ವಿಶ್ವಸಂರಚನೆಯ ಸುದೀರ್ಘ ಹಾದಿಯಲ್ಲಿ ಉಳಿದೆಲ್ಲಾ ಜೀವಜಂತುಗಳು ತಾವು ಬದುಕುವ ಪರಿಸರಕ್ಕೆ ಪೂರಕವಾಗಿ, ಪ್ರೇರಕವಾಗಿ ಇದ್ದುಹೋಗುತ್ತವೆ. ಬುದ್ಧಿಶಾಲಿ ಮನುಷ್ಯಜೀವಿಗೂ ತನ್ನ ಜೀವಪರ ನಿಲುವು ಮತ್ತು ನಿಸ್ಪೃಹ ಬಾಳ್ವೆಯಲ್ಲಿ ಇಲ್ಲಿರುವಷ್ಟು ಕಾಲ ನಿಸರ್ಗದ ವಿಶಿಷ್ಟ ಕುರುಹಾಗಿ ಉಳಿದುಹೋಗಲು ಸಾಧ್ಯವಿದೆ. ಆದರೆ ಎಲ್ಲ ಸವಾಲುಗಳ ನಡುವೆಯೂ ಅಂತಹದ್ದೊಂದು ಬೌದ್ಧಿಕತೆಯೇ ಅವನಲ್ಲಿನ ಸಮಸ್ಯಾತ್ಮಕ ಅಂಶವಾಗಿ, ಭೂಪರಿಸರಕ್ಕೆ ವಿನಾಶಕಾರಿಯಾಗಿ ಬದಲಾಗಲು ಕಾರಣ ಆಗುತ್ತಿರುವುದು ಸೋಜಿಗ!
ತನ್ನ ಜೀವಿತಾವಧಿಯುದ್ದಕ್ಕೂ ಸ್ವಾರ್ಥ, ವಂಚನೆ, ಸಂಕುಚಿತ ಮನೋಭಾವವನ್ನು ಬೆಳೆಸಿಕೊಂಡು, ಕೊನೆಗೆ ನಿಸರ್ಗದ ವಿರುದ್ಧ ಬಾಳುವುದು ಮಾತ್ರವಲ್ಲ, ತನ್ನದೇ ಆರೋಗ್ಯ, ಆಯಸ್ಸು, ನಿದ್ದೆ, ನೆಮ್ಮದಿಯನ್ನೂ ಕಳೆದುಕೊಂಡು ಪರಿತಪಿಸುವುದು ಮತ್ತು ತಲೆಮಾರುಗಳಿಗೆ ಕಂಟಕವಾಗಿ ಕಾಡುವುದು ಕೂಡ ಮನುಷ್ಯನ ಜಾಯಮಾನವೇ ಆದಂತಿದೆ.
ನಿಜ, ಹಿಂದೆಲ್ಲಾ ಮೋಸಗಾರ, ಅತ್ಯಾಚಾರಿ ಅಥವಾ ಜೈಲು ಕಂಡವನನ್ನು ಬಹಿಷ್ಕರಿಸಿ ಹೊರಗಟ್ಟುತ್ತಿದ್ದ ಸಮಾಜವೀಗ ಅವನನ್ನು ‘ಮರ್ಯಾದಾ ಪುರುಷೋತ್ತಮ’ನಂತೆ ಆರಾಧಿಸುತ್ತಿದೆ. ಅದೊಂದು ಸಹಜ ನಡೆ ಎನ್ನುವಷ್ಟರ ಮಟ್ಟಿಗೆ ಸನ್ನಿವೇಶಗಳು ಸೂಕ್ಷ್ಮತನವನ್ನು ಮರೆತಿವೆ. ಅಷ್ಟಕ್ಕೂ ಇಲ್ಲಿ ತಪ್ಪು ಬರೀ ವ್ಯಕ್ತಿಯದ್ದಲ್ಲ, ಸಮಾಜದ್ದು. ಭ್ರಷ್ಟಗೊಂಡಿರುವವರು ಅಧಿಕಾರಿಗಳು, ರಾಜಕಾರಣಿಗಳಷ್ಟೇ ಅಲ್ಲ, ವೋಟಿಗಾಗಿ ನೋಟು ಪಡೆವ, ಜಾತಿ- ಧರ್ಮಗಳ ಅಮಲಲ್ಲಿ ಮಿಂದೇಳುವ, ಸುಳ್ಳು, ಭ್ರಾಂತಿ, ಕೃತಕತೆಯನ್ನು ಸಂಭ್ರಮಿಸುವ ಶ್ರೀಸಾಮಾನ್ಯ ಕೂಡ. ಇದನ್ನೆಲ್ಲಾ ಕಂಡುಂಡು ಬೆಳೆವ ಭವಿಷ್ಯದ ಕುಡಿಗಳು ನಾಳೆ ಹೇಗೆಲ್ಲಾ ಬದುಕಬಲ್ಲವು ಅನ್ನುವುದನ್ನು ಯೋಚಿಸಬೇಕಿದೆ.
ಅಪರಾಧಿಗಳು ಮತ್ತವನನ್ನು ಕುರುಡಾಗಿ ಬೆಂಬಲಿಸುವವರು ‘ಸಾರ್ವಜನಿಕ ಲಜ್ಜೆ’ಯನ್ನು ಕಳೆದುಕೊಂಡಾಗಿದೆ. ಬಹಳಷ್ಟು ಪುಂಡುಪೋಕರಿಗಳಿಗೆ ಅದೇ ಧೈರ್ಯ ಮತ್ತು ಬೆಂಬಲ. ದುಡ್ಡಿದ್ದರೆ ಉನ್ನತ ಶಿಕ್ಷಣ, ಆರೋಗ್ಯ, ಬಿಟ್ಟಿ ಪ್ರಚಾರ ಎಲ್ಲವೂ ದಕ್ಕುತ್ತವೆ. ಸಾಲದೆಂಬಂತೆ ದುಡ್ಡು ಕೊಟ್ಟವನಿಗೆ ಶೀಘ್ರ ದೇವರ ದರ್ಶನವೂ ಇಲ್ಲಿ ಲಭ್ಯವಿದೆ. ಭ್ರಷ್ಟಾಚಾರದ ಹಣದಲ್ಲೂ ದೇವರಿಗೆ ಪಾಲಿದೆ! ನಮ್ಮ ಶ್ರೇಣೀಕೃತ ವ್ಯವಸ್ಥೆಯ ರಾಜಕೀಯ ಮತ್ತು ನೌಕರಶಾಹಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಪಾಲು ಹಂಚಿಕೆಯಾಗಿ ಅದರ ಬೇರು, ಬಿಳಲುಗಳು ಗಟ್ಟಿಯಾಗಿವೆ. ಚುನಾವಣೆ ಗೆಲ್ಲುವುದು, ಅಧಿಕಾರ ಹಿಡಿಯುವುದು, ಸಾಧ್ಯವಿಲ್ಲದಿದ್ದಲ್ಲಿ ಕೋಳಿ, ಕುರಿಗಳ ಹಾಗೆ ದೊಡ್ಡ ಮೊತ್ತಕ್ಕೆ ಬಿಕರಿಯಾಗುವುದು ಕೂಡ ಈಗ ಸಲೀಸು. ಇವೆಲ್ಲದರ ಪರಿಣಾಮವು ಜನರ ನಡೆ ನುಡಿ, ಕಾರ್ಯವೈಖರಿ, ದಕ್ಷತೆ, ನೈಪುಣ್ಯ, ಸಾಮಾಜಿಕ ಸ್ವಾಸ್ಥ್ಯ, ಸೌಹಾರ್ದದ ಮೇಲೆ ಉಂಟಾಗಿದ್ದು, ಭಾರತದ ನಿಜವಾದ ಆತ್ಮಕ್ಕೆ ಗಾಸಿಯಾಗಿದೆ. ನಂಬಿಕೆ ಮತ್ತು ಸಹಕಾರ ತತ್ವಗಳು ಕುಸಿಯುತ್ತಿವೆ.
ನಾಡಿಗೆ ಮತ್ತೊಂದು ಚುನಾವಣೆ ಎದುರಾಗುತ್ತಿರುವ ಹೊತ್ತಿನಲ್ಲಿ, ನಮ್ಮ ಹಕ್ಕಾಗಿರುವ ಆರೋಗ್ಯಪೂರ್ಣ ಆಡಳಿತ ವ್ಯವಸ್ಥೆಯನ್ನು ಆರಿಸಿಕೊಳ್ಳಲು ಇರುವ ಯುಕ್ತ ಮಾರ್ಗವನ್ನು ಮತ್ತೊಮ್ಮೆ ಅವಲೋಕಿಸಬೇಕಿದೆ. ಹೌದು, ಚುನಾವಣಾ ಪಾವಿತ್ರ್ಯವೇ ಸಮಾಜದಲ್ಲಿ ಮಾನವೀಯತೆ ಯನ್ನು ಮರುಸ್ಥಾಪಿಸಲು ಇರುವ ಮತ್ತು ಪ್ರಜಾಪ್ರಭುತ್ವದ ಉಳಿವಿಗಿರುವ ಬಹುದೊಡ್ಡ ಭರವಸೆ. ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಪಾಲ್ಗೊಳ್ಳುವಿಕೆ, ಪ್ರಜ್ಞಾವಂತಿಕೆ ಮತ್ತು ಹೊಣೆಗಾರಿಕೆಯ ಪಾಲು ಮಹತ್ವವುಳ್ಳದ್ದಾಗಿರುತ್ತದೆ. ಆ ಪ್ರಕ್ರಿಯೆ ಸತ್ಯ, ನೈತಿಕ ಮತ್ತು ಸ್ವತಂತ್ರ ವಾದಷ್ಟೂ ಎಲ್ಲಾ ವರ್ಗದ ಜನರ ಸಂಕಟ, ನೋವಿಗೆ ಸಂವೇದನಾಶೀಲವಾಗಿ ಸ್ಪಂದಿಸಬಲ್ಲ ತಾಯ್ತನದ ಆಡಳಿತವನ್ನು ನಮ್ಮ ಜನಪ್ರತಿನಿಧಿಗಳಿಂದ ನಿರೀಕ್ಷಿಸಲು ಸಾಧ್ಯ.
ಜಾತಿ, ಧರ್ಮದ ವಿಷಬೀಜ ಬಿತ್ತಿ ಸಮಾಜವನ್ನು ಒಡೆಯುವುದು, ದ್ವೇಷವನ್ನು ಹರಡುವುದು, ಕ್ಷುಲ್ಲಕ ಕಾರಣವನ್ನು ಮುಂದೆಮಾಡಿ ಮತೀಯ ಸಂಘರ್ಷವನ್ನು ಪ್ರಾಯೋಜಿಸುವ ಮತ್ತು ಆ ಮೂಲಕ ಚುನಾವಣೆಯನ್ನು ಗೆಲ್ಲುವ ಸರಳಸೂತ್ರ ಹೆಣೆಯುವಂತಾಗಿರುವುದು ಸದ್ಯದ ನಾಗರಿಕ ಸಮಾಜದ ಹೀನಾಯಸ್ಥಿತಿ. ಜಾತಿ ರಾಜಕಾರಣವು ಹಿಂದೆಂದಿಗಿಂತಲೂ ಹೆಚ್ಚು ನಿರ್ಲಜ್ಜ ಮತ್ತು ನಿರ್ಭಿಡೆಯಲ್ಲಿ ನಲಿದಾಡುತ್ತಿರುವ ಸಂದರ್ಭವಿದು. ಉಮೇದುವಾರರಿಗೆ ಜನಹಿತ ಚಿಂತನೆ ಮತ್ತು ಅಭಿವೃದ್ಧಿ ವಿಷಯಗಳಿಗಿಂತ ಚುನಾವಣಾ ಸಮಯದಲ್ಲಿ ಭಾವನಾತ್ಮಕ ಕೆರಳುವಿಕೆಯಲ್ಲಿ ಮತದಾರರನ್ನು ಓಲೈಸುವುದು ಸುಲಭವೆನಿಸುತ್ತಿದೆ. ಗತಕಾಲದ ಯಾವುದೋ ವ್ಯಕ್ತಿತ್ವಗಳ ದೂಷಣೆಯನ್ನು ಮುನ್ನೆಲೆಯಲ್ಲಿರಿಸಿ, ಚಾರಿತ್ರಿಕವಾಗಿ ಬಹುಸಂಸ್ಕೃತಿಯನ್ನು ಪೊರೆಯುತ್ತಾ ಬಂದ ನಮ್ಮ ಶಾಂತನೆಲಕ್ಕೆ ಅಂಟುವ ಕಲೆಗಳ ಬಗ್ಗೆಯೂ ಜಾಗೃತರಾಗಿರುವುದು ಅಗತ್ಯ.
ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಭಾರತದ ಚುನಾವಣೆಯ ಸ್ಥಿತಿಗತಿಯನ್ನು ಗ್ರಹಿಸಿ, ಭವಿಷ್ಯತ್ತಿನ ಸುಧಾರಣೆಗಾಗಿ ದೂರಗಾಮಿ ವಿಚಾರಗಳನ್ನು 50 ವರ್ಷಗಳ ಹಿಂದೆಯೇ ಲೇಖನವೊಂದರಲ್ಲಿ ಹೀಗೆ ಮಂಡಿಸಿದ್ದರು. ‘ಈಗ ದೊಡ್ಡ ಪ್ರಮಾಣದಲ್ಲಿ ಖಾಸಗಿ ಉದ್ಯಮವಾಗಿರುವ ಚುನಾವಣೆಗಳು ಮೊದಲು ರಾಷ್ಟ್ರೀಕರಣಗೊಳ್ಳಬೇಕು. ಸ್ಪರ್ಧಿಗಳು ಮತ್ತು ಪಕ್ಷಗಳಿಗೆ ಸರ್ಕಾರವೇ ಹಣಕಾಸು ಒದಗಿಸಬೇಕು’. ಹಾಗಿದ್ದೂ, ಸುಧಾರಣೆ ಕಾಣಬೇಕಾದ ಪ್ರಸ್ತುತ ಚುನಾವಣಾ ವ್ಯವಸ್ಥೆಯಲ್ಲಿ ಹಣದ ಶಕ್ತಿ ಮತ್ತು ಜಾತಿ ಪ್ರಭಾವ ಪ್ರತಿಬಾರಿಯೂ ಹೆಚ್ಚುತ್ತಲೇ ಇದೆ. ಮತ್ತದು ಭ್ರಷ್ಟಾಚಾರದ ಬಹುದೊಡ್ಡ ಪೋಷಕತ್ವವೂ ಹೌದು.
ಅಕ್ರಮ, ಅನೈತಿಕ ಮಾರ್ಗದಿಂದ ಚುನಾವಣೆಯನ್ನು ಗೆದ್ದುಬರುವವರು ಮುಂದೆ ಸಂಭಾವಿತರಾಗಿರಬೇಕೆಂದು ನಿರೀಕ್ಷಿಸುವುದಾದರೂ ಹೇಗೆ? ಅದು ಬೇವು ನೆಟ್ಟು ಮಾವು ಬಯಸಿದಂತಲ್ಲವೇ?! ಗೆದ್ದುಬಂದವರು ತೋರುವ ಸಂವಿಧಾನ ವಿರೋಧಿ ನಡವಳಿಕೆಗಳನ್ನು ಪ್ರಶ್ನಿಸುವ ಹಕ್ಕನ್ನು ಮತದಾರಪ್ರಭು ಮೊದಲೇ ಕಳೆದುಕೊಂಡಿರುತ್ತಾನೆ. ‘ನಮ್ಮ ಜನ ಹಣ, ಜಾತಿ, ಧರ್ಮದ ಅಮಲಿನಲ್ಲಿ ಬೇಲಿಗೂಟಕ್ಕಾದರೂ ವೋಟು ಹಾಕುತ್ತಾರೆ’ ಎಂಬ ಕಿಡಿನುಡಿ ಈಗಲೂ ಚಾಲ್ತಿಯಲ್ಲಿದೆ. ಉತ್ತರದಾಯಿತ್ವವಿರದ ಅಧಿಕಾರಸ್ಥರ ಮಿತಿಮೀರಿದ ಹಣಕಾಸು ಅವ್ಯವಹಾರ, ಆಡಳಿತಯಂತ್ರದ ದುರ್ಬಳಕೆ, ಸಾಂವಿಧಾನಿಕ ಸಂಸ್ಥೆಗಳನ್ನು ಸ್ವಹಿತಕ್ಕೆ ಬಳಸಿಕೊಳ್ಳುತ್ತಾ ಘನತೆ ಕುಂದಿಸುವ ಪ್ರಕ್ರಿಯೆಗಳನ್ನು ನಿಯಂತ್ರಿಸುವ ಮಾರ್ಗ ಯಾವುದು? ಎಲ್ಲವೂ ಮಾರಾಟದ ಸರಕಾದ ಮೇಲೆ ಪ್ರಜಾಪ್ರಭುತ್ವದ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ, ಒಕ್ಕೂಟ ವ್ಯವಸ್ಥೆ, ಜಾತ್ಯತೀತತೆಯನ್ನೆಲ್ಲಾ ಹುಡುಕುವುದೆಲ್ಲಿ? ಹಾಗಾಗಿ ಇದ್ದುದರಲ್ಲಿಯೇ ಯೋಗ್ಯರನ್ನು ಆರಿಸಿಕೊಳ್ಳಬೇಕಿದೆ. ಮೊದಲು ತಮ್ಮಲ್ಲಿ ನೈತಿಕತೆ, ಸಾತ್ವಿಕತೆ ಸಾಯಗೊಡದಂತೆ ಕಾಯ್ದುಕೊಳ್ಳಬೇಕಿದೆ. ಮುಖ್ಯವಾಗಿ ಪ್ರಜಾಸತ್ತೆಯಲ್ಲಿ ಯಾವ ಸಿದ್ಧಾಂತ, ಸಂಸ್ಕೃತಿ, ವಿಚಾರಧಾರೆ, ನೀತಿ ನಿಯಮಾವಳಿಗಳೂ ಪರಿಪೂರ್ಣವಲ್ಲ, ಸಾರ್ವಕಾಲಿಕವಲ್ಲ ಮತ್ತು ಪ್ರಶ್ನಾತೀತವಲ್ಲ ಎಂಬ ಅರಿವು ನಮ್ಮಲ್ಲಿರಬೇಕು. ತೀವ್ರತರದ ಎಡ, ಬಲಪಂಥಗಳಾಚೆಗಿರುವ ಸಾತ್ವಿಕವೂ ಜೀವಪರವೂ ಆದ ಜನಪಂಥದ ನಡುಮಾರ್ಗವನ್ನು ಆಯ್ದುಕೊಂಡರೆ ನಾಳೆಗಳು ಕ್ಷೇಮ.
ಸಾತ್ವಿಕ ಮತ್ತು ಪ್ರಜ್ಞಾವಂತ ಮನಸ್ಸುಗಳು ಈಗಲಾ ದರೂ ಕಠಿಣ ಕಾನೂನು ರೂಪಿಸುವುದರೊಟ್ಟಿಗೆ ಸಾಮೂಹಿಕವಾಗಿ ಜನರ ಮನಸ್ಸು, ಮೆದುಳುಗಳಲ್ಲಿ ಅವಿತುಕೂತ ಭ್ರಷ್ಟಾಚಾರದ ಪೆಡಂಭೂತವನ್ನು ಹೊರಗೆಳೆಯಬೇಕು. ಎಲ್ಲ ಬಗೆಯ ಪೂರ್ವಗ್ರಹಗಳನ್ನೂ ತೊರೆದು ಸತ್ಕಾರ್ಯ, ಸತ್ಪ್ರಜೆಗಳನ್ನು ಬೆಂಬಲಿಸುವ, ಭ್ರಷ್ಟರನ್ನು, ದುಷ್ಟರನ್ನು ದೂರವಿರಿಸುವ ಗುಣ ಬೆಳೆಸಿ ಕೊಳ್ಳದಿದ್ದಲ್ಲಿ ನಮ್ಮ ಶವಪೆಟ್ಟಿಗೆಗೆ ನಾವೇ ಮೊಳೆ ಹೊಡೆದುಕೊಂಡಂತೆ ಆಗುತ್ತದೆ.
ಮೌಲ್ಯ ಕುಸಿಯುತ್ತಿರುವ ಇಂದಿನ ಸಮಾಜದಲ್ಲಿ ಭವಿಷ್ಯದ ದಿನಗಳು ಬದಲಾಗುವುದಾದರೆ ಅದು ನಮ್ಮಿಂದಲ್ಲ. ಅದು ಹಾಳಾಗಿರುವುದೇ ನಮ್ಮಿಂದ. ಹಾಗಾಗಿ, ಮಕ್ಕಳನ್ನು ಆರೋಗ್ಯಕರವಾಗಿ ಬೆಳೆಸಿದರಷ್ಟೇ ನಾಳೆಗಳಲ್ಲಿ ನೆಮ್ಮದಿ. ಎಳೆಯರಲ್ಲಿ ಬಿತ್ತಬೇಕಾದ ಅಮೂಲ್ಯ ಮೌಲ್ಯಗಳೆಂದರೆ, ಮಾನವೀಯತೆ ಮತ್ತು ಸಂತೃಪ್ತಭಾವ. ನಾವೆಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠರು, ಬುದ್ಧಿವಂತರು ಎಂಬ ಭ್ರಾಂತಿಯಿಂದ ಮೊದಲು ಹೊರಬರಲೇಬೇಕಿದೆ. ಕಾರಣ, ಮೌಲ್ಯಗಳ ತುಲನೆಯಲ್ಲಿ ನಾವೇನೂ ಉತ್ತಮರಲ್ಲ. ಕನಿಷ್ಠ ಮನುಷ್ಯರಾಗಿಯೂ ಬೆಳೆದಿಲ್ಲ. ಸಹಿಷ್ಣುತೆ ಸಾಕಾಗದು. ನಾವಿನ್ನೂ ಪರಹಿತ ಬಯಸುವಷ್ಟು ಪ್ರಬುದ್ಧರಾಗಿಲ್ಲ. ಹಾಗಾಗಿ ಮಾನವೀಯತೆಯೇ ನಮ್ಮ ಬದುಕಿನ ಮೂಲಪಾಠವಾಗಬೇಕು. ಇದ್ದುದರಲ್ಲಿ ಸಂತುಷ್ಟಗೊಳ್ಳುವ ಬದುಕಿಗೆ ಕೊರತೆಗಳೇ ಕಾಡುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.