ಎಪ್ಪತ್ತನಾಲ್ಕು ವರ್ಷಗಳ ಕೆಳಗೆ, 1948ರ ಜನವರಿ 30ರಂದು ಗಾಂಧೀಜಿ ನಿರ್ಗಮಿಸಿದ ದಿನದ ಅವರ ಕೊನೆಯ ಬೆಳಗಿನ ಪ್ರಾರ್ಥನೆ ನಿಮಗೆ ನೆನಪಿರಬಹುದು: ಅವತ್ತು ಬೆಳಗಿನ ಜಾವ ಎಂದಿನಂತೆ ಆಶ್ರಮದ ಸಂಗಾತಿಗಳ ಜೊತೆ ಗಾಂಧೀಜಿ ತಮ್ಮ ಪ್ರಿಯ ಪ್ರಾರ್ಥನೆಯೊಂದನ್ನು ಸಲ್ಲಿಸಿದರು: ‘ದಯಾಳುವಾದ, ಪ್ರೇಮಮಯಿಯಾದ ದೇವರ ದೇವನೆ, ನನ್ನ ಕೈ ಕಾಲು ಮೈ ಮಾತು ಕಣ್ಣು ಕಿವಿಗಳು ತಿಳಿದೋ ತಿಳಿಯದೆಯೋ ಮಾಡಿರುವ ನನ್ನೆಲ್ಲ ಪಾಪಗಳನ್ನು ಕ್ಷಮಿಸು. ನಾನು ಸಾಮ್ರಾಜ್ಯವನ್ನಾಗಲೀ ಸ್ವರ್ಗವನ್ನಾಗಲೀ ಮೋಕ್ಷವನ್ನಾಗಲೀ ಬೇಡುವುದಿಲ್ಲ; ನರಳುತ್ತಿರುವವರ ಯಾತನೆಗಳನ್ನು ಕೊನೆಗಾಣಿಸು ಎಂದಷ್ಟೇ ಬೇಡುವೆನು’.
ಆ ನಂತರ ಬಿಡುವಿಲ್ಲದ ಆ ದಿನದ ಸಂಜೆ ಹತ್ತು ನಿಮಿಷ ತಡವಾಗಿ ಪ್ರಾರ್ಥನಾ ಸಭೆಗೆ ಹೊರಟ ಗಾಂಧೀಜಿ ಅವತ್ತಿನ ಪ್ರಾರ್ಥನೆ ಸಲ್ಲಿಸುವ ಮುನ್ನವೇ ಮತಾಂಧ ದುರುಳನಿಗೆ ಬಲಿಯಾದರು. ಬದುಕಿನುದ್ದಕ್ಕೂ ಹಲವು ಧರ್ಮಗಳ ಪ್ರಾರ್ಥನೆಗಳ ಮೂಲಕ ಒಳಶಕ್ತಿ ಪಡೆದ ಗಾಂಧೀಜಿ, ಜನಸಮುದಾಯವನ್ನು ಅಂಥ ಪ್ರಾರ್ಥನೆಗಳ ಮೂಲಕವೂ ಒಗ್ಗೂಡಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಕರೆದೊಯ್ದಿದ್ದರು. ಆದರೆ ಗಾಂಧೀಜಿಯ ಕೊನೆಯ ಪ್ರಾರ್ಥನೆಗೆ ಅವಕಾಶ ಸಿಗಲಿಲ್ಲ.
ಗಾಂಧೀಜಿ ಜೀವನದ ಭಾಗವೇ ಆಗಿಬಿಟ್ಟಿದ್ದ ಪ್ರಾರ್ಥನೆಗಳನ್ನು ಕುರಿತು ಬರೆಯುತ್ತಿರುವಾಗ ಕಳೆದ ಹಲವು ದಶಕಗಳಿಂದ ಗಣರಾಜ್ಯೋತ್ಸವ ಪೆರೇಡಿನಲ್ಲಿ ನುಡಿಸಲಾಗುತ್ತಿದ್ದ ಗಾಂಧಿಯವರ ಮತ್ತೊಂದು ಪ್ರಿಯ ಪ್ರಾರ್ಥನೆ ‘Abide With Me’ ಸುತ್ತ ಈಚೆಗೆ ಎದ್ದಿರುವ ತರಲೆ ನೆನಪಾಗುತ್ತದೆ. ಎಲ್ಲ ಜಾತಿ, ಧರ್ಮಗಳ ಜನರನ್ನು ಒಗ್ಗೂಡಿಸಿದ ಗಾಂಧೀಜಿಯನ್ನು ಅನುಮಾನ ಗಣ್ಣಲ್ಲಿ ನೋಡುವ, ಅವಮಾನಿಸುವ ಕುಬ್ಜರು ಕಳೆದ ಗಣರಾಜ್ಯೋತ್ಸವದಲ್ಲೇ ಈ ಪ್ರಾರ್ಥನೆಯ ಕತೆ ಮುಗಿಸಲು ಹೊರಟಿದ್ದರು. ಈ ಪ್ರಯತ್ನವನ್ನು ದೇಶದ ಪ್ರಜ್ಞಾವಂತರು ವಿರೋಧಿಸಿದ ಮೇಲೆ ಈ ಪ್ರಾರ್ಥನೆ ಹಾಗೇ ಉಳಿಯಿತು. ಹಟಕ್ಕೆ ಬಿದ್ದ ಸಂಕುಚಿತ ಮನಸ್ಸುಗಳಿಂದಾಗಿ ಈ ಸಲ ಮತ್ತೆ ಆ ಪ್ರಾರ್ಥನೆಯನ್ನು ತೆಗೆಯಲಾಗಿದೆ. ಒಂದು ಕವಿತೆಯನ್ನು ಸರಿಯಾಗಿ ಅರಿಯಲಾರದ, ಕವಿತೆಯ ವ್ಯಾಪಕಾರ್ಥವನ್ನು ತಿಳಿಯಲಾರದ ಜಡಮತಿಗಳಿಗೆ ಯಾವ ಸಾಹಿತ್ಯವೂ ಅರ್ಥವಾಗುವುದಿಲ್ಲ ಎಂಬುದು ಮತ್ತೆ ಸಾಬೀತಾಗಿದೆ.
ಗಾಂಧೀಜಿ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪೂರ್ವ, ಪಶ್ಚಿಮಗಳ ಪ್ರಾರ್ಥನೆಗಳ ಮಹತ್ವ ಇಂಥವರಿಗೆ ಗೊತ್ತಿರ
ಲಿಕ್ಕಿಲ್ಲ. ಬಾಲಕ ಮೋಹನದಾಸನನ್ನು ಗುಜರಾತಿ ಕವಿ ಶಾಮಲ ಭಟ್ಟರ ‘ಒಂದು ಬೊಗಸೆ ನೀರು ಕೊಟ್ಟವರಿಗೆ ಒಂದು ಒಳ್ಳೆಯ ಊಟವನ್ನೇ ಕೊಡು’ ಎಂದು ಶುರುವಾಗುವ ಪ್ರಾರ್ಥನೆ ಆಳವಾಗಿ ತಟ್ಟಿತು. ಮುಂದೆ ಗಾಂಧೀಜಿ ಸಕಲ ಧರ್ಮಗಳ ಸಾರವನ್ನು ಅರಿತು ಬೆಸೆದರು. ಅವರು ಭಗವದ್ಗೀತೆಯನ್ನು, ಬುದ್ಧ, ಜೀಸಸ್, ಪ್ರವಾದಿ ಮಹಮ್ಮದರ ಚಿಂತನೆಗಳನ್ನು ಅರಿತದ್ದು ಇಂಗ್ಲೆಂಡಿನಲ್ಲಿ ಎಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ.
ಬದುಕಿನುದ್ದಕ್ಕೂ ‘ಲೀಡ್ ಕೈಂಡ್ಲಿ ಲೈಟ್’, ‘ಅಬೈಡ್ ವಿತ್ ಮಿ’ ಥರದ ಪ್ರಾರ್ಥನಾಗೀತೆಗಳು ಅವರನ್ನು ಆವರಿಸಿದ್ದವು. ‘ಅಬೈಡ್ ವಿತ್ ಮಿ’ ಪ್ರಾರ್ಥನೆಯ ನನ್ನ ಸರಳಾನುವಾದ ಹೀಗಿದೆ:
ನನ್ನೊಡನಿರು ನೀ, ಶರವೇಗದಿ ಇರುಳಿಳಿಯುತಿದೆ
ಕಾರಿರುಳು ಕವಿಯುತಿದೆ, ನನ್ನೊಡನಿರು ದೇವನೇ
ಕಾಯುವವರು ಕಾಣೆಯಾದರು,
ಸುಖಸಂಪದ ಹಾರಿ ಹೋದವು
ದೀನ ಬಂಧುವೆ, ಓ ನನ್ನೊಡನಿರು ನೀ
ಬದುಕಿನ ಕಿರುದಿನ ಅಳಿವ ಗಳಿಗೆ
ಧಾವಿಸಿ ಬರುತಲಿದೆ
ಲೋಕದ ಸುಖ ಮಂಕಾಗುತಿದೆ,
ಲೋಕದ ವೈಭವ ಅಳಿಯುತಿದೆ
ಸುತ್ತಮುತ್ತ ಇರುವುದೆಲ್ಲ ಬದಲಾಗಿ ಕೊಳೆಯುತಿದೆ
ಓ, ನೀ ಮಾತ್ರ ಹಾಗೇ ಉಳಿಯುವೆ, ನನ್ನೊಡನಿರು ನೀ
ಹರಸಲು ನೀ ಬಳಿಯಿರಲು ವೈರಿ ಭಯ ನನಗಿಲ್ಲ
ಕೇಡುಗಳಿಗೆ ಬಲವಿಲ್ಲ, ಕಣ್ಣೀರಲಿ ಕಹಿಯಿಲ್ಲ
ಸಾವಿನ ಆ ಕುಟುಕು ಇನ್ನೆಲ್ಲಿದೆ?
ಗೋರಿಯೇ, ನಿನ್ನ ಗೆಲುವು ಇನ್ನೆಲ್ಲಿದೆ?
ಆದರೂ ಗೆಲ್ಲುವೆನು ನೀ ನನ್ನೊಡನಿರಲು ದೇವನೆ
ಎವೆ ಮುಚ್ಚುವ ನನ್ನ ಕಣ್ಣೆದುರು
ನಿನ್ನ ಶಿಲುಬೆಯನು ತೋರು
ಕವಿದ ಮಂಕನು ಸೀಳಿ ಹೊಳೆಯುತಿರು,
ಆಗಸದ ಹಾದಿಯ ತೋರು
ಸ್ವರ್ಗದ ಬೆಳಗು ಮೂಡುವುದು,
ಭೂಮಿಯ ಹುಸಿ ನೆರಳೋಡುವುದು
ಸಾವಿನಲಿ ಬದುಕಿನಲಿ, ಓ ದೇವನೆ, ನನ್ನೊಡನಿರು ನೀ
ನನ್ನೊಡನಿರು ನೀ, ನನ್ನೊಡನಿರು ನೀ
ಜಗತ್ತಿನಾದ್ಯಂತ ಭಾಷೆ, ಧರ್ಮ, ನಾಡುಗಳ ಗಡಿಗೆರೆ ಮೀರಿ ಜನಪ್ರಿಯವಾಗಿರುವ ಈ ಪ್ರಾರ್ಥನೆಯಲ್ಲಿ ಶಿಲುಬೆ ಎಂಬ ಸಂಕೇತದ ವಾಚ್ಯಾರ್ಥವೊಂದು ಮತೀಯವಾದಿ ಸಂಶೋಧಕರ ಕಣ್ಣು ಚುಚ್ಚಿರಬಹುದು, ಅಷ್ಟೆ! ಆದರೆ ಮುಕ್ತವಾಗಿ ಈ ಪದ್ಯವನ್ನು ಓದುವ ಜಾಣರಿಗೆ ಇಡೀ ಕವಿತೆ ದೇವರನ್ನಷ್ಟೇ ಅಲ್ಲ, ಸಂಗಾತಿ, ಸಖಿ, ಸಖ… ಹೀಗೆ ಯಾರನ್ನಾದರೂ ‘ನನ್ನೊಡನಿರು ನೀ’ ಎಂದು ಪ್ರೀತಿಯಿಂದ ಕೇಳಿಕೊಳ್ಳುವ ವಿಶಾಲಾರ್ಥದ ಪದ್ಯವೆಂಬುದು ಹೊಳೆಯುತ್ತದೆ.
ಗಾಂಧೀಜಿಗೆ ಪ್ರಿಯವಾಗಿದ್ದ ‘ಲೀಡ್ ಕೈಂಡ್ಲಿ ಲೈಟ್’ ಎಂಬ ಮತ್ತೊಂದು ಇಂಗ್ಲಿಷ್ ಕವಿತೆಯನ್ನು ಸುಮಾರು ನೂರು ವರ್ಷಗಳ ಕೆಳಗೆ ಬಿಎಂಶ್ರೀ ‘ಕರುಣಾಳು ಬಾ ಬೆಳಕೆ’ ಎಂದು ಕನ್ನಡಿಸಿದರು. ಇದು ಅಪ್ಪಟ ಕನ್ನಡ ಪ್ರಾರ್ಥನೆಯಾಗಿ ಕನ್ನಡಿಗರಿಗೆಲ್ಲ ಪರಿಚಿತವಾಗಿದೆ. ಈ ಪ್ರಾರ್ಥನಾಪದ್ಯ ಹುಟ್ಟಿದ ಗಳಿಗೆಯೂ ಕುತೂಹಲಕರವಾಗಿದೆ. ಪಾದ್ರಿ ಜಾನ್ ಹೆನ್ರಿ ನ್ಯೂಮನ್ ತನ್ನ ಕಣ್ಣೆದುರೇ ಜನ ಸಂಕಷ್ಟ, ಸಾಂಕ್ರಾಮಿಕಗಳಿಂದ ನೊಣಗಳಂತೆ ಸಾಯುತ್ತಿದ್ದಾಗ ದೇವರು, ಧರ್ಮಗಳ ಬಗ್ಗೆ ಸಂದೇಹ
ಕ್ಕೊಳಗಾದ. ಈ ನಡುವೆ ಅವನು ಪಯಣಿಸುತ್ತಿದ್ದ ಹಡಗು ಬಿರುಗಾಳಿಗೆ ಸಿಕ್ಕು ತತ್ತರಿಸತೊಡಗಿತು. ಪೆನ್ಸಿಲ್ ಕೈಗೆತ್ತಿಕೊಂಡ ನ್ಯೂಮನ್ನನ ಎದುರಿಗಿದ್ದ ಹಾಳೆಯ ಮೇಲೆ ‘ಲೀಡ್ ಕೈಂಡ್ಲಿ ಲೈಟ್’ ಕವಿತೆ ಮೂಡತೊಡಗಿತು. ಹಡಗು ಸಾವರಿಸಿಕೊಂಡು ಹೊರಟಿದ್ದು ಕೂಡ ಗೊತ್ತಾಗದಷ್ಟು ಗಾಢವಾಗಿ ಕವಿ ಕಾವ್ಯ ರಚನೆಯಲ್ಲಿ ಮುಳುಗಿಬಿಟ್ಟಿದ್ದ!
‘ಕರುಣಾಳು ಬಾ ಬೆಳಕೆ’ ಎಂದು ಶುರುವಾಗುವ ‘ಪ್ರಾರ್ಥನೆ’ ಕವಿತೆಯನ್ನು ಓದಲು ಈ ಹಿನ್ನೆಲೆಯೇನೂ ಬೇಕಾಗಿಲ್ಲ. ಆದರೆ ಈ ಹಿನ್ನೆಲೆಯಲ್ಲಿ ಹುಟ್ಟಿದ ಪದ್ಯ ಜಗತ್ತಿನ ಪ್ರಾರ್ಥನೆಯಾಯಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರನ್ನು ಗುರಿಯತ್ತ ಕರೆದೊಯ್ಯಲು ಗಾಂಧೀಜಿಯೊಳಗೆ ಚೈತನ್ಯ ತುಂಬಿದ ಪ್ರಾರ್ಥನೆಯಾಯಿತು. ಭಾರತದುದ್ದಕ್ಕೂ ಸಾತ್ವಿಕ ಭಾವನೆ ಮೂಡಿಸಿದ ಸುಂದರ ಹಾಡಾಯಿತು. ಬಿಎಂಶ್ರೀ ಪ್ರತಿಭೆಯಲ್ಲಿ ಮರುಹುಟ್ಟು ಪಡೆದ ಈ ಅಚ್ಚಗನ್ನಡ ಪ್ರಾರ್ಥನೆಯ ಸರಳ ಛಂದದ ಓಟ ಆ ಕಾಲದ ಕನ್ನಡ ಕವಿಗಳಿಗೂ ನಂತರದ ಗೀತ ರಚನೆಕಾರರಿಗೂ ಭಾವಗೀತೆಯ ಮುಖ್ಯ ಮಾದರಿಯಾಯಿತು; ಮುಂದೆ ಸಾವಿರಾರು ಕನ್ನಡ ಹಾಡುಗಳನ್ನು ಬರೆಸಿತು. ಕೋಟ್ಯಂತರ ಹೃದಯಗಳನ್ನು ಕರಗಿಸಿತು!
ಮಿಲನ್ ಕುಂದೇರ ತನ್ನ ‘ದ ಅನ್‌ಬೇರಬಲ್ ಲೈಟ್‌ನೆಸ್ ಆಫ್ ಬೀಇಂಗ್’ ಕಾದಂಬರಿಯಲ್ಲಿ ‘ರೂಪಕಗಳ ಜೊತೆ ಹುಡುಗಾಟವಾಡಬಾರದು’ ಎನ್ನುತ್ತಾನೆ. ಅದೇ ಜಾಡು ಹಿಡಿದು, ಸಾತ್ವಿಕವಾದ ಪ್ರಾರ್ಥನೆಗಳ ಜೊತೆ ಹುಡುಗಾಟವಾಡಬಾರದು ಎಂದು ಕೂಡ ಹೇಳಬಹುದು. ಯಾಕೆಂದರೆ ‘ಬೆಳಗಾಗ ನಾನೆದ್ದು ಯಾರ‍್ಯಾರ ನೆನೆಯಲಿ’ ಜನಪದ ಪ್ರಾರ್ಥನೆ ಅಥವಾ ಉಪನಿಷತ್ತಿನ ಪ್ರಾರ್ಥನೆಗಳೂ ಸೇರಿದಂತೆ ಲೋಕದ ಪ್ರಾರ್ಥನೆಗಳು ಜಗದ ಹೆಣ್ಣು ಗಂಡುಗಳ ವಿಶಾಲ ನೋಟದಿಂದ ಹುಟ್ಟಿದಂಥವು. ಅವುಗಳಲ್ಲಿ ಕಾಲದ, ಸ್ಥಳದ ಪ್ರತಿಮೆಗಳಿದ್ದರೂ ಅವು ಕಾಲದ ಹಂಗನ್ನು ಮೀರಿದಂಥವು. ದೈವೀ ಲೋಕದ, ಅಧ್ಯಾತ್ಮದ ಹಂಗನ್ನೂ ಮೀರಿದಂಥವು.
ಕುವೆಂಪು ಅವರ ‘ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು ಬಿಚ್ಟಿಡುವೆ ಓ ಗುರುವೆ ಅಂತರಾತ್ಮ’ ಎಂಬ ಗೀತವನ್ನೇ ನೋಡಿ: ಅದು ಗುರುವಿಗೆ, ಒಳ ಮನಸ್ಸಿಗೆ, ನಮ್ಮೊಳಗೇ ಆತ್ಮೀಯವಾಗಿ ಮಾಡಿಕೊಂಡ ನಿವೇದನೆಯಂತಿದೆ. 1956ರ ಡಿಸೆಂಬರ್ 6ರ ಕೊನೆಯ ರಾತ್ರಿ ಅಂಬೇಡ್ಕರ್ ‘ಚಲ್ ಕಬೀರ್ ತೇರಾ ಭವಸಾಗರ್ ಡೇರಾ’ ಎಂಬ ಕಬೀರರ ಹಾಡನ್ನು ಗುನುಗುತ್ತಿದ್ದರು. ಮಾನವನ ಆಳದಿಂದ, ನಿಜಮುಗ್ಧ ಸ್ಥಿತಿಯಿಂದ ಚಿಮ್ಮುವ ನಿಜವಾದ ಪ್ರಾರ್ಥನೆಗಳಿಗೆ ಜಾತಿ, ಧರ್ಮ, ನಾಡುಗಳ ಹಂಗಿರುವುದಿಲ್ಲ. ಅಂಥ ಮುಗ್ಧತೆ ಕಳಕೊಂಡ ಒಲ್ಲದ ಗಂಡಂದಿರು ಪ್ರಾರ್ಥನೆಗಳಲ್ಲೂ ಕಲ್ಲು ಹುಡುಕುತ್ತಿರುತ್ತಾರೆ! ನಿಜವಾದ ಪ್ರಾರ್ಥನೆ ಸಲ್ಲಿಸಲಾಗದೆ ಬರಿದೆ ಚೀರುವ ಗಂಟಲುಗಳನ್ನು ಹೃದಯವಂತರು ಎಲ್ಲ ಕಾಲಕ್ಕೂ ತಿರಸ್ಕರಿಸುತ್ತಿರಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.