ನೀವೊಂದು ಹೋಟೆಲಿನಲ್ಲಿ ಕಾಫಿ ಕುಡಿಯುತ್ತ ಫೋನ್ ಮೇಲೆ ಕಣ್ಣಾಡಿಸುತ್ತಿದ್ದೀರಿ ಎಂದುಕೊಳ್ಳಿ. ರವಿವರ್ಮನ ಚಿತ್ರಗಳಿಗೆ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನದ ಮೂಲಕ ಜೀವ ತುಂಬಿ ಅವುಗಳನ್ನೊಂದು ವಿಡಿಯೊ ರೂಪಕ್ಕೆ ತಂದ ಸುದ್ದಿ, ಚೀನಾದಲ್ಲಿ ಮನುಷ್ಯನ ದೇಹದ ಸ್ಟೆಮ್ ಸೆಲ್ಸ್ ಬಳಸಿ ಮಧುಮೇಹಕ್ಕೆ ಮದ್ದು ಕಂಡುಹಿಡಿದ ಸುದ್ದಿ, ಹಿಜ್ಬುಲ್ಲಾ ಉಗ್ರರು ಬಳಸುತ್ತಿದ್ದ ಸಾವಿರಾರು ಪೇಜರ್‌ಗಳನ್ನು ಇಸ್ರೇಲ್ ಹೊಸತೊಂದು ತಂತ್ರಜ್ಞಾನದ ಮೂಲಕ ಒಮ್ಮೆಲೇ ಸ್ಫೋಟಿಸಿದ ಸುದ್ದಿ... ಹೀಗೆ ಮೂರು ಸುದ್ದಿಗಳನ್ನು ಗಮನಿಸುತ್ತೀರಿ. ವಿಜ್ಞಾನ ಮತ್ತು ತಂತ್ರಜ್ಞಾನದ ಈ ನಾಗಾಲೋಟದ ಪ್ರಗತಿ ನಿಮ್ಮಲ್ಲಿ ಅಚ್ಚರಿ ಮತ್ತು ಆತಂಕ ಎರಡನ್ನೂ ಹುಟ್ಟಿಸುತ್ತದೆ. ಸಾಧನೆಯ ತುತ್ತತುದಿಯನ್ನು ತಲುಪುವ ಹಂತಕ್ಕೆ ಮನುಕುಲ ಈಗಾಗಲೇ ಬಂದಿದೆಯೇ, ಇನ್ನೇನಾದರೂ ಉಳಿದಿದೆಯೇ ಎಂಬ ಪ್ರಶ್ನೆ ನಿಮ್ಮಲ್ಲಿ ಏಳಬಹುದು.
ಇಂತಹುದೇ ಕೌತುಕದ ಪ್ರಶ್ನೆಯ ಸುತ್ತ ಯೋಚನೆಗೆ ಹಚ್ಚುವ, ಕಲ್ಪನೆಗಳ ವಿಸ್ತಾರ ಹಿಗ್ಗಿಸುವ ಪುಸ್ತಕ ‘ದಿ ಬಿಗಿನಿಂಗ್ ಆಫ್ ಇನ್‍ಫಿನಿಟಿ’. ಬ್ರಿಟಿಷ್ ಭೌತಶಾಸ್ತ್ರಜ್ಞ ಡೇವಿಡ್ ಡ್ವಾಯ್ಶ್ 12 ವರ್ಷಗಳ ಹಿಂದೆ ಬರೆದ ಈ ಪುಸ್ತಕ ಇಂದಿಗೂ ತಿಳಿವಳಿಕೆ, ಪ್ರಗತಿ ಮತ್ತು ಮಿತಿಯಿಲ್ಲದ ಮನುಷ್ಯನ ಸೃಜನಶೀಲತೆಯ ಮೂಲವನ್ನು ಅರಸುವ ಒಂದು ಅಪರೂಪದ ಪುಸ್ತಕವಾಗಿ ಓದಲ್ಪಡುತ್ತಿದೆ. ಡ್ವಾಯ್ಶ್ ಅವರ ಪ್ರಕಾರ ಮನುಕುಲದ ಪ್ರಗತಿಗೆ ಕೊನೆಯಿಲ್ಲ. ಅದು ಈಗಷ್ಟೇ ಶುರುವಾಗಿದೆ. ಆದ್ದರಿಂದಲೇ ಪುಸ್ತಕಕ್ಕೆ ಇಂತಹದೊಂದು ಹೆಸರು. ನಮ್ಮ ಪ್ರಗತಿಯ ಮಿತಿ ‘ಸದ್ಯದ ನಮ್ಮ ಜ್ಞಾನದ ಮಿತಿ’ಯೇ ವಿನಾ ಹೊರಗಿನ ಅಡೆತಡೆಗಳು ಹೇರಿರುವ ಮಿತಿಯಲ್ಲ. ಆದ್ದರಿಂದ ಮನುಕುಲ ಎದುರಿಸುತ್ತಿರುವ ಯಾವುದೇ ಸಮಸ್ಯೆಯನ್ನು ನಮ್ಮ ಜ್ಞಾನದ ಬಲದಿಂದ ಬಗೆಹರಿಸಬಹುದು ಮತ್ತು ಇದೇ ಕಾರಣಕ್ಕೆ ಭವಿಷ್ಯದ ಬಗ್ಗೆ ನಾವೊಂದು ಆಶಾಭಾವನೆ ಇಟ್ಟುಕೊಳ್ಳಬಹುದು ಅನ್ನುವುದು ಅವರ ವಾದದ ಸಾರ.
ಡ್ವಾಯ್ಶ್ ಅವರ ಪ್ರಕಾರ ಎಲ್ಲಿಯವರೆಗೆ ನಾವು ಜ್ಞಾನದ ಅರಸುವಿಕೆಯಲ್ಲಿರುತ್ತೇವೆಯೋ ಅಲ್ಲಿಯವರೆಗೆ ಮನುಷ್ಯನ ಪ್ರಗತಿಗೆ ಮಿತಿಯಿಲ್ಲ. ವಿಜ್ಞಾನದಲ್ಲಿ ಯಾವುದೇ ಹೊಸ ತಿಳಿವಿನ ಬುನಾದಿ ಅದಕ್ಕೊಂದು ಸರಿಯಾದ ವಿವರಣೆ ಕಟ್ಟುವುದರಲ್ಲಿದೆ. ಏನು ಹಾಗೆಂದರೆ? ಒಂದು ಚೆಂಡನ್ನು ಕೈಗೆತ್ತಿಕೊಂಡು ಮೇಲಕ್ಕೆ ಎಸೆದರೆ ಅದು ಕೆಳಗೆ ಬರುತ್ತದೆ. ಯಾಕೆ ಅನ್ನುವ ಪ್ರಶ್ನೆಗೆ ಸಿದ್ಧ ಉತ್ತರ ‘ಅದು ಯಾವತ್ತೂ ಹಾಗೆಯೇ ಆಗುತ್ತದೆ’ ಅನ್ನುವುದು. ಇದೂ ಒಂದು ವಿವರಣೆಯೇ. ಆದರೆ ಸರಿಯಾದ ವಿವರಣೆಯಲ್ಲ. ‘ಮೇಲೆಸೆದ ಚೆಂಡು ಭೂಮಿಯ ಗುರುತ್ವಾಕರ್ಷಣೆ ಬಲದಿಂದಾಗಿ ಕೆಳಗೆ ಬಂತು ಮತ್ತು ಅದು ಭೂಮಿಯ ಮೇಲಿನ ಸಕಲ ವಸ್ತುಗಳಿಗೂ ಅನ್ವಯಿಸುತ್ತದೆ’ ಅನ್ನುವುದು ಸರಿಯಾದ ವಿವರಣೆ. ಒಂದು ಕಾಲದಲ್ಲಿ ಭೂಮಿಯೇ ಸೌರ ಮಂಡಲದ ಕೇಂದ್ರ ಬಿಂದು ಮತ್ತು ಸೂರ್ಯನು ಭೂಮಿಯ ಸುತ್ತ ಸುತ್ತುತ್ತಾನೆ ಅನ್ನುವ ವಾದವನ್ನೇ ಎಲ್ಲರೂ ನಂಬಿದ್ದರು. ಆಗ ಬಂದ ಕೋಪರ್ ನಿಕಸ್ ಇದನ್ನು ಅಲ್ಲಗಳೆದು ಸೌರ ಮಂಡಲದ ಕೇಂದ್ರ ಬಿಂದು ಸೂರ್ಯ ಮತ್ತು ಭೂಮಿ ಸೇರಿದಂತೆ ಎಲ್ಲ ಗ್ರಹಗಳೂ ಅದರ ಸುತ್ತ ಸುತ್ತುತ್ತಿವೆ ಅನ್ನುವ ಹೊಸ ವಿವರಣೆ ಕೊಟ್ಟಾಗ ಅದನ್ನು ಬಹುತೇಕರು ನಂಬಲು ಸಿದ್ಧರಿರಲಿಲ್ಲ. ದಿನವೂ ಬೆಳಿಗ್ಗೆ ಒಂದು ದಿಕ್ಕಿನಲ್ಲಿ ಹುಟ್ಟಿ ಸಂಜೆಗೆ ಇನ್ನೊಂದು ದಿಕ್ಕಿನಲ್ಲಿ ಮುಳುಗುವುದು ಕಣ್ಣಿಗೆ ಕಾಣುವಾಗ, ನಮ್ಮ ಅನುಭವವನ್ನೇ ಅಲ್ಲಗಳೆಯುವ ಈ ಹೊಸ ವಿವರಣೆಯನ್ನು ಒಪ್ಪುವುದಾದರೂ ಹೇಗೆ ಸಾಧ್ಯವಿತ್ತು?
ವಿಜ್ಞಾನಿಗಳಿಂದಲೂ, ಎಲ್ಲದಕ್ಕೂ ದೈವವೇ ಕಾರಣ ಎಂದು ನಂಬಿದ್ದ ಜನರಿಂದಲೂ ಇದಕ್ಕೆ ವಿರೋಧ ಬಂತು. ಆದರೆ ಸರಿಯಾದ ವಿವರಣೆ ಇವೆಲ್ಲವನ್ನೂ ದಕ್ಕಿಸಿಕೊಂಡು ಸತ್ಯದ ಅರಸುವಿಕೆಗೆ ಹೊಸ ದಾರಿಯನ್ನು ಹುಟ್ಟುಹಾಕಿತು. ಕಂಡಿದ್ದನ್ನು, ಅನುಭವಿಸಿದ್ದನ್ನು ಮಾತ್ರವೇ ವಿವರಿಸಲಾಗುವ ಸ್ಥಾಪಿತ ವಿಜ್ಞಾನದ ಮಾದರಿಯನ್ನು ದಾಟಿ ಕಾಣದ್ದನ್ನು, ಊಹಿಸಲಾಗದ್ದನ್ನು ವಿವರಿಸುವ ಶಕ್ತಿಯುಳ್ಳ ವಿವರಣೆಯೇ ಸರಿಯಾದ ವಿವರಣೆ. ಹಾಗೆ ನೋಡಿದರೆ ನಮ್ಮ ಬಹುತೇಕ ಥಿಯರಿಟಿಕಲ್ ಜ್ಞಾನ ಅನುಭವಕ್ಕೆ ಹೊರತಾದ ನೆಲೆಯಲ್ಲಿದೆ. ಉದಾಹರಣೆಗೆ, ಸೂರ್ಯನ ಮೈಬಿಸಿ ಎಷ್ಟಿದೆ, ಆತ ನಮ್ಮಿಂದ ಎಷ್ಟು ದೂರ ಇದ್ದಾನೆ ಎಂದು ಯಾರಾದರೂ ಅನುಭವಿಸಿ ಕಂಡುಹಿಡಿಯಲು ಸಾಧ್ಯವಿತ್ತೇ? ಅದನ್ನು ಸೂಕ್ತ ಪ್ರಯೋಗ ಮತ್ತು ಪರಿಶೀಲನೆಯ ವಿಮರ್ಶೆಗೆ ಒಳಪಡಿಸುವ ‘ಸರಿಯಾದ ವಿವರಣೆ’ಯ ಮೂಲಕವೇ ನಾವು ಅರ್ಥ ಮಾಡಿಕೊಂಡಿದ್ದೇವೆ. ಹೀಗಾಗಿ ಈ ಮಾರ್ಗವೇ ನಮ್ಮ ಪ್ರಗತಿಯ ದಾರಿ.
ಸರಿಯಾದ ವಿವರಣೆ ಕಟ್ಟಲು ಸಾಧ್ಯವಾದರೆ ಯಾವುದೇ ದೊಡ್ಡ ಸಮಸ್ಯೆಯನ್ನು ಬಗೆಹರಿಸಬಹುದು ಮತ್ತು ಅಂತಹದೊಂದು ಶಕ್ತಿ ವಿಶ್ವದಲ್ಲಿ ಮನುಷ್ಯರಿಗೆ ಮಾತ್ರ ಇದೆ ಅನ್ನುವುದು ಅವರ ಇನ್ನೊಂದು ವಾದ. ಮನುಷ್ಯರು ಭೂಮಿಯ ಮೇಲಿನ ಪರಿಸರದ ಕಾರಣದಿಂದಾಗಿ ಬದುಕಿ ಉಳಿದವರಲ್ಲ, ಅವರು ಅದರ ಹೊರತಾಗಿಯೂ ಬದುಕಿ ಉಳಿದಿದ್ದಾರೆ. ಜೀವ ವಿಕಾಸದ ಕೋಟ್ಯಂತರ ವರ್ಷಗಳ ವಾಸ್ತವವನ್ನು ಗಮನಿಸಿದರೆ ಪರಿಸರ ನಮ್ಮನ್ನು ಪೊರೆಯುತ್ತಿರುವ ತಾಯಿಯಾಗಿಲ್ಲ. ಭೂಮಿಯ ಮೇಲಿನ ಲಕ್ಷಾಂತರ ಜೀವಪ್ರಭೇದಗಳನ್ನು ಪರಿಸರವೇ ಅಳಿಸಿಲ್ಲವೆ? ಇಷ್ಟಾಗಿಯೂ ಭೂಮಿಯ ಎಲ್ಲ ಭಾಗಗಳಲ್ಲೂ, ಎಲ್ಲ ತರಹದ ಪರಿಸರದಲ್ಲೂ ಮನುಷ್ಯರಿದ್ದಾರೆ ಎಂದಾದರೆ ಅದು ಪರಿಸರವನ್ನೂ ಒಗ್ಗಿಸಿಕೊಳ್ಳುವ ಸಾಮರ್ಥ್ಯವು ಮನುಷ್ಯರಲ್ಲಿ ಇರುವುದಕ್ಕೆ ಕನ್ನಡಿಯಲ್ಲವೇ? ಸಿಡುಬು, ಪ್ಲೇಗ್, ಪೋಲಿಯೊ ತರಹದ ಕಾಯಿಲೆಗಳು ಬಗೆಹರಿಸಲಾಗದವು ಎಂದೇ ಸಾವಿರಾರು ವರ್ಷ ನಂಬಲಾಗಿತ್ತು. ಸರಿಯಾದ ವಿವರಣೆಗಳ ಮೂಲಕ ಜ್ಞಾನದ ಅರಸುವಿಕೆ ಈ ಸಮಸ್ಯೆಗಳನ್ನು ಈಗ ಇಲ್ಲವಾಗಿಸಿಲ್ಲವೇ? ಹೀಗಾಗಿ ಇಂದು ನಾವು ನೋಡುತ್ತಿರುವ ಪರಿಸರದಲ್ಲಿನ ಬದಲಾವಣೆ, ಬಡತನ, ಎ.ಐ. ತರಹದ ತಂತ್ರಜ್ಞಾನ ನಮ್ಮ ಕೈ ಮೀರಿ ಬೆಳೆಯಬಹುದು ಅನ್ನುವ ಆತಂಕ ಸೇರಿದಂತೆ ಯಾವುದೇ ಸಮಸ್ಯೆಯನ್ನೂ ಬಗೆಹರಿಸಬಹುದು ಅನ್ನುವುದು ಅವರ ವಾದ.
ಅದೇನೋ ಸರಿ, ಆದರೆ ಭೂಮಿಯ ಮೇಲೆ ಇಂದು ನಾವು ನೋಡುತ್ತಿರುವ ಯುದ್ಧ, ಹಲವಾರು ದೇಶಗಳಲ್ಲಿನ ರಾಜಕೀಯ ತಲ್ಲಣಗಳು, ಆರ್ಥಿಕ ಅಸಮಾನತೆ, ಪರಿಸರದ ಬಿಕ್ಕಟ್ಟುಗಳು ಮುಂತಾದ ಸಮಸ್ಯೆಗಳನ್ನು ಡ್ವಾಯ್ಶ್ ಅವರ ‘ಭರವಸೆಯ ತತ್ತ್ವ’ದ ಮೂಲಕ ಬಗೆಹರಿಸಲು ನಿಜಕ್ಕೂ ಸಾಧ್ಯವೇ ಅನ್ನುವ ಪ್ರಶ್ನೆಗೆ ಅವರ ಉತ್ತರ ‘ಸಾಧ್ಯವಿದೆ’. ಅವರ ಪ್ರಕಾರ ಯಥಾಸ್ಥಿತಿ ವಾದದ ಮೂಲಕ ಇದಾವುದನ್ನೂ ಬದಲಿಸಲಾಗದು. ಆದರೆ, ವಿಮರ್ಶೆಗೆ ತೆರೆದುಕೊಂಡ ಸರಿಯಾದ ವಿವರಣೆಯನ್ನು ಕಟ್ಟುವ ಮೂಲಕ ಪರಿಹಾರದ ಸ್ವರೂಪವನ್ನು ಕಂಡುಕೊಳ್ಳಬಹುದು. ಉದಾಹರಣೆಗೆ, ಪರಿಸರದ ಬದಲಾವಣೆಗೆ ಕಾರಣವಾದ ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ದೇಶಗಳ ಪ್ರಗತಿಯನ್ನು ನಿಲ್ಲಿಸಬೇಕು ಅನ್ನುವ ವಾದದ ಬದಲಿಗೆ ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಹೊಸ ತಂತ್ರಜ್ಞಾನಗಳನ್ನು ಇನ್ನಷ್ಟು ವೇಗವಾಗಿ ಕಂಡುಕೊಳ್ಳಬೇಕು ಮತ್ತು ಇದಕ್ಕೆ ಬೇಕಿರುವುದು ಪುಸ್ತಕದಲ್ಲಿ ವಾದಿಸಿರುವಂತೆ ‘ಸರಿಯಾದ ವಿವರಣೆ’ಯ ಮೂಲಕ ಪರಿಹಾರ ಹುಡುಕುವ ವೈಜ್ಞಾನಿಕ ಸಂಶೋಧನೆಯ ದಾರಿ. ಕೋಟಿಗಟ್ಟಲೆ ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದ ಸಾಂಕ್ರಾಮಿಕ ಕಾಯಿಲೆಗಳನ್ನೇ ದಾಟಿ ಬಂದಿರುವ ಮನುಕುಲಕ್ಕೆ ಈ ಸಮಸ್ಯೆಗಳನ್ನೂ ಬಗೆಹರಿಸಿಕೊಳ್ಳುವ ಶಕ್ತಿಯಿದೆ ಅನ್ನುವುದು ಅವರ ವಾದ.
ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಪರಿಣಾಮಕಾರಿಯಾದ ಪರಿಹಾರ ಕಲ್ಪಿಸುವ ಶಕ್ತಿ ಪಡೆದರೂ ಬದಲಾವಣೆಗೆ ಕೂಡಲೇ ಒಗ್ಗಿಕೊಳ್ಳದ ಮನುಷ್ಯರ ನಡವಳಿಕೆ, ನಮ್ಮ ಆರ್ಥಿಕ ಮಾದರಿಗಳು, ಆಡಳಿತ ವ್ಯವಸ್ಥೆ ಮುಂತಾದವು ಡ್ವಾಯ್ಶ್ ಅವರಿಗಿರುವಷ್ಟು ಆಶಾಭಾವನೆಯನ್ನು ಎಲ್ಲ ಓದುಗರಿಗೂ ಕೊಡಲಾರವು. ಹೀಗಿದ್ದರೂ 21ನೇ ಶತಮಾನದ ಸವಾಲುಗಳಿಗೆ ಬೇಕಿರುವ ಭರವಸೆಯ ಕಿರಣವೊಂದನ್ನು ಈ ಪುಸ್ತಕ ನೀಡುತ್ತದೆ.
ಪ್ರಶ್ನಿಸುವ, ವಿಮರ್ಶಿಸುವ ಮುಕ್ತ ಪರಿಸರವನ್ನು ನಮ್ಮ ನಾಗರಿಕತೆಯ ಭಾಗವಾಗಿ ಪಡೆದುಕೊಳ್ಳುವುದು, ಅದನ್ನು ಸಾಧ್ಯವಾಗಿಸುವ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿಕೊಳ್ಳುವುದು, ವಿಜ್ಞಾನದ ಈ ಪಯಣದಲ್ಲಿ ಹೆಚ್ಚೆಚ್ಚು ಜನರಿಗೆ ಪಾಲ್ಗೊಳ್ಳಲು ಸಾಧ್ಯವಾಗುವಂತೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಜನರ ಭಾಷೆಯಲ್ಲಿ ಕಟ್ಟಿಕೊಳ್ಳುವುದು ಮುಂತಾದ ಹೆಜ್ಜೆಗಳ ಮೂಲಕ ಮಾತ್ರ ಬದಲಾವಣೆಗೆ ತಡೆಯೊಡ್ಡುವ ಸಾಂಸ್ಕೃತಿಕ ಮತ್ತು ರಾಜಕೀಯ ವಿರೋಧಗಳನ್ನು ದಾಟಿ ಈ ಹೊತ್ತಿನ ಸವಾಲುಗಳಿಗೂ ಪರಿಹಾರ ಕಂಡುಕೊಳ್ಳಬಹುದು. ಡ್ವಾಯ್ಶ್ ಅವರ ಈ ಪುಸ್ತಕ ಅಂತಹದೊಂದು ಭರವಸೆಯನ್ನಂತೂ ಖಂಡಿತ ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.