ADVERTISEMENT

ವಿಶ್ಲೇಷಣೆ: ಕಲಿಕೆಯ ವೇಗ ಮತ್ತು ಭಾಷಾ ಮಾಧ್ಯಮ

ಕನ್ನಡ ಮಾಧ್ಯಮ ಪರ ಅರಿವು– ಒಲವು ಗಟ್ಟಿಗೊಳ್ಳಲು ವ್ಯಾಪಕ ಚರ್ಚೆ ಆಗಬೇಕು

ಅರವಿಂದ ಚೊಕ್ಕಾಡಿ
Published 8 ಸೆಪ್ಟೆಂಬರ್ 2024, 19:23 IST
Last Updated 8 ಸೆಪ್ಟೆಂಬರ್ 2024, 19:23 IST
   

ನಮ್ಮ ರಾಜ್ಯದಲ್ಲಿ ಐದನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಇರಬೇಕು ಎಂದು ಕೆಲವು ದಿನಗಳ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಹೇಳಿದ್ದು ವ್ಯಾಪಕವಾಗಿ ಸುದ್ದಿಯಾಗಿತ್ತು. ಆಮೇಲೆ ಸುದ್ದಿ ತಣ್ಣಗಾಯಿತು.‌ ಏಕೆಂದರೆ, ವ್ಯವಸ್ಥೆ ಮತ್ತು ಜನಸಮೂಹವು ಬಹುಮಟ್ಟಿಗೆ ಇಂಗ್ಲಿಷ್‌ ಅನ್ನು ಅಪ್ಪಿಕೊಂಡಿವೆ. ಆದರೆ ಬಿಳಿಮಲೆ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ದೀರ್ಘಕಾಲಿಕ ಮಹತ್ವ ಇದ್ದೇ ಇದೆ. ಏಕೆಂದರೆ, ಭಾರತದ ರಾಜ್ಯಗಳು ಭಾಷಾವಾರು ಪ್ರಾಂತ್ಯಗಳಾಗಿ ರಚನೆಯಾಗಿವೆ. ಆಯಾ ಭಾಷೆಯ ಅಸ್ತಿತ್ವ ಕಳೆದುಹೋದರೆ, ರಾಜ್ಯಗಳ ಅಸ್ತಿತ್ವವು ಮಹತ್ವ ಕಳೆದುಕೊಳ್ಳುತ್ತದೆ ಅಥವಾ ರಾಜ್ಯಗಳೇ ಮರು ವಿನ್ಯಾಸವನ್ನು ತಳೆದು ಬೇರೆಯದೇ ರೂಪಕ್ಕೆ ಹೊರಳಬೇಕಾದ ಸ್ಥಿತಿ ಉಂಟಾಗಬಹುದು.

ಕನ್ನಡದ ಅಸ್ತಿತ್ವವು ರಾಜ್ಯ ರಚನೆಗೆ ಕಾರಣ ಆಗಿರುವುದರಿಂದ ಬಿಳಿಮಲೆ ಅವರು ಪ್ರಸ್ತಾಪಿಸಿದ ವಿಚಾರ ಸಾಂವಿಧಾನಿಕ ಪ್ರಶ್ನೆಯೂ ಆಗುವಂತಹದ್ದಾಗಿದೆ. ಆದ್ದರಿಂದ ಈ ಚರ್ಚೆಗೆ ದೀರ್ಘಾವಧಿಯ ಮಹತ್ವ ಇದ್ದೇ ಇದೆ.

ಕನ್ನಡ ಮಾಧ್ಯಮದ ಪರವಾದ ವಿಚಾರಗಳು ಮಂಡಿತವಾದಾಗಲೆಲ್ಲ ಪ್ರಶ್ನೆಗೊಳಗಾಗುವ ಸಂಗತಿಗಳು ಎರಡು. ಮೊದಲನೆಯದು, ಹೇಳುವವರ ನೈತಿಕತೆಯ ಪ್ರಶ್ನೆ. ಹೀಗೆ ಮಾತಾಡುವವರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಕಳಿಸಿದ್ದಾರೊ ಎನ್ನುವುದೇ ಪ್ರಮುಖ ಪ್ರಶ್ನೆಯಾಗುತ್ತದೆ.‌ ಆದ್ದರಿಂದ ಕನ್ನಡ ಮಾಧ್ಯಮದ ಪರವಾಗಿ ಮಾತಾಡುವವರು ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ತಾಯಿ– ತಂದೆಯೇ ಆಗಿರಬೇಕಾಗಿದೆ. ಇಲ್ಲಿ ನೈತಿಕತೆಯ ಪ್ರಶ್ನೆಯನ್ನು ಎತ್ತುವುದರ ಉದ್ದೇಶವು ಕನ್ನಡದ ಪರ ಮಾತನಾಡುವವರು ಕನ್ನಡ ಶಾಲೆಗಳಿಗೆ ಮಕ್ಕಳನ್ನು ಕಳಿಸಬೇಕು ಎನ್ನುವ ಒತ್ತಾಸೆಗಿಂತ ಹೆಚ್ಚಾಗಿ ಇಂಗ್ಲಿಷ್ ಮಾಧ್ಯಮದ ಪ್ರವೃತ್ತಿಯನ್ನು ಪ್ರಶ್ನಿಸಬಾರದು ಎನ್ನುವುದಾಗಿರುತ್ತದೆ.

ADVERTISEMENT

ಎರಡನೆಯದು, ದುರ್ಬಲ ವರ್ಗದವರಿಗೆ ಇಂಗ್ಲಿಷ್ ಮಾಧ್ಯಮದಿಂದ ಮಹತ್ತರ ಅನುಕೂಲಗಳು ಆಗಲಿವೆ, ಕನ್ನಡ ಮಾಧ್ಯಮದ ಪರ ಇರುವವರು ದುರ್ಬಲ ವರ್ಗದ ವರಿಗೆ ಏನೋ ಅನ್ಯಾಯವಾಗುವುದನ್ನು ಪ್ರತಿಪಾದಿಸುತ್ತಿದ್ದಾರೆ ಎಂಬ ಭಾವನೆಯಿಂದ ಮೂಡಿದ ಪ್ರತಿಕ್ರಿಯೆಯಾಗಿದೆ. ಆದರೆ ಕನ್ನಡ ಮಾಧ್ಯಮದ ಪರ ಮಾತನಾಡುವುದೆಂದರೆ, ದುರ್ಬಲ ವರ್ಗದವರಿಗೆ ಮಾತ್ರ ಕನ್ನಡ ಮಾಧ್ಯಮ ಆಗಬೇಕು ಎಂದಲ್ಲ. ಸಬಲ ವರ್ಗದ ವಿದ್ಯಾರ್ಥಿಗಳಿಗೂ ಕನ್ನಡ ಮಾಧ್ಯಮವೇ ಸೂಕ್ತ ಎನ್ನುವುದಾಗಿರುತ್ತದೆ. ಅಲ್ಲದೆ ಇಂಗ್ಲಿಷ್‌ನ ಮೂಲಕ ಔದ್ಯೋಗಿಕ ಅವಕಾಶಗಳು ಹೆಚ್ಚಾಗುವುದು ವರ್ತಮಾನದ ಜಾಗತಿಕ ಮಾರುಕಟ್ಟೆಯ ಸ್ಥಿತಿಯಾಗಿದ್ದು, ಇದನ್ನು ಕನ್ನಡ ಮಾಧ್ಯಮದ ಪರವಾಗಿ ಇರುವವರು ನಿರಾಕರಿಸಲು ಸಾಧ್ಯವಿಲ್ಲ. ಆದರೆ ಔದ್ಯೋಗಿಕ ಮಾರುಕಟ್ಟೆಯ ವಿಸ್ತರಣೆಯು ಇಂಗ್ಲಿಷ್ ಭಾಷಾ ಕೌಶಲದ ಮೂಲಕ ಸಾಧ್ಯವಾಗುವುದೊ, ಇಂಗ್ಲಿಷ್ ಮಾಧ್ಯಮದ ಮೂಲಕ ಸಾಧ್ಯವಾಗುವುದೊ? ಇಂಗ್ಲಿಷ್ ಭಾಷಾ ಕೌಶಲದ ಮೂಲಕ ಸಾಧ್ಯವಾಗುವುದು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಿದ್ದಾಗ ಕನ್ನಡ ಮಾಧ್ಯಮದ ಪರವಾಗಿ ಇರುವವರು ಇಂಗ್ಲಿಷ್ ಭಾಷಾ ಕೌಶಲ ಕಲಿಯಬೇಕು ಮತ್ತು ಬಹಳಷ್ಟು ದಕ್ಷತೆಯಿಂದಲೇ ಕಲಿಯಬೇಕು ಎನ್ನುತ್ತಿದ್ದಾರೆ ಎಂಬುದು ಗೊತ್ತಾಗಿಯೂ ಗೊತ್ತಾಗದವರ ಹಾಗೆ ನಟಿಸುವುದರ ಉದ್ದೇಶವು ಇಂಗ್ಲಿಷ್ ಮಾಧ್ಯಮದ ಔಚಿತ್ಯದ ಬಗ್ಗೆ ಪ್ರಶ್ನಿಸಬಾರದು ಎನ್ನುವುದರ ಹೊರತಾಗಿ ಬೇರೇನೂ ಅಲ್ಲ.

ಈ ಮನೋಧರ್ಮದ ಹಿಂದಿರುವ ತರ್ಕವೇನೆಂದರೆ, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ಇಂಗ್ಲಿಷ್ ಭಾಷಾ ಜ್ಞಾನ ಹೆಚ್ಚಾಗುತ್ತದೆ ಎನ್ನುವ ಮನೋಭಾವ.‌ ಈ ಮನೋಭಾವವನ್ನು ಶೈಕ್ಷಣಿಕ ಸಂಶೋಧನೆಗಳೂ ಸಮರ್ಥಿಸಿಲ್ಲ, ಜೀವನಾನುಭವಗಳೂ ಸಮರ್ಥಿಸುತ್ತಿಲ್ಲ. ಏಕೆಂದರೆ ಹತ್ತು ವರ್ಷ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ನಂತರವೂ ಇಂಗ್ಲಿಷ್ ಭಾಷಾ ಜ್ಞಾನ ಇಲ್ಲದ ಬಹಳಷ್ಟು ಜನ ಇರುವುದು ಎಲ್ಲರಿಗೂ ಅನುಭವಕ್ಕೆ ಬಂದಿರುವ ವಿಷಯವೇ ಆಗಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಇಂಗ್ಲಿಷ್‌ನಲ್ಲಿ ಉತ್ತರವನ್ನು ಬರೆದ ಅಥವಾ ಹೇಳಿದ ಮಾತ್ರಕ್ಕೆ ಇಂಗ್ಲಿಷ್ ಭಾಷಾ ಜ್ಞಾನ ಪ್ರಾಪ್ತವಾಗಿದೆ ಎಂದು ಅರ್ಥವಲ್ಲ. ಸ್ವಂತ ಅನುಭವಗಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಬರೆಯುವ ಅಥವಾ ಹೇಳುವ ಸಾಮರ್ಥ್ಯ ಬಂದಾಗ ಇಂಗ್ಲಿಷ್‌ ಭಾಷಾ ಸಾಮರ್ಥ್ಯ ಪ್ರಾಪ್ತವಾಗಿದೆ ಎಂದು ಅರ್ಥ.‌ ಕನ್ನಡ ಮಾಧ್ಯಮದಲ್ಲೇ ಕಲಿಕೆ ನಡೆಸಿಯೂ ಇಂಗ್ಲಿಷ್ ಭಾಷಾ ಜ್ಞಾನ ಉನ್ನತ ಮಟ್ಟದಲ್ಲಿ ಇರುವ ಬಹಳಷ್ಟು ಮಕ್ಕಳು ಇರುವುದು ಕೂಡ ಎಲ್ಲರ ಅನುಭವಕ್ಕೂ ಸಿಗುವ ಸಂಗತಿಯೇ ಆಗಿದೆ. ಮಕ್ಕಳಿಗೆ ಇಂಗ್ಲಿಷ್ ಭಾಷೆ ಚೆನ್ನಾಗಿ ಬರಬೇಕು ಎನ್ನುವುದು ಸರಿಯಾದ ಧೋರಣೆ. ಅದಕ್ಕೆ ಇಂಗ್ಲಿಷ್ ಭಾಷೆಯನ್ನು ಕಲಿಸುವ ವಿಧಾನ ಸಮರ್ಪಕವಾಗಬೇಕೆ ವಿನಾ ಇಂಗ್ಲಿಷ್ ಮಾಧ್ಯಮ ಪರಿಹಾರವಾಗಲಾರದು.

‘ನಿನ್ನ ವಿಚಾರವನ್ನು ನೀನು ಇಂಗ್ಲಿಷ್‌ನಲ್ಲೇ ಹೇಳಬೇಕು’ ಎಂದು ಒತ್ತಾಯಿಸಿದ ತಕ್ಷಣ ತಮ್ಮ ವಿಚಾರವನ್ನು ಹೇಳುವುದನ್ನೇ ಮಕ್ಕಳು ಸ್ಥಗಿತಗೊಳಿಸಿದ ಅನೇಕ ಸಂದರ್ಭಗಳನ್ನು ಕಂಡಿದ್ದೇನೆ. ಅವರಿಗೆ ಇಂಗ್ಲಿಷ್‌ನಲ್ಲಿ ಹೇಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಇಂಗ್ಲಿಷ್ ಅವರಿಗೆ ಗೊತ್ತಿಲ್ಲ. ಕನ್ನಡದಲ್ಲಿ ಹೇಳಬಾರದು ಎಂದಾಗ ಮಾತು ನಿಲ್ಲಿಸದೆ ಬೇರೇನು ತಾನೇ ಮಾಡಲು ಸಾಧ್ಯ? ಆಗ ಮಕ್ಕಳ ಪ್ರತಿಭೆಯ ವಿಕಾಸವೇ ಕುಂಠಿತವಾಗುತ್ತದೆ.‌ ಸಾಮಾಜೀಕರಣ ಪ್ರಕ್ರಿಯೆ ದುರ್ಬಲವಾಗುತ್ತದೆ. ಆದ್ದರಿಂದ ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮವೇ ಸೂಕ್ತವಾಗಿದೆ.

ಮಕ್ಕಳ ಕಲಿಕೆಯ ವೇಗಕ್ಕೂ ಭಾಷಾ ಮಾಧ್ಯಮಕ್ಕೂ ಸಂಬಂಧವಿದೆ.‌ ಕನ್ನಡವು ಮಕ್ಕಳಿಗೆ ಸಹಜ ಭಾಷೆಯಾದ್ದರಿಂದ ಓದಿದೊಡನೆ ವಿಚಾರ ಅರ್ಥವಾಗುತ್ತದೆ. ಹೊಸ ಪದಗಳು ಸಿಕ್ಕಾಗಲೂ ವಾಕ್ಯ ಅರ್ಥವಾಗುತ್ತದೆ. ಏಕೆಂದರೆ ಬಹುತೇಕ ಪದಗಳು ಮಕ್ಕಳಿಗೆ ಗೊತ್ತಿರುವಂತಹವೇ ಆಗಿರುತ್ತವೆ. ಒಂದೋ ಎರಡೋ ಹೊಸ ಪದಗಳಿದ್ದರೆ ಅವಕ್ಕೆ ಮಾತ್ರ ಅರ್ಥವನ್ನು ಹುಡುಕಿಕೊಂಡರೆ ಸಾಕಾಗುತ್ತದೆ. ಇಂಗ್ಲಿಷ್‌ನಲ್ಲಿ ಓದಿಕೊಳ್ಳುವಾಗ ಈ ಅನುಕೂಲ ಇರುವುದಿಲ್ಲ. ಬಹುತೇಕ ಪದಗಳು ಹೊಸ ಪದಗಳಾಗಿರುತ್ತವೆ. ಪ್ರತಿಯೊಂದಕ್ಕೂ ಅರ್ಥವನ್ನು ಹುಡುಕಿ ತಿಳಿದುಕೊಂಡರೆ ಸಾಕಾಗುವುದಿಲ್ಲ, ಇಂಗ್ಲಿಷ್ ಭಾಷೆಯ ವಾಕ್ಯ ರಚನಾ ವಿನ್ಯಾಸವನ್ನೂ ಅರ್ಥಮಾಡಿಕೊಳ್ಳಬೇಕು. ಅಂದರೆ ಕನ್ನಡದಲ್ಲಿ ಓದುವುದಕ್ಕಿಂತ ಇಂಗ್ಲಿಷ್‌ನಲ್ಲಿ ಓದುವಾಗ ಮಕ್ಕಳು ನಾಲ್ಕೈದು ಪಟ್ಟು ಜಾಸ್ತಿ ಶ್ರಮವನ್ನು ಹಾಕಬೇಕಾಗುತ್ತದೆ. ಇಂಗ್ಲಿಷ್‌ನಲ್ಲಿ ಒಂದು ಪುಟವನ್ನು ಓದಿ ಮುಗಿಸುವ ವೇಳೆಗೆ ಕನ್ನಡದಲ್ಲಾದರೆ ಸರಿ ಸುಮಾರು ಐದು ಪುಟಗಳನ್ನು ಓದಿ ಪೂರ್ಣಗೊಳಿಸಲು ಆಗುತ್ತದೆ. ಅರ್ಥಾತ್ ಕನ್ನಡ ಮಾಧ್ಯಮದಲ್ಲಿ ಕಲಿಕೆಯ ವೇಗ ಜಾಸ್ತಿ ಇರುತ್ತದೆ. ಆಗ ಅರ್ಥೈಸುವ ಸಾಮರ್ಥ್ಯ ಹೆಚ್ಚಾಗುತ್ತದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವಾಗ ಇದು ತುಂಬಾ ಚೆನ್ನಾಗಿ ಗೊತ್ತಾಗುತ್ತದೆ.

ಇಂಗ್ಲಿಷ್ ಮಾಧ್ಯಮದ ಉತ್ತರ ಪತ್ರಿಕೆಗಳಲ್ಲಿ ಉತ್ತರ ಸರಿ ಇದ್ದರೆ ಪೂರ್ತಿ ಸರಿಯೇ ಇರುತ್ತದೆ.‌ ತಪ್ಪಾದರೆ ತಪ್ಪೇ. ಆದರೆ ಕನ್ನಡ ಮಾಧ್ಯಮದ ಉತ್ತರ ಪತ್ರಿಕೆಗಳು ಹಾಗಲ್ಲ. ಸರಿ ಇರುವ ಉತ್ತರಗಳು ಸರಿಯೇ ಇರುತ್ತವೆ. ಸರಿಯಾಗಿ ಉತ್ತರ ಗೊತ್ತಿಲ್ಲದ ವಿದ್ಯಾರ್ಥಿಗಳು ಪ್ರಶ್ನೆಯನ್ನು ಅರ್ಥ ಮಾಡಿಕೊಂಡು ಅಂದಾಜಿನಲ್ಲಿ ‘ಇದೂ ಉತ್ತರ ಆಗಬಹುದು’ ಎಂಬ ಲೆಕ್ಕಾಚಾರದಲ್ಲಿ ಬರೆದಿರುತ್ತಾರೆ. ಅರ್ಥೈಸುವ ಸಾಮರ್ಥ್ಯವಿದ್ದು ಅದನ್ನು ಹೇಳಬಲ್ಲ ಭಾಷಾ ಸಾಮರ್ಥ್ಯ ಇದ್ದಾಗ ಈ ಮಾದರಿಯ ಉತ್ತರಗಳನ್ನು ಬರೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಸೂಕ್ತವಾಗಿದೆ.

ಯಾವುದೇ ಹೊಸ ಭಾಷೆಯ ಕಲಿಕೆಗೆ ಮಕ್ಕಳ ಸಹಜ ಭಾಷೆಯ ತಳಹದಿ ಇರಬೇಕು. ಇಲ್ಲವಾದರೆ ಯಾವುದೇ ಭಾಷೆಯ ಪ್ರಯೋಗದ ಸಾಮಾನ್ಯ ನಿಯಮಗಳು ಅರ್ಥವಾಗಲು ಕಷ್ಟವಾಗುತ್ತದೆ. ಆದ್ದರಿಂದ ಕರ್ನಾಟಕದ ಮಕ್ಕಳಿಗೆ ಸಹಜ ಭಾಷೆಯಾದ ಕನ್ನಡದ ಕಲಿಕೆಯೂ ಕನ್ನಡ ಮಾಧ್ಯಮದ ಮೂಲಕ ಇತರ ವಿಚಾರಗಳ ಕಲಿಕೆಯೂ ಸಮರ್ಪಕವಾಗಿ ನಡೆದಾಗ ಹೊಸ ಭಾಷೆಯನ್ನು ಮತ್ತು ಹೊಸ ಭಾಷೆಯ ಮೂಲಕ ಇತರ ವಿಚಾರಗಳ ಕಲಿಕೆಯನ್ನು ನಡೆಸಲು ಬೇಕಾದ ಸಾಮರ್ಥ್ಯ ಬರುತ್ತದೆ.‌ ಆದ್ದರಿಂದ ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮವೇ ಸೂಕ್ತವಾಗಿದೆ.

‘ಸಾರ್ವಜನಿಕ ಅರಿವು’ ಅಥವಾ ‘ಜಾಗೃತಿ’ ಏಕಾಏಕಿ ನಡೆಯುವುದಿಲ್ಲ. ವ್ಯಾಪಕವಾದ ಚರ್ಚೆಗಳು, ವಾಗ್ವಾದ ಗಳು ನಡೆಯಬೇಕಿರುತ್ತದೆ. ಆದರೆ ಪ್ರತಿವಾದಗಳು, ‘ಹಾಗಾದರೆ ಇಂಗ್ಲಿಷ್ ಬೇಡವೆ’ ಎನ್ನುವಷ್ಟು ಆತ್ಮವಂಚಕವಾಗಿರಬಾರದು. ಏಕೆಂದರೆ ಇಂಗ್ಲಿಷ್ ಬೇಡ ಎಂದು ಯಾರೂ ಹೇಳುತ್ತಿಲ್ಲ. ಬದಲು ಇಂಗ್ಲಿಷ್ ಮಾಧ್ಯಮವೇ ಯಾಕೆ ಬೇಕು ಮತ್ತು ಕನ್ನಡ ಮಾಧ್ಯಮ ಯಾಕೆ ಬೇಡವೇ ಬೇಡ ಎಂಬ ನೆಲೆಯಲ್ಲಿ ಚರ್ಚೆಗಳು ನಡೆದರೆ, ಆಗ ಚರ್ಚೆಯಿಂದ ಉಪಯೋಗವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.