ಹನ್ನೆರಡು ವರ್ಷದ ಜಮ್ಲೋ, ತೆಲಂಗಾಣದಿಂದ ಛತ್ತೀಸಗಡದ ತನ್ನ ಊರಿಗೆ ಬೇಸಿಗೆಯ ಸುಡುಬಿಸಿಲಿನಲ್ಲಿ ನಡೆದುಕೊಂಡೇ ಹೋಗುತ್ತಿರಬೇಕಾದರೆ ಮಾರ್ಗಮಧ್ಯೆ ತೀರಿಕೊಂಡಿದ್ದಾಳೆ. ತಾವು ದುಡಿಯುತ್ತಿದ್ದ ನಗರಗಳನ್ನು ಅನಿವಾರ್ಯವಾಗಿ ತೊರೆದು, ತಾವು ನಂಬಿರುವಂತಹ ತಮ್ಮ ಏಕೈಕ ನೆಲೆಯತ್ತ ಹೆಜ್ಜೆ ಹಾಕಿದ, ಈಗಲೂ ಹಾಕುತ್ತಿರುವ ಲಕ್ಷಾಂತರ ಜನರ ಪೈಕಿ ಈ ಬಾಲಕಿಯೂ ಒಬ್ಬಳು. ಮುರಿದುಹೋದ ಜೀವನಾಧಾರದ ಕೊಂಡಿಯನ್ನು ಲಕ್ಷಾಂತರ ಮಂದಿ ತಾವಿರುವಲ್ಲೇ ಇನ್ನೊಮ್ಮೆ ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇಂದು ಹಸಿವಿನಿಂದ ಬಳಲುತ್ತಾ, ನಾಳೆಯ ಬಗ್ಗೆ ಭಯಪಡುತ್ತಾ, ಕೊರೊನಾ ಸೋಂಕಿಗೆ ತುತ್ತಾಗುವ ಆತಂಕದಲ್ಲಿರುವ ಇವರನ್ನು ಬದುಕಿನ ಅನಿಶ್ಚಿತತೆ ಸಂಪೂರ್ಣವಾಗಿ ಆವರಿಸಿದೆ. ಇದು ಸದ್ಯದ ನಮ್ಮ ಭಾರತದಪರಿಸ್ಥಿತಿಯಾಗಿದೆ.
ಈಗಲೂ ಸಂಜೆಯಾದರೆ ಸಾಕು ವೈನ್ ಮತ್ತು ಚೀಸ್‍ಗಳನ್ನು ಮೋಜಿನಿಂದ ಸೇವಿಸುತ್ತಾ ಸ್ನೇಹಿತರೊಂದಿಗೆ ಝೂಮ್ ಕರೆಯಲ್ಲಿ ಮುಳುಗಿರುವ ಕೆಲವರ ಬಗ್ಗೆ ಹೊಟ್ಟೆಕಿಚ್ಚುಪಡುವುದೇಕೆ? ಜಮ್ಲೋ ಬಗ್ಗೆ ತೋರಿಕೆಯ ಸಹಾನುಭೂತಿಯೂ ಇಲ್ಲದವರನ್ನು, ತಮ್ಮ ಬಟ್ಟೆಗಳನ್ನು ಇಸ್ತ್ರಿ ಮಾಡಿಕೊಡುತ್ತಿದ್ದ ಮಹಿಳೆಯು ಆಹಾರಕ್ಕಾಗಿ ಎಲ್ಲೆಂದರಲ್ಲಿ ಅಲೆದಾಡುತ್ತಿರುವಾಗ, ಸಹಾಯದ ಒಂದು ಬೆರಳನ್ನೂ ಚಾಚದವರನ್ನು ನಾವು ಕಡೆಗಣಿಸುವುದೇ ಮೇಲು.
ಬಹಳ ಜನ ತಿಳಿವಳಿಕೆಯುಳ್ಳವರಾಗಿದ್ದರೂ ಸೋಂಕು ದೇಶವ್ಯಾಪಿ ಸೃಷ್ಟಿಸಿರುವ ವಿನಾಶದ ತೀವ್ರತೆಯನ್ನು ಅರಿಯದವರಾಗಿದ್ದಾರೆ. ಈ ವರ್ಗಕ್ಕೆ ಸೇರಿದವರಲ್ಲಿ ಕೆಲವರು ಕಳೆದ ಕೆಲವು ವಾರಗಳಲ್ಲಿ ನನ್ನನ್ನು, ‘ಹಾಗಿದ್ದರೆ ಮಕ್ಕಳ ಶಿಕ್ಷಣಕ್ಕೆ ಈಗ ಏನು ಮಾಡಬೇಕು?’ ಎಂದು ಕೇಳಿದ್ದಾರೆ. ನನ್ನ ಪ್ರತಿಕ್ರಿಯೆ ಅವರನ್ನು ಚಕಿತಗೊಳಿಸಿದೆ- ಶಿಕ್ಷಣದ ಬಗ್ಗೆ ಈಗ ಏನೂ ಮಾಡುವುದು ಬೇಡ. ಮಕ್ಕಳಿಗೆ ಕೆಲವು ತಿಂಗಳು ಏನನ್ನೂ ಕಲಿಸದಿದ್ದರೂ ಯಾವ ಗಮನಾರ್ಹ ನಷ್ಟವೂ ಆಗುವುದಿಲ್ಲ.
ಮೊದಲು ಜನರಿಗೆ ಆಹಾರ ಸಿಗುವುದನ್ನು, ಅವರು ಅವರ ಮನೆಗಳಿಗೆ ತಲುಪುವುದನ್ನು ಮತ್ತು ಕಳೆದ ಕೆಲವು ವಾರಗಳಲ್ಲಿ ನಡೆದ ಘಟನೆಗಳು ಪುನರಾವರ್ತನೆಯಾಗದೇ ಇರುವುದನ್ನು ಖಚಿತಪಡಿಸಿಕೊಳ್ಳೋಣ. ಈ ಮೂಲಭೂತ ಜೀವನಾವಶ್ಯಕಗಳ ಮೇಲೆ ನಮಗೆ ಹಿಡಿತ ಸಿಗುವವರೆಗೆ ಮಕ್ಕಳ ಶಿಕ್ಷಣದ ಬಗ್ಗೆ ಚಿಂತಿಸುವುದರಲ್ಲಿ ಅರ್ಥವಿಲ್ಲ.
ಶಾಲೆ ಮುಚ್ಚಿರುವ ಈ ಸಂದರ್ಭದಲ್ಲಿ, ‘ಆನ್‍ಲೈನ್’ ಶಿಕ್ಷಣದ ಆಲೋಚನೆಯೂ ಗಂಡಾಂತರಕಾರಿಯಾಗಿದೆ. ಮೊದಲನೆಯದಾಗಿ, ಆನ್‍ಲೈನ್ ಕಲಿಕೆಯು ಮೂಲಭೂತ ನೆಲೆಯಲ್ಲಿ ಪರಿಣಾಮಕಾರಿಯಲ್ಲದ್ದು. ಶಿಕ್ಷಣ ಎಂಬುದು ಮಗು ಮತ್ತು ಶಿಕ್ಷಕ ಅಥವಾ ಶಿಕ್ಷಕಿಯ ಮಧ್ಯೆ ಗಾಢವಾದ ಸಾಮಾಜಿಕ ಅನುಸಂಧಾನವನ್ನು ಅಪೇಕ್ಷಿಸುತ್ತದೆ. ಮಗುವಿನ ದೈಹಿಕ ಉಪಸ್ಥಿತಿ, ಗಮನ, ಆಲೋಚನೆ ಮತ್ತು ಭಾವನೆಗಳನ್ನು ತಕ್ಷಣದ ಕಲಿಕಾ ಗುರಿಗಳೆಡೆಗೆ ಜಾಗರೂಕತೆಯಿಂದ ಹಲವು ಹಂತಗಳಲ್ಲಿ ಕೊಂಡೊಯ್ಯಬೇಕಾಗುತ್ತದೆ. ಈ ಗುರಿಗಳ ಹಲವು ಎಳೆಗಳನ್ನು ಕ್ರಮಬದ್ಧವಾಗಿ ಹೊಸೆದು, ಸಂಕೀರ್ಣವಾದ ಶೈಕ್ಷಣಿಕ ವಿನ್ಯಾಸವನ್ನು ಅರ್ಥಬದ್ಧವಾಗಿ ಸಂರಚಿಸುವ ಮೂಲಕ ಮಗುವಿನ ಶಿಕ್ಷಣವನ್ನು ಸಾಕಾರಗೊಳಿಸಬೇಕು. ಆನ್‍ಲೈನ್ ಶಿಕ್ಷಣದಲ್ಲಿ ಇದಾವುದೂ ಗುಲಗಂಜಿಯಷ್ಟೂ ಸಾಧ್ಯವಾಗದು.
ಶಿಕ್ಷಣವೆಂಬುದು ಸಾಮಾಜಿಕ ಮತ್ತು ಮಾನವ ಪ್ರಣೀತ ಪ್ರಕ್ರಿಯೆ; ಇಂತಹ ಸಂಕೀರ್ಣತೆಗಳಿಗೆ ತಂತ್ರಜ್ಞಾನ ಎಂದಿಗೂ ಪರಿಹಾರ ಒದಗಿಸುವುದಿಲ್ಲ. ಎಲ್ಲ ಸಿದ್ಧಾಂತಗಳೂ ಪ್ರತ್ಯಕ್ಷ ಅನುಭವಗಳೂ ಇದನ್ನೇ ಹೇಳುತ್ತವೆ. ಮಕ್ಕಳು ಅಂತರ್ಜಾಲವನ್ನು ಜಾಲಾಡುವುದು ಅದ್ಭುತವೇ ಹೌದು. ಆದರೆ ಅದು ಶಿಕ್ಷಣವಲ್ಲ. ಬಿರುಸಿನಿಂದ ಬಿಕರಿ ಮಾಡಲಾಗುವ ಜನಪ್ರಿಯವಾದ ಆ್ಯಪ್‍ಗಳು ಪೋಷಕರ ಒತ್ತಾಸೆಯಿಂದ ಮಗುವಿಗೆ ಕಲಿಯುವುದಕ್ಕೆ ಏನನ್ನಾದರೂ ಒದಗಿಸಬಹುದು. ಆದರೆ ಅದೂ ಶಿಕ್ಷಣವಲ್ಲ. ಆನ್‍ಲೈನ್ ಸಂಪನ್ಮೂಲಗಳು ಉಪಯುಕ್ತವಿರುವುದು ಹೌದಾದರೂ ಅವೂ ಶಿಕ್ಷಣವಲ್ಲ. ‘ಶಿಕ್ಷಣ’ ಎಂಬ ಪದದ ಅರ್ಥ ಬರೀ ಕಲಿಯುವುದು ಎಂದಲ್ಲ. ಅಂತಹ ಕಲಿಕೆ ಹಲವು ಬಗೆಯದಾಗಿದ್ದು, ಅವು ಅಪೇಕ್ಷಿತ ಮತ್ತು ಅಪೇಕ್ಷಿತವಲ್ಲದ್ದು ಎರಡೂ ಆಗಿರಬಹುದು. ಶಿಕ್ಷಣ ಎಂದರೆ ಶಾಲಾ ಶಿಕ್ಷಣದೊಳಗೆ ನಿರ್ದಿಷ್ಟವಾದ, ವಯೋಮಾನಕ್ಕೆ ಅನುಸಾರವಾಗಿ ನಿಗದಿಯಾದ ಪಠ್ಯಕ್ರಮದ ಗುರಿಗಳನ್ನು ವ್ಯವಸ್ಥಿತವಾಗಿ ಸಾಧಿಸುವುದಾಗಿದೆ.
ಎರಡನೆಯದಾಗಿ, ಆನ್‍ಲೈನ್ ಶಿಕ್ಷಣದ ಮೇಲೆ ಗಮನ ಕೇಂದ್ರೀಕರಿಸುವುದೆಂದರೆ, ಕೊರತೆಯಿರುವ ಸಂಪನ್ಮೂಲ ಮತ್ತು ಸಾಮರ್ಥ್ಯಗಳನ್ನು ತಳವಿಲ್ಲದ ಪಾತ್ರೆಗೆ ಸುರಿದಂತೆಯೇ ಸರಿ. ಇನ್ನೂ ಕೆಟ್ಟದ್ದೆಂದರೆ, ‘ಏನೋ ಒಂದನ್ನು ಮಾಡುವುದು’, ಜವಾಬ್ದಾರಿ ಸ್ಥಾನದಲ್ಲಿ ಇರುವವರನ್ನು ಸುಳ್ಳು ಸಾಧನೆಯ ಸಂತೃಪ್ತಿಯಲ್ಲಿ ಬಿದ್ದು ನಿದ್ದೆಗೊರಗುವಂತೆ ಮಾಡುತ್ತದೆ.
ಮೂರನೆಯದಾಗಿ, ಸೋಂಕಿನ ಪಿಡುಗು ಮತ್ತು ಲಾಕ್‍ಡೌನ್ ನಮ್ಮ ದೌರ್ಬಲ್ಯಗಳನ್ನು ಹಲವುಪಟ್ಟು ಹಿಗ್ಗಿಸಿ ಕಣ್ಣಿಗೆ ಚುಚ್ಚುವಂತೆ ಮಾಡಿವೆ, ಅಸಮಾನತೆ ಮತ್ತು ಅದರ ಪರಿಣಾಮಗಳನ್ನು ಹರಿತಗೊಳಿಸಿವೆ, ಪಕ್ಷಪಾತದ ಅಂತರವನ್ನು ಹೆಚ್ಚಿಸಿವೆ. ಹೀಗಿರುವಾಗ, ಆನ್‍ಲೈನ್ ಶಿಕ್ಷಣ ಈ ಅಸಮಾನತೆಯ ಕಂದಕದ ಆಳವನ್ನು ಇನ್ನಷ್ಟು ಬೆಳೆಸುವ ಸಾಧನ ಮಾತ್ರವಾದೀತು. ಇದರಿಂದ,
ಬಹುಸಂಖ್ಯಾತರಾಗಿರುವ ಅವಕಾಶ ವಂಚಿತರು ಇನ್ನಷ್ಟು ಹಿಂದೆ ಉಳಿಯುವಂತೆ ಆದೀತು. ತಿನ್ನುವ ಊಟಕ್ಕೇ ಅವರು ಪಾಡು ಪಡುತ್ತಿರುವಾಗ, ಆನ್‍ಲೈನ್ ಶಿಕ್ಷಣಕ್ಕೆ ಬೇಕಾಗುವ ಸಂಪನ್ಮೂಲಗಳನ್ನು ದೊರಕಿಸಿಕೊಳ್ಳುವುದು ಅವರಿಗೆ ಗಗನಕುಸುಮವೇ ಸರಿ. ಈ ಸಮಯದಲ್ಲಿ ಆನ್‍ಲೈನ್ ಶಿಕ್ಷಣದ ಯೋಚನೆಯನ್ನೇ ಮಾಡಬಾರದು.
ಹಾಗಾದರೆ ಶಾಲೆಯ ಶಿಕ್ಷಣದ ಬಗ್ಗೆ ಮಾಡಬೇಕಾದದ್ದೇನು? ‘ಮೂಲ ಅವಶ್ಯಕತೆ’ಗಳ ಪೂರೈಕೆಯನ್ನು ನೋಡಿಕೊಂಡಾದ ಕೂಡಲೇ ಶಾಲೆಗಳನ್ನು ತೆರೆಯಬೇಕು. ಆದರೆ ಇಲ್ಲಿ ಸೋಂಕುರೋಗಶಾಸ್ತ್ರ ತಜ್ಞರು ಕೊಡುವ ಮಾರ್ಗದರ್ಶನ ಮುಖ್ಯವಾಗುತ್ತದೆ. ಹಾಗಿದ್ದೂ, ನಾವಿಲ್ಲಿ ಶೀಘ್ರ ಕಾರ್ಯೋನ್ಮುಖರಾಗುವುದಕ್ಕೆ ಮೂರು ಕಾರಣಗಳಿವೆ.
ಮೊದಲಿಗೆ, ಬಹಳ ಸಂಖ್ಯೆಯ ಶಾಲೆಗಳು ಸೋಂಕು ಹರಡುವ ಅಪಾಯವನ್ನು ಹೆಚ್ಚಿಸಲಾರವು. ಯಾಕೆಂದರೆ ಆ ಶಾಲೆಗಳ ಸಮುದಾಯಗಳು ಹೊರಗಿನ ಸಂಪರ್ಕಕ್ಕೆ ಬಂದಿರುವುದಿಲ್ಲ ಮತ್ತು ಅಲ್ಲಿ ಮಕ್ಕಳು ನಿರಂತರವಾಗಿ ಸಂಪರ್ಕದಲ್ಲಿ ಇದ್ದೇ ಇರುತ್ತಾರೆ. ವಿವಿಧೆಡೆಗಳಲ್ಲಿರುವ ಜನಸಮುದಾಯಗಳ ಮಕ್ಕಳನ್ನು ಹೊಂದಿರುವ ಶಾಲೆಗಳನ್ನು ತೆರೆಯುವಾಗ ಅಂತರವನ್ನು ಕಾಯ್ದುಕೊಳ್ಳುವ ನಿಯಮಗಳು ಪಾಲನೆಯಾಗಬೇಕು. ಅಲ್ಲಿ ಅರ್ಧಭಾಗ ಮಕ್ಕಳು ಪರ್ಯಾಯ ದಿನಗಳಲ್ಲಿ ಶಾಲೆಗೆ ಬರುವಂತೆ ಮಾಡುವುದೂ ಅಗತ್ಯವಾಗಬಹುದು.
ಎರಡನೆಯದಾಗಿ, ಕೋವಿಡ್-19ರ ವಿರುದ್ಧ ದೇಶ ಸಾರಿರುವ ಸಮರದ ಬಗ್ಗೆ ಜನಸಮುದಾಯದಲ್ಲಿ ತಿಳಿವಳಿಕೆ ಮೂಡಿಸುವುದಕ್ಕೆ ಮತ್ತು ಜವಾಬ್ದಾರರನ್ನಾಗಿಸುವುದಕ್ಕೆ ಶಾಲೆಗಳೇ ಮುಂಚೂಣಿಯ ಕಾರ್ಯಕ್ಷೇತ್ರವಾಗಬಹುದು.
ಮೂರನೆಯದಾಗಿ, ನನ್ನ ಹಿರಿಯ ಸ್ನೇಹಿತ ಮತ್ತು ಕಳೆದ 30 ವರ್ಷಗಳಿಂದ, ಸಂಘರ್ಷಕ್ಕೊಳಗಾದಪ್ರದೇಶಗಳಲ್ಲಿ ಶಾಲೆಗಳನ್ನು ಪುನರಾರಂಭಿಸುವುದಕ್ಕೆ ಕಾರಣರಾದ ಪ್ರೊ. ರಾಮಚಂದ್ರನ್ ಹೇಳುವಂತೆ, ‘ಒಂದು ಸಮುದಾಯದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಗೊಳಿಸುವುದಕ್ಕೆ, ಕಾರ್ಯೋನ್ಮುಖವಾದ ಶಾಲೆಗಳಿಗಿಂತ ಬೇರೆ ಉತ್ತಮವಾದ ದಾರಿಗಳಿಲ್ಲ’. ಮುಂದಿನ ದಿನಗಳಲ್ಲಿ ದೀರ್ಘಕಾಲ ನಡೆಯಬೇಕಿರುವ ಸೋಂಕಿನ ವಿರುದ್ಧದ ಚಳವಳಿಯಲ್ಲಿ, ಸಮುದಾಯಗಳಿಗೆ ಈ ರೀತಿಯ ಬಲ ಬೇಕೇಬೇಕಾಗಿದೆ.
ಈಗ ನಾನು, ನನ್ನ ದುಃಸ್ವಪ್ನದಲ್ಲಿಯೂ ಯೋಚಿಸದ ವಿಷಯದೊಂದಿಗೆ ಲೇಖನವನ್ನು ಮುಕ್ತಾಯಗೊಳಿಸುತ್ತೇನೆ- ಈಗ ನಾವು ಶಿಕ್ಷಣದ ಬಗ್ಗೆ ಚಿಂತೆ ಮಾಡುವುದು ಬೇಡ. ಜಮ್ಲೋ ಜೀವಕ್ಕೆ ಆದ ಹಾನಿಯ ಬಗ್ಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವತ್ತ ನಮ್ಮ ಸಂಪೂರ್ಣ ಗಮನಹರಿಸೋಣ. ನಮ್ಮ ಒಬ್ಬನೇ ಒಬ್ಬ ನಾಗರಿಕನೂ ಅವರ ಮನೆಗೆ ನಡೆದು ಹೋಗುವಂತೆ ಆಗಬಾರದು, ಅವರಾರೂ ಹಸಿದು ಉಳಿಯುವಂತೆಯೂ ಆಗಬಾರದು. ಈ ಬೇಸಿಗೆಯಲ್ಲಿ ನಾವು ಸಾಕಷ್ಟು ಮಟ್ಟಿಗೆ ಭಾರತದ ಆತ್ಮವನ್ನು ಸುಟ್ಟಿದ್ದೇವೆ.
ಲೇಖಕ: ಸಿಇಒ, ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.