ADVERTISEMENT

ನುಲಿಯ ಚಂದಯ್ಯ ಹೊಸೆದ ಅರಿವಿನ ಹಗ್ಗ

ಅರುಣ್ ಜೋಳದ ಕೂಡ್ಲಿಗಿ
Published 19 ಆಗಸ್ಟ್ 2024, 0:31 IST
Last Updated 19 ಆಗಸ್ಟ್ 2024, 0:31 IST
<div class="paragraphs"><p>ಬಸವಣ್ಣ</p></div>

ಬಸವಣ್ಣ

   

ಕೆಲವು ವರ್ಷಗಳಿಂದ ಜನಸಮುದಾಯಗಳು 12ನೇ ಶತಮಾನದ ವಚನ ಚಳವಳಿಯಲ್ಲಿ ಭಾಗಿಯಾದ 770 ಅಮರಗಣದಲ್ಲಿ (ಅನುಭವ ಮಂಟಪದ ಸದಸ್ಯರು) ತಮ್ಮ ಕುಲದ ಪೂರ್ವಜರನ್ನು ಗುರುತಿಸಿಕೊಳ್ಳುತ್ತಿವೆ. ಇದೊಂದು ಮಹತ್ವದ ಬೆಳವಣಿಗೆ. ವಚನಕಾರರ ಕಾಲದ ಕಾಯಕಜೀವಿಗಳ ಬಗ್ಗೆ ಮತ್ತಷ್ಟು ಅಧ್ಯಯನ ಮಾಡಲು, ಆಯಾ ವಚನಕಾರರ ಬಗ್ಗೆ ಮತ್ತಷ್ಟು ತಿಳಿಯಲು ಇದು ನೆರವಾಗಿದೆ. ಅಂತೆಯೇ 770 ಅಮರಗಣದಲ್ಲಿ ಯಾವ ಸಮುದಾಯವೂ ನಮ್ಮವರೆಂದು ಗುರುತಿಸಿಕೊಳ್ಳಲಾಗದ ವಚನಕಾರರೂ ಇದ್ದಾರೆ.

ಇಂದು (ಆ. 19) ವಚನಕಾರ ನುಲಿಯ ಚಂದಯ್ಯನ ಜಯಂತಿಯನ್ನು ಆಚರಿಸಲಾಗುತ್ತಿದೆ. ಮುಖ್ಯವಾಗಿ ನುಲಿಯನ್ನು (ಹಗ್ಗ) ನೂಲುವ ವೃತ್ತಿಯನ್ನು ಮಾಡುತ್ತಿದ್ದ ಚಂದಯ್ಯನನ್ನು ಕರ್ನಾಟಕದಲ್ಲಿ ನೆಲೆಸಿದ ಕುಳುವ ಸಮುದಾಯ ತನ್ನ ಮೂಲಪುರುಷನೆಂದು ಗುರುತಿಸಿಕೊಂಡಿದೆ. ಚಂದಯ್ಯನು ಕಲ್ಯಾಣದಲ್ಲಿ ಮೆದೆಹುಲ್ಲಿನಿಂದ ಮಾಡಿದ ನುಲಿಯನ್ನು ಹೊಸೆದು ಹಗ್ಗ ಕಣ್ಣಿ ಮಾಡಿ ಮಾರಿ ಬದುಕುವ ಕಾಯಕಜೀವಿಯಾಗಿದ್ದ ಬಗ್ಗೆ ವಚನದಲ್ಲಿ ಉಲ್ಲೇಖಗಳಿವೆ.

ADVERTISEMENT

ಆರ್.ನರಸಿಂಹಾಚಾರ್ ಅವರು ಕವಿಚರಿತೆಯಲ್ಲಿ ಚಂದಯ್ಯನ ಕಾಲವನ್ನು ಪ್ರಸ್ತಾಪಿಸಿದ್ದಾರೆ. ಈತ ಬಸವಣ್ಣನ ಸಮಕಾಲೀನ. ಚಂದಯ್ಯ ಕಟ್ಟಿಕೊಂಡಿದ್ದ ಲಿಂಗವು ಆತ ಒಮ್ಮೆ ಹುಲ್ಲು ಕೊಯ್ಯುವಾಗ ನೀರಲ್ಲಿ ಬೀಳುತ್ತದೆ. ಆದರೂ ಅವನು ಅದನ್ನು ಎತ್ತಿಕೊಳ್ಳದೆ ಹುಲ್ಲಿನ ಹೊರೆ ಹೊತ್ತು ನಡೆದುಬಿಡುತ್ತಾನೆ. ಕಾಯಕದಲ್ಲಿ ದೇವರನ್ನು ಕಾಣುವ ಚಂದಯ್ಯನಿಗೆ ತಾನು ಕಟ್ಟಿಕೊಂಡಿದ್ದ ಲಿಂಗ ಸಂಕೇತವಷ್ಟೆ. ಯುದ್ಧಕ್ಕೆ ಹೊರಟ ಸೈನಿಕ ಮನೆಯ ಹಂಗು ತೊರೆದಂತೆ, ದೇವರ ಮೇಲೆ ಭಕ್ತಿ ಇಟ್ಟವ ವ್ಯಕ್ತಿಗತ ಸುಖ, ಸಂಪತ್ತನ್ನು ತೊರೆಯಬೇಕು. ಹೀಗೆ ತೊರೆಯದವರನ್ನು ‘ಚಂದೇಶ್ವರ’ ಮೆಚ್ಚಲಾರ ಎಂದು ಚಂದಯ್ಯ ವಚನ ಕಟ್ಟಿದ್ದಾನೆ.

ಚಂದಯ್ಯನ ಹುಟ್ಟೂರು ವಿಜಯಪುರದ ಸಮೀಪದ ಶಿವಣಗಿ. ಚಂದಯ್ಯನ ಕಾಯಕವನ್ನು ಆಧರಿಸಿ ನೋಡಿದರೆ ಈತ ಕೊರವ ಸಮುದಾಯಕ್ಕೆ ಸೇರಿದಾತ. ವೃತ್ತಿಗೆ ಅನುಸಾರವಾಗಿ ಪ್ರಾದೇಶಿಕವಾಗಿ ಈ ಸಮುದಾಯವನ್ನು ಕೊರವ, ಕೊರಚ, ಕುಂಚಿಕೊರವ ಎಂದೆಲ್ಲ ಕರೆಯಲಾಗುತ್ತದೆ. ಈ ಸಮುದಾಯಗಳಿಗೆ ಸೇರಿದವರು ದ್ರಾವಿಡ ಭಾಷೆಯಾದ ತಮಿಳಿಗೆ ಹತ್ತಿರದ ಕುಳವ (ಕುಳಿರ್) ಭಾಷೆ ಆಡುತ್ತಾರೆ. ಈ ನೆಲೆಯಲ್ಲಿ ಈ ಸಮುದಾಯವನ್ನು ಕುಳವ ಸಮುದಾಯ ಎನ್ನಬಹುದೆಂದು ಭಾಷಾ ತಜ್ಞರು ಗುರುತಿಸುತ್ತಾರೆ.

ಸಮಗಾರ ಹರಳಯ್ಯನ ಮಗ ಶೀಲವಂತ ಮತ್ತು ಬ್ರಾಹ್ಮಣ ಮಧುವರಸನ ಮಗಳು ಲಾವಣ್ಯಳ ಅಂತರ್ಜಾತಿ ವಿವಾಹದ ನಂತರ ಕಲ್ಯಾಣದಲ್ಲಿ ಸನಾತನಿಗಳು ದೊಡ್ಡ ಗಲಭೆ ಎಬ್ಬಿಸುತ್ತಾರೆ. ಪರಿಣಾಮವಾಗಿ, ಬಸವಣ್ಣ ಗಡಿಪಾರಾಗಿ ಮಂತ್ರಿ ಪದವಿಗೆ ರಾಜೀನಾಮೆ ನೀಡಿ ಕೂಡಲಸಂಗಮದತ್ತ ತೆರಳಿ ಕೊನೆಯುಸಿರೆಳೆಯುತ್ತಾನೆ. ಶರಣರ ಕಗ್ಗೊಲೆಗಳು ನಡೆಯುತ್ತವೆ. ಉಳಿದ ಶರಣರು ವಚನದ ಕಟ್ಟುಗಳ ಜತೆ ಉಳವಿಯ ಕಡೆ ಧಾವಿಸುತ್ತಾರೆ. ಉಳವಿಯಲ್ಲಿ ಚನ್ನಬಸವಣ್ಣ ಉಸಿರೆಳೆದ ನಂತರ ನುಲಿಯ ಚಂದಯ್ಯ, ಅಕ್ಕ ನಾಗಮ್ಮ, ಹಿಪ್ಪರಗಿ ಮಲ್ಲಿಕಾರ್ಜುನ, ರುದ್ರಮುನಿ ಅವರಂತಹ ಶರಣರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಗೋಣಿಬೀಡಿಗೆ ಬರುತ್ತಾರೆ. ಹೀಗೆ ಕಲ್ಯಾಣದ ಹತ್ಯಾಕಾಂಡದ ನಂತರ ವಚನದ ಕಟ್ಟುಗಳ ರಕ್ಷಣೆಯಲ್ಲಿ ಚಂದಯ್ಯನ ಪಾತ್ರ ಇರುವುದು ಗಮನಾರ್ಹ.

ಚಂದಯ್ಯ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯ ನಂದಿ ಗ್ರಾಮದಲ್ಲಿ ಸ್ವಲ್ಪಕಾಲ ಉಳಿಯುತ್ತಾನೆ. ಮುಂದೆ ಚನ್ನಗಿರಿ ತಾಲ್ಲೂಕು ಸೂಳೆಕೆರೆ (ಶಾಂತಿಸಾಗರ) ಸಮೀಪದ ದುಮ್ಮಿಯ ನಾಯಕ ದುಮ್ಮಣ್ಣನ ಹೆಂಡತಿ ಪದ್ಮಾವತಿಯು ಚಂದಯ್ಯನಿಗೆ ಆಶ್ರಯ ಕೊಡುತ್ತಾಳೆ. ಪದ್ಮಾವತಿಯು ಕೆರೆ ದಡದಲ್ಲಿ ಮಂಟಪ ಕಟ್ಟಿಸುತ್ತಾಳೆ. ಜಾತಿಯಲ್ಲಿ ಕೊರವನಾದ ಕಾರಣಕ್ಕೆ ಚಂದಯ್ಯನನ್ನು ಕೆರೆ ನೀರು ಮುಟ್ಟಲು ಬಿಡದ ಕಾರಣ, ಪಕ್ಕದಲ್ಲಿ ಈತನಿಗಾಗಿ ಬಾವಿ ತೋಡಿಸಲಾಗುತ್ತದೆ. ಈಗಿನ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಹೋಬಳಿಯ ನುಲೇನೂರು, ತಾಳ್ಯ ಹೋಬಳಿಯ ನುಲೇನೂರು ನುಲಿಯ ಚಂದಯ್ಯ ಕೊನೆಯದಾಗಿ ಕಾಯಕ ಮಾಡಿದ್ದಕ್ಕೆ ಪುರಾವೆಗಳಾಗಿವೆ. ಈ ಎಲ್ಲಾ ಕಡೆಗಳಲ್ಲಿ ಚಂದಯ್ಯನ ಹೆಸರಿನಲ್ಲಿ ಆಚರಣೆಗಳು ನಡೆಯುತ್ತವೆ.

ಚಂದಯ್ಯ ‘ಚಂದೇಶ್ವರ ಲಿಂಗ’ ಎನ್ನುವ ಅಂಕಿತದಲ್ಲಿ ರಚಿಸಿದ 49 ವಚನಗಳು ಲಭ್ಯವಾಗಿವೆ. ಈ ಎಲ್ಲಾ ವಚನಗಳಲ್ಲಿ ಕಾಯಕ ಮತ್ತು ದಾಸೋಹದ ಮಹತ್ವವನ್ನು ಬೇರೆ ಬೇರೆ ನೆಲೆಗಳಲ್ಲಿ ಎದುರುಗೊಳ್ಳಲಾಗಿದೆ. ನಿಜದ ಭಕ್ತಿಯ ಬಗ್ಗೆ, ಕಾಯಕ ಶುದ್ಧಿಯ ಬಗ್ಗೆ ಚಂದಯ್ಯ ಮತ್ತೆ ಮತ್ತೆ ಮಾತನಾಡುತ್ತಾನೆ. ಅಪ್ರಾಮಾಣಿಕತೆ, ಆಡಂಬರದ ಭಕ್ತಿ, ನಡೆ ನುಡಿಯಲ್ಲಿನ ವ್ಯತ್ಯಾಸದ ಬಗ್ಗೆ ಕಟುವಾಗಿ ಟೀಕಿಸಿದ್ದಾನೆ. ಸಹ ವಚನಕಾರರು ಚಂದಯ್ಯನ ಬಗ್ಗೆ ವಚನ ಕಟ್ಟಿದ್ದಾರೆ. ಮುಂದೆ ಜನಪದ ಸಮುದಾಯಗಳು ಚಂದಯ್ಯನ ಬಗ್ಗೆ ಪದ ಕಟ್ಟಿ ಹಾಡುವ ಮೂಲಕ ಆತನನ್ನು ಉಳಿಸಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.