊಹಿಸಬಹುದಾದ ಪಾಸ್‌ವರ್ಡ್‌ಗಳನ್ನು ಇಟ್ಟುಕೊಳ್ಳಬಾರದು. ಸಂಖ್ಯೆಗಳು, %, # ಅಥವಾ @ ಚಿಹ್ನೆಗಳನ್ನು ತಮ್ಮ ಪಾಸ್‌ವರ್ಡ್‌ಗಳಲ್ಲಿ ಬಳಸಿಕೊಳ್ಳಬೇಕು.

ಹಲವು ಸ್ತರಗಳಲ್ಲಿ ದೃಢೀಕರಣಗೊಳ್ಳುವ ‘ಮಲ್ಟಿ ಫ್ಯಾಕ್ಟರ್‌ ಅಥೆಂಟಿಷಿಕೇಷನ್‌’ (ಎಂಎಫ್‌ಎ) ಅನ್ನು
ಸಕ್ರಿಯಗೊಳಿಸಿಕೊಳ್ಳಬೇಕು. ಜಾಲತಾಣಗಳಲ್ಲಿನ ಖಾತೆಗಳನ್ನು ಹಲವು ಹಂತಗಳಲ್ಲಿ ಭದ್ರತೆಗೆ ಒಳಪಡಿಸುವ ವ್ಯವಸ್ಥೆ ಇದಾಗಿದೆ. ಈ ವ್ಯವಸ್ಥೆಯನ್ನು ಸಕ್ರಿಯಗೊಳಿಸಿಕೊಳ್ಳುವುದು ಕೆಲವೇ ನಿಮಿಷಗಳ ಕೆಲಸ. ಪರಿಶೀಲಿಸಿ ಸ್ಪಷ್ಟಪಡಿಸಿಕೊಳ್ಳಲು (ವೆರಿಫಿಕೇಷನ್‌) ಒಟಿಪಿ ಸಂಖ್ಯೆಯೊಂದು ನಿಮ್ಮ ಮೊಬೈಲ್‌ಗೆ ಬರುತ್ತದೆ. ಮೊಬೈಲ್‌ ಅಥವಾ ಕಂಪ್ಯೂಟರ್‌ಗಳಲ್ಲಿನ ಸಾಫ್ಟ್‌ವೇರ್‌ಗಳು, ಆ್ಯಪ್‌ಗಳನ್ನು ನಿಗದಿತವಾಗಿ ಅಪ್‌ಡೇಟ್‌ ಮಾಡಿಕೊಳ್ಳಬೇಕು. ಹೀಗೆ ಅಪ್‌ಡೇಟ್‌ ಮಾಡಿಕೊಳ್ಳುವುದರಿಂದ ಸಾಫ್ಟ್‌ವೇರ್‌ನಲ್ಲಿರುವ ಬಗ್‌ಗಳು, ದೋಷಗಳು ನಿವಾರಣೆಯಾಗುತ್ತವೆ. ಆ ಮೂಲಕ ಭದ್ರತೆಯೂ ಹೆಚ್ಚುತ್ತದೆ.

ಅನುಮಾನಾಸ್ಪದವಾದ ಇ–ಮೇಲ್‌ಗಳು, ಲಿಂಕ್‌ಗಳು ಹಾಗೂ ಅಟ್ಯಾಚ್‌ಮೆಂಟ್‌ಗಳ ಬಗ್ಗೆ ಎಚ್ಚರ ವಹಿಸಿ. ನಿಮ್ಮನ್ನು ಸಿಲುಕಿಸಲು ಇವುಗಳಲ್ಲಿ ಕುತಂತ್ರಾಂಶಗಳನ್ನು ಅಳವಡಿಸಲಾಗಿರುತ್ತದೆ. ಇವು ನಿಮ್ಮ ವೈಯಕ್ತಿಕ ಮಾಹಿತಿ ಬಹಿರಂಗಪಡಿಸುತ್ತವೆ ಮತ್ತು ಸಾಫ್ಟ್‌ವೇರ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತವೆ. ಈ ಮೂಲಕ ನಿಮ್ಮ ಖಾಸಗಿ ಮಾಹಿತಿ ಕದಿಯಲಾಗುತ್ತದೆ ಅಥವಾ ಬಳಸಿಕೊಳ್ಳಲಾಗುತ್ತದೆ. ಇದನ್ನು ತಡೆಯುವುದಕ್ಕಾಗಿ ಪರಿಣಾಮಕಾರಿ ಆ್ಯಂಟಿವೈರಸ್‌ ಸಾಫ್ಟ್‌ವೇರ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು.

ಹಣಕಾಸಿಗೆ ಸಂಬಂಧಿಸಿದ ಹಾಗೂ ಖಾಸಗಿ ದಾಖಲೆಗಳನ್ನು ಎನ್‌ಕ್ರಿಪ್ಟ್‌ ಮಾಡಿಟ್ಟುಕೊಳ್ಳಬೇಕು. ಹೀಗೆ ಮಾಡಿದರೆ, ನಿಮ್ಮನ್ನು ಬಿಟ್ಟು ಬೇರೆಯವರು ನಿಮ್ಮ ದಾಖಲೆಗಳನ್ನು ಬಳಸಲು ಸಾಧ್ಯವಿಲ್ಲ. ಸೈಬರ್‌ ದಾಳಿಯಂಥ ಸಂದರ್ಭದಲ್ಲಿ ದತ್ತಾಂಶಗಳು ನಾಶವಾಗಿಬಿಡುವ ಅಪಾಯ ಇರುತ್ತದೆ. ಆದ್ದರಿಂದ ನಿಯಮಿತವಾಗಿ ದತ್ತಾಂಶಗಳನ್ನು ಬ್ಯಾಕ್‌ಅಪ್‌ ಮಾಡಿಟ್ಟುಕೊಳ್ಳಬೇಕು. ಹೊಸ ಹೊಸ ಸ್ವರೂಪದ ಸೈಬರ್‌ ಅಪರಾಧಗಳ ಕುರಿತು ತಿಳಿದುಕೊಳ್ಳಬೇಕು. ಆಗ ವಂಚನೆಗೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಲೇಖಕ: ಪೊಲೀಸ್‌ ಮಹಾನಿರ್ದೇಶಕ, ಆರ್ಥಿಕ ಅಪರಾಧಗಳ ವಿಭಾಗ, ಸಿಐಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.