ADVERTISEMENT

ಟೀಕೆಯ ಬೆಂಕಿ ನಂದಿಸಲು ಟ್ರಂಪ್ ಹೆಜ್ಜೆ

ಅಕ್ರಮ ವಲಸೆ ವಿಚಾರದಲ್ಲಿ ನಿಲುವು ಬದಲಿಸಿದ ನಿರ್ಧಾರ ಕುರಿತು

ಚಾರ್ಲಿಸ್ಯಾವೇಜ್
Published 22 ಜೂನ್ 2018, 20:08 IST
Last Updated 22 ಜೂನ್ 2018, 20:08 IST
ವಲಸಿಗ ಪೋಷಕರಿಂದ ಮಕ್ಕಳನ್ನು ಪ್ರತ್ಯೇಕಿಸುವ ಟ್ರಂಪ್‌ ಆಡಳಿತದ ನೀತಿಯನ್ನು ಖಂಡಿಸಿ ನ್ಯೂಯಾರ್ಕ್‌ನಲ್ಲಿ ನಡೆದ ಪ್ರದರ್ಶನ ದೃಶ್ಯ
ವಲಸಿಗ ಪೋಷಕರಿಂದ ಮಕ್ಕಳನ್ನು ಪ್ರತ್ಯೇಕಿಸುವ ಟ್ರಂಪ್‌ ಆಡಳಿತದ ನೀತಿಯನ್ನು ಖಂಡಿಸಿ ನ್ಯೂಯಾರ್ಕ್‌ನಲ್ಲಿ ನಡೆದ ಪ್ರದರ್ಶನ ದೃಶ್ಯ   

ಮೆಕ್ಸಿಕೊಗೆ ಹೊಂದಿಕೊಂಡಿರುವ ಗಡಿ ಮೂಲಕ ಅಕ್ರಮವಾಗಿ ವಲಸೆ ಬಂದಿರುವ ಪೋಷಕರಿಂದ ಅವರ ಮಕ್ಕಳನ್ನು ಬೇರ್ಪಡಿಸುವ ಆದೇಶವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ವಾಪಸ್ ಪಡೆದರು. ಈ ಕುರಿತ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕುವ ಮೂಲಕ ಟೀಕೆಯ ಬೆಂಕಿಯನ್ನು ನಂದಿಸಲು ಅವರು ಯತ್ನಿಸಿದರು.

* ಈ ಸಮಸ್ಯೆ ಸೃಷ್ಟಿಯಾದದ್ದು ಯಾಕೆ?

ಹಿಂದೆ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸುವಾಗ ಗಡಿಯಲ್ಲಿ ಹಲವರು ಸಿಕ್ಕಿಬಿದ್ದಿದ್ದರು. ಅವರಲ್ಲಿ ಅನೇಕರು ಆಶ್ರಯ ಬಯಸಿ ಬಂದಿದ್ದವರು. ವಿಚಾರಣೆ ಪ್ರಕ್ರಿಯೆ ಮುಗಿದ ನಂತರ ಅವರಿಗೆ ಅಮೆರಿಕದಲ್ಲಿ ನೆಲೆಸುವ ಅವಕಾಶ ಸಿಕ್ಕಿತ್ತು. ಆದರೆ, ಅಕ್ರಮವಾಗಿ ಗಡಿಯೊಳಗೆ ನುಸುಳುವ ಯಾರನ್ನೇ ಆಗಲಿ ಅಪರಾಧಿ ಎಂದು ಪರಿಗಣಿಸಿ ಗಂಭೀರ ಕ್ರಮ ತೆಗೆದುಕೊಳ್ಳಲಾಗುವುದು. ನುಸುಳುವಿಕೆಯನ್ನು ಫೆಡರಲ್ ಪ್ರಾಸಿಕ್ಯೂಟರ್‌ಗಳು ಸ್ವಲ್ಪವೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಳೆದ ಏಪ್ರಿಲ್‌ನಲ್ಲಿ ಅಟಾರ್ನಿ ಜನರಲ್ ಜೆಫ್ ಸೆಷನ್ಸ್ ಘೋಷಿಸಿದ್ದರು.

ADVERTISEMENT

ವಿಚಾರಣೆಗಾಗಿ ದೊಡ್ಡವರನ್ನು ಬಂಧನದಲ್ಲಿ ಇರಿಸುವುದು ಕಾನೂನಿನ ದೃಷ್ಟಿಯಿಂದ ಅನಿವಾರ್ಯವಾಗಿತ್ತು. ಆದರೆ, ಟ್ರಂಪ್ ಆಡಳಿತದ ಪ್ರಕಾರ ಅಕ್ರಮವಾಗಿ ಗಡಿ ಪ್ರವೇಶಿಸಿದ ಮಕ್ಕಳನ್ನು 20 ದಿನಗಳಿಗಿಂತ ಹೆಚ್ಚಿನ ಅವಧಿಯವರೆಗೆ ಬಂಧನದಲ್ಲಿ ಇರಿಸುವಂತಿಲ್ಲ.

ಇದರರ್ಥ ದೊಡ್ಡವರನ್ನು ಒಂದೋ ಜೈಲಿಗೆ ಕಳುಹಿಸಲಾಯಿತು. ಇಲ್ಲವೇ ಅನಿರ್ದಿಷ್ಟಾವಧಿ ಬಂಧನದಲ್ಲಿ ಇರಿಸಿಕೊಳ್ಳಲಾಯಿತು. ಅವರಿಗೆ ಆಶ್ರಯ ನೀಡಬೇಕೋ ಅಥವಾ ಅಮೆರಿಕದಿಂದ ಅವರನ್ನು ಕಳುಹಿಸಬೇಕೋ ಎನ್ನುವುದು ವಿಚಾರಣೆಯ ನಂತರ ತೀರ್ಮಾನವಾಗಬೇಕು. ಹೀಗಾಗಿ ಅದುವರೆಗೆ ಮಕ್ಕಳನ್ನು ಅವರ ಜೊತೆ ಇರಿಸುವಂತಿಲ್ಲ. ಇದರಿಂದಾಗಿಯೇ ಹೆತ್ತವರಿಂದ ಮಕ್ಕಳನ್ನು ಬೇರ್ಪಡಿಸುವ ಕ್ರಮಕ್ಕೆ ಟ್ರಂಪ್ ಮುಂದಾದರು. ಮಕ್ಕಳು ತಮ್ಮ ಸಂಬಂಧಿಕರ ಮನೆಯಲ್ಲಿರಬೇಕು ಅಥವಾ ಸರ್ಕಾರದ ಪರವಾನಗಿ ಇರುವ ವಸತಿ ಸೌಕರ್ಯ ಒದಗಿಸಬೇಕು ಎಂದು ತಾಕೀತು ಮಾಡಲಾಯಿತು.

* ಟ್ರಂಪ್ ಆದೇಶವು ಹಳೆಯ ಕ್ರಮದ ಪುನರುತ್ಥಾನವೇ?

ಇಲ್ಲ. ಗಡಿಗೆ ಅಕ್ರಮವಾಗಿ ಪ್ರವೇಶಿಸುವವರ ವಿಷಯದಲ್ಲಿ ಒಂದಿನಿತೂ ರಾಜಿ ಇಲ್ಲ ಎಂಬ ನೀತಿಯನ್ನು ರಕ್ಷಿಸಲು ಕೈಗೊಂಡ ಕ್ರಮ ಅದು.

* ಹೊಸ ಕಾರ್ಯಕಾರಿ ಆದೇಶದಿಂದ ಆಗಲಿರುವ ಬದಲಾವಣೆ ಏನು?

ವಲಸಿಗರ ಕುಟುಂಬಗಳನ್ನು ಒಟ್ಟಾಗಿ ಇರುವಂತೆ ನೋಡಿಕೊಳ್ಳುವುದಾಗಿ ಟ್ರಂಪ್ ಸರ್ಕಾರದ ಈ ಕಾರ್ಯಕಾರಿ ಆದೇಶ ತಿಳಿಸಿದೆ. ಸೇನಾ ನೆಲೆಗಳು ಹಾಗೂ ವಲಸಿಗರನ್ನು ಬಂಧಿಸಲು ನಿಗದಿಪಡಿಸಿರುವ ಕೇಂದ್ರಗಳಲ್ಲಿ ಅದಕ್ಕೆ ಅವಕಾಶ ಕಲ್ಪಿಸಲು ಕೋರ್ಟ್ ಅನುಮತಿ ನೀಡಲಿದೆ ಎಂದು ಸರ್ಕಾರ ನಂಬಿದೆ. ಪೆಂಟಗಾನ್ ಸೇರಿ ಹಲವು ಏಜೆನ್ಸಿಗಳು ವಲಸಿಗರೆಲ್ಲ ಒಟ್ಟಾಗಿ ಇರಬಹುದಾದ ಲಭ್ಯ ಸೌಕರ್ಯಗಳನ್ನು ಗುರುತಿಸಲಿವೆ ಅಥವಾ ಹೋಮ್‌ಲ್ಯಾಂಡ್ ಹಾಗೂ ಭದ್ರತಾ ಇಲಾಖೆಯು ಹೊಸ ವ್ಯವಸ್ಥೆಯನ್ನು ಕಲ್ಪಿಸಲಿದೆ.

* ತಕ್ಷಣವೇ ಇದು ಆದೀತೆ?

ಉತ್ತರ ಸ್ಪಷ್ಟವಿಲ್ಲ. ಶ್ವೇತಭವನದಲ್ಲಿ ಬುಧವಾರ ಮಧ್ಯಾಹ್ನ ಕಲಾಪದಲ್ಲಿ ಕೌನ್ಸೆಲರ್ ಜೀನ್ ಹ್ಯಾಮಿಲ್ಟನ್ ಈ ಕುರಿತು ಪ್ರಶ್ನೆ ಎದುರಿಸಿದರು. ಈಗ ಸಿಕ್ಕಿಬೀಳುವ ಅಕ್ರಮ ವಲಸಿಗರ ಮಕ್ಕಳನ್ನು ಪ್ರತ್ಯೇಕವಾಗಿ ಇರಿಸುವಿರೇ ಎಂದು ಕೇಳಿದಾಗ, ಅವರು ಜಾರಿಕೊಂಡರು. ಹೊಸ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಹೋಮ್‌ಲ್ಯಾಂಡ್ ಹಾಗೂ ಭದ್ರತಾ ಇಲಾಖೆ ಮತ್ತು ಆರೋಗ್ಯ ಹಾಗೂ ಮಾನವ ಸಂಪನ್ಮೂಲ ಇಲಾಖೆಗಳು ಏನು ಮಾಡುತ್ತವೆಯೋ ಎಂದು ತಮಗೆ ಸ್ಪಷ್ಟವಿಲ್ಲ ಎಂದುಬಿಟ್ಟರು. ಸರ್ಕಾರ ಈ ಹಿಂದೆ ಹೇಳಿದ್ದಂತೆ 20 ದಿನಗಳವರೆಗೆ ವಿಚಾರಣಾಧೀನರನ್ನು ಈಗಿನ ನಿಯಮಗಳ ಅನ್ವಯ ಇರಿಸಿಕೊಳ್ಳಬಹುದಿತ್ತು. ಬದಲಾದ ನಿಯಮದ ಅನ್ವಯ ಇಡೀ ಕುಟುಂಬಗಳನ್ನು ಒಂದೆಡೆ ಬಂಧನದಲ್ಲಿ ಇರಿಸಲು ಸ್ಥಳಾವಕಾಶ ಎಷ್ಟಿದೆ, ಏಕಕಾಲದಲ್ಲಿ ಎಷ್ಟು ಕುಟುಂಬಗಳನ್ನು ಇರಿಸಿಕೊಳ್ಳಬಹುದು ಎನ್ನುವುದನ್ನು ಪರಿಶೀಲಿಸಬೇಕಿದೆ. ಹಿಂದೆ ಅಕ್ರಮ ವಲಸಿಗರನ್ನು ಅಮೆರಿಕ ಮಾರ್ಷಲ್ಸ್ ವಶಕ್ಕೆ ತೆಗೆದುಕೊಂಡಾಗ, ಆ ವಲಸಿಗರ ಮಕ್ಕಳು ವಲಸೆ ಹಾಗೂ ಕಸ್ಟಮ್ಸ್ ಇಲಾಖೆಯ (ಐಸಿಇ) ಸುಪರ್ದಿಯಲ್ಲಿ ಮೂರು ದಿನಗಳವರೆಗೆ ಇರುತ್ತಿದ್ದರು. ಆಮೇಲೆ ಅವರನ್ನು ಆರೋಗ್ಯ ಮತ್ತು ಮಾನವ ಸೇವೆ ಇಲಾಖೆಗೆ ಒಪ್ಪಿಸಲಾಗುತ್ತಿತ್ತು. ಹೊಸ ಯೋಜನೆಯಂತೆ, ಇಡೀ ಕುಟುಂಬ ಐಸಿಇನಲ್ಲೇ ಇರಲಿದೆ ಎಂದು ನ್ಯಾಯಿಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 20 ದಿನಗಳಲ್ಲಿ ನ್ಯಾಯಾಂಗ ವ್ಯವಸ್ಥೆ ಅಥವಾ ಕಾಂಗ್ರೆಸ್ ಈ ವಿಷಯದಲ್ಲಿ ಸ್ಪಷ್ಟ ನಿಯಮ ರೂಪಿಸಲಿದೆ ಎಂಬ ವಿಶ್ವಾಸ ಅವರದ್ದು.

‘*ಫ್ಲೋರ್ಸ್ ಪ್ರಕರಣ’ಕ್ಕೂ ಇದಕ್ಕೂ ಏನಾದರೂ ಸಂಬಂಧವಿದೆಯಾ?

ಅಕ್ರಮ ವಲಸಿಗರನ್ನು ಬಂಧನದಲ್ಲಿ ಇರಿಸಿಕೊಂಡಾಗ ಮಕ್ಕಳನ್ನು ನಡೆಸಿಕೊಳ್ಳುವ ರೀತಿ ಸರಿಯಾಗಿಲ್ಲ ಎಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. 1997ರಲ್ಲಿ ಒಪ್ಪಿತ ಶಾಸನವೊಂದು ಅದಕ್ಕೆ ಪರಿಹಾರದ ರೂಪದಲ್ಲಿ ರಚಿತವಾಯಿತು. ಅದನ್ನು ‘ಫ್ಲೋರ್ಸ್ ಪರಿಹಾರ’ ಎನ್ನಲಾಗುತ್ತದೆ. ಅದರ ಅನ್ವಯ ಬಂಧನದಲ್ಲಿರುವ ಮಕ್ಕಳನ್ನು ಸಂಬಂಧಿಕರಿಗೆ ಒಪ್ಪಿಸಬೇಕು. ಯಾವ ಸಂಬಂಧಿಕರೂ ಇಲ್ಲದೇ ಇದ್ದರೆ ಮೂರರಿಂದ ಐದು ದಿನದೊಳಗೆ ಮಕ್ಕಳ ವಸತಿಗೆ ಪೂರಕವಾದ ಸರ್ಕಾರದ ವ್ಯವಸ್ಥೆಯ ವ್ಯಾಪ್ತಿಗೆ ತರಬೇಕು. ಅದೂ ಸಾಧ್ಯವಾಗದೇ ಹೋದಲ್ಲಿ ಹೆಚ್ಚು ಕಟ್ಟಳೆಗಳಿಲ್ಲದ, ಅವರ ವಯೋಮಾನಕ್ಕೆ ಹೊಂದುವಂಥ ಸ್ಥಳಗಳಲ್ಲಿ ಇರಿಸಿಕೊಳ್ಳಬೇಕು. ಒಬಾಮ ನೇತೃತ್ವದ ಸರ್ಕಾರದ ಉತ್ತರಾರ್ಧ ಅವಧಿಯಲ್ಲಿ ವಲಸಿಗರ ಸಂಖ್ಯೆ ಹೆಚ್ಚಾಯಿತು. ಆಗ ಮಹಿಳೆಯರೇ ಮುಂದಾಳುಗಳಾಗಿರುವ ಕುಟುಂಬಗಳು ಬಂಧನಕ್ಕೆ ಒಳಪಟ್ಟರೆ, ಅವರ ಜೊತೆಗೆ ಮಕ್ಕಳನ್ನು ಇರಿಸಿಕೊಳ್ಳುವ ಅವಕಾಶ ನೀಡಲಾಯಿತು. ಇದನ್ನುನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಆಗ ಸೆಂಟ್ರಲ್ ಡಿಸ್ಟ್ರಿಕ್ಟ್ ಆಫ್ ಕ್ಯಾಲಿಫೋರ್ನಿಯಾದ ಯು.ಎಸ್. ಡಿಸ್ಟ್ರಿಕ್ಟ್ ಕೋರ್ಟ್‌ನ ನ್ಯಾಯಮೂರ್ತಿ ಡಾಲಿ ಎಂ. ಗೀ, ‘ಫ್ಲೋರ್ಸ್ ಪರಿಹಾರ’ದ ನಿಯಮಗಳು ತಾಯಿ-ಮಕ್ಕಳಿಗೂ ಅನ್ವಯವಾಗುತ್ತವೆ. ಇಂಥ ಪ್ರಕರಣಗಳಲ್ಲಿ ಮಕ್ಕಳನ್ನು ತಾಯಂದಿರ ಜೊತೆ ಇರಲು ಬಿಡುವುದು ಕಾನೂನಿನ ಉಲ್ಲಂಘನೆ’ ಎಂದು ಒತ್ತಿ ಹೇಳಿದ್ದರು.

* ನ್ಯಾಯಾಲಯದ ಅನುಮತಿ ಇಲ್ಲದೆ ಟ್ರಂಪ್ ಎಷ್ಟೆಲ್ಲ ಮಾಡಬಹುದು?

ಅಕ್ರಮವಾಗಿ ವಲಸೆ ಬಂದಿರುವವರ ಕುಟುಂಬಗಳ ಜೊತೆಯೇ ಮಕ್ಕಳೂ ಒಟ್ಟಾಗಿ 20 ದಿನಗಳಿಗಿಂತ ಹೆಚ್ಚು ಅವಧಿ ಇರಲು ನ್ಯಾಯಾಲಯದ ಅನುಮತಿಯನ್ನು ಟ್ರಂಪ್ ಕಾರ್ಯಕಾರಿ ಆದೇಶ ಬಯಸಿದೆ ಎನ್ನುವುದು ಈಗ ಮುಖ್ಯ. ಹೋಮ್‌ ಸೆಕ್ಯುರಿಟೀಸ್ ಇಲಾಖೆಗೆ ಇಡೀ ಕುಟುಂಬವನ್ನು ಒಟ್ಟಾಗಿ ನೋಡಿಕೊಳ್ಳುವಂತೆ ಒಪ್ಪಂದದಲ್ಲಿ ಮಾರ್ಪಾಟು ತರುವಂತೆ ಸೂಚಿಸಬೇಕು ಎನ್ನುವ ವಿನಂತಿಯೂ ಇದೆ. ಹ್ಯಾಮಿಲ್ಟನ್ ಅವರು ಮಾಧ್ಯಮಗಳಿಗೆ ತಿಳಿಸಿದಂತೆ ಕಾನೂನನ್ನು ಬದಲಿಸಲು ಅಲ್ಲಿನ ಕಾಂಗ್ರೆಸ್ ತ್ವರಿತವಾಗಿಕ್ರಿಯಾಶೀಲವಾಗದೇ ಇದ್ದರೆ, ಕುಟುಂಬಗಳನ್ನು ಒಟ್ಟಾಗಿ ಹೇಗೆ ಇರಿಸಬೇಕು ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕಾಗುತ್ತದೆ.

* ಈಗಾಗಲೇ ಪ್ರತ್ಯೇಕವಾಗಿ ಇರುವ ಮಕ್ಕಳ ಗತಿಯೇನು?

ನಿಯಮದಲ್ಲಿ ರಾಜಿಯೇ ಇಲ್ಲವೆಂದು ಯಾವ ಮಕ್ಕಳನ್ನು ತಂತಮ್ಮ ಕುಟುಂಬಗಳಿಂದ ಈಗಾಗಲೇ ಪ್ರತ್ಯೇಕಿಸಲಾಗಿದೆಯೋ, ಅವರನ್ನು ಮತ್ತೆ ಒಂದಾಗಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಅಲ್ಲಿನ ಸರ್ಕಾರ ಮೊದಲು ತಿಳಿಸಿತ್ತು. ಆರೋಗ್ಯ ಮತ್ತು ಮಾನವ ಸೇವೆ ಇಲಾಖೆಯ ವಕ್ತಾರರು ಅದನ್ನು ಸ್ಪಷ್ಟಪಡಿಸಿದ್ದರು. ಆದರೆ ಬುಧವಾರ ಸಂಜೆ ಹೊತ್ತಿಗೆ ಏಜೆನ್ಸಿಯು ‘ಈಗಾಗಲೇ ಯಾವ ನಿರ್ಧಾರಕ್ಕೂ ಬರಲಾಗದು. ಮುಂದಿನ ಸೂಚನೆಗೆ ಕಾಯಬೇಕು’ ಎಂದಿತು.‘ಮಕ್ಕಳನ್ನು ಮರಳಿ ತಂದೆ–ತಾಯಿಯರ ಬಳಿಗೆ ಸೇರಿಸುವುದೇ ನಮ್ಮ ಗುರಿ’ ಎಂದು ಏಜೆನ್ಸಿಯ ಸಂವಹನ ವಿಭಾಗದ ಹಿರಿಯ ನಿರ್ದೇಶಕರು ಹೇಳಿದ್ದಾರೆ. ಅಧ್ಯಕ್ಷರ ನೀತಿಯಿಂದ ವ್ಯತಿರಿಕ್ತ ಪರಿಣಾಮ ಎದುರಿಸಿರುವ ಮಕ್ಕಳ ಕುರಿತು ಇಲಾಖೆ ಕೆಲಸ ಮಾಡುತ್ತಿದೆ ಎಂದೂ ಅವರು ತಿಳಿಸಿದ್ದಾರೆ. 2,300ಕ್ಕೂ ಹೆಚ್ಚು ಮಕ್ಕಳು ಗಡಿಯಲ್ಲಿ ಪೋಷಕರಿಂದ ಪ್ರತ್ಯೇಕಗೊಂಡಿದ್ದಾರೆ. ಸರ್ಕಾರದ ಪರವಾನಗಿ ಪಡೆದ ತಂಗುದಾಣಗಳಲ್ಲಿ ಅವರಿಗೆ ತಾತ್ಕಾಲಿಕ ನೆಲೆ ಕಲ್ಪಿಸಲಾಗಿದೆ.

ದಿ ನ್ಯೂಯಾರ್ಕ್‌ ಟೈಮ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.