ADVERTISEMENT

ಪಾಕಿಸ್ತಾನದಲ್ಲಿ ನೀರಿನ ‘ತುರ್ತು ಸ್ಥಿತಿ’

ಚಿಕ್ಕ ಬಾಟಲಿಯಲ್ಲಿ ಶುದ್ಧ ನೀರು ಇದ್ದರೂ ಅದು ನಮ್ಮನ್ನು ರೋಗಗಳಿಂದ ಕಾಪಾಡುತ್ತಿಲ್ಲ

ಮೊಹಮ್ಮದ್ ಹನೀಫ್
Published 16 ಡಿಸೆಂಬರ್ 2018, 19:45 IST
Last Updated 16 ಡಿಸೆಂಬರ್ 2018, 19:45 IST
   

ವಾರದಲ್ಲಿ ಎರಡು ಬಾರಿ ನಾನು ನನ್ನ ಮನೆಯ ಸಮೀಪದ ಅಂಗಡಿಯೊಂದಕ್ಕೆ ‘ನೆಸ್ಲೆ ಪ್ಯೂರ್‌ ಲೈಫ್‌’ನ ನಾಲ್ಕು ಖಾಲಿ ಬಾಟಲಿಗಳನ್ನು ಒಯ್ಯುತ್ತೇನೆ. ಅಲ್ಲಿಂದ ನಾಲ್ಕು ಬಾಟಲಿ ಭರ್ತಿ ನೀರು ತಂದುಕೊಳ್ಳುತ್ತೇನೆ. ಪ್ರತಿ ಬಾಟಲಿಯಲ್ಲಿ 18.9 ಲೀಟರ್ ಶುದ್ಧ ಕುಡಿಯುವ ನೀರು ಇರುತ್ತದೆ. ಬಾಟಲಿ ಮೇಲೆ ಅಂಟಿಸಿರುವ ಚೀಟಿಯು ನನಗೆ ಪ್ರತಿದಿನ ಕನಿಷ್ಠ ಎಂಟು ಗ್ಲಾಸ್ ನೀರು ಕುಡಿಯುವಂತೆ ಹೇಳುತ್ತದೆ.

ನಾವು ಕುಡಿಯಲು, ಚಹಾ ಮಾಡಲು, ಅಡುಗೆಗೆ, ಐಸ್‌ ಮಾಡಲು ಬಳಸುವುದು ಇದೇ ನೀರನ್ನು. ಪಾಕಿಸ್ತಾನದಲ್ಲಿ ನಲ್ಲಿಯಲ್ಲಿ ಬರುವ ನೀರನ್ನು ಕುಡಿಯುವುದೆಂದರೆ ಕುಟುಂಬದ ಆರೋಗ್ಯವನ್ನು ಅಪಾಯಕ್ಕೆ ಒಡ್ಡುವುದು ಎಂದು ಅರ್ಥ. ಸ್ನಾನಕ್ಕೆ, ಬಟ್ಟೆ ತೊಳೆಯಲು, ಮನೆಯ ನೆಲ ಒರೆಸಲು ನಾವು ಟ್ಯಾಂಕರ್ ನೀರು ಖರೀದಿಸಬೇಕು. ಟ್ಯಾಂಕರ್‌ ನೀರು ಎಷ್ಟು ಹೊತ್ತಿಗೆ ಮನೆಯ ಬಳಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ– ಅದು ಬೆಳಗಿನ ಜಾವ ಮೂರು ಗಂಟೆಗೆ ಬಂದರೂ ಪುಣ್ಯವೇ!

ಕೆಲವೊಮ್ಮೆ ನಾನು ಯುರೋಪಿಗೆ ಭೇಟಿ ನೀಡುತ್ತೇನೆ. ಅಲ್ಲಿ ನಲ್ಲಿ ತಿರುಗಿಸಿಕೊಂಡು ಒಂದು ಗ್ಲಾಸ್ ನೀರನ್ನು ಹಾಗೆಯೇ ಕುಡಿಯಬಹುದು, ಸಾರ್ವಜನಿಕ ಸ್ಥಳಗಳಲ್ಲಿ ಇರುವ ಕಾರಂಜಿಯ ನೀರನ್ನು ಕೂಡ ಭಯವಿಲ್ಲದೆ ಕುಡಿದು ಖುಷಿಪಡಬಹುದು.

ADVERTISEMENT

ನೀರಿನ ಕೊರತೆ ಎಂಬುದು ಪಾಕಿಸ್ತಾನದಲ್ಲಿ ಗಂಭೀರ ಚರ್ಚೆಯ ವಸ್ತು, ಆಗಾಗ ನಡೆಯುವ ಪ್ರತಿಭಟನೆಗಳಿಗೆ ಮೂಲ, ಅಪರೂಪವಾಗಿರುವ ಸಾರ್ವಜನಿಕ ಬಾವಿಗಳ ಬಳಿ ಉದ್ದನೆಯ ಸರತಿ ಸಾಲು ಸೃಷ್ಟಿಯಾಗುವುದಕ್ಕೆ ಕಾರಣ. ಎರಡು ಅಣೆಕಟ್ಟುಗಳ ನಿರ್ಮಾಣಕ್ಕೆ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರು ನಿಧಿಯೊಂದನ್ನು ಸ್ಥಾಪಿಸಿದ್ದಾರೆ, ಈ ನಿಧಿಗೆ ದೇಣಿಗೆ ನೀಡಿ ಎಂದು ಕೇಳುತ್ತಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಸಿಗುವ ನೀರನ್ನು ಕುಡಿಯುವುದು ಇಲ್ಲಿ ಹಿಂದೆಲ್ಲ ಅಪಾಯಕಾರಿ ಆಗಿರಲಿಲ್ಲ. 90ರ ದಶಕದ ಕೊನೆಯ ಭಾಗದಲ್ಲಿ ಕೂಡ ಬಾಟಲಿ ನೀರು ದೊಡ್ಡವರಲ್ಲಿ ದೊಡ್ಡವರ ಪಾಲಿಗೆ ಮಾತ್ರ ಮೀಸಲಾಗಿತ್ತು. ಆದರೆ ಮಾಲಿನ್ಯ ಹಾಗೂ ಮೂಲಸೌಕರ್ಯಗಳ ಮೇಲೆ ಹೂಡಿಕೆ ಮಾಡದ ಪರಿಣಾಮವಾಗಿ ಇಂದು ಬಾಟಲಿ ನೀರು ಕುಡಿಯದಿರುವುದು ಅಪಾಯಕಾರಿ ರೋಗಗಳಿಗೆ ಒಡ್ಡಿಕೊಳ್ಳುವುದಕ್ಕೆ ಸಮ. ಒಂದು ಅಂದಾಜಿನ ಪ್ರಕಾರ ಪಾಕಿಸ್ತಾನದಲ್ಲಿ ಪ್ರತಿವರ್ಷ 53 ಸಾವಿರ ಮಕ್ಕಳು ಅಪಾಯಕಾರಿ ಬ್ಯಾಕ್ಟೀರಿಯಾ ಇರುವ ಕಲುಷಿತ ನೀರು ಕುಡಿದು ಭೇದಿಗೆ ತುತ್ತಾಗಿ ಸಾಯುತ್ತಿದ್ದಾರೆ.

ಇನ್ನೊಂದು ಅಂದಾಜಿನ ಅನ್ವಯ ಪಾಕಿಸ್ತಾನದಲ್ಲಿ ಆಗುತ್ತಿರುವ ಜೀವಹಾನಿಯಲ್ಲಿ ಶೇಕಡ 40ರಷ್ಟಕ್ಕೆ ಕಾರಣ ನೀರಿಗೆ ಕೊಳಕು, ಕೈಗಾರಿಕೆಗಳ ತ್ಯಾಜ್ಯ, ಆರ್ಸೆನಿಕ್ ಸೇರುತ್ತಿರುವುದು ಹಾಗೂ ರೋಗಗಳು. ಈ ಅಂಕಿ-ಅಂಶಗಳೇ ಪಾಕಿಸ್ತಾನದಲ್ಲಿ ರಾಷ್ಟ್ರೀಯ ಆರೋಗ್ಯ ತುರ್ತುಸ್ಥಿತಿ ಇದೆ ಎನ್ನಲು ಸಾಕು. ಪಾಕಿಸ್ತಾನದ ಎಲ್ಲರಿಗೂ ಶುದ್ಧ ನೀರನ್ನು ಒದಗಿಸುವುದು ಎಲ್ಲ ರಾಜಕೀಯ ಪಕ್ಷಗಳ ಆದ್ಯತೆ ಆಗಿರುತ್ತದೆ ಎಂದು ನೀವು ಭಾವಿಸಬಹುದು. ಆದರೆ, ಇಲ್ಲಿನ ರಾಜಕೀಯ ಅಥವಾ ಆಡಳಿತದ ಉನ್ನತ ಮಟ್ಟದ ಸಭೆಗಳಲ್ಲಿ ಕಾಣಿಸುವುದು ಸಾಲು ಸಾಲು ನೀರಿನ ಬಾಟಲಿಗಳು. ಪಾಕಿಸ್ತಾನದ ದೊಡ್ಡಮನುಷ್ಯರು ನೀರಿನ ಸಮಸ್ಯೆಯನ್ನು ಈಗಾಗಲೇ ಪರಿಹರಿಸಿ ಆಗಿದೆ– ಅಂದರೆ, ₹ 30 ಖರ್ಚು ಮಾಡಿ ಅರ್ಧ ಲೀಟರ್ ಬಾಟಲಿ ನೀರು ಪಡೆಯುವುದು!

ಬೇಸಿಗೆಯಲ್ಲಿ ನಡೆದ ಚುನಾವಣೆಯಲ್ಲಿ ಸೋಲು ಕಂಡ ಹಿಂದಿನ ಸರ್ಕಾರ ತಾನು ಬೃಹತ್ ವಿದ್ಯುತ್ ಯೋಜನೆಗಳನ್ನು, ವಿಮಾನ ನಿಲ್ದಾಣಗಳನ್ನು, ರಸ್ತೆಗಳನ್ನು ಹಾಗೂ ಬಂದರುಗಳನ್ನು ನಿರ್ಮಿಸಿದ್ದಾಗಿ ಹೇಳಿಕೊಳ್ಳುತ್ತದೆ. ಆದರೆ, ಅದು ಆರಂಭಿಸಿದ ಪ್ರಮುಖ ಜಲ ಶುದ್ಧೀಕರಣ ಯೋಜನೆಯೇ ಒಂದು ಹಗರಣವಾಯಿತು. ಕುಡಿಯುವ ನೀರಿನಂತಹ ಮೂಲಭೂತ ಅಗತ್ಯಗಳ ವಿಚಾರದಲ್ಲಿ ನಮ್ಮ ಒಳಿ
ತನ್ನು ನಾವೇ ಕಂಡುಕೊಳ್ಳಬೇಕಾಗಿದೆ. ಬಾಟಲಿ ನೀರು ಅಥವಾ ಶುದ್ಧೀಕರಿಸಿದ ನೀರನ್ನು ಖರೀದಿಸುವ ಸಾಮರ್ಥ್ಯ
ಇಲ್ಲದವರು ಹತ್ತಿರದ ನಲ್ಲಿಯಲ್ಲಿ ಅಥವಾ ಜಲಮೂಲದಲ್ಲಿ ಸಿಗುವ ನೀರು ಬಳಸುತ್ತಾರೆ. ಮುಂದಿನದನ್ನು ದುಬಾರಿ ವೈದ್ಯರ ಹೆಗಲಿಗೆ ಅಥವಾ ದೇವರ ಹೆಗಲಿಗೆ ವರ್ಗಾಯಿಸುತ್ತಾರೆ.

ಇಷ್ಟೇ ಅಲ್ಲ, ದುಡ್ಡು ಕೊಟ್ಟು ನೀರು ಖರೀದಿಸುತ್ತಿರುವ ನಮ್ಮಲ್ಲಿ ಕೆಲವರು ಕೆಲವು ಬಗೆಯ ರಾಸಾಯನಿಕಗಳನ್ನು ಖರೀದಿ ಮಾಡುತ್ತಿರಬಹುದು! ಕನಿಷ್ಠ ಎಂಟು ಬ್ರ್ಯಾಂಡ್‌ಗಳ ಬಾಟಲಿ ನೀರು ಕಲುಷಿತಗೊಂಡಿದೆ ಎಂದು ಪಾಕಿಸ್ತಾನದ ಜಲಸಂಪನ್ಮೂಲ ಸಂಶೋಧನಾ ಮಂಡಳಿ ಈ ವರ್ಷದ ಆರಂಭದಲ್ಲಿ ಹೇಳಿದೆ.

ಕುಡಿಯುವ ನೀರು ಸಿಗುವುದು ಪ್ರತಿ ವ್ಯಕ್ತಿಯ ಜನ್ಮಸಿದ್ಧ ಹಕ್ಕು ಎಂಬುದನ್ನು ಆಲೋಚಿಸಲು ಆಗದ ಭವಿಷ್ಯವೊಂದರತ್ತ ನಾವು ಸಾಗುತ್ತಿದ್ದೇವೆ. ಚಿಕ್ಕ ಪ್ಲಾಸ್ಟಿಕ್ ಬಾಟಲಿಯಲ್ಲಿ ಶುದ್ಧ ನೀರು ಇದ್ದರೂ, ಅದು ನಮ್ಮನ್ನು ಸಾವು ಅಥವಾ ರೋಗಗಳಿಂದ ಕಾಪಾಡುತ್ತಿಲ್ಲ.

ಪಾಕಿಸ್ತಾನದಲ್ಲಿ ಹಾಗೂ ಇತರ ಕಡೆಗಳಲ್ಲಿ ಸಾರ್ವಜನಿಕ ಸಮಾರಂಭಗಳಿಗೆ ಭಾಷಣಕಾರ ಆಗಿ ಅಥವಾ ಅತಿಥಿಯಾಗಿ ಹೋದಾಗ ನಿಮ್ಮ ಮುಂದೆ ಮೊದಲು ಪ್ರತ್ಯಕ್ಷವಾಗುವುದು ಬಾಟಲಿ ನೀರು. ಆ ಬಾಟಲಿ ನೀರು ಎದುರಿರುವವರ ಆಕ್ರೋಶದಿಂದ ತಮ್ಮನ್ನು ಕಾಪಾಡುತ್ತದೆಯೇನೋ ಎಂಬ ರೀತಿಯಲ್ಲಿ ಅದನ್ನು ಹಿಡಿದುಕೊಂಡು ಕೂರುವುದೂ ಇದೆ. ಲೇಖಕರು ಕಾರ್ಯಕ್ರಮಗಳಿಗೆ ಬಂದಾಗ, ರೆಫ್ರಿಜರೇಟರ್‌ನಲ್ಲಿ ಇರಿಸಿರದ ರಾಕಿ (ಒಂದು ಬಗೆಯ ಮದ್ಯ) ಕೊಡಿ ಎಂದು ಕೇಳುವುದನ್ನು ನಾನು ಗಮನಿಸಿದ್ದೇನೆ. ಆದರೆ, ‘ಬಾಟಲಿ ನೀರನ್ನು ದೂರ ಒಯ್ಯಿರಿ, ನನಗೆ ನಲ್ಲಿ ನೀರು ಕೊಡಿ’ ಎಂದು ಹೇಳಿದ ಲೇಖಕರನ್ನು ನಾನು ಕಂಡಿಲ್ಲ. ಹೋಟೆಲ್‌ಗಳ ಕೊಠಡಿಗಳಲ್ಲಿ ಅಲ್ಲಿನ ಸಿಬ್ಬಂದಿ ನೀರಿನ ಬಾಟಲಿ ಇಡುವಾಗ, ರೆಸ್ಟೊರೆಂಟ್‌ಗಳ ಸಿಬ್ಬಂದಿ ನಿಮ್ಮನ್ನು ‘ಕಾರ್ಬೊನೇಟೆಡ್‌ ನೀರು ಬೇಕಾ, ಮಾಮೂಲಿ ನೀರು ಬೇಕಾ’ ಎಂದು ಪ್ರಶ್ನಿಸುವಾಗ ‘ನಲ್ಲಿ ನೀರು ಸಾಕು’ ಎಂದು ಹೇಳುವುದು ನಿಮ್ಮನ್ನು ನೀವು ಜಿಪುಣ ಎಂದು ತೋರಿಸಿಕೊಂಡಂತೆ!

ಜನರ ರುಚಿ ಬೇರೆ ಬೇರೆ ಇರುತ್ತದೆ. ಅದು ನೀರಿನಲ್ಲಿ ಇರುವ ಖನಿಜಗಳಿಗೆ ಕೂಡ ಅನ್ವಯವಾಗುತ್ತದೆ ಎಂಬುದು ನನಗೆ ಗೊತ್ತು. ಆದರೆ ಮನುಷ್ಯರಿಗೆ ಸುಳ್ಳು ಹೇಳಿ ಅವರು ಏನು ಬೇಕಿದ್ದರೂ ಖರೀದಿ ಮಾಡುವಂತಹ ಸ್ಥಿತಿ ನಿರ್ಮಿಸಲು ಸಾಧ್ಯ ಎಂಬುದಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರುವ ತರಹೇವಾರಿ ನೀರಿನ ಬಾಟಲಿಗಳೇ ಸಾಕ್ಷಿ. ಅತ್ಯಂತ ಜೀವನಾವಶ್ಯಕ ವಸ್ತುವನ್ನೂ ಮನುಷ್ಯನಿಗೆ ಮೋಸದಿಂದ ಮಾರಾಟ ಮಾಡಬಹುದು– ನಿಮ್ಮದೇ ನೀರನ್ನು ಕದ್ದು ಅದನ್ನು ನಿಮಗೇ ಮಾರಾಟ ಮಾಡುವುದು. ನಿಮ್ಮ ಮಕ್ಕಳು ನೋವಿನಿಂದ ನರಳಿ ಸಾಯಬಾ
ರದು ಎಂಬ ಕಾರಣಕ್ಕಾದರೂ ನೀವು ಆ ನೀರನ್ನು ಖರೀದಿ ಮಾಡುತ್ತೀರಿ.

ಅಣೆಕಟ್ಟುಗಳನ್ನು ನಿರ್ಮಿಸಲು ಹಣ ಸಂಗ್ರಹಿಸುವ ಕೆಲಸದಲ್ಲಿ ಸಹಾಯ ಮಾಡುವಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರು ಸರ್ಕಾರ, ಬ್ಯಾಂಕ್‌ಗಳು ಹಾಗೂ ಮಾಧ್ಯಮ ಸಂಸ್ಥೆಗಳಲ್ಲಿ ಮನವಿ ಮಾಡಿದ್ದಾರೆ. ಈ ಕಾರ್ಯದಲ್ಲಿ ನೆರವು ನೀಡುವಂತೆ ನ್ಯಾಯಾಲಯದಲ್ಲಿನ ಕೆಲವು ಅರ್ಜಿದಾರರಿಗೆ ಆದೇಶಿಸಿದ್ದಾರೆ. ‘ಬನ್ನಿ, ನಾವು ಅಣೆಕಟ್ಟು ನಿರ್ಮಿಸೋಣ’ ಎನ್ನುವ ಜಾಹೀರಾತುಗಳು ಟಿ.ವಿ. ಹಾಗೂ ರೇಡಿಯೊಗಳಲ್ಲಿ ಪ್ರಸಾರ ಆಗುತ್ತಿವೆ.

ಬೃಹತ್‌ ಆದ, ಹೊಳೆಯುವ ರಚನೆಯನ್ನು ರೂಪಿಸುವುದು ಬಹುಶಃ ಇತಿಹಾಸ ನಿರ್ಮಿಸುವಂತೆ ಕಾಣಿಸುತ್ತದೆ. ಆದರೆ, ಸರ್ಕಾರದಿಂದ ಆಗಬೇಕಿದ್ದ ಮೂಲಸೌಕರ್ಯ ನಿರ್ಮಾಣ ಯೋಜನೆಗೆ ಅಲ್ಲಿ-ಇಲ್ಲಿ ಎಂದು ಹಣ ಸಂಗ್ರಹಿಸುವುದರ ಹಿಂದಿನ ಅತಾರ್ಕಿಕತೆಯನ್ನು ಮೀರಿ ಹೇಳುವುದಾದರೆ, ಈಗಿರುವ ನೀರು ಸರಬರಾಜು ವ್ಯವಸ್ಥೆಗಳನ್ನು ರೋಗಗಳಿಂದ ಮುಕ್ತಗೊಳಿಸುವುದು ಅಣೆಕಟ್ಟು ನಿರ್ಮಾಣ ಮಾಡುವುದಕ್ಕಿಂತ ಕಡಿಮೆ ಖರ್ಚಿನದು ಎನ್ನಬೇಕಾಗುತ್ತದೆ. ಆದರೆ ಈ ಬಗ್ಗೆ ಹೆಚ್ಚಿನ ಚರ್ಚೆ ಆಗಿಲ್ಲ.

ದಿ ನ್ಯೂಯಾರ್ಕ್‌ ಟೈಮ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.