ADVERTISEMENT

ವಿಶ್ಲೇಷಣೆ: ವಿವಾಹ ವಯಸ್ಸು ಮತ್ತು ಸೌಖ್ಯ ವೃದ್ಧಿ

ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ವಿವಾಹ ವಯಸ್ಸನ್ನು 21ಕ್ಕೆ ಏರಿಸುವುದಕ್ಕಿಂತಲೂ ಉತ್ತಮವಾದ ಆಯ್ಕೆಗಳಿವೆ

ಪ್ರೊ.ಶ್ರೀಲತಾ ರಾವ್ ಶೇಷಾದ್ರಿ
Published 24 ಜನವರಿ 2022, 19:30 IST
Last Updated 24 ಜನವರಿ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪುರುಷರ ವಿವಾಹ ವಯಸ್ಸಿಗೆ ಸಮನಾಗಿ ಹೆಣ್ಣು ಮಕ್ಕಳ ವಿವಾಹ ವಯಸ್ಸನ್ನೂ 18ರಿಂದ 21 ವರ್ಷಗಳಿಗೆ ಏರಿಸುವ ಉದ್ದೇಶದ ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಮಸೂದೆಯನ್ನು 2021ರ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿದೆ. ಈ ಮಸೂದೆಯು ಈಗ ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಳಪಟ್ಟಿದ್ದು, ಅದರ ಸಾಮಾಜಿಕ, ಕಾನೂನಾತ್ಮಕ ಹಾಗೂ ರಾಜಕೀಯ ಪರಿಣಾಮಗಳುಸಾರ್ವಜನಿಕ ಚರ್ಚೆಗೆ ವಸ್ತುವಾಗಿವೆ. ಆದರೆ, ಮಹಿಳೆಯ ಪ್ರಜನನ ಆರೋಗ್ಯ, ಮಕ್ಕಳ ಬದುಕುಳಿಯುವಿಕೆ ಹಾಗೂ ಅವರ ಭವಿಷ್ಯದ ಬದುಕಿನ ಅವಕಾಶಗಳ ಕುರಿತಂತೆ ವಿವಾಹ ವಯಸ್ಸಿನ ಏರಿಕೆಯು ಮಹಿಳೆಯ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಈ ವಾಗ್ವಾದದಲ್ಲಿ ಗಮನಿಸಬೇಕಿರುವ ಮುಖ್ಯ ಅಂಶ.

ಪ್ರಜನನ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವು ದಾದರೆ, ಚಿಕ್ಕ ವಯಸ್ಸಿಗೇ ಮದುವೆ ಎಂದರೆ ಚಿಕ್ಕ ವಯಸ್ಸಿಗೇ ಬಸಿರು ಎಂಬುದು ಮೊದಲ ಕಾಳಜಿಯ ಸಂಗತಿಯಾಗುತ್ತದೆ. ಏಕೆಂದರೆ, ಶಿಶು ಹಾಗೂ ತಾಯಿ ಇಬ್ಬರಿಗೂ ಇದು ಹಾನಿಕಾರಕ. ಭಾರತದಾದ್ಯಂತ 20-24ರ ವಯೋಮಾನದ ಸುಮಾರು ನಾಲ್ವರು ಹುಡುಗಿಯರ ಪೈಕಿ ಒಬ್ಬಾಕೆ ಬಾಲವಧುವಾಗಿದ್ದ
ವಳು (23.3%) ಎಂಬುದನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್- 5) ದತ್ತಾಂಶ ಗಳು ತೋರಿಸಿವೆ. ಜಾಗತಿಕವಾಗಿ ಎಲ್ಲಾ ಬಾಲವಧುಗಳ ಪೈಕಿ ಸುಮಾರು ಶೇಕಡ 30ರಷ್ಟು ಮಂದಿ ಭಾರತದಲ್ಲೇ ಇದ್ದಾರೆ ಎಂದು ಯುನಿಸೆಫ್ ಅಂದಾಜಿಸಿದೆ.

ಇನ್ನೂ ಮಕ್ಕಳಾಗಿರುವಾಗಲೇ ವಿವಾಹವಾದ ಇವರು ಹದಿಹರೆಯದವರಾಗಿದ್ದಾಗ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಬಸಿರಿಗೆ ಸಂಬಂಧಿಸಿದ ಅತಿ ರಕ್ತದೊತ್ತಡ ಹಾಗೂ ಇಡೀ ಶರೀರದ ಸೋಂಕುಗಳಿಗೆ ಒಳಗಾಗುವ ಅಪಾಯವು ಹದಿಹರೆಯದ ತಾಯಂದಿರಿಗಿರುತ್ತದೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಹಾಗೆಯೇ ನವಜಾತ ಶಿಶುವಿನ ಕಡಿಮೆ ಜನನ ತೂಕ, ಅವಧಿಪೂರ್ವ ಹೆರಿಗೆ ಹಾಗೂ ನವಜಾತ ಶಿಶುವಿನಲ್ಲಿನ ಸಮಸ್ಯೆಗಳಂತಹ ಅಪಾಯಗಳು ಹದಿಹರೆಯದ ತಾಯಂದಿರಿಗೆ ಜನಿಸಿದ ಮಕ್ಕಳಲ್ಲಿ ಸಾಮಾನ್ಯವಾಗಿರುತ್ತವೆ. ವಾಸ್ತವವಾಗಿ, ಜಾಗತಿಕವಾಗಿ 15-19 ವಯಸ್ಸಿನ ಹೆಣ್ಣು ಮಕ್ಕಳ ಸಾವುಗಳಿಗೆ ಗರ್ಭಾವಸ್ಥೆ ಹಾಗೂ ಹೆರಿಗೆ ಸಂದರ್ಭದ ತೊಂದರೆಗಳೇ ಪ್ರಮುಖ ಕಾರಣ.

ADVERTISEMENT

ಇದಲ್ಲದೆ, ಬೇಗನೇ ಮದುವೆ ಎಂದರೆ ಹುಡುಗಿಯರ ಓದು ಅರ್ಧಕ್ಕೇ ಮೊಟಕಾದಂತೆ. ಪೂರ್ಣವಾದ ಸಾರ್ಥಕ ಬದುಕನ್ನು ಕಟ್ಟಿಕೊಳ್ಳುವ ಅವರ ಸಾಮರ್ಥ್ಯದ ಮೇಲೆ ಇದು ದೀರ್ಘಾವಧಿ ಪರಿಣಾಮ ಬೀರುತ್ತದಲ್ಲದೆ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೆಚ್ಚಿನ ವಿದ್ಯಾಭ್ಯಾಸವಿಲ್ಲದ ಅಥವಾ ಯಾವುದೇ ವಿದ್ಯಾಭ್ಯಾಸವಿಲ್ಲದ ಗ್ರಾಮೀಣ ಪ್ರದೇಶಗಳ ಬಡ ಕುಟುಂಬಗಳ ಹುಡುಗಿಯರಿಗೆ ಬೇಗನೇ ಮದುವೆ ಮಾಡಿಬಿಡುವ ಅಪಾಯಗಳು ಜಾಸ್ತಿ. 18 ವರ್ಷಗಳಾಗುವ ಮುಂಚೆಯೇ ಬಹುತೇಕ ಶೇ 60ರಷ್ಟು ಬಡ ಗ್ರಾಮೀಣ ಬಾಲೆಯರ ವಿವಾಹವಾಗಿತ್ತು ಎಂಬುದನ್ನು ಎನ್ಎಫ್ಎಚ್ಎಸ್- 5 ಸಮೀಕ್ಷೆಯ ಅಂಕಿಅಂಶಗಳು ತೋರಿಸಿವೆ. ಈ ಹೆಣ್ಣು ಮಕ್ಕಳು ಯಾವುದೇ ಶಿಕ್ಷಣ ಪಡೆದಿಲ್ಲದವರು. ಶಿಕ್ಷಣ ಮಟ್ಟ ಹೆಚ್ಚಿದಂತೆ, ಬಾಲ್ಯವಿವಾಹದ ಪ್ರಮಾಣವೂ ತೀವ್ರವಾಗಿ ಇಳಿಮುಖವಾಗಿರುವುದು ಕಂಡುಬಂದಿದೆ. ಬಾಲ ವಧುಗಳು ಸರಾಸರಿ ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೆ. ಬಡತನ, ವಿದ್ಯಾಭ್ಯಾಸದ ಕೊರತೆ, ಬೇಗನೇ ಮದುವೆ, ನಂತರ ಮಕ್ಕಳು ಎಂಬಂಥ ಪರಿಸ್ಥಿತಿಗಳು ಬದುಕಿನಲ್ಲಿ ಮುಂದೆ ಬರಲು ಮಹಿಳೆಗೆ ಅವಕಾಶ ನೀಡುವುದಿಲ್ಲ. ಇದೇ ಸುಳಿಯಲ್ಲಿ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆ ಸಿಲುಕುತ್ತದೆ.

ಬಾಲ್ಯವಿವಾಹ ಮಾಮೂಲಿ ಪದ್ಧತಿಯಾಗಿರುವಂತಹ ಸಮಾಜದಲ್ಲಿ ವಿವಾಹದ ವಯಸ್ಸಿನ ಕುರಿತಾದ ಕಾಳಜಿಯು ದೀರ್ಘಾವಧಿಯದ್ದು. 1929ರ ಬಾಲ್ಯವಿವಾಹ ನಿಗ್ರಹ ಕಾಯ್ದೆಯು ವಿವಾಹದ ಕಾನೂನುಬದ್ಧ ವಯಸ್ಸನ್ನು ಭಾರತದಲ್ಲಿ ಮೊದಲ ಬಾರಿಗೆ ನಿರ್ದಿಷ್ಟಪಡಿಸಿತು. ಈ ಪ್ರಕಾರ, ಹುಡುಗಿಯರಿಗೆ 14 ಹಾಗೂ ಹುಡುಗರಿಗೆ 18 ವಯಸ್ಸು ನಿಗದಿಪಡಿಸಲಾಗಿತ್ತು. ‘ಶಾರದಾ ಕಾಯ್ದೆ’ ಎಂದೂ ಕರೆಯಲಾಗುವ ಇದಕ್ಕೆ ಆಗ ಕೆಲವು ಗುಂಪುಗಳಿಂದ ವಿರೋಧವ್ಯಕ್ತವಾಗಿತ್ತು. ಇದರಿಂದ ಇದನ್ನು ಮುಸ್ಲಿಮೇತರ ಸಮುದಾಯಗಳಿಗೆ ಸೀಮಿತಗೊಳಿಸಲಾಯಿತು. ಇದನ್ನು ಸ್ವಾತಂತ್ರ್ಯಾನಂತರದ ಕಾಲದಲ್ಲಿ ಎರಡು ಬಾರಿ ಪರಿಷ್ಕರಿಸಲಾಯಿತು. 1949ರಲ್ಲಿ ಬಾಲೆಯರ ವಿವಾಹ ವಯಸ್ಸನ್ನು 15ಕ್ಕೆ ಏರಿಸಲಾಯಿತು. 1978ರಲ್ಲಿ ಹುಡುಗಿಯರು ಹಾಗೂ ಹುಡುಗರು ಇಬ್ಬರಿಗೂ ವಿವಾಹ ವಯಸ್ಸನ್ನು ಕ್ರಮವಾಗಿ 18 ಹಾಗೂ 21ಕ್ಕೆ ಏರಿಸಲಾಯಿತು. ಎಲ್ಲಾ ಭಾರತೀಯರಿಗೂ ಅನ್ವಯವಾಗುವಂತಹ ‘ಬಾಲ್ಯವಿವಾಹ ನಿಷೇಧ ಕಾಯ್ದೆ- 2006’ರ ಮೂಲಕ ಇದನ್ನು ಪುನರ್ ದೃಢೀಕರಿಸಲಾಯಿತು. ತೀರಾ ಇತ್ತೀಚೆಗೆ, ‘ಲಿಂಗತ್ವ ಸಮಾನತೆ ಸಾಧನೆ ಹಾಗೂ ಎಲ್ಲಾ ಮಹಿಳೆಯರು, ಬಾಲಕಿಯರ ಸಬಲೀಕರಣ’ ಗುರಿ ಹೊಂದಿರುವ ಎಸ್‌ಡಿಜಿ 5 ಅಳವಡಿಕೆಯ ಮೂಲಕ ಜಾಗತಿಕ
ಪ್ರಾಮುಖ್ಯವನ್ನು ಸುಸ್ಥಿರ ಅಭಿವೃದ್ಧಿ ಗುರಿಗಳು (ಎಸ್‌ಡಿಜಿ) ಒದಗಿಸಿಕೊಟ್ಟಿವೆ. ‘ಎಸ್‌ಡಿಜಿ 5.3.1’ ಎಂಬ ಮುಖ್ಯ ಸೂಚಕದ ಮೂಲಕ, 15 ವರ್ಷಕ್ಕಿಂತ ಮುಂಚೆ ಹಾಗೂ 18 ವರ್ಷಕ್ಕಿಂತ ಮುಂಚೆ ವಿವಾಹವಾಗಿರುವ ಅಥವಾ ಸಂಗಾತಿಯೊಟ್ಟಿಗಿರುವ 20-24ರ ವಯೋಮಾನದ ಮಹಿಳೆಯರ ಪ್ರಮಾಣದ ಪ್ರಗತಿಯನ್ನು ನಿಯಮಿತವಾಗಿ ಗುರುತಿಸಲಾಗುತ್ತದೆ.

ಈಗಿರುವಂತಹ ಕಾನೂನು ಅವಕಾಶಗಳ ಅನುಷ್ಠಾನದಿಂದ 18 ವರ್ಷಗಳ ಮಿತಿಯಿಂದ ಬಾಲ್ಯವಿವಾಹ ಕಡಿಮೆ ಮಾಡುವಲ್ಲಿ ಸಾಧಿಸಿರುವ ಪ್ರಗತಿ ಸ್ಥಿರವಾಗಿದೆ. ಆದರೆ ಗುರಿ ಸಾಧನೆಯಲ್ಲಿ ತುಂಬಾ ಹಿಂದುಳಿದಿದ್ದೇವೆ. ರಾಷ್ಟ್ರದಾದ್ಯಂತ ಬಾಲ್ಯವಿವಾಹದ ಪ್ರಮಾಣ 1970ರಲ್ಲಿ ಬಹುತೇಕ ಶೇಕಡ 75ರಷ್ಟಿದ್ದದ್ದು 2020ರಲ್ಲಿ ಶೇಕಡ 23.3ಕ್ಕೆ ಇಳಿಮುಖವಾಗಿದೆ. ಇದು, ಕಳೆದ ದಶಕದಲ್ಲಿ ವಾರ್ಷಿಕ ಶೇಕಡ 5.5ರಷ್ಟು ಇಳಿಕೆಯನ್ನು ಪ್ರತಿನಿಧಿಸುತ್ತದೆ. ಹದಿಹರೆಯದ ಫಲವತ್ತತೆ ಪ್ರಮಾಣವು 2015-16ರಲ್ಲಿ 15-19 ವಯೋಮಾನದ 1,000 ಹುಡುಗಿಯರಲ್ಲಿ 51 ಇದ್ದದ್ದು 2019-21ರಲ್ಲಿ 41ಕ್ಕೆ ಕುಸಿದಿದೆ. ಇಂತಹ ಸನ್ನಿವೇಶದಲ್ಲಿ, ವಿವಾಹ ವಯಸ್ಸನ್ನು 18ರಿಂದ 21 ವರ್ಷಕ್ಕೆ ಏರಿಸುವುದು ಉತ್ತಮ ಮಾರ್ಗವಾಗುವುದೇ?

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು, ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಹಾಗೂ ಇತರ ಆರ್ಥಿಕ ಅವಕಾಶಗಳು, ಹದಿಹರೆಯದ ಹೆಣ್ಣು ಮಕ್ಕಳನ್ನು ಬೆಂಬಲಿಸುವ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಬಾಲ್ಯವಿವಾಹವು ಕಾನೂನುಬಾಹಿರ ಎಂಬುದರ ಬಗ್ಗೆ ನಿರಂತರ ಜಾಗೃತಿ ಮೂಡಿಸುವಿಕೆಯ ಕೆಲಸಗಳು ಬಾಲ್ಯವಿವಾಹ ಇಳಿಮುಖವಾಗಲು ಕೆಲವು ಕಾರಣಗಳಾಗಿವೆ ಎಂದು ಸದ್ಯಕ್ಕೆ ವಿವರಿಸಲಾಗುತ್ತಿದೆ. 21ಕ್ಕೆ ವಿವಾಹ ವಯಸ್ಸು ಏರಿಸುವುದಕ್ಕಿಂತಲೂ ಅಂತಹ ಕಾರ್ಯಕ್ರಮಗಳು ಹಾಗೂ ಅವಕಾಶಗಳಿಗೆ ಎಲ್ಲ ಹುಡುಗಿಯರೂ ಸಂಪರ್ಕ ಹೊಂದುವಂತೆ ಮಾಡಲು ಪ್ರಗತಿಯನ್ನು ಗಣನೀಯವಾಗಿ ಹೆಚ್ಚಿಸುವುದು ಬಹುಶಃ ಉತ್ತಮ ಆಯ್ಕೆ.

ಸುರಕ್ಷಿತ ತಾಯ್ತನ ಹಾಗೂ ಶಿಶುಗಳ ಬದುಕುಳಿಯುವಿಕೆ ಖಾತರಿಪಡಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಹಣ ಹೂಡಿಕೆ ಅಗತ್ಯ. ಶೇಕಡ 50ಕ್ಕಿಂತ ಹೆಚ್ಚಿನ ಬಾಲವಧುಗಳು ಐದು ರಾಜ್ಯಗಳಿಗೆ ಸೇರಿದವರು. ಆ ರಾಜ್ಯಗಳು ಯಾವುವೆಂದರೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಬಿಹಾರ ಹಾಗೂ ಮಧ್ಯಪ್ರದೇಶ. ವಿವಾಹ ವಯಸ್ಸಿನಲ್ಲಿ ಪುರುಷ- ಮಹಿಳೆ ಮಧ್ಯೆ ಲಿಂಗತ್ವ ಸಮಾನತೆ ತರಬೇಕು ಎಂಬುದು ಗುರಿಯಾಗಿದ್ದಲ್ಲಿ, ಪುರುಷರಿಗೂ ವಯಸ್ಸಿನ ಮಿತಿಯನ್ನು 18ಕ್ಕೆ ಇಳಿಸಬಹುದಾದ ಆಯ್ಕೆ ಇದೆ. 25-29 ವಯೋಮಾನದ ಐವರು ಪುರುಷರಲ್ಲಿ ಒಬ್ಬರು (17.7%) ಈಗಿರುವ 21 ವಯಸ್ಸಿನ ಮಿತಿಯ ಕೆಳಗೆ ವಿವಾಹವಾಗಿರುವುದನ್ನು ಎನ್ಎಫ್ಎಚ್ಎಸ್- 5ರ ದತ್ತಾಂಶ ತೋರಿಸಿದೆ.

ಮಹಿಳೆಯರ ಆರೋಗ್ಯ ಹಾಗೂ ಸೌಖ್ಯವನ್ನು ವೃದ್ಧಿಸುವುದೇ ಗುರಿಯಾಗಿದ್ದಲ್ಲಿ, ಮುಂದೆ ಸಾಗಬೇಕಾದ ಹಾದಿ ಸ್ಪಷ್ಟವಿದೆ: ವಿದ್ಯಾಭ್ಯಾಸದಿಂದ ಅವರದೇ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಹಾಗೂ ಮಾಹಿತಿಗಳನ್ನು ತಿಳಿದುಕೊಂಡು ಬದುಕಿನ ಆಯ್ಕೆಗಳನ್ನು ಮಾಡಿ
ಕೊಳ್ಳುವಂತಹ ಅವಕಾಶಗಳನ್ನು ತಮ್ಮ ಹೆಣ್ಣು ಮಕ್ಕಳಿಗೆ ನೀಡಲು ಅಗತ್ಯವಾದಂತಹ ಸಾಮಾಜಿಕ ಹಾಗೂ ಆರ್ಥಿಕ ಬೆಂಬಲಗಳನ್ನು ಅವರ ಕುಟುಂಬಗಳಿಗೆ ಹಾಗೂ ಹುಡುಗಿಯರಿಗೆ ಒದಗಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.