ADVERTISEMENT

ಬೆಂಗಳೂರಿನ ಎನ್‌ಜಿಓದಿಂದ ಮತದಾರರ ಮಾಹಿತಿ ಸಂಗ್ರಹಣೆ: ಅಪಾಯಕ್ಕೆ ಹಿಡಿದ ಕೈಗನ್ನಡಿ

ಖಾಸಗಿ ಸಂಸ್ಥೆಗಳ ಮಾಹಿತಿ ಸಂಗ್ರಹಣೆಯ ಅಪಾಯಕ್ಕೆ ಹಿಡಿದ ಕೈಗನ್ನಡಿ

ಗಿರೀಶ್ ಲಿಂಗಣ್ಣ
Published 22 ನವೆಂಬರ್ 2022, 8:54 IST
Last Updated 22 ನವೆಂಬರ್ 2022, 8:54 IST
   

ಮತದಾರರ ಗುರುತಿನ ಚೀಟಿಯನ್ನು ಪರಿಷ್ಕರಿಸುವ ಕಾರಣ ನೀಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸೇರಿದ ಸಂಸ್ಥೆಯೊಂದು ಪ್ರತಿಯೊಬ್ಬ ನಾಗರಿಕರ ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕಿದೆ. 2022ರ ಸೆಪ್ಟೆಂಬರ್ ತಿಂಗಳಲ್ಲಿ ಬಿಬಿಎಂಪಿಗೆ ಮತದಾರರ ಮಾಹಿತಿಗಳ ಅಕ್ರಮ ಸಂಗ್ರಹಣೆಯ ಕುರಿತಾದ ಎಚ್ಚರಿಕೆ ನೀಡಲಾಯಿತು. ಆದರೂ ಈ ಚುನಾವಣಾ ಸಂಬಂಧಿತ ಕಾರ್ಯಾಚರಣೆಗಳಿಗಾಗಿ ಮಲ್ಲೇಶ್ವರಂ ಮೂಲದ ಎನ್‌ಜಿಓ ಜೊತೆ ಕೈಗೊಳ್ಳಲಾದ ವ್ಯವಸ್ಥೆಗಳನ್ನು ಬದಲಾಯಿಸುವ ಕುರಿತಾಗಿ ಯಾವುದೇ ತುರ್ತು ಕ್ರಮಗಳನ್ನೂ ಬಿಬಿಎಂಪಿ ಕೈಗೊಳ್ಳಲಿಲ್ಲ.

ಅಕ್ರಮ ಮಾಹಿತಿ ಗಣಿಗಾರಿಕೆ

ಆರಂಭದಲ್ಲಿ ನೀಡಲಾದ ದೂರಿನಲ್ಲಿ ಬಿಬಿಎಂಪಿ ಅಧಿಕಾರಿಗಳಿಗೆ ಎನ್‌ಜಿಓ ಟ್ರಸ್ಟ್ ನಡೆಸಿರುವ ಮತದಾನ ಕೇಂದ್ರಗಳ ನಕ್ಷೆ, ಬಿಬಿಎಂಪಿ ಬ್ಯಾಡ್ಜ್‌ಗಳು ಹಾಗೂ ಸರ್ವೇ ವರದಿಗಳು ನಿಯಮಗಳನ್ನು ಉಲ್ಲಂಘಿಸಿವೆ ಎಂದು ಮಾಹಿತಿ ನೀಡಲಾಯಿತು. ಸೆಪ್ಟೆಂಬರ್ 20, 2022ರಂದು ಸಮನ್ವಯ ಟ್ರಸ್ಟ್ ಈ ಕುರಿತು ದೂರು ದಾಖಲಿಸಿತು. ಆ ಬಳಿಕ ಬಿಬಿಎಂಪಿಯ ನೋಡಲ್ ಅಧಿಕಾರಿ ಈ ಪತ್ರದ ನಕಲನ್ನು ಹೆಚ್ಚಿನ ಸ್ಪಷ್ಟೀಕರಣ ನೀಡುವಂತೆ ಕೋರಿ ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಸೆಪ್ಟೆಂಬರ್ 22ರಂದು ಕಳುಹಿಸಿ ಕೊಟ್ಟಿದ್ದರು.

ADVERTISEMENT

ನವೆಂಬರ್ 3ರಂದು ಚಿಲುಮೆ ಎನ್‌ಜಿಓ ಬಿಬಿಎಂಪಿಯ ಪತ್ರಕ್ಕೆ ಉತ್ತರ ನೀಡಿತು. ಅದೇ ದಿನ ಸಮನ್ವಯ ಟ್ರಸ್ಟ್ ಚಿಲುಮೆ ಎನ್‌ಜಿಓ ವಿರುದ್ಧ ದಾಖಲಿಸಿದ ದೂರನ್ನು ಹಿಂಪಡೆದು, ತನಗೆ ಆ ಸಂಸ್ಥೆಯೊಡನೆ ಯಾವ ಸಮಸ್ಯೆಯೂ ಇಲ್ಲ ಎಂದು ಹೇಳಿತು.

ಬೆಂಗಳೂರಿನ ಆರ್ ಆರ್ ನಗರ, ಮಹದೇವಪುರ, ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿನ ಮನೆಗಳಲ್ಲಿ ಬಿಬಿಎಂಪಿ ಚಿಲುಮೆ ಎನ್‌ಜಿಓ ಜೊತೆ ತನ್ನ ಬಾಂಧವ್ಯವನ್ನು ನವೆಂಬರ್ 2ರಂದು ಕೊನೆಗೊಳಿಸುವ ಮೊದಲೇ ಸರ್ವೆ ನಡೆಸಲಾಗಿತ್ತು. ಅದಾಗಿ ಎರಡು ವಾರಗಳ ಬಳಿಕ, ನವೆಂಬರ್ 15ರಂದು ಬಿಬಿಎಂಪಿ ಮತದಾರರ ಮಾಹಿತಿ ಕಳವಾಗಿದೆ ಎಂದು ಪೊಲೀಸ್ ದೂರು ದಾಖಲಿಸಿತು. ಆ ಬಳಿಕ ಇದು ಒಂದು ದೊಡ್ಡ ವಿವಾದದ ರೂಪ ಪಡೆಯಿತು.

ಆಗಸ್ಟ್ ತಿಂಗಳಿಂದ ನವೆಂಬರ್ ತನಕ ಬೆಂಗಳೂರಿನ ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತದಾರರ ಮಾಹಿತಿ ಕಳವು ಮಾಡಿದೆ ಎಂದು ರಾಜಕೀಯ ಆರೋಪಗಳು ಕೇಳಿ ಬಂದಿದ್ದವು. ಆದರೆ ಆ ಮಾಹಿತಿಗಳನ್ನು ಮರಳಿ ಪಡೆಯಲು ಸಾಧ್ಯವೇ ಎನ್ನುವುದು ಈಗ ಮುಂದಿರುವ ದೊಡ್ಡ ಸವಾಲಾಗಿದೆ. ಈಗಿನ್ನೂ ತಪ್ಪಾಗಿ ಅನ್ವಯಿಸಲಾದ ಈ ಮಾಹಿತಿಗಳನ್ನು ಮರಳಿ ಪಡೆಯಲು ಬಿಬಿಎಂಪಿ ಪ್ರಯತ್ನಿಸುತ್ತಿದೆಯೇ ಎಂಬುದರ ಕುರಿತು ಇನ್ನೂ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ.

ವಿಧಾನಸಭಾ ಚುನಾವಣೆಗಳು ಬರುವ ಮೊದಲಿನ ಅವಧಿಯಲ್ಲಿ ಈ ರೀತಿ ಗಳಿಸಲಾಗಿರುವ ಮಾಹಿತಿಗೆ ಅಪಾರವಾದ ಮಹತ್ವವಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ಅತ್ಯಂತ ವೃತ್ತಿಪರವಾಗಿ ನಡೆಯುತ್ತಿವೆ. ಇದಕ್ಕಾಗಿ ಸಲಹಾ ಸಂಸ್ಥೆಗಳು ಹಾಗೂ ಅವುಗಳ ಬಳಿ ಇರುವ ಮಾಹಿತಿಗಳು ಬಹುದೊಡ್ಡ ಪಾತ್ರ ನಿರ್ವಹಿಸುತ್ತವೆ.

ಇಂತಹ ಮಾಹಿತಿಗಳ ಸಂಗ್ರಹಣೆ ಕೇವಲ ಸಾರ್ವಜನಿಕರ ಖಾಸಗಿತನದ ಹಕ್ಕನ್ನು ಉಲ್ಲಂಘಿಸುವುದು ಮಾತ್ರವಲ್ಲದೆ, ರಾಜಕೀಯ ಪುಡಾರಿಗಳಿಗೆ ಮತದಾರರನ್ನು ತಡೆಗಟ್ಟುವ ನ್ಯಾಯಪರವಲ್ಲದ ಒಂದು ಮೇಲುಗೈಯನ್ನೂ ಒದಗಿಸುತ್ತದೆ.

ಇಲ್ಲಿಯವರೆಗೆ ಲಭಿಸಿರುವ ಮಾಹಿತಿಗಳ ಪ್ರಕಾರ, ಆರೋಪ ಎದುರಿಸುತ್ತಿರುವ ಚಿಲುಮೆ ಸಂಸ್ಥೆಯೂ ಸಹ ಒಂದು ರಾಜಕೀಯ ಸಲಹಾ ಸಂಸ್ಥೆಯನ್ನು ನಿಯಂತ್ರಿಸುತ್ತದೆ. ವಿರೋಧ ಪಕ್ಷಗಳು ಆ ರಾಜಕೀಯ ಸಲಹಾ ಸಂಸ್ಥೆಗೂ, ಆಡಳಿತ ಪಕ್ಷದ ಓರ್ವ ಸದಸ್ಯರಿಗೂ ನಿಕಟ ಸಂಪರ್ಕವಿದೆ ಎಂದು ಆರೋಪಿಸಿವೆ. ವಿಪಕ್ಷಗಳ ಈ ಆರೋಪವು ಇಂತಹ ಒಂದು ಅಪಾಯಕಾರಿ ಸಾಧ್ಯತೆ ಇರುವುದನ್ನೂ ಸೂಚಿಸುತ್ತದೆ. ಒಂದು ವೇಳೆ ಈ ರೀತಿಯ ಜಾಲಬಂಧ ಏನಾದರೂ ಏರ್ಪಟ್ಟಿರುವುದೇ ಆದರೆ, ಮತದಾರರ ಮಾಹಿತಿಯನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿ, ಅವರನ್ನು ನಿಯಂತ್ರಿಸಲು ಸಾಧ್ಯವಾಗುವಂತೆ ಮಾಡುತ್ತದೆ. ಪ್ರಸ್ತುತ ಅಮೆರಿಕಾದಲ್ಲೂ ಇದು ಕಾಳಜಿಯ ವಿಚಾರವಾಗಿದೆ. ಆದರೆ ಈ ಕ್ಷಣದಲ್ಲಿ ಇಂತಹ ಘಟನೆ ನಡೆದಿದೆಯೇ ಎನ್ನಲು ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲ. ಆದರೆ ಇಂತಹ ಸಾಧ್ಯತೆಗಳು ಇವೆ ಎನ್ನುವ ಕಾರಣಕ್ಕಾಗಿ ಇದರ ಕುರಿತು ಕೂಲಂಕಷ ವಿಚಾರಣೆ ನಡೆಯಬೇಕು.

ಈ ವಿಚಾರದಲ್ಲಿ ವಿಚಾರಣೆ ನಡೆಸಿದರೆ ಆಗ ಇಂತಹ ಮಾಹಿತಿ ಕಳವನ್ನು ತಡೆಗಟ್ಟಬಹುದೇನೋ. ಆದರೆ ಸಂಸ್ಥೆ ಕಲೆಹಾಕಿದ್ದ ಮಾಹಿತಿಯನ್ನು ಮರಳಿ ಪಡೆಯಬಹುದೇ ಎಂಬ ಕುರಿತು ಯಾವ ಭರವಸೆಯೂ ನೀಡಲಾಗದು. ಅದೂ ಅಲ್ಲದೆ ಇಂತಹ ಮಾಹಿತಿಗಳು ಕ್ಲೌಡ್‌ನಲ್ಲಿ ಎಷ್ಟು ಪ್ರತಿಗಳಾಗಿ ಬೇಕಾದರೂ ಲಭ್ಯವಿರಬಹುದು. ಕ್ಲೌಡ್‌ನಲ್ಲಿ ಸಂಗ್ರಹಿಸಲ್ಪಟ್ಟ ಮಾಹಿತಿಯನ್ನು ಜಗತ್ತಿನ ಯಾವ ಭಾಗದಿಂದಲಾದರೂ ಪಡೆದುಕೊಳ್ಳಬಹುದು. ಆದ್ದರಿಂದ ದುಡ್ಡು ಕೊಡಲು ಸಿದ್ಧರಿರುವ ಜನರಿರುವಾಗ ಈ ಮಾಹಿತಿಗಳು ಹರಿದಾಡದಂತೆ ತಡೆಯುವುದು ಅತ್ಯಂತ ಕಷ್ಟಕರವಾಗಿದೆ.

ಚಾಲ್ತಿಯಲ್ಲಿರುವ ಮಾಹಿತಿ ಕಾಯ್ದೆಗಳು

ಈ ವಿಚಾರ ಬೆಳಕಿಗೆ ಬರುವ ಮೊದಲೇ, ಮತದಾರರ ಪಟ್ಟಿಗಳ ಮಾಹಿತಿ ಹಂಚುವಂತಹ ಸಾಕಷ್ಟು ಅನುಚಿತ ಅಭ್ಯಾಸಗಳು ನಡೆದು ಬಂದಿದ್ದವು. ಮತದಾರರ ಮಾಹಿತಿಗಳು ಹಲವು ಕಾರಣಗಳಿಗೆ, ಹಲವು ರೀತಿಯಿಂದ ಬಳಕೆಯಾಗುತ್ತದೆ. ಇದೊಂದು ರಾಷ್ಟ್ರೀಯ ಭದ್ರತೆಗೆ ಸಂಬಂಧಪಟ್ಟ ವಿಷಯವೂ ಆಗಿದೆ.

ಕುಖ್ಯಾತವಾಗಿರುವ ಬ್ರಿಟಿಷ್ ಸಂಸ್ಥೆಯಾದ ಕೇಂಬ್ರಿಜ್ ಅನಾಲಿಟಿಕಾ ಮೇಲೆ 2017ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಮತದಾರರನ್ನು ಗುರಿ ಮಾಡಿದ ಜಾಹೀರಾತುಗಳನ್ನು ಪ್ರಸಾರ ಮಾಡಿ, ಮತದಾನದ ಮೇಲೆ ಪ್ರಭಾವ ಬೀರಿದ ಆರೋಪ ಬಂದಿತ್ತು. ಸಾರ್ವಜನಿಕರ ಆನ್ ಲೈನ್ ಮಾಹಿತಿಗಳು ಮತ್ತು ಚುನಾವಣಾ ಗ್ರಹಿಕಾ ಮಾಹಿತಿಗಳು ದಿನೇ ದಿನೇ ಹತ್ತಿರವಾಗುತ್ತಿವೆ. ಒಂದು ವೇಳೆ ಸಾರ್ವಜನಿಕರು ಸತತವಾಗಿ ಆನ್ ಲೈನ್‌ನಲ್ಲೇ ಇರುವಂತೆ ನೋಡಿಕೊಂಡರೆ, ಆಗ ಅವರ ಮೇಲೆ ಪ್ರಭಾವ ಬೀರುವುದು ಇನ್ನಷ್ಟು ಸುಲಭವಾಗುತ್ತದೆ.

ಮೊದಲಿನಿಂದಲೂ ಭಾರತದ ಸರ್ಕಾರಗಳು ಸಹ ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತೀಯರಿಗೆ ಸಂಬಂಧಿಸಿದ ಮಾಹಿತಿಗಳನ್ನು ಭಾರತದಲ್ಲಿಯೇ ಇಡುವಂತೆ ಒತ್ತಾಯಿಸುತ್ತಾ ಬಂದಿದ್ದವು. ಈ ವಿಷಯದಲ್ಲಿ ಭಾರತ ಹಲವು ಬೆದರಿಕೆಗಳನ್ನು ಎದುರಿಸುತ್ತಿದೆ. ಮೊದಲನೆಯದಾಗಿ, ಮಾಹಿತಿಗಳನ್ನು ಹೇಗೆ ಸಂಗ್ರಹಿಸಲಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಕಾನೂನಿನ ಪ್ರಕಾರ, ಸಂಗ್ರಹಿಸಲಾಗಿರುವ ಬಹುತೇಕ ಮಾಹಿತಿಗಳು ಅನಾಮಧೇಯವಾಗಿರಬೇಕು. ಆದರೆ ಈಗ ಜನರ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ವಿಶಿಷ್ಟವಾದ ಇಲೆಕ್ಟ್ರಾನಿಕ್ ಉಪಕರಣಗಳಿವೆ. ಅವುಗಳಲ್ಲಿ ಅತ್ಯಂತ ಹೆಚ್ಚು ಮಾಹಿತಿಗಳು ಸಂಗ್ರಹಿಸಲ್ಪಟ್ಟಿರುತ್ತವೆ. ಈ ಉಪಕರಣಗಳು ಮತ್ತು ಮಾಹಿತಿಗಳು ಜೊತೆಯಾಗಿ ಇದ್ದಾಗ ಅನಾಮಧೇಯ ಮಾಹಿತಿಗಳು ವೈಯಕ್ತಿಕ ಮಾಹಿತಿಗಳಾಗಿ ಬದಲಾಗುತ್ತವೆ. ಅದೇ ರೀತಿ ಮತದಾರರ ಮಾಹಿತಿಗಳನ್ನೂ ಸಹ ಇತರ ಮಾಹಿತಿಗಳೊಡನೆ ಬೆರೆಸಿದಾಗ ಮತದಾರರ ಕುರಿತಾದ ಸಮಗ್ರ ಚಿತ್ರಣ ಲಭ್ಯವಾಗುತ್ತದೆ.

ಖಾಸಗಿ ಸಂಸ್ಥೆಗಳು ಈ ರೀತಿಯಾಗಿ ನಮ್ಮೆಲ್ಲರ ಕುರಿತಾದ ವ್ಯಕ್ತಿಚಿತ್ರಗಳನ್ನು ನಿರ್ಮಿಸಲು ಸಾಧ್ಯವಾದಾಗ ಅವುಗಳು ಈ ಮಾಹಿತಿಗಳನ್ನು ತಮಗೆ ಅತಿಹೆಚ್ಚು ಹಣ ನೀಡುವವರಿಗೆ ಮಾರಾಟ ಮಾಡುವುದೂ ಸಾಧ್ಯ. ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ಇದು ನಮ್ಮ ಸಮಗ್ರ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಕೆಲವು ವರ್ಷಗಳ ಹಿಂದೆ ಸ್ಟಾರ್ವಾ ಎಂಬ ಹೆಸರಿನ ಓಟಕ್ಕೆ ಸಂಬಂಧಿಸಿದ ಆ್ಯಪ್ ಬಳಕೆಯಲ್ಲಿತ್ತು. ಅದನ್ನು ಪ್ರಪಂಚದಾದ್ಯಂತ ದೂರದ ನಿರ್ಜನ ಪ್ರದೇಶಗಳಲ್ಲಿ ಮತ್ತು ಅಜ್ಞಾತ ಮಿಲಿಟರಿ ತಾಣಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಮೆರಿಕನ್ ಸೈನಿಕರು ಬಳಸುತ್ತಿದ್ದರು. ಆ ಆ್ಯಪ್ ಸೈನಿಕರು ಓಡಿರುವ ಮಾಹಿತಿಯನ್ನು ಪ್ರದೇಶದ ಮಾಹಿತಿಯೊಡನೆ ಹೀಟ್ ಮ್ಯಾಪ್ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಬಯಲು ಮಾಡುತ್ತಿತ್ತು. ಇದರ ಪರಿಣಾಮವಾಗಿ ವಿದೇಶೀ ಗುಪ್ತಚರ ಸಂಸ್ಥೆಗಳು ಅಮೆರಿಕಾದ ಸೈನಿಕರು ಅಜ್ಞಾತ ಪ್ರದೇಶಗಳಲ್ಲಿ ನಡೆಸಿದ ಓಟದ ಮಾಹಿತಿಗಳನ್ನು ಸಂಗ್ರಹಿಸಿ, ಅದರಿಂದಾಗಿ ಹನ್ನೆರಡಕ್ಕೂ ಹೆಚ್ಚು ಸೇನಾ ನೆಲೆಗಳನ್ನು ಪತ್ತೆ ಹಚ್ಚಿದ್ದರು.

ಭಾರತಕ್ಕೆ ಈ ಅಪಾಯದ ಕುರಿತಾದ ಸ್ಪಷ್ಟ ಅರಿವಿದೆ. ಆದ್ದರಿಂದ ಭಾರತ ಎರಡು ಕಾಯಿದೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಅವೆಂದರೆ ಖಾಸಗಿ ಮಾಹಿತಿ ಕಾಯಿದೆ ಹಾಗೂ ವೈಯಕ್ತಿಕವಲ್ಲದ ಮಾಹಿತಿ ಕಾಯಿದೆ (ಎನ್‌ಪಿಡಿಬಿ). ಎನ್‌ಪಿಡಿಬಿ ಅಡಿಯಲ್ಲಿ ಕಂಪನಿಗಳು ಒಂದು ವ್ಯವಸ್ಥೆಯಡಿ ಬೇರೆ ಕಂಪನಿಗಳಿಗೆ ಕಾನೂನುಬದ್ಧವಾಗಿ ಮಾಹಿತಿಗಳನ್ನು ಮಾರಾಟ ಮಾಡಬಹುದು. ಒಂದು ವೇಳೆ ವೈಯಕ್ತಿಕವಲ್ಲದ ಮಾಹಿತಿಗಳು ಇತರ ಮಾಹಿತಿಗಳ ಜೊತೆ ಸೇರಿದಾಗ ಅವುಗಳ ಅನಾಮಧೇಯತೆ ಇಲ್ಲವಾದರೆ ಆಗ ಅವು ಇನ್ನಷ್ಟು ಕಟ್ಟುನಿಟ್ಟಾದ ವೈಯಕ್ತಿಕ ಮಾಹಿತಿ ಕಾಯಿದೆಯಡಿ ಬರುತ್ತವೆ.

ಅದರಲ್ಲೂ ಮತದಾರರ ಮಾಹಿತಿಗಳು ಏನಾದರೂ ಶತ್ರು ದೇಶಗಳಿಗೆ ಲಭ್ಯವಾದರೆ ಅವರು ಆ ಮಾಹಿತಿಗಳನ್ನು ಬಳಸಿ, ಭಾರತದ ಚುನಾವಣೆಗಳು ಹಾದಿ ತಪ್ಪುವಂತೆಮಾಡುವಅಪಾಯವಿದೆ.

ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.