ADVERTISEMENT

ಎಂ.ಎಸ್‌.ಶ್ರೀರಾಮ್‌ ವಿಶ್ಲೇಷಣೆ: ಸಂಘಟಿತ ಕ್ಷೇತ್ರಕ್ಕೆ ಪಕೋಡಾವಾಲಾ

ಅಸಂಘಟಿತ ಉದ್ಯಮಗಳನ್ನು ಅವಸರದಲ್ಲಿ ಸಂಘಟಿತ ಕ್ಷೇತ್ರಕ್ಕೆ ಎಳೆದು ತರುವ ಉತ್ಸಾಹ ಏಕೆ?

ಎಂ.ಎಸ್.ಶ್ರೀರಾಮ್
Published 24 ಸೆಪ್ಟೆಂಬರ್ 2020, 1:40 IST
Last Updated 24 ಸೆಪ್ಟೆಂಬರ್ 2020, 1:40 IST
   
""

ಸೂಕ್ಷ್ಮ, ಲಘು ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ (ಎಂಎಸ್ಎಂಇ) ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಈಚಿನ ಆದೇಶಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಳಮಳವನ್ನು ಉಂಟುಮಾಡಿವೆ. ಹಣಕಾಸು ಸಚಿವರ ಘೋಷಣೆಯಂತೆ, ಈ ಉದ್ಯಮಗಳ ವ್ಯಾಖ್ಯಾನವನ್ನು ಬದಲಾಯಿಸುತ್ತಾ ಈ ಆದೇಶಗಳನ್ನು ಹೊರಡಿಸಲಾಗಿದೆ. ಲಘು ಉದ್ಯಮಗಳಿಗೆ ಸರ್ಕಾರ ನೀಡುತ್ತಿರುವ ಸಹಾಯವು ವಿಸ್ತೃತವಾಗಿ ದಕ್ಕಬೇಕೆನ್ನುವ ಸದುದ್ದೇಶದಿಂದ ಈ ವ್ಯಾಖ್ಯಾನವನ್ನು ಉದಾರೀಕರಿಸಲು ಯತ್ನಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೂ ಈ ಆದೇಶಗಳು ಅತಿ ಸೂಕ್ಷ್ಮ ಉದ್ಯಮ ಮತ್ತು ವ್ಯಾಪಾರದ ಮಟ್ಟದಲ್ಲಿ, ಮುಖ್ಯವಾಗಿ ಕೊರೊನಾದಿಂದ ದೊಡ್ಡ ಪೆಟ್ಟು ತಿಂದಿರುವ ಅಸಂಘಟಿತ ಕ್ಷೇತ್ರದ ವಿಷಯದಲ್ಲಿ ಕೇಂದ್ರ ಸರ್ಕಾರದ ಉದ್ದೇಶದ ವಿರುದ್ಧ ದಿಕ್ಕಿನಲ್ಲಿ ಸಾಗಿವೆ.

ಸಿಕ್ಕ ಮಾಹಿತಿಯನ್ನೆಲ್ಲಾ ಸಂಗ್ರಹಿಸಿ, ಎಲ್ಲರನ್ನೂ ಮಿಂಚಿನ ವೇಗದಲ್ಲಿ ಸಂಘಟಿತ ಕ್ಷೇತ್ರಕ್ಕೆ ತಳ್ಳಬೇಕೆಂಬ ಸರ್ಕಾರದ ಅತಿ ಉತ್ಸಾಹವೇ ಈ ಸಂಕಟಕ್ಕೆ ಮೂಲ ಕಾರಣವಾಗಿರುವಂತಿದೆ. ಯಾವುದೇ ಮಾಹಿತಿಯನ್ನು ಸಂಗ್ರಹಿಸಲು ತೋರುವ ಉತ್ಸಾಹಕ್ಕೆ ಸರಿದೂಗುವಂತೆ, ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಸರ್ಕಾರ ನಮ್ಮೊಂದಿಗೆ ಹಂಚಿಕೊಳ್ಳಲು ಹಿಂಜರಿಯುವ ಒಂದು ವಿರೋಧಾಭಾಸ ನಮ್ಮ ಅನುಭವಕ್ಕೆ ಪದೇ ಪದೇ ಬಂದಿದೆ. ಸರ್ಕಾರವು ಎಲ್ಲವನ್ನೂ ಆಧಾರ್‌ ಜೊತೆ ಜೋಡಿಸುತ್ತಿದೆ. ಎಲ್ಲವೂ ಲಿಂಕಿಂಗ್ ಜಗತ್ತಿಗೆ ಸೇರಿವೆ!

ಇದು ಹೀಗಿರುವಾಗ ರಿಸರ್ವ್ ಬ್ಯಾಂಕ್‌, ಉದ್ಯಮಗಳನ್ನು ವರ್ಗೀಕರಿಸುವುದಕ್ಕೆ ಲಘು ಉದ್ಯಮ ಸಚಿವಾಲಯದ ವ್ಯಾಖ್ಯಾನವನ್ನು ಅವಲಂಬಿಸಿದೆ. ಹೀಗೆ ಲಘು ಉದ್ಯಮ ಸಚಿವಾಲಯದ ದಾಖಲೆ ಸಂಗ್ರಹ ವರ್ಗೀಕರಣದ ಉತ್ಸಾಹದಲ್ಲಿ ಉದ್ಯಮಗಳು ಪೆಟ್ಟು ತಿನ್ನುತ್ತಿವೆ. ಸೂಕ್ಷ್ಮ ಮತ್ತು ಲಘು ಉದ್ಯಮಗಳಿಗೆ ಸಾಲ ನೀಡಲು ಬ್ಯಾಂಕುಗಳು ತಯಾರಿರಬಹುದು. ಹಿಂದೆಯೂ ಈ ಉದ್ಯಮಗಳಿಗೆ ಆರ್ಥಿಕ ಸವಲತ್ತುಗಳನ್ನು ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಕೊಡಮಾಡಿದೆ. ಹೀಗೆ ಸವಲತ್ತುಗಳನ್ನು ಕೊಡಲು ರಿಸರ್ವ್ ಬ್ಯಾಂಕ್, ಆದ್ಯತಾ ವಿಭಾಗಕ್ಕೆ ಶೇಕಡ ನಲವತ್ತರಷ್ಟು ಮತ್ತು ಸೂಕ್ಷ್ಮ ಉದ್ಯಮ-ವ್ಯಾಪಾರಗಳಿಗೆ ಒಟ್ಟಾರೆ ಸಾಲದ ಶೇಕಡ 7.5ರಷ್ಟು ಸಾಲವನ್ನು ಕಡ್ಡಾಯವಾಗಿ ನೀಡಬೇಕೆನ್ನುವ ನೀತಿಯಿಂದಾಗಿ ಬ್ಯಾಂಕುಗಳು ಈ ಕ್ಷೇತ್ರದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಈಗ ಇದಕ್ಕೊಂದು ಅಡ್ಡಿ ಉಂಟಾಗಿದೆ. ಸದರಿ ಸರ್ಕಾರದ ಆದೇಶದಂತೆ ಪ್ರತಿ ಉದ್ಯಮವೂ ಲಘು ಉದ್ಯಮ ಸಚಿವಾಲಯ ನಿರ್ವಹಿಸುವ ಉದ್ಯಮ ನೋಂದಣಿ ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.

ADVERTISEMENT

ನೋಂದಣಿಯ ಸಮಯಕ್ಕೆ ಆಧಾರ್ ಸಂಖ್ಯೆ ಯಾ ಇನ್‌ಕಂ ಟ್ಯಾಕ್ಸ್ ಪ್ಯಾನ್ ನಂಬರ್‌ ಇಲ್ಲವೇ ಜಿಎಸ್‌ಟಿ ನೋಂದಣಿ ವಿವರಗಳನ್ನು ಕೊಂಡಿ ಹಾಕಿ ತಮ್ಮ ಅಸ್ತಿತ್ವವನ್ನು ನಿರೂಪಿಸಬೇಕು. ದೊಡ್ಡ ಗಾತ್ರದ ಉದ್ಯಮಗಳ ಬಳಿ ಈ ಎಲ್ಲ ದಾಖಲಾತಿ ಇರಬಹುದಾದರೂ ಅಸಂಘಟಿತ ಕ್ಷೇತ್ರದ ಉದ್ಯಮಗಳಿಗೆ ಮತ್ತು ತೆರಿಗೆಯ ಮಿತಿಯನ್ನು ಮೀರದ ಸೂಕ್ಷ್ಮ ಉದ್ಯಮಗಳಿಗೆ ಪ್ಯಾನ್ ಕಾರ್ಡಾಗಲೀ ಜಿಎಸ್‌ಟಿ ಸಂಖ್ಯೆಯಾಗಲೀ ಇರಬಹುದಾದದ್ದು ಅಪರೂಪವೇ. ಕೆಲವರಿಗೆ ಪ್ಯಾನ್ ನಂಬರ್‌ ಇರಬಹುದಾದರೂ ಅವರ ಉದ್ಯಮದ ಹೆಸರು ಭಿನ್ನವಾಗಿರಬಹುದು.

ಉದ್ಯಮಕ್ಕೂ ಉದ್ಯಮಿಗೂ ಭೇದವಿಲ್ಲದ ಸಂದರ್ಭದಲ್ಲಿ ಈ ರೀತಿಯ ದಾಖಲೀಕರಣ ಕಷ್ಟದ್ದೇ ಆಗುತ್ತದೆ. ಹಾಗೆಯೇ ಪಾಲುದಾರಿಕೆಯ ಉದ್ಯಮಗಳು ಒಂದು ಕರಾರಿನಂತೆ ಎಲ್ಲೂ ತಮ್ಮನ್ನು ದಾಖಲು ಮಾಡಿಕೊಳ್ಳದೇ ವ್ಯಾಪಾರವನ್ನು ಮುಂದುವರಿಸುತ್ತಿರಬಹುದು. ಹಾಗೆಯೇ ಒಬ್ಬನೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಏಕಸ್ವಾಮ್ಯದ ಉದ್ಯಮಗಳನ್ನೂ ನಡೆಸುತ್ತಿರಬಹುದು. ಆದರೆ ವ್ಯಾಪಾರದ ದಾಖಲೀಕರಣಕ್ಕೆ ಒಂದು ಕಡೆ ಪ್ಯಾನ್ ಕಾರ್ಡನ್ನು ಬಳಸಿದಾಕ್ಷಣ ಮಿಕ್ಕ ವ್ಯಾಪಾರಗಳ ದಾಖಲಾತಿ ಈ ಪೋರ್ಟಲ್‌ನಲ್ಲಿ ದುಸ್ಸಾಧ್ಯವಾಗಿದೆ. ಈ ದಾಖಲಾತಿ ಇಲ್ಲವೆಂದರೆ ಪೋರ್ಟಲ್‌ನಲ್ಲಿ ಪ್ರವೇಶ ಸಿಗದು. ಪೋರ್ಟಲ್‌ನಲ್ಲಿ ನೋಂದಣಿಯಾಗದ ಹೊರತು ಈ ವ್ಯಾಪಾರಗಳ ಅಸ್ತಿತ್ವವನ್ನು ಗುರುತಿಸಲು ಸಾಧ್ಯವಿಲ್ಲ.

ಇಲ್ಲಿ ಸಾಲದ್ದಕ್ಕೆ ಮತ್ತೊಂದು ತೊಂದರೆಯೂ ಇದೆ. ಸರ್ಕಾರದ ಆದೇಶದ ವರ್ಗೀಕರಣದಲ್ಲಿ ಸಗಟು ಮತ್ತು ಚಿಲ್ಲರೆ ವ್ಯಾಪಾರವನ್ನು ಈ ಉದ್ಯಮಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಹೀಗಾಗಿ, ದಾಖಲೆಗಳಿದ್ದರೂ ಈ ವ್ಯಾಪಾರಿಗಳಿಗಂತೂ ದಾಖಲಾತಿ ಮಾಡಿಸಿಕೊಳ್ಳುವುದು ದುಸ್ಸಾಧ್ಯವಾಗಿದೆ. ದೇಶದಲ್ಲಿರುವ ಒಟ್ಟಾರೆ ಲಘು ಉದ್ಯಮಗಳಲ್ಲಿ ಈ ರೀತಿಯ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳ ಪ್ರಮಾಣ ಶೇಕಡ 70ರಷ್ಟಿದೆ.

ಎಂ.ಎಸ್‌.ಶ್ರೀರಾಮ್‌

ಇಂಡಿಯಾ ಡೇಟಾ ಇನ್‌ಸೈಟ್ಸ್‌ನ ಮಾಹಿತಿಯ ಪ್ರಕಾರ, ದೇಶದಲ್ಲಿ 6.34 ಕೋಟಿಗೂ ಹೆಚ್ಚು ಇರುವ ಒಟ್ಟಾರೆ ಉದ್ಯಮಗಳಲ್ಲಿ ಶೇ 16ರಷ್ಟು ಮಾತ್ರ ಈ ಪೋರ್ಟಲ್‌ನಲ್ಲಿ ದಾಖಲಾತಿಯನ್ನು ಪಡೆದಿವೆ. ಸಗಟು ಮತ್ತು ಚಿಲ್ಲರೆ ವ್ಯಾಪಾರವನ್ನಷ್ಟೇ ತೆಗೆದುಕೊಂಡರೆ, ಇಲ್ಲಿ 4.37 ಕೋಟಿ ಉದ್ಯಮಗಳಿವೆ ಎಂದು ಅಂದಾಜು ಮಾಡಲಾಗಿದೆ. ಅವುಗಳಲ್ಲಿ ಶೇ 14ರಷ್ಟು ಮಾತ್ರ ಪೋರ್ಟಲ್‌ನಲ್ಲಿ ದಾಖಲಾಗಿವೆ. ಮಿಕ್ಕವು ಅಸಂಘಟಿತ ಮತ್ತು ದಾಖಲಾಗದಿರುವ ವ್ಯಾಪಾರಗಳು. ಸಂಘಟಿತ ಕ್ಷೇತ್ರದಾಚೆ ಇರುವ ಈ ವ್ಯಾಪಾರಗಳು ಕಾನೂನು ಬಾಹಿರವೇನೂ ಅಲ್ಲ. ಆದರೆ ದಾಖಲಾತಿಯಿಲ್ಲದಿದ್ದರೆ ಅಸ್ತಿತ್ವವಿಲ್ಲ ಎನ್ನುವ ಸರ್ಕಾರದ ನಿಲುವು ಮತ್ತು ಈಗಾಗಲೇ ದಾಖಲಾಗಿರುವ ಉದ್ಯಮಗಳೂ ಮಾರ್ಚ್ 2021ರೊಳಗಾಗಿ ಮರುದಾಖಲಾತಿ ಪಡೆಯಬೇಕೆನ್ನುವ ಸರ್ಕಾರದ ನಿಲುವು ಸೋಜಿಗದ್ದಾಗಿದೆಯಷ್ಟೇ ಅಲ್ಲ ಸೂಕ್ಷ್ಮ ವ್ಯಾಪಾರಗಳ ವಿರೋಧಿಯಾಗಿಯೂ ಇದೆ.

ಈ ದಾಖಲಾತಿಯ ಪ್ರಸಂಗವು ಅಸ್ಸಾಮಿನ ಎನ್‌ಆರ್‌ಸಿ ಪ್ರಕ್ರಿಯೆಯಂತೆ ಕಾಣುತ್ತಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಈ ಎಲ್ಲ ಸಂಸ್ಥೆಗಳೂ ನಿಜವಾಗಿ ಅಸ್ತಿತ್ವದಲ್ಲಿದ್ದರೂ ತಮ್ಮ ಅಸ್ತಿತ್ವವನ್ನು ನಿರೂಪಿಸಿಕೊಳ್ಳಲಾರದ ಪರಿಸ್ಥಿತಿಗೆ ಬಂದಿವೆ. ದೇಶದ ಆರ್ಥಿಕತೆಯಲ್ಲಿ ಭಾಗವಹಿಸುತ್ತಿದ್ದ ಈ ಉದ್ಯಮಗಳು ಮಾಯವಾಗುವಂತೆ ಈ ದಾಖಲಾತಿ ಪ್ರಕ್ರಿಯೆ ನೋಡಿಕೊಳ್ಳುತ್ತಿದೆ.

ಈ ಅಸಂಘಟಿತ ಉದ್ಯಮಗಳನ್ನು ಅವಸರದಲ್ಲಿ ಸಂಘಟಿತ ಕ್ಷೇತ್ರಕ್ಕೆ ಎಳೆದು ತರುವ ಉತ್ಸಾಹ ಸರ್ಕಾರಕ್ಕೆ ಯಾಕೆ ಇದೆ ಎನ್ನುವುದು ಗೊತ್ತಾಗುತ್ತಿಲ್ಲ. ಆದರೆ ಎಲ್ಲವನ್ನೂ ಅವಸರದಲ್ಲಿ, ಯೋಚನಾರಹಿತವಾಗಿ ಮಾಡುವ ಖ್ಯಾತಿಯಂತೂ ಈ ಸರ್ಕಾರಕ್ಕೆ ಖಂಡಿತವಾಗಿಯೂ ಸಲ್ಲುತ್ತದೆ. ಈ ಪ್ರಕ್ರಿಯೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಿಂದ ಸಾಲ ಪಡೆಯುತ್ತಿದ್ದ ಅನೇಕ ಉದ್ಯಮಗಳು ಅದರಿಂದ ಹೊರಬೀಳುವ ಅಪಾಯವಿದೆ. ಅವುಗಳಿಗೆ ಬ್ಯಾಂಕುಗಳು ಸಾಲ ಕೊಡುತ್ತಿದ್ದವಾದರೂ ಈಗ ಇವು ಸಣ್ಣ ಮತ್ತು ಲಘು ಉದ್ಯಮದ ಪಟ್ಟಿಯಿಂದ ಹೊರಬಿದ್ದಿರುವುದರಿಂದ, ಆ ಪಟ್ಟಿಗೆ ಸೇರದಂತೆ ವರ್ಗೀಕರಣ ಮಾಡಿರುವುದರಿಂದ, ದಾಖಲಾತಿ ಮಾಡಲು ಸಾಧ್ಯವಿದ್ದವರಿಗೂ ದಾಖಲಾತಿ ಇಲ್ಲದವರಿಗೂ ಸಮಾನ ಪೆಟ್ಟು ಬಿದ್ದಿದೆ. ಇವನ್ನು ಆದ್ಯತಾ ವಿಭಾಗದ ಸಾಲವಾಗಿ ಪರಿಗಣಿಸುವುದಿಲ್ಲ. ಹೀಗಾಗಿ ಈ ಬಗ್ಗೆ ಯಾವುದೇ ಸಾಲ ನೀಡಲು ಬ್ಯಾಂಕುಗಳಿಗೆ ಉತ್ಸಾಹ ಕಾಣುವುದಿಲ್ಲ. ಅಷ್ಟೇ ಅಲ್ಲ, ಗಾಯದ ಮೇಲೆ ಉಪ್ಪೆರಚುವಂತೆ, ಸಣ್ಣ ಉದ್ಯಮಗಳಿಂದ ಖರೀದಿ ಮಾಡಬೇಕೆನ್ನುವ ಸರ್ಕಾರಿ ನೀತಿಯೂ ಪೋರ್ಟಲ್‌ನಲ್ಲಿ ದಾಖಲಾಗಿರುವ ಉದ್ಯಮಗಳಿಗೆ ಮಾತ್ರ ಅನ್ವಯ
ಆಗುತ್ತದಾದ್ದರಿಂದ ಆ ಆದಾಯವೂ ಇಲ್ಲವಾಗುತ್ತದೆ.

ಈಗ ಸರ್ಕಾರ ಹಿಡಿದಿರುವ ದಾರಿ ಅಸಂಘಟಿತ ಉದ್ಯಮಗಳನ್ನು ಸಂಘಟಿತ ಕ್ಷೇತ್ರಕ್ಕೆ ಸೇರಿಸುವ ಪ್ರಕ್ರಿಯೆಗಿಂತ ಅಸಂಘಟಿತ ಕ್ಷೇತ್ರದ ಉದ್ಯಮಗಳನ್ನು ಹೇಗಾದರೂ ದಿವಾಳಿಯಾಗಿಸುವ ಪ್ರಕ್ರಿಯೆಯಂತೆ ಕಾಣುತ್ತದೆ. ದಿನೇ ದಿನೇ ಸರ್ಕಾರ ಬಡವರ, ಅಸಂಘಟಿತ ಕ್ಷೇತ್ರದವರ, ಸಣ್ಣ ವ್ಯಾಪಾರಿಗಳ, ದಿನಗೂಲಿಗಳ, ವಲಸೆ ಕಾರ್ಮಿಕರ ವಿರೋಧಿಯಾಗಿ ಕಾಣಲು ಯಾಕೆ ಪ್ರಯಾಸಪಡುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಪಕೋಡಾ ಕರಿಯುವುದನ್ನೂ ಒಂದು ಜೀವನೋಪಾಧಿ ಎಂದು ಘೋಷಿಸಿದ್ದ ಪ್ರಧಾನಿಯವರ ಮಾತಿಗೆ ವಿರುದ್ಧವಾಗಿ ಲಘು ಉದ್ಯಮ ಸಚಿವಾಲಯ ಯಾಕೆ ಕೆಲಸ ಮಾಡುತ್ತಿದೆಯೋ ತಿಳಿಯುತ್ತಿಲ್ಲ.

ಒಂದು ಪ್ರಖ್ಯಾತ ಸುದ್ದಿವಾಹಿನಿಯೆದುರು ಪಕೋಡಾಗಳನ್ನು ಕರಿಯುವ ಉದ್ಯಮಿ, ಸರ್ಕಾರದ ಪೋರ್ಟಲ್‌ನಲ್ಲಿ ತನ್ನ ಅಸ್ತಿತ್ವವನ್ನು ನೋಂದಾಯಿಸಿಕೊಳ್ಳಲಾಗದಿದ್ದರೆ ಪ್ರಧಾನಿ ಗುರುತಿಸಿದರೂ ನಮ್ಮ ಅರ್ಥವ್ಯವಸ್ಥೆ ಅವನನ್ನು ಗುರುತಿಸುವುದಿಲ್ಲ. ನೋಂದಾಯಿಸಿಕೊಳ್ಳಲು ಪ್ರಯತ್ನಿಸಿದರೂ ಪಕೋಡಾ ವ್ಯಾಪಾರವು ಅಲ್ಲಿನ ವರ್ಗೀಕರಣದಲ್ಲಿ ಕಾಣುವುದಿಲ್ಲ. ಅವನಿಗೆ ಸ್ಟಾರ್ಟ್ ಅಪ್ ಇಂಡಿಯಾದ ವತಿಯಿಂದ ಯಾವುದೋ ದೊಡ್ಡ ಫಂಡು ಹೂಡಿಕೆಯಿಟ್ಟು ಸ್ಟ್ಯಾಂಡ್ ಅಪ್ ಮಾಡಿಸದ ಹೊರತು ಅವನ ಕಾಯಕವು ವ್ಯಾಪಾರವೂ ಅಲ್ಲ, ಉದ್ಯಮವೂ ಅಲ್ಲ!

ಲೇಖಕ: ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.