ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಬಲವಾಗಿರುವ ಸಮುದಾಯಗಳೇ ಇಂದು ಮೀಸಲಾತಿಗೆ ಹೋರಾಡುತ್ತಿವೆ. ಈ ಸಮುದಾಯಗಳಿಗೆ ಒಂದೇ ಪ್ರವರ್ಗದಡಿ ಮೀಸಲಾತಿ ನೀಡಿದರೆ, ತಳಸಮುದಾಯಗಳಿಗೆ ಪ್ರಬಲರ ಜೊತೆ ಹೋರಾಡಲು ಸಾಧ್ಯವಾಗದು.
ಉದಾಹರಣೆಗೆ, ಸವಿತಾ ಸಮಾಜವು ಪ್ರವರ್ಗ ‘2ಎ’ದಲ್ಲಿದೆ. ಈ ವರ್ಗದಲ್ಲಿ 101 ಜಾತಿಗಳಿದ್ದು, ಶೇ 15ರಷ್ಟು ಮೀಸಲಾತಿ ಪಡೆಯಲು ಅರ್ಹವಾಗಿವೆ. ಸವಿತಾ, ಮಡಿವಾಳ, ಕುಂಬಾರ, ತಿಗಳ, ದೇವಾಡಿಗ ಮತ್ತು ಒಟ್ಟು ಜನಸಂಖ್ಯೆಯಲ್ಲಿ ಶೇ 1ಕ್ಕಿಂತ ಕಡಿಮೆ ಪ್ರಮಾಣದಲ್ಲಿರುವ ಜಾತಿಗಳು ಈ ಪ್ರವರ್ಗದಲ್ಲಿವೆ. ರಾಜಕೀಯವಾಗಿ ಪ್ರಬಲವಾಗಿರುವ ಕುರುಬ ಸಮುದಾಯವೂ ಇದೇ ಪ್ರವರ್ಗದಲ್ಲಿದೆ. ಈಗ ಪಂಚಮಸಾಲಿ ಲಿಂಗಾಯತ ಸಮುದಾಯವು ‘ಪ್ರವರ್ಗ 2ಎ’ ಮೀಸಲಾತಿ ಕೋರುತ್ತಿದೆ. ತಳಸಮುದಾಯಗಳಿಗೆ ಇದರಿಂದ ಪರೋಕ್ಷವಾಗಿ ತೊಂದರೆಯಾಗಲಿದೆ.
ರಾಜಕೀಯದಲ್ಲಿ, ಐಎಎಸ್, ಐಪಿಎಸ್, ಕೆಎಎಸ್ ನಂತಹ ಆಡಳಿತಾತ್ಮಕ ಹುದ್ದೆಗಳಲ್ಲಿ ಸವಿತಾ ಸಮಾಜದವರ ಸಂಖ್ಯೆ ತೀರಾ ಕಡಿಮೆ ಇದೆ. ಪ್ರಬಲ ಸಮುದಾಯದವರಿಗೂ ಇದೇ ಪ್ರವರ್ಗದಲ್ಲಿ ಮೀಸಲಾತಿ ನೀಡಿದರೆ, ಪೈಪೋಟಿ ಎದುರಿಸುವುದು ತಳಸಮುದಾಯಗಳಿಗೆ ಕಷ್ಟವಾಗುತ್ತದೆ.
ಪಂಚಮಸಾಲಿ ಸಮುದಾಯದವರು 18 ಜನ ಶಾಸಕರು ಇದ್ದಾರೆ. ಇಷ್ಟು ಪ್ರಬಲವಾಗಿರುವ ಸಮುದಾಯವನ್ನು ‘2ಎ’ಗೆ ಸೇರಿಸಿದರೆ ಸವಿತಾ, ಮಡಿವಾಳ, ಕುಂಬಾರ, ತಿಗಳರಂತಹ ಸಣ್ಣ ಸಮುದಾಯಗಳು ಶಾಶ್ವತವಾಗಿ ತಲೆ ಮೇಲೆ ಬಂಡೆ ಎಳೆದುಕೊಳ್ಳಬೇಕಾಗುತ್ತದೆ.
ಪ್ರವರ್ಗ 2ಎಗೆ ಶೇ 15ರಷ್ಟು ಮೀಸಲಾತಿ ನೀಡಲಾಗುತ್ತದೆ. ಪ್ರಬಲರ ಜೊತೆ ನಮ್ಮನ್ನೂ ಈ ಪ್ರವರ್ಗದಲ್ಲಿಯೇ ಇಡುವ ಬದಲು ‘2ಸಿ’ ಎಂದು ಪ್ರತ್ಯೇಕ ಪ್ರವರ್ಗ ರಚಿಸಿ, ಸವಿತಾ, ಮಡಿವಾಳ, ಕುಂಬಾರ, ತಿಗಳ, ದೇವಾಡಿಗದಂತಹ ಶೇ 1ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಸಮುದಾಯಗಳನ್ನು ಈ ಪ್ರವರ್ಗಕ್ಕೆ ಸೇರಿಸಿ, ಶೇ 5ರಷ್ಟು ಮೀಸಲಾತಿ ನೀಡಬೇಕು. ಪ್ರವರ್ಗ 2ಎಗೆ ಶೇ 10ರಷ್ಟು ಮೀಸಲಾತಿ ಒದಗಿಸಬೇಕು. ಆಗ, ತಳಸಮುದಾಯಗಳಿಗೂ ಹೆಚ್ಚು ಪೈಪೋಟಿ ಇರುವುದಿಲ್ಲ.
(ಲೇಖಕ: ಸವಿತಾ ಸಮುದಾಯದ ಮುಖಂಡ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.