ಅಸ್ಪೃಶ್ಯರನ್ನು ಅಂಬೇಡ್ಕರ್, ‘ಬಹಿಷ್ಕೃತ ಭಾರತೀಯರು’ ಎಂದು ವಿಷಾದದಿಂದ ಗುರುತಿಸಿದ್ದರು. ಸ್ವಾತಂತ್ರ್ಯ ಬಂದು ಬಹಳ ಕಾಲವಾಗಿದೆ. ಅಣ್ವಸ್ತ್ರಗಳ ತಯಾರಿಕೆಯಲ್ಲಿ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ಈಗ ಬಲಿಷ್ಠವಾಗಿದೆ. ಸನಾತನ ದೇಶದಲ್ಲಿ ಎಲ್ಲ ಬದಲಾವಣೆಗಳ ಜೊತೆಯಲ್ಲೇ ಜಾತಿಗಳು ಕೂಡ ಮುನ್ನೆಲೆಗೆ ಬಂದಿವೆ.
ದಾಸ್ಯದಿಂದ ಬಿಡುಗಡೆ ಪಡೆಯಲು ಭಾರತೀಯರು ಬಹಳ ಕಷ್ಟಪಟ್ಟರು. ನೂರಾರು ವರ್ಷ ಅನ್ಯರ ಆಕ್ರಮಣಗಳಿಗೆ
ಹೊಂದಿಕೊಂಡಿದ್ದರು. ಹಾಗಿದ್ದರೂ ಭಾರತೀಯರು ಯಾವತ್ತೂ ತಮ್ಮ ಜಾತಿಗಳನ್ನು ಬಿಟ್ಟುಕೊಟ್ಟಿರಲಿಲ್ಲ. ಅಸ್ಪೃಶ್ಯರು ಆದಿಯಿಂದಲೂ ಜಾತಿಯ ಶಾಪವಿಮೋಚನೆಗಾಗಿ ಎಷ್ಟೆಲ್ಲ ಬೇಡಿದರೂ ಅವರಿಗೆ ಜಾತಿ ವಿಮೋಚನೆಯ ಸ್ವಾತಂತ್ರ್ಯವೇ ಸಿಗಲಿಲ್ಲ.
ಈಗ ದೇಶೋದ್ಧಾರದ ಬಗ್ಗೆ ಅರ್ಥಶಾಸ್ತ್ರದ ಲೆಕ್ಕಾಚಾರಗಳು ಚೆನ್ನಾಗಿವೆ. ಒಂದು ದೇಶದ ಅಭಿವೃದ್ಧಿಯನ್ನು ತಲಾ ಆದಾಯದಿಂದ ಅಳೆಯುವುದು ಅತ್ತ ಇರಲಿ; ಜಾತಿಶ್ರೇಣಿಯ ಆದಾಯಗಳನ್ನು ಪರಿಗಣಿಸಿದರೆ ಜಗತ್ತಿನ ಅತಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿರುವ ಭಾರತೀಯರು ಯಾರು? ಹೇಗೆ ಅವರು ಅಂತಹ ಸ್ಥಾನ ತಲುಪಿದರು? ಜಾತಿಗಳ ಶ್ರೇಣಿಗೆ ತಕ್ಕಂತೆ ಅಭಿವೃದ್ಧಿ ಆಗು
ತ್ತಿದೆ. ಬಲಿಷ್ಠ ಜಾತಿಗಳು ರಾಜಕೀಯವನ್ನು ಉದ್ಯಮವಾಗಿಸಿಕೊಳ್ಳುವ ಮೂಲಕ ರಾಷ್ಟ್ರದ ಸಂಪತ್ತಿನ ಮೇಲೆ ಆಧಿಪತ್ಯ ಸ್ಥಾಪಿಸಿವೆ.
ಇಂಥಲ್ಲಿ ದಲಿತ ಭಾರತದ ಅಭಿವೃದ್ಧಿ ಹೇಗಿರಬಹುದು? ದಲಿತರ ಬಾಳಲ್ಲಿ ಬಹಳ ವ್ಯತ್ಯಾಸಗಳಾಗಿವೆಯಾದರೂ ವಿಮೋಚನೆಯ ನ್ಯಾಯ ದಕ್ಕಿರುವುದು ಅತ್ಯಲ್ಪ. ಹಳ್ಳಿಗಳ ಹಳೆಯ ಶೋಷಣೆಗಳಿಂದ ತಪ್ಪಿಸಿಕೊಂಡು ನಗರಗಳಿಗೆ ಹೋಗಿ ರೂಪಾಂತರಗೊಂಡ ಒಂದು ಅಸ್ಪೃಶ್ಯ ಭಾರತವನ್ನು ಊಹಿಸಿಕೊಳ್ಳಿ. ಅದು ಹೇಗೆ ಬದುಕುತ್ತದೆ? ಅದರ ನಿಜವಾದ ವಾಸ್ತವ ಏನು? ನಗರಗಳ ಅತಿಸೂಕ್ಷ್ಮ ಜಾಣ್ಮೆಯ ಹೊಸ ಬಗೆಯ ಅಸ್ಪೃಶ್ಯತೆ ಹೇಗೆ ಜಾಗೃತವಾಗಿರುತ್ತದೆ ಎಂಬುದನ್ನು ಹೇಗೆ ವಿವರಿಸುವುದು? ಅಂಬೇಡ್ಕರ್ ತಮ್ಮ ಕೊನೆಯ ದಿನಗಳಲ್ಲಿ ಈ ಬಗೆಯ ಸಂಕಟವನ್ನು ಎದುರಿಸಿದ್ದರು.
ಒಂದು ದೇಶದ ಅಭಿವೃದ್ಧಿಯನ್ನು ಸುಖ–ದುಃಖದಲ್ಲಿ; ಸಮಾನತೆಯಲ್ಲಿ; ಲಿಂಗತಾರತಮ್ಯ, ಜಾತಿತಾರತಮ್ಯವಿಲ್ಲದೆ, ಜಾತ್ಯತೀತವಾಗಿ; ಧರ್ಮಾತೀತವಾಗಿ ಗುರುತಿಸಲು ಬರುವುದಿಲ್ಲವೇ... ಅಂಕಿ ಅಂಶಗಳೇ ಮುಖ್ಯವಾದ ಅಭಿವೃದ್ಧಿಗೆ ಮನುಷ್ಯತ್ವವೇ ಇರದೇನೊ. ಅದಕ್ಕೆ ಲೆಕ್ಕ ಮಾತ್ರ ಮುಖ್ಯ. ದಲಿತರ ಮೇಲೆ ಸ್ವಾತಂತ್ರ್ಯಪೂರ್ವದಲ್ಲಿ ಹಲ್ಲೆಗಳೆಷ್ಟಾಗಿದ್ದವು, ಈಗ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಂಖ್ಯೆಯಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರಿಂದ ವಿಮೋಚನೆಯ ಅಭಿವೃದ್ಧಿಯನ್ನು ಅಳೆಯಬಾರದು. ಈಗಲೂ ಮಲ ಹೊರುವ ಪದ್ಧತಿ ಇದೆ. ದೇವದಾಸಿ ಪದ್ಧತಿ ಇದೆ, ಜೀತಗಾರಿಕೆಯಿದೆ. ಅಸ್ಪೃಶ್ಯರು ಮಾಡಲೇಬೇಕಿದ್ದ ಸನಾತನ ಚಾಕರಿಗಳು, ಸೇವೆಗಳು ಏನೇನಿದ್ದವೋ ಅವು ವೇಷ ಬದಲಿಸಿಕೊಂಡು ಹಾಗೇ, ಅಸಲಿಯಾಗಿಯೇ ಇವೆ. ಅಸ್ಪೃಶ್ಯ ಮಹಿಳೆಯರ ಮೇಲೆ ಎಷ್ಟೊಂದು ಅತ್ಯಾಚಾರ ಸಲೀಸಾಗಿ ಆಗುತ್ತಿದೆಯಲ್ಲಾ... ‘ಮೀ ಟೂ’ ಅಭಿಯಾನದ ಕಾಲದಲ್ಲೂ ಅವರು ಲೈಂಗಿಕ ಜೀತಗಾರಿಕೆಯನ್ನು ಒಪ್ಪಿ ಬದುಕುವ ನರಕ ಇದೆಯಲ್ಲಾ... ಒಪ್ಪಿತ ಅತ್ಯಾಚಾರಕ್ಕೆ ಶಿಕ್ಷೆಯೇ ಇಲ್ಲ. ಇದು ಆಧುನಿಕೋತ್ತರ ಭಾರತದ ತೆರೆಮರೆಯ ನಿತ್ಯದಂತಿದೆ.
‘ಸಂವಿಧಾನವು ಅಸ್ಪೃಶ್ಯರ ರಕ್ಷಾಕವಚ’ ಎಂದು ಒಂದು ಕಾಲಕ್ಕೆ ನಂಬಿದ್ದೆವು. ಅದರ ಬಲದಿಂದ ಎಲ್ಲೆಲ್ಲೋ ಹೋಗಿ ಬಚಾವಾಗಿದ್ದೆವು. ಈಗ ಪ್ರತಿಯೊಬ್ಬರ ಚಹರೆಯನ್ನು ಹುಡುಕಿ ಪಟ್ಟಿ ಮಾಡುವ ತಂತ್ರಜ್ಞಾನದ ಕಾರ್ಡುಗಳು ಎಲ್ಲರ ಜೇಬಲ್ಲೂ ಇವೆ. ಯಾರನ್ನು ಎಲ್ಲಿ, ಹೇಗೆ, ಯಾಕೆ ಹೊಡೆಯಬೇಕು ಎಂಬುದು ಮೇಲುಜಾತಿಗಳಿಗೆ ಈಗ ಸಲೀಸು. ಅಸ್ಪೃಶ್ಯ ಭಾರತ ತಾನು ವೇಷ ಮರೆಸಿ ತಪ್ಪಿಸಿ
ಕೊಂಡಿರುವೆ ಎಂದು ತಿಳಿದಿತ್ತು. ನಗರಗಳಲ್ಲಿ ದಲಿತರ ಮೇಲಿನ ಹೊಸ ಬಗೆಯ ಶೋಷಣೆ ಅಪರಿಮಿತವಾಗಿದೆ; ಚಾಣಾಕ್ಷವಾಗಿದೆ. ಅವರು ಅಸ್ಪೃಶ್ಯರ ಸ್ವಾಭಿಮಾನಕ್ಕೆ ತಿರುಗಿ ಹೊಡೆದಿರುತ್ತಾರೆ. ಅದು ಬಲವಾದ ಗಾಯವಾಗಿ ಒಳಗೇ ಹೆಪ್ಪುಗಟ್ಟಿ, ಕೀವಾಗಿ, ನಂಜಾಗಿ ಬಿರಿಯುವಾಗ ಮಾತ್ರ ತನಗೆ ಯಾರೋ ಹೊಡೆದಿದ್ದಾರೆ ಎಂದು ಗೊತ್ತಾಗುತ್ತದೆ. ಒಂದು ಜನ್ಮಕ್ಕಾಗುವಷ್ಟು ಏಟನ್ನು ಯಾರೋ ಒಬ್ಬ ಮೇಲಿನವನು ಕೊಟ್ಟಿರುತ್ತಾನೆ. ಯಾರು ಬಲಿ ಹಾಕಿದರು ಎಂಬುದೇ ಗೊತ್ತಾಗುವುದಿಲ್ಲ. ಯಾರು ಎಲ್ಲಿ ಅರೆಜೀವ ಮಾಡಿದರು ಎಂಬುದೂ ತಿಳಿಯದು. ಕೆಲವೊಮ್ಮೆ ಇವರೇ ತಿವಿದದ್ದು ಎಂದು ತಿಳಿಯುತ್ತದೆ. ಮಾಯದ ಆ ತಿವಿತದಿಂದ ರಕ್ತ ಸೋರುತ್ತಿರುತ್ತದೆ. ಆದರೂ ಬ್ಯಾಂಡೇಜು ಹಾಕಿಸಿಕೊಂಡು ಬಂದು ತಿವಿದವನ ಜೊತೆಯೇ ಸುಖ– ದುಃಖವನ್ನು ಮಾತನಾಡಿ, ‘ನೀವೇ ನನಗೆ ದಾರಿ ತೋರಬೇಕು’ ಎಂದು ದೈನೇಸಿಯಾಗಿ ಅವರ ಮುಂದೆ ನಡುಬಗ್ಗಿಸಿ ನಮಸ್ಕರಿಸಬೇಕಿರುತ್ತದೆ.
ಶೋಷಣೆಯೇ ಒಂದು ಜಾತಿನಿಷ್ಠ ಸಮಾಜದ ಮಾನ ದಂಡವಾಗಿದ್ದಲ್ಲಿ, ಮಾನವಹಕ್ಕುಗಳ ಬಗ್ಗೆ ಏನೆನ್ನುವುದು? ಶಿಕ್ಷಣ ಪಡೆದು, ಎಂಥದೋ ನೌಕರಿ ಪಡೆದು, ಯಾವುದೋ ಸ್ಲಮ್ಮಿನ ಪಕ್ಕ ಮನೆ ಮಾಡಿ, ತಮ್ಮ ಮಕ್ಕಳನ್ನು ವಿದೇಶಗಳಿಗೆ ಕಳಿಸಿಬಿಡಬೇಕು ಎಂದು ಕನಸು ಕಾಣುವ ಅಸ್ಪೃಶ್ಯ ಕುಟುಂಬಗಳು ಎಷ್ಟಿವೆ ಎಂದು ಲೆಕ್ಕ ಹಾಕಿದವರಾರು? ಇಂಥಲ್ಲಿಯೇ ಗ್ರಾಮೀಣ ಭಾರತದ ಕುರುಡು ಅಸ್ಪೃಶ್ಯತೆಗಿಂತ ನಗರಗಳ ಸುಶಿಕ್ಷಿತರ ಅಸ್ಪೃಶ್ಯತೆಯ ಹಿಂಸೆ ಕ್ರೂರವಾಗಿರುವುದು. ಜಾತಿಗಳ ಸಮಾನಾಂತರ ಅಭಿವೃದ್ಧಿ ಸಾಧ್ಯವೇ?
ದಲಿತರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಪ್ರತ್ಯೇಕ ಹಣ ತೆಗೆದಿಟ್ಟರೆ ಅದರಿಂದ ಅಸ್ಪೃಶ್ಯತೆಯು ಅಳಿಯುವುದೇ? ಸರ್ಕಾರಗಳಲ್ಲಿ ಇಷ್ಟೊಂದು ದಲಿತ ಕಲ್ಯಾಣದ ಯೋಜನೆಗಳಿದ್ದರೂ ಆ ಬಗೆಯ ಹಣವೆಲ್ಲ ಎಲ್ಲಿ ಸೋರಿ ಹೋಯಿತು?
ಅಸ್ಪೃಶ್ಯರ ಮೇಲಿನ ಶೋಷಣೆಯ ನೆತ್ತರು ತೊಟ್ಟಿಕ್ಕುತ್ತಲೇ ಇದೆ. ದೇಶವೂ ಬಹಳ ಮುಂದುವರಿದಿದೆ. ಜಾತಿ, ವರ್ಗ, ಲಿಂಗಭೇದಗಳಿಂದಾದ ಮಾನವತ್ವದ ಹತ್ಯೆ ಬೇರೆ ಯಾವುದರಿಂದಲೂ ಆಗಿಲ್ಲ. ದುಷ್ಟ ಸಂಹಾರದ ಸಮಾನತೆಯಲ್ಲಿ ದುಷ್ಟರು ಯಾರೋ, ಶಿಷ್ಟರು ಯಾರೋ ಹೇಗೆ ಹೇಳುವುದು? ದಲಿತೋದ್ಧಾರ ಎಷ್ಟಾಗಿದೆ? ಉತ್ತರ ಭಾರತದಲ್ಲಿ ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿ ನೇಣಿಗೇರಿಸಿದ್ದರೂ ಆ ಅಪರಾಧಿಗಳಿಗೆ ಯಾವ ಪಾಪಪ್ರಜ್ಞೆಯೂ ಉಂಟಾಗಲಿಲ್ಲ. ಅಸ್ಪೃಶ್ಯರನ್ನು ಯಾರು ಬೇಕಾದರೂ ದಂಡಿಸಬಹುದು ಎಂಬ ಸನಾತನ ಹಕ್ಕು ನಾಶವಾಗದೆ ಭಾರತಕ್ಕೆ ವಿಮೋಚನೆ ಇಲ್ಲ. ಯಾವ ದೇಶದಲ್ಲಿ ಶೋಷಣೆಯ ಪ್ರಮಾಣ ತೀವ್ರವಾಗಿದೆ ಎಂದರೆ, ಬಹುಶಃ ನಮ್ಮ ದೇಶವೇ ಮೊದಲೇನೊ.
ಕಂಬಾಲಪಲ್ಲಿಯಲ್ಲಿ ಹೊಲೆಯರನ್ನು ಇಡೀ ಊರ ಎಲ್ಲ ಜಾತಿಗಳು ಒಟ್ಟಾಗಿ ಸುಟ್ಟುಹಾಕಿದವು. ಯಾರಿಗೂ ಶಿಕ್ಷೆಯಾಗಲಿಲ್ಲ. ಸಾವಿರಾರು ವರ್ಷಗಳ ಜಾತಿ ಹಿಂಸೆಯು ಹಿಂದೆ ಇನ್ನೂ ಭೀಕರವಾಗಿತ್ತು. ಅದನ್ನೆಲ್ಲ ಸಹಿಸಿಕೊಂಡು ಬದುಕಿರುವುದೇ ಅಸ್ಪೃಶ್ಯರ ಅತ್ಯುನ್ನತ ಅಭಿವೃದ್ಧಿ ಏನೊ! ಎಂತಹ ವಿಪರ್ಯಾಸ; ಇಂಥಿಂಥವರೇ ಸುಟ್ಟವರು ಎಂದು ಕಂಬಾಲಪಲ್ಲಿ ಪ್ರಕರಣದಲ್ಲಿ ಕೋರ್ಟ್‌ನಲ್ಲಿ ಸಾಕ್ಷ್ಯ ನುಡಿದಿದ್ದವರೇ ಬದುಕುಳಿಯುವ ಭಯದಲ್ಲಿ ತಾವೇ ಹೇಳಿದ ಸಾಕ್ಷ್ಯಕ್ಕೆ ವಿರುದ್ಧವಾಗಿ, ‘ಇವರಾರೂ ಅಪರಾಧಿಗಳಲ್ಲ’ ಎಂದು ಹೇಳಿ ಪಾತಕಿಗಳನ್ನು ಕಾಪಾಡಿದರು. ಈ ಮಾನವೀಯತೆಯು ಉಳಿದೆಲ್ಲ ಜಾತಿಗಳಲ್ಲಿ ಎಷ್ಟರ ಪ್ರಮಾಣದಲ್ಲಿ ವೃದ್ಧಿಸಿರಬಹುದು...
ಇಂಥವುಗಳಲ್ಲೇ ಇಬ್ಬರು ಅಸ್ಪೃಶ್ಯರು ರಾಷ್ಟ್ರಪತಿಗಳಾದರು. ಪ್ರಧಾನಿ ಸ್ಥಾನವನ್ನು ಜಗಜೀವನರಾಂ ಅವರಿಗೆ ತಪ್ಪಿಸಲಾಯಿತು. ದೇಶಕ್ಕೆ ನ್ಯಾಯ ಸಾಕ್ಷಾತ್ಕಾರದ ಸಂವಿಧಾನವನ್ನು ಅಂಬೇಡ್ಕರ್ ಕೊಟ್ಟರು. ದಲಿತರ ಮಾನವ ಶ್ರಮಕ್ಕೆ ಯಾವ ಗೌರವವೂ ಇಲ್ಲ. ಅಂತಃಕರಣದ ವಿಪರೀತ ಬರಗಾಲ ದೇಶದಲ್ಲಿ ತುಂಬಿದೆ. ಅಸಹನೆಯ ಸಾಮೂಹಿಕ ಕಾಯಿಲೆ ಉಲ್ಬಣಿಸಿದೆ. ಮೇಲೆ ಮಾತ್ರ ಭಾರತವು ಅಮೆರಿಕ ಮತ್ತು ಚೀನಾಗಳ ಜೊತೆ ಪೈಪೋಟಿಗಿಳಿದು ದೊಡ್ಡಣ್ಣನಾಗಲು ಹವಣಿಸುತ್ತಿದೆ.
ಲೇಖಕ: ಪ್ರಾಧ್ಯಾಪಕ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.