ಯಕ್ಷಗಾನ ಎಂದಾಕ್ಷಣ ಕರ್ನಾಟಕದ ಕರಾವಳಿ; ಮಲೆನಾಡು ಪ್ರದೇಶದಲ್ಲಿ ರಾತ್ರಿ ಬೆಳಗಿನ ವರೆಗೆ ರಂಗಸ್ಥಳದಲ್ಲಿ ರಂಗುರಂಗಿನ ವೇಷ ತೊಟ್ಟುಕೊಂಡು ರೋಮಾಂಚಕ ಚಂಡೆ ಮದ್ದಳೆಯ ದನಿಗೆ ಕುಣಿದು ದಣಿಯುವ ಬಣ್ಣದ ಲೋಕ ಎಲ್ಲರ ಮನಸ್ಸಿನಲ್ಲಿ ಮೂಡುತ್ತದೆ. ಆದರೆ ಯಕ್ಷಗಾನವೆಂದರೆ ಕುಣಿತ ಮಣಿತವಷ್ಟೇ ಅಲ್ಲ. ಕಳೆದ ಒಂದು ಶತಮಾನದ ಕಾಲಾವಧಿಯಲ್ಲಿ ತಲಸ್ಪರ್ಷಿ ಮತ್ತು ಕುತೂಹಲಕರ ಅಧ್ಯಯನಗಳಿಗೆ ಕೂಡ ಯಕ್ಷಗಾನ ವಸ್ತುವಾಗಿದೆ. ಸಹಸ್ರಾರು ಗ್ರಂಥಗಳು ಬಂದಿವೆ, ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ರೌಢವಾದ ಪ್ರಬಂಧಗಳು ಈ ಕಲೆಯ ಕುರಿತು ಈ ವರೆಗೆ ಬಂದಿದೆ; ಸಾವಿರಗಟ್ಟಲೆ ಪ್ರಸಂಗಗಳು ರಚನೆಯಾಗುತ್ತಿವೆ. ಅಂದರೆ ನೃತ್ಯಾಭಿನಯದ ಬಣ್ಣದ ಲೋಕದ ಹೊರತಾಗಿ ಯಕ್ಷಗಾನಕ್ಕೆ ಅದರ ಬೌಧ್ಧಿಕ ವಿಭಾಗವೂ ಅಷ್ಟೇ ಸಮೃದ್ಧವಾಗಿದೆ. ಯಕ್ಷಗಾನದ ಕುರಿತು ಚಿಂತನ ಮಂಥನಗಳನ್ನು ಈ ಪ್ರದೇಶಧಲ್ಲಿ ಜನಸಾಮಾನ್ಯರೂ ಮಾಡುತ್ತಿರುತ್ತಾರೆ. ಇಂತಹ ಬೌದ್ಧಿಕ ಪ್ರಪಂಚದ ಪ್ರಮುಖ ವೇದಿಕೆಯಾಗಿ `'ಯಕ್ಷರಂಗ’ ಎಂಬ ಯಕ್ಷಗಾನಕ್ಕೆ ಮೀಸಲಾದ ಮಾಸಪತ್ರಿಕೆ ಹೊರಹೊಮ್ಮಿ ಕಳೆದ ಎರಡು ದಶಕಗಳಿಂದ ನಿರಂತರವಾಗಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪುಟ್ಟ ಹಳ್ಳಿ ಹಳದೀಪುರದಿಂದ ಪ್ರಕಾಶಿಸಲ್ಪಡುತ್ತಿರುವುದು ಒಂದು ಅನನ್ಯ ವಿದ್ಯಮಾನ.
1957ರಲ್ಲಿ ಯಕ್ಷಗಾನದ ತೆಂಕು-ಬಡಗು ತಿಟ್ಟಿನ ಅಗ್ರಮಾನ್ಯ ಭಾಗವತ ಕಡತೋಕಾ ಮಂಜುನಾಥ ಭಾಗವತರು ಆ ಕಾಲದಲ್ಲಿ ಶಾಲಾ ಶಿಕ್ಷಕರಾಗಿ ಯಕ್ಷಗಾನ ರಂಗಭೂಮಿಗೆ ಮೊಟ್ಟಮೊದಲ ಬಾರಿಗೆ 'ಯಕ್ಷಗಾನ’ ಎಂಬ ಹೆಸರಿನ ಮಾಸಪತ್ರಿಕೆಯನ್ನು ಹೊರತಂದರು. ಆ ಪತ್ರಿಕೆಯನ್ನು ಶಿರಸಿ ಸಮೀಪದ ಪುಟ್ಟ ಹಳ್ಳಿ ತಡಗುಣಿಯಲ್ಲಿ ಆ ಕಾಲದಲ್ಲಿ ವಕೀಲರಾಗಿ ಸೇವಾನಿರತರಾಗಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಲೋಕಾರ್ಪಣೆಗೊಳಿಸಿದ್ದರು. ಕೆಲ ಕಾಲ ನಡೆದ ಈ ಪತ್ರಿಕೆ ನಿಂತಿತ್ತು.
ನಂತರದಲ್ಲಿ ಯಕ್ಷಗಾನಕ್ಕಾಗಿ ಪತ್ರಿಕೆಯನ್ನು ಪ್ರಕಟಿಸಲು ಅನೇಕರು ಬೇರೆ ಬೇರೆ ಕಡೆಗಳಲ್ಲಿ ಪ್ರಯತ್ನಿಸಿದರೂ ಕೆಲವೇ ವರ್ಷಗಳಲ್ಲಿ ಪತ್ರಿಕೆಯು ನಿಂತಿರುವುದು ಕಂಡು ಬರುತ್ತದೆ.
'ಯಕ್ಷರಂಗ’ವು ಕಳೆದ ಎರಡು ದಶಕಗಳಿಂದ ನಿರಂತರವಾಗಿ ಪ್ರಕಟವಾಗುತ್ತಿದ್ದು ಇದೀಗ ಪ್ರಕಟಣೆಯ ಇಪ್ಪತ್ತನೆಯ ವರ್ಷಕ್ಕೆ ಕಾಲಿಟ್ಟಿದೆ. ಇದು ಮುಖ್ಯವಾಗಿ ಉತ್ತರ ಕನ್ನಡ, ಶಿವಮೊಗ್ಗ ಉಡುಪಿ, ದ್ಷಿಣ ಕನ್ನಡ ಮತ್ತು ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಸುಮಾರು ಮೂರು ಸಾವಿರದಷ್ಟು ಚಂದಾದಾರರನ್ನು ಹೊಂದಿದೆ. ಯಕ್ಷರಂಗದ ಸಂಪಾದಕರಾದ ಕಡತೋಕಾ ಗೋಪಾಲಕೃಷ್ಣ ಭಾಗವತರು ಕಾನೂನು ಪದವೀಧರರಾಗಿ ನ್ಯಾಯವಾದಿಯಾಗಿ ೨೦೦೫ರಲ್ಲಿ ವೃತ್ತಿನಿರತರಾಗಿದ್ದ ಸಮಯದಲ್ಲಿ ಶಿರಸಿಯ ಆರ್.ಜಿ.ರಾಯಕರ್ ಎಂಬ ಪತ್ರಿಕೆ ಸಂಗ್ರಾಹಕರ ಮನೆಗೆ ಹೋದಾಗ ತಮ್ಮ ತಂದೆ ಕಡತೋಕಾ ಮಂಜುನಾಥ ಭಾಗವತರು ೧೯೫೭ರಲ್ಲಿ ಪ್ರಕಟಿಸುತ್ತಿದ್ದ ‘ಯಕ್ಷಗಾನ’ ಮಾಸಪತ್ರಿಕೆಯನ್ನು ನೋಡಿ ಬೆರಗಾಗಿ ಮತ್ತೆ ಯಕ್ಷಗಾನಕ್ಕಾಗಿ ಮೀಸಲಾದ ಒಂದು ಪತ್ರಿಕೆಯನ್ನು ಹೊರತರಲು ಪ್ರೇರಣೆ ಪಡೆದರು. ೨೦೦೫ರಲ್ಲಿ ’ಯಕ್ಷಲೋಕ’ ಎಂಬ ನೋಂದಾಯಿತ ಸಂಸ್ಥೆಯನ್ನು ಹುಟ್ಟುಹಾಕಿ ಅದರಿಂದ ‘ಯಕ್ಷರಂಗ’ವನ್ನು ಪ್ರಕಟಿಸಲು ಪ್ರಾರಂಭಿಸಿದರು.
ಸಂಸ್ಕೃತಿಯ ವ್ಯಾಪಾರೀಕರಣದ ಸಂಕ್ರಮಣ ಕಾಲದಲ್ಲಿ ಪ್ರಾರಂಭವಾದ ‘ಯಕ್ಷರಂಗ’ವು ಯಕ್ಷಗಾನವನ್ನು ಆಸ್ವಾ ದಿಸುವ ಕಲಾಸಕ್ತ ಪ್ರೇಕ್ಷಕರ ಅಭಿರುಚಿಯನ್ನು ತಿದ್ದುವುದು ಮಾತ್ರ ಯಕ್ಷಗಾನದ ಎಲ್ಲ ಸೃಜನಾತ್ಮಕ ಮತ್ತು ಕಲೇತರ ಸಮಸ್ಯೆಗಳಿಗೆ ಪರಿಹಾರ ಎಂದು ದೃಢವಾಗಿ ನಂಬುತ್ತದೆ. ಈ ಧೋರಣೆಯೊಂದಿಗೆ ಪತ್ರಿಕೆಯು ಈ ವರೆಗೆ ಕಲೆಯ ಮೂಲ ಸ್ವರೂಪಕ್ಕೆ ಧಕ್ಕೆ ತರುವ ಎಲ್ಲ ಪಯತ್ನ ಮತ್ತು ಪ್ರಯೋಗಗಳನ್ನೂ ಸಾರ್ವಜನಿಕವಾಗಿ ಖಂಡಿಸುತ್ತಾ ಬಂದಿದೆ. ಕಲಾನಿಷ್ಠೆಯೊಂದಿಗೆ ನಡೆಯುವ ಪ್ರಯೋಗಗಳನ್ನು ಹುಡುಕಿ ಹುಡುಕಿ ಪ್ರೋತ್ಸಾಹಿಸುತ್ತಾ ಬಂದಿದೆ. ಕಲೆಯು ಕಲಾವಿದನಿಗಿಂತಲೂ ಮೇಲು ಎಂಬ ಧೋರಣೆಯೊಂದಿಗೆ ಯಕ್ಷಗಾನ ಪ್ರದರ್ಶನಗಳ ವಿಮರ್ಶೆಯನ್ನು ನಿರ್ಭಿಡೆಯಿಂದ ಪ್ರಕಟಿಸಿದೆ. ಉದಯೋನ್ಮುಖ ಬರಹಗಾರರಿಗೆ ಬರೆಯಲು ಪ್ರೋತ್ಸಾಹಿಸಿದೆ. ಸಂಕಷ್ಟದಲ್ಲಿರುವ ಕಲಾವಿದರ ಬವಣೆಯ ಕಡೆಗೆ ಸಾರ್ವಜನಿಕರ ಗಮನವನ್ನು ಸೆಳೆದು ಅವರಿಗೆ ಹೆಚ್ಚಿನ ಆರ್ಥಿಕ ಸಹಾಯ ದೊರೆಯುವಂತೆ ಕೂಡ ಪ್ರಯತ್ನಿಸಿದೆ. ಯಕ್ಷಗಾನದ ನಾಮಾಂಕಿತ ಕಲಾವಿದರ, ಚಿಂತಕರ ಸಂದರ್ಶನಗಳನ್ನು ಪ್ರಕಟಿಸಿದೆ. ಅವುಗಳಲ್ಲಿ ಶತಾವಧಾನಿ ಡಾ.ಆರ್.ಗಣೇಶ್, ರಂಗಕರ್ಮಿ ಪ್ರಸನ್ನ, ಸಾಹಿತಿ ಲಕ್ಷ್ಮೀಶ ತೋಳ್ಪಾಡಿ, ಡಾ.ಎಂ.ಪ್ರಭಾಕರ ಜೋಶಿ ಮೊದಲಾದವರು ಪ್ರಮುಖರಾಗಿದ್ದಾರೆ.
ಪತ್ರಿಕೆಯು ರಚನಾತ್ಮಕ ರಂಗಚಟುವಟಿಕೆಗಳಲ್ಲಿಯೂ ತೊಡಗಿಕೊಂಡಿರುವುದು ವಿಶೇಷ. ೨೦೧೧ರಲ್ಲಿ ಯಕ್ಷಗಾನ ಪತ್ರಿಕೋದ್ಯಮದ ಮೂಲ ಪುರುಷ ಕಡತೋಕಾ ಮಂಜುನಾಥ ಭಾಗವತರು ನಿಧನರಾದ ಮೇಲೆ ‘ಕಡತೋಕಾ ಕೃತಿ-ಸ್ಮೃತಿ ಯಕ್ಷರಂಗೋತ್ಸವ’ ಎಂಬ ಯಕ್ಷಗಾನ ಉತ್ಸವವನ್ನು ಐದು ದಿನ ನಡೆಸುತ್ತಾ ಬಂದಿದೆ. ಚಿಂತನ ಗೋಷ್ಠಿ ಕಮ್ಮಟ ಮತ್ತು ದಾಖಲೀಕರಣಗಳನ್ನು ಕೂಡ ನಡೆಸಿದೆ. ಕಳೆದ ಹದಿಮೂರು ವರ್ಷಗಳ ಯಕ್ಷರಂಗೋತ್ಸವದಲ್ಲಿ ಪತ್ರಿಕೆಯು ೫೦ಕ್ಕಿಂತ ಹೆಚ್ಚು ಜನ ಸಾಧಕರನ್ನು ಗುರುತಿಸಿ ಸನ್ಮಾನಿಸಿದೆ.
ಪತ್ರಿಕೆಯ ದಶಮಾನೋತ್ಸವದ ವರ್ಷ ಅಂದರೆ 2015ರಲ್ಲಿ ಯಕ್ಷಗಾನದ ನೃತ್ಯ ಅಭಿನಯ, ಭಾಗವತಿಕೆ ಮತ್ತು ವಾದನಗಳಂತೆ ತಾಳಮದ್ದಳೆಯ ಅರ್ಥಗಾರಿಕೆಗೂ ಔಪಚಾರಿಕವಾದ ತರಬೇತಿ ಅಗತ್ಯವನ್ನು ಮನಗಂಡು ತಾಳಮದ್ದಳೆಯ ತರಬೇತಿಯ ಪರಿಕಲ್ಪನೆಯನ್ನು ಯಕ್ಷರಂಗ ಮಾಸಪತ್ರಿಕೆಯು ಮೊಟ್ಟಮೊದಲಿಗೆ ಕೊಟ್ಟಿದೆ.
2022ರಲ್ಲಿ ಯಕ್ಷಗಾನದ ಹಿಮ್ಮೇಳ ಮುಮ್ಮೇಳದ ಪ್ರಚಲಿತ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಎರಡು ದಿನಗಳ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದ್ದು ಅದು ಯೂಟ್ಯೂಬ್‌ನಲ್ಲಿ ಲಭ್ಯವಿದೆ. 2024ರ ಮಾರ್ಚ್‌ನಲ್ಲಿ ‘ಅರ್ಥಾಂತರಂಗ’ ಎಂಬ ಶೀರ್ಷಿಕೆಯಡಿಯಲ್ಲಿ ತಾಳಮದ್ದಳೆ ಅರ್ಥಗಾರಿಕೆಯ ತಂತ್ರಾಶಗಳ ಪ್ರಾತ್ಯಕ್ಷಿಕೆಯನ್ನು ಪರಿಣತ ಕಲಾವಿದರ ಉಪಸ್ಥಿತಿಯಲ್ಲಿ ನಡೆಸಿ ದಾಖಲಿಸಿದೆ. ಈ ವರ್ಷ ಇದೇ ನವಂಬರ್ 23 ಮತ್ತು 24ರಂದು ಎರಡು ದಿನ ಉತ್ತರ ಕನ್ನಡ ಜಿಲ್ಲೆ ಕಡತೋಕಾದಲ್ಲಿ ‘ಯಕ್ಷರಂಗೋತ್ಸವ’ವನ್ನು ಆಯೋಜಿಸಿದೆ.
ಸಂಪಾದಕ ಗೋಪಾಲಕೃಷ್ಣ ಭಾಗವತರು ಸಾಂದರ್ಭಿಕವಾಗಿ ಬೇರೆ ಬೇರೆ ಸಂಚಿಕೆಯಲ್ಲಿ ಯಕ್ಷಗಾನದ ಹಲವು ವಿಚಾರಗಳ ಕುರಿತು ಬರೆದ ಪ್ರೌಢ ಲೇಖನಗಳ ಸಮಾಹಾರವು ‘ಯಕ್ಷರಂಗದ ಮಾತುಗಳು’ ಎಂಬ ಪುಸ್ತಕ ರೂಪದಲ್ಲಿ ಪ್ರಕಟವಾಗಿದ್ದು ಅದರ ಮುನ್ನುಡಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಈಗಿನ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆಯವರು ’ ಗೋಪಾಲಕೃಷ್ಣ ಭಾಗವತರ ಯಕ್ಷಗಾನ ಪ್ರೇಮ ಅನುಪಮವಾದುದು. ಸ್ವಾನುಭವದ ಚೌಕಟ್ಟಿನಲ್ಲಿ ಅವರು ಯಕ್ಷಗಾನದ ಅನೇಕ ಅಂಶಗಳ ಬಗೆಗೆ ಅಧಿಕೃತ ಅನ್ನಬಹುದಾದ ಮಾತುಗಳನ್ನು ಈ ಪುಸ್ತಕದಲ್ಲಿ ಹೇಳಿದ್ದಾರೆ. ಯಕ್ಷಗಾನವು ಪರಿವರ್ತನೆಯ ಘಟ್ಟದಲ್ಲಿರುವಾಗ ಅದರ ಸಾಂಪ್ರದಾಯಿಕ ಸ್ವರೂಪವನ್ನು ಅಕ್ಷರ ಮಾಧ್ಯಮದಲ್ಲಿ ಪ್ರಗತಿಪರ ದೃಷ್ಟಿಕೋನದಿಂದ ದಾಖಲಿಸುವ ಅವರ ಪ್ರಯತ್ನ ಅಭಿನಂದನೀಯ. ಯಕ್ಷಗಾನ ಲೋಕಕ್ಕೆ ಇದರಿಂದ ತುಂಬಾ ಲಾಭವಾಗಲಿದೆ’ ಎಂದು ಹೇಳಿದುದು ಪತ್ರಿಕೆಯ ಚಿಂತನೆಯ ಮಾರ್ಗದ ಗಾಂಭೀರ್ಯವನ್ನು ನಿರೂಪಿಸುತ್ತದೆ. ಒಂದು ಅಂದಾಜಿನ ಪ್ರಕಾರ ಕಳೆದ ಎರಡು ದಶಕಗಳಲ್ಲಿ ’ಯಕ್ಷರಂಗ’ದಲ್ಲಿ ಬೇರೆ ಬೇರೆ ಯಕ್ಷಗಾನ ತಜ್ಞರೂ, ಸಂಶೋಧಕರೂ, ವಿದ್ವಾಂಸರೂ ಬರೆದ ಯಕ್ಷಗಾನ ಸಂಬಂಧಿ ಲೇಖನಗಳೂ ಮತ್ತು ಸಂದರ್ಶನಗಳೂ ಒಟ್ಟಾಗಿ ಸಾವಿರಾರು ಪುಟಗಳಾಗಬಹುದು. ಈ ಎಲ್ಲರ ಲೇಖನಗಳೂ ಸಂಗ್ರಹ ಯೋಗ್ಯವಾಗಿದ್ದು ಅಧ್ಯಯನಾಸಕ್ತರಿಗೆ ಅಮೂಲ್ಯವಾದ ಆಕರವಾಗಿವೆ.
ಯಕ್ಷಗಾನದಂತಹ ಸೀಮಿತ ಪ್ರದೇಶ ವ್ಯಾಪ್ತಿಯುಳ್ಳ ಮತ್ತು ಸೀಮಿತ ವಿಷಯವ್ಯಾಪ್ತಿಯುಳ್ಳ ಕ್ಷೇತ್ರಕ್ಕೆ ಅದರದ್ದೇ ಆದ ಪತ್ರಿಕೆಯೊಂದು ದಶಕಗಳ ಪರ್ಯಂತ ನಡೆಯುವುದು ಒಂದು ಸಾಂಸ್ಕೃತಿಕ ಸಾಹಸವೇ ಸರಿ. ಅದರಲ್ಲಿಯೂ ಪ್ರವಾಹದ ವಿರುದ್ಧ ಈಜುವ ಇಂತಹ ಸಾಂಸ್ಕೃತಿಕ ಪತ್ರಿಕೆಯ ಉಳಿವು ಸಾಂಸ್ಕೃತಿಕ ಕಾಳಜಿಯುಳ್ಳವರಲ್ಲಿ ಭರವಸೆಯ ಭಾವವನ್ನು ಮೂಡಿಸುತ್ತದೆ.
ರಾಜ್ಯ ಮಟ್ಟದ ದೊಡ್ಡ ದೊಡ್ಡ ಪತ್ರಿಕೆಗಳೇ ತಮ್ಮ ಓದುಗ ವರ್ಗವನ್ನು ಕಳೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಯಕ್ಷಗಾನದಂತಹ ಸೀಮಿತ ಕ್ಷೇತ್ರಕ್ಕೆ ಮೀಸಲಾದ ಪತ್ರಿಕೆ ’ಯಕ್ಷರಂಗ’ ಕಳೆದ ಎರಡು ದಶಕಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವುದು ವಿಶೇಷ. ಇದರ ಸಂಪಾದಕ ಗೋಪಾಲಕೃಷ್ಣ ಭಾಗವತರು ತುಂಬಾ ಸಂಯಮದಿಂದ ಸ್ವತಃ ಬರೆಯುತ್ತಾ, ಬರಹಗಳನ್ನೂ ಪ್ರಕಟಿಸುತ್ತಾ ಪತ್ರಿಕೆಯನ್ನು ನಡೆಸಿಕೊಂಡು ಬಂದಿದ್ದಾರೆ. ಅವರ ತಂದೆ ಕಡತೋಕಾ ಮಂಜುನಾಥ ಭಾಗವತರು ನಡೆಸುತ್ತಿದ್ದ ಪತ್ರಿಕೆಯನ್ನು ಮತ್ತೆ ಪ್ರಕಟಿಸುತ್ತಿರುವುದು ಒಂದು ಕ್ರಾಂತಿಕಾರಿ ಕೆಲಸವೇ ಸರಿ. ಇದರ ಮಾರ್ಗದರ್ಶಕನಾಗಿಯೂ ಪತ್ರಿಕೆಯ ಬರಹಗಾರನಾಗಿಯೂ ನಾನು ಇರುವುದು ನನಗೆ ಧನ್ಯತೆಯನ್ನು ತಂದಿದೆ. -ಡಾ.ಎಂ.ಪ್ರಭಾಕರ ಜೋಶಿ, ಯಕ್ಷಗಾನದ ಹಿರಿಯ ಸಂಶೋಧಕರೂ ಅರ್ಥಧಾರಿಗಳು
ಯಕ್ಷಗಾನದ ಬಹುಶ್ರುತ ವಿದ್ವಾಂಸ ಮತ್ತು ಮುಂಚೂಣಿಯ ಸಂಶೋಧಕ ಡಾ.ಕೆ.ಎಂ.ರಾಘವ ನಂಬಿಯಾರರು ’ಯಕ್ಷರಂಗ’ ಪತ್ರಿಕೆಯ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯ:- ’ಯಕ್ಷರಂಗ’ ಪತ್ರಿಕೆ ತನ್ನ ಪ್ರಕಟಣೆಯ ಇಪ್ಪತ್ತನೆ ವರ್ಷಕ್ಕೆ ಕಾಲಿರಿಸಿದೆ ಎಂಬುದು ಕಿವಿಗೆ ಹಬ್ಬವಾಗುವ ಸುದ್ದಿ. ಇದರ ಹಿಂದುಗಡೆ ಇರುವ ಸಂಪಾದಕ ಕಡತೋಕಾ ಗೋಪಾಲಕೃಷ್ಣ ಭಾಗವತರ ಸಾಹಸ ಎವರೆಸ್ಟ್ ಏರುವುದಕ್ಕೂ ಮಿಗಿಲೆಂದು ಆ ರಂಗದ ಬಗೆಗೆ ಗೊತ್ತಿರುವವರಿಗೆ ಗೊತ್ತಿದೆ. ಯಕ್ಷಗಾನದ ಜನಸಾಮಾನ್ಯರ ಗ್ರಹಿಕೆ, ತಜ್ಞರ ಗ್ರಹಿಕೆಗಳ ಅಂತರ ಅಪಾರವೆಂಬುದು ಅರಿವಾಗಿಯೂ ಎಲ್ಲ ಓದುಗರನ್ನು ತಡವುವ ಸಹನೆಯೊಂದಿಗೆ ಒಬ್ಬ ಪ್ರಬುದ್ಧ ಕಲಾ ಪತ್ರಕರ್ತನಾಗಿ ಭಾಗವತರು ಬೆಳೆದರೆಂಬುದು ಪತ್ರಿಕೆಯ ಸಂಸ್ಥಾಪಕ, ಸ್ವರ್ಗದಲ್ಲಿರುವ ಕುಶಾಗ್ರಮತಿ ಮಂಜು ಭಾಗವತರೂ ಹರುಷಗೊಳ್ಳುವ ಸಂಗತಿ. ತನ್ನ ಧೋರಣೆಯನ್ನು ಗೋಪಾಲಕೃಷ್ಣರು ವ್ಯಕ್ತಪಡಿಸಿದ ರೀತಿ - ’ ಓದುಗರೂ ಬರೆಯಬೇಕು, ಬರಹಗಾರರೂ ಓದಬೇಕು’ ಅವರ ಸಾಂಸ್ಕೃತಿಕ ಕಾಳಜಿಯನ್ನು ಹೇಳುತ್ತದೆ. ಅನೇಕ ಗಂಭೀರ ಪ್ರಶ್ನೆಗಳನ್ನು ಸಾರ್ವಜನಿಕ ಚರ್ಚೆಗೊಳಪಡಿಸಿದ ಈ ಪತ್ರಿಕೆ ತುಂಬು ಪ್ರೋತ್ಸಾಹಕ್ಕೆ ಅರ್ಹವಿದೆ.-ಡಾ.ಕೆ.ಎಂ.ರಾಘವ ನಂಬಿಯಾರ್, ಬಹುಶ್ರುತ ಯಕ್ಷಗಾನ ವಿದ್ವಾಂಸರು
-ಲೇಖಕ: ಡಾ.ಆನಂದರಾಮ ಉಪಾಧ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.